ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಪಡೆಗಳಿಂದ ಕೀವ್‌ ಮೇಲೆ ದಾಳಿ: ನಾಲ್ವರ ಸಾವು

ರಷ್ಯಾದ 35 ಡ್ರೋನ್‌ಗಳನ್ನು ಹೊಡೆದುರುಳಿಸಿದ ಉಕ್ರೇನ್‌
Published 8 ಮೇ 2023, 16:15 IST
Last Updated 8 ಮೇ 2023, 16:15 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ಪಡೆಗಳು ಉಕ್ರೇನ್‌ನ ಹಲವು ನಗರಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಡ್ರೋನ್‌ ಮತ್ತು ಕ್ಷಿಪಣಿಗಳಿಂದ ವ್ಯಾಪಕ ದಾಳಿ ನಡೆಸಿವೆ. ದಾಳಿಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದು, ರಾಜಧಾನಿ ಕೀವ್‌ನಲ್ಲಿ ಐವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ರಷ್ಯಾ ಪಡೆಗಳು ಭಾನುವಾರ ರಾತ್ರಿ ಪ್ರಯೋಗಿಸಿರುವ ಇರಾನ್‌ ನಿರ್ಮಿತ 35 ಡ್ರೋನ್‌ಗಳನ್ನು ದೇಶದ ವಾಯು ಪಡೆಯು  ಹೊಡೆದುರುಳಿಸಿದೆ. ಡ್ರೋನ್ ಅವಶೇಷಗಳು ಬಿದ್ದು ಕೀವ್‌ ನಗರದಲ್ಲಿ ಐವರು ನಾಗರಿಕರು ಗಾಯಗೊಂಡಿದ್ದಾರೆ. ರಾತ್ರಿ ಸುಮಾರು ಮೂರು ತಾಸು ವಾಯು ದಾಳಿಯ ಎಚ್ಚರಿಕೆ ಸಂದೇಶ ಮೊಳಗಿತು ಎಂದು ನಗರ ಸೇನಾ ಆಡಳಿತದ ಮುಖ್ಯಸ್ಥ ಸೆರ್ಹಿಲ್‌ ಪಾಪ್ಕೊ ಹೇಳಿದ್ದಾರೆ.    

ಉಕ್ರೇನ್‌ನ ಉತ್ತರ, ದಕ್ಷಿಣ ಹಾಗೂ ಪೂರ್ವ ಭಾಗದಾದ್ಯಂತ ಸುಮಾರು 127 ಸ್ಥಳಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಶೆಲ್‌ ದಾಳಿ ಮಾಡಿದೆ. ಯುದ್ಧ ಟ್ಯಾಂಕ್‌, ಡ್ರೋನ್‌ಗಳು, ಮಾರ್ಟರ್‌ಗಳು, ಯುದ್ಧ ವಿಮಾನಗಳು, ಬಹುವಿಧದ ರಾಕೆಟ್‌ ಲಾಂಚರ್‌ಗಳು, ಕ್ಷಿಪಣಿಗಳು, ಬಾಂಬ್‌ಗಳನ್ನು ಬಳಸಿಕೊಂಡು ರಷ್ಯಾ ಪಡೆಗಳು ವ್ಯಾಪಕ ದಾಳಿ ನಡೆಸಿವೆ ಎಂದು ಉಕ್ರೇನ್‌ ಸೇನೆ ಹೇಳಿದೆ.    

ಒಡೆಸಾ ಮೇಲೆ ಸೋವಿಯತ್‌ ಕಾಲದ ದೂರ ವ್ಯಾಪ್ತಿಯ 8 ಕ್ರೂಸ್‌ ಕ್ಷಿಪಣಿಗಳು, ಕ್ರಾಮೊರಸ್ಕ್‌ ಮೇಲೆ ಆರು ಕ್ಷಿಪಣಿಗಳನ್ನು ಉಡಾಯಿಸಿದೆ. ಡೊನೆಟ್‌ಸ್ಕ್‌ ಕೈಗಾರಿಕ ನಗರದ ಮೇಲೂ ಕ್ಷಿಪಣಿ ದಾಳಿಯಾಗಿದೆ. ಒಡೆಸಾದಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ವಾಯುಪಡೆಯ ಯೂರಿ ಇಹ್ನಾಟ್‌ ಹೇಳಿದ್ದಾರೆ.

ಇಂದು ರಷ್ಯಾದಲ್ಲಿ 2ನೇ ವಿಶ್ವ ಯುದ್ಧ ವಿಜಯೋತ್ಸವ

ರಷ್ಯಾ ಸೇನೆ ಉಕ್ರೇನ್‌ ಮೇಲೆ ಬಾಂಬು ಕ್ಷಿಪಣಿಗಳ ಮರೆಗಳೆಯುತ್ತಿರುವ ಬೆನ್ನಲ್ಲೇ ಎರಡನೇ ಮಹಾ ಯುದ್ಧದಲ್ಲಿ ನಾಜಿ ಜರ್ಮನಿ ಮಣಿಸಿದ ಸ್ಮರಣಾರ್ಥ ರಷ್ಯಾದ ರಾಜಧಾನಿ ಮಾಸ್ಕೊದಲ್ಲಿರುವ ರೆಡ್‌ ಸ್ಕ್ವೇರ್‌ನಲ್ಲಿ ಸಾಂಪ್ರದಾಯಿಕವಾಗಿ ವಿಜಯೋತ್ಸವ ಆಚರಿಸಲು ಭರದ ಸಿದ್ಧತೆಗಳು ನಡಯುತ್ತಿವೆ.  ಮೇ 9ರಂದು ನಡೆಯಲಿರುವ ವಿಜಯೋತ್ಸವ ಪ್ರಯುಕ್ತ ರಷ್ಯಾ ದೇಶದಾದ್ಯಂತ ಬಿಗಿ ಭದ್ರತೆ ಹೆಚ್ಚಿಸಿದೆ.

ಉಕ್ರೇನ್‌ ಮೇಲೆ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕಾರಣಕ್ಕೆ ಈ ಬಾರಿ ದೇಶದ ಅತಿ ದೊಡ್ಡ ನಗರಗಳಾದ ಮಾಸ್ಕೊ ಮತ್ತು ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿ ಮಾತ್ರ ವಿಜಯೋತ್ಸವದ ಮಿಲಿಟರಿ ಪರೇಡ್‌ ನಡೆಯಲಿದೆ. ವಿಜಯದ ದಿನಕ್ಕೆ ಮುಂಚಿತವಾಗಿ ಈ ಎರಡೂ ನಗರಗಳಲ್ಲಿ ಡ್ರೋನ್ ಬಳಕೆ ನಿಷೇಧಿಸಲಾಗಿದೆ. 

ಭದ್ರತೆಯ ಕಾರಣ ಅಥವಾ ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕನಿಷ್ಠ 21 ನಗರಗಳಲ್ಲಿ ಈ ಬಾರಿ ಸೇನಾ ಪಡೆಗಳ ಪರೇಡ್‌ಗಳನ್ನು ರದ್ದುಪಡಿಸಲಾಗಿದೆ. ಅಲ್ಲದೆ ಸೇಂಟ್‌ ಪೀಟರ್ಸ್‌ಬರ್ಗ್‌ ನಗರದ ಕೆಲವು ಭಾಗಗಳಲ್ಲಿ ಮೇ 10ರವರೆಗೂ ನದಿಗಳು ಕಾಲುವೆಗಳಲ್ಲಿ ಮೋಟಾರ್‌ ದೋಣಿಗಳ ಸಂಚಾರವನ್ನೂ ನಿಷೇಧಿಸಲಾಗಿದೆ ಎಂದು ಪ್ರಾದೇಶಿಕ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

2ನೇ ವಿಶ್ವ ಯುದ್ಧದಲ್ಲಿ ನಾಜಿ ಜರ್ಮನಿ ಮಣ್ಣುಮುಕ್ಕಿದಂತೆ ರಷ್ಯಾ ಪಡೆಗಳು ಉಕ್ರೇನ್‌ ಯುದ್ಧದಲ್ಲಿ ಸೋಲು ಕಾಣಲಿವೆ
-ವೊಲೊಡಿಮಿರ್‌ ಝೆಲೆನ್‌ಸ್ಕಿ ಉಕ್ರೇನ್‌ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT