ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ. ಪಿ. ಪ್ರಕಾಶ್: ಒಳದನಿಗೆ ಕಿವುಡಾಗದ ನಾಯಕ

Last Updated 15 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ

ಗತಿಸಿದ ನನ್ನ ಗೆಳೆಯರೂ, ಆತ್ಮೀಯರೂ ಆದ ಎಂ.ಪಿ.ಪ್ರಕಾಶರಿಗೆ ಅನುಯಾಯಿಗಳಿಗಿಂತ ಅಭಿಮಾನಿಗಳೇ ಹೆಚ್ಚು. ಅನುಯಾಯಿಗಳು ಇರಲಿಲ್ಲ ಎಂದಲ್ಲ. ಇಲ್ಲದೇ ಹೋಗಿದ್ದರೆ ಅವರು ತಮ್ಮೂರಿನಲ್ಲೂ, ಸಂಡೂರಿನಲ್ಲೂ ಮಾಡಿದ ಕೆಲಸವನ್ನು ಮಾಡುವುದು ಸಾಧ್ಯವಿರುತ್ತಿರಲಿಲ್ಲ. ಹಾಗೆ ನೋಡಿದರೆ, ಭಾರತದ ರಾಜಕಾರಣದಲ್ಲಿ ಕೇವಲ ಅಭಿಮಾನಿಗಳಷ್ಟೇ ಇದ್ದ ರಾಜಕಾರಣಿಯೆಂದರೆ ಎಂ.ಎನ್. ರಾಯ್ ಮಾತ್ರ.

ಪ್ರಕಾಶ್ ಅವರ ಅನುಯಾಯಿಗಳು ಸಾಮಾನ್ಯವಾಗಿ ಎಲ್ಲೆಲ್ಲೂ ಈಚೆಗೆ ಕಾಣಿಸುವಂತಹ ಫಲಾಪೇಕ್ಷಿಗಳು, ಅಥವಾ ದಲ್ಲಾಳಿ ಕೆಲಸ ಮಾಡುವ ಉಪಕಾರಿಗಳಾದರೂ ಭ್ರಷ್ಟಾಚಾರಿಗಳಾದ ರಾಜಕಾರಣಿಗಳು. ನಮ್ಮಲ್ಲಿ ಒಂದು ಗಾದೆಯಿದೆ, ‘ಅಜ್ಜಿ ಸುಟ್ಟ ಹಾಗೂ ಆಯ್ತು; ಚಳಿ ಕಾಯಿಸ್ಕೊಂಡ ಹಾಗೂ ಆಯ್ತು’. ಹೀಗೆ ಸ್ವಹಿತ, ಪರಹಿತ ಒಟ್ಟಾಗಿ ಸಾಧಿಸುವುದು ಪ್ರಜಾತಂತ್ರದಲ್ಲಿ ಸಾಮಾನ್ಯವಾದ ಒಂದು ಗುಣವೇ. ಬೇರೆ ಯಾರಿಂದ ಕೆಲಸವಾಗುತ್ತದೋ ಅವರ ಮರ್ಜಿಯನ್ನು ಹಿಡಿದು ಅವರ ಅನುಯಾಯಿಯಾಗಿ ನಾಚಿಕೆಯಿಲ್ಲದೇ ಇವರು ಬದಲಾಗುತ್ತಾರೆ. ಇಂಥ ಅನುಯಾಯಿಗಳ ಸಂಖ್ಯೆಯನ್ನು ಬಹಳ ಹೆಚ್ಚುಕಾಲ ಬದಲಾಗದಂತೆ ಇಟ್ಟುಕೊಳ್ಳಬಲ್ಲವರು ನಮ್ಮ ಕಾಲದ ರಾಜಕಾರಣದ ನಾಯಕರಾಗಿ ಬಿಡುತ್ತಾರೆ. ಇದೊಂದು ಭ್ರಷ್ಟಾಚಾರದ ಸಮೃದ್ಧ ನೆಲದಲ್ಲಿ ಬೆಳೆಯುವ ಅಣಬೆ. ಕೆಲವು ಅಣಬೆಗಳು ತಿನ್ನಲು ರುಚಿ. ಮತ್ತು ಪುಷ್ಠಿಕರವೂ ಹೌದು. ತೋರಲಿಕ್ಕೆ ಹಾಗಿರುವ ಹಲವು ಅಣಬೆಗಳು ವಿಷ. ತಿಂದಮೇಲೆ ಗೊತ್ತಾಗುವ ವಿಷ. ಸತತವಾದ ಎಚ್ಚರದಲ್ಲೂ ಟೀಕೆಯಲ್ಲೂ ಪ್ರಜಾತಂತ್ರದ ನಡಾವಳಿಗಳನ್ನು ನಾವು ನೋಡಬೇಕಾದ್ದು ಈ ಕಾರಣದಿಂದ.

ಪ್ರಕಾಶರಿಂದ ಫಲ ಪಡೆದ ಅನುಯಾಯಿಗಳು ಇನ್ನೂ ಹೆಚ್ಚಿನ ಫಲಕ್ಕೆ ಇವರೊಂದು ಸಮೃದ್ಧ ನೆಲವಲ್ಲವೆಂದು ತಿಳಿದು ರಾಜಕೀಯ ಗಾಳಿ ಬೀಸಿದತ್ತ ತೂರಿಕೊಂಡು ಹೋದರು. ಜನರನ್ನು ಗೆಲ್ಲಲು ಹಣಕೊಟ್ಟು ಓಟು ಪಡೆಯಬೇಕಾದ ನಮ್ಮ ಕಾಲದಲ್ಲಿ ಅದನ್ನು ಮಾಡಲಾರದೇ ಪ್ರಕಾಶರು ಸೋತರು. ಆದರೆ ಪ್ರಕಾಶರು ಸತ್ತಮೇಲೂ ಯಾವ ಸಂಕೋಚವಿಲ್ಲದೇ ಹೇಳಬೇಕಾದ ಮಾತು, ಅವರು ತಮ್ಮ ಅಭಿಮಾನಿಗಳನ್ನು ಕೊನೆವರೆಗೂ ಉಳಿಸಿಕೊಂಡಿದ್ದರು. ಯಾಕೆಂದರೆ ಈ ಅಭಿಮಾನಿಗಳು ಯಾವ ದಾಕ್ಷಿಣ್ಯವೂ ಇಲ್ಲದೆ ಪ್ರಕಾಶರ ಎದುರೇ ಅವರ ನಿಲುವುಗಳನ್ನು ಟೀಕಿಸಬಲ್ಲವರಾಗಿದ್ದರು. ಅವರಲ್ಲಿ ನಾನೂ ಒಬ್ಬನಾಗಿದ್ದೆನೆಂಬುದು ಪ್ರಕಾಶರ ಬಗ್ಗೆ ನನಗಿರುವ ಅಪಾರವಾದ ಗೌರವವನ್ನೂ, ಪ್ರೀತಿಯನ್ನೂ ಸೂಚಿಸುತ್ತದೆ, ಮಾತ್ರವಲ್ಲ, ಪ್ರಕಾಶರೊಳಗೂ ಅಚ್ಚಳಿಯದೇ ಉಳಿದ ಅವರ ಸಾತ್ವಿಕ ಕಾಂತಿಯನ್ನು ಸೂಚಿಸುತ್ತದೆ. ಇವರೊಬ್ಬರು ನಮ್ಮ ಕಾಲದ ಅಪೂರ್ವ ರಾಜಕಾರಣಿ. ಕೊನೆಯ ರಾಜಕಾರಣಿ ಎಂದು ಹೇಳುವ ಪ್ರಲೋಭನೆ ನನಗೆ ಬರುತ್ತದೆ, ಆದರೆ ಹಾಗೆ ಹೇಳುವುದು ತಪ್ಪಾಗಬಹುದೇನೋ?

ನನ್ನ ಮಾತುಗಳು ಮುಂದುವರೆಸಿ ಹೇಳುವುದಾದರೆ ಈಗ ರಾಜಕಾರಣಿ ಮಾತ್ರ ಕೆಟ್ಟಿರುವುದಲ್ಲ, ರಾಜಕಾರಣ ಮಾಡುವವರು ಮತದಾರರನ್ನೂ ಕೆಡಿಸಿದ್ದಾರೆ. ಹೆಚ್ಚು ಹಣ ಖರ್ಚು ಮಾಡದೆ ತಾವು ಚುನಾಯಿತರಾಗುತ್ತಿದ್ದೇವೆಂಬ ಹೆಮ್ಮೆಯ ಪ್ರಕಾಶರೂ ಸೋತರು, ಗೆಳೆಯ ಸಿದ್ಧರಾಮಯ್ಯನಂಥವರೂ ಚುನಾವಣೆ ಗೆದ್ದು ನಾಚಿಕೊಂಡರು. ಭಾರತದ ರಾಜಕಾರಣದಲ್ಲಿ ಅನುಯಾಯಿಗಳ ಮುಖಾಂತರವೇ ಬಹಳ ಕಾಲ ರಾಜಕಾರಣ ಮಾಡುವ ನೀಚರೂ, ಜಾಣರೂ, ಕಾಲಕ್ಕೆ ಸಲ್ಲುವ ಪ್ರಜಾಹಿತವನ್ನು ಅಷ್ಟಿಷ್ಟು ಸಾಧಿಸುವರೂ ಆಗಿರುವ ರಾಜಕಾರಣಿಗಳೂ ಇದ್ದಾರೆ. ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಗಳ ನಡುವೆ ಈ ಬಗೆಯ ಯಶಸ್ಸಿನ ಒಂದು ಸ್ಪರ್ಧೆಯೇ ಇದೆ. ಉತ್ತರ ಭಾರತದ ರಾಜಕಾರಣದಲ್ಲೂ ಮಾಯಾವತಿ-ಮುಲಾಯಂರ ನಡುವೆ ಇಂಥದೊಂದು ಸ್ಪರ್ಧೆಯಿದೆ. ಇಲ್ಲಿ ಅನುಯಾಯಿಗಳೇ ತೆಳುವಾದ ತಾತ್ವಿಕತೆಯ ಕುರುಡು ಅಭಿಮಾನಿಗಳೂ ಆಗಿರುತ್ತಾರೆ. ಅಥವಾ ಹಾಗೆ ಗೋಚರಿಸಬಲ್ಲ ಟೊಳ್ಳು ಬಾಯಿಬಡುಕರು ಇವರು. ಇಂಥ ಕಡೆ ರಾಜಕಾರಣದಲ್ಲಿ ಮಹತ್ತರವಾದ ಯಾವ ಬದಲಾವಣೆಯೂ ಆಗುವುದಿಲ್ಲ. ಗಂಗೆಯಂತೆ ಹರಿಯುತ್ತಿರುವ ಕಾಂಗ್ರೆಸ್ ಪಕ್ಷವೂ ಇನ್ನೇನು ಗತಿಯಿಲ್ಲ ಎನ್ನಿಸುವ ಸಾವಿನ ಸಂದರ್ಭದಲ್ಲಿ ಮಾತ್ರ ಕುಡಿಯಬಹುದಾದ ಜಲದಂತೆ ತೋಚುತ್ತಿದೆ.

ಈ ತತ್ವನಿಷ್ಠ ಅಭಿಮಾನಿ ವರ್ಗ, ಅನುಭವದ ಸತ್ಯಗಳಿಗೆ ನಿಷ್ಠವಾದ ಜನಸಾಮಾನ್ಯ ಅನುಯಾಯಿ ವರ್ಗ ಎರಡನ್ನೂ ಸಮವಾದ ಹದದಲ್ಲಿ ಪಡೆದುಕೊಂಡವರ ಸಂಖ್ಯೆ ವಿರಳವಾದದ್ದು. ಲೋಹಿಯಾ ಅವರು ಚುನಾವಣೆಗಳಲ್ಲಿ ಗೆದ್ದದ್ದಕ್ಕಿಂತ ಸೋತದ್ದೇ ಹೆಚ್ಚು. ಒಂದೇ ಕ್ಷೇತ್ರದಲ್ಲಿ ಇವರಿಗೆ ಅವರ ಎಲ್ಲ ಅಭಿಮಾನಿಗಳೂ ಇರಲಿಲ್ಲ. ಭಾರತದಲ್ಲಿ ಅವರು ಹಂಚಿ ಹೋಗಿದ್ದರು. ಇದರಿಂದ ಲೋಹಿಯಾ ಎಂದೂ ಹತಾಶರಾಗಲಿಲ್ಲ. ಅವರಲ್ಲಿ ಒಂದು ಅಪಾರವಾದ  ಜನಶ್ರದ್ಧೆಯೂ ಮತ್ತು ತನ್ನ ಹುರುಪು ಕಳೆದುಕೊಳ್ಳದೇ ಜನ ಬದಲಾಗಲು ಕಾಯುವ ಗುಣ ಮತ್ತು ನಂಬಿಕೆ- ಎರಡೂ ಇದ್ದವು.

ಅವರಿಗೆ ಹತ್ತಿರದ ಅನುಯಾಯಿಯಾಗಿದ್ದ, ಸಾಯುವ ತನಕ ಸತತ ಸತ್ಯನಿಷ್ಠೆಯವರಾಗಿದ್ದ ಕಿಶನ್ ಪಟ್ನಾಯಕ್ ಒಮ್ಮೆ ಚುನಾವಣೆಯಲ್ಲಿ ಗೆದ್ದು ಪಾರ್ಲಿಮೆಂಟಿಗೆ ಬಂದು ಪ್ರಧಾನಿ ಮಾಡುವ ಖರ್ಚಿನ ವಿಷಯದಲ್ಲಿ ಲೋಹಿಯಾ ನೇತೃತ್ವದಲ್ಲಿ ಒಂದು ದೊಡ್ಡ ಚರ್ಚೆಯನ್ನೇ ಎತ್ತಿ ಮತ್ತೆ ಚುನಾವಣೆಗೆ ನಿಂತಾಗ ಲೋಹಿಯಾ ಅವರಿಗೆ ಜನರಿಗೆ ಸದ್ಯಕ್ಕೆ ಅಪ್ರಿಯವಾದ ಮಾತುಗಳನ್ನಾಡಿ ಚುನಾವಣೆಯನ್ನು ಎದುರಿಸಬೇಕೆಂದು ಹೇಳಿದ್ದರು. ಲೋಹಿಯಾರು ಎಲ್ಲ ವಿಷಯಗಳಲ್ಲೂ ಮುಸ್ಲಿಮರ ಪರವಾದ ನಿಲುವನ್ನು ತಳೆದವರಾಗಿದ್ದರೂ ಕೂಡ ಮುಸ್ಲಿಮರ ಪರ್ಸನಲ್ ಲಾ ನಲ್ಲಿ ಬದಲಾವಣೆಯಾಗಬೇಕೆಂದು ನಂಬಿದ್ದರು. ಅದನ್ನು ಕಿಶನ್ ಪಟ್ನಾಯಕ್ ಸಾರುವಂತೆ ಮಾಡಿ ಮುಸ್ಲಿಮರ ಓಟನ್ನು ಕಳೆದುಕೊಂಡು ಪಟ್ನಾಯಕ್‌ರು ಸೋಲುವಂತಾಯಿತು. ಲೋಹಿಯಾ ಈ ಸೋಲನ್ನು ಅಭಿನಂದಿಸಿದರು.

ಭಾರತದಲ್ಲಿ ಹೊಸ ರೀತಿಯ ರಾಜಕೀಯವನ್ನೇ ಮಾಡಬೇಕೆಂಬ ಲೋಹಿಯಾರ ನಾಯಕತ್ವದಲ್ಲಿ ಪ್ರತಿವರ್ಷವೂ ಹೊಸಬರು ಸೇರುತ್ತಿದ್ದರು. ಸೇರುವವರಿಗಿಂತ ಹೆಚ್ಚು ಜನ ಅವರ ನಾಯಕತ್ವದಿಂದ ಹೊರಬರುತ್ತಿದ್ದವರೂ ಇದ್ದರು. ಅವರು ನಿಧನರಾದ ನಂತರ ಅವರಿಂದ ಉಚ್ಚಾಟಿತರಾಗಬಹುದಾಗಿದ್ದ ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ದೊಡ್ಡ ನಾಯಕರೇ ಆಗಿಬಿಟ್ಟರು. ಕರ್ನಾಟಕದಲ್ಲಿ ಮಾತ್ರ ಲೋಹಿಯಾವಾದಿಗಳಾದ ಪ್ರಕಾಶರು ಅಭಿಮಾನಿಗಳನ್ನು ಉಳಿಸಿಕೊಂಡರು, ಅನುಯಾಯಿಗಳನ್ನು ಕಳೆದುಕೊಂಡರು. ಕೊನೆಯ ದಿನಗಳಲ್ಲಿ ಅವರು ಬೇಸರದಲ್ಲಿದ್ದ, ಆದರೆ ಹತಾಶಗೊಂಡಿರಲಿಲ್ಲ. ಲೋಹಿಯಾವಾದ ದೇಶದಲ್ಲಿ ಕ್ಷೀಣವಾಗಿರುವಂತೆ ಕಂಡರೂ ಅವರ ಅಂತರಂಗದಲ್ಲಿ ಅದೊಂದು ಸಣ್ಣ ಹಣತೆಯಾಗಿ ಉರಿಯುತ್ತಲೇ ಇತ್ತು.

ಪ್ರಕಾಶರು ಬಿಜೆಪಿ ಜೊತೆ ಕೈ ಜೋಡಿಸಿದ್ದೂ, ದೇವೇಗೌಡರನ್ನು ಹಿಡಿದದ್ದೂ ಮತ್ತು ಬಿಟ್ಟಿದ್ದೂ, ನಿಜವಾಗಿಯೂ ಪ್ರೀತಿಯಿಲ್ಲದವರ ಜೊತೆ ಸ್ನೇಹದಲ್ಲಿ ಇರುವಂತೆ ಕಾಣಿಸಿಕೊಳ್ಳುತ್ತಿದ್ದುದೂ ಇವೆಲ್ಲವೂ ಅವರ ಒಳ್ಳೆಯ ಗುಣದಿಂದಲೇ. ಅಂದರೆ ದಾಕ್ಷಿಣ್ಯದಿಂದಲೇ ಹುಟ್ಟಿದ್ದ ದೋಷಗಳು. ಇವರ ಅಭಿಮಾನಿಗಳಿಗೂ ಇದು ಗೊತ್ತಿತ್ತು. ಕಾಂಗ್ರೆಸ್ಸೇತರ ರಾಜಕಾರಣವನ್ನು ಹುಟ್ಟುಹಾಕಿದ್ದ ಲೋಹಿಯಾವಾದ ತನ್ನ ಗೆಲುವಿನಲ್ಲಿ ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ತಾತ್ವಿಕವಾದ ಅವಕಾಶವನ್ನೂ ಹೊಂದಿತ್ತು. ಇದಕ್ಕೆ ಹಲವು ಲೋಹಿಯಾವಾದಿಗಳು, ಜೆ.ಎಚ್.ಪಟೇಲ್, ಎಂ.ಪಿ. ಪ್ರಕಾಶ್, ಬಿಹಾರದ ನಿತೀಶ್ ಕುಮಾರ್ ಎಲ್ಲರೂ ಸಾಕ್ಷಿ. ಮೋದಿಯೂ ಸಲ್ಲುವ, ನಿತೀಶರೂ ಸಲ್ಲುವ ಈ ಸದ್ಯದ ಪ್ರಜಾತಂತ್ರದಲ್ಲಿ ತತ್ವನಿಷ್ಠತೆ ಕಾಣೆಯಾಗಿದೆ. ನಿಷ್ಠೆಯುಳ್ಳವರು ಡಾ. ವಿನಾಯಕ್ ಸೇನ್ ಮತ್ತು ಮೇಧಾ ಪಾಟ್ಕರ್‌ರಂಥವರ ಜೊತೆ ಮಾತ್ರ ಗುರುತಿಸಿಕೊಳ್ಳಬೇಕಾಗಿ ಬಂದಿದೆ.

ಪ್ರಕಾಶರಷ್ಟು ಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ ಎಲ್ಲವೂ ಪ್ರಿಯವಾಗಿದ್ದ ಇನ್ನೊಬ್ಬ ರಾಜಕಾರಣಿ ಕರ್ನಾಟಕದಲ್ಲಿ ನನಗೆ ಕಾಣುತ್ತಿಲ್ಲ ಎನ್ನುವಂತಹ ನನ್ನಂಥವರ ಮೆಚ್ಚುಗೆಯಲ್ಲಿ ಪ್ರಕಾಶರು ಸಮಾಧಾನಪಡೆಯುತ್ತ ಇದ್ದುದೂ ಅವರ ರಾಜಕೀಯ ಇಚ್ಚಾಶಕ್ತಿ ಕುಂದಲು ಅವಕಾಶ ಮಾಡಿಕೊಟ್ಟಿತೇನೊ ಎಂಬ ಸಂಶಯ ನನಗಿದೆ.

ಸಮಾಜವಾದಿಗಳಿಗೂ ಹೊಸ ಸಾಹಿತ್ಯದ ಚಳವಳಿಗೂ ಅವಿನಾ ಸಂಬಂಧವಿದ್ದ ಒಂದು ಕಾಲಘಟ್ಟದಲ್ಲಿ ತೇಜಸ್ವಿ, ನಂಜುಂಡಸ್ವಾಮಿ, ರಾಮದಾಸ್, ಲಂಕೇಶ್ ಹೀಗೆ ನಾವೆಲ್ಲರೂ ಚಿಗುರುತ್ತಿದ್ದ ಕಾಲದ ಒಂದು ನೆನಪು. ಶಾಂತವೇರಿ ಗೋಪಾಲಗೌಡರು ಆ ಕಾಲದ ಏನನ್ನಾದರೂ ಸ್ವೀಕರಿಸಬಲ್ಲ ಓದುಗರಾಗಿದ್ದರು. ತೇಜಸ್ವಿ ಲೇಖಕನಾಗಿದ್ದುಕೊಂಡೇ ತಮ್ಮ ಗೆಳೆಯ ಕಡಿದಾಳ್ ಶಾಮಣ್ಣನ ಜೊತೆ ಚಳವಳಿಯಲ್ಲಿ ತೊಡಗಿಕೊಂಡಿದ್ದ ಆ ಕಾಲದಲ್ಲಿ ಇದ್ದಕ್ಕಿದ್ದಂತೆ ನನಗೊಂದು ಮಾತನ್ನು ಹೇಳಿ ಬೆಚ್ಚಿಬೀಳಿಸಿದ್ದು ನೆನಪಾಗುತ್ತದೆ- ‘ಸರ್, ನಾನು ನಿಮ್ಮನ್ನೇ ದೂರಬೇಕು, ಈ ಶಾಂತವೇರಿ ಗೋಪಾಲಗೌಡರ ರಾಜಕೀಯ ಇಚ್ಛಾಶಕ್ತಿ ಬೆಳೆದಿದ್ದರೆ ಕರ್ನಾಟಕದಲ್ಲಿ ಏನಾದರೂ ಆಗಬಹುದಿತ್ತು. ಆದರೆ ಅವರ ಕಾವ್ಯದ ಪ್ರೀತಿಯಲ್ಲಿ ವೈಭವಿಸುತ್ತಾ ಅವರ ರಾಜಕೀಯ ಇಚ್ಛಾಶಕ್ತಿಯನ್ನೇ ಕುಂದಿಸುವಂತೆ ಮಾಡಿದ್ದೀರಿ’. ಹೀಗೆ ಹೇಳಿದ ತೇಜಸ್ವಿ ಈ ಗುಂಪಿನ ಎಲ್ಲರಿಗಿಂತ ಹೆಚ್ಚಾಗಿ ರಾಜಕೀಯದಿಂದ ಮುಖ ತಿರುಗಿಸಿ ಹಕ್ಕಿಗಳ ಫೋಟೋ ತೆಗೆಯುವುದು, ಮೀನು ಹಿಡಿಯುವುದು, ಕೃಷಿ ಮಾಡುವುದು ಮುಂತಾದ ಅವರ ಆಸಕ್ತಿಗಳಲ್ಲಿ ಮಗ್ನರಾಗಿಬಿಟ್ಟರು. ತೇಜಸ್ವಿಯವರ ಈ ವರ್ತನೆ ಸಮಾಜವಾದಕ್ಕೂ ರಾಜಕೀಯಕ್ಕೂ ಇರುವ ಧನಾತ್ಮಕವಾದ ವಿಮರ್ಶೆ ಎಂದೇ ನಾನು ಭಾವಿಸುತ್ತೇನೆ.

ನಮ್ಮ ರಾಜಕೀಯ ಲೋಕ ಯಾರನ್ನಾದರೂ ನಾಯಕನನ್ನಾಗಿ ಮಾಡಿಕೊಳ್ಳುವಾಗ ಅವರ ಜಾತಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಚಂದ್ರಶೇಖರ ಪಾಟೀಲರು ಒಮ್ಮೆ ನನ್ನೊಡನೆ  ಮಾತಾಡುವಾಗ  ‘ಜಾತಿವಾದಿ’, ‘ಜಾತಿವಂತ’ ಎಂಬ ಎರಡು ಶಬ್ದಗಳನ್ನು ಬಳಸಿದರು. ಆ ಶಬ್ದಗಳು ನಮ್ಮ ಪ್ರಜಾತಂತ್ರ ರಾಜಕಾರಣದಲ್ಲಿ ಮುಖ್ಯವೆಂದು ನನಗೆ ಅನ್ನಿಸಿವೆ. ವೈಚಾರಿಕವಾಗಿಯೂ, ಸ್ನೇಹಕ್ಕಾಗಿಯೂ, ಕೇವಲ ಸತ್ಯಕ್ಕಾಗಿಯೂ ನನಗೆ ನನ್ನ ಜಾತಿ ಅಮುಖ್ಯ ಎನ್ನುವುದು ಬಹಳ ಅಗತ್ಯ. ಆದರೆ ಅಂಥವನು ಜಾತಿವಾದಿಯಾಗದೇ ಜಾತಿವಂತನಾಗಿರುವುದು ಪ್ರಜಾತಂತ್ರದಲ್ಲಿ ಅಪರೂಪವೇನಲ್ಲ. ಪ್ರಕಾಶ್ ಜಾತಿವಾದಿಯಾಗಲಾರದ ಜಾತಿವಂತ ಎನ್ನಬಹುದೇನೋ? ಅವರ ಪ್ರಜ್ಞಾಲೋಕಕ್ಕೆ ಸೀಮಿತವಾಗಿದ್ದ ಈ ಸತ್ಯ ಯಾರಿಗೂ ಈ ಕಾಲದಲ್ಲಿ ಬೇಕೆನ್ನಿಸಲಿಲ್ಲ.

ನಾನೊಮ್ಮೆ ಅವರಿಗೆ ಹೇಳಿದ್ದೆ. ಇದು ನಾನು ಯೂನಿವರ್ಸಿಟಿಗಳಲ್ಲೂ ಕಂಡ ವಿಷಯ. ಯಾವುದಾದರೂ ಒಂದು ಇಲಾಖೆಯ ಮುಖ್ಯಸ್ಥ ಯಾವ ಜಾತಿಯವನು ಎನ್ನುವುದನ್ನು ಆಧರಿಸಿ ಆ ಜಾತಿಯ ಹುಡುಗರು ಹುಡುಗಿಯರು ಆಯಾ ಇಲಾಖೆಗಳಲ್ಲಿ ಹೆಚ್ಚಿರುತ್ತಾರೆ. ಮುಸ್ಲಿಮರಂತೂ ತಮ್ಮವರು ಮುಖ್ಯಸ್ಥರಾಗಿರುವ ವಿಭಾಗಕ್ಕೆ ಸೇರಲು ಬಯಸುವುದನ್ನು ನಾನು ನೋಡಿದ್ದೇನೆ. ಇದು ತಪ್ಪೂ ಅಲ್ಲ, ಸರಿಯೂ ಅಲ್ಲ. ಇದೊಂದು ಇರುವ ಸತ್ಯ. ನಮ್ಮ ಕರ್ನಾಟಕದ ರಾಜಕೀಯ ಪಕ್ಷಗಳಲ್ಲೂ ಈ ಲೆಕ್ಕಾಚಾರ ಇದ್ದೇ ಇರುತ್ತದೆ. ಆದರೆ ಪ್ರಕಾಶ್ ನಮ್ಮ ಜೊತೆಗಿದ್ದರೆ ಲಿಂಗಾಯತ ಜಾತಿಯವರು ಹೆಚ್ಚು ಸಂಖ್ಯೆಯಲ್ಲಿ ನಮ್ಮ ಪಕ್ಷಕ್ಕೆ ಒಲಿಯುತ್ತಾರೆ ಎನ್ನುವ ಗಟ್ಟಿಯಾದ ನಂಬಿಕೆ ಯಾವ ಪಕ್ಷಕ್ಕೂ ಇರಲಿಲ್ಲ. ಇದೊಂದು ಪ್ರಕಾಶರ ಹೆಚ್ಚಳವೆಂದೇ ನಾನು ತಿಳಿದಿದ್ದೇನೆ.

ಇಷ್ಟಿದ್ದೂ ಅವರು ಮಂತ್ರಿಯಾಗಿದ್ದಾಗ ನಾನೊಂದು ವಿಷಯವನ್ನು ಗಮನಿಸಿ ಅವರಿಗೆ ಹೇಳಿ ಇಬ್ಬರೂ ನಕ್ಕಿದ್ದುಂಟು. ‘ನೋಡಿ, ನೀವು ನಾಯಕರಾದ ಕೂಡಲೇ ನಿಮ್ಮ ಜಾತಿಯವರೇ ನಿಮ್ಮನ್ನು ಬೇಡವೆಂದರೂ ಸುತ್ತುವರೆಯುತ್ತಾರೆ, ನಿಮ್ಮ ಜೊತೆ ಯಾವತ್ತೂ ತಮ್ಮ ಸ್ವಾರ್ಥಕ್ಕಾಗಿ ಕಾಣಿಸಿಕೊಳ್ಳುತ್ತಾರೆ. ನಮ್ಮ ಗೆಳೆಯ ಸಿದ್ಧರಾಮಯ್ಯನವರಿಗೂ ಹೀಗೇ ಆಗುತ್ತದೆ’.

ಅದೊಂದು ಕಾಲದಲ್ಲಿ ನಮ್ಮ ಸಮಾಜವಾದೀ ಚಳವಳಿಯಲ್ಲಿ ಹೀಗಾಗುತ್ತಿರಲಿಲ್ಲ. ಶಾಂತವೇರಿಯ ಜೊತೆ ಬಡಬ್ರಾಹ್ಮಣರೂ, ಬಡ ಒಕ್ಕಲಿಗರೂ, ಬಡ ದೀವರೂ ಮಾತ್ರ ಇರುತ್ತಿದ್ದರು. ಇವರು ಅನುಯಾಯಿಗಳೂ ಹೌದು, ಅಭಿಮಾನಿಗಳೂ ಹೌದು. ನಮ್ಮೂರಿಗೆ ರಸ್ತೆ ಬೇಕು, ಸೇತುವೆ ಬೇಕು ಎಂದರೆ ಅವರು ಅದನ್ನು ಮಾಡಲ್ಲ ಎಂದೇನೂ ಹೇಳುತ್ತಿರಲಿಲ್ಲ. ಆದರೆ ಎಲ್ಲರೂ ಒಪ್ಪುವಂತೆ ಅವರು ಹೇಳುತ್ತಿದ್ದ ಮಾತು: ‘ನನ್ನನ್ನು ನೀವು ಆಯ್ಕೆ ಮಾಡಿರುವುದು ಕಾನೂನಿನ ಬದಲಾವಣೆಗಾಗಿ, ರಸ್ತೆ, ಸೇತುವೆ ಇತ್ಯಾದಿ ಆಗಬೇಕಾದ್ದು ಇಲಾಖೆಗಳಿಂದ . ಅದನ್ನು ನಿಮ್ಮ ಹಕ್ಕಾಗಿ ನೀವೇ ಮಾಡಿಸಿಕೊಳ್ಳಬೇಕು’. ಇಂಥ ಒಂದು ಮಾತನ್ನು ಯಾರಾದರೂ ಹೇಳಬಹುದಾದ ಕಾಲ ಇದಲ್ಲ ಎಂಬುದಂತೂ ಸತ್ಯ.

ಈ ಎಲ್ಲದರ ಮಧ್ಯೆಯೂ ಜನಸಾಗರ ಥಟ್ಟನೇ ಎಚ್ಚೆತ್ತು ಮೂಲಭೂತ ಬದಲಾವಣೆಗಾಗಿ ಕೇಳಬಹುದೆಂಬುದನ್ನು ಮಾನವ ಚರಿತ್ರೆ ಬಲ್ಲವರೆಲ್ಲರೂ ಗಮನಿಸಲೇ ಬೇಕಾದ ಸಂಗತಿ. ಈಜಿಪ್ಟಿನಲ್ಲಿ ಅಂಥದೊಂದು ಕ್ರಾಂತಿ ಈಗ ನಡೆಯುತ್ತಿದೆ. ಜನ ನ್ಯಾಯಕ್ಕಾಗಿ ಒಳ್ಳೆತನಕ್ಕಾಗಿ, ಭ್ರಾತೃತ್ವಕ್ಕಾಗಿ ಅಹಿಂಸಾತ್ಮಕವಾಗಿ ಹೋರಾಟ ನಡೆಸಿದ್ದಾರೆ. ಜೆ.ಪಿ. ನಡೆಸಿದ ಚಳವಳಿಯೂ ನಮಗೆ ಹಾಗೇ ಅನ್ನಿಸಿತ್ತು. ಪ್ರಕಾಶ್ ಅಂಥವರಿಗೂ ಅನುಯಾಯಿಗಳು ಕಡಿಮೆಯಾದರೂ ಅಭಿಮಾನಿಗಳನ್ನು ಕಳೆದುಕೊಳ್ಳದಂತೆಯೂ, ಒಳದನಿಗೆ ಕಿವುಡಾಗದಂತೆಯೂ ತಮ್ಮ ತಪ್ಪುಗಳನ್ನೂ ಸರಿಮಾಡಿಕೊಳ್ಳುವ ಚೈತನ್ಯ ಸಾಯುವ ತನಕ ಉಳಿದಿತ್ತು.

ಪ್ರಕಾಶರ ಸ್ವಭಾವದಲ್ಲಿ ನಾಚಿಕೆಯೇ ಸ್ಥಾಯಿ ಎಂಬುದು ಅವರ ಮುಖದಲ್ಲೇ ಎದ್ದು ಕಾಣುತ್ತಿತ್ತು. ಈ ನಾಚುವ ಸ್ವಭಾವವೇ ಅವರ ಎಲ್ಲ ಗುಣಗಳ ತವರಾಗಿತ್ತು. ನಾಚಿಕೆಯಿಲ್ಲದವರಲ್ಲಿ ಸ್ವಾಭಿಮಾನ ಇರುವುದಿಲ್ಲ; ದರ್ಪ ಇರುತ್ತದೆ. ಲಜ್ಜೆಗೆಟ್ಟವರು ಮಾತ್ರ ರಾಜಕಾರಣ ಮಾಡಬಲ್ಲ ಈ ಕಾಲದಲ್ಲಿ ಬಲಿಯಾಗುವುದು ಪ್ರಜಾತಂತ್ರ ವ್ಯವಸ್ಥೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT