ಭಾನುವಾರ, ಏಪ್ರಿಲ್ 11, 2021
32 °C
ಶೂನ್ಯ ಸೃಷ್ಟಿಸಿದ ಸಾವು; ಒಡನಾಡಿಗಳ ನೆನಪಿನಂಗಳ

‘ಸರ್ವವನ್ನೂ ಪ್ರೀತಿಸಿದವರು ಮುದ್ದುಕೃಷ್ಣ ದಂಪತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ರಂಗಕರ್ಮಿ ಮುದ್ದುಕೃಷ್ಣ, ಸಿಎಫ್‌ಟಿಆರ್‌ಐನ ವಿಜ್ಞಾನಿ ಡಾ.ಡಿ.ಇಂದ್ರಾಣಿ ದಂಪತಿಯ ಅಕಾಲಿಕ ಮರಣ ರಂಗಭೂಮಿ ಸೇರಿದಂತೆ ಸಿಎಫ್‌ಟಿಆರ್‌ಐ ಹಾಗೂ ಸಾಮಾಜಿಕ ವಲಯದಲ್ಲಿ ಶೂನ್ಯ ಭಾವ ನಿರ್ಮಿಸಿದೆ’ ಎಂದು ಆಪ್ತ ಒಡನಾಡಿಗಳು ಸ್ಮರಿಸಿದರು.

‘ಅಕಾಲಿಕ ಮರಣವಾದರೂ; ಸಹ ಮರಣ ಇಬ್ಬರ ನಡುವಿನ ಪ್ರೀತಿಯ ದ್ಯೋತಕ. ತುಂಬು ದಾಂಪತ್ಯ ಜೀವನದ ಪ್ರತೀಕ’ ಎಂದು ಗುರುವಾರ ಮುಸ್ಸಂಜೆ ನಗರದ ರಂಗಾಯಣದ ಭೂಮಿಗೀತ ಸಭಾಂಗಣದಲ್ಲಿ ನಡೆದ ‘ನುಡಿ ನಮನ’ ಸಮಾರಂಭದಲ್ಲಿ ರಂಗಕರ್ಮಿಗಳು ಆತ್ಮೀಯರಿಗೆ ನುಡಿ ನಮನ ಅರ್ಪಿಸಿದರು.

ರಂಗಕರ್ಮಿ ಎಚ್‌.ಜನಾರ್ದನ (ಜನ್ನಿ) ಮಾತನಾಡಿ ಮುದ್ದುಕೃಷ್ಣ ಜತೆಗಿನ ಒಡನಾಟದ ನೆನಪಿನ ಬುತ್ತಿ ಬಿಚ್ಚಿಟ್ಟರು. ‘ಮುದ್ದುಕೃಷ್ಣ ನಮ್ಮ ಸಾಮಾಜಿಕ ಸಂಸಾರದ ಹಿರಿಯ. ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟು ಎದುರಾದಾಗಲೆಲ್ಲಾ ಆಳವಾಗಿ ಯೋಚಿಸುವ ಜತೆಯಲ್ಲೇ ಅದಕ್ಕೆ ನೇರವಾಗಿ ಮುಖಾಮುಖಿಯಾಗುತ್ತಿದ್ದ’ ಎಂದು ನೆನಪಿಸಿಕೊಂಡರು.

‘ಎಲ್ಲರೂ ಒಂದೇ. ಪ್ರತಿಯೊಬ್ಬರಿಗೂ ಸಾಮಾಜಿಕ ಘನತೆಯಿದೆ. ಆ ಘನತೆಗೆ ಧಕ್ಕೆ ಬಾರದಂತೆ ಸರ್ವರೂ ನಡೆದುಕೊಳ್ಳಬೇಕು ಎಂದವರು ಮುದ್ದುಕೃಷ್ಣ. ಇವರ ಪತ್ನಿ ಇಂದ್ರಾಣಿ ನಾಚಿಕೆ ಸ್ವಭಾವದವರು. ಎಲ್ಲರನ್ನೂ ಪ್ರೀತಿಯಿಂದ ಗೌರವಯುತವಾಗಿ ಕಂಡವರು. ಮುದ್ದುಕೃಷ್ಣನ ಬೆಳವಣಿಗೆಗೆ ಹೆಗಲಿಗೆ ಹೆಗಲು ಕೊಟ್ಟವರು. ದಂಪತಿ ಒಬ್ಬರಿಗೊಬ್ಬರು ಪೂರಕವಾಗಿ ಬದುಕು ನಡೆಸಿದವರು’ ಎಂದು ಹೇಳಿದರು.

ರಂಗಕರ್ಮಿ ಎಚ್‌.ಎಸ್.ಉಮೇಶ್‌ ಮಾತನಾಡಿ ‘ಮುದ್ದುಕೃಷ್ಣ ಕಪಿಲಾ ಎಂ.ಕೃಷ್ಣ ಆಗಿದ್ದವರು. ಸದಾ ಹಸನ್ಮುಖಿ. ತಮಾಷೆ ಮಾಡುತ್ತಿದ್ದರು. ಅತ್ಯಾಪ್ತರಿಗೆ ಮಾತ್ರ ಅವರ ಬದುಕಿನ ಆರಂಭದ ದಿನಗಳ ದುಃಖದ ಮುಖ ಗೊತ್ತಿತ್ತು. ನಮ್ಮೆದುರು ಗಳಗಳನೆ ಅತ್ತಿರುವುದು ಉಂಟು’ ಎಂದು ಆರಂಭದ ದಿನಗಳನ್ನು ನೆನಪು ಮಾಡಿಕೊಂಡರು.

‘ಬಡವರ ನೋವು ಅರಿತಿದ್ದರು. ಎಲ್ಲವನ್ನೂ ತನ್ನ ಮೈಮೇಲೆ ಹಾಕಿಕೊಳ್ಳುವ ಸ್ವಭಾವ ಅವರದ್ದಾಗಿತ್ತು. ಹಲ ಖ್ಯಾತನಾಮರನ್ನು ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಮುದ್ದುಕೃಷ್ಣ ಅವರಿಗೆ ಸಲ್ಲುತ್ತದೆ. ಸಂಗೀತದ ಸೂಕ್ಷ್ಮ ಪ್ರಜ್ಞೆ ಇಲ್ಲದಿದ್ದರೂ; ಸಂಗೀತವನ್ನು ಪ್ರೀತಿಸಿದರು. ಯಾರೊಬ್ಬರ ಶಿಷ್ಯತ್ವ ಪಡೆದವರಲ್ಲ. ಯಾರಿಗೂ ಕೇಡು ಬಯಸದವ. ಬದುಕಿನ ಎಲ್ಲ ಆಯಾಮ, ಕ್ಷೇತ್ರಗಳಲ್ಲೂ ಪ್ರೀತಿಯಿಂದ ತೊಡಗಿಸಿಕೊಂಡವರು. ಎಲ್ಲರನ್ನೂ ‍ಪ್ರೀತಿಸಿದವರು’ ಎಂದು ಉಮೇಶ್‌ ಒಡನಾಡಿಯ ಅಂತರಂಗವನ್ನು ನುಡಿನಮನದಲ್ಲಿ ಬಿಚ್ಚಿಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.