ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುಭಾಷೆಯ ಅನನ್ಯ ಅಭಿವ್ಯಕ್ತಿ

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬಸವಣ್ಣನವರ ಬಹುತೇಕ ವಚನಗಳು ಸಾಹಿತ್ಯಕವಾಗಿಯೂ ಮುಖ್ಯವಾಗುತ್ತವೆ. ಈ ವಚನಗಳು ಪ್ರಾಯೋಗಿಕ ವಿಮರ್ಶೆಯ ಅತ್ಯುತ್ತಮ ಮಾದರಿಗಳು ಕೂಡ. ಪದಬಂಧ ಮತ್ತು ಅರ್ಥಗಂಧಗಳ ಸಾಮಾನ್ಯ ಸಂಬಂಧದ ಅದ್ಭುತ ಸಾಮರಸ್ಯಕ್ಕೆ ಇವು ಉದಾಹರಣೆಗಳು.
 
ಶಬ್ದಾರ್ಥ ಸೌಹಾರ್ದದ ಹುಡುಕಾಟ ಕಾವ್ಯ ರಚನೆಯಲ್ಲಿ ಒಂದು ಸಾಮಾನ್ಯ ಪ್ರಕ್ರಿಯೆ. ಬಸವಣ್ಣನವರ ವಚನಗಳಲ್ಲಿ ಪದ ಮತ್ತು ಅರ್ಥ, ಅಂದರೆ ಅಭಿವ್ಯಕ್ತಿ ಮತ್ತು ಅನುಭವ ಒಟ್ಟಿಗೆ ಜನ್ಮ ತಳೆಯುವುದನ್ನು ನೋಡುತ್ತೇವೆ.

ಅರ್ಥದಾಚೆಯ ಅರ್ಥಕ್ಕೂ ಈ ವಚನಗಳು ಬೆಳೆಯುತ್ತವೆ. ವಚನಗಳು ಸಾಮಾಜಿಕ ಆಂದೋಲನದ ಉಪ ಉತ್ಪತ್ತಿ ಎಂಬುದು ಒಂದು ಸಾಮಾನ್ಯ ಅಭಿಪ್ರಾಯ. ಇದರ ಭಾಗವೇ ಆದ ಬಸವಣ್ಣನವರ ವಚನಗಳು ಸೃಜನಶೀಲ ಪ್ರತಿಭೆಯ ಶಿಖರ ಸ್ಥಿತಿಯವು ಎನ್ನುವುದಕ್ಕೆ ಪ್ರಸ್ತುತ ವಚನ ಒಂದು ನಿದರ್ಶನ:

   ವ್ಯಾಧನೊಂದು ಮೊಲನ ತಂದರೆ
   ಸಲುವ ಹಾಗಕ್ಕೆ ಬಿಲಿವರಯ್ಯ
   ನೆಲನಾಳ್ದನ ಹೆಣನೆಂದರೆ
   ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ
   ಮೊಲನಿಂದ ಕರಕಷ್ಟ ನರನ ಬಾಳುವೆ!
   ಸಲೆ ನಂಬೊ ನಮ್ಮ ಕೂಡಲ ಸಂಗಮದೇವನ

ಬಸವಣ್ಣನವರ ವಚನವೆಂದು ಅಂಕಿತದಿಂದಲೇ ಗೊತ್ತಾಗುತ್ತದೆ. ಬಸವಣ್ಣನವರ ಬಹುಮುಖ್ಯ ವಚನಗಳಲ್ಲಿ ಇದೂ ಒಂದು; ನಿರ್ದಿಷ್ಟ ಜೀವನ ತತ್ತ್ವವನ್ನೂ ಅಸ್ತಿತ್ವದ ಪ್ರಶ್ನೆಯನ್ನೂ ಇದು ಎತ್ತುವುದು.

 ವಚನವನ್ನು ನೋಡಿದರೆ ಒಂದೆರಡು ಸಂಸ್ಕೃತ ಪದಗಳನ್ನು ಬಿಟ್ಟರೆ, ಇಡೀ ರಚನೆ ಅಚ್ಚಗನ್ನಡ ಪದಗಳಿಂದಾದುದೆಂಬುದು ಗೊತ್ತಾಗುತ್ತದೆ. ಹನ್ನೆರಡನೆಯ ಶತಮಾನದ್ದೆಂದು ಮರೆತರೆ ನಿನ್ನೆ ಮೊನ್ನೆಯ ರಚನೆಯಂತೆ, ಆಧುನಿಕ ಕವನದಂತೆ ಭಾಸವಾಗುವುದು. ಆಡುಭಾಷೆಯ ಅನನ್ಯ ಅಭಿವ್ಯಕ್ತಿ ಎಂದರೂ ಆದೀತು.
 
ವಚನದ ಕನ್ನಡ ಬಸವಣ್ಣನವರ ಕಾಲದ ಕನ್ನಡವೇ. ಒಂದೂವರೆ ಶತಮಾನ ಹಿಂದಕ್ಕೆ ಹೋದರೆ ಪಂಪರನ್ನಾದಿಗಳ ಕಾವ್ಯಗಳು ಸಿಗುತ್ತವೆ. ಅವರ ಭಾಷೆ ಅವರ ಕಾಲದ ಭಾಷೆಯಲ್ಲ. ಆಶ್ಚರ‌್ಯವೆನ್ನುವಂತೆ ಮಾರ್ಗ-ದೇಸಿಗಳ ಮಿಲನವನ್ನೂ, ಸಂಸ್ಕೃತ-ಕನ್ನಡ ಸಮನ್ವಯವನ್ನೂ ಅವರ ಕಾವ್ಯಗಳಲ್ಲಿ ಕಾಣುತ್ತೇವೆ.
 
ಒಂದು ಕಾವ್ಯಭಾಷೆಯನ್ನು ಸೃಷ್ಟಿಸಿಕೊಂಡಿರುವುದು ಈ ಪರಿಸ್ಥಿತಿಗೆ ಕಾರಣ. ಇದಕ್ಕೂ ಹಿಂದಕ್ಕೆ ಹೋದರೆ ಏಳನೇ ಶತಮಾನದ ಕಪ್ಪೆ ಅರಭಟ್ಟನ ಶಾಸನದ  `ಸಾಧುಗೆ ಸಾಧು ಮಾಧುರ‌್ಯಂಗೆ ಮಾಧುರ‌್ಯಂ~  ಎಂಬ ತ್ರಿಪದಿ ಸಿಗುತ್ತದೆ. ಇದರ ಭಾಷೆ ಕೂಡ ಆಧುನಿಕವೆನ್ನುವಂತಿದೆ. ಆದ್ದರಿಂದ ಬಸವಣ್ಣನವರ ಭಾಷೆಯೇ ಹತ್ತನೆಯ ಶತಮಾನದಲ್ಲೂ, ಅದಕ್ಕೂ ಹಿಂದೆಯೂ ಇತ್ತೆಂಬುದರಲ್ಲಿ ಅನುಮಾನವಿಲ್ಲ.

 ಬಸವಣ್ಣನವರು ಧಾರ್ಮಿಕವಾಗಿ, ಸಾಮಾಜಿಕವಾಗಿ ಎಷ್ಟು ಪ್ರಮುಖರೆಂಬುದು ಗೊತ್ತೇ ಇದೆ. ಕಾವ್ಯದ ದೃಷ್ಟಿಯಿಂದಲೂ ಅವರು ಮುಖ್ಯರೇ. ಅವರು ಎತ್ತರದ ಕವಿ; ನಮಗೆ ಹತ್ತಿರದ ಕವಿ ಕೂಡ. ಬಸವಣ್ಣನವರು ಸಾಂಸ್ಕೃತಿಕ ವಕ್ತಾರ; ಸಾಮಾಜಿಕ ಬದಲಾವಣೆಯ ನೇತಾರ. ಈ ಎಲ್ಲದರ ರೂವಾರಿಯಾದುದರಿಂದ ಅವರು ಕೇವಲ ಕವಿಯಲ್ಲ; ಕವಿಗಿಂತ ಮಿಗಿಲು.

 ಕವನದ ನೇರ ವಿಶ್ಲೇಷಣೆಗೆ ಬರೋಣ. ವಚನ ಏನು ಹೇಳುತ್ತದೆ, ಹೇಗೆ ಹೇಳುತ್ತದೆ ಎಂಬುದು ಮುಖ್ಯ. ಅನುಭವ ಮತ್ತು ಅಭಿವ್ಯಕ್ತಿಯ ಅಪರೂಪದ ಸಖ್ಯ ಪದ್ಯದ್ದು. ಪ್ರಾಣಿರೂಪಕದಿಂದ ಪ್ರಾರಂಭವಾದರೂ, ಅದೇ ವಸ್ತುವಾಗಿ ಬಿಡುವ ಸೋಜಿಗ. ವಚನದ  `ಸತ್ವ~  ಮನುಷ್ಯನ ಪೂರ್ವಾಪರ ಅಸ್ತಿತ್ವಕ್ಕೆ ಸಂಬಂಧಿಸಿದ್ದು.
 
ಬದುಕಿನ ಅಸ್ಥಿರತೆ ಮತ್ತು ನಶ್ವರತೆಗಳ ಮೇಲೆ ಕೇಂದ್ರೀಕೃತವಾದುದು. ಮೊಲಕ್ಕೆ ಜೀವವಿದ್ದರೂ ಸತ್ತರೂ ಬೆಲೆ; ಅದಕ್ಕೆ ಅದರ ಹೋಲಿಕೆ. ಮನುಷ್ಯನಿಗೆ- ರಾಜನಾದರೂ- ಜೀವವಿರುವನಕ ಬೆಲೆ; ಆಮೇಲೆ ಅವನು ಬರೀ ಹೆಣ, ಶವ. ಪ್ರಾಣಿಗಿಂತ ಕನಿಷ್ಠ ಮಾನವ. 

`ವ್ಯಾಧ~  ಪದದ ಮೇಲಿನ ಒತ್ತು,  `ಮೊಲ~ ಕ್ಕೆ  `ಸಲುವ ಹಾಗ~ (ಆ ಕಾಲದ ಹಣದ 1/4 ಭಾಗ)ದ ಬೆಲೆ( `ಬಿಲಿ~ ),  `ನೆಲನಾಳ್ದನ~  ಮಾತಿನಲ್ಲಿರುವ ಗಂಭೀರ ವಿಡಂಬನೆ,  `ಕೊಂಬವರಿಲ್ಲ~ ಎಂಬುದರಲ್ಲಿನ ವಿಶೇಷ,  `ನೋಡಯ್ಯ~ ಎಂಬುದರಲ್ಲಿನ ಅಣಕ/ಸಂಬೋಧನೆ, ಮೊಲಕ್ಕಿಂತ ಕಷ್ಟವಾದ  `ನರನಬಾಳುವೆ~  ಎನ್ನುವಲ್ಲಿನ  `ವ್ಯಕ್ತಿ ಸಾಮಾನ್ಯೀಕರಣ~ , ಅಧೀರತೆಯ ಸ್ಥಿತಿ, ಅವಲಂಬನೆಯ ಅಗತ್ಯದ ಒತ್ತು- ಇವೆಲ್ಲವೂ ವಚನದ ಅರ್ಥವನ್ನೂ ಅಭಿವ್ಯಕ್ತಿಯನ್ನೂ ಒಮ್ಮೆಲೆ ರೂಪಿಸುತ್ತವೆ.

ಅಸ್ಥಿರತೆ, ಅಧೀರತೆ, ನಶ್ವರತೆಗಳಿಂದ ಹೊರಬರುವ ಒಂದೇ ಒಂದು ಸಾಧನ  `ಕೂಡಲಸಂಗ~ನನ್ನು ನಂಬುವುದು. ಬರಿಯ ನಂಬಿಕೆಯಲ್ಲಿ ಬಸವಣ್ಣನವರಿಗೆ ವಿಶ್ವಾಸವಿಲ್ಲ; ಏಕೆಂದರೆ ` ತೋರಿಕೆ~  ಇದೆಯಲ್ಲ! ಆದ್ದರಿಂದ ` ಸಲೆನಂಬೊ~  ಎಂಬ ಒತ್ತು;  `ಸಲೆ~ ಎಂದರೆ ಚೆನ್ನಾಗಿ, ಏಕ ಪ್ರಕಾರವಾಗಿ, ಸರಿಯಾಗಿ ನಂಬುವುದು ಎಂದು ಅರ್ಥ. ಆಗ ಮನುಷ್ಯನ ಜೀವನ ಸಾರ್ಥಕ, ಕಲಾತ್ಮಕ ಎಂಬುದು ಬಸವಣ್ಣನವರ ಅಭಿಪ್ರಾಯ. ಅಂತಿಮವಾಗಿ ಜೀವಧರ್ಮಕ್ಕೆ/ದೇವರಿಗೆ ಶರಣು ಹೋಗಬೇಕೆಂಬುದೇ ವಚನದ ಸಂದೇಶ.

 ವಚನ ಇನ್ನೂ ಹೆಚ್ಚಿನ ಅಂಶಗಳನ್ನು ಇಟ್ಟುಕೊಂಡಿದೆ. ಸಮಕಾಲೀನ ಅಂಶ ಇರಬಹುದೆಂಬ ಶಂಕೆ ಒಂದು.  `ನೆಲನಾಳ್ದನ~  ಎಂಬ ಮಾತಿನಲ್ಲಿ  `ಬಿಜ್ಜಳನ~  ವಿಷಯವಿರಬಹುದೆ? ಬಸವಣ್ಣ ಮತ್ತು ಬಿಜ್ಜಳರು ವೈಯಕ್ತಿಕ ನೆಲೆಯಲ್ಲಿ ಚೆನ್ನಾಗಿದ್ದರು. ಸಾರ್ವಜನಿಕ ಸಮಸ್ಯೆಯ ನೆಲೆಯಲ್ಲಿ ಅವರಿಬ್ಬರ ನಡುವೆ ಸಂಘರ್ಷಾತ್ಮಕ ಸ್ಥಿತಿ ಇತ್ತು. ಇಂತಹ ಸಾಮ್ರೋಜ್ಯಶಾಹಿ/ಪ್ರಭುತ್ವವಾದಿ ವಿಷಯಕ್ಕೆ ಬಸವಣ್ಣನವರು ಪ್ರತಿಭಟನಾತ್ಮಕ ಧ್ವನಿಗೆ ಹೀಗೆ ಅಭಿವ್ಯಕ್ತಿ ನೀಡಿರಬಹುದೆ?

 ಅಸ್ತಿತ್ವವಾದಿ ತತ್ವ ಎರಡನೆಯದು. ಇಪ್ಪತ್ತನೆಯ ಶತಮಾನದಲ್ಲಿ ಅಸ್ತಿತ್ವವಾದ ಪ್ರಬಲವಾಗಿತ್ತು. ಈ ವಿಚಾರ ಪ್ರಾಚೀನ ಕಾಲದಿಂದಲೂ ಇದ್ದದ್ದೇ. ಮನುಷ್ಯನ ಅಸ್ತಿತ್ವದ ಚರ್ಚೆ ಗಾಢವಾದುದು. ಇದರ ಪ್ರಕಾರ ಮನುಷ್ಯನಿಗೆ ತನ್ನದೆನ್ನುವ ಅಸ್ತಿತ್ವವೇನೂ ಇರುವುದಿಲ್ಲ. ಅವನು ಪ್ರತ್ಯೇಕ ಅಲ್ಲ; ದೈವದ ಭಾಗ- ಅವನು ಏನಿದ್ದರೂ ತನ್ನ ನೆಲೆಯನ್ನು ದೇವರಲ್ಲೇ ಹುಡುಕಿಕೊಳ್ಳಬೇಕು.
 
ಅವನಿಗೆ ಮುಕ್ತಿ (ಬಿಡುಗಡೆ) ದೊರೆಯುವುದು ದೇವರನ್ನು ಕೂಡಿಕೊಂಡಾಗಲೇ. ಅಸ್ತಿತ್ವ `ರೂಪ~ಕ್ಕೆ ಸಂಬಂಧಿಸಿರದೆ,  `ಸತ್ವ~ಕ್ಕೆ ಸಂಬಂಧಿಸಿದ್ದು. ಮನುಷ್ಯನ ಇರುವಿಕೆಯನ್ನು ಹುಡುಕುತ್ತಾ ಹೋದಂತೆ `ಅಸ್ತಿತ್ವ~  ಹೆಚ್ಚು ಅಸಂಬದ್ಧವಾಗುವುದು. ಅಸ್ತಿತ್ವವಾದದ ಕಲ್ಪನೆ ಸಾವಿನ ಸಂಬಂಧದಲ್ಲಿ ಮಹತ್ವ ಪಡೆಯುವುದು.

ಸಾಯುವ ಮನುಷ್ಯನನ್ನು ಎಲ್ಲವೂ ತೊರೆಯುವುದು; ಅವನು ಏಕಾಂಗಿ. ಈ ಪರಿಕಲ್ಪನೆಯಲ್ಲಿ ನೋಡಿದಾಗ ವಚನ ತುಂಬ ಅರ್ಥಪೂರ್ಣವೆನಿಸುವುದು. ಅಸ್ತಿತ್ವವಾದದಲ್ಲಿ `ಆಸ್ತಿಕ~, `ನಾಸ್ತಿಕ~ ಎಂದು ಎರಡು ಬಗೆ. ಬಸವಣ್ಣನವರು ಈ ವಚನದಲ್ಲಿ  `ಆಸ್ತಿಕ ಅಸ್ತಿತ್ವವಾದ~ವನ್ನು ಪ್ರತಿಪಾದಿಸುತ್ತಿರುವಂತೆ ತೋರುತ್ತದೆ.

 ಆದ್ದರಿಂದ ಬಸವಣ್ಣನವರ ವಚನ ಸಾವಿನ ನೆಲೆಯಲ್ಲಿ ಬದುಕಿನ ಅಸ್ತಿತ್ವವನ್ನು ಯೋಚಿಸುವಂಥದು. ಹಾಗೆ ಮಾಡಿದಾಗ ಬದುಕು ಮತ್ತು ಸಾವಿನ ನಡುವಿನ ಅನುಭವ ಬದಲಾಗುವ ಪರಿಗೆ ವಚನ ಉತ್ತಮ ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT