ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಮಳೆಯ ದುಷ್ಪರಿಣಾಮ | ಸಹಜ ಸ್ಥಿತಿಗೆ ಮರಳಲು ಯುಎಇ ಪ್ರಯಾಸ

Published 18 ಏಪ್ರಿಲ್ 2024, 13:12 IST
Last Updated 18 ಏಪ್ರಿಲ್ 2024, 13:12 IST
ಅಕ್ಷರ ಗಾತ್ರ

ದುಬೈ: ಭಾರಿ ಮತ್ತು ದಾಖಲೆ ಪ್ರಮಾಣದ ಮಳೆಯಾಗಿದ್ದರಿಂದ ಉಂಟಾಗಿರುವ ವ್ಯತ್ಯಯಗಳಿಂದ ಚೇತರಿಸಿಕೊಳ್ಳಲು ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ಜನರು ಗುರುವಾರವೂ ಪ್ರಯಾಸಪಟ್ಟರು. ದುಬೈ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತುರುವ ನಿಟ್ಟಿನಲ್ಲಿ ಪ್ರಯತ್ನ ನಡೆಯಿತಾದರೂ ಫಲ ಕೊಡಲಿಲ್ಲ.

‘ವಿಮಾನಗಳ ಕಾರ್ಯಾಚರಣೆ ಮತ್ತಷ್ಟು ವಿಳಂಬವಾಗಲಿದೆ. ಟಿಕೆಟ್‌ ಖಾತರಿಯಾಗಿರುವ ಪ್ರಯಾಣಿಕರು ಟರ್ಮಿನಲ್‌–1ಕ್ಕೆ ಬರಬೇಕು’ ಎಂದು ವಿಮಾನ ನಿಲ್ದಾಣ ಆಡಳಿತವು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿತ್ತು.

ಯುಎಇಯ ಪ್ರಮುಖ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಗುರುವಾರ ಸ್ಥಗಿತ ಹಿಂಪಡೆದ ಸಂಸ್ಥೆಯು ತನ್ನ ಗ್ರಾಹಕರಿಗೆ ವಿಮಾನ ನಿಲ್ದಾಣಕ್ಕೆ ಬರುವಂತೆ ಸೂಚಿಸಿತು. ತಮ್ಮ ಸಾಮಾನು ಸರಂಜಾಮುಗಳನ್ನು ಪಡೆಯಲು ಗಂಟೆಗಟ್ಟಲೆ ಕಾದು ಕುಳಿತ ಅನುಭವವನ್ನು ಹಲವು ಗ್ರಾಹಕರು ವಿವರಿಸಿದರು.

ಮರುಭೂಮಿ ಪ್ರದೇಶವಾದ ಯುಎಇಯಲ್ಲಿ ಪ್ರತಿವರ್ಷ ಸಾಧಾರಣ ಮಳೆಯಾಗುತ್ತದೆ. ಇದಕ್ಕೆ ತಕ್ಕಂತೆ ಅಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ಹಠಾತ್‌ ಮತ್ತು ಭಾರಿ ಮಳೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಅಲ್ಲಿಯ ಚರಂಡಿ ವ್ಯವಸ್ಥೆ ಹೊಂದಿರಲಿಲ್ಲ. ಹೀಗಾಗಿ ಪ್ರವಾಹ ಪರಿಸ್ಥತಿ ಉಂಟಾಯಿತು. ಇದೇ ವೇಳೆ, 12 ಪಥಗಳ ಶೇಖ್‌ ಝಾಯೆದ್‌ ಹೆದ್ದಾರಿಯೂ ಜಲಾವೃತವಾದ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಈ ಪರಿಸ್ಥಿತಿ ಕುರಿತು ಅಬುಧಾಬಿ ಆಡಳಿತಗಾರ ಶೇಖ್ ಮೊಹಮ್ಮದ್‌ ಬಿನ್‌ ಝಾಯೆದ್‌ ಅಲ್‌ ನಹ್ಯಾನ್‌ ಅವರು ದೇಶಕ್ಕೆ ಸಂದೇಶ ನೀಡಿದ್ದಾರೆ. ‘ಯುಎಇ ಮೂಲಸೌಕರ್ಯದ ಸ್ಥಿತಿಗತಿ ಕುರಿತು ಕೂಡಲೇ ಅಧ್ಯಯನ ನಡೆಸಲು ಮತ್ತು ಮಳೆಯಿಂದ ಆಗಿರುವ ಹಾನಿಯಿಂದ ಹೊರಬರಲು ಪರಿಹಾರ ಹುಡುಕಲಾಗುವುದು’ ಎಂದು ಹೇಳಿದ್ದಾರೆ.

ಶಾಲೆಗಳ ರಜೆ ವಿಸ್ತರಣೆ: ಮುಂದಿನ ವಾರದವರೆಗೂ ಶಾಲೆಗಳನ್ನು ಮುಚ್ಚಲಾಗುವುದು ಎಂದು ಅಲ್ಲಿಯ ಆಡಳಿತ ಹೇಳಿದೆ. ರಸ್ತೆಗಳಲ್ಲೇ ನಿಲುಗಡೆಯಾಗಿದ್ದ ತಮ್ಮ ಕಾರುಗಳತ್ತ ಜನರು ನೀರಿನಲ್ಲೇ ಸಾಗಿ, ಅವು ಯಾವ ಸ್ಥಿತಿಯಲ್ಲಿವೆ ಎಂದು ಪರಿಶೀಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದುಬೈನ ಹೊರವಲಯಗಳಲ್ಲಿ ಟ್ಯಾಂಕರ್‌ ಟ್ರಕ್‌ಗಳ ಕಾರ್ಯಾಚರಣೆ ನಡೆದಿದ್ದು, ನಿಂತ ನೀರನ್ನು ಹೊರಹಾಕಲಾಗುತ್ತಿದೆ.

ಒಬ್ಬ ವ್ಯಕ್ತಿ ಮೃತಪಟ್ಟಿರುವುದನ್ನು ಹೊರತುಪಡಿಸಿದರೆ, ಯಾವುದೇ ಸಾವು, ನೋವು ಅಥವಾ ಬೇರೆ ರೀತಿಯ ಹಾನಿಯಾದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಂಕಷ್ಟ ಪರಿಸ್ಥಿತಿಯು ನಮ್ಮ ದೇಶದ ಸಾಮರ್ಥ್ಯವನ್ನು ಎತ್ತಿಹಿಡಿದಿದೆ. ದೇಶದ ಪ್ರತಿಯೊಬ್ಬ ನಿವಾಸಿಯೂ ಮತ್ತೊಬ್ಬರಿಗೆ ಕಾಳಜಿ ಪ್ರೀತಿ ತೋರಿದ್ದಾರೆ
ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕ್‌ತೌಮ್‌ ದುಬೈ ಆಡಳಿತಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT