ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ: ಕದನ ವಿರಾಮಕ್ಕೆ ಆಗ್ರಹ

ಸಂಘರ್ಷ ಶಮನಕ್ಕೆ ಒತ್ತಡ ಹೆಚ್ಚಿದರೂ ದಾಳಿ ತೀವ್ರಗೊಳಿಸಿದ ಇಸ್ರೇಲ್‌
Published 17 ಡಿಸೆಂಬರ್ 2023, 15:52 IST
Last Updated 17 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ಲಂಡನ್‌: ಇಸ್ರೇಲ್‌ ಹಾಗೂ ಹಮಾಸ್‌ ನಡುವೆ ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಅಂತ್ಯಗೊಂಡು, ಶಾಂತಿ ನೆಲೆಸಬೇಕು ಎಂದು ಹಲವು ರಾಷ್ಟ್ರಗಳು ಭಾನುವಾರ ಆಗ್ರಹಿಸಿದೆ.

ಕದನ ವಿರಾಮ ಈ ಹೊತ್ತಿನ ಅಗತ್ಯ ಎಂದು ಬ್ರಿಟನ್‌, ಫ್ರಾನ್ಸ್‌ ಮತ್ತು ಜರ್ಮನಿ ಅಭಿಪ್ರಾಯಪಟ್ಟಿವೆ. 

‘ಸಂಘರ್ಷದಲ್ಲಿ ಈವರೆಗೆ ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಮಾಸ್‌ ವಿರುದ್ಧದ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಇಸ್ರೇಲ್‌ ಮೇಲೆ ಒತ್ತಡ ಹೆಚ್ಚುತ್ತಿದ್ದರೂ, ಯುದ್ಧ ಮುಂದುವರಿದಿದೆ. ಕದನ ವಿರಾಮಕ್ಕೆ ಅವಕಾಶ ಮಾಡಿಕೊಟ್ಟು, ಶಾಂತಿ ನೆಲೆಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ‘ ಎಂದು ಬ್ರಿಟನ್‌ ವಿದೇಶಾಂಗ ಸಚಿವ ಡೇವಿಡ್‌ ಕ್ಯಾಮರೂನ್‌ ಮತ್ತು ಜರ್ಮನಿಯ ವಿದೇಶಾಂಗ ಸಚಿವೆ ಅನಾಲೆನಾ ಬೀರ್‌ಬೊಕ್‌ ಬ್ರಿಟನ್‌ನ ಸುದ್ದಿ ಮಾಧ್ಯಮ ‘ಸಂಡೆ ಟೈಮ್ಸ್‌’ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.   

ಉದ್ವಿಗ್ನತೆ ಶಮನವಾಗಲಿ:  ಗಾಜಾ ಯುದ್ಧದ ಪರಿಣಾಮವಾಗಿ ಇಸ್ರೇಲ್‌ ಮತ್ತು ಲೆಬನಾನ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಬೇಕು. ಇದಕ್ಕಾಗಿ ವಿಶ್ವ ಸಮುದಾಯವನ್ನು ಫ್ರಾನ್ಸ್‌ನ ವಿದೇಶಾಂಗ ಸಚಿವ ಕ್ಯಾಥರೀನ್ ಕೊಲೊನ್ನಾ ಭಾನುವಾರ ಒತ್ತಾಯಿಸಿದ್ದಾರೆ.

‘ಉದ್ವಿಗ್ನತೆಯ ಅಪಾಯಗಳು ನಮ್ಮ ಮುಂದಿವೆ. ಪರಿಸ್ಥಿತಿ ಕೈಮೀರಿ ಹೋದರೆ ಇದರ ಲಾಭವನ್ನು ಬೇರೆಯವರು ಪಡೆದುಕೊಳ್ಳಲಿದ್ದಾರೆ. ಇಸ್ರೇಲ್‌ಗೂ ನಾನು ಇದನ್ನೇ ಹೇಳಬಯಸುತ್ತೇನೆ. ಅಲ್ಲದೇ,  ಎಚ್ಚರಿಕೆ ಮತ್ತು ಉದ್ವಿಗ್ನ ಶಮನಕ್ಕೆ ಸಂಬಂಧಿಸಿದ ಈ ಕರೆಯು ಎಲ್ಲರಿಗೂ ಅನ್ವಯವಾಗುವಂಥದ್ದು’ ಎಂದು ಅವರು ಹೇಳಿದರು. ಇಸ್ರೇಲ್‌ಗೆ ಭೇಟಿ ನೀಡಿದ್ದ ವೇಳೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. 

ದಾಳಿ ಮತ್ತಷ್ಟು ತೀವ್ರ:  ಕದನ ವಿರಾಮ, ಉದ್ವಿಗ್ನತೆ ಶಮನಕ್ಕೆ ವಿಶ್ವ ಸಮುದಾಯ ಆಗ್ರಹಿಸುತ್ತಿದ್ದರೂ, ಗಾಜಾ ಮೇಲಿನ ತನ್ನ ದಾಳಿಯನ್ನು ಇಸ್ರೇಲ್‌ ಮತ್ತಷ್ಟು ತೀವ್ರಗೊಳಿಸಿದೆ. 

ಇಸ್ರೇಲ್ ನಡೆಸಿದ ದಾಳಿಗೆ ಭಾನುವಾರ ಒಂದೇ ದಿನ ಗಾಜಾದಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ಹಲವರು ಕಾಣೆಯಾಗಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಇಲಾಖೆ ತಿಳಿಸಿದೆ.  

ಗಾಜಾ ಮತ್ತೆ ಉಗ್ರರ ತಾಣವಾಗದು: ಈ ಮಧ್ಯೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತೆ ಗುಡುಗಿದ್ದು, ‘ಗಾಜಾ ಇನ್ನೆಂದೂ ಉಗ್ರರ ಕೇಂದ್ರವಾಗದಂತೆ ಮಾಡುತ್ತೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT