ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ವಿಮಾನ ಅಪಘಾತ- 15 ಬಲಿ

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ಕಠ್ಮಂಡು (ಐಎಎನ್‌ಎಸ್/ ಪಿಟಿಐ):  ಪಶ್ಚಿಮ ನೇಪಾಳದಲ್ಲಿ ಸೋಮವಾರ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಲಘು ವಿಮಾನವೊಂದು ಪರ್ವತ ಪ್ರದೇಶದ ಮೇಲಿರುವ ಕಿರಿದಾದ ಜೊಮ್ಸಮ್ ನಿಲ್ದಾಣದಲ್ಲಿ ಇಳಿಯಲು ಯತ್ನಿಸಿದಾಗ ಎಂಜಿನ್ ವೈಫಲ್ಯದಿಂದಾಗಿ ಪರ್ವತದ ಅಂಚಿಗೆ ಬಡಿದು ಅಪಘಾತ ಕ್ಕೀಡಾಗಿದೆ.

ಈ ದುರಂತದಲ್ಲಿ 13 ಭಾರತೀಯರು ಸೇರಿದಂತೆ ಒಟ್ಟು 15 ಪ್ರಯಾಣಿಕರು ಮೃತಪಟ್ಟಿದ್ದಾರೆ. ಆರು ಜನರು ಬದುಕುಳಿದಿದ್ದಾರೆ.



ಬದುಕುಳಿದವರಲ್ಲಿ ಒಬ್ಬ ಗಗನಸಖಿ, ಇಬ್ಬರು ಡ್ಯಾನಿಷ್ ಪ್ರಜೆಗಳು ಹಾಗೂ ದಕ್ಷಿಣ ಭಾರತದಿಂದ ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ಸೇರಿದ್ದಾರೆ.

ಚೆನ್ನೈ ಮೂಲದ ತಿರುಮಲ ಕಿಡಾಂಬಿ ಶ್ರೀಕಾಂತ್ (40), ಅವರ ಪುತ್ರಿಯರಾದ ಟಿ.ಕೆ. ಶ್ರೀವರ್ಧಿನಿ (9) ಹಾಗೂ ಟಿ.ಕೆ. ಶ್ರೀಪದಾ (6) ಸದ್ಯಕ್ಕೆ ಪೊಖಾರಾದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಕಾಂತ್ ಪತ್ನಿ ಲತಾ ಮೃತಪಟ್ಟಿದ್ದಾರೆ. ಶ್ರೀಕಾಂತ್ ಇನ್‌ಫೋಸಿಸ್ ಉದ್ಯೋಗಿ.

ಖಾಸಗಿ ವಿಮಾನಯಾನ ಸಂಸೆ `ಅಗ್ನಿ ಏರ್~ಗೆ ಸೇರಿದ್ದ ಈ ವಿಮಾನ ಬೆಳಿಗ್ಗೆ 9.30ರ ಸುಮಾರಿಗೆ ಪೊಖಾರಾ ವಿಮಾನ ನಿಲ್ದಾಣದಿಂದ ಅಪ್ರತಿಮ ನಿಸರ್ಗ ಸೌಂದರ್ಯಕ್ಕೆ ಹೆಸರಾದ ಜೊಮ್ಸಮ್‌ನತ್ತ ಹೊರಟಿತ್ತು.

ಇಬ್ಬರು ಪೈಲಟ್‌ಗಳು, ಒಬ್ಬಳು ಗಗನಸಖಿ ಹಾಗೂ 18 ಪ್ರಯಾಣಿಕರು ಸೇರಿ ಒಟ್ಟು 21 ಮಂದಿ ಈ ವಿಮಾನದಲ್ಲಿ ಇದ್ದರು. ಪ್ರವಾಸಿಗರೆಲ್ಲ ಜೊಮ್ಸಮ್  ಬಳಿ ಟಿಬೆಟ್ ಗಡಿಗೆ ಹೊಂದಿಕೊಂಡಂತೆ ಇರುವ ಪ್ರಸಿದ್ಧ ಮುಕ್ತಿನಾಥ ದೇವಾಲಯಕ್ಕೆ ಭೇಟಿ ನೀಡಲು ಹೊರಟಿದ್ದರು. ಜೊಮ್ಸಮ್ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಪರ್ವತದ ಅಂಚಿಗೆ ಬಡಿದು ಬೆಳಗಿನ 9.45ರ ಹೊತ್ತಿಗೆ ಅಪಘಾತ   ಕ್ಕೀಡಾಗಿತ್ತು.

ತಾಂತ್ರಿಕ ತೊಂದರೆ: ವಿಮಾನ ಇಳಿಯುವಾಗ ತಾಂತ್ರಿಕ ತೊಂದರೆ ಕಾಣಿಸಿದ್ದರಿಂದ   ಪೊಖಾರಾಗೆ ವಾಪಸಾಗಲು ಚಾಲಕ ಸಿಬ್ಬಂದಿ  ಯತ್ನಿಸಿದ್ದರು. ಆ ಸಂದರ್ಭದಲ್ಲಿ ಪರ್ವತದ ಅಂಚಿಗೆ ಅಪ್ಪಳಿಸಿತು ಎಂದು ಪೊಖಾರಾ ವಿಮಾನ ನಿಲ್ದಾಣದ ಸಹಾಯಕ ವ್ಯವಸ್ಥಾಪಕ  ತಿಳಿಸಿದ್ದಾರೆ.

ಜೊಮ್ಸಮ್ ಕಠ್ಮಂಡುವಿನಿಂದ ವಾಯವ್ಯಕ್ಕೆ 200 ಕಿ.ಮೀ. ದೂರದಲ್ಲಿದೆ. ಪರ್ವತವೊಂದರ ಕಿರಿದಾದ ತುದಿಯ ಮೇಲೆ ನಿರ್ಮಿಸಲಾದ ಈ ನಿಲ್ದಾಣದಲ್ಲಿ ಪೈಲಟ್‌ಗಳು ಅತಿ ಜಾಗರೂಕರಾಗಿ ಲ್ಯಾಂಡಿಂಗ್ ಮಾಡಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ರಕ್ಷಣಾ ಕಾರ್ಯ: ಜೊಮ್ಸಮ್  ಸೇನಾ ನೆಲೆಯ ಹಿಂಬದಿಯ ಪರ್ವತಕ್ಕೆ ವಿಮಾನ ಅಪ್ಪಳಿಸಿದ್ದರಿಂದ ಪರಿಹಾರ ಕಾರ್ಯಾಚರಣೆ ಸುಲಭವಾಯಿತು. ಪರ್ವತದ ತುದಿಗೆ ಅಪ್ಪಳಿಸಿದ ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದೇ ತುಂಡು, ತುಂಡಾಗಿ ಬಿತ್ತು. ಬದುಕುಳಿದವರನ್ನು ಕೂಡಲೇ ಮತ್ತೊಂದು ವಿಮಾನದಲ್ಲಿ ಕರೆದೊಯ್ದು ಪೊಖಾರಾ ಆಸ್ಪತ್ರೆಗೆ ದಾಖಲಿಸಲಾಯಿತು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT