ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20: ಭಾರತದತ್ತ ಹೊರಟ ಜೋ ಬೈಡನ್; ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ

Published 8 ಸೆಪ್ಟೆಂಬರ್ 2023, 3:33 IST
Last Updated 8 ಸೆಪ್ಟೆಂಬರ್ 2023, 3:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿ ಆಯೋಜನೆಗೊಂಡಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಲ್ಲಿನ ಮೇರಿಲ್ಯಾಂಡ್ ವಾಯುನೆಲೆಯಿಂದ ಏರ್‌ಫೋರ್ಸ್‌ ಒನ್ ವಿಮಾನದ ಮೂಲಕ ಪ್ರಯಾಣ ಬೆಳೆಸಿದರು.

ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಹೊರಡಿಸಿರುವ ಕೋವಿಡ್–19 ಮಾರ್ಗಸೂಚಿಯನ್ನು ಜೋ ಅವರು ಜಿ20 ಶೃಂಗದಲ್ಲಿ ಪಾಲಿಸಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಅಮೆರಿಕದ ಮೊದಲ ಮಹಿಳೆ ಜಿಲ್ಲಿ ಬೈಡನ್ ಅವರಿಗೆ ಕಳೆದ ಸೋಮವಾರ ಕೋವಿಡ್ ಸೋಂಕು ದೃಢಪಟ್ಟಿತ್ತು. ಅದೇ ದಿನ ಜೋ ಅವರೂ ತಪಾಸಣೆಗೆ ಒಳಗಾಗಿದ್ದರು. ಆದರೆ ಅವರಲ್ಲಿ ಸೋಂಕು ದೃಢಪಟ್ಟಿರಲಿಲ್ಲ. ಭಾರತಕ್ಕೆ ಪ್ರಯಾಣ ಬೆಳೆಸುವ ಒಂದು ಗಂಟೆ ಮೊದಲು ಶ್ವೇತ ಭವನ ಹೊರಡಿಸಿರುವ ಪ್ರಕಟಣೆಯಲ್ಲಿ ಜೋ ಬೈಡನ್ ಅವರ ಕೋವಿಡ್ ಟೆಸ್ಟ್‌ ವರದಿ ನೆಗೆಟಿವ್ ಬಂದಿದೆ ಎಂದು ಹೇಳಲಾಗಿದೆ.

ಜಿಲ್ಲಿ ಬೈಡನ್ ಅವರು ಸದ್ಯ ಕ್ವಾರಂಟೈನ್‌ನಲ್ಲಿರುವುದರಿಂದ ಜೋ ಅವರ ಭಾರತ ಮತ್ತು ವಿಯಟ್ನಾಂ ಪ್ರವಾಸದಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ. ಗುರುವಾರ ಮತ್ತೆ ತಪಾಸಣೆಗೆ ಒಳಗಾಗಿರುವ ಜಿಲ್ಲಿ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ ಎಂದು ವರದಿಯಾಗಿದೆ.

ಜೋ ಬೈಡನ್‌ ಜತೆ ಶ್ವೇತ ಭವನದ ಅಧಿಕಾರಿಗಳು

ಏರ್‌ಫೋರ್ಸ್‌ ಒನ್ ಮೂಲಕ ಭಾರತದತ್ತ ಪ್ರಯಾಣ ಬೆಳೆಸಿರುವ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲ್ಲಿವ್ಯಾನ್‌, ಸಿಬ್ಬಂದಿ ವಿಭಾಗದ ಉಪ ಮುಖ್ಯಸ್ಥೆ ಜೇನ್ ಒಮ್ಯಾಲ್ಲೇ ಡಿಲ್ಲಾನ್ ಹಾಗೂ ಓವಲ್ ಕಚೇರಿಯ ನಿರ್ವಹಣಾ ನಿರ್ದೇಶಕಿ ಆ್ಯನ್ನೀ ತೊಮಸೀನ್ ಪ್ರಯಾಣಿಸುತ್ತಿದ್ದಾರೆ.

ಈ ತಂಡದಲ್ಲಿ ರಾಷ್ಟ್ರೀಯ ಭದ್ರತೆಯ ವಿಭಾಗದ ಮುಖ್ಯ ಉಪ ಸಲಹೆಗಾರ ಜಾನ್ ಫಿನ್ನರ್, ಮಾಧ್ಯಮ ಕಾರ್ಯದರ್ಶಿ ಕ್ಯಾರೀನ್ ಜೀನ್ ಪೀರೆ, ಭಾಷಣ ಬರಹ ವಿಭಾಗದ ನಿರ್ದೇಶಕ ವಿನಯ್ ರೆಡ್ಡಿ, ಸಂವಹನ ವಿಭಾಗದ ನಿರ್ದೇಶಕ ಬೆನ್ ಲ್ಯಾಬಾಲ್ಟ್‌ ಸೇರಿದಂತೆ ಹಲವರು ಇದ್ದಾರೆ.

ಶ್ವೇತ ಭವನದ ಮಾಹಿತಿ ಪ್ರಕಾರ ಜೋ ಬೈಡನ್ ಅವರು ಶುಕ್ರವಾರ ಸಂಜೆ ನವದೆಹಲಿಗೆ ಬಂದಿಳಿಯಲಿದ್ದಾರೆ. ನಡುವೆ ಇಂಧನ ತುಂಬಿಸಲು ಏರ್‌ಫೋರ್ಸ್‌ ಒನ್ ಜರ್ಮನಿಯಲ್ಲಿ ಇಳಿಯಲಿದೆ ಎಂದು ಶ್ವೇತ ಭವನ ತಿಳಿಸಿದೆ.

ಹವಾಮಾನ ಬದಲಾವಣೆ ಕುರಿತ ಚರ್ಚೆ

ಹವಾಮಾನ ಬದಲಾವಣೆ, ವಿಶ್ವ ಬ್ಯಾಂಕ್ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿಯಂತೆ ಅಂತರರಾಷ್ಟ್ರೀಯ ಒಕ್ಕೂಟದಲ್ಲಿ ಆಗಬೇಕಾದ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಅಮೆರಿಕ ಅಧ್ಯಕ್ಷ ಜೋ ಅವರು ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿರುವ ಜೋ ಅವರ ಆಫ್ರಿಕಾ ಒಕ್ಕೂಟವನ್ನು ಜಿ20ರ ಕಾಯಂ ಸದಸ್ಯರನ್ನಾಗಿ ಆಹ್ವಾನಿಸಲಿದ್ದಾರೆ. ಜತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಶುಕ್ರವಾರವೇ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜೂನ್‌ನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಅವರ ಭೇಟಿ ಸಂದರ್ಭದಲ್ಲಿ ಕೈಗೊಂಡ ಕೆಲ ನಿರ್ಣಯಗಳ ಕುರಿತು ನಡೆದಿರುವ ಬೆಳವಣಿಗೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಉಕ್ರೇನ್ ಯುದ್ಧ, ಆಧುನಿಕ ತಂತ್ರಜ್ಞಾನ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಜನರಲ್ ಅಟಾಮಿಕ್ಸ್‌ನ ಡ್ರೋಣ್ ಹಾಗೂ ಜನರಲ್ ಎಲೆಕ್ಟ್ರಿಕಲ್ಸ್‌ನ ಜೆಟ್‌ ಎಂಜಿನ್‌ಗಳ ಖರೀದಿ ಘೋಷಣೆಯೂ ಆಗುವ ಸಾಧ್ಯತೆ ಇದೆ.

ಹಲವು ಗೋಷ್ಠಿಯಲ್ಲಿ ಜೋ ಬೈಡನ್ ಭಾಗಿ

ಜೋ ಬೈಡನ್ ಅವರು ಜಿ20 ಸಭೆಯಲ್ಲಿ ಶನಿವಾರ ಪಾಲ್ಗೊಳ್ಳಲಿದ್ದಾರೆ. ಇರುವುದೊಂದೇ ಭೂಮಿ, ಒಂದು ಕುಟುಂಬ ಎಂಬ ಗೋಷ್ಠಿಗಳಲ್ಲಿ ಪಾಲ್ಗೊಳಲ್ಲಿದ್ದಾರೆ. ದಿನದ ಕೊನೆಯಲ್ಲಿ ನಡೆಯಲಿರುವ ಜಾಗತಿ ಮೂಲಸೌಕರ್ಯ ಹಾಗೂ ಹೂಡಿಕೆ ಕುರಿತ ಗೋಷ್ಠಿಯಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿ20 ರಾಷ್ಟ್ರಗಳ ನಾಯಕರೊಂದಿಗೆ ಪಾಲ್ಗೊಳ್ಳಲಿದ್ದಾರೆ. ಭಾರತದಿಂದ ವಿಯಟ್ನಾಂಗೆ ಪ್ರಯಾಣ ಬೆಳೆಸುವ ಮುನ್ನ ಜೋ ಬೈಡನ್ ಅವರು ರಾಜ್‌ ಘಾಟ್‌ಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

‘ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಅವಕಾಶಗಳ ಕುರಿತು ಜೋ ಬೈಡನ್ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಲಿದ್ದಾರೆ. ಹವಾಮಾನ ಬದಲಾವಣೆ ಹಾಗೂ ತಂತ್ರಜ್ಞಾನಗಳ ಕುರಿತೂ ಅವರು ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜಿ20 ಸಭೆ ನಡೆಯುತ್ತಿರುವುದು ಸಂತಸದ ವಿಷಯ. ಜತೆಗೆ ದ್ವಿಪಕ್ಷೀಯ ಮಾತುಕತೆಯೂ ಫಲಪ್ರದವಾಗಿರಲಿದೆ’ ಎಂದು ಎಂದು ರಾಷ್ಟ್ರೀಯ ಭದ್ರತಾ ಸಮಿತಿಯ ಸಮನ್ವಯಕಾರ ಜಾನ್ ಕಿರ್ಬಿ ಅವರು ಬುಧವಾರ ಹೇಳಿದ್ದರು.

‘ಜಿ20 ರಾಷ್ಟ್ರಗಳಲ್ಲಿ ಕಾಯಂ ಸದಸ್ಯತ್ವ ಪಡೆಯುತ್ತಿರುವ ಆಫ್ರಿಕಾದ ರಾಷ್ಟ್ರಗಳ ಸದಸ್ಯರನ್ನು ಅವರು ಸ್ವಾಗತಿಸಲಿದ್ದಾರೆ. ಆಫ್ರಿಕಾದ ಒಕ್ಕೂಟದ ಧ್ವನಿಯಿಂದಾಗಿ ಜಿ20 ಇನ್ನಷ್ಟು ಬಲಗೊಳ್ಳಲಿದೆ. ಜಾಗತಿಕ ಜಿಡಿಪಿಯ ಶೇ 85ರಷ್ಟು ಜಿ20 ಸದಸ್ಯ ರಾಷ್ಟ್ರಗಳ ಕೊಡುಗೆಯಾಗಿದೆ. ಇದರಲ್ಲಿ ಶೇ 75ರಷ್ಟು ವಿಶ್ವ ವ್ಯಾಪಾರ ಇದ್ದರೆ, ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಇಲ್ಲಿಯೇ ಇದೆ’ ಎಂದಿದ್ದಾರೆ.

‘ಉಕ್ರೇನ್ ಯುದ್ಧದ ಕುರಿತ ಚರ್ಚೆಗೆ ರಷ್ಯಾ ಹಾಗೂ ಚೀನಾ ಸಹಿ ಹಾಕಲು ನಿರಾಕರಿಸುವ ಸಾಧ್ಯತೆ ಇದೆ. ಜತೆಗೆ ಜಗತ್ತಿನ ಇತರ ರಾಷ್ಟ್ರಗಳೂ ಇದಕ್ಕೆ ಅಸಮ್ಮತಿ ವ್ಯಕ್ತಪಡಿಸುವ ಸಾಧ್ಯತೆ ಇದೆ. ಅದು ಹೇಗೆ ಮುಂದುವರಿಯುವುದೋ ಕಾದು ನೋಡಬೇಕು’ ಎಂದು ಕಿರ್ಬಿ ಹೇಳಿದ್ದಾರೆ.

ಜೋ ಬೈಡನ್ ಅವರೊಂದಿಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮಾಕ್ರಾನ್, ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಆಲ್ಬೆನಿಸ್, ಜರ್ಮನ್ ಚಾನ್ಸಲರ್ ಆಲಫ್‌ ಷೋಜ್‌, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜಪಾನ್ ಪ್ರಧಾನಿ ಫುಮಿಯೊ ಕಿಷಿದಾ, ಬ್ರೆಜಿಲ್ ಅಧ್ಯಕ್ಷ ಲ್ಯೂಜ್ ಇನಾಸಿಯೊ ಲುಲಾ ಡಾ ಸಿಲ್ವಾ ಮುಂತಾದ ಜಿ20 ರಾಷ್ಟ್ರಗಳ ನಾಯಕರು ಈ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆ. 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿ20ರ ಬ್ಯಾಟನ್‌ ಅನ್ನು ಬ್ರೆಜಿಲ್ ಅಧ್ಯಕ್ಷರಿಗೆ ಹಸ್ತಾಂತರಿಸಲಿದ್ದಾರೆ. ಡಿ. 1ರಂದು ನಡೆಯಲಿರುವ ಮುಂದಿನ ಸಭೆಯ ಅಧ್ಯಕ್ಷತೆಯನ್ನು ಬ್ರಜಿಲ್ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT