ಕಳಂಕ ರಹಿತ; ದನ ಕಾಯೋರಿಗೂ ಸಿಕ್ತ್ವೀನಿ..! ರಮೇಶ ಜಿಗಜಿಣಗಿ ಮನದಾಳ

ಸೋಮವಾರ, ಮೇ 27, 2019
33 °C
ಬಿಜೆಪಿ ಅಭ್ಯರ್ಥಿ

ಕಳಂಕ ರಹಿತ; ದನ ಕಾಯೋರಿಗೂ ಸಿಕ್ತ್ವೀನಿ..! ರಮೇಶ ಜಿಗಜಿಣಗಿ ಮನದಾಳ

Published:
Updated:

ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಬೆರಳೆಣಿಕೆ ದಿನವಷ್ಟೇ ಬಾಕಿ ಉಳಿದಿವೆ. ನೆತ್ತಿ ಸುಡುವ ಕೆಂಡದಂಥ ಬಿಸಿಲಲ್ಲೂ ಅಭ್ಯರ್ಥಿಗಳು, ಬೆಂಬಲಿಗ ಪಡೆ ದಣಿವರಿಯದೆ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದೆ.

ಮನೆ ಮನೆಗೂ ಎಡತಾಕುತ್ತಿದೆ. ಬಿಡುವಿಲ್ಲದ ಚುನಾವಣಾ ಪ್ರಚಾರದ ನಡುವೆಯೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ‘ಪ್ರಜಾವಾಣಿ’ ಜತೆ ತಮ್ಮ ಹಿಂದಿನ ಸಾಧನೆ, ಮುಂದಿನ ಮುನ್ನೋಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

* ಸಂಸದ, ಸಚಿವರಾಗಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ?

ಮೊದಲ ಅವಧಿಯಲ್ಲಿ ನನ್ನ ಸರ್ಕಾರ ಆಡಳಿತದಲ್ಲಿರಲಿಲ್ಲ. ಕಾಂಗ್ರೆಸ್‌ ನೇತೃತ್ವದ ಮನಮೋಹನ್‌ಸಿಂಗ್‌ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗಿನ ವಿದ್ಯುತ್ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಮನವೊಲಿಸಿ ಕೂಡಗಿಗೆ ₹ 42,000 ಕೋಟಿ ಮೊತ್ತದ ಎನ್‌ಟಿಪಿಸಿ ತಂದೆ. ರಾಜ್ಯದಲ್ಲಿ ಆಗ ನನ್ನ ಸರ್ಕಾರವಿತ್ತು. ಅಗತ್ಯ ಸಹಕಾರ ಕೊಡಿಸಿದೆ.

4000 ಮೆಗಾವಾಟ್‌ ವಿದ್ಯುತ್ ಉತ್ಪಾದನೆಯಲ್ಲಿ, 2000 ಮೆಗಾವಾಟ್ ವಿದ್ಯುತ್ ರಾಜ್ಯಕ್ಕೆ ಸಿಗಲಿದೆ. ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಎಲ್ಲ ನೀರಾವರಿ ಯೋಜನೆ ಏತ ನೀರಾವರಿ ಯೋಜನೆ. ಇದಕ್ಕೆ 200–300 ಮೆಗಾವಾಟ್‌ ವಿದ್ಯುತ್ ಬೇಕಿದೆ. ಇದರ ಸಾಕಾರಕ್ಕೆ ನನ್ನ ಕೊಡುಗೆಯೂ ಸಾಕಷ್ಟಿದೆ. ನಾ ಇದನ್ನು ಎಲ್ಲೂ ಹೇಳಿಕೊಂಡಿಲ್ಲ.

ಇಂಡಿ ತಾಲ್ಲೂಕಿನ 76 ಹಳ್ಳಿಗಳಿಗೆ ಅನುಕೂಲವಾಗಲಿ ಎಂದು ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರಿನ ಸಚಿವ ಜೈರಾಂ ರಮೇಶ್ ಮನವೊಲಿಸಿ ₹ 110 ಕೋಟಿ ಅನುದಾನ ತಂದೆ.

ಎರಡನೇ ಅವಧಿಗೆ ನನ್ನ ಸರ್ಕಾರ ಬಂತು. ಎರಡು ವರ್ಷದ ಬಳಿಕ ನಾನು ಸಚಿವನಾದೆ. ಕ್ಷೇತ್ರದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿ ನಡೆದಿವೆ. ಎಂದೆಂದೂ ಡಂಗುರ ಬಾರಿಸಿಕೊಂಡು ಊರೂರು ಸುತ್ತಲಿಲ್ಲ ನಾನು. ಜಿಲ್ಲೆಯ ಹಲವು ಯೋಜನೆಗೆ ಪ್ರಧಾನಮಂತ್ರಿ ಮೂಲಕ ಬಜೆಟ್‌ನಲ್ಲಿ ಮಂಜೂರಾತಿ ಒದಗಿಸಿಕೊಟ್ಟಿರುವೆ.

ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ನಡೆದಿದೆ. ಜಿಲ್ಲೆಯಾದ್ಯಂಥ ಒಳ ಸಂಪರ್ಕ ರಸ್ತೆಗಳು ನಿರ್ಮಾಣಗೊಂಡಿವೆ. ರೈಲ್ವೆ ಕಾಮಗಾರಿಗಳಿಗೆ ವೇಗ ಸಿಕ್ಕಿದೆ. ರೈಲ್ವೆ ಮೇಲ್ಸೇತುವೆ, ರೈಲ್ವೆ ನಿಲ್ದಾಣದ ನವೀಕರಣ ನಡೆದಿದೆ. ವಿಜಯಪುರಕ್ಕೆ ‘ಅಮೃತ್’ ಯೋಜನೆ ಕೊಟ್ಟಿರುವೆ. ಪಾಸ್‌ಪೋರ್ಟ್‌ ಸೇವಾ ಕೇಂದ್ರ... ಒಂದೆರಡಲ್ಲ. ಕೇಂದ್ರದ ಹಲವು ಯೋಜನೆ ವಿಜಯಪುರ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿವೆ. ಅಂದಾಜು ₹ 10,000 ಕೋಟಿ ಅನುದಾನ ತಂದಿರುವೆ.

* ಗೆದ್ದರೆ ಏನು ಮಾಡ್ತೀರಿ..?

ದುಬೆ ಕನಸು ಸಾಕಾರಗೊಳಿಸುತ್ತೇನೆ. ಈ ಬಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೆನ್ನತ್ತುತ್ತೇನೆ. ಇದಕ್ಕಿರುವ ಎಲ್ಲ ಅಡಚಣೆ ನಿವಾರಿಸುವೆ. ಜಿಲ್ಲೆಯ ಗ್ರಾಮೀಣ, ನಗರ, ಪಟ್ಟಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವೆ.

* ಸಂಸದರ ಆದರ್ಶ ಗ್ರಾಮ ಮಖಣಾಪುರ ಅಭಿವೃದ್ಧಿ ಆಗಲಿಲ್ಲವಲ್ಲಾ ?

ನಿಮ್ಮ ಮಾತು ಒಪ್ಪುತ್ತೇನೆ. ಈ ಯೋಜನೆಗೆ ಪ್ರತ್ಯೇಕ ಅನುದಾನ ಎಂಬುದಿಲ್ಲ. ಆಯಾ ಇಲಾಖೆಯ ಯೋಜನೆಗಳನ್ನೇ ಅನುಷ್ಠಾನಗೊಳಿಸಬೇಕು. ರಾಜ್ಯ ಸರ್ಕಾರದ ಅಧಿಕಾರಿಗಳ ಸಹಕಾರದ ಬಗ್ಗೆ ಏನು ಹೇಳುವಂತಿಲ್ಲ. ನಮ್ಮಲ್ಲಿ ಯಾವೊಂದು ಕೈಗಾರಿಕೆ ಇಲ್ಲ. ಇದ್ದಿದ್ದರೆ ಅವರ ಸಿಎಸ್‌ಆರ್‌ ಫಂಡ್‌ ತಂದು ಅಭಿವೃದ್ಧಿ ಪಡಿಸುತ್ತಿದ್ದೆ. ಆದರೂ ಇದ್ದುದರಲ್ಲಿ ಹಲವು ಕೆಲಸ ಮಾಡಿಸಿರುವೆ. ಮುಂದೆಯೂ ಮಾಡಿಸುವೆ.

* ಎದುರಾಳಿಗಳ ಗುರಿ ನೀವೇ ಆಗಿದ್ದೀರಿ ? ಟೀಕೆ ಹೆಚ್ಚಿವೆಯಲ್ಲಾ ?

1978ರಿಂದ ರಾಜಕಾರಣದಲ್ಲಿರುವೆ. ಕ್ಷೇತ್ರದ ಎಲ್ಲರ ಪರಿಚಯವಿದೆ. ನಾನೊಬ್ಬ ದಲಿತ. ಆದರೆ ಎಲ್ಲರಿಗಿಂತ ಭಿನ್ನ. ಇಂದಿನವರೆಗೂ ಯಾವೊಂದು ಕಳಂಕ ನನ್ನ ಮೇಲಿಲ್ಲ. ಹೊಲಸು ನನ್ನ ಕೈಗಂಟಿಲ್ಲ. ಸಾಮಾನ್ಯರೊಳಗೆ ಸಾಮಾನ್ಯನಂತಿರುವೆ. ಇದೇ ನನಗೆ ಮೂಲವಾಗಿದೆ. ಅದಕ್ಕಾಗಿಯೇ ಎಲ್ಲರೂ ಒಂದಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.

ಬಸವ ನಾಡಿದು. ಬೈಯುವರು ಬೈದು ಕೊಂಡು ತಿರುಗಲಿ. ಎನಗಿಂತ ಕಿರಿಯನಿಲ್ಲ. ಬೈಯುವವರಿಗಿಂತ ಹಿರಿಯರಿಲ್ಲ ಎಂಬ ಭಾವನೆ ನನ್ನದು. ದೊಡ್ಡವರ ಬಗ್ಗೆ ಮಾತು ಬ್ಯಾಡ್ರೀ. ಕಾಕಾ, ಮಾಮಾ, ಅಣ್ಣ, ಅಕ್ಕಾವ್ರೇ ಅಂದುಕೊಂಡೇ ಬೆಳೆದವ. ಎಷ್ಟೇ ಎತ್ತರಕ್ಕೇರಿದರೂ ನನ್ನ ಸಂಸ್ಕಾರ ಬದಲಿಸಿಕೊಳ್ಳಲ್ಲ.

* ನಿಮಗೆ ಏಕೆ ವೋಟ್‌ ಹಾಕ್ಬೇಕು ?

ಮತದಾರರು, ಜನರು ಬಯಸಿದಾಗಲೆಲ್ಲಾ ಸುಲಭವಾಗಿ ಸಿಗುವೆ. ಕೆಲವೊಮ್ಮೆ ಮುಖಾಮುಖಿ ಭೇಟಿಯಾಗದಿದ್ದರೂ ಮೊಬೈಲ್‌ ಸಂಪರ್ಕಕ್ಕೆ ಸಿಗುವೆ. ದನ ಕಾಯೋರು ನನ್ನನ್ನು ಸುಲಭವಾಗಿ ಸಂಪರ್ಕಿಸಬಹುದು. ನಾನಷ್ಟು ಸರಳ.

* ಲೋಕಸಭೆಯಲ್ಲಿ ಜಿಗಜಿಣಗಿ ಮಾತಾಡಲ್ವ ?

ಐದು ಬಾರಿ ಸಂಸದನಾಗಿರುವೆ. ಇದರಲ್ಲಿ ಮೂರು ಬಾರಿ ಆಡಳಿತ ಪಕ್ಷದ ಸಂಸದ. ಕೆಲಸ ಮಾಡೋಣವೋ. ಮಾತಾಡ್ತಾ ಕೂತಿರ್ಲೋ. ಮನಮೋಹನ್‌ಸಿಂಗ್‌ ಪ್ರಧಾನಿಯಾಗಿದ್ದಾಗ ಸಾಕಷ್ಟು ಪ್ರಶ್ನೆ ಕೇಳಿರುವೆ. ಲಿಖಿತ ಉತ್ತರಗಳ ರಾಶಿಯೇ ನನ್ನ ಬಳಿಯಿದೆ. ಇದ್ಯಾರಿಗೂ ಗೊತ್ತಿಲ್ವಾ.

* ಗೆದ್ದ ಮೇಲೆ ಕೈಗೆ ಸಿಗಲ್ಲ; ಕಾರ್ಯಕರ್ತರನ್ನು ಹಚ್ಚಿಕೊಳ್ಳಲ್ಲ ?

ಇದೊಂದು ದೂರಷ್ಟೇ. ಬಡ ಮತದಾರರನ್ನು ಕೇಳಿ. ಅವನಿಗೆ ಎಷ್ಟು ಸುಲಭವಾಗಿ ಸಿಗುತ್ತೇನೆ ಎಂಬುದನ್ನು ಹೇಳುತ್ತಾನೆ. ಇನ್ನೂ ಕಾರ್ಯಕರ್ತರನ್ನು ಹಚ್ಚಿಕೊಳ್ಳಲ್ಲ ಎಂಬುದನ್ನು ಕೇಳಿದರೆ ನನಗೆ ನಗು ಬರುತ್ತೆ.

* ನೀರಿನ ಮಂತ್ರಿ ಏನು ಮಾಡಲಿಲ್ಲ ?

ಬಾಯಿಗೆ ಬಂದಂತೆ ಮಾತನಾಡಬಾರದು. ಅದರಲ್ಲೂ ಸಾರ್ವಜನಿಕ ಜೀವನದಲ್ಲಿರೋರು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಯಾವೊಂದು ಕೆಲಸವನ್ನು ನೇರವಾಗಿ ಮಾಡಲ್ಲ. ಆಯಾ ರಾಜ್ಯ ಸರ್ಕಾರಗಳಿಗೆ ನೇರವಾಗಿಯೇ ಅನುದಾನ ನೀಡುತ್ತೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಲಿ.

* ಕೈಗಾರಿಕೆ ತರಲಿಲ್ಲ ?

ಸಾಕಷ್ಟು ಪ್ರಯತ್ನ ಪಡುತ್ತಿರುವೆ. ಪೂರಕ ವಾತಾವರಣವಿಲ್ಲ. ಕಚ್ಚಾ ಸಾಮಗ್ರಿ ಸಿಗ್ತಿಲ್ಲ. ಸಾಗಣೆ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸುವೆ.

* ಮನೆಗೆ ಕಳಿಸಲು ಒಟ್ಟಾಗಿದ್ದಾರಲ್ಲ ?

ಜಿಗಜಿಣಗಿ ಮನೆಗೆ ಕಳಿಸೋದು ಇವರ‍್ಯಾರು ಅಲ್ಲ. ನನ್ನ ಮತದಾರ ನಿರ್ಧರಿಸುತ್ತಾನೆ. ಆಶೀರ್ವದಿಸುತ್ತಾನೆ.

* ಗಾಂಧಿ ಟೋಪಿ ತೆಗೆದಿದ್ದು ಏಕೆ ?

ನನಗೂ ಹಳಹಳಿಯಿದೆ. ಚೆಂದ ಕಾಣ್ಸಲ್ಲ ಅಂಥ ಹಿರಿಯರು ಹೇಳಿದ್ದಕ್ಕಷ್ಟೇ ತೆಗೆದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !