ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ: ಘೋಷಣೆಗೆ ಸೀಮಿತ?

Last Updated 1 ಆಗಸ್ಟ್ 2018, 9:38 IST
ಅಕ್ಷರ ಗಾತ್ರ

ಮಹಾತ್ಮಾ ಗಾಂಧಿ ಅವರು ‘ಸ್ವಚ್ಛ ಭಾರತ್‌’ ಬಗ್ಗೆ ಮೊದಲ ಬಾರಿಗೆ ದೇಶಬಾಂಧವರಲ್ಲಿ ಅರಿವು ಮೂಡಿಸಲು ಯತ್ನಿಸಿದ್ದರು. ಸ್ವಾತಂತ್ರ್ಯಾನಂತರ ದೇಶದ ಯಾವುದೇ ಪ್ರಧಾನಿ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಸ್ವಚ್ಛತೆಯನ್ನು ರಾಷ್ಟ್ರೀಯ ಕಾರ್ಯ ಸೂಚಿಯನ್ನಾಗಿ ಪರಿಗಣಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾದ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಮೊದಲಿಗರಾಗಿದ್ದಾರೆ.

‘ಸ್ವಚ್ಛ ಭಾರತ್’ ಉದ್ದೇಶಕ್ಕೆ ಸ್ವಾತಂತ್ರ್ಯಾನಂತರ ದೊಡ್ಡ ಪ್ರಮಾಣದ ಅನುದಾನ ನಿಗದಿ ಮಾಡಿರುವುದು ಕೂಡ ಇದೇ ಮೊದಲ ಬಾರಿಯಾಗಿದೆ. ಹೀಗಾಗಿ ಮೋದಿ ಅವರ ಸ್ವಚ್ಛತಾ ಆಂದೋಲನವು ಪ್ರಶಂಸಾರ್ಹವಾಗಿದೆ. ಅವರ ಸದುದ್ದೇಶದಲ್ಲಿ ಅವರ ಕಟ್ಟಾ ವಿರೋಧಿಗಳೂ ಹುಳುಕು ಕಂಡು ಹಿಡಿಯಲಾರರು. ಪ್ರಯತ್ನಗಳನ್ನು ಪ್ರಶ್ನಿಸಲಾರರು. ವಾಸ್ತವ ನೆಲೆಯಲ್ಲಿ ವಿಶ್ಲೇಷಿಸಿದಾಗ, ಈ ಪ್ರಚಾರ ಆಂದೋಲನವು ನಿರೀಕ್ಷಿತ ಫಲಿತಾಂಶ ನೀಡುತ್ತಿದೆಯೇ ಮತ್ತು ‘ಸ್ವಚ್ಛ ಭಾರತ್’ ಪರಿಕಲ್ಪನೆ ನಿಜವಾಗಲಿದೆಯೇ? ಎಂದು ನಮ್ಮಷ್ಟಕ್ಕೆ ನಾವು ಪ್ರಶ್ನಿಸಿಕೊಂಡಾಗ ಸಿಗುವ ಉತ್ತರ ನಿರಾಶಾದಾಯಕ.

ಇದೇ ಬಗೆಯ ಈ ಹಿಂದಿನ ಪ್ರಚಾರ ಆಂದೋಲನಗಳಾದ ಇಂದಿರಾ ಗಾಂಧಿ ಅವರ `‘ಗರೀಬಿ ಹಟಾವೊ’ ಇಲ್ಲಿ ನೆನಪಿಗೆ ಬರುತ್ತದೆ. ಮೋದಿ ಅವರು ಸ್ವತಃ ಸ್ವಚ್ಛತಾ ಆಂದೋಲನಕ್ಕೆ ಬೆನ್ನೆಲುಬಾಗಿ ನಿಂತಿದ್ದರೂ ನಿರೀಕ್ಷಿಸಿದ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.

ಪ್ರಚಾರ ಪ್ರಖರತೆಯ ಫಲಶ್ರುತಿ ಬಗ್ಗೆ ಸ್ವತಂತ್ರವಾಗಿ ತಪಾಸಣೆ ನಡೆಸುವುದು ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ವಿವೇಕಯುತ ಕ್ರಮ. ವಾಸ್ತವ ಚಿತ್ರಣವನ್ನು ಪ್ರಾಮಾಣಿಕವಾಗಿ ಸ್ವೀಕರಿಸುವುದೂ ಮುಖ್ಯವಾಗುತ್ತದೆ. ಮೋದಿ ಅವರು ಆಷಾಢಭೂತಿತನ, ಸ್ವಪ್ರತಿಷ್ಠೆ ತೋರದೆ, ಟಿ.ವಿ. ಚಾನೆಲ್‌ಗಳಲ್ಲಿನ ತಮ್ಮ ಭಟ್ಟಂಗಿಗಳ ಹಳಸಲು ಮಾತಿಗೆ ಮರುಳಾಗದೇ ವಸ್ತುಸ್ಥಿತಿಯನ್ನು ಎದುರಿಸಬೇಕಾಗಿದೆ.

ಪಕ್ಷದ ಅಭಿಮಾನಿಗಳು ನಡೆಸುವ ಅಂಧಾಭಿಮಾನದ ಪ್ರಚಾರಕ್ಕೆ ವಿಶ್ವಾಸದ ನೆಲಗಟ್ಟು ಇರಲಾರದು. ವಿವಿಧ ಸಚಿವಾಲಯ ಮತ್ತು ಇಲಾಖೆಗಳು ಕೂಡ ಪ್ರಧಾನಿ ಅವರನ್ನು ಸಂಪ್ರೀತಗೊಳಿಸಲು ಏನೆಲ್ಲಾ ಕಸರತ್ತು ಮಾಡುತ್ತಿವೆ. ‘ಸ್ವಚ್ಛ ಭಾರತ್’ ಘೋಷಣೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಒಂದು ವರ್ಷ ಕಳೆದು ಹೋಗುತ್ತಿದ್ದರೂ, ಭಾರಿ ಬದ ಲಾವಣೆ ಏನೂ ಕಂಡುಬಂದಿಲ್ಲ. ಗಂಗಾ ಸೇರಿದಂತೆ ಎಲ್ಲ ನದಿಗಳ ಮಾಲಿನ್ಯ ಪ್ರಮಾಣ ಹೆಚ್ಚುತ್ತಲೇ ಇದೆ. ತನ್ನದೇ ಕೊಳಚೆಯಲ್ಲಿ ಸಿಲುಕಿರುವ ದೇಶಕ್ಕೆ ಉಸಿರುಗಟ್ಟಿದಂತಾಗಿದೆ. ಮೋದಿ ಅವರ `‘ಸ್ವಚ್ಛ ಭಾರತ್’ ಕನಸು ನನಸಾಗಲು ಈಗ ಕೇವಲ ನಾಲ್ಕು ವರ್ಷಗಳಷ್ಟೇ ಬಾಕಿ ಉಳಿದಿವೆ.

ಈ ಸ್ವಚ್ಛತಾ ಆಂದೋಲನ ಕಾರ್ಯಗತಗೊಳ್ಳುವುದಕ್ಕೆ ಮೂರು ಅಯಾಮಗಳಿದ್ದು, ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವ ಇದೆ. ಮೊದಲನೆಯದಾಗಿ ಸಂಸ್ಕೃತಿ. ಭಾರತೀಯರಲ್ಲಿ ಬಹುತೇಕರು ಗ್ರಾಮ, ಪಟ್ಟಣ, ನಗರಗಳ ಬಯಲು ಪ್ರದೇಶಗಳನ್ನು ಯಾವುದೇ ನಾಚಿಕೆ ಇಲ್ಲದೇ ಬಹಿರ್ದೆಸೆಗೆ ಬಳಸಿಕೊಳ್ಳುತ್ತಾರೆ. ನಗರಗಳ ಸುಸಂಸ್ಕೃತ ನಾಗರಿಕರೂ ಸಾರ್ವಜನಿಕ ಸ್ಥಳಗಳಲ್ಲಿ ಎಗ್ಗಿಲ್ಲದೇ ಮೂತ್ರ ನಿಸರ್ಜನೆ ಮಾಡುತ್ತಾರೆ. ಇದಕ್ಕೆ ಬೆಂಗಳೂರಿನ ಶ್ವಾಸಕೋಶಗಳಲ್ಲಿ ಒಂದಾಗಿರುವ ಕಬ್ಬನ್ ಉದ್ಯಾನ ಕೂಡ ಹೊರತಲ್ಲ. ಜಾಗಿಂಗ್ ಬಟ್ಟೆ ತೊಟ್ಟ, ಸ್ಮಾರ್ಟ್ ಫೋನ್ ಹೊಂದಿದ ಸುಶಿಕ್ಷಿತರೂ ಮರಗಳ ಮರೆಯಲ್ಲಿ ನಿಸರ್ಗದ ಕರೆಗೆ ಓಗೊಡುತ್ತಾರೆ. ಹತ್ತಿರದಲ್ಲಿ ಮಹಿಳೆಯರು ಹಾದು ಹೋಗುತ್ತಿದ್ದರೂ ಅವರಿಗೆ ನಾಚಿಕೆ ಎನಿಸುವುದಿಲ್ಲ.

ಹಳ್ಳಿಗರು ತಮ್ಮ ಮನೆಗಳ ಹಿತ್ತಲನ್ನೇ ತಮ್ಮ ನಿತ್ಯಕರ್ಮಗಳಿಗೆ ಬಳಸಿಕೊಳ್ಳುವುದರಿಂದ ಕೆಲಮಟ್ಟಿಗೆ ಖಾಸಗಿತನ ದೊರೆತರೂ, ಅದು ಆರೋಗ್ಯಕರವಲ್ಲ. ಮಹಿಳೆಯರು ಬಹಿರ್ದೆಸೆಗೆ ಬಯಲನ್ನೇ ನೆಚ್ಚಿಕೊಳ್ಳುವುದು ಅವರ ಘನತೆಗೂ ಕುಂದು ತರುತ್ತದೆ. ಆರ್ಥಿಕವಾಗಿ ಅಷ್ಟಿಷ್ಟು ಸಶಕ್ತರಾದವರು ಮಾತ್ರ ಶೌಚಾಲಯ ನಿರ್ಮಿಸಿ ಕೊಂಡಿರುತ್ತಾರೆ. ಬಡವರು ಮಾತ್ರ ವಾಸಸ್ಥಳದಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಶೌಚಾಲಯ ಸೌಲಭ್ಯಕ್ಕೆ ಎರವಾಗಿದ್ದಾರೆ. ಬಡತನ ಮತ್ತು ಶಿಕ್ಷಣದ ಕೊರತೆಯಿಂದಾಗಿ ಬಡವರು ಅವಮಾನಕ್ಕೂ ಗುರಿಯಾಗಿದ್ದಾರೆ. ಮಾನವನ ಮೂಲ ಅಗತ್ಯವಾದ ನಿಸರ್ಗದ ಕರೆಗೆ ಓಗೊಡಲು ಬಯಲಿಗೆ ಹೋಗುವ ಮಹಿಳೆಯರು ಅತ್ಯಾಚಾರಕ್ಕೆ ಗುರಿಯಾಗುತ್ತಿ ದ್ದಾರೆ. ಸಣ್ಣ ಪಟ್ಟಣಗಳಲ್ಲಿ, ನಗರಗಳ ಕೊಳೆಗೇರಿಗಳಲ್ಲಿನ ಪರಿಸ್ಥಿತಿ ಇನ್ನಷ್ಟು ವಿಷಮಗೊಂಡಿದೆ. ಕೊಳೆಗೇರಿ ನಿವಾಸಿಗಳೂ ಬಹಿರ್ದೆಸೆಗೆ ಬಯಲನ್ನೇ ನೆಚ್ಚಿಕೊಳ್ಳಬೇಕಾಗಿದೆ.

ಸ್ವಚ್ಛತಾ ಆಂದೋಲನವು ಗರಿಷ್ಠ ಶ್ರಮ ಬಯಸುತ್ತಿದ್ದರೂ ಅದನ್ನು ಹಗುರವಾಗಿ ಪರಿಗಣಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹಂಚಿಕೆ ಮಾಡುವುದು ತುಂಬ ಸುಲಭ. 20ರಿಂದ 30 ಕೋಟಿಗಿಂತಲೂ ಹೆಚ್ಚು ಶೌಚಾಲಯಗಳ ಅಗತ್ಯ ಇರುವಾಗ ಕೆಲ ಸಾವಿರ ಶೌ ಚಾಲಯಗಳನ್ನು ನಿರ್ಮಿಸುವ ಭರವಸೆ, ಸಾಗರದಲ್ಲಿನ ಒಂದು ಹನಿಗೆ ಸಮಾನ. ಶೌಚಾಲಯ ಗಳ ಅಗತ್ಯ ಕುರಿತು ಖಚಿತ ಅಂಕಿ ಅಂಶಗಳು ಲಭ್ಯ ಇಲ್ಲ.

ಸರ್ಕಾರದ ಕಾರ್ಯಸೂಚಿಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದು ಮತ್ತು ಅನುದಾನದ ಸದ್ಬಳಕೆ ಮೇಲೆ ನಿಗಾ ಇರಿಸುವುದು ಸವಾಲಿನ ಕೆಲಸ. ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ರಾಜ್ಯ ಸರ್ಕಾರಗಳ ಮೂಲಕ ಕಾರ್ಯಗತಗೊಳಿಸುವಾಗ ಹಣ ಸೋರಿಕೆಯಾಗುವ ಸಾಧ್ಯತೆಗಳೇ ಹೆಚ್ಚು. ಬಹುತೇಕ ಸಂದರ್ಭಗಳಲ್ಲಿ ಜನೋಪಯೋಗಿ ಕಾರ್ಯಕ್ರಮಗಳ ಹಣವು ರಾಜಕಾರಣಿಗಳು, ಅವರ ಭಟ್ಟಂಗಿಗಳು, ಮಧ್ಯವರ್ತಿಗಳು ಮತ್ತು ಅಧಿಕಾರಿಗಳ ಜೇಬು ಭರ್ತಿಗೆ ಹರಿದು ಹೋಗುತ್ತದೆ. ತೆರೆದ ರಸ್ತೆ ಮತ್ತು ಬೀದಿಗಳಲ್ಲಿ ಒಳಚರಂಡಿ ನೀರು ಹರಿಯುವಿಕೆ, ನಗರಗಳ ಕಸವನ್ನು ಹಳ್ಳಿಗಳ ಹೊರ ವಲಯದಲ್ಲಿ ಸುರಿಯುವುದು ಕೂಡ ಹೊಸ ಸವಾಲಾಗಿ ಪರಿಣಮಿಸಿದೆ. ಭಾರತದ ಆರ್ಥಿಕ ಬೆಳವಣಿಗೆಗೆ ಮತ್ತು ಅಭಿವೃದ್ಧಿ ಹೊಂದಿದ ಆಧುನಿಕ ಸಮಾಜಕ್ಕೆ ಸೇರ್ಪಡೆಯಾಗಲು ಇದು ಅಡ್ಡಿಯಾಗಿ ಪರಿಣಮಿಸಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು.

ಜೈಸಲ್ಮೇರ್‌ನ ಹಳೆಯ ನಗರಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ ನಾವೆಲ್ಲ ಒಳಚರಂಡಿ ನೀರನ್ನು ದಾಟಿಕೊಂಡೇ ಹೋಗಬೇಕಾಯಿತು. ಆಗ್ರಾದ ತಾಜ್‌ಮಹಲ್‌ ಸಮೀಪದ ಅರ್ಧ ಕಿಲೋಮೀಟರ್‌ ರಸ್ತೆಯೂ ಕೊಚ್ಚೆಯಿಂದ ತುಂಬಿದೆ. ಬೆಂಗಳೂರಿನ ಎಂ.ಜಿ. ರಸ್ತೆ, ವಿಠಲಮಲ್ಯ ರಸ್ತೆ, ಚರ್ಚ್‌ ರೋಡ್‌ ಮುಂತಾದ ಕಡೆಗಳಲ್ಲಿ ಚರಂಡಿ ನೀರು ಮ್ಯಾನ್‌ಹೋಲ್‌ಗಳಿಂದ ಹೊರಚೆಲ್ಲಿ ರಸ್ತೆ ಮೇಲೆಯೇ ಹರಿಯುತ್ತಿರುವುದು, ರಸ್ತೆ ಬದಿಯಲ್ಲಿಯೇ ಕಸದ ರಾಶಿ ಇರುವುದು ಮತ್ತು ಅಲ್ಲೆಲ್ಲ ಬೀದಿ ನಾಯಿಗಳ ಕಾಟ ಸಾಮಾನ್ಯ ನೋಟವಾಗಿದೆ. ದೆಹಲಿಯ ಪ್ರತಿಷ್ಠಿತ ಕನ್ಹಾಟ್‌ಪ್ಲೇಸ್‌ನಲ್ಲಿನ ಪಾರಂಪರಿಕ ಭವ್ಯ ಕಟ್ಟಡಗಳ ಸುತ್ತಮುತ್ತ ಎಲ್ಲಿ ನೋಡಿದರತ್ತ ಕಸ ಕಣ್ಣಿಗೆ ರಾಚುತ್ತದೆ. ಸುಂದರ ಕಟ್ಟಡಗಳ ಮೂಲೆಗಳಲ್ಲಿ ಪಾನ್‌ ಮತ್ತು ಗುಟ್ಕಾ ತಿಂದು ಉಗಿದ ಬಣ್ಣದ ಕಲೆಗಳು ವಾಕರಿಕೆ ಮೂಡಿಸುತ್ತವೆ.

ನಗರಗಳಲ್ಲಿ ಕಾಣಲು ಸಿಗುವ ಇಂತಹ ಕೊಳೆಯನ್ನೆಲ್ಲ ಸ್ವಚ್ಛಗೊಳಿಸುವ ಗುರುತರ ಹೊಣೆಗಾರಿಕೆಯು ಪಾಲಿಕೆ ಮತ್ತು ಮುನಿಸಿಪಾಲಿಟಿಗಳ ಮೇಲೆ ಇದೆ.  ಈ ಎಲ್ಲ ಸ್ಥಳೀಯ ಸಂಸ್ಥೆಗಳು ಭ್ರಷ್ಟಾಚಾರದ ದೊಡ್ಡ ಅಡ್ಡೆಗಳಾಗಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ ಆಗಿದೆ. ದಕ್ಷ ಆಡಳಿತದ ಸ್ವರೂಪದಲ್ಲಿ ಬದಲಾವಣೆ ಇಲ್ಲದೇ ಮತ್ತು ಸ್ವಯಂ ಸೇವಾ ಸಂಘಟನೆಗಳ ಹೋರಾಟ ನಡೆಯದಿದ್ದರೆ ಇಲ್ಲಿ ಯಾವುದೇ ಬದಲಾವಣೆಯನ್ನು ನಿರೀಕ್ಷಿಸಲಿಕ್ಕಾಗದು.

ಮಹಾನಗರ ಪಾಲಿಕೆಗಳಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿಯನ್ನು ಕೆಲವೇ ಕೆಲವರು (ದುಷ್ಟಕೂಟ) ನಿಯಂತ್ರಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಾಲಿಕೆ ಸದಸ್ಯರು ಬೇನಾಮಿ ಹೆಸರಿನಲ್ಲಿ ತಮ್ಮ ಭಟ್ಟಂಗಿಗಳ ಮೂಲಕ ಕಸ ವಿಲೇವಾರಿಯ ಗುತ್ತಿಗೆಯನ್ನು ಪಡೆದುಕೊಂಡಿರುತ್ತಾರೆ. ನಗರಗಳು ಬೇಕಾಬಿಟ್ಟಿಯಾಗಿ ಅಪಾಯಕಾರಿ ರೀತಿಯಲ್ಲಿ ಬೆಳೆಯುತ್ತಿದ್ದು, ಪಟ್ಟಣ, ನಗರಗಳನ್ನು ಯೋಜಿತ ರೀತಿಯಲ್ಲಿ ವಿನ್ಯಾಸ ಮಾಡುವಲ್ಲಿ ವಿಫಲರಾಗುತ್ತಿದ್ದೇವೆ. ಮಳೆ ನೀರು ಮತ್ತು ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಹಣ ತೊಡಗಿಸಲಾಗುತ್ತಿಲ್ಲ.

ಮೋದಿ ಅವರ ಪಟಾಲಂ ಈ ಸಮಸ್ಯೆಯನ್ನು ಪರಿಹರಿಸಲು ವಿಭಿನ್ನ ರೀತಿಯಲ್ಲಿ ಆಲೋಚಿಸದಿದ್ದರೆ, ಅದು ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷಕ್ಕೆ ತಿರುಗುಬಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಬಯಲು ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗುವುದು, ಸಾರ್ವಜನಿಕ ಪ್ರದೇಶದಲ್ಲಿ ನಿಸರ್ಗ ಕರೆಗೆ ಓಗೊಡುವುದು ನಾಚಿಕೆಗೇಡಿನ ಸಂಗತಿಯಾಗಿದ್ದರೂ ಅಂತಿಮವಾಗಿ ಅದು ಮಣ್ಣಿನಲ್ಲಿ ಕೊಳೆತು ಹೋಗುವಂತಹದ್ದು ಮತ್ತು ಒಂದರ್ಥದಲ್ಲಿ ‘ಪರಿಸರ ಸ್ನೇಹಿ’ಯೂ ಆಗಿರುತ್ತದೆ. ಹಳ್ಳಿ ಮತ್ತು ನಗರಗಳಲ್ಲಿ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ಮಣ್ಣಿನಲ್ಲಿ ಕೊಳೆತು ಹೋಗದ ಪ್ಲಾಸ್ಟಿಕ್‌ ಕಸವು ನಮ್ಮ ಪರಿಸರಕ್ಕೆ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಕೊಳ್ಳುಬಾಕ ಸಂಸ್ಕೃತಿಯ ಫಲವಾಗಿ ಪ್ಲಾಸ್ಟಿಕ್‌ ಮತ್ತು ಟೆಟ್ರಾಪ್ಯಾಕ್‌ಗಳ ಬಳಕೆ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ.

ಪ್ಲಾಸ್ಟಿಕ್‌ ಮತ್ತು ಟೆಟ್ರಾಪ್ಯಾಕ್‌ಗಳು ಒಳಚರಂಡಿ ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗುವುದನ್ನು ತಡೆಯುತ್ತಿವೆ. ಇದರಿಂದ ಕೊಚ್ಚೆ ಒಂದೆಡೆಯೇ ಸಂಗ್ರಹಗೊಂಡು ಮಲೇರಿಯಾ, ಡೆಂಗ್ಯೂ, ಎಚ್‌1ಎನ್‌1 ಮತ್ತಿತರ ಕಾಯಿಲೆಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಮೋದಿ ನೇತೃತ್ವದ ಸರ್ಕಾರವು ಆರ್ಥಿಕ ಸುಧಾರಣಾ ಕ್ರಮಗಳ ಜಾರಿಗೆ ಪಣತೊಟ್ಟರೂ, ಮಹಾನಗರಗಳು ಮತ್ತು ಪ್ರವಾಸಿ ತಾಣಗಳಲ್ಲಿನ ಕೊಳಕು, ವಿದೇಶಿ ಪ್ರವಾಸಿಗರನ್ನು ನಿರುತ್ಸಾಹಗೊಳಿಸುವುದಲ್ಲದೇ, ವಿದೇಶ ನೇರ ಬಂಡವಾಳ ಹೂಡಿಕೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ.

ವಾಯುಮಾಲಿನ್ಯ, ನದಿಗಳಿಗೆ ಹರಿದು ಹೋಗುವ ಅಪಾಯಕಾರಿಯಾದ ರಾಸಾಯನಿಕಗಳ ತ್ಯಾಜ್ಯವು ನಮ್ಮ ಜಲಮೂಲಗಳನ್ನು ಕಲುಷಿತಗೊಳಿಸುತ್ತಿದ್ದು, ಭೂಮಿಯ ಫಲವತ್ತತೆಯನ್ನು ವ್ಯಾಪಕವಾಗಿ ನಾಶ ಮಾಡುತ್ತಿದೆ.

ಗಂಗಾ ನದಿಯ ಶುದ್ಧೀಕರಣ ಬರೀ ಸಾಂಕೇತಿಕ ಮತ್ತು ರೂಪಕವಷ್ಟೇ ಅಲ್ಲ. ಈ ನದಿಯು ದೇಶದ ಶೇ 30ರಷ್ಟು ಜನಸಂಖ್ಯೆಯ ಜೀವನಾಡಿಯಾಗಿದೆ. ಕೈಗಾರಿಕೀಕರಣವು ನಮ್ಮೆಲ್ಲ ನದಿಗಳನ್ನು ಕಲುಷಿತಗೊಳಿಸಿದ್ದು, ಅರಣ್ಯ ಮತ್ತು ಕೃಷಿ ಯೋಗ್ಯ ಭೂಮಿಯನ್ನೂ ನಾಶಪಡಿಸುತ್ತಿದೆ. ನದಿಗಳು ಮತ್ತು ಭೂಮಿಗೆ ಸೇರ್ಪಡೆಯಾಗುತ್ತಿರುವ ಕೈಗಾರಿಕೆಗಳ ತ್ಯಾಜ್ಯದ ವಿಷವು ಭಾರತದ ನಾಗರಿಕತೆಯ ತಳಹದಿಯನ್ನೇ ನಾಶಪಡಿಸುತ್ತಿದೆ. ಈ ಎಲ್ಲ ಅಪಾಯಕಾರಿ ವಿದ್ಯಮಾನಗಳು ಕೇಂದ್ರ ಸರ್ಕಾರದ ಸುಪರ್ದಿಗೆ ಬರುವುದಿಲ್ಲ. ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳೇ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.

ಈ ಎಲ್ಲ ಸಂಗತಿಗಳನ್ನು ಪ್ರಧಾನಿ ಮೋದಿ ಅವರು ಹೇಗೆ ನಿಭಾಯಿಸುವರು ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ರಾಜ್ಯಗಳಲ್ಲಿ ಮತ್ತು ಸ್ಥಳೀಯ ಪೌರ ಸಂಸ್ಥೆಗಳಲ್ಲಿ ಬಿಜೆಪಿ ಅಥವಾ ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಪ್ರತಿಯೊಂದು ಪಕ್ಷವೂ ಸಾರ್ವಜನಿಕರ ಒಳಿತಿಗೆ ಮೀಸಲಿಟ್ಟ ಹಣವನ್ನು ಕಬಳಿಸಲು ಪೈಪೋಟಿ ನಡೆಸುತ್ತದೆ. ವಿಶ್ವಾಸಾರ್ಹತೆ ಮತ್ತು ಉತ್ತದಾಯಿತ್ವದ ಬಗ್ಗೆ ರಾಜಕೀಯ ಪಕ್ಷಗಳು ತಲೆಕೆಡಿಸಿಕೊಳ್ಳುವುದೇ ಇಲ್ಲ.

ಇನ್ನೊಂದೆಡೆ, ಉದ್ದಿಮೆ ಸಂಸ್ಥೆಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಮೋದಿ ಅವರ ‘ಸ್ವಚ್ಛ ಭಾರತ್‌’ ಪ್ರಚಾರ ಆಂದೋಲನವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಸ್ಪರ್ಧೆಗೆ ಇಳಿದಿವೆ. ಡಿಟರ್‌ಜೆಂಟ್‌, ಸೋಪ್‌, ಬಾಟಲಿಯಲ್ಲಿನ ನೀರು ಮುಂತಾದವುಗಳ ಬಳಕೆ ಉತ್ತೇಜಿಸಲು ಮೋದಿ ಅವರನ್ನೇ ತಮ್ಮ ಉತ್ಪನ್ನಗಳ ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಂಡಿವೆ. ಈ ಉತ್ಪನ್ನಗಳಲ್ಲಿನ ರಾಸಾಯನಿಕಗಳು, ಪ್ಲಾಸ್ಟಿಕ್‌ಗಳಲ್ಲದೇ ಕುರುಕಲು ತಿಂಡಿಗಳ ಪ್ಯಾಕೆಟ್‌ಗಳು ದೇಶದಾದ್ಯಂತ ನದಿ ತೊರೆಗಳನ್ನು ವಿಷಪೂರಿತಗೊಳಿಸುವುದರ ಜತೆಗೆ ನೀರಿನ ಸರಾಗ ಹರಿಯುವಿಕೆಗೂ ಅಡ್ಡಿಪಡಿಸುತ್ತಿರುವುದನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಎಲ್ಲದಕ್ಕೂ ರಾಜಕಾರಣಿಗಳೇ ಕಾರಣ ಎಂದು ಬೊಟ್ಟು ಮಾಡಲು ನಾನು ಇಚ್ಛಿಸುವುದಿಲ್ಲ. ನಾವೇ ಸೃಷ್ಟಿಸಿರುವ ಕಸದ ತಿಪ್ಪೆಗುಂಡಿ ಸ್ವಚ್ಛಗೊಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ. ಅದೊಂದು ದೊಡ್ಡ ಸವಾಲು ಎನ್ನುವುದೂ ನಮಗೆ ಗೊತ್ತಿರಬೇಕು. ಪ್ರಧಾನಿ ಅವರ ಸದುದ್ದೇಶದಲ್ಲಿ ದೋಷ ಇಲ್ಲ. ಮೂಲಭೂತವಾಗಿ ನಮ್ಮ ಸಂಸ್ಕೃತಿ, ಮತ್ತು ಆಡಳಿತ ವ್ಯವಸ್ಥೆಯಲ್ಲಿಯೇ ಲೋಪ ಇದೆ. ಅದನ್ನು ಸರಿಪಡಿಸದೇ ಇದ್ದರೆ ನಾವು ನಮ್ಮದೇ ಆದ ಕೊಚ್ಚೆಯಲ್ಲಿಯೇ ಹೊರಳಾಡುತ್ತಲೇ ಇರುತ್ತೇವೆ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT