ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸಮರಕ್ಕೆ ಸಜ್ಜಾಗಿತ್ತು

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಸಂಸತ್ ಭವನದ ಮೇಲೆ 2001ರಲ್ಲಿ ಭಯೋತ್ಪಾದಕರು ದಾಳಿ ಮಾಡಿದ ನಂತರ ಭಾರತವು ಪಶ್ಚಿಮ ಗಡಿಯಲ್ಲಿ ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಗಳನ್ನು ಸಿದ್ಧವಾಗಿಟ್ಟಿತ್ತು ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಂಡೋಲಿಸಾ ರೈಸ್ ಅವರು ತಿಳಿಸಿದ್ದಾರೆ.

ಪಾಕ್ ಜತೆ ಮಾತುಕತೆ ನಡೆಸಬೇಕು ಎಂದು ಅಮೆರಿಕ ಒತ್ತಡ ಹೇರಿದರೂ ಭಾರತ ಮಣಿದಿರಲಿಲ್ಲ. ಆಗ ಶ್ವೇತ ಭವನದಲ್ಲಿಯ ತುರ್ತು ಸಭಾ ಕೊಠಡಿಯಲ್ಲಿ ಸೇನಾ ಮುಖ್ಯಸ್ಥರು ಮತ್ತು ಸಿಐಎ ಅಧಿಕಾರಿಗಳ ಮಧ್ಯೆ ದಕ್ಷಿಣ ಏಷ್ಯಾದ ನೈಜ ಪರಿಸ್ಥಿತಿಯ ಬಗ್ಗೆ ಭಿನಾಭಿಪ್ರಾಯ ಉಂಟಾಗಿತ್ತು ಎಂದು ರೈಸ್  ತಮ್ಮ `ನೋ ಹೈಯರ್ ಆನರ್~ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಭಾರತವು ಪಾಕಿಸ್ತಾನದ ಜತೆ ಯುದ್ಧ ಮಾಡಲು ಸಿದ್ಧವಾಗಿದೆ ಎಂದು ಸಿಐಎ ಅಧ್ಯಕ್ಷರಿಗೆ ವರದಿ ಮಾಡಿತ್ತು. ಆದರೆ ಅಮೆರಿಕದ ಸೇನಾ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದರು. ಆಗ ರೈಸ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.

ಭಾರತ ತನ್ನ ಮೇಲೆ ದಾಳಿ ಮಾಡಲು ಸಿದ್ಧವಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನೇ ಸಿಐಎ ಪುನರುಚ್ಚರಿಸಿತ್ತು ಮತ್ತು ಈ ಹೇಳಿಕೆಯನ್ನು ಇಡೀ ವಿಶ್ವ ಅದರಲ್ಲೂ ಅಮೆರಿಕ ನಂಬಲೇಬೇಕು ಎಂದು ಪಾಕಿಸ್ತಾನ ಬಯಸಿತ್ತು ಎನ್ನುವುದನ್ನೂ ರೈಸ್ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕು ಎಂದು ಭಾರತ ನಿರ್ಧರಿಸಿದ್ದರಿಂದ ಸಶಸ್ತ್ರ ಹೋರಾಟ ಅನಿವಾರ್ಯ ಎಂದು ಸಿಐಎ ಭಾವಿಸಿತ್ತು. ದಶಕದಿಂದ ಭಾರತವು ಅಮೆರಿಕವನ್ನು ಸಂಶಯದಿಂದಲೇ ನೋಡುತ್ತಿದ್ದರಿಂದ ಸಿಐಎ ಪಾಕಿಸ್ತಾನದ ಸುದ್ದಿ ಮೂಲಗಳನ್ನೇ ನಂಬಿಕೊಂಡಿತ್ತು ಎಂದು ರೈಸ್  ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ. ಆದರೆ, ಅಮೆರಿಕ ಸೇನೆಯ ಅಭಿಪ್ರಾಯವೇ ಬೇರೆಯಾಗಿತ್ತು.

ಗಡಿಯಲ್ಲಿ ಸೇನಾ ಮತ್ತು ಶಸ್ತ್ರಾಸ್ತ್ರ ಜಮಾವಣೆ ತುರ್ತು ಸ್ಥಿತಿಯ ಅಗತ್ಯ. ಅದರರ್ಥ ನೆರೆಯ ರಾಷ್ಟ್ರದ ಮೇಲೆ ಯುದ್ಧ ಮಾಡಲೇಬೇಕು ಎಂದೇನಿಲ್ಲ ಎಂದು ಅಮೆರಿಕದ ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದರು. ಈ ಸಂದರ್ಭದಲ್ಲಿ ವ್ಯಕ್ತವಾದ ವಿಭಿನ್ನ ಅಭಿಪ್ರಾಯಗಳಿಂದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಸುಮಾರು ಮೂರು ದಿನಗಳ ಕಾಲ ಗೊಂದಲದಲ್ಲಿ ಇತ್ತು ಎಂದು ರೈಸ್ ತಮ್ಮ ನೆನಪನ್ನು ಮೆಲುಕು ಹಾಕಿದ್ದಾರೆ.

ಭಾರತ- ಪಾಕ್ ಮಧ್ಯೆ ಯುದ್ಧವಾಗುವುದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ನಿರ್ಧರಿಸಿದ ಅಮೆರಿಕ ಮತ್ತು ಬ್ರಿಟನ್ ಎರಡೂ ರಾಷ್ಟ್ರಗಳಿಗೆ ತಮ್ಮ ಅಧಿಕಾರಿಗಳನ್ನು ಕಳುಹಿಸಿ ಪ್ರಕ್ಷುಬ್ಧ ಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದವು ಎನ್ನುವ ಅಂಶವನ್ನೂ ರೈಸ್ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT