ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವರ್ತಕರ ತಪ್ಪಿಗೆ ಸಿಬ್ಬಂದಿಗೆ ಬರೆ ಬೇಡ

Last Updated 1 ಆಗಸ್ಟ್ 2018, 9:28 IST
ಅಕ್ಷರ ಗಾತ್ರ

‘ತಂದೆಯ ಪಾಪಕೃತ್ಯಗಳ ಫಲಗಳನ್ನು ಮಕ್ಕಳು ಅನುಭವಿಸಬೇಕಾಗುತ್ತದೆ’ ಎಂದು ಬೈಬಲ್‌ನಲ್ಲಿ ಒಂದೆಡೆ ಉಲ್ಲೇಖಿಸಲಾಗಿದೆ. ಸದ್ಯಕ್ಕೆ ‘ಸನ್‌ ಟಿ.ವಿ’ ಎದುರಿಸುತ್ತಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಅದನ್ನು, ‘ಉದ್ದಿಮೆ ಸಂಸ್ಥೆಗಳ ಪ್ರವರ್ತಕರು ಎಸಗಿದ ಪಾಪಗಳಿಗೆ ಉದ್ಯೋಗಿಗಳು ಸಂಕಷ್ಟ ಎದುರಿಸಬೇಕಾಗಿ ಬಂದಿದೆ’ ಎಂದು ಹೇಳಬಹುದಾಗಿದೆ.

ಸನ್ ಟಿ.ವಿ ಪ್ರವರ್ತಕರಾದ ಮಾರನ್ ಸಹೋದರರು ಎಸಗಿದ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಸಿಬಿಐ ಸೇರಿದಂತೆ ವಿವಿಧ ತನಿಖೆಗಳು ನಡೆಯುತ್ತಿರುವುದರಿಂದ ಸನ್ ಟಿ.ವಿಗೆ ಭದ್ರತಾ ಅನುಮತಿ ನೀಡಲು ಕೇಂದ್ರ ಗೃಹ ಸಚಿವಾಲಯವು ನಿರಾಕರಿಸಿರುವುದು ಕಳವಳಕಾರಿ ಸಂಗತಿಯಾಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಗೃಹ ಸಚಿವಾಲಯ ತಳೆದಿರುವ ನಿಲುವಿಗೆ ವ್ಯತಿರಿಕ್ತವಾದ ಧೋರಣೆ ತಳೆದಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮನವಿ ಮೇರೆಗೆ ವಿವಾದದ ಕುರಿತು ಅಭಿಪ್ರಾಯ ನೀಡಿರುವ ಅಟಾರ್ನಿ ಜನರಲ್‌ (ಕೇಂದ್ರ ಸರ್ಕಾರದ ಮುಖ್ಯ ಕಾನೂನು ಸಲಹೆಗಾರ) ಮುಕುಲ್‌ ರೋಹಟಗಿ ಅವರು, ಗೃಹ ಸಚಿವಾಲಯ ತಳೆದಿರುವ ನಿಲುವು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪ್ರಧಾನಿ ಕಚೇರಿಯು ಗೃಹ ಸಚಿವಾಲಯದ ಬೆಂಬಲಕ್ಕೆ ನಿಂತಿದೆ. ವಿವಾದಕ್ಕೆ ಸಂಬಂಧಿಸಿದಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಅಟಾರ್ನಿ ಜನರಲ್ ಅವರ ಅಭಿಪ್ರಾಯ ಕೇಳಿರುವುದು ಕೇಂದ್ರ ಸರ್ಕಾರದಲ್ಲಿನ ಅನೇಕರಿಗೆ ಅಪಥ್ಯವಾಗಿದೆ.

ಭದ್ರತಾ ಅನುಮತಿ ನಿರಾಕರಿಸುವುದು ಎಂದರೆ `ಸನ್ ಟಿ.ವಿ ಒಡೆತನದ 33 ಟಿ.ವಿ ಚಾನೆಲ್‌ಗಳು ತಮ್ಮ ಪ್ರಸಾರ ಕಾರ್ಯವನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದರ್ಥ. ಇದರಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಪರೋಕ್ಷವಾಗಿ ಟಿ.ವಿ ಚಾನೆಲ್‌ಗಳನ್ನು ಆಶ್ರಯಿಸಿರುವ ಇತರ ಸಾವಿರಾರು ಜನರೂ ಬೀದಿಗೆ ಬೀಳಲಿದ್ದಾರೆ. ಟೆಲಿವಿಷನ್ ಕಾರ್ಯಕ್ರಮಗಳ ತಯಾರಿಕೆ, ಕೇಬಲ್ ಜಾಲ, ಐ.ಟಿ ಕಾರ್ಯಕ್ರಮ ಪ್ರಸಾರ ಮತ್ತಿತರ ಮೂಲ ಸೌಕರ್ಯಗಳಲ್ಲಿ ಹೂಡಿರುವ ಕೋಟ್ಯಂತರ ರೂಪಾಯಿಗಳ ಸಂಪತ್ತು ವ್ಯರ್ಥವಾಗುವ ಅಪಾಯ ಎದುರಾಗಿದೆ.

ಸನ್ ಟಿ.ವಿ ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿರುವ ಲಾಭದಾಯಕ ಸಂಸ್ಥೆಯಾಗಿದೆ. ಸಾವಿರಾರು ಜನಸಾಮಾನ್ಯರೂ ತಮ್ಮ ಉಳಿತಾಯದ ಹಣವನ್ನು ಸಂಸ್ಥೆಯ ಷೇರುಗಳಲ್ಲಿ ತೊಡಗಿಸಿದ್ದಾರೆ. ಸಂಸ್ಥೆಯ ಮೇಲೆ ಸಾಲದ ಹೊರೆ ಇದ್ದರೆ, ಅದನ್ನು ಬ್ಯಾಂಕ್‌ಗಳು ನೋಡಿಕೊಳ್ಳುತ್ತವೆ. ಸನ್ ಟಿ.ವಿ ಸಂಸ್ಥೆಯು ಲಾಭದಾಯಕವಾಗಿ ನಡೆಯುತ್ತಿದೆ. ವಿವಿಧ ಹಂತಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತೆರಿಗೆ ಪಾವತಿಸುತ್ತಿದೆ. ಪ್ರವರ್ತಕರ ವಿರುದ್ಧ ತನಿಖೆ ನಡೆಯುತ್ತಿರುವ ಒಂದೇ ಒಂದು ಕಾರಣಕ್ಕೆ ಸಂಸ್ಥೆಯ ಬಾಗಿಲನ್ನೇ ಮುಚ್ಚಲು ಮುಂದಾದರೆ ಭಾರಿ ಪ್ರಮಾಣದ ನಷ್ಟಕ್ಕೆ ಕಾರಣವಾಗಲಿದೆ.

ದ್ವೇಷ ಸಾಧಿಸುವ ಏಕೈಕ ಉದ್ದೇಶಕ್ಕೆ ತಮಗಾಗದವರ ಮುಖ ವಿರೂಪಗೊಳಿಸಲು ಹೋಗಿ ಮೂಗನ್ನೇ ಕತ್ತರಿಸುವ ಕೃತ್ಯಕ್ಕೆ ಇದನ್ನು ಹೋಲಿಸಬಹುದು. ಸರ್ಕಾರದ ಇಂತಹ ದುಡುಕಿನ ನಿರ್ಧಾರಗಳು ಇತರ ಸಂಸ್ಥೆಗಳಲ್ಲೂ ಭಾರಿ ನಷ್ಟಕ್ಕೆ ಕಾರಣವಾದ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ವಿಮಾನ ಯಾನ ಸಂಸ್ಥೆ ಕಿಂಗ್ ಫಿಷರ್ ಬಾಗಿಲು ಹಾಕಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಈ ಸಂಸ್ಥೆಯು ಒಂದು ನೂರು ವಿಮಾನಗಳು, ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ನಿರ್ವಹಣಾ ಸೌಲಭ್ಯ, ವಿಶಿಷ್ಟ ಎಂಜಿನಿಯರಿಂಗ್ ಸಾಧನ-ಸಲಕರಣೆಗಳು, ಹತ್ತು ಸಾವಿರದಷ್ಟು ಉದ್ಯೋಗಿಗಳನ್ನು ಹೊಂದಿತ್ತು. ಪ್ರತಿದಿನ 90 ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಅತಿದೊಡ್ಡ ವಿಮಾನ ಸಂಪರ್ಕ ಜಾಲವನ್ನೂ ಹೊಂದಿತ್ತು. ಸಣ್ಣ ನಗರಗಳಿಗೂ ಮೊದಲ ಬಾರಿಗೆ ವಿಮಾನ ಯಾನ ಸಂಪರ್ಕ ಕಲ್ಪಿಸಿದ್ದ ಏರ್ ಡೆಕ್ಕನ್ ಸಂಸ್ಥೆ ಜತೆಗಿನ ವಿಲೀನದ ಫಲವಾಗಿ 30 ಚಿಕ್ಕ ನಗರಗಳಿಗೂ ಕಿಂಗ್ ಫಿಷರ್ ವಿಮಾನಗಳ ಸಂಪರ್ಕ ಸೌಲಭ್ಯವು ವಿಸ್ತರಣೆಯಾಗಿತ್ತು.

ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿರುವ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಜೆಟ್ ಏರ್‌ವೇಸ್ ಮತ್ತು ಏರ್ ಇಂಡಿಯಾ ಸಂಸ್ಥೆಗಳ ವಿಮಾನಗಳಿಂದ ಈಗಲೂ ದೇಶದಲ್ಲಿ 45 ನಗರಗಳಿಗೆ ಮಾತ್ರ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ. ಈ ವಾಸ್ತವಾಂಶ ಗಮನಿಸಿದರೆ, ಕಿಂಗ್ ಫಿಷರ್ ಸಂಸ್ಥೆಯ ಸೇವೆಯು ಅದೆಷ್ಟು ವ್ಯಾಪಕವಾಗಿತ್ತು ಎನ್ನುವುದರ ಕಲ್ಪನೆ ಮೂಡುತ್ತದೆ. ಕಿಂಗ್ ಫಿಷರ್ ವಿಮಾನ ಯಾನ ಸಂಸ್ಥೆಯು ದೇಶ – ವಿದೇಶಗಳ ವಿಮಾನ ಪ್ರಯಾಣಿಕರಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು.

ಪ್ರವರ್ತಕರ ದೋಷಪೂರಿತ ಆಡಳಿತ ಮತ್ತು ನಿರ್ವಹಣಾ ತಪ್ಪುಗಳಿಂದ ಸಂಸ್ಥೆಯು ಅಲ್ಪಾವಧಿಯಲ್ಲಿಯೇ ಸಾಲದ ಸುಳಿಗೆ ಸಿಲುಕುವಂತಾಯಿತು. ಮಾಲೀಕರು ಇತರ ಉದ್ದಿಮೆಗಳಲ್ಲಿಯೂ ಗಮನ ಕೇಂದ್ರೀಕರಿಸಿದ್ದರಿಂದ ವಿಮಾನಯಾನ ವಹಿವಾಟಿಗೆ ಹೆಚ್ಚು ಗಮನ ಕೊಡದೆ ಹೋದರು. ನಿಯಂತ್ರಣಕ್ಕೆಸಿಗದ ವೆಚ್ಚಗಳು, ದೋಷಪೂರಿತ ವಹಿವಾಟಿನ ಸ್ವರೂಪದ ಜತೆಗೆ ವಾಯುಯಾನ ರಂಗಕ್ಕೆ ಸಂಬಂಧಿಸಿದ ಸರ್ಕಾರದ ಧೋರಣೆಗಳೂ ಸಂಸ್ಥೆ ಪ್ರವರ್ಧಮಾನಕ್ಕೆ ಬರಲು ಅಡ್ಡಿಯಾದವು.

ಕೇಂದ್ರ ಸರ್ಕಾರವು ವಿಮಾನಯಾನ ರಂಗವನ್ನು ಪ್ರಮುಖ ಮೂಲ ಸೌಕರ್ಯ ಎಂದು ಪರಿಗಣಿಸಿ ಉತ್ತೇಜನ ನೀಡುವ ಬದಲಿಗೆ ಇಂಧನದ ಮೇಲೆ ದುಬಾರಿ ತೆರಿಗೆ ವಿಧಿಸಿರುವುದು, ಕೈಗೆಟುಕದ ವಿಮಾನ ನಿಲ್ದಾಣಗಳ ನಿರ್ವಹಣಾ ವೆಚ್ಚ ಮತ್ತು ಖಾಸಗಿ ವಿಮಾನ ನಿಲ್ದಾಣಗಳ ಏಕಸ್ವಾಮ್ಯ ಮುಂತಾದ ಕಾರಣಗಳಿಂದ ಕಿಂಗ್ ಫಿಷರ್ ಸಂಸ್ಥೆಯು ಬಾಗಿಲು ಮುಚ್ಚಬೇಕಾಯಿತು. ಸಂಸ್ಥೆಯು ನಷ್ಟದಲ್ಲಿ ಸಿಲುಕಲು ಇತರ ವಿದ್ಯಮಾನಗಳ ಕೊಡುಗೆ ಇದ್ದರೂ, ಕೇಂದ್ರ ಸರ್ಕಾರ ಮತ್ತು ಸಂಸ್ಥೆಗೆ ಸಾಲ ನೀಡಿದ್ದ ಬ್ಯಾಂಕ್‌ಗಳು ಸಂಸ್ಥೆಯ ನಷ್ಟಕ್ಕೆ ಪ್ರವರ್ತಕರನ್ನೇ ದೋಷಿಯನ್ನಾಗಿ ಮಾಡಿದವು.

ಕೆಲವರು ಭಾವಿಸಿದಂತೆ ಪ್ರವರ್ತಕರ ಬೆಡಗಿನ ಜೀವನ ಶೈಲಿಯ ಜತೆ ತಳಕು ಹಾಕಿಕೊಂಡ ದುರಹಂಕಾರದ ವರ್ತನೆಯೂ ಸಂಸ್ಥೆ ಮುಳುಗುವುದಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಜತೆಗೆ ಸರ್ಕಾರದ ವಾಯುಯಾನ ನೀತಿಯೂ ಸಂಸ್ಥೆ ಅವನತಿಯತ್ತ ಸಾಗಲು ಕಾರಣವಾಯಿತು. ಪ್ರವರ್ತಕನೇ ತಪ್ಪಿತಸ್ಥ ಎಂದರೂ, ಸರ್ಕಾರ ಮತ್ತು ಬ್ಯಾಂಕ್‌ಗಳು ಆತನ ವಿರುದ್ಧ ಕ್ರಮ ಕೈಗೊಳ್ಳದೆ ವಿಮಾನಯಾನ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಂಡವು. ಇದರ ಫಲವಾಗಿ ಸಾವಿರಾರು ಜನರು ನಿರುದ್ಯೋಗಿಗಳಾದರು.

ವಿಮಾನಗಳು ಸೇರಿದಂತೆ ದುಬಾರಿ ಬೆಲೆಯ ಸಂಪತ್ತು ನಿರುಪಯುಕ್ತವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ವಿಮಾನಯಾನ ರಂಗದಲ್ಲಿನ ಪ್ರತಿಸ್ಪರ್ಧಿ ಸಂಸ್ಥೆಗಳು ಈ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡವು. ಕೆಎಫ್ಎ, ನಷ್ಟದ ಸುಳಿಗೆ ಸಿಲುಕಿ ತೊಂದರೆ ಆಹ್ವಾನಿಸಿಕೊಂಡಾಗ, ದಿವಾಳಿ ವಿರುದ್ಧ ರಕ್ಷಣೆ ದೊರೆಯದೆ ಹೋದಾಗ ಸರ್ಕಾರ ಮತ್ತು ಬ್ಯಾಂಕ್‌ಗಳು ತ್ವರಿತವಾಗಿ ಕಾರ್ಯೋನ್ಮುಖವಾಗಿ ಸಂಸ್ಥೆಯನ್ನು ಉಳಿಸಬಹುದಾಗಿತ್ತು.

ವಿಜಯ್ ಮಲ್ಯ ಅವರನ್ನು ಆಡಳಿತ ಮಂಡಳಿಯಿಂದ ಕಿತ್ತೊಗೆಯಬಹುದಾಗಿತ್ತು. ವಿಮಾನ ಯಾನ ಸಂಸ್ಥೆಯ ಸಾಲವನ್ನು ಷೇರುಗಳಾಗಿ ಪರಿವರ್ತಿಸಬಹುದಾಗಿತ್ತು. ಸಂಸ್ಥೆಯನ್ನು ವೃತ್ತಿನಿರತರ ವಶಕ್ಕೆ ಒಪ್ಪಿಸಿ ಮುಂದುವರೆಸ ಬಹುದಾಗಿತ್ತು. ನಿಗದಿತ ಸಮಯದವರೆಗೆ ವಿದೇಶಿ ವಿಮಾನಯಾನ ಸಂಸ್ಥೆಯ ನಿಯಂತ್ರಣಕ್ಕೂ ಒಪ್ಪಿಸಬಹುದಾಗಿತ್ತು. ಇಂತಹ ಯಾವುದೇ ಪ್ರಯತ್ನ ನಡೆಯಲಿಲ್ಲ.

ಒಂದು ವೇಳೆ ಇಂತಹ ಜಾಣತನದ ನಿರ್ಧಾರಗಳನ್ನು ಕೈಗೊಂಡಿದ್ದೇ ಆಗಿದ್ದರೆ, ಸಂಸ್ಥೆಯ ಉದ್ಯೋಗಿಗಳು ನಿರುದ್ಯೋಗಿಗಳಾಗುವುದನ್ನು ತಪ್ಪಿಸಬಹುದಾಗಿತ್ತು. ಅಮೂಲ್ಯ ಸಂಪತ್ತನ್ನು ರಕ್ಷಿಸಲೂ ಸಾಧ್ಯವಿತ್ತು. ಇದರಿಂದ ಪ್ರಯಾಣಿಕರಿಗೂ ಸಾಕಷ್ಟು ಪ್ರಯೋಜನಗಳು ಲಭಿಸುತ್ತಿದ್ದವು. ಬ್ಯಾಂಕ್‌ಗಳೂ ತಮ್ಮ ಸಾಲವನ್ನು ಪೂರ್ಣ ಅಥವಾ ಭಾಗಶಃ ರೂಪದಲ್ಲಾದರೂ ಮರಳಿ ಪಡೆಯಲು ಅವಕಾಶ ಇತ್ತು. ಇಂತಹ ಯಾವ ಸಾಧ್ಯತೆಯೂ ಕಾರ್ಯರೂಪಕ್ಕೆ ಬರಲಿಲ್ಲ.

ಸತ್ಯಂ ಕಂಪ್ಯೂಟರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತ್ವರಿತವಾಗಿ ಸ್ಪಂದಿಸಿ ದೂರದೃಷ್ಟಿ ಪ್ರದರ್ಶಿಸಿ ಸಂಸ್ಥೆ ಮತ್ತು ಸಾವಿರಾರು ಉದ್ಯೋಗಿಗಳನ್ನು ಉಳಿಸಿತು. ಈಗ ಸತ್ಯಂ ಸಂಸ್ಥೆ ಲಾಭದಾಯಕವಾಗಿ ಮುನ್ನಡೆದಿದೆ. ಹಲವು ವರ್ಷಗಳ ಹಿಂದೆ ಮಾರುತಿ ಕಾರ್‌ ತಯಾರಿಕಾ ಸಂಸ್ಥೆಯ ವಿಷಯದಲ್ಲಿಯೂ ಸರ್ಕಾರ ಜಾಣತನದಿಂದ ವರ್ತಿಸಿತು. ಸಂಸ್ಥೆಯ ಮೂಲ ಪ್ರವರ್ತಕ ಸಂಜಯ್ ಗಾಂಧಿ ಅವರು ಇದನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ವಿಫಲರಾದಾಗ ಸರ್ಕಾರವು ಇದನ್ನು ಸುಜುಕಿ ಸಂಸ್ಥೆಗೆ ಮಾರಾಟ ಮಾಡಿತು.

ಆನಂತರದ ವರ್ಷಗಳಲ್ಲಿ ದೇಶದಲ್ಲಿ ಆಟೊಮೊಬೈಲ್ ಕ್ರಾಂತಿಯೇ ನಡೆದು ಹೋಯಿತು. ಸದ್ಯಕ್ಕೆ ಮಾರುತಿ ಸುಜುಕಿ ಸಂಸ್ಥೆಯು ಈಗ ಕಾರು ಮತ್ತು ವಾಹನ ಎಂಜಿನ್‌ಗಳನ್ನು ರಫ್ತು ಮಾಡುವ ದೇಶದ ಅತಿದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಷೇರುಪೇಟೆಯಲ್ಲಿಯೂ ವಹಿವಾಟು ನಡೆಸುತ್ತಿದ್ದು, ಗರಿಷ್ಠ ಲಾಭದಾಯಕ ಉದ್ದಿಮೆಯಾಗಿದೆ. ಇದೇ ಬಗೆಯ ಕಾರ್ಯತಂತ್ರವನ್ನು ಕೇಂದ್ರ ಸರ್ಕಾರವು ಈಗ `ಸನ್ ಟಿ.ವಿ ಬಗ್ಗೆಯೂ ಅನ್ವಯಿಸಬೇಕಾಗಿದೆ.

ಸಂಸ್ಥೆಯ ವಹಿವಾಟಿಗೆ ಸಂಬಂಧಿಸಿದಂತೆ ಮಾರನ್ ಸೋದರರನ್ನೇ ಅಪರಾಧಿ ಎಂದು ಪರಿಗಣಿಸಿ ಸಂಸ್ಥೆಯ ಹಿತಾಸಕ್ತಿಯನ್ನೇ ಬಲಿಕೊಡುವ ತಪ್ಪು ಮಾಡಬಾರದು. ಮಾರನ್ ಸೋದರರೇ ಸನ್ ಟಿ.ವಿಯಲ್ಲ. ಇವರಿಬ್ಬರೂ ಇದರ ಮೂಲ ಪ್ರವರ್ತಕರಷ್ಟೆ. ಮತ್ತು ಬಹುಶಃ ಅತಿದೊಡ್ಡ ಷೇರು ಪಾಲುದಾರರೂ ಆಗಿದ್ದಾರೆ. ಹಾಗಂತ ಇವರೇ ಸಂಸ್ಥೆ ಎಂದು ಪರಿಗಣಿಸುವುದು ಸರಿಯಲ್ಲ. ಇವರಿಬ್ಬರು ಸನ್ ಟಿ.ವಿಯಲ್ಲಿ ಆಡಳಿತಾತ್ಮಕ ನಿಯಂತ್ರಣ ಅಧಿಕಾರ ಹೊಂದಿದ್ದರೂ, ಕಂಪೆನಿ ಕಾಯ್ದೆಯ ವ್ಯಾಖ್ಯಾನದ ಪ್ರಕಾರ ಸಂಸ್ಥೆಯ ಟ್ರಸ್ಟಿಗಳಷ್ಟೆ ಆಗಿದ್ದಾರೆ.

ಒಂದು ವೇಳೆ ಮಾರನ್ ಸೋದರರು ನಿಯಮಗಳನ್ನು ಉಲ್ಲಂಘಿಸಿದ್ದರೆ ಅವರ ವಿರುದ್ಧ ತನಿಖೆ ನಡೆಸಿ ವಿಚಾರಣೆಗೆ ಗುರಿಪಡಿಸಬಹುದು. ಈ ಮಧ್ಯೆ, ಕೇಂದ್ರ ಸರ್ಕಾರವು ಮಾರನ್ ಸೋದರರು ಮತ್ತು ಅವರಿಂದ ನಾಮಕರಣಗೊಂಡಿರುವ ನಿರ್ದೇಶಕರನ್ನು ಅಧಿಕಾರ ತೊರೆಯಲು ಕೇಳಿಕೊಳ್ಳಬಹುದು. ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯನ್ನು ಸರಿದಾರಿಗೆ ತರಲು ಅನುಸರಿಸಿದಂತೆ, ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಶುದ್ಧ ಹಸ್ತದ ಖ್ಯಾತನಾಮರನ್ನು ನಿರ್ದೇಶಕ ಮಂಡಳಿಗೆ ನೇಮಿಸಬೇಕು.

ಅಮೆರಿಕದಲ್ಲಿಯೂ ಖಾಸಗಿ ಸಂಸ್ಥೆಗಳಿಗೆ ಸರ್ಕಾರವು ಪರಿಹಾರ ನೀಡುವ, ದಿವಾಳಿ ಅಂಚಿನಲ್ಲಿ ಇರುವ ಖಾಸಗಿ ವಲಯದ ಉದ್ದಿಮೆಗಳ ಪುನಶ್ಚೇತನಕ್ಕೆ ನೆರವಾಗುವ ಪರಿಪಾಠ ಜಾರಿಯಲ್ಲಿ ಇದೆ. 2008ರಲ್ಲಿ ಉದ್ಭವಿಸಿದ್ದ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕದ ಅರ್ಥ ವ್ಯವಸ್ಥೆಯ ಸ್ಥಿರತೆಗೇ ಗಂಡಾಂತರ ಎದುರಾಗಿತ್ತು. ಫೋರ್ಡ್, ಜನರಲ್ ಮೋಟಾರ್ಸ್, ಎಐಜಿ ಸೇರಿದಂತೆ ನೂರಾರು ಖಾಸಗಿ ಉದ್ದಿಮೆ ಸಂಸ್ಥೆಗಳು ದಿವಾಳಿ ಅಂಚಿಗೆ ತಲುಪಿದ್ದವು.

ಅವುಗಳನ್ನು ರಕ್ಷಿಸಿ, ಉದ್ಯೋಗ ಅವಕಾಶಗಳು ಕಳೆದು ಹೋಗದಂತೆ ಎಚ್ಚರವಹಿಸಲು ಸರ್ಕಾರವೇ ಅವುಗಳ ಆಡಳಿತ ಹೊಣೆ ಹೊತ್ತುಕೊಂಡಿತು. ಉದ್ದಿಮೆ ಸಂಸ್ಥೆಗಳು ಪುನಶ್ಚೇತನದ ಹಾದಿಗೆ ಮರಳುತ್ತಿದ್ದಂತೆ ಅವುಗಳ ಆಡಳಿತವನ್ನು ಮತ್ತೆ ಖಾಸಗಿಯವರ ವಶಕ್ಕೆ ಒಪ್ಪಿಸಿತು. ಕೇಂದ್ರ ಸರ್ಕಾರವು ಸನ್ ಟಿ.ವಿ ವಿರುದ್ಧ ಕೇಳಿ ಬಂದಿರುವ ಹಣಕಾಸು ಅವ್ಯವಹಾರ ಆರೋಪಗಳ ಬಗ್ಗೆ ಲೆಕ್ಕಪತ್ರ ತಪಾಸಣೆ ಮತ್ತು ತನಿಖೆ ನಡೆಸಲು ಸೂಚಿಸಬಹುದಾಗಿದೆ.

ಪ್ರತಿಪಕ್ಷಗಳು ಈ ವಿವಾದವನ್ನು ರಾಜಕೀಯಗೊಳಿಸಲು ಅವಕಾಶ ಮಾಡಿಕೊಡದಿರಲೂ ಸೂಕ್ರ ಕ್ರಮ ಕೈಗೊಳ್ಳಬೇಕು. ಮಾರನ್ ಸೋದರರು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರಿಗೆ ಹತ್ತಿರದ ಸಂಬಂಧಿಕರಾಗಿರುವುದರಿಂದ ಈ ವಿವಾದಕ್ಕೆ ರಾಜಕೀಯದ ಕೆಸರೂ ಅಂಟಿಕೊಂಡಿರುವುದು ಸುಳ್ಳಲ್ಲ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಮತ್ತು ಯುಪಿಎ ಸರ್ಕಾರದಲ್ಲಿ ದಯಾನಿಧಿ ಮಾರನ್ ಅವರು ಸಚಿವರಾಗಿದ್ದರು.

ಒಂದು ವೇಳೆ ಕೇಂದ್ರ ಸರ್ಕಾರವು, ಸನ್ ಟಿ.ವಿ ಪ್ರವರ್ತಕರಿಗೆ ಭದ್ರತಾ ಅನುಮತಿ ನೀಡದಿರಲು ಅಂತಿಮ ತೀರ್ಮಾನಕ್ಕೆ ಬಂದರೆ, `ಸನ್ ಟಿ.ವಿ ಉಳಿಸಲು ಮತ್ತು ಸಾವಿರಾರು ಉದ್ಯೋಗಿಗಳ ಹಿತ ರಕ್ಷಿಸಲು ಆಡಳಿತ ಮಂಡಳಿ ಪುನರ್ ರಚಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಸಂಸ್ಥೆಯ ಪ್ರವರ್ತಕರ ಪಾಪಗಳಿಗೆ ಉದ್ಯೋಗಿಗಳನ್ನು ಶಿಕ್ಷಿಸಲು ಮಾತ್ರ ಮುಂದಾಗಬಾರದು. ಒಂದು ವೇಳೆ ಪ್ರವರ್ತಕರು ತಪ್ಪು ಮಾಡಿದ್ದರೂ, ಅದಕ್ಕೆ ಉದ್ಯೋಗಿಗಳು ಹೊಣೆಯಲ್ಲ. ಅವೆರಡೂ ಬೇರೆ, ಬೇರೆ ಎಂದು ಭಾವಿಸಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಂತಿಮ ನಿರ್ಧಾರಕ್ಕೆ ಬರಬೇಕಾಗಿದೆ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT