ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್‌ ಸಂಸತ್ತಿಗೆ ಇಂದು ಮತದಾನ; ಲೇಬರ್‌ ಪಕ್ಷಕ್ಕೆ ಭಾರಿ ಬಹುಮತದ ನಿರೀಕ್ಷೆ

Published 3 ಜುಲೈ 2024, 19:21 IST
Last Updated 3 ಜುಲೈ 2024, 19:21 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ಬುಧವಾರ ಮತದಾನ ನಡೆಯಲಿದ್ದು ಅಂದೇ ಫಲಿತಾಂಶ ಹೊರಬೀಳಲಿದೆ. 14 ವರ್ಷಗಳ ಕನ್ಸರ್ವೇಟಿವ್‌ ಪಕ್ಷದ ಅಧಿಕಾರ ಕೊನೆಗೊಳ್ಳಲಿದೆ ಎಂದೇ ಚುನಾವಣಾಪೂರ್ವ ಸಮೀಕ್ಷೆಗಳು ಅಂದಾಜಿಸಿವೆ. ಭಾರತ ಮೂಲದ ಹಲವು ಅಭ್ಯರ್ಥಿಗಳು ಕಣದಲ್ಲಿದ್ದು ಭಾರತದ ಪಾಲಿಗೂ ಫಲಿತಾಂಶವು ಪ್ರಾಮುಖ್ಯ ಪಡೆದಿದೆ. 

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಅವಧಿಗೂ ಮೊದಲೇ ಚುನಾವಣೆ ಘೋಷಣೆ ಮಾಡಿದ್ದು, ಅಚ್ಚರಿಗೆ ಕಾರಣವಾಗಿತ್ತು. ಚುನಾವಣೆ ಘೋಷಣೆಯಾದಾಗಿನಿಂದಲೂ ಲೇಬರ್‌ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಎಂದು ಅಂದಾಜಿಸಲಾಗಿತ್ತು. ಪ್ರಚಾರವು ಅಂತ್ಯವಾಗುವ ಹೊತ್ತಿನಲ್ಲಿ ಕೀರ್‌ ಸ್ಟಾರ್ಮರ್‌ ಅವರು ಭಾರಿ ಬಹುಮತದೊಂದಿಗೆ ‍ಪ್ರಧಾನಿಯಾಗಲಿದ್ದಾರೆ ಎನ್ನಲಾಗುತ್ತಿದೆ. ವಿಶೇಷವೆಂದರೆ, ಕನ್ಸರ್ವೇಟಿವ್‌ ಪಕ್ಷದ ಹಲವು ಸಚಿವರುಗಳೇ ಲೇಬರ್‌ ಪಕ್ಷವು ‘ಸೂಪರ್‌ಮೆಜಾರಿಟಿ’ಯೊಂದಿಗೆ ಅಧಿಕಾರಕ್ಕೆ ಬರಲಿದ್ದಾರೆ ಎನ್ನುತ್ತಿದ್ದಾರೆ.

‘ಸೂಪರ್‌ಮೆಜಾರಿಟಿ’ ಜಟಾಪಟಿ: ಚುನಾವಣಾಪೂರ್ವ ಸಮೀಕ್ಷೆಗಳು ಲೇಬರ್‌ ಪಕ್ಷಕ್ಕೆ ಬಹುಮತ ನೀಡುತ್ತಿವೆ. ಇದನ್ನೇ ಪ್ರಚಾರ ತಂತ್ರವಾಗಿಸಿಕೊಂಡ  ಕನ್ಸರ್ವೇಟಿವ್‌ ಪಕ್ಷವು, ‘ಲೇ‌ಬರ್‌ ಪಕ್ಷಕ್ಕೆ ಭಾರಿ ಬಹುಮತ ಸಿಗಲಿದೆ. ಅವರು ನಿಮ್ಮ ಮೇಲೆ ಹೆಚ್ಚಿಗೆ ತೆರಿಗೆ ವಿಧಿಸಲಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಬೇಕು ಎಂದರೆ ನಮಗೆ ಮತ ನೀಡಿ’ ಎನ್ನುತ್ತಿದ್ದಾರೆ. ಪ್ರಧಾನಿ ರಿಷಿ ಸುನಕ್‌ ಅವರು ಕೂಡ ಬುಧವಾರ ಇದನ್ನೇ ಹೇಳಿದ್ದಾರೆ.

ಈ ಪ್ರಚಾರ ತಂತ್ರಕ್ಕೆ ಪ್ರತಿಕ್ರಿಯಿಸಿರುವ ಕೀರ್‌ ಸ್ಟಾರ್ಮರ್‌ ಅವರು, ‘ನಮಗೆ ಮತ ನೀಡದಂತೆ ಮಾಡುವ ತಂತ್ರ ಇದು. ಜನರು ಮನೆಯಲ್ಲಿಯೇ ಕೂರುವಂತೆ ಮಾಡಲು ಕನ್ಸರ್ವೇಟಿವ್‌ ಪಕ್ಷವು ಯತ್ನಿಸುತ್ತಿದೆ’ ಎಂದಿದ್ದಾರೆ.

ಸರಳ ಬಹುಮತಕ್ಕಿಂತಲೂ ಅಧಿಕ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವುದಕ್ಕೆ ‘ಸೂಪ‍ರ್‌ಮೆಜಾರಿಟಿ’ ಎನ್ನಬಹುದು. ಇಷ್ಟೊಂದು ಬಹುಮತ ದೊರೆತರೆ, ಸಂವಿಧಾನ ಬದಲಾವಣೆಯನ್ನೂ ಮಾಡಬಹುದಾಗಿದೆ.

‘ಜನಾಂಗೀಯ ವೈವಿಧ್ಯದ ಹೊಸ ಸಂಸತ್ತು’: ಈ ಬಾರಿಯ ಬ್ರಿಟನ್ ಸಂಸತ್ತು ಇತಿಹಾಸದಲ್ಲಿಯೇ ಹೊಸತನಗಳಿಂದ ಕೂಡಿರಲಿದೆ ಎಂದು ಬ್ರಿಟಿಷ್‌ ಫ್ಯೂಷರ್‌ ಎನ್ನುವ ಚಿಂತಕರ ಚಾವಡಿ ವಿಶ್ಲೇಷಿಸಿದೆ. ಸಂಸತ್ತು ಜನಾಂಗೀಯ ವೈವಿಧ್ಯದಿಂದ ಕೂಡಿರಲಿದೆ ಎನ್ನಲಾಗುತ್ತಿದೆ. ಭಾರತೀಯ ಮೂಲದವರೂ ಸೇರಿದಂತೆ ಹಲವು ದೇಶಗಳ ಜನರು ಕಣದಲ್ಲಿದ್ದಾರೆ.

ಹೊಸ ಸಂಸತ್ತಿನಲ್ಲಿ ಸುಮಾರು ಶೇ 14ರಷ್ಟು ಜನಾಂಗೀಯ ಅಲ್ಪಸಂಖ್ಯಾ ತರು ಇರಲಿದ್ದಾರೆ. ಹಿಂದೆಂದೂ ಇಷ್ಟೊಂದು ವೈವಿಧ್ಯ ಸಂಸತ್ತಿನಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದೆ.

ಒಟ್ಟು ಸ್ಥಾನಗಳು – 650; ಬಹುಮತಕ್ಕೆ ಬೇಕಾಗಿರುವ ಸ್ಥಾನಗಳು – 326

ಚುನಾವಣಾಪೂರ್ವ ಸಮೀಕ್ಷೆಗಳು ಏನನ್ನುತ್ತವೆ?

484 – ಲೇಬರ್‌ ಪಕ್ಷವು ಪಡೆಯಲಿದೆ ಎಂದು ಅಂದಾಜಿಸಿರುವ ಸ್ಥಾನಗಳು

64 –ಕನ್ಸರ್ವೇಟಿವ್‌ ಪಕ್ಷವು ಪಡೆಯಲಿದೆ ಎಂದು ಅಂದಾಜಿಸಿರುವ ಸ್ಥಾನಗಳು

15 –2019ರಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಭಾರತ ಮೂಲದವರ ಸಂಖ್ಯೆ

18 – 2024ರ ಚುನಾವಣೆಯಲ್ಲಿ ಕಣದಲ್ಲಿರುವ ಭಾರತ ಮೂಲದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT