ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿ ನಡೆಸಲು ವಿಫಲ | 14 ಕೋಟಿ ಜನರ ಆಹಾರದ ಹಕ್ಕಿಗೆ ಧಕ್ಕೆ: ಜೈರಾಮ್‌ ರಮೇಶ್‌

Published 8 ಸೆಪ್ಟೆಂಬರ್ 2023, 13:46 IST
Last Updated 8 ಸೆಪ್ಟೆಂಬರ್ 2023, 13:46 IST
ಅಕ್ಷರ ಗಾತ್ರ

ನವದೆಹಲಿ: 2021ರಲ್ಲಿ ನಿಗದಿಯಾಗಿದ್ದ ಜನಗಣತಿಯನ್ನು ನಡೆಸಲು ಕೇಂದ್ರ ಸರ್ಕಾರ ವಿಫಲವಾಗಿದ್ದು, ದೇಶದ ಸುಮಾರು 14 ಕೋಟಿ ಜನರ ಆಹಾರದ ಹಕ್ಕಿಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ. 

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಇದೊಂದು ಅಸಮರ್ಥ ಸರ್ಕಾರ. ಜನಗಣತಿ ನಡೆಸಲು ಸಾಧ್ಯವಾಗದಿರುವುದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ವೈಫಲ್ಯ. ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುತ್ತಿರುವ ಇಂಡೋನೆಷ್ಯಾ, ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾದಂತಹ ಹಲವು ರಾಷ್ಟ್ರಗಳು ಕೋವಿಡ್‌ ನಡುವೆಯೂ ಜನಗಣತಿ ನಡೆಸಿವೆ’ ಎಂದು ತಿಳಿಸಿದ್ದಾರೆ. 

’ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಆಹಾರ ಭದ್ರತೆ ಒದಗಿಸಬೇಕು. ಜನಗಣತಿ ನಡೆಯುವವರೆಗೆ ಫಲಾನುಭವಿಗಳ ಕೋಟಾವನ್ನು ಹೆಚ್ಚಿಸಬೇಕು’ ಎಂದು ಜೈರಾಮ್‌ ರಮೇಶ್‌ ಒತ್ತಾಯಿಸಿದ್ದಾರೆ.

ಜನಗಣತಿ ನಡೆಸಲು ಸರ್ಕಾರ ವಿಫಲವಾಗಿರುವುದರಿಂದ ಅಂದಾಜು 14 ಕೋಟಿ ಭಾರತೀಯರು ಆಹಾರ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ‘ಔಟ್‌ಲುಕ್ ಬ್ಯುಸಿನೆಸ್’ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಇದನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)ಅಡಿಯಲ್ಲಿ ಶೇಕಡ 67ರಷ್ಟು ಭಾರತೀಯರು ಪಡಿತರ ಪಡೆಯಲು ಅರ್ಹರಾಗಿದ್ದಾರೆ. ಮೋದಿ ಸರ್ಕಾರ 2021ರಲ್ಲಿ ಜನಗಣತಿ ನಡೆಸಿಲ್ಲ. 2011ರ ಜನಗಣತಿಯ ಆಧಾರದಲ್ಲಿ 81 ಕೋಟಿ ಜನ ಮಾತ್ರ ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆದರೆ 95 ಕೋಟಿ ಭಾರತೀಯರು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಲಾಭ ಪಡೆಯಲು ಅರ್ಹರಾಗಿದ್ದಾರೆ ಎಂದು ಅಂಕಿ ಅಂಶಗಳೊಂದಿಗೆ ವಿವರಿಸಿದ್ದಾರೆ. 

‌2022ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ಗೆ ಈ ಸಮಸ್ಯೆ ಗಮನಕ್ಕೆ ಬಂದಿತ್ತು. ಇದನ್ನು ಸರಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೂ ಯಾವುದೇ ಬದಲಾವಣೆ ಮಾಡಿಲ್ಲ. ಈ ವೈಫಲ್ಯವು ಸುಪ್ರೀಂ ಕೋರ್ಟ್‌ ಬಗ್ಗೆ ಪ್ರಧಾನಿಗಿರುವ ತಿರಸ್ಕಾರ ಮನೋಭಾವ ಮಾತ್ರವಲ್ಲ, ಭಾರತದ ಜನರ ಸಾಂವಿಧಾನಿಕ ಹಕ್ಕುಗಳ ಬಗೆಗಿನ ಅವರ ತಿರಸ್ಕಾರವನ್ನು ಬಹಿರಂಗಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ. 

‘ನವೀಕೃತ ರಾಷ್ಟ್ರೀಯ ಜಾತಿ ಗಣತಿಯನ್ನು ಕೇಂದ್ರ ಸರ್ಕಾರ ನಡೆಸಬೇಕು. ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಜಾತಿ ಗಣತಿಯನ್ನು ವಿರೋಧಿಸುವುದನ್ನು ನಿಲ್ಲಿಸಬೇಕು’ ಎಂದೂ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.  

‘ಎನ್‌ಡಿಎ ಸರ್ಕಾರದ ವೈಫಲ್ಯಗಳನ್ನು ಜಿ 20 ಶೃಂಗ ಬಯಲು ಮಾಡಲಿದೆ’ ಎಂದೂ ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT