ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಜತೆ ಸಂಘರ್ಷ: ಮ್ಯಾಟಿಸ್‌ ರಾಜೀನಾಮೆ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ಭಿನ್ನಾಭಿಪ್ರಾಯ
Last Updated 21 ಡಿಸೆಂಬರ್ 2018, 19:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗಿನ ಭಿನ್ನಾಭಿಪ್ರಾಯದಿಂದ ಬೇಸತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಜಿಮ್‌ ಮ್ಯಾಟಿಸ್‌ ರಾಜೀನಾಮೆ ನೀಡಿದ್ದಾರೆ.

ಸಿರಿಯಾದಿಂದ ದಿಢೀರನೇ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಟ್ರಂಪ್‌ ಆದೇಶಿಸಿದ ಮರುದಿನವೇ ಮ್ಯಾಟಿಸ್‌ ಈ ನಿರ್ಧಾರ ಪ್ರಕಟಿಸಿದ್ದಾರೆ. 2019ರ ಫೆಬ್ರುವರಿ 28ರವರೆಗೆ ಅವರ ಅಧಿಕಾರಾವಧಿ ಇತ್ತು.

ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಟ್ರಂಪ್‌ ನಿರ್ಧಾರ ಬೇಜವಾಬ್ದಾರಿತನದಿಂದ ಕೂಡಿದ್ದು ಎಂದು ಹಲವರು ಟೀಕಿಸಿದ್ದರು.

‘ರಾಜೀನಾಮೆ ನೀಡುವುದಕ್ಕೆ ಇದು ಸರಿಯಾದ ಸಮಯ. ರಕ್ಷಣಾ ಕಾರ್ಯದರ್ಶಿ ಹುದ್ದೆಯನ್ನೂ ನಿಭಾಯಿಸಲು ಟ್ರಂಪ್‌ ಸಮರ್ಥರಿದ್ದಾರೆ’ ಎಂದು ಮ್ಯಾಟಿಸ್‌ ವ್ಯಂಗ್ಯವಾಡಿದ್ದಾರೆ.

‘ತಾವು ಹೊಂದಿರುವ ಚಾಣಾಕ್ಷ ವಿಶ್ವ ರಕ್ಷಣಾ ನೀತಿಗೆ ಸರಿಹೊಂದುವಂತಹ ಕಾರ್ಯದರ್ಶಿಯನ್ನು ನೇಮಕ ಮಾಡಲು ಟ್ರಂಪ್‌ ಅವರಿಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ’ ಎಂದು ಮ್ಯಾಟಿಸ್‌ ಟ್ವೀಟ್‌ ಮಾಡಿದ್ದಾರೆ. ಆದರೆ, ತಮ್ಮ ರಾಜೀನಾಮೆಗೆ ನಿಖರ ಕಾರಣವೇನು ಎಂಬ ಬಗ್ಗೆ ಅವರು ತಿಳಿಸಿಲ್ಲ.

ಸಿರಿಯಾದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದು, ಅಲ್ಲಿ ಅಮೆರಿಕದ ಶತ್ರುಗಳಾದ ಸಿರಿಯಾದ ಬಶರ್‌ ಅಲ್‌ ಅಸ್ಸಾದ್, ರಷ್ಯಾ ಮತ್ತು ಇರಾನ್‌ಗೆ ಅವಕಾಶಗಳ ಬಾಗಿಲು ತೆರೆದಂತೆ. ಇದೊಂದು ‘ರಾಜತಾಂತ್ರಿಕ ಎಡವಟ್ಟು’ ಎಂದು ವಿಶ್ಲೇಷಕರು ಹೇಳಿದ್ದಾರೆ. ಸದ್ಯ, ಸಿರಿಯಾದಲ್ಲಿ ಅಮೆರಿಕದ 2 ಸಾವಿರಕ್ಕೂ ಹೆಚ್ಚು ಸೇನಾ ತುಕಡಿಗಳು ಇವೆ.

ಅಫ್ಗಾನಿಸ್ತಾನದದಲ್ಲಿ ನಿಯೋಜಿಸಿರುವ ಅಮೆರಿಕ ಸೇನಾ ತುಕಡಿಗಳ ಸಂಖ್ಯೆಗಳನ್ನೂ ಕಡಿತಗೊಳಿಸುವ ಯೋಚನೆಯನ್ನು ಶ್ವೇತಭವನ ಮಾಡುತ್ತಿದೆ ಎಂದು ಗುರುವಾರ ಕೆಲವು ಮಾಧ್ಯಮಗಳು ವರದಿ ಮಾಡಿವೆ.

‘ಅತ್ಯುನ್ನತ ಕಾರ್ಯಸಾಧನೆ ಮಾಡಿರುವ ತೃಪ್ತಿಯೊಂದಿಗೆ ಮ್ಯಾಟಿಸ್‌ ಫೆಬ್ರುವರಿ ಕೊನೆಯ ವೇಳೆಗೆ ನಿವೃತ್ತಿಯಾಗಲಿದ್ದಾರೆ. ಅವರ ಅವಧಿಯಲ್ಲಿ ರಕ್ಷಣಾ ಸಚಿವಾಲಯವು ಸಾಕಷ್ಟು ಪ್ರಗತಿ ಸಾಧಿಸಿದೆ. ಅದರಲ್ಲಿಯೂ, ಯುದ್ಧೋಪಕರಣಗಳ ಖರೀದಿಯಲ್ಲಿ ಮಹತ್ವದ ಪ್ರಗತಿಯಾಗಿದೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದು, ‘ಶೀಘ್ರದಲ್ಲಿಯೇ ನೂತನ ರಕ್ಷಣಾ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ಭಾರತದ ಮೇಲೆ ವಿಶೇಷ ಒಲವು

ಹುದ್ದೆಯಲ್ಲಿದ್ದಷ್ಟು ಅವಧಿಯಲ್ಲಿ ಜಿಮ್‌ ಮ್ಯಾಟಿಸ್‌ ಭಾರತದ ಮೇಲೆ ವಿಶೇಷ ಒಲವು ಹೊಂದಿದ್ದರು. ಭಾರತ–ಅಮೆರಿಕ ಮಿಲಿಟರಿ ಒಪ್ಪಂದದ ರೂವಾರಿಯಾಗಿದ್ದರು. ಅಲ್ಲದೆ, ಇಂಡೊ–ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತಕ್ಕೆ ರಕ್ಷಣಾ ವಿಷಯದಲ್ಲಿ ಸಾಕಷ್ಟು ಬೆಂಬಲವನ್ನು ಅವರು ನೀಡಿದ್ದರು.

ಉಭಯ ರಾಷ್ಟ್ರಗಳ ರಕ್ಷಣಾ ಸಂಬಂಧಗಳ ಕುರಿತು ಚರ್ಚಿಸಲು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಈ ತಿಂಗಳ ಪ್ರಾರಂಭದಲ್ಲಿ ಅವರು ಅಮೆರಿಕಕ್ಕೆ ಆಹ್ವಾನಿಸಿದ್ದರು.

‘ವಿಶ್ವದ ಅತಿ ಪ್ರಾಚೀನ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿರುವ ಅಮೆರಿಕ ಹಾಗೂ ಭಾರತ ಸ್ವಾಭಾವಿಕವಾಗಿಯೇ ಉತ್ತಮ ಸಂಬಂಧ ಹೊಂದಿವೆ’ ಎಂದು ಆ ಸಂದರ್ಭದಲ್ಲಿ ಮ್ಯಾಟಿಸ್‌ ಹೇಳಿದ್ದರು.

ಅಲ್ಲದೆ, ಕಳೆದ ಸೆಪ್ಟೆಂಬರ್‌ನಲ್ಲಿ ಅವರು ಭಾರತಕ್ಕೂ ಭೇಟಿ ನೀಡಿದ್ದರು. ಕಳೆದ ಏಪ್ರಿಲ್‌ನಲ್ಲಿ ಭಾರತವು, ರಷ್ಯಾದೊಂದಿಗೆ ಎಸ್‌–400 ವಾಯುಕ್ಷಿಪಣಿ ವ್ಯವಸ್ಥೆ ಖರೀದಿಗೆ ಮುಂದಾದಾಗ, ಇಂತಹ ಅಭಿವೃದ್ಧಿ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರಲಾಗುವ ಕಾಯ್ದೆಯಿಂದ ಭಾರತಕ್ಕೆ ವಿನಾಯ್ತಿ ನೀಡಬೇಕು ಎಂದೂ ಅವರು ಅಮೆರಿಕ ಸಂಸತ್‌ಗೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT