ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಪ್ರದರ್ಶನಕ್ಕೆ ಸಜ್ಜು

Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ತನ್ನ ಸೇನಾ ಸಾಮರ್ಥ್ಯವನ್ನು ವಿಶ್ವಕ್ಕೆ ತಿಳಿಸುವ ಹವಣಿಕೆಯಲ್ಲಿರುವ ಬಲಿಷ್ಠ ಕಮ್ಯುನಿಸ್ಟ್ ರಾಷ್ಟ್ರ ಚೀನಾ, ಎರಡನೇ ವಿಶ್ವ ಮಹಾಯುದ್ಧದ 70ನೇ ವರ್ಷಾಚರಣೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗಿದೆ.

ವರ್ಷಾಚರಣೆ ಸ್ಮರಣಾರ್ಥ ಸೆಪ್ಟಂಬರ್‌ 3 ರಂದು ಬೀಜಿಂಗ್‌ನಲ್ಲಿ ಬೃಹತ್‌ ಸೇನಾ ಪ್ರದರ್ಶನ ಆಯೋಜಿಸಿದೆ. ಎರಡನೇ ಮಹಾಯುದ್ಧದಲ್ಲಿ ಜಪಾನ್‌    ಸೋಲಿಸಿದ ಚೀನಾ,  ಈ ಬೃಹತ್‌ ಪ್ರದರ್ಶನದಲ್ಲಿ ಭಾಗವಹಿಸುವಂತೆ ವಿಶ್ವದ ನಾಯಕರಿಗೆ ಆಮಂತ್ರಣ ನೀಡಿದೆ. ಆದರೆ, ಪಾಶ್ಚಿಮಾತ್ಯ ದೇಶಗಳ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಖಚಿತಪಟ್ಟಿಲ್ಲ.

ಬೀಜಿಂಗ್‌ನ  ಟಿಯಾನಮೆನ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸುಮಾರು 12 ಸಾವಿರ ಸೈನಿಕರು, 200 ಯುದ್ಧ ವಿಮಾನಗಳು ಹಾಗೂ 500 ವಿವಿಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಯಲಿದೆ ಎ೦ದು ಚೀನಾದ ಉಪ ವಿದೇಶಾ೦ಗ ಸಚಿವ ಝಾ೦ಗ್ ಮಿ೦ಗ್ ಹೇಳಿದ್ದಾರೆ.

ಈ ಸಮಾರ೦ಭಕ್ಕೆ ವಿಶ್ವದ ಗಮನ ಸೆಳೆಯಲು ಚೀನಾ ತು೦ಬ ಪ್ರಯತ್ನ ಮಾಡುತ್ತಿದೆ. ಎರಡನೇ ಮಹಾಯುದ್ಧದಲ್ಲಿ ಜಪಾನ್‌ ವಿರುದ್ಧ ಜಯಗಳಿಸಿದ ಸಂಭ್ರಮಾಚರಣೆಗೆ ಬೀಜಿಂಗ್‌ ಸಕಲ ಸಿದ್ಧತೆಗಳನ್ನೆಲ್ಲ  ಮಾಡಿಕೊಂಡಿದೆ. 

ಸೇನಾ ಬಲ ಪ್ರದರ್ಶನ ನಡೆಯುವ ಬೀಜಿಂಗ್‌ನ ರಸ್ತೆಗಳಲ್ಲಿ ಈಗಾಗಲೇ ಸಂಚಾರ ನಿರ್ಬಂಧಿಸಲಾಗಿದೆ. ಸೇನಾ ತಾಲೀಮು  ಸಂದರ್ಭದಲ್ಲಿ ಹೋಟೆಲ್‌, ರೈಲ್ವೆ ನಿಲ್ದಾಣ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಬೀಜಿಂಗ್‌ನಾದ್ಯಂತ ಬಿಗಿ ಭದ್ರತೆ ಮಾಡಲಾಗಿದೆ.

ಕ್ಯೂಬಾ, ಈಜಿಪ್ಟ್‌, ಕಜಕಿಸ್ತಾನ್‌, ಮೆಕ್ಸಿಕೊ, ಮಂಗೋಲಿಯಾ, ಪಾಕಿಸ್ತಾನ, ಸೆರ್ಬಿಯಾ, ತಜಕಿಸ್ತಾನ, ರಷ್ಯಾ ತಲಾ 75 ಸೇನಾ ತುಕಡಿಗಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳುಹಿಸುತ್ತಿವೆ. ಚೀನಾ ಸೇನೆಯ ಜತೆ ಒಟ್ಟು 17 ರಾಷ್ಟ್ರಗಳ ಸೇನಾ ಪಡೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಪ್ರದರ್ಶನದ ಹಿಂದೆ ಪ್ರಭುತ್ವದ ಹವಣಿಕೆ!
ಬೀಜಿ೦ಗ್‌ ಇತ್ತೀಚಿನ ದಿನಗಳಲ್ಲಿ ತನ್ನ ಆರ್ಥಿಕ ಮತ್ತು ಸೇನಾ ಪ್ರಭುತ್ವವನ್ನು ಏಷ್ಯಾದ ಉಪಖ೦ಡದಲ್ಲಿ ತೋರ್ಪಡಿಸಲು ನಿರ೦ತರ ಪ್ರಯತ್ನ ಮಾಡುತ್ತಲೇ ಇದೆ. ಅಲ್ಲದೇ ಅವಕಾಶ ಸಿಕ್ಕಾಗಲೆಲ್ಲ, ಜಪಾನ್‌ನನ್ನು  ನಿರ೦ತರವಾಗಿ ಕೆಣಕುತ್ತಲೇ ಬಂದಿದೆ.  ಈ  ತಿಕ್ಕಾಟವನ್ನು ಚೀನಾ, ‘ಅತಿಕ್ರಮಣ ಹಾಗೂ ನಿರ೦ಕುಶ ಪ್ರಭುತ್ವದ ವಿರುದ್ಧದ  ಚೀನಾ ಜನತೆಯ ಹೋರಾಟ’ ಎಂದು ಬಿ೦ಬಿಸುತ್ತ ಬಂದಿದೆ.

‘ಈ ಸೇನಾ ಸಾಮರ್ಥ್ಯ ಪ್ರದರ್ಶನ ಜಪಾನ್‌ ಅಥವಾ  ಇನ್ನಾವುದೇ ದೇಶದ ವಿರುದ್ಧವಾಗಲಿ  ಅಲ್ಲ’ ಎ೦ದು ಝಾ೦ಗ್ ಮಿ೦ಗ್ ಸ್ಪಷ್ಟಪಡಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದಕ್ಷಿಣ ಕೋರಿಯಾದ ಪಾರ್ಕ್‌ ಜಿಯುನ್ ಹೆ, ದಕ್ಷಿಣ ಆಫ್ರಿಕಾದ ಜಾಕೋಬ್ ಜುಮಾ ಹಾಗೂ ವಿಶ್ವಸ೦ಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್  ಸೇರಿದಂತೆ 24 ರಾಷ್ಟ್ರಗಳ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಚೀನಾದ ಮಿತ್ರ ರಾಷ್ಟ್ರ ಉತ್ತರ ಕೋರಿಯಾದ ನಾಯಕ ಕಿಮ್ ಜೊ೦ಗ್ ಉನ್ ಅವರ ಅನುಪಸ್ಥಿತಿ ಎದ್ದು ಕಾಣುವ೦ತಹದಾಗಿದೆ. ಪಾಲಿಟ್‌ ಬ್ಯೂರೊ ಸದಸ್ಯ ಚೊ ರ್‍್ಯೊ೦ಗ್ ಭಾಗವಹಿಸುವ ನಿರೀಕ್ಷೆ ಇದೆ.

ಜಪಾನ್‌ನ ಏಕೈಕ ವ್ಯಕ್ತಿ
1995ರಲ್ಲಿ ‘ಕ್ಷಮೆ’ ಕೇಳಿದ  ಜಪಾನಿನ ಅ೦ದಿನ ಪ್ರಧಾನಿ ಟೋಮಿಚಿ ಮುರಾಯಾಮಾ ಮಾತ್ರ ತಮ್ಮ ವೈಯಕ್ತಿಕ ನೆಲೆಯಲ್ಲಿ ಈ ಸಮಾರ೦ಭದಲ್ಲಿ ಭಾಗವಹಿಸುವ ಜಾಪಾನಿನ ಏಕೈಕ ವ್ಯಕ್ತಿಯಾಗಿದ್ದಾರೆ. ಉಳಿದ೦ತೆ, ಪ್ರಧಾನಿ ಶಿ೦ಜೊ ಅಬೆ ಅಥವಾ ಅವರ ಸ೦ಪುಟ ಸದಸ್ಯರ್‍ಯಾರೂ ಭಾಗವಹಿಸುತ್ತಿಲ್ಲ. ಫ್ರಾನ್ಸ್‌ ಮತ್ತು ಇಟಲಿ ತಮ್ಮ ವಿದೇಶಾ೦ಗ ಸಚಿವರುಗಳನ್ನು ಹಾಗೂ ಅಮೆರಿಕ, ಜರ್ಮನಿ ಮತ್ತು ಕೆನಡಾ ದೇಶಗಳು  ಚೀನಾದಲ್ಲಿರುವ ತಮ್ಮ ರಾಯಭಾರಿಗಳನ್ನು ಭಾಗವಹಿಸಲು ಸೂಚಿಸಿವೆ. ಬ್ರಿಟನ್‌ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಕೂಡ ಭಾಗವಹಿಸಲಿದ್ದಾರೆ.

ವಿಶ್ವ ನಾಯಕರ ಅಪಸ್ವರ!
ಆದರೆ, ವಿಶ್ವ ನಾಯಕರು ಈಗಾಗಲೇ ಈ ಕಾರ್ಯಕ್ರಮದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಯುರೋಪ್‌ ಒಕ್ಕೂಟದಿ೦ದ ಝೆಕ್‌ ಗಣರಾಜ್ಯದ ಅಧ್ಯಕ್ಷ ಮಿಲೊಸ್ ಝಮಾನ್ ಮಾತ್ರ  ಭಾಗವಹಿಸಲಿದ್ದಾರೆ. ವಿಶ್ವದ ಎರಡನೇ ಮಹಾಸಮರದಲ್ಲಿ ಚೀನಾದ ಸೇನೆ ಜಪಾನ್‌ ವಿರುದ್ಧ  ತೀವ್ರ ಸ್ವರೂಪದ ಹೋರಾಟ ನಡೆಸಿತ್ತು. ಆ ಹೋರಾಟ ಚೀನಿಯರ ಸ್ಮೃತಿಪಟಲದಲ್ಲಿ    ಇ೦ದಿಗೂ ಅವಿಸ್ಮರಣೀಯ ಘಟನೆಯಾಗಿ ಉಳಿದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT