ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸಂಸತ್‌ ಮಧ್ಯಂತರ ಚುನಾವಣೆ; ಆಡಳಿತಾರೂಢ ರಿಪಬ್ಲಿಕನ್‌ ಪಾರಮ್ಯ

Last Updated 7 ನವೆಂಬರ್ 2018, 5:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಡೊನಾಲ್ಟ್‌ ಟ್ರಂಪ್‌ ಅಧ್ಯಕ್ಷರಾದ ಬಳಿಕ ನಡೆದಿರುವ ಮೊದಲ ರಾಷ್ಟ್ರವ್ಯಾಪಿ ಚುನಾವಣೆ ಕುತೂಹಲ ಕೆರಳಿಸಿದ್ದು, ಜನರು ಟ್ರಂಪ್‌ ಅವರ ರಿಪಬ್ಲಿಕನ್‌ ಪಾರ್ಟಿಯನ್ನು ಅಪ್ಪಿದ್ದಾರ ಅಥವಾ ಕೈಬಿಟ್ಟಾರ ಎಂಬುದು ಪ್ರಸ್ತುತ ಚರ್ಚಾ ವಿಷಯ. ಮಂಗಳವಾರ ರಾತ್ರಿ ಮತ ಎಣಿಕೆ ಕಾರ್ಯ ನಡೆದಿದೆ.

ಅಮೆರಿಕ ಸಂಸತ್ತಿಗೆ ಮಂಗಳವಾರ ನಡೆದ ಮಧ್ಯಂತರ ಚುನಾವಣೆಯ ಫಲಿತಾಂಶ ಈಗಾಗಲೇ ಬಹುತೇಕ ಹೊರಬಂದಿದೆ.ಆಡಳಿತಾ ರೂಢ ರಿಪಬ್ಲಿಕನ್‌(ಜಿಒಪಿ) ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್‌ ಪಾರ್ಟಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಮೊದಲಿಗೆ ಫ್ಲೋರಿಡಾ ಮತ್ತು ವರ್ಜಿಯಾದಲ್ಲಿ ಡೆಮಾಕ್ರಟಿಕ್‌ ಪಾರ್ಟಿ ಖಾತೆ ತೆರೆಯಿತು. ಆದರೆ, ಕೆಂಟುಕಿಯಲ್ಲಿ ತನ್ನ ಸ್ಥಾನ ಕಳೆದುಕೊಂಡಿದೆ. ನ್ಯೂ ಜೆರ್ಸಿಯಲ್ಲಿ ಡೆಮಾಕ್ರಾಟ್‌ ಅಭ್ಯರ್ಥಿ ಬಾಬ್‌ ಮೆನೆನ್‌ಡೆಜ್‌ ಮುನ್ನಡೆ ಸಾಧಿಸಿದ್ದಾರೆ.

ಪ್ರಸ್ತುತ ರಿಪಬ್ಲಿಕನ್ ಪಕ್ಷ ಸಂಸತ್ತಿನಲ್ಲಿ ಬಹುಮತ ಹೊಂದಿದ್ದು, ಡೆಮಾಕ್ರಟಿಕ್‌ ಪಾರ್ಟಿ ಬಹುಮತ ಪಡೆಯಲು 23 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬೇಕಿದೆ. ಈಗಾಗಲೇ 100 ಸೆನೆಟ್‌ ಸ್ಥಾನಗಳ ಪೈಕಿ 93ಸ್ಥಾನಗಳಲ್ಲಿ ಫಲಿತಾಂಶ ಘೋಷಣೆಯಾಗಿದ್ದು, ಶೇ 50ರಷ್ಟು ಸ್ಥಾನಗಳಲ್ಲಿ ರಿಪಬ್ಲಿಕನ್‌ ಪಾರ್ಟಿ ಪಾರಮ್ಯ ಸಾಧಿಸಿದೆ. ಡೆಮಾಕ್ರಟಿಕ್‌ ಪಾರ್ಟಿ ಶೇ 40 ಸ್ಥಾನಗಳೊಂದಿಗೆ ಪೈಪೋಟಿ ನೀಡಿದೆ. ಕೆಳಮನೆ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ಉಭಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, 435 ಸ್ಥಾನಗಳ ಪೈಕಿ ರಿಪಬ್ಲಿಕನ್‌ ಪಾರ್ಟಿ 159ಹಾಗೂ ಡೆಮಾಕ್ರಟಿಕ್‌ ಪಾರ್ಟಿ 160ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ದಕ್ಷಿಣ ಫ್ಲೋರಿಡಾದಲ್ಲಿ ಆರೋಗ್ಯ ಮತ್ತು ಮಾನವ ಸೇವೆಗಳ ಮಾಜಿ ಕಾರ್ಯದರ್ಶಿ ಡೋನಾ ಷಲಾಲಾ ರಿಪಬ್ಲಿಕನ್‌ ಪಾರ್ಟಿಯ ಮರಿಯಾ ಎಲ್ವಿರಾ ಸಲಾಜಾರ್‌ ಅವರನ್ನು ಮಣಿಸಿದ್ದಾರೆ. ವರ್ಜಿನಿಯಾದಲ್ಲಿ ಎರಡು ಅವಧಿಗೆ ರಿಪಬ್ಲಿಕನ್‌ ಪಾರ್ಟಿಯಿಂದ ಆಯ್ಕೆಯಾಗಿದ್ದ ಬರ್ಬರಾ ಕಾಮ್‌ಸ್ಟಾಕ್‌ ವಿರುದ್ಧ ಇತ್ತೀಚೆಗೆ ರಾಜಕೀಯ ಪ್ರವೇಶಿಸಿರುವ ಜೆನಿಫರ್‌ ವೆಕ್ಸ್‌ಟನ್‌ ಗೆಲುವು ಸಾಧಿಸಿದ್ದಾರೆ.

ಮಂಗಳವಾರ ಚುನಾವಣೆ ಮತದಾನ ಪ್ರಕ್ರಿಯೆಗೆ ಪ್ರಾರಂಭದಲ್ಲಿ ಮತದಾನ ಯಂತ್ರಗಳ ದೋಷದಿಂದ ಕೆಲ ಸಮಯ ಅಡ್ಡಿಯಾಯಿತು. ಇದರಿಂದಾಗಿ ಸಾಲುಗಟ್ಟಿ ನಿಂತ ಮತದಾರರ ಸಂಖ್ಯೆ ಹೆಚ್ಚಿತು ಹಾಗೂ ಮತದಾನದ ಹಕ್ಕು ಚಲಾಯಿಸಲು ಮೂರು ಗಂಟೆಗಳು ಕಾಯಬೇಕಾದ ಅನಿವಾರ್ಯತೆ ಎದುರಾಯಿತು.

ವಿಶ್ಲೇಷಕರ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತೆಗೆದುಕೊಂಡಿರುವ ವಲಸೆ ನೀತಿ ಕ್ರಮ ಪರ–ವಿರೋಧದ ಪ್ರಮುಖ ವಿಷಯವಾಗಿದೆ.

ರಶೀದಾ ತ್ಲೈಬ್‌ ಮತ್ತು ಇಲ್ಹಾನಾ ಓಮರ್‌ ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾಗಿರುವ ಮೊದಲ ಮುಸ್ಲಿಂ ಮಹಿಳಾ ಅಭ್ಯರ್ಥಿಗಳು. ಕನ್ಸಾಸ್‌ ಡೆಮಾಕ್ರಟಿಕ್‌ ಪಾರ್ಟಿಯಿಂದ ಆಯ್ಕೆಯಾಗಿರುವ ಶರೈಸ್‌ ಡೇವಿಡ್ಸ್‌ ಮೊದಲ ಮೂಲ ಅಮೆರಿಕನ್‌ ಮಹಿಳೆ ಹಾಗೂ ಸಲಿಂಗಿ ಎಂದು ಘೋಷಿಸಿಕೊಂಡಿರುವ ಜೇರ್ಡ್‌ ಪೊಲಿಸ್‌ ಕೊಲೊರೊಡೊದಿಂದ ಗೆಲುವು ಸಾಧಿಸಿದ್ದಾರೆ.

ಅಫ್ಘನಿಸ್ತಾನದ ತಾಲಿಬಾನ್‌ನಲ್ಲಿ ಕುಟಂಬ ಸಹಿತ ಕಿರುಕುಳಕ್ಕೆ ಒಳಗಾಗಿದ್ದ ಸಫೀಯಾ ವಾಜಿರ್‌(27), ಎರಡು ಮಕ್ಕಳ ತಾಯಿ ನ್ಯೂ ಹ್ಯಾಂಪ್‌ಶೈರ್‌ನಿಂದ ಗೆಲುವು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT