ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯ ನರಮೇಧ: ದಾಖಲೆ ಬಿಡುಗಡೆಗೆ ಫೇಸ್‌ಬುಕ್‌ಗೆ ಅಮೆರಿಕ ಕೋರ್ಟ್‌ ಆದೇಶ

Last Updated 23 ಸೆಪ್ಟೆಂಬರ್ 2021, 12:42 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಎಫ್‌ಪಿ): ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಸಮುದಾಯದವರ ವಿರುದ್ಧ ಸರ್ಕಾರಿ ಬೆಂಬಲಿತ ಹಿಂಸಾಚಾರಕ್ಕೆ ಸಂಬಂಧಿಸಿ ರೋಹಿಂಗ್ಯ ವಿರೋಧಿ ವಿಷಯಗಳನ್ನು ಪ್ರಕಟಿಸಿದ ಖಾತೆಗಳ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕದ ನ್ಯಾಯಾಧೀಶರು ಫೇಸ್‌ಬುಕ್‌ಗೆ ಆದೇಶಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮ್ಯಾನ್ಮಾರ್ ವಿರುದ್ಧ ಪ್ರಕರಣ ನಡೆಸುತ್ತಿರುವ ದೇಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಫೇಸ್‌ಬುಕ್‌ ಅನ್ನು ವಾಷಿಂಗ್ಟನ್ ಡಿಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜಿಯಾ ಫಾರೂಕಿ ಅವರು ಬುಧವಾರ ತಮ್ಮ ತೀರ್ಪಿನಲ್ಲಿ ಟೀಕಿಸಿದ್ದಾರೆ ಎಂದು ಅದು ಹೇಳಿದೆ.

ಅಮೆರಿಕದ ಗೋಪ್ಯತೆ ಕಾನೂನಿನ ಆಧಾರದ ಮೇಲೆ ಮಾಹಿತಿ ಬಿಡುಗಡೆ ಮಾಡಲು ಫೇಸ್‌ಬುಕ್ ನಿರಾಕರಿಸಿತ್ತು.

ಆದರೆ, ನ್ಯಾಯಾಧೀಶರಾದ ಫಾರೂಕಿ ಅವರು ‘ಬಳಕೆದಾರರ ವೈಯಕ್ತಿಕ ಸಂವಹನಗಳಿಗೆ ರಕ್ಷಣೆ ನೀಡುವುದರ ವ್ಯಾಪ್ತಿಗೆ ಅಳಿಸಿದ ಪೋಸ್ಟ್‌ಗಳು ಬರುವುದಿಲ್ಲ. ಕೋರಿರುವ ಮಾಹಿತಿ ಮುಚ್ಚಿಡುವುದು ತಪ್ಪು. ನರಮೇಧ ಹೇಗೆ ನಡೆಯಿತೆನ್ನುವುದನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ಇದು ಕಸಿದುಕೊಳ್ಳುತ್ತದೆ’ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

‘ನಾವು ನ್ಯಾಯಾಧೀಶರ ನಿರ್ಧಾರ ಪರಿಶೀಲಿಸುತ್ತಿದ್ದೇವೆ. ಮ್ಯಾನ್ಮಾರ್‌ನಲ್ಲಿ ಗಂಭೀರ ಅಂತರರಾಷ್ಟ್ರೀಯ ಅಪರಾಧಗಳ ಪುರಾವೆಗಳನ್ನು ಸಂಗ್ರಹಿಸುವ ಮತ್ತು ವಿಶ್ಲೇಷಿಸುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ(ಐಐಎಂಎಂ) ಸ್ವಯಂಪ್ರೇರಿತವಾಗಿ ದಾಖಲೆಗಳನ್ನು ಒದಗಿಸಲಾಗುತ್ತಿದೆ’ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

ರೋಹಿಂಗ್ಯದವರ ಮೇಲೆ 2017ರಲ್ಲಿ ನಡೆದ ಮಿಲಿಟರಿ ದೌರ್ಜನ್ಯದಿಂದಾಗಿ ಸುಮಾರು 7.40 ಲಕ್ಷ ಮಂದಿ ಅಲ್ಪಸಂಖ್ಯಾತರು ದೇಶ ತೊರೆದರು. 2018ರ ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥರು ಮತ್ತು ಇತರ ಐವರು ಉನ್ನತ ಮಿಲಿಟರಿ ಕಮಾಂಡರ್‌ಗಳ ವಿರುದ್ಧ ನರಮೇಧ ಹಾಗೂ ಯುದ್ಧ ಅಪರಾಧ ಆರೋಪಗಳನ್ನು ಹೊರಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ತನಿಖೆ ನಡೆಸಲು ಕರೆಕೊಟ್ಟರು.

ಬೌದ್ಧರುಬಹುಸಂಖ್ಯಾತರಿರುವ ಮ್ಯಾನ್ಮಾರ್ 1948ರ ವಿಶ್ವಸಂಸ್ಥೆಯ ನರಮೇಧ ತಡೆಗಟ್ಟುವ ಸಮಾವೇಶದ ಆಶಯ ಉಲ್ಲಂಘಿಸಿದೆ ಎಂದು ಆರೋಪಿಸಿಗ್ಯಾಂಬಿಯಾ ದೇಶವು, ಮ್ಯಾನ್ಮಾರ್ ಅನ್ನು ಅಂತರರಾಷ್ಟ್ರೀಯ ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT