ಸೋಮವಾರ, ಸೆಪ್ಟೆಂಬರ್ 20, 2021
27 °C
₹ 649 ಕೋಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಉದ್ಯೋಗ ಖಾತ್ರಿಗೆ ಹಣ ಬಿಡುಗಡೆ ಮಾಡದ ಕೇಂದ್ರ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದ್ಯೋಗ ಖಾತರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದಿರುವುದಕ್ಕೆ ರಾಜ್ಯ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

‌ಮುಖ್ಯಮಂತ್ರಿ ಸಚಿವಾಲಯ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಅತೃಪ್ತಿಯನ್ನು ಹೊರಹಾಕಲಾಗಿದೆ.  ಕೇಂದ್ರದ ಈ ಕ್ರಮದಿಂದಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಆರ್ಥಿಕ ಹೊರೆ ಅನುಭವಿಸುವಂತಾಗಿದೆ. ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರ ಆಗ್ರಹಿಸಿದೆ.ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕಲ್ಪಿಸುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ (ಎನ್‌ಆರ್‌ಇಜಿ) ರಾಜ್ಯ ಸರ್ಕಾರ ಮುಂಗಡವಾಗಿ ₹ 649.73 ಕೋಟಿ ಬಿಡುಗಡೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವಲ್ಲಿ  ಕೇಂದ್ರ ಸರ್ಕಾರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದಾಗಿ ಒಟ್ಟು ₹ 1234.37 ಕೋಟಿ ಮುಂಗಡ ಬಿಡುಗಡೆ ಮಾಡಿದಂತಾಗಿದೆ.

ಕೇಂದ್ರದಿಂದ ಈವರೆಗೆ ₹ 1500 ಕೋಟಿ ಹಣ ಬಿಡುಗಡೆ ಆಗಬೇಕಿದೆ. ಗ್ರಾಮೀಣ ಜನರ ಹಿತದೃಷ್ಟಿಯಿಂದ ಈಗ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು