ಹೆಪ್ಪುಗಟ್ಟಿದ ಕತ್ತಲ ರಾತ್ರಿಯ
ಮಾಗಿ ಚಳಿ ತಬ್ಬಿ. ಬಯಲ
ಬಾಗಿಲಿನಿಂದ ಸರಿದು ಬರುವ
ಸಿಳ್ ಗಾಳಿ ಕಂಪನ ಹುಟ್ಟಿಸಿತು
ಹರಿದ ಸೀರೆಯಲಿ ಹುಡುಗಿಗೆ.

ಕಳೆದುಕೊಂಡ ವಸಂತಗಳ
ಮಿಣಿಕು ದೀಪದಲಿ ಕನವರಿಸಿ
ಬಾಚಿ ಹಿಡಿದ ಹುಡುಗಿಯ ಕೈಗೆ ಸಿಕ್ಕಿದ್ದು
ಬಡಮನೆಯ ಚೆಕ್ಕಳು.

ಸಾವಿನ ಕುಣಿಕೆಯ ಹಿಡಿದು ಬರುವ
ಸರದಾರನ ಹೆಜ್ಜೆ ಭಾರ, ಬೆಸೆದ ಎವೆಗಳ ಮಧ್ಯ ಕನಸುಬಾರ
ತೆರೆದ ಕಣ್ಣುಗಳಲಿ ಸಾಲುಗಟ್ಟಿನಿಂತ ಸಾವಿನ ಸರದಾರರ ಚಿತ್ರ
ದನಿಬಿದ್ದವಳ ಕೊರಳಲ್ಲಿ ಕರಗಲಾರದ ಹೆಪ್ಪಿಟ್ಟ ನೋವು

ನಡುಗಿದಳು ಹುಡುಗಿ ರೊಟ್ಟಿ ಕಾಣದ ಮುದಿ
ತಂದೆ-ತಾಯಿಗಳ ನೆನೆನೆನೆದು. ಸಾವಿನ
ಸಂಕಟದಲ್ಲಿಯೂ ಶ್ರವಣಕುಮಾರನ ನೆನಪು
ರೆಕ್ಕೆ ಬಡಿದು ಹಲಬುವ ಪ್ರಾಣ ಪಕ್ಷಿಯ ಒತ್ತಿ
ಹರಿದ ಕುಪ್ಪಸದಲ್ಲಿಕ್ಕಿ ಹೊತ್ತಿಸಿದಳು ಬದುಕ ಕುಲುಮೆ.

ಬಂದವರು ಹೋದವರು ತಿಂದವ
ರು; ಸರಿದು ಹೋಗುವಾಗ ಕೇಳುವುದು
ಹುಡುಗಿಯ ಜೀವ `ನನ್ನ ಕಿಚ್ಚಿಗೆ ಮೈಕಾಯಿಸಿ'
ಕೊಂಡ; ನೀವು ಆರಿ ತಣ್ಣಗಾಗುವುದೆಂದು.

ಕಗ್ಗತ್ತಲ ಬಂಡೆಯ ಕೆಳಗೆ
ಇಳಿದೊಗಲ ತಂದೆ ತಾಯಿಗಳ ಕಂಡು ಹುಡುಗಿ
ಕಣ್ಣ ಬತ್ತಿಯ ಮೈಯ ಪಣತೆಯಲ್ಲಿಟ್ಟು
ಹಚ್ಚಿದಳು ಛಲದ ಬಿಸಿಯುಸಿರ ದೀಪ.

ಭರವಸೆಯ ಬೆಳಕಲಿ ಕೇಳಿದಳು ಜಗಕೆ
ಬಾಗಿದ ಬೆನ್ನಿಗೆ ಊರುಗೋಲು ಗಂಡು ಮಾತ್ರ ಎಂದಿರಲ್ಲ
ಹೇಳಿ ಈಗ ಸಾಲುಸಾಲಾಗಿ ಹುಟ್ಟಿದ
ಗಂಡುಗಳೆಲ್ಲ ಊರುಗೋಲಾಗದೆ ಉರಿವ ಕೊಳ್ಳಿಯಾದವೇಕೆ?

ಹೆಪ್ಪಿಟ್ಟ ಇರುಳ ಸೂರ್ಯನ ಕಡೆದು
ಬೆಳಕ ಮಜ್ಜಿಗೆಯಲಿ ತೇಲಿಬಿಟ್ಟ
ಹುಡುಗಿಯ ಕನಸಿನ ಚಿಕ್ಕಚಂದ್ರಾಮರು
ಕತ್ತಲಾಗದೆ ಮಿನಿಗಲಾರೆವೆಂದು ಹೊಸೆದ ಕಾಲುಗಳ
ಮುರಿದು, ಅಲ್ಲಾಡಿಸಿದ ಕತ್ತು ಹಿಚುಕಿ
ಹುಡುಕುತ್ತಿರುವಳು ಹುಡುಗಿ ಕತ್ತಲೆ ಹೊತ್ತು
ಬೆಳಕಿನಲಿ ರೊಟ್ಟಿ ತರುವ ಕೈಗಳಿಗಾಗಿ.
-ಮಲ್ಲಿಕಾ ಘಂಟಿ

ಸ್ವಂತದ ಹುಡುಕಾಟ; ಬದುಕಿನ ಹೋರಾಟ
ರೊಟ್ಟಿ ಮತ್ತು ಹುಡುಗಿ ಎರಡೂ ಸಂಧಿಸದ ಸಮಾಂತರ ರೇಖೆಗಳಾಗಿ ಲಂಬವಾಗಿ ನಿಂತ ಧ್ರುವಗಳು. ರೊಟ್ಟಿ ಹುಡುಗಿಗೆ ದಕ್ಕದಂತೆ ಮಾಡಲಾಗಿದೆ. ಕೃಷಿಗೆ ಮೂಲ ಹೇಗೋ ಹಾಗೆ ಹುಡುಗಿಯಿಂದಲೇ ರೊಟ್ಟಿಯ ಸೃಷ್ಟಿ. ಭೂಮಿ / ಆಸ್ತಿಗೆ ಅವಳು ಒಡೆಯಳಲ್ಲ; ದುಡಿಮೆಗೆ ಸೀಮಿತಗೊಂಡವಳು. ಹೀಗಾಗಿ ಅವಳು ಭೂಮಿ. ಇಲ್ಲಿ ಭೂಮಿಗೂ, ಹುಡುಗಿಗೂ, ರೊಟ್ಟಿಗೂ ಅವಿನಾಭಾವ ಸಂಬಂಧ.

ಭೂಹಂಚಿಕೆಯಿಂದ ವಂಚಿತಳಾದರೂ ಬದುಕಿನ ಬಿಕ್ಕಟ್ಟಿಗೆ ದೇಹವನ್ನೇ ಕ್ಷೇತ್ರವಾಗಿಸಿ ರೊಟ್ಟಿಗೆ ಕಾರಣಳು. ಹೆತ್ತವರ ಹಸಿವನ್ನು ಹಿಂಗಿಸಿದವಳು. ಹಾಗಾಗಿ ಇಲ್ಲಿ ಹುಡುಗಿ ಪರಂಪರೆಯ ಪ್ರಜ್ಞೆ ಮತ್ತು ವಂಶೋದ್ಧಾರದ ಜಿಜ್ಞಾಸೆಯೂ ಹೌದು. ಸಮಾಂತರ ರೇಖೆಗಳನ್ನು ಕೂಡಿಸದ ಹಾಗೂ ಲಂಬವನ್ನು ಲಂಘಿಸದಂತೆ ಮಾಡಿದ ವ್ಯವಸ್ಥೆಯನ್ನು ಪಲ್ಲಟಿಸುವ, ಪರಂಪರಾಗತ ನಂಬಿಕೆಯ ಬೇರುಗಳನ್ನು ಅಲ್ಲಾಡಿಸುವುದು ಬದುಕಿಗೆ ಊರುಗೋಲಾಗಿರುವ ಹುಡುಗಿ. ಪಿತೃಪ್ರಾಧಾನ್ಯತೆಯಲ್ಲಿಯ ಲಿಂಗಾಧಾರಿತ ದುಡಿಮೆ ಮತ್ತು ಲೈಂಗಿಕ ದುಡಿಮೆ ಇವುಗಳ ವಿಭಜನೆಯಲ್ಲಿನ ರಾಜಕೀಯ ಪ್ರಶ್ನೆಯೇ ಕಾವ್ಯಕಾರಣ.

ಹರಿದ ಸೀರೆಗೆ ಬಯಲ ಬಾಗಿಲಿನಿಂದ ಸರಿದು ಬಂದ ಚಳಿ ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮಾಗಿ ಚಳಿ ತಬ್ಬಿದ್ದು ಸಖನ ಸಾಂಗತ್ಯದ ಸವಿನೆನಕೆಗಲ್ಲ. ಹಸಿದ ಹೊಟ್ಟೆಯಲ್ಲಿ ಕೊರೆಯುವ ಚಳಿ ವಸಂತಾಗಮನವನ್ನು ಸಂಭ್ರಮಿಸದ ಮನಸ್ಥಿತಿಯಲ್ಲಿ ಅವಳಿಗೆ ಸಿಕ್ಕಿದ್ದು ಮಾತ್ರ ತನ್ನನ್ನು ತಾನು ಸುಧಾರಿಸಿಕೊಳ್ಳಲಾಗದ ಬಡಮನೆಯ ಚಕ್ಕಳು. ಬಯಲಬಡತನ ಮತ್ತು ಹರಿದ ಸೀರೆ. ವ್ಯವಸ್ಥೆಯ ನಿಯಂತ್ರಣದಲ್ಲಿ ಚಲನರಹಿತತೆಯಿಂದಾಗಿ ಹುಟ್ಟಿದ ಹುಡುಗಿಯ ತಲ್ಲಣ-ಆತಂಕ-ಪ್ರಶ್ನೆಗಳು ಅಸ್ಮಿತೆಯ ಹುಡುಕಾಟವಾಗಿ `ಭಿನ್ನತೆ'ಯ ಇತಿಹಾಸವನ್ನು ಮರುಸ್ಥಾಪಿಸಬಯಸುತ್ತದೆ.

ಸಾವು ಬದುಕುಗಳ ಸಂಘರ್ಷದಲ್ಲಿ ಸಾಲುಗಟ್ಟಿನಿಂತ ಸಾವಿನ ಸರದಾರರ ಚಿತ್ರ ಹುಡುಗಿಯ ಜೀವ ರಕ್ಷಕಗಳಾಗದೆ ಸಾವಿನ ಸರದಾರರ ವ್ಯಂಗ್ಯ ಅಸಮ ಸಮಾಜದ ಅನಾವರಣವಾಗಿದೆ. ಹೆಣ್ಣು ಎಂದೂ ಧ್ವನಿ ಎತ್ತದಂತೆ ಮಾಡಿದ ವ್ಯವಸ್ಥೆ ಅವಳು ಚಲನಶೀಲಳಾಗುವುದನ್ನು ನಿರಾಕರಿಸುತ್ತದೆಂಬುವುದನ್ನು ಕರಗಲಾರದ ಹೆಪ್ಪಿಟ್ಟ ನೋವು ಧ್ವನಿಪೂರ್ಣವಾಗಿ ಹಿಡಿದಿಟ್ಟಿದೆ. ಅದನ್ನು ಕಡೆದು ಮಜ್ಜಿಗೆ, ಬೆಣ್ಣೆ, ತುಪ್ಪದಂತೆ ರೂಪಾಂತರ ಮಾಡಲಾಗುವುದಿಲ್ಲ. ಅದು ಕಾಲಾನುಕಾಲದಿಂದ ಒಂದೇ ತೆರನಾದುದು. ಅದಕ್ಕೆ ಅದು ಹೆಪ್ಪಿಟ್ಟ ನೋವು. ಶೋಷಕ ವ್ಯವಸ್ಥೆ ಯಾವತ್ತೂ ಯಥಾಸ್ಥಿತಿಯನ್ನು ವ್ಯವಸ್ಥಿತವಾಗಿ ಕಾಪಾಡುತ್ತದೆ.

ರೆಕ್ಕೆ ಬಡಿವ ಹಕ್ಕಿ ಹುಡುಗಿಯ ಜೀವನೋತ್ಸಾಹ ಹಾಗೂ ಚಲನೆಯ ಸಂಕೇತ. ಈ ಚಲನಶೀಲತೆಯನ್ನು ಹತ್ತಿಕ್ಕಿಕೊಳ್ಳುವುದು ಹರಿದ ಕುಪ್ಪಸದಲ್ಲಿ. ಅದು ರೊಟ್ಟಿಗಾಗಿ. ಈ ರೊಟ್ಟಿ ತನಗಾಗಿ ಮಾತ್ರ ಅಲ್ಲ; ಹೆತ್ತವರಿಗಾಗಿಯೂ. ಆದರೆ ಹೆತ್ತವರಿಗೆ ವಂಶೋದ್ಧಾರಕನ ನೆನಪು. ಶ್ರವಣಕುಮಾರ ಒಂದು ಅನ್ವರ್ಥಕ ಮತ್ತು ಪ್ರಶ್ನೆ ಕೂಡ. ಗಂಡನ್ನು ಮಾತ್ರ ವಾರಸುದಾರನನ್ನಾಗಿ ನಂಬಿಸಲು ಯಾಜಮಾನ್ಯ ರೂಪಿಸಿದ ಸಾಮಾಜಿಕ ನೀತಿ, ನಿರೂಪಣೆಗಳು `ಶ್ರವಣಕುಮಾರ' ರೂಪಕದ ಸಾಂಸ್ಕೃತಿಕ ಲಿಂಗರಾಜಕಾರಣವನ್ನು `ಹುಡುಗಿ ತನ್ನ ಪ್ರಾಣ ಪಕ್ಷಿಯ ಒತ್ತಿ ಹರಿದ ಕುಪ್ಪಸದಲ್ಲಿ ಹೊತ್ತಿಸಿದಳು ಬದುಕ ಕುಲುಮೆ' ಒಡೆಯುವ ಮೂಲಕ ಪ್ರತಿರೋಧ ಒಡ್ಡುತ್ತದೆ. ತನ್ನ ದೇಹದ ಮೇಲೆ ಸಾಧಿಸುವ ಪುರುಷಾಧಿಪತ್ಯವನ್ನು ಪ್ರಶ್ನಿಸುತ್ತದೆ. `ನನ್ನ ಕಿಚ್ಚಿಗೆ ಮೈಕಾಯಿಸಿಕೊಂಡ; ನೀವು ಆರಿ ತಣ್ಣಗಾಗುವುದೆಂದು' ಉರಿವ ಸೂರ‌್ಯನನ್ನು ಕೆಣಕುತ್ತಲೇ ಚಂದ್ರನಂತ ಪ್ರಿಯತಮನ ಸ್ನೇಹ-ಸಾಂಗತ್ಯದ ಹಂಬಲದ ಬಯಕೆ ನಿರಂತರವಾಗುತ್ತದೆ.

ಇಲ್ಲಿ ಮೈಮಾರಿ ತಂದೆ-ತಾಯಿಯನ್ನು ಬದುಕಿಸಿದ ಹುಡುಗಿ ನೈತಿಕತೆಯ ನಿಷ್ಕರ್ಷೆ ಮಾಡುವ ಸಮಾಜದಲ್ಲಿ ಅಧೀರಳಲ್ಲ. ಅವಳು ಛಲದ ಬಿಸಿಯುಸಿರ ದೀಪ ಹಚ್ಚಿದವಳು. ಅದಕ್ಕೆಂದೇ `ಬಾಗಿದ ಬೆನ್ನಿಗೆ ಊರುಗೊಲು ಗಂಡು' ಮಾತ್ರ ಎನ್ನುವ ಲಿಂಗತ್ವಕ್ಕೆ ಸವಾಲಾಗುತ್ತಾಳೆ. ಪಿತೃಶಾಹಿಯ `ವಂಶೋದ್ದಾರಕ' ಪರಿಕಲ್ಪನೆ ಹೇಗೆ ನಿರಾಧಾರವಾದುದು, ನಯವಂಚಕತೆಯಿಂದ ಕೂಡಿದೆ ಎಂಬುದನ್ನು ಹುಡುಗಿ ಬದುಕ ಕುಲುಮೆ ಹೊತ್ತಿಸುವ ಮೂಲಕ ನಿರೂಪಿಸುತ್ತಾಳೆ.

ಅದು ಪುರುಷದ್ವೇಷವಲ್ಲ. ಅವನು ಅವಳ ಸಹಜೀವಿ; ಸಖ. `ಹುಡುಗಿಯ ಕನಸಿನ ಚಿಕ್ಕಿಚಂದ್ರಾಮರು... ಕತ್ತಲೆ ಹೊತ್ತು ಬೆಳಕಿನಲಿ ರೊಟ್ಟಿ ತರುವ ಕೈಗಳಿಗಾಗಿ'- ರೊಟ್ಟಿಯ ಸಮಹಂಚಿಕೆಯ ಪ್ರತಿಪಾದನೆ ಪಿತೃಪ್ರಧಾನತೆಗೆ ಪರ್ಯಾಯವಾಗಿ ಮಹಿಳಾ ಇತಿಹಾಸಕ್ಕೆ ವಿಮೋಚನೆ ನೀಡುವ ದಿಸೆಯಲ್ಲಿ `ಲಿಂಗತ್ವ' ಸಂಬಂಧವನ್ನು ಪ್ರಜಾಸತ್ತಾತ್ಮಕಗೊಳಿಸುವತ್ತ ವೈಚಾರಿಕ ಸ್ಫೋಟವನ್ನುಂಟು ಮಾಡಿದೆ.
-ಡಾ. ಅನಸೂಯಾ ಕಾಂಬಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.