ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ–ಉಕ್ರೇನ್‌ ಸಂಘರ್ಷ ತಡೆಯುವಲ್ಲಿ ಭದ್ರತಾ ಮಂಡಳಿ ವಿಫಲ: ಭಾರತ

ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪ್ರಸ್ತಾಪ * ಮಂಡಳಿಯಲ್ಲಿ ಸುಧಾರಣೆ ಅಗತ್ಯ– ಪ್ರತಿಪಾದನೆ
Published 27 ಫೆಬ್ರುವರಿ 2024, 13:09 IST
Last Updated 27 ಫೆಬ್ರುವರಿ 2024, 13:09 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ(ಪಿಟಿಐ): ‘ರಷ್ಯಾ ಮತ್ತು ಉಕ್ರೇನ್‌ ನಡುವೆ ಎರಡು ವರ್ಷಗಳಿಂದ ಯುದ್ಧ ನಡೆಯುತ್ತಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಉಭಯ ದೇಶಗಳ ನಡುವಿನ ಸಂಘರ್ಷವನ್ನು ನಿವಾರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಏಕೆ’ ಎಂದು ಭಾರತ ಪ್ರಶ್ನಿಸಿದೆ.

ಬಹುಪಕ್ಷೀಯವಾಗಿ ನಡೆಯುವ ಯಾವುದೇ ಪ್ರಯತ್ನಗಳು ಫಲ ನೀಡಬೇಕಾದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಚನೆಯಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್‌ ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಈ ಕುರಿತು ಮಾತನಾಡಿರುವ ಅವರು, 2022ರ ಫೆಬ್ರುವರಿ 24ರಂದು ಆರಂಭಗೊಂಡಿರುವ ರಷ್ಯಾ–ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

‘ಉಭಯ ದೇಶಗಳ ನಡುವೆ ಎರಡು ವರ್ಷಗಳಿಂದಲೂ ಯುದ್ಧ ನಡೆಯುತ್ತಿದೆ. ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಈ ವಿದ್ಯಮಾನದ ಬಗ್ಗೆ ಯೋಚಿಸಬೇಕು ಹಾಗೂ ಎರಡು ಪ್ರಮುಖ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ’ ಎಂದರು.

‘ಈ ಸಂಘರ್ಷಕ್ಕೆ ಸಂಬಂಧಿಸಿ ಸ್ವೀಕಾರಾರ್ಹ ಅಥವಾ ಸಾಧ್ಯವೆನಿಸುವ ಪರಿಹಾರವನ್ನು ನಾವು ಹುಡುಕಿದ್ದೇವೆಯೇ?’. ಇಲ್ಲ ಎಂದಾದಲ್ಲಿ, ಜಾಗತಿಕವಾಗಿ ಶಾಂತಿ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಏಕೆ ವಹಿಸಲಾಗಿದೆ? ಈ ವಿಷಯದಲ್ಲಿ ಮಂಡಳಿಯ ಕಾರ್ಯ ಪರಿಣಾಮಕಾರಿಯಾಗಿಲ್ಲವೇಕೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಕಾಂಬೋಜ್‌ ಹೇಳಿದ್ದಾರೆ.

‘ಸಂಘರ್ಷವನ್ನು ಕೊನೆಗಾಣಿಸುವಲ್ಲಿನ ಪ್ರಯತ್ನಗಳು ಫಲಪ್ರದವಾಗಬೇಕು ಎಂದಾದಲ್ಲಿ, ಭದ್ರತಾ ಮಂಡಳಿಯ ರಚನೆಯಲ್ಲಿ ಸುಧಾರಣೆಯಾಗಬೇಕು. ಇಲ್ಲದೇ ಹೋದರೆ, ಅದರ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ. ಈ ನ್ಯೂನತೆಯನ್ನು ಸರಿಪಡಿಸದಿದ್ದಲ್ಲಿ, ಭದ್ರತಾ ಮಂಡಳಿಯು ನಮ್ಮ ಅಗತ್ಯಗಳನ್ನು ಪೂರೈಸುವುದೇ ಇಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT