ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಥವನ್ನು ಸೃಷ್ಟಿಸಬಲ್ಲ ‘ಇನ್ನೊಂದು ಮುಖ’

ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ ಎಂಬಂತಾಗಿದೆ ಕಾಂಗ್ರೆಸ್-– ಜೆಡಿಎಸ್ ಮೈತ್ರಿ ಸರ್ಕಾರದ ಕತೆ
Last Updated 3 ಸೆಪ್ಟೆಂಬರ್ 2018, 20:18 IST
ಅಕ್ಷರ ಗಾತ್ರ

ಮೊನ್ನೆಯಷ್ಟೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆಯ ನಂತರ ಅದರ ಅಧ್ಯಕ್ಷ ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ, ‘ನೋಡಿ, ಗಟ್ಟಿಯಾಗಿಯೇ ಹಿಡಿದುಕೊಂಡಿದ್ದೇವೆ’ ಎಂದು ಹೇಳಿದ ಸಂದರ್ಭ ಜನತಾ ಪರಿವಾರದ ದಿನಗಳನ್ನು ನೆನಪಿಸುವಂತಿತ್ತು. ಅಧಿಕಾರದಲ್ಲಿದ್ದಾಗ ಕಿತ್ತಾಡುತ್ತಾ, ಅಧಿಕಾರ ಕಳೆದುಕೊಂಡಾಗ ಕನಿಷ್ಠ ಎರಡು ವರ್ಷಗಳಿಗೊಮ್ಮೆ ಎಚ್.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಎಲ್ಲರೂ ಒಬ್ಬರು ಇನ್ನೊಬ್ಬರ ಕೈ ಎತ್ತಿಹಿಡಿದು ತಾವೆಲ್ಲ ಒಂದಾಗಿದ್ದೇವೆಂದು ಮತದಾರರನ್ನು ನಂಬಿಸುವ ಪ್ರಯತ್ನ ನಡೆಸುತ್ತಿದ್ದ ಚಿತ್ರ ಮತ್ತೆ ಕಣ್ಮುಂದೆ ಬಂತು.

ಅದು, ಒಂದು ಪಕ್ಷದ ನಾಯಕರು ಪರಸ್ಪರ ಕಿತ್ತಾಡುತ್ತಾಚುನಾವಣೆ ಬಂದಾಗ ಅಧಿಕಾರಕ್ಕಾಗಿ, ಅಧಿಕಾರ ಪಡೆದು ಭಿನ್ನಮತ ಶುರುವಾಗಿ ಅದನ್ನು ಶಮನಗೊಳಿಸಿದಾಗ ನಡೆಸುತ್ತಿದ್ದ ಕಿರುಪ್ರಹಸನದ ದೃಶ್ಯ. ಇದು, ಮೈತ್ರಿ ಸರ್ಕಾರವೆಂಬ ಹಣೆಪಟ್ಟಿಯಲ್ಲಿ ಅಧಿಕಾರ ಹಿಡಿದಿರುವ ಎರಡು ಪಕ್ಷಗಳು ಕಿತ್ತಾಡುತ್ತಿದ್ದರೂ ಒಂದಾಗಿರುವಂತೆ ನಡೆಸುತ್ತಿರುವ ಒಣಪ್ರದರ್ಶನ. ಆದರೆ ವ್ಯಕ್ತಿಗಳು ಮತ್ತು ಸಂದರ್ಭ ಬೇರೆಯಾಗಿದೆ ಅಷ್ಟೇ.

ನೂರು ದಿನಗಳ ಹಿಂದೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿ ಪಕ್ಷ, ತತ್ವಕ್ಕಿಂತ ಕೇವಲ ಅಧಿಕಾರವೇ ಪರಮಭಾಗ್ಯ ಎಂದುಕೊಂಡಿರುವವರಲ್ಲಿ ಯಾರ‍್ಯಾರು ಬಿಕರಿಯಾಗಬಹುದು ಎಂಬ ಲೆಕ್ಕಾಚಾರದ ನಡುವೆಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ವಿಫಲರಾದ ನಂತರ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಒಂದೇ ಉದ್ದೇಶದಿಂದ ಕಾಂಗ್ರೆಸ್ ವರಿಷ್ಠರು ಜೆಡಿಎಸ್‍ಗೆ ‘ಬೇಷರತ್’ ಬೆಂಬಲ ನೀಡುವ ನಿರ್ಧಾರವನ್ನೇನೋ ಕೈಗೊಂಡಿದ್ದರು. ಕೋಮುವಾದಿ ಪಕ್ಷವೊಂದನ್ನು ಬದಿಗೆ ತಳ್ಳುವ ನಿಟ್ಟಿನಲ್ಲಿ ಕಡಿಮೆ ಸದಸ್ಯ ಬಲವನ್ನು ಹೊಂದಿದ್ದ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ನೀಡುವ ಈ ಪ್ರಯತ್ನ ಅಧಿಕ ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್ ಪಕ್ಷದ ತ್ಯಾಗ ಎಂದು ಯಾರಾದರೂ ಭಾವಿಸಿದ್ದರೆ ಅದು ಮೂರ್ಖತನವಷ್ಟೇ ಆಗಿತ್ತು.

ಬೇಷರತ್ ಬೆಂಬಲ ಎಂದರೆ ಯಾವುದೇ ಷರತ್ತುಗಳಿಲ್ಲದ ಬೆಂಬಲ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಬೆಂಬಲ ಘೋಷಿಸಿದ ನಂತರ ಕ್ರಮೇಣ ಷರತ್ತುಗಳನ್ನು ವಿಧಿಸುತ್ತಾ ಹೋಗುವುದು ಎಂಬಂತೆ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ. ಮೈತ್ರಿ ಸರ್ಕಾರ ಎಂದರೆ ಕೊಡುಕೊಳ್ಳುವಿಕೆ ಇದ್ದದ್ದೇ. ವರ್ತಮಾನದ ರಾಜಕಾರಣದಲ್ಲಿ ಯಾರೂ ಸುಮ್ಮನೆ ಅಧಿಕಾರವನ್ನು ಇನ್ನೊಬ್ಬರಿಗೆ ಬಿಟ್ಟುಕೊಡುವಷ್ಟು ಉದಾರಿಗಳೇನಲ್ಲ. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಯನ್ನು ಎದುರಿಸುವ ಯುಪಿಎ ಮುಖಗಳು ಇವೇ ಏನು ಎನ್ನುವಂಥ ಹೊಂದಾಣಿಕೆ ಇಲ್ಲದ ನಡವಳಿಕೆ ಎರಡೂ ಪಕ್ಷಗಳ ನಾಯಕರಿಂದ ವಾಕರಿಕೆ ಹುಟ್ಟಿಸುವ ಪ್ರಮಾಣದಲ್ಲಿ ಪ್ರದರ್ಶನಗೊಳ್ಳುತ್ತಲೇ ಇದೆ. ಬಿಜೆಪಿಯನ್ನು ದೂರ ಇಡಲೇಬೇಕೆನ್ನುವುದು ಮುಖ್ಯ ಉದ್ದೇಶವೇ ಆಗಿದ್ದರೆ ಬೇಷರತ್ ಬೆಂಬಲ ಘೋಷಿಸಿದವರು ಹೆಚ್ಚು ಸಂಯಮದಿಂದ ಇರಬೇಕಾಗುತ್ತದೆ.

ಕಳೆದ ನೂರು ದಿನಗಳಲ್ಲಿ ಸಿದ್ದರಾಮಯ್ಯ ಕೇಂದ್ರಿತ ಘಟನಾವಳಿಗಳನ್ನು ನೋಡಿದರೆ ನನ್ನ ಈ ಮಾತುಗಳು ಮನದಟ್ಟಾಗುತ್ತವೆ. ಸಿದ್ದರಾಮಯ್ಯ ಅವರಿಗೆ ಈಗ ಎಪ್ಪತ್ತು ವರ್ಷ. ಮಾಗಿದ ವಯಸ್ಸು. ಅವರೀಗ ಬರೀ ಮಾಜಿ ಮುಖ್ಯಮಂತ್ರಿಯಷ್ಟೇ ಅಲ್ಲ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ. ಈ ಹಿನ್ನೆಲೆಯಲ್ಲೇ ಕೋಮುವಾದಿ ಬಿಜೆಪಿಯನ್ನು ಎದುರಿಸುವಲ್ಲಿ ಅವರಿಗೆ ಮಹತ್ತರ ಜವಾಬ್ದಾರಿ ಇದೆ. ಮುಖ್ಯವಾಗಿ ಕಾಂಗ್ರೆಸ್ ಪಕ್ಷದೊಳಗೇ ಅವರು ಸಮನ್ವಯ ಸಾಧಿಸಬೇಕಾಗಿದೆ. ಜಾತಿಕಾರಣಕ್ಕಾಗಿಯೇ ಕುಮಾರಸ್ವಾಮಿ ಜತೆ ಗುಪ್ತ ಮೈತ್ರಿ ಮಾಡಿಕೊಂಡಿರುವ ಒಕ್ಕಲಿಗ ನಾಯಕರು, ಪಕ್ಷ, ತತ್ವ ನಿಷ್ಠೆಗಿಂತ ಅಧಿಕಾರಕ್ಕಾಗಿ ಹಪಹಪಿಸುವ ರಾಜಕೀಯ ವ್ಯಾಪಾರಿಗಳು, ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಗೋಳಾಡುತ್ತಿರುವ ಹಿರಿಯ ನಾಯಕರು ಹೀಗೆ ಎಲ್ಲರನ್ನೂ ಸಮಾಧಾನಪಡಿಸಿ ಪಕ್ಷದೊಳಗೇ ಸಮನ್ವಯ ತರುವ ಕಾರ್ಯವನ್ನು ಸಿದ್ದರಾಮಯ್ಯ ಮಾಡಬೇಕಿದೆ. ಅಂಥ ಅನುಭವ, ಹಿನ್ನೆಲೆ ಸಿದ್ದರಾಮಯ್ಯ ಅವರಿಗಿದೆ. ಒಕ್ಕಲಿಗರು ಮತ್ತು ಲಿಂಗಾಯತರೆಂಬ ಪ್ರಬಲ ಜಾತಿಗಳ ರಾಜಕಾರಣ ಎದುರಿಸಿ ಅವರು ಈ ಹಂತ ತಲುಪಿದ್ದು ಸಾಮಾನ್ಯ ಸಂಗತಿಯೇನಲ್ಲ. ಹತ್ತು ವರ್ಷಗಳಾಗಿದ್ದರೂ ಶಾಲೆಯ ಮುಖವನ್ನೇ ನೋಡಿರದಿದ್ದ ಕುರುಬ ಸಮುದಾಯದ ಹುಡುಗನೊಬ್ಬ ಕ್ರಮೇಣ ಕಾನೂನು ಪದವಿ ಗಳಿಸಿ ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯತ್ವದಿಂದ ಹಿಡಿದು ಶಾಸಕನಾಗಿ, ವಿವಿಧ ಖಾತೆಗಳ ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗುವಲ್ಲಿವರೆಗಿನ ಅಧಿಕಾರ ರಾಜಕಾರಣದ ಎಲ್ಲ ಮಜಲುಗಳನ್ನು ದಾಟಿ ಬಂದಿರುವ ಸಿದ್ದರಾಮಯ್ಯ ಅವರ ಬದುಕೆಂದರೆ ಅದು ಸಾಮಾನ್ಯನೊಬ್ಬನ ಅಸಾಮಾನ್ಯ ಸಾಹಸಗಾಥೆ.

ಪ್ರಮಾಣವಚನ ಸ್ವೀಕರಿಸಿದ ದಿನವೇ ಹಸಿವುಮುಕ್ತ ರಾಜ್ಯವಾಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ಪ್ರಕಟಿಸಿ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ತೋರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಬಲವಾಗಿ ನಿಂತು ಗಟ್ಟಿದ
ನಿಯಲ್ಲಿ ಪ್ರತಿಕ್ರಿಯಿಸುವ ಬಲಾಢ್ಯ ನಾಯಕನಾಗಿ ರೂಪುಗೊಂಡಿದ್ದು ರಾಜಕೀಯ ಇತಿಹಾಸದ ಮಹತ್ವದ ಪುಟಗಳು.

ರಾಜಕಾರಣದಲ್ಲಿ ಇಂಥ ಅಪಾರ ಅನುಭವ ಗಳಿಸಿರುವ ಸಿದ್ದರಾಮಯ್ಯ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಬಹುಮತ ಗಳಿಸಿದ್ದರೆ ಎರಡನೇ ಅವಧಿಗೂ ಮುಖ್ಯಮಂತ್ರಿಯಾಗುವುದನ್ನು ತಡೆಯುವುದಕ್ಕೆ ಯಾರೆಷ್ಟೇ ತಿಪ್ಪರ
ಲಾಗ ಹಾಕಿದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಕೈಕೊಟ್ಟ ಅದೃಷ್ಟ ಮತ್ತು ಟಿಕೆಟ್ ಹಂಚಿಕೆ ಸೇರಿದಂತೆ ಕೆಲವು ತಪ್ಪು ನಿರ್ಧಾರಗಳಿಂದ ಕಾಂಗ್ರೆಸ್ ಬಹುಮತ ಪಡೆಯುವಲ್ಲಿ ವಿಫಲವಾಯಿತು. ತಮ್ಮ ಮಗ ಯತೀಂದ್ರಗೆ ವರುಣಾ ಕ್ಷೇತ್ರ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಎರಡು ದೋಣಿಯಲ್ಲಿ ಕಾಲಿಡುವ ನಿರ್ಧಾರ ಕೈಗೊಂಡಾಗಲೇ ಸಿದ್ದರಾಮಯ್ಯ ಅವರಿಗಿದ್ದ ಸೋಲಿನ ಅಳುಕು ಬಟಾಬಯಲಾಗಿದ್ದು ಕೂಡಾ ಕಾಂಗ್ರೆಸ್ ಸೋಲಿನ ಕಾರಣಗಳಲ್ಲಿ ಒಂದು. ಅಧಿಕಾರವಂಚಿತರಾಗಿ ಹತಾಶರಾಗಿದ್ದ ಸಿದ್ದರಾಮಯ್ಯ ನೋವಿನ ಬೆಂಕಿಗೆ ತುಪ್ಪ ಸುರಿಯುವಂತೆ ಜೆಡಿಎಸ್ ಜತೆ ಮೈತ್ರಿಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಅವರನ್ನು ಇನ್ನಷ್ಟು ಕಂಗಾಲಾಗಿಸಿತು. ದೇವೇಗೌಡರ ಕುಟುಂಬದ ಜತೆಗಿನ ವೈಯಕ್ತಿಕ ವಿರಸದಿಂದ ಮೈತ್ರಿ ನಿರ್ಧಾರವನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಸಿದ್ಧವಿರಲಿಲ್ಲ. ಬಿಜೆಪಿಯನ್ನು ದೂರವಿಡುವುದಕ್ಕೆ ಮಾಡಿರುವ ನಿರ್ಧಾರ ಎಂಬ ಕಾರಣದಿಂದ ಬಹಿರಂಗವಾಗಿ ವಿರೋಧಿಸುವುದೂ ಅವರಿಗೆ ಸಾಧ್ಯವಾಗಲಿಲ್ಲ. ತಮ್ಮನ್ನು ಕೇಳದೇ ಕಾಂಗ್ರೆಸ್ ವರಿಷ್ಠರು ಈ ನಿರ್ಧಾರ ಕೈಗೊಂಡಿರುವುದರಿಂದ ಸಿದ್ದರಾಮಯ್ಯ ಅವರಿಗೆ ಬೇಸರವಾಗಿದೆ ಎಂಬ ಕಾರಣವೂ ಕೇಳಿಬಂತು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿಸುವಾಗ ಇತರ ನಾಯಕರನ್ನು ಕೇಳದೇ ಇದ್ದ ವರಿಷ್ಠರು ಈ ಸಂದರ್ಭದಲ್ಲಿ ತಮ್ಮನ್ನು ಕೇಳಬೇಕಾಗಿತ್ತು ಎಂದು ಸಿದ್ದರಾಮಯ್ಯ ನಿರೀಕ್ಷಿಸುವುದೇ ತಪ್ಪು. ಕಾಂಗ್ರೆಸ್ ಪಕ್ಷದ ಅನುಗ್ರಹದಿಂದ ಪಡೆದಿದ್ದ ಮುಖ್ಯಮಂತ್ರಿ ಸ್ಥಾನದ ಅಧಿಕಾರಾವಧಿಯುದ್ದಕ್ಕೂ ಎಲ್ಲೋ ಕೆಲವು ಮೂಲನಿವಾಸಿ ನಾಯಕರನ್ನು ಹೊರತುಪಡಿಸಿದರೆ ಪಕ್ಷದ ಹಿರಿಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳದ್ದರಿಂದ ಅವರ‍್ಯಾರೂ ತಮ್ಮ ಬೆಂಬಲಕ್ಕೆ ಬರಬಹುದೆಂಬ ನಂಬಿಕೆಯೂ ಸಹಜವಾಗಿಯೇ ಅವರಿಗಿರಲಿಲ್ಲ. ಆದರೆ ಜೆಡಿಎಸ್‍ಗೆ ಬೆಂಬಲ ನೀಡುವ ಹೈಕಮಾಂಡ್ ನಿರ್ಧಾರದಿಂದ ಪಕ್ಷ ದುರ್ಬಲವಾಗಬಹುದೆಂಬ ಅನುಮಾನ ಬಹುತೇಕ ಎಲ್ಲ ನಾಯಕರಲ್ಲೂ ಇತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲೇ ಇದು ತಮ್ಮ ಚುನಾವಣಾ ರಾಜಕೀಯದ ಕೊನೆಯ ಸ್ಪರ್ಧೆ ಎಂದು ಘೋಷಿಸಿದ್ದ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ರಾಜನೀತಿಜ್ಞರಂತೆ ವರ್ತಿಸಬೇಕಾಗಿತ್ತು. ಯಾಕೆಂದರೆ ಅವರನ್ನು ನಿರ್ಲಕ್ಷಿಸುವ ಬದಲು ನೋವು ಶಮನಗೊಳಿಸುವ ನಿಟ್ಟಿನಲ್ಲಿ ಅವರಿಗೆ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯತ್ವ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನೂ ನೀಡಲಾಗಿತ್ತು. ಇದಕ್ಕೆ ತದ್ವಿರುದ್ಧ ಎಂಬಂತೆ ಮೈತ್ರಿ ಸರ್ಕಾರ ರಚನೆ ನಂತರ ಸಿದ್ದರಾಮಯ್ಯ ಅವರ ಇನ್ನೊಂದು ಮುಖದ ಪರಿಚಯವೂ ಆಯಿತು. ಜೂನ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಉಂಟಾದ ಕಾಂಗ್ರೆಸ್ ಶಾಸಕರ ಅಸಮಾಧಾನ ಸಂದರ್ಭದಲ್ಲಿ ಪಕ್ಷದ ಒಬ್ಬ ಪ್ರಮುಖ ನಾಯಕರಾಗಿ ಪರಿಸ್ಥಿತಿ ತಿಳಿ
ಗೊಳಿಸುವ ಬದಲು ತಾವು ಗೆದ್ದಿದ್ದ ಬಾದಾಮಿ ಕ್ಷೇತ್ರದಲ್ಲಿ ಮತದಾರರಿಗೆ ಧನ್ಯವಾದ ಸಮರ್ಪಣೆ ನೆಪದಲ್ಲಿ ನಾಲ್ಕೈದು ದಿನ ಜಾಂಡಾ ಹೊಡೆದು ಪಲಾಯನವಾದಿಯಂತೆ ಕಂಡಿದ್ದರು. ತಮ್ಮ ಸಂಪುಟದಲ್ಲಿದ್ದು ಪ್ರಬಲ ಬೆಂಬಲಿಗರೆಂದು ಗುರುತಿಸಿಕೊಂಡಿದ್ದ ಕೆಲವು ಶಾಸಕರು ಮಂತ್ರಿಯಾಗದಿದ್ದಾಗಲೂ ಅದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಮಿತ್ರರನ್ನೂ ಉದಾಸೀನ ಮಾಡುವ ಮೈತ್ರಾಸನದಲ್ಲಿದ್ದರು!

ಜೂನ್ ಕೊನೇ ವಾರದಲ್ಲಿ ಧರ್ಮಸ್ಥಳದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದ ಸಿದ್ದರಾಮಯ್ಯ ಅಲ್ಲಿದ್ದುಕೊಂಡೇ ಕುಮಾರಸ್ವಾಮಿ ಪೂರ್ಣ ಬಜೆಟ್ ಮಂಡನೆಗೆ ಮುಂದಾಗಿರುವುದಕ್ಕೆ ತಕರಾರು ತೆಗೆದಿದ್ದರು. ಸಂಪೂರ್ಣ ಬಹುಮತ ಪಡೆದು ತನ್ನದೇ ಸರ್ಕಾರ ರಚನೆಯಾಗಿದ್ದರೆ ತಾವು ಮಂಡಿಸಿದ್ದ ಬಜೆಟನ್ನೇ ಕಾರ್ಯಗತಗೊಳಿಸಬೇಕೆಂದು ಸಿದ್ದರಾಮಯ್ಯ ಬಯಸುವುದರಲ್ಲಿ ತಪ್ಪೇನೂ ಇರುತ್ತಿರಲಿಲ್ಲ. ಆದರೆ ಇದು ಕಾಂಗ್ರೆಸ್ ಬೆಂಬಲಿತ ಜೆಡಿಎಸ್‍ನ ಕುಮಾರಸ್ವಾಮಿ ಮುಖ್ಯಮಂತ್ರಿ
ಯಾಗಿರುವ ಮೈತ್ರಿ ಸರ್ಕಾರ. ಸಹಜವಾಗಿಯೇ ಕುಮಾರಸ್ವಾಮಿ ತಮ್ಮದೇ ತಾಜಾ ಬಜೆಟ್ ಮಂಡಿಸಲು ಮುಂದಾಗಿದ್ದರಲ್ಲಿ ತಪ್ಪಿರಲಿಲ್ಲ. ಸಿದ್ದರಾಮಯ್ಯ ಅವರು ಆಕ್ಷೇಪಿಸಿದ್ದ ಮಾತುಗಳಿದ್ದ ವಿಡಿಯೊ ಬಯಲಾಗುವಂತೆ ಅವರೇ ನೋಡಿ
ಕೊಂಡರೋ ಅಥವಾ ಅವರ ಜತೆ ಮಾತನಾಡಿದ ಬೆಂಬಲಿಗರು ಈ ಕೆಲಸ ಮಾಡಿದರೋ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಸಿದ್ದರಾಮಯ್ಯ ಈಗ ತಮ್ಮ ಮಗ ಯತೀಂದ್ರ ಮತ್ತು ಗೆಳೆಯರೊಂದಿಗೆ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಬಾದಾಮಿಯಾಯಿತು, ಧರ್ಮಸ್ಥಳವಾಯಿತು, ಈಗ ಯುರೋಪ್ ಪ್ರವಾಸ. ಒಂದೊಂದು ಸಂದರ್ಭದಲ್ಲೂ ಸರ್ಕಾರಕ್ಕೆ ಒಂದೊಂದು ಬಿಕ್ಕಟ್ಟು ಎದುರಾಗಿತ್ತು. ಅಧಿಕಾರವಂಚಿತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರತ್ತ ಬಿಜೆಪಿ ಕಣ್ಣು ಹೊಡೆಯುತ್ತಿರುವ ನಡುವೆಯೇ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿರುವುದು ಕಾಕತಾಳೀಯವೇ ಇರಬಹುದಾದರೂ ಅನುಮಾನಗಳ ಹೆಬ್ಬಂಡೆಗಳು ಮೈತ್ರಿ ಸರ್ಕಾರದ ಕಾಲಿಗೆ ಅಡರಿಕೊಳ್ಳುವಂಥ ಸ್ಥಿತಿಯಂತೂ ನಿರ್ಮಾಣವಾಗಿದೆ.

ಮೊನ್ನೆ ಮೊನ್ನೆಯಷ್ಟೇ ಹಾಸನದಲ್ಲಿ ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿಯಾಗುವುದಾಗಿ ಸಿದ್ದರಾಮಯ್ಯ ಹೇಳಿಕೊಂಡರು. ಈ ಹೇಳಿಕೆಗೆ ಅವರು ಆನಂತರ ಏನೇ ಸ್ಪಷ್ಟೀಕರಣ ನೀಡಿರಬಹುದು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ದೇಶಪಾಂಡೆ, ಜಿ. ಪರಮೇಶ್ವರ ಮತ್ತು ಶಿವಕುಮಾರ್ ಕೂಡ ಆಕಾಂಕ್ಷಿಗಳೇ ಎಂದು ಇನ್ಯಾರೋ ಮುಖಂಡರು ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಬಯಷದಂತೆ ನಡೆಯುವುದಿಲ್ಲ ಎನ್ನುವುದನ್ನು ಈ ಪ್ರತಿಕ್ರಿಯೆಗಳು ಸೂಚಿಸಿದವು. ಈ ಮೂಲಕ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸಲು ಈ ಶಕ್ತಿಗಳು ಒಂದುಗೂಡುವ ಸಾಧ್ಯತೆಯೂ ಇರುತ್ತದೆ. ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು, ಬಿಕ್ಕಟ್ಟಿನ ಸಂದರ್ಭಗಳಲ್ಲಿ ಪ್ರವಾಸ ಕೈಗೊಳ್ಳುತ್ತಿರುವುದಾದರೂ ಏಕೆ? ಅವರ ಮನಸ್ಸಿನಲ್ಲಿರುವುದಾದರೂ ಏನು? ಇದನ್ನು ಜಾಫರ್ ಷರೀಫ್ ಸಿಂಡ್ರೋಮ್ (ಕಾಂಗ್ರೆಸ್‍ನ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಈ ಹಿಂದೆ ಅನೇಕ ಸಲ ತಮ್ಮನ್ನು ಪಕ್ಷ ಕಡೆಗಣಿಸಬಹುದು ಅಥವಾ ಕಡೆಗಣಿಸಿದೆ ಎಂಬ ಅನುಮಾನ ಹುಟ್ಟಿಕೊಂಡಾಗೆಲ್ಲ ವರಿಷ್ಠರ ನಿಲುವಿನ ವಿರುದ್ಧವೇ ಹೇಳಿಕೆ ನೀಡುತ್ತಾ ಇನ್ನೇನು ಪಕ್ಷಾಂತರ ಮಾಡಿಬಿಡುತ್ತಾರೇನೋ ಅನ್ನಿಸುವಂತೆ ಸುದ್ದಿಗಳ ಬಿತ್ತನೆ ಮಾಡುತ್ತಿದ್ದರು) ಎನ್ನಬಹುದು!

ಸಿದ್ದರಾಮಯ್ಯ ಅವರು ತಮ್ಮ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ತೋರಿಸಿಕೊಳ್ಳುವ ಯಾವುದೇ ನಿರ್ಧಾರವನ್ನು ಅಧಿಕಾರದಾಹಿ ಕಾಂಗ್ರೆಸ್ ಶಾಸಕರು ಮತ್ತು ಕೋಮುವಾದಿಗಳು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳುವ ಅಪಾಯ ಇದೆ. ಸಿದ್ದರಾಮಯ್ಯ ಸಿಡಿಸುತ್ತಿರುವ ಪಟಾಕಿಗಳನ್ನೇ ಇಂಥವರು ಬಾಂಬ್ ಸ್ಫೋಟ ಎಂಬಂತೆ ಬಿಂಬಿಸಬಲ್ಲರು. ಕೋಮುವಾದಿಗಳ ವಿರುದ್ಧ ಈ ಕ್ಷಣದವರೆಗೂ ಶಕ್ತಿಶಾಲಿ ದನಿಯಾಗಿರುವ ಸಿದ್ದರಾಮಯ್ಯ ಬಿಜೆಪಿಗೆ ಅನುಕೂಲವಾಗುವಂತೆ ಮೈತ್ರಿಭಂಜಕರಾಗಲಾರರು. ಅವರು ಗೋಣುಗೊಯ್ಕರೂ ಅಲ್ಲ. ಆದರೆ ಪಕ್ಷದ ವರಿಷ್ಠರು, ಇತರ ನಾಯಕರು ತಮ್ಮ ಮಾತುಗಳಿಗೆ ಬೆಲೆ ನೀಡಬೇಕೆಂಬ ನಿಟ್ಟಿನಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ಅವರ ಅರಿವಿಗೇ ಬಾರದಂತೆ ಕ್ರಮೇಣ ಕಾಂಗ್ರೆಸ್ ಪಕ್ಷಕ್ಕೇ ಕೊನೇ ನಮಸ್ಕಾರ ಹಾಕುವ ಪರಿಸ್ಥಿತಿಯನ್ನು ತಂದುಕೊಳ್ಳಬಹುದು. ಯಾಕೆಂದರೆ ಅವರಿಗೆ ಕಾಂಗ್ರೆಸ್ ಸಂಸ್ಕೃತಿಯ ಅರಿವಿಲ್ಲ. ಯಾರೂ ಅನಿವಾರ್ಯರಲ್ಲ ಎಂಬುದನ್ನು ಕಾಂಗೆಸ್ ಪಕ್ಷದ ಇತಿಹಾಸವೇ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT