ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ನಡೆದ ಅವಳಿ ಬಾಂಬು ಸ್ಫೋಟದ ನಂತರ ಕೇಂದ್ರ ಗೃಹಸಚಿವರು `ನಮಗೆ ಮಾಹಿತಿ ಇತ್ತು' ಎಂದು ಹೇಳಿರುವುದರಲ್ಲಿ ಹೊಸತೇನಿಲ್ಲ. ಹಿಂದಿನ ಬಹಳಷ್ಟು ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿಯೂ ಕೇಂದ್ರದ ಬೇಹುಗಾರಿಕಾ ಸಂಸ್ಥೆಗಳು `ನಮಗೆ ಮೊದಲೇ ಗೊತ್ತಿತ್ತು, ರಾಜ್ಯಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದೆವು' ಎಂದು ಹೇಳಿದ್ದವು.

ಹಿಂದೆಲ್ಲ ಈ ಸುದ್ದಿಯನ್ನು ಬೇಹುಗಾರಿಕಾ ಸಂಸ್ಥೆಗಳು ನೇರವಾಗಿ ತಿಳಿಸದೆ ಮಾಧ್ಯಮಗಳಿಗೆ ಸೋರಿಬಿಡುತ್ತಿದ್ದವು. ಈ ಬಾರಿ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಹುಂಬತನದಿಂದ ಇದನ್ನು ಬಾಯಿಬಿಟ್ಟು ಪತ್ರಕರ್ತರ ಮುಂದೆ ಹೇಳಿ ಮತ್ತೊಮ್ಮೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿದ್ದಾರೆ.

ಗೃಹಸಚಿವರು ಹೇಳಿರುವ ಎರಡು ಸಾಲುಗಳ ಹೇಳಿಕೆಯನ್ನೇ ಹಿಡಿದುಕೊಂಡು ಆಗಲೇ ಪತ್ರಕರ್ತರು ಮತ್ತು ರಾಜಕೀಯ ನಾಯಕರು ಕೂಡಿ ಆಂಧ್ರಪ್ರದೇಶದ ಪೊಲೀಸರನ್ನು ಅಪರಾಧಿಗಳ ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ. ಪೊಲೀಸರು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕಾಗಿ ಬಾಂಬುಸ್ಫೋಟದ ರಹಸ್ಯವನ್ನು ಭೇದಿಸಿಯೇಬಿಟ್ಟೆವು ಎನ್ನುವ ರೀತಿಯಲ್ಲಿ ಅರೆಬೆಂದ ತನಿಖಾ ವರದಿಗಳನ್ನು ಮಾಧ್ಯಮಗಳಿಗೆ ಸೋರಿಬಿಡುತ್ತಿದ್ದಾರೆ.

ಪೊಲೀಸರು ನೀಡುವ ಇಂತಹ `ಸುದ್ದಿ'ಗಳು ಎಷ್ಟೊಂದು ಅತಿರಂಜಿತ ಮತ್ತು ಸುಳ್ಳು ಎನ್ನುವುದು ಬೆಂಗಳೂರಿನ ವಿಶೇಷ ನ್ಯಾಯಾಲಯ ಶನಿವಾರವಷ್ಟೆ ದೋಷಮುಕ್ತಗೊಳಿಸಿದ ಪತ್ರಕರ್ತ ಮತಿಉರ್ ರೆಹಮಾನ್ ಸಿದ್ದಿಕಿ ಪ್ರಕರಣದಲ್ಲಿ ಮಾತ್ರವಲ್ಲ, ಇದೇ ಹೈದರಾಬಾದ್‌ನಲ್ಲಿ ನಡೆದ ಮೆಕ್ಕಾಮಸೀದಿ ಬಾಂಬುಸ್ಫೋಟದ ಘಟನೆಯಲ್ಲಿಯೂ ಸಾಬೀತಾಗಿದೆ. ಇದಕ್ಕೆ ಕೇವಲ ಪೊಲೀಸರನ್ನು ದೂರಲಾಗದು. ಕೇಂದ್ರ ಬೇಹುಗಾರಿಕಾ ಸಂಸ್ಥೆಗಳ ಕಿತಾಪತಿಯಿಂದಾಗಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗುವ ಪೊಲೀಸರು ಆತ್ಮರಕ್ಷಣೆಗಾಗಿ ಇದನ್ನು ಮಾಡುತ್ತಿರುತ್ತಾರೆ.

ಲೋಪ ಕೇವಲ ಆಂಧ್ರಪ್ರದೇಶ ಪೊಲೀಸರದ್ದೇ? ಕೈಗೆ ಹತ್ತಿದ ಮಾಹಿತಿಯನ್ನು ರಾಜ್ಯಗಳಿಗೆ ರವಾನಿಸಿ ಬಿಟ್ಟರೆ ಕೇಂದ್ರದ ಬೇಹುಗಾರಿಕಾ ಸಂಸ್ಥೆಗಳ ಕೆಲಸ ಮುಗಿಯಿತೇ? ಈ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯದಿರಲು ಜನರಲ್ಲಿ ತಾಳ್ಮೆ ಇಲ್ಲದಿರುವುದು ಮಾತ್ರ ಅಲ್ಲ, ಬೇಹುಗಾರಿಕೆ ಎಂಬ ಮಾಯಾಲೋಕದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದೂ ಕಾರಣ.

ನಮ್ಮಲ್ಲಿ ಬಹುಹಂತಗಳ ಬೇಹುಗಾರಿಕಾ ವ್ಯವಸ್ಥೆ ಇದೆ. ಇಂಟಲಿಜೆನ್ಸ್ ಬ್ಯೂರೋ (ಐಬಿ), ರಿಸರ್ಚ್ ಎಂಡ್ ಅನಾಲಿಸಿಸ್ ವಿಂಗ್ (ರಾ),ರಾಜ್ಯ ಗುಪ್ತಚರ ಇಲಾಖೆ (ಸ್ಪೆಷಲ್ ಬ್ರಾಂಚ್) ಸೇನಾ ಗುಪ್ತಚರ ಇಲಾಖೆ, ಸಿಬಿಐ ಮತ್ತು ಕೇಂದ್ರ ಆರ್ಥಿಕ ಗುಪ್ತಚರ ಇಲಾಖೆಗಳನ್ನೊಳಗೊಂಡ ಜಾಲವೇ ದೇಶದ ಬೇಹುಗಾರಿಕೆಯ ಕೇಂದ್ರ ವ್ಯವಸ್ಥೆ. ಇವೆಲ್ಲವೂ ರಾಷ್ಟ್ರೀಯ ಭದ್ರತಾ ಸಲಹೆಗಾರರು ಅಧ್ಯಕ್ಷರಾಗಿರುವ `ಜಂಟಿ ಗುಪ್ತಚರ ಸಮಿತಿ' (ಜೆಐಸಿ)ಗೆ ವರದಿ ಮಾಡುತ್ತವೆ. ಈ ಸಮಿತಿಯಲ್ಲಿ `ರಾ' ಮತ್ತು `ಐಬಿ'ಯ ಮುಖ್ಯಸ್ಥರು ಕೂಡಾ ಸದಸ್ಯರು.

ಬೇರೆ ದೇಶಗಳ ಚಟುವಟಿಕೆಗಳು ಮತ್ತು ವಿದೇಶದಲ್ಲಿ ನೆಲೆ ಊರಿರುವ ಭಯೋತ್ಪಾದಕ ತಂಡಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು `ರಾ' ಹೊಣೆ. ಆಂತರಿಕ ಭದ್ರತೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹ ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿರುವ `ಐಬಿ'ಗೆ ಸೇರಿದ್ದು. ಭೂಸೇನೆ, ವಾಯುಸೇನೆ ಮತ್ತು ನೌಕಾದಳ, ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಎಸ್‌ಪಿಜಿ ಇವೆಲ್ಲವೂ ಸಂಗ್ರಹಿಸಿ ನೀಡುವ ಮಾಹಿತಿಯನ್ನು ರಕ್ಷಣೆ ಮತ್ತು ಅರೆಸೇನಾ ಗುಪ್ತಚರ ಇಲಾಖೆ ಜೆಐಸಿಗೆ ಸಲ್ಲಿಸುತ್ತದೆ.

ಆರ್ಥಿಕ ಗುಪ್ತಚರ ಇಲಾಖೆ ಮಾತ್ರವಲ್ಲ ಡಿಆರ್‌ಐ, ಇಡಿ, ವರಮಾನ ತೆರಿಗೆ ಇಲಾಖೆಗಳು ಕೂಡಾ ಮಾಹಿತಿಯನ್ನು ಜೆಐಸಿಗೆ ರವಾನಿಸುತ್ತದೆ. ಇದರ ಆಧಾರದಲ್ಲಿಯೇ ಪ್ರಧಾನಿ ಅಧ್ಯಕ್ಷತೆಯ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಸೇರಿ ಆಂತರಿಕ ಭದ್ರತೆ ಮತ್ತು ಬಾಹ್ಯಬೆದರಿಕೆಗೆ ಸಂಬಂಧಿಸಿದ ನೀತಿ-ನಿರ್ಧಾರಗಳನ್ನು ರೂಪಿಸುತ್ತದೆ. ಹೀಗಿದ್ದರೂ ಮತ್ತೆಮತ್ತೆ ನಮ್ಮ ಬೇಹುಗಾರಿಕೆ ವ್ಯವಸ್ಥೆ ವಿಫಲಗೊಳ್ಳುತ್ತಿರುವುದೇಕೆ?

ಯಾಕೆಂದರೆ ಕಾಗದದ ಮೇಲೆ ಅಚ್ಚುಕಟ್ಟಾಗಿ ಕಾಣುವ ಈ ವ್ಯವಸ್ಥೆಯ ಮೈತುಂಬಾ ತೂತುಗಳಿವೆ. ಮಾಹಿತಿಗಳ ಸಂಗ್ರಹ, ಸಂಕಲನ, ವಿಶ್ಲೇಷಣೆ ಮತ್ತು ತೀರ್ಮಾನ- ಇದು ಬೇಹುಗಾರಿಕೆ ಸಂಸ್ಥೆಗಳ ಕಾರ್ಯನಿರ್ವಹಣೆಯ ಪ್ರಾಥಮಿಕವಾದ ನಾಲ್ಕು ಹಂತಗಳು. ಈ ಕಾರ್ಯ ನಡೆಸಲು ಬೇಕಾದ ಸಿಬ್ಬಂದಿ, ಸಂಪನ್ಮೂಲ ಮತ್ತು ಸ್ವಾತಂತ್ರ್ಯವನ್ನು ಇವುಗಳಿಗೆ ನೀಡಲಾಗಿದೆ. ಹೀಗಿದ್ದರೂ ವಿಫಲಗೊಳ್ಳಲು ಮುಖ್ಯವಾಗಿ ಮೂರು ಕಾರಣಗಳು. ಮೊದಲನೆಯದು ರಾಜಕೀಯ ಮಧ್ಯಪ್ರವೇಶ, ಎರಡನೆಯದು ರಾಜಕೀಯವಾಗಿ ದುರ್ಬಳಕೆ, ಮೂರನೆಯದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸೌಹಾರ್ದದ ಕೊರತೆ.

ಬೇಹುಗಾರಿಕಾ ಸಂಸ್ಥೆಗಳ ರಾಜಕೀಯ ದುರ್ಬಳಕೆ ಹೇಗೆ ನಡೆಯುತ್ತದೆ ಎನ್ನುವುದನ್ನು `ಐಬಿ'ಯ ನಿವೃತ್ತ ಜಂಟಿ ನಿರ್ದೇಶಕ ಎಂ.ಕೆ.ಧರ್ ಅವರು ಬರೆದಿರುವ ವಿವಾದಾತ್ಮಕ ಪುಸ್ತಕ `ಓಪನ್ ಸೀಕ್ರೆಟ್'ನಲ್ಲಿ ಬಿಚ್ಚಿಟ್ಟಿದ್ದಾರೆ. `ಐಬಿ ಅಧಿಕಾರಿಗಳು ಪ್ರಧಾನಮಂತ್ರಿಗಳ ದಲ್ಲಾಳಿಗಳಂತೆ ವರ್ತಿಸುತ್ತಾರೆ.

ಪ್ರಧಾನಮಂತ್ರಿಗಳ ಮೌಖಿಕ ಆದೇಶದಂತೆ ಐಬಿ ಅಧಿಕಾರಿಗಳು ಸಂಸತ್ ಮತ್ತು ರಾಷ್ಟ್ರಪತಿ ಭವನದ ಮಾತ್ರವಲ್ಲ ತನ್ನ ಸಹದ್ಯೋಗಿಗಳ ದೂರವಾಣಿಗಳನ್ನು ಕದ್ದಾಲಿಸಿದ ಉದಾಹರಣೆಗಳಿವೆ' ಎಂದು ಧರ್ ಬರೆದಿದ್ದಾರೆ. ಕೇಂದ್ರದಲ್ಲಿ `ಐಬಿ' ಇಲ್ಲವೆ ರಾಜ್ಯದಲ್ಲಿರುವ `ಸ್ಪೆಷಲ್ ಬ್ರಾಂಚ್ (ಎಸ್‌ಬಿ)' ಅತಿಹೆಚ್ಚು ಬಳಕೆಯಾಗುವುದು ಆಡಳಿತಾರೂಢ ಪಕ್ಷ ವಿರೋಧ ಪಕ್ಷಗಳ ನಾಯಕರ ಬಗ್ಗೆ ಮಾಹಿತಿ ಕಲೆಹಾಕಲು ಮತ್ತು ಚುನಾವಣಾ ಪೂರ್ವದಲ್ಲಿ ಜನಾಭಿಪ್ರಾಯ ತಿಳಿದುಕೊಳ್ಳಲು. `ತಾಂತ್ರಿಕವಾಗಿ ಕೇಂದ್ರದ `ಐಬಿ' ನಿರ್ದೇಶಕ ಗೃಹಸಚಿವರಿಗೆ ವರದಿ ನೀಡಬೇಕಾಗಿದ್ದರೂ ಸಾಮಾನ್ಯವಾಗಿ ಅವರ ಸಂಪರ್ಕ ಪ್ರಧಾನಿ ಜತೆಯಲ್ಲಿಯೇ ಇರುತ್ತದೆ.

ನಿತ್ಯ ಪ್ರಧಾನಿಯವರನ್ನು ಭೇಟಿ ಮಾಡುವುದರಿಂದ ಬೆಳೆಸಿಕೊಂಡ ಸಲಿಗೆಯಿಂದಾಗಿ ಮಾತುಕತೆ ಭದ್ರತಾ ವಿಚಾರಗಳಿಗಿಂತ ಹೆಚ್ಚಾಗಿ ರಾಜಕೀಯ ಗಾಸಿಪ್‌ಗಳ ಸುತ್ತಲೇ ಸುತ್ತುತ್ತಿರುತ್ತವೆ' ಎಂದು ಇಂತಹ ಹಲವಾರು ಕೊಳಕು ಕೃತ್ಯಗಳಲ್ಲಿ ಖುದ್ದಾಗಿ ಭಾಗಿಯಾಗಿರುವ ಧರ್ ಬರೆದಿದ್ದಾರೆ. ಪ್ರಣವ್ ಮುಖರ್ಜಿ ಹಣಕಾಸು ಸಚಿವರಾಗಿದ್ದಾಗ ಅವರ ಕಚೇರಿಯನ್ನೇ ಬಗ್ ಮಾಡಿದ್ದು ಮತ್ತು ಇತ್ತೀಚೆಗೆ ವಿರೋಧಪಕ್ಷದ ನಾಯಕ ಅರುಣ್ ಜೇಟ್ಲಿ ಅವರ ದೂರವಾಣಿ ಕರೆಗಳ ಮಾಹಿತಿ ಸಂಗ್ರಹ ಪ್ರಕರಣಗಳನ್ನು ಗಮನಿಸಿದರೆ ಪರಿಸ್ಥಿತಿ ಈಗಲೂ ಬದಲಾಗಿಲ್ಲ ಎಂದು ಸ್ಪಷ್ಟವಾಗುತ್ತದೆ.

ಬೇಹುಗಾರಿಕೆಗಾಗಿ ಹತ್ತಾರು ಸಂಸ್ಥೆಗಳಿದ್ದರೂ ಆಂತರಿಕ ಭದ್ರತೆಯ ವಿಚಾರದಲ್ಲಿ `ಐಬಿ' ಪಾತ್ರವೇ ನಿರ್ಣಾಯಕ. ದೇಶದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕೃತ ಮಾಹಿತಿದಾರರನ್ನು ಇದು ಹೊಂದಿದೆ. ಇದರಲ್ಲಿ ಬೀದಿ ಬದಿಯ ಕ್ಷೌರಿಕನಿಂದ ಹಿಡಿದು, ಭೂಗತ ದೊರೆಗಳು, ಕ್ರಿಮಿನಲ್‌ಗಳು, ಡಬಲ್ ಏಜೆಂಟ್‌ಗಳೆಲ್ಲ ಇದ್ದಾರೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಇದರ ಏಜೆಂಟ್‌ಗಳಿದ್ದಾರೆ. ಆದರೆ ಅಂತಿಮವಾಗಿ ಇದರ ಅವಲಂಬನೆ ರಾಜ್ಯ ಪೊಲೀಸ್ ಇಲಾಖೆಯಲ್ಲಿರುವ ಸ್ಪೆಷಲ್ ಬ್ರಾಂಚ್ ಮೇಲೆ. ಆದರೆ `ರಾ'ದಂತೆ `ಎಸ್‌ಬಿ'ಯಲ್ಲಿಯೂ ಬಹುತೇಕ ಸಿಬ್ಬಂದಿ ಒಲ್ಲದ ಮನಸ್ಸಿನಿಂದಲೇ ಸೇರಿಕೊಂಡವರು.

ಮರುಭೂಮಿಯಂತಿರುವ `ರಾ', `ಎಸ್‌ಬಿ'ಗಳಿಗಿಂತ ಸಂಬಳದ ಜತೆಯಲ್ಲಿ `ಹೆಚ್ಚುವರಿ ಆದಾಯ'ಕ್ಕೆ ಅವಕಾಶ ಇರುವ ಪೊಲೀಸ್ ಇಲಾಖೆಯೇ ವಾಸಿ ಎನ್ನುವವರೇ ಹೆಚ್ಚು. `ಬೇಹುಗಾರಿಕೆಯ ಮುಖ್ಯ ಕೊಂಡಿ ಬೀಟ್ ಪೊಲೀಸರು.ಆಂತರಿಕ ಭದ್ರತೆಯ ಕೆಲಸ ಒಬ್ಬ ಬೀಟ್ ಪೊಲೀಸ್ ಕಾನ್‌ಸ್ಬೇಬಲ್‌ನಿಂದ ಪ್ರಾರಂಭವಾಗುತ್ತದೆ. ಆ ಬೀಟ್ ವ್ಯವಸ್ಥೆ ಎಲ್ಲಿ ಸರಿ ಇದೆ ?' ಎಂದು 26/11 ಘಟನೆಯ ನಂತರ ಕೇಂದ್ರ ಸರ್ಕಾರ ತನಿಖೆಗಾಗಿ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾದ ರಾಮ್‌ಪ್ರಧಾನ್ ಇತ್ತೀಚೆಗೆ ಪ್ರಶ್ನಿಸಿದ್ದರು.

ಪೊಲೀಸರ ನೇಮಕಾತಿಯಿಂದ ವರ್ಗಾವಣೆ ವರೆಗೆ ಎಲ್ಲ ಅಧಿಕಾರಗಳನ್ನು ರಾಜಕಾರಣಿಗಳು ಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಪೊಲೀಸ್ ವ್ಯವಸ್ಥೆಯ ಸುಧಾರಣೆಗಾಗಿ ಧರ್ಮವೀರ ಆಯೋಗದಿಂದ ಹಿಡಿದು ಸೋಲಿ ಸೊರಾಬ್ಜಿ ಸಮಿತಿ ವರೆಗೆ ಹಲವು ವರದಿಗಳು ಬಂದಿವೆ. ಯಾವ ಸರ್ಕಾರವೂ ಅವುಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡಿಲ್ಲ. ಕೊನೆಗೆ ಈ ಎಲ್ಲ ಆಯೋಗ-ಸಮಿತಿಗಳ ವರದಿಗಳನ್ನು ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್ ಪೊಲೀಸ್ ಸುಧಾರಣೆಗಾಗಿ ಕೆಲವು ಸಲಹೆಗಳನ್ನು ನೀಡಿ 2006ರ ಅಂತ್ಯದೊಳಗೆ ಇದನ್ನು ಜಾರಿಗೊಳಿಸುವಂತೆ ಆದೇಶ ನೀಡಿದೆ. ಆದರೆ ಕರ್ನಾಟಕವೂ ಸೇರಿದಂತೆ ಹೆಚ್ಚಿನ ರಾಜ್ಯಗಳು ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಜಾರಿಗೊಳಿಸಿಲ್ಲ. ರಾಜಕೀಯ ಒಡೆಯರ `ಬಂಧನ'ದಲ್ಲಿರುವ ಪೊಲೀಸ್ ಇಲಾಖೆಯನ್ನು ಬಿಡುಗಡೆಗೊಳಿಸದಿದ್ದರೆ ಅದರ ಸುಧಾರಣೆ ಅಸಾಧ್ಯ.

ಮುಂಬೈನ 9/11ಭಯೋತ್ಪಾದಕ ಕೃತ್ಯ ನಡೆದ ನಂತರ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸೌಹಾರ್ದದ ಕೊರತೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಮುಖ್ಯವಾಗಿ ಹೊರಹೊಮ್ಮಿದ್ದು ಅಮೆರಿಕದ ಎಫ್‌ಬಿಐ ಮಾದರಿಯಲ್ಲಿ ಭಾರತದಲ್ಲಿಯೂ ಫೆಡರಲ್ ತನಿಖಾ ವ್ಯವಸ್ಥೆ ಸ್ಥಾಪನೆ ಮಾಡಬೇಕೆಂಬ ಬೇಡಿಕೆ. ಯಥಾಪ್ರಕಾರ ಇದು `ಒಕ್ಕೂಟ ವ್ಯವಸ್ಥೆಯ ವಿರೋಧಿ' ಎಂಬ ಕೂಗು ಕೇಳಿಬಂದರೂ ಕೇಂದ್ರ ಸರ್ಕಾರ `ರಾಷ್ಟ್ರೀಯ ತನಿಖಾ ಸಂಸ್ಥೆ' (ಎನ್‌ಐಎ)ಯನ್ನು ಐದು ವರ್ಷಗಳ ಹಿಂದೆ ಸ್ಥಾಪಿಸಿತು.

ಭಯೋತ್ಪಾದನೆಯಂತಹ ರಾಷ್ಟ್ರೀಯ ಅಪರಾಧಗಳ ತನಿಖೆ ನಡೆಸುವ ಎನ್‌ಐಎಗೆ ಕಾರ್ಯವ್ಯಾಪ್ತಿಯ ನಿರ್ಬಂಧ ಇಲ್ಲ. ರಾಜ್ಯಗಳಿಗೆ ಹೋಗಿ ತನಿಖೆ ನಡೆಸಲು ಸಿಬಿಐ ರೀತಿಯಲ್ಲಿ ಎನ್‌ಐಎಗೆ ರಾಜ್ಯಸರ್ಕಾರಗಳ ಅನುಮತಿ ಬೇಕಾಗಿಲ್ಲ. ರಾಜ್ಯಗಳ ಒಳಹೊಕ್ಕು ತನಿಖೆ ನಡೆಸುವ ಸ್ವಾತಂತ್ರ್ಯ ಇದ್ದರೂ ರಾಜ್ಯಗಳಲ್ಲಿ ಪ್ರತ್ಯೇಕ ಸಿಬ್ಬಂದಿ ಇಲ್ಲದ ಈ ಸಂಸ್ಥೆ ಮತ್ತೆ ರಾಜ್ಯಪೊಲೀಸರನ್ನೇ ಅವಲಂಬಿಸಬೇಕಾಗಿದೆ.

ಇದರ ಜತೆಗೆ ಸ್ಥಾಪಿಸಲಾದ ಅಪರಾಧಿಗಳ ಸಂಪೂರ್ಣ ಡಾಟಾಬೇಸ್ ಹೊಂದಿರುವ `ನ್ಯಾಟ್‌ಗ್ರಿಡ್' ಕೂಡಾ ಕುಂಟುತ್ತಾ ಸಾಗಿದೆ. ಈಗ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳ ವಿಚಾರಣೆಗೆ ಸಂಬಂಧಿಸಿದಂತೆ ಎಲ್ಲ ಬೇಹುಗಾರಿಕಾ ಸಂಸ್ಥೆಗಳ ಜತೆ ಸಮನ್ವಯ ಸಾಧಿಸಲು `ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ಕೇಂದ್ರ' (ಎನ್‌ಸಿಟಿಸಿ) ಸ್ಥಾಪಿಸಲು ಕೇಂದ್ರ ಹೊರಟಿದೆ. ರಾಜ್ಯಗಳು ಇದನ್ನು ವಿರೋಧಿಸತೊಡಗಿವೆ.

ಇಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿರುವ ಬೇಹುಗಾರಿಕಾ ವ್ಯವಸ್ಥೆಯಿಂದ ಯಾವ ಕಸಬುಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯ? ಸಹಜವಾಗಿ ಅವುಗಳು ತಮ್ಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಅಡ್ಡಮಾರ್ಗಗಳನ್ನು ಅನುಸರಿಸುತ್ತವೆ. ಸಾಮಾನ್ಯವಾಗಿ ಬೇಹುಗಾರಿಕೆ ಸಂಸ್ಥೆಗಳು ನೀಡುವ ಮಾಹಿತಿ ನಮ್ಮ ಜೋತಿಷಿಗಳು ಅಡ್ಡಗೋಡೆ ಮೇಲೆ ದೀಪ ಇಟ್ಟ ರೀತಿಯಲ್ಲಿ ನುಡಿಯುವ ಭವಿಷ್ಯವಾಣಿಯಂತಿರುತ್ತವೆ.

ನುಡಿದ ಭವಿಷ್ಯ ನಿಜವಾಗಲಿ, ಸುಳ್ಳಾಗಲಿ ಜೋತಿಷಿಗಳ ಬಳಿ ಸಮರ್ಥನೆಗಳು ಇದ್ದೇ ಇರುತ್ತವೆ. ಕಸಬ್ ಮತ್ತು ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ನಂತರ ಜೆಹಾದಿಗಳು ಪ್ರತೀಕಾರಾತ್ಮಕ ದಾಳಿ ನಡೆಸಬಹುದೆಂಬ ಆತಂಕ ಎಲ್ಲರಲ್ಲಿಯೂ ಇದ್ದೇ ಇತ್ತು. ಈ ಸಂದರ್ಭದಲ್ಲಿ ನಾಲ್ಕೈದು ರಾಜ್ಯಗಳಿಗೆ ಒಂದು ಎಚ್ಚರಿಕೆಯನ್ನು ನೀಡಿ ಬಿಟ್ಟರೆ, ಆಕಸ್ಮಾತ್ ದಾಳಿ ನಡೆದರೂ ತಮ್ಮ ಹೊಣೆಯಿಂದ ಜಾರಿಕೊಳ್ಳಲು ಅವಕಾಶ ಇರುತ್ತದೆ ಎನ್ನುವುದು ಐಬಿಯ ದೂರಾಲೋಚನೆ. ಕೈಗೆ ಸಿಕ್ಕ ಮಾಹಿತಿಗಳನ್ನೆಲ್ಲ ರಾಜ್ಯಗಳ ಕಡೆ ಹೊತ್ತು ಹಾಕುವುದಷ್ಟೆ ಆಗಿದ್ದರೆ ಕೋಟ್ಯಂತರ ರೂಪಾಯಿ ತೆರಿಗೆಹಣ ವ್ಯಯವಾಗುತ್ತಿರುವ ಗುಪ್ತಚರ ಸಂಸ್ಥೆಗಳು ಯಾಕೆ ಬೇಕು? ಅಂಚೆಕಚೇರಿಗಳು ಸಾಕಾಗುವುದಿಲ್ಲವೇ? ಮಾಹಿತಿ ನೀಡಿದ ನಂತರ ರಾಜ್ಯದ ಪೊಲೀಸರು ಏನು ಕ್ರಮಕೈಗೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಬೇಡವೇ?

ಆದರೆ ಪೊಲೀಸರನ್ನು ನ್ಯಾಯಾಂಗ ಮತ್ತು ಶಾಸಕಾಂಗ ಪ್ರಶ್ನಿಸಿದಂತೆ `ರಾ' ಮತ್ತು `ಐಬಿ'ಯನ್ನು ಪ್ರಶ್ನಿಸಲು ಅವಕಾಶ ಇಲ್ಲದಿರುವುದು ಕೂಡಾ ಈ ಸಂಸ್ಥೆಗಳ ವೈಫಲ್ಯಕ್ಕೆ ಕಾರಣ. ಕೇವಲ `ರಾ' ಒಂದಕ್ಕೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ವಿವೇಚನಾ ನಿಧಿಯನ್ನು ಬಜೆಟ್‌ನಲ್ಲಿ ನೀಡಲಾಗುತ್ತದೆ. ಈ ಹಣದ ಖರ್ಚಿನ ವಿವರವನ್ನು ಕೇಳಲು ಅವಕಾಶ ಇಲ್ಲ.

ವಿದೇಶಗಳಲ್ಲಿರುವ `ರಾ' ಏಜಂಟರು ಇದ್ದಕ್ಕಿದ್ದ ಹಾಗೆ ಡಬಲ್ ಏಜೆಂಟ್‌ಗಳಾಗಿ ಕಣ್ಮರೆಯಾಗುತ್ತಿರುತ್ತಾರೆ. ಈಗಲೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಕೆಲಸ ಮಾಡಲು ಹೆಚ್ಚಿನವರು ಒಪ್ಪುವುದಿಲ್ಲವಾದ ಕಾರಣ ಅಲ್ಲಿನ `ರಾ' ಏಜೆಂಟ್ ಹುದ್ದೆಗಳು ಪೂರ್ತಿ ಭರ್ತಿಯಾಗಿಲ್ಲ. ಸಾಮಾನ್ಯ ಜನತೆಯನ್ನು ಬಿಡಿ, ಸಂಸತ್‌ನಲ್ಲಿ ಕೂತಿರುವ ನಮ್ಮ ಪ್ರತಿನಿಧಿಗಳಿಗೂ ಈ ಸಂಸ್ಥೆಗಳ ಬಗ್ಗೆ ಇರುವ ಮಾಹಿತಿ ಅಷ್ಟಕ್ಕಷ್ಟೇ. ಯಾಕೆಂದರೆ ಬೇಹುಗಾರಿಕಾ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ನೀಡಲಾಗುವ ಹಣ ಇಲ್ಲವೇ ಅದರ ಕಾರ್ಯನಿರ್ವಹಣೆ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸುವಂತಿಲ್ಲ.

ಇದರಿಂದಾಗಿ ಇವುಗಳ ಅಂತರಂಗ ಬಹಿರಂಗಗೊಳ್ಳುವುದೇ ಇಲ್ಲ. ಅಮೆರಿಕದ ಎಫ್‌ಬಿಐ ಕೂಡಾ ಅಲ್ಲಿನ ಕಾಂಗ್ರೆಸ್‌ನ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಜರ್ಮನಿ, ಫ್ರಾನ್ಸ್, ಅಸ್ಟ್ರೇಲಿಯಾ ಸೇರಿದಂತೆ ಬಹುತೇಕ ದೇಶಗಳ ಗುಪ್ತಚರ ಸಂಸ್ಥೆಗಳು ಅಲ್ಲಿನ ಸಂಸತ್‌ಗೆ ಉತ್ತರದಾಯಿಯಾಗಿವೆ. ಬ್ರಿಟನ್‌ನಲ್ಲಿ ಸ್ವತಂತ್ರ ಸಮಿತಿಯಿಂದ ಪರಿಶೀಲನೆ ನಡೆಸುವ ವ್ಯವಸ್ಥೆ ಇದೆ. ಆದರೆ ಭಾರತದಲ್ಲಿ ಮಾತ್ರ ಯಾಕೆ `ಪವಿತ್ರ ಗೋವಿನ' ಪಟ್ಟಕಟ್ಟಿ ವಿಶೇಷ ರಕ್ಷಣೆ ನೀಡಲಾಗಿದೆಯೋ ಗೊತ್ತಿಲ್ಲ.

ಬೇಹುಗಾರಿಕಾ ಸಂಸ್ಥೆಗಳನ್ನು ಕನಿಷ್ಠ ಸಂಸತ್‌ಗೆ ಉತ್ತರದಾಯಿಯನ್ನಾಗಿ ಮಾಡಿ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತಂದರೆ ಅವುಗಳು ಸುಧಾರಣೆಯಾಗಬಹುದೇನೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.