ಹೂಸ್ಟನ್: ಅಮೆರಿಕದ ಸಂಗಾತಿಯನ್ನು ವರಿಸಿದ ಅಕ್ರಮ ವಲಸಿಗರಿಗೆ ತ್ವರಿತಗತಿಯಲ್ಲಿ ಪೌರತ್ವ ನೀಡುವ ಅಧ್ಯಕ್ಷ ಜೋ ಬೈಡನ್ ಅವರ ಮಹತ್ವಾಕಾಂಕ್ಷೆ ಯೋಜನೆಗೆ ಟೆಕ್ಸಾಸ್‌ನ ನ್ಯಾಯಾಲಯವು ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ.
ಹೀಗೆ ಪೌರತ್ವ ಪಡೆಯುವ ನಿರೀಕ್ಷೆಯಲ್ಲಿ ಭಾರತೀಯರನ್ನೂ ಒಳಗೊಂಡು ಸುಮಾರು ಐದು ಲಕ್ಷ ಜನ ಇದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಪೌರತ್ವ ಹೊಂದಿಲ್ಲದ ವ್ಯಕ್ತಿಯ ಸಂಗಾತಿ ಹಾಗೂ ಮಕ್ಕಳಿಗೆ ತ್ವರಿತವಾಗಿ ಪೌರತ್ವ ನೀಡುವ ಯೋಜನೆಗೆ ಕಳೆದ ಜೂನ್‌ನಲ್ಲಿ ಬೈಡನ್ ಚಾಲನೆ ನೀಡಿದ್ದರು. ಇದಕ್ಕೆ ಪೂರಕವಾಗಿ ಒಳಾಡಳಿತ ಭದ್ರತಾ ಇಲಾಖೆಯು ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಿತ್ತು. ಹತ್ತು ವರ್ಷಗಳಿಂದ ಮಕ್ಕಳು ಹಾಗೂ ಮಲಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿರುವ ಹಾಗೂ ಪೌರತ್ವಕ್ಕಾಗಿ ಕಾದಿರುವವರಿಗೆ ಕಾಯಂ ನಿವಾಸಿ ಸ್ಥಾನಮಾನ ನೀಡುವ ಉದ್ದೇಶ ಇದಾಗಿತ್ತು. ಆದರೆ ಅಮೆರಿಕದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜೆ. ಕ್ಯಾಂಪ್‌ಬೆಲ್ ಬಾರ್ಕರ್ ಅವರು ಈ ಆದೇಶಕ್ಕೆ ಎರಡು ವಾರಗಳ ತಡೆ ನೀಡಿದ್ದಾರೆ.
‘ಸರ್ಕಾರದ ಈ ಕ್ರಮವು ಅಕ್ರಮ ವಲಸೆಯನ್ನು ಹೆಚ್ಚಿಸುವುದಲ್ಲದೆ, ದೇಶಕ್ಕೂ ಭರಿಸಲಾಗದ ನಷ್ಟವನ್ನುಂಟು ಮಾಡುತ್ತದೆ’ ಎಂದು 16 ಜನ ರಿಪಬ್ಲಿಕನ್ ನೇತೃತ್ವದ ರಾಜ್ಯಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿ 9 ಪುಟಗಳ ಆದೇಶ ಹೊರಡಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ ಎಂದು ಪಿಟಿಐ ಹೇಳಿದೆ.
‘ಬೈಡನ್ ಅವರ ಅಸಂವಿಧಾನಿಕ ನಡೆಯ ವಿರುದ್ಧದ ನಮ್ಮ ಹೋರಾಟದ ಮೊದಲ ಹೆಜ್ಜೆ ಇದೆ. ಟೆಕ್ಸಾಸ್ ಹಾಗೂ ಈ ದೇಶ ರಕ್ಷಿಸಲು ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಟೆಕ್ಸಾಸ್ ಅಟರ್ನಿ ಜನರಲ್ ಕೆನ್ ಪ್ಯಾಕ್ಸಟನ್ ಹೇಳಿದ್ದಾರೆ.