ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಧನೆಯ ದಾರಿಯಲ್ಲಿ ಸಿಗದ ಅಮರಾವತಿ

Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ಅನಂತಮೂರ್ತಿಯವರ ಇಲ್ಲಿನವರೆಗಿನ ಕವಿತೆಗಳನ್ನು ಅವರ ಅನುವಾದಗಳನ್ನೂ ಒಳಗೊಂಡಿರುವಂತೆಯೇ ಅವರ ಈವರೆಗಿನ ಮೂರು ಸಂಕಲನಗಳಿಗೆ ಅವರು ಬರೆದುಕೊಂಡಿದ್ದ ಅರಿಕೆಗಳು, ಎಚ್ಚೆಸ್ವಿಯವರು ಬರೆದ ಪ್ರವೇಶವಲ್ಲದೇ ಕೆ.ವಿ. ತಿರುಮಲೇಶರ ಒಂದು ಲೇಖನ ಮತ್ತು ಸ್ವತಃ ಅನುವಾದಗಳಿಗಾಗಿ ಅನಂತಮೂರ್ತಿಯವರೇ ಬರೆದ ಟಿಪ್ಪಣಿಗಳಲ್ಲದೇ ಹಿರಿಯ ವಿಮರ್ಶಕ ಜಿ.ಎಸ್. ಅಮೂರ ಅವರ ಲೇಖನವೂ ಸೇರಿಕೊಂಡು  `ಸಮಸ್ತ ಕಾವ್ಯ' ಪ್ರಕಟವಾಗಿದೆ.

15 ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಬಿಡಿ ಕವಿತೆಗಳು, ಅಭಾವ, ಪಚ್ಚೆರೆಸಾರ್ಟ್ ನಲ್ಲಿರುವ ಪದ್ಯಗಳಲ್ಲದೇ ಯೇಟ್ಸ್, ಬ್ರೆಕ್ಟ್, ರಿಲ್ಕೆ ಮತ್ತು ಲವೋತ್ಸೆಯ ದಾವ್ ದ ಜಿಂಗ್ ಅನುವಾದಗಳನ್ನು ಒಟ್ಟು ಈವರೆಗೆ ಕಾವ್ಯವೆಂದು ಅನಂತಮೂರ್ತಿಯವರು ಪ್ರಕಟಿಸಿದ್ದರೂ ಒಟ್ಟೂ ಅವರ ಗದ್ಯವೇ ಪದ್ಯಗಂಧಿಯಾಗಿರುವುದು, ಹಾಗೆಯೇ ಅವರ ಪದ್ಯಗಳು ಗದ್ಯಗಂಧಿಯಾಗಿರುವುದನ್ನೂ ನಾವೆಲ್ಲರೂ ಬಲ್ಲೆವು. ಅವರ ಉಳಿದ ಬರಹಗಳಷ್ಟು ಅವರ ಕಾವ್ಯಕೃಷಿಯ ಫಸಲು ಏಕೆ ಜನಪ್ರಿಯವಾಗಲಿಲ್ಲವೆಂಬ ಆತಂಕವನ್ನು ಅವರು ಹಲವು ಬಾರಿ ತೋರಿಸಿಕೊಂಡಿದ್ದಿದೆ.

ಭಿನ್ನರೀತಿಯ ರಚನೆಯ ಕಾರಣದಿಂದಾಗಿ ಇಷ್ಟವಾಗಬಹುದಾದರೂ ಸಮ್ಮತಿಯ ಪ್ರಜ್ಞೆಯಿಂದಾಗಿ ಪ್ರಾಯಶಃ ಅವರ ಕಾವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಿಮರ್ಶೆಯ ಆಕೃತಿಯ ಪರಿಭಾಷೆಯಲ್ಲಿಡದೇ ಅವರ ಅನುಭವದ ರಭಸದ ಸೆಳೆತದಲ್ಲೇ ಅವನ್ನೋದಿದ ನಂತರ ಮೂಡುವ ಭಾವನೆ ಅವ್ಯಕ್ತಕ್ಕೆ ತೆರೆದುಕೊಳ್ಳುವ ಕಾರಣದಿಂದಲೂ ಪ್ರಾಯಶಃ ಅವರ ಕಾವ್ಯ ಚರ್ಚೆಗೆ ದಕ್ಕಿಲ್ಲ. ಹಾಗಂತ ಅವರ ಚಿಂತನ ಕ್ರಮ, ಅವರ ಗದ್ಯಗಳಲ್ಲಿನ ಲಯಗಾರಿಕೆ, ಅವರ ಮಾತಿನ ಓತಪ್ರೋತತೆಯನ್ನು ಕವಿತೆಗಳಲ್ಲಿ ಕಾಣಹೊರಡುವುದು ತೀರ ಅತಿಯಾಸೆಯಾಗುತ್ತದೆ. ಏಕೆಂದರೆ ಲೇಖಕನೊಬ್ಬ ತನ್ನ ಅಭಿವ್ಯಕ್ತಿಗೆ ಸಾಧ್ಯವಿರುವ ಸಾಹಿತ್ಯದ ಎಲ್ಲ ಮಾಧ್ಯಮಗಳಲ್ಲಿ ಕೈಯಾಡಿಸಬಹುದಾದರೂ ಅವನಿಗೆ ಒಲಿಯಬಹುದಾದದ್ದು ಒಂದೋ ಎರಡೋ ಮಾಧ್ಯಮಗಳು ಮಾತ್ರ.

ಏಕೆಂದರೆ ಅನಂತಮೂರ್ತಿಯವರಿಗೆ ಮಾತು, ಗದ್ಯ, ಚಿಂತನೆ, ಕಾದಂಬರಿ ಮತ್ತು ಉಪನ್ಯಾಸಗಳು ಹೆಸರು, ಜನಪ್ರಿಯತೆಗಳನ್ನು ತಂದುಕೊಟ್ಟರೂ ಅವರು ಬರೆದ ಏಕೈಕ ನಾಟಕ ಮತ್ತು ಕವಿತೆಗಳು ಲೋಕಪ್ರಿಯವಾಗಲಿಲ್ಲ. ಈ ಮಾತು ಅವರ ಇತ್ತೀಚಿನ ಅನುವಾದಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಯೇಟ್ಸ್, ಬ್ರೆಕ್ಟ್ ಮತ್ತು ರಿಲ್ಕೆಗಳನ್ನು ಈವರೆಗೆ ಕನ್ನಡಕ್ಕೆ ತಂದವರಿಗಿಂತ ಭಿನ್ನವಾಗಿ ಮತ್ತು ಹೌದೆನ್ನಿಸುವಂತೆ ತಂದವರೇ ಅನಂತಮೂರ್ತಿಗಳು.

ಆದರೆ ಎಸ್. ಮಂಜುನಾಥರ `ಸುಮ್ಮನಿರುವ ಸುಮ್ಮೋನ'ದಷ್ಟೇನೂ ಅವರ ದಾವ್ ದ ಜಿಂಗ್ ಕಾಡುವುದಿಲ್ಲ. ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅನಂತಮೂರ್ತಿಯವರು ವಿಶ್ವದೆಲ್ಲ ಕಾವ್ಯ ಪ್ರಕಾರಗಳನ್ನು ಓದಿಕೊಳ್ಳುತ್ತ ವೃತ್ತಿಸಹಜವಾಗಿ ವಾಚಾಳಿಯಾದ ಕಾರಣ ಮಾತನ್ನು ನಿರಾಕರಿಸುವ ಮತ್ತು ದಿವ್ಯಾನುಭೂತಿಯನ್ನೇ ಬೇಡುವ ಕಾವ್ಯ ಅವರಿಗೆ ಸ್ಪಷ್ಟವಾಗಿ ಒಲಿಯದೇ ಹೋಗಿರಬಹುದು. ಆದರೂ ಛಲ ತೊಟ್ಟ ವಿಕ್ರಮಸ್ವರೂಪಿ ಅನಂತಮೂರ್ತಿಯವರು ಮಾತ್ರ ಮತ್ತೆ ಮತ್ತೆ ಕಾವ್ಯ ರಚನೆಗೆ ಕೈಹಾಕುತ್ತಲೇ ಉಳಿದವರ ಕಾವ್ಯಕ್ರಿಯೆಗೆ ಪ್ರತಿಕ್ರಿಯಿಸುತ್ತಲೇ ತಮ್ಮ ಕಾವ್ಯ ಜೀವಂತಿಕೆಯನ್ನು ಮೆರೆಸುತ್ತಲೇ ಇದ್ದಾರೆ.

ಕಾವ್ಯ ಬರೆಯೋದು ಗಿರಿಯೋದೆಲ್ಲ ಮನೋರೋಗಿಯ ದುಃಸ್ವಪ್ನ
ಪ್ರತಿಗಾಮಿಯ ಹತಾಶೆ
ಅದರಲ್ಲೊಂದು ಆತ್ಮದ್ವೇಷದ ಮಜಾ ಇದೆ ಬೂರ್ಜ್ವಾಗೆ
ದೇರ್‌ಫೋರ್ ಅದು ಜೀವ ವಿರೋಧಿ
(ಲೂಕಾಚ್ಸ್, ಕಾಫ್ಕಾ ದನ್ಯೂಬ್)

ಹಂಗೇರಿಯ ಲೂಕಾಚ್ಸ್‌ನನ್ನು ವರ್ಣಿಸಿದ ಸಾಲುಗಳನ್ನೇ ನೋಡಿ. ಪೂರ್ತಿಯಾಗಿ ಉದ್ಧರಿಸದಿದ್ದರೆ ಅನಂತಮೂರ್ತಿಯವರೇ ಸ್ವತಃ ಕಾವ್ಯವನ್ನು ಜೀವವಿರೋಧಿ ಅಂದಿದ್ದಾರೆ ಅನ್ನುವ ಅವಸರ ಇಲ್ಲಿ ಸಲ್ಲದ್ದು. ಸೆಕ್ಯುಲರ್ ಋಷಿ, ಪ್ರಗತಿಶೀಲ ಕಲೆಗಾರಿಕೆ, ದೇರ್‌ಫೋರ್, ಹೆನ್ಸ್ ಏನೆಲ್ಲ ಆಮದು ಪದಗಳನ್ನು ಬೇಕಾದಂತೆ ಬಗ್ಗಿಸಿ, ಒಗ್ಗಿಸಿದ ಈ ಕ್ರಮ ತಟ್ಟನೆ ಕಾವ್ಯ ನಿರ್ಮಾಣದ ಸಿದ್ಧ ಮಾದರಿಯ ಪಾತಳಿಗೆ ಎರವಾಗುವಂತೆ ಕಾಣತೊಡಗುತ್ತದೆ. ಮಾತಿನ ಭರದಲ್ಲಿ  ತತ್ವವನ್ನು ಬೇಕಾದಂತೆ ಸಿಗಿಯುತ್ತಲೇ ನಗರನಿರ್ಮಿತ ಭಾಷಾ ಫ್ಯಾಷನ್‌ನಲ್ಲಿ ಉಪದೇಶಕ್ಕೆ ನಿಲ್ಲುವುದು, ಕಾವ್ಯ ನಿರ್ಮಿತಿಯ ಬಿಗುಬಂಧಗಳನ್ನು ಬಿಟ್ಟುಕೊಟ್ಟು ವೈಚಾರಿಕ ಎಳೆಗಳಲ್ಲೇ ಅದನ್ನು ನೇಯುವುದು ಮೂರ್ತಿಗಳ ಕಾವ್ಯ ಕ್ರಮ.

ರಾಜಕೀಯ , ಸಾಮಾಜಿಕ, ತಾತ್ವಿಕ, ಸಾಂಸ್ಕೃತಿಕ ಸಂಗತಿಗಳನ್ನು ತಮ್ಮ ರಚನೆಗಳಲ್ಲಿ ಇದುವರೆಗೆ ಕಂಡ ಕ್ರಮದಿಂದ ಬೇರೆಯಾಗಿಸಿ ಎಂದಿನ ತಮ್ಮ ಡಿಫರೆಂಟ್ ವ್ಯಕ್ತಿತ್ವವನ್ನು ಅವರು ಕಾಪಾಡಿಕೊಂಡಿದ್ದಾರೆ. ಅದರಲ್ಲೂ ನೆಹರೂ-ಗಾಂಧಿ, ರಮಣ-ಪಿಕಾಸೊ, ರಾಮ-ಕೃಷ್ಣ, ತೊಡೆ-ಹೃದಯ, ಭಕ್ತಿ-ವಿಭಕ್ತಿ, ವ್ಯವಸ್ಥೆ-ಅರಾಜಕತೆ, ಮುಂತಾದ ಪರಸ್ಪರ ವಿರೋಧಗಳಲ್ಲೇ ಮತ್ತೊಂದು ನವನೀತವನ್ನು ಕಡೆದು ತೆಗೆಯುವ ಪ್ರಯತ್ನ ಮಾಡಿದವರು. ಅವರ ಕಾವ್ಯದಲ್ಲಿ  ಹಿಡಿದೆಳೆಯುವ ಚುಂಬಕ ಶಕ್ತಿಯಿಲ್ಲದಿದ್ದರೂ ತೊಡಗಿದಾಗಷ್ಟೇ ತೊಡಗಿಸಿಕೊಳ್ಳುವ, ಹೇಳುವ ರೀತಿಗಿಂತ ಹೇಳ ಹೊರಟ ಸಂಗತಿಯ ಸೂಕ್ಷ್ಮವೇ ಆಕರ್ಷಣೀಯವಾಗಿಬಿಡುವುದು ಮಿತಿಯೋ, ಅಥವಾ ಹೆಚ್ಚುಗಾರಿಕೆಯೋ ಯಾರೂ ಸ್ಪಷ್ಟವಾಗಿ ಗುರುತಿಸಿಲ್ಲ. ಅಡಿಗರ ಪದ್ಯಗಳಿಗೆ ಬಹಳ ಒಳ್ಳೆಯ ಪ್ರವೇಶಗಳನ್ನು ಒದಗಿಸಿದ ಅನಂತಮೂರ್ತಿಯವರಂತೆ ಅನಂತಮೂರ್ತಿಗಳ ಪದ್ಯಗಳಿಗೆ ಪ್ರವೇಶಿಕೆಗಳನ್ನು ಒದಗಿಸಿದವರು ತೀರ ಕಡಿಮೆ.

  `ಮಿಥುನ'  ಸಂಕಲನ ಕುರಿತು ಎಚ್ಚೆಸ್ವಿ ಬರೆದ ಮಾತುಗಳು ಮೇಲ್ನೋಟದ ವಿಮರ್ಶೆಯಾಗಿದೆಯೇ ವಿನಾ ಅದೇನೂ ಅನಂತಮೂರ್ತಿಗಳ ಪದ್ಯಗಾರಿಕೆಗೆ ಹಿಡಿಯಬಹುದಾದ ನಿಲುವು ಕನ್ನಡಿಯಾಗಿಲ್ಲ. ಆದರೆ ಇದೇ ಎಚ್ಚೆಸ್ವಿ `ಅಜ್ಜನ ಹೆಗಲ ಸುಕ್ಕುಗಳು' ಸಂಕಲನಕ್ಕೆ ಬರೆದ ಮಾತುಗಳು ಮಾತ್ರ ಆರಾಧನಾ ಮನೋಭಾವನೆಯನ್ನು ಮೀರಿದ ವಿಮರ್ಶಕ ಪ್ರಜ್ಞೆಯ ಝಳದಲ್ಲಿ ಹೌದೆನ್ನಿಸುವಂತಿದೆ. ಅವರ ಮೊದಲ ಮೂರು ಸಂಕಲನಗಳ ಬಗ್ಗೆ ಕೆ.ವಿ. ತಿರುಮಲೇಶರ ನಿರ್ಭಿಡೆಯ ಮತ್ತು ನೇರ ನಿರೂಪಣೆಯ ಬರಹ ಒಂದು ಪಕ್ಷಿನೋಟದ ನಿಜವಾಗಿ ಅನಂತಮೂರ್ತಿಗಳ ಕಾವ್ಯಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಮತ್ತು ಈವರೆಗೂ ಕನ್ನಡ ವಿಮರ್ಶಾ ಲೋಕವು ಅನಂತಮೂರ್ತಿಗಳ ಕಾವ್ಯವನ್ನು ನಡೆಸಿಕೊಂಡ ಕ್ರಮದ ಬಗ್ಗೆ ಬೆಳಕು ಚೆಲ್ಲಿದೆ. ಆದರೆ ಅನಂತಮೂರ್ತಿಗಳೇ ಸ್ವತಃ ಅವರ ಅನುವಾದಗಳಿಗಾಗಿ ಬರೆದುಕೊಂಡಿರುವ ಟಿಪ್ಪಣಿಗಳು ನಿಜಕ್ಕೂ ಭವಿಷ್ಯದ ಅನುವಾದಕರಿಗೆ ಒಂದು ಮಾರ್ಗಸೂಚಿಯೇ ಆಗಿದೆ.

ಇನ್ನು `ಸಮಸ್ತ ಕಾವ್ಯ'ದ ಮುನ್ನುಡಿಯಾಗಿ ಜಿ.ಎಸ್. ಆಮೂರರ ಹಳೆಯ ಲೇಖನದ ಪರಿಷ್ಕೃತ ರೂಪವನ್ನು ಬಳಸಲಾಗಿದೆ. ಪ್ರಾಯಶಃ ಹೊಸತೊಂದು ಲೇಖನವೊಂದನ್ನು ಆಮೂರರೇ ಹೊಸ ಓದಿನ ಮೂಲಕ ಗ್ರಹಿಸಿ ಬರೆದಿದ್ದರೆ ಆಗ ಅದರ ಸ್ವರೂಪವೇ ಬೇರೆಯಾಗಿರುತ್ತಿತ್ತು. ಏಕೆಂದರೆ ಬಿಡಿ ಬಿಡಿಯಾಗಿ ಕವಿಯೊಬ್ಬನನ್ನು ಓದುವ ಕ್ರಮ ಅವನ ಎಲ್ಲ ರಚನೆಗಳನ್ನೂ ಒಟ್ಟಿಗಿಟ್ಟುಕೊಂಡು ಓದುವಾಗಿನ ಕ್ರಮದಿಂದ ಖಂಡಿತವಾಗಿ  ಬೇರೆಯಾಗುತ್ತದೆ ಮತ್ತು ಆ ಹೊಸ ಓದಿನ ನಂತರ ಕವಿಯನ್ನು ಗ್ರಹಿಸಿದ ರೀತಿಯೇ ಬೇರೆಯಾಗುತ್ತದೆ.

`ಸಮಸ್ತ ಕಾವ್ಯ'  ಓದಿಗೆ ಹೀಗೆ ಅದರ ಅಡಕಗಳಾಗಿ ಪ್ರಕಟವಾಗಿರುವ ಲೇಖನಗಳು ಒಂದು ಬಗೆಯ ಪ್ರವೇಶವನ್ನು ಒದಗಿಸುತ್ತವಾದರೂ ಆ ಎಲ್ಲ ಲೇಖನಗಳು ಸಿದ್ಧಮಾದರಿಯ ಓದಿಗೇ ಪ್ರೇರೇಪಿಸುವುದರಿಂದ ಮುನ್ನುಡಿಗಳನ್ನು ಗಮನಿಸಿಯೇ ಕೃತಿಯೊಂದರ ಓದಿಗೆ ತೊಡಗುವವರ ಚಿತ್ರಕ ಶಕ್ತಿಯನ್ನು ತಕ್ಕಮಟ್ಟಿಗೆ ಕುಗ್ಗಿಸುತ್ತವೆ. ಇತ್ತೀಚೆಗೆ ಹಲವು ಲೇಖಕರ ಸಮಗ್ರಗಳೂ, ಸಮಸ್ತಗಳೂ ಬೇರೆ ಬೇರೆ ಕಾರಣಗಳಿಗಾಗಿ ಪ್ರಕಟವಾಗುತ್ತಿರುವಾಗ ಆಯಾ ಲೇಖಕರೂ, ಪ್ರಕಾಶಕರೂ ಈ ದಿಕ್ಕಿನಲ್ಲಿ ಕೊಂಚ ಯೋಚಿಸುವುದು ಒಳ್ಳೆಯದು.

ಎದೆಯ ಕಗ್ಗವಿಯಲ್ಲು ಜ್ವಲಿಪ ಜ್ಯೋತಿರ್ಲಿಂಗ/ ಬಯಕೆಯರಮನೆಯಲ್ಲು ಬೋಧಿವೃಕ್ಷದ ಸುಯ್ಲು (ರಾಜನ ಕಳವಳದ ಪದ್ಯ) ಎಂದು ನವ್ಯದ ಶೈಲಿಯಲ್ಲಿ ಆರಂಭಿಸಿದ ಅನಂತಮೂರ್ತಿ ನಮ್ಮ ನಮ್ಮ ಹಾದೀಲಿ ನಡೆದು ಹೋಗಲೇಬೇಕಾದ /ಸಂಸಾರದ ಗೋಳು ಇದ್ದೇ ಇರುತ್ತೆ./ ದಾರಿ ತುಂಬ ಮುಳ್ಳು./ ಈ ಮುಳ್ಳುಗಳ ನಡುವೆಯೂ ಅವನ ಅಕಸ್ಮಾತ್ ದರ್ಶನದ ಸೋಜಿಗ ಕೂಡ (ಈ ಲೋಕದಲ್ಲಿ ಆ ಲೋಕ) ಎಂದು ಅಂದುಕೊಳ್ಳುವಾಗ ಅವರು ಕ್ರಮಿಸಿದ ದೀರ್ಘ ಪಯಣದ ಅನುರಣನವಾಗಿಯೇ ಕಾಣುತ್ತದೆ.

ಯಾವ ನಿಶ್ಚಯಕ್ಕೂ ತಲುಪಲಾರದ, ಹಕ್ಕಿಯೂ ಅಲ್ಲದ ಪ್ರಾಣಿಯೂ ಅಲ್ಲದ ಬಾವಲಿ ಅವರ ಮೆಟಫರ್ ಆಗಿದ್ದ ಕಾಲದಿಂದ ಹಿಡಿದು ಇಲ್ಲಿನವರೆಗೂ ಕಾವ್ಯದ ಅನುಸಂಧಾನದಲ್ಲೇ ತೊಡಗಿರುವ ಅವರು ನಾನು ಆಡುವ ಮಾತು ನನ್ನನ್ನೇ ಕಾಣಬಲ್ಲವೆ? / ಅದೃಷ್ಟ ಬೇಕು (ಕಾವ್ಯದ ಆತ್ಮಾನುಸಂಧಾನ) ಎಂದು ಸ್ವವಿಮರ್ಶೆಗೆ ತೊಡಗುತ್ತಾರಲ್ಲ ಅದು ಕವಿಯೊಬ್ಬನ ಮಾಗಿದ/ಮಾಯದ ಗಾಯಗಳ ಸ್ಪರ್ಶಹಿತದಂತೆ ಭಾಸವಾಗುತ್ತದೆ. ಅಂಬೆಗಾಲಿಡುವಾಗ ಹೊಸಿಲು ದಾಟಿದ ದಿನವೆ/ ಮಾಯೆಯುಂಗರವೊಂದ ಕಳೆದುಕೊಂಡೆನೊ ಏನೋ! (ನವ್ಯ ಕವಿಗೆ) ಎಂದು ಮರುಗುವ ರೀತಿ ಈಚೆಗಿನ ಅವರ ಬರಹ-ಚಿಂತನಗಳಲ್ಲೂ ವ್ಯಾಪಿಸಿರುವುದನ್ನು ಸೂಕ್ಷ್ಮಗ್ರಾಹಿಗಳು ಕಾಣಬಲ್ಲರು. 15 ಪದ್ಯಗಳು ಸಂಕಲನದ ಹಲವು ಕವಿತೆಗಳನ್ನು ಇವತ್ತಿಗೂ ಮೆಚ್ಚುವುದಕ್ಕೆ ಕಾರಣ ಆ ಸಂಕಲನದ ಮೇಲೆ ಬಿಟ್ಟೂ ಬಿಡದೇ ವ್ಯಾಪಿಸಿರುವ ಅಡಿಗಮಾದರಿಯ ನವ್ಯದ ಪ್ರಭಾವ.

ಮೊದಲ ಸಂಕಲನದಿಂದ ಇಪ್ಪತ್ತು ವರ್ಷಗಳಷ್ಟು ದೀರ್ಘ ಅಂತರದಲ್ಲಿ ಅವರು ಪ್ರಕಟಿಸಿದ `ಅಜ್ಜನ ಹೆಗಲ ಸುಕ್ಕುಗಳು' ನವ್ಯದ ಪೋಷಾಕು ಕಿತ್ತೆಸೆದ ಪರಮ ಮುಕ್ತ ನೆಲೆಯಲ್ಲಿ ಕಟ್ಟಲ್ಪಟ್ಟಿದೆ. ಮಾತಿನ ಲಯದಲ್ಲಿ ವೈಚಾರಿಕ ನೆಲೆಯನ್ನು ವಿಸ್ತರಿಸಿಗೊಳ್ಳುವುದಕ್ಕಾಗಿ ವಾದದ ಹುಮ್ಮಸ್ಸನ್ನೇ ಧಾರೆಯೆರೆದ ಹಾಗೆ ಕಾಣುವ ಇಲ್ಲಿನ ಕವಿತೆಗಳು ಸಿದ್ಧ ಮಾದರಿಯ ಯಾವ ತಕ್ಕಡಿಯಲ್ಲೂ ತೂಗಲು ಸಾಧ್ಯವಿಲ್ಲದಂಥವು. ಮಗು ಬೆರಗಿನಲ್ಲಿ ಏನದು ಅಂದರೆ/ ನವಿಲು ಎಂದು/ ಬಿಡ್ತೀವಿ. /ಆ ಶಬ್ದ ಗೊತ್ತೇ ಇರಲಿಲ್ಲ ಎನ್ನಿ, ಆಗ /ಅದು ಏನು? (ಶಬ್ದ ಸೂತಕ) ಇದು ಮಾತಿನ ಲಯವನ್ನಷ್ಟೇ ಕಾಪಾಡಿಕೊಳ್ಳಲು ಹೂಡಿದ ತರ್ಕವಲ್ಲದೇ ಮತ್ತೇನು?

ವಾದಕ್ಕೆ ಪ್ರತಿವಾದ ಹೂಡುವುದು ಇಲ್ಲವೇ ವಿವಾದದ ಬೆನ್ನುಹತ್ತುವ ಅವರ  `ಚಪಲ'  ಕವಿತೆಯಾದಾಗ ಹೀಗಾಗಿರಬಹುದೋ ಏನೋ? ಜೊತೆಗೇ ಕವಿಯನ್ನೂ ಕವಿತೆಯನ್ನೂ ಶೋಧಿಸುತ್ತಲೇ ಇರುವ ಅವರು ಒಂದು ಚಿಗುರೀತೆಂದು ಹತ್ತು ಬಿತ್ತುವುದು/ ವಿಫಲ, ಎಷ್ಟು ಸಲ / ತುಡಿಯುವುದು, ಕ್ಷಣ ಮಾತ್ರ ತಣಿಯುವುದು (ಮೊದಲ ಸಲವಲ್ಲ) ಅನ್ನುವಾಗ ಧರಿಸುವ ವಿನಯ ಮತ್ತು ಒಪ್ಪಿಕೊಳ್ಳುವ ಸೋಲು ಕವಿಯನ್ನು ಶ್ಲಾಘಿಸುವಂತೆ ಮಾಡುತ್ತವೆ.

ಇನ್ನು ಈ ಸಂಕಲನದಲ್ಲಿ ಅವರು ಪರಸ್ಪರ ವಿರೋಧಿ ನಿಲುವುಗಳನ್ನು ಮುಖಾಮುಖಿಯಾಗಿಸಿ ಒಳಗಿನ ದ್ವಂದ್ವಗಳನ್ನು ಅರಿವಿನ ನಿಜಕ್ಕೆ ವಿಸ್ತರಿಸುವ ಕ್ರಮವಿದೆಯಲ್ಲ ಅದು ಈವತ್ತಿಗೂ ಅನುಕರಣೀಯ. ಭಟ್ಟ ತಿರಿಯ ವಾಕ್ ಸಿದ್ಧಿಗೆ ಸೋತದ್ದು ಮುರಾರಿಯ ಮನಸ್ಸಾದರೆ / ದೀನಕವಿ  ಪುಂತಾನಂ ದೇಸಿ ಸೊಗಸಿಗೆ ಹೃದಯವನ್ನೆ/ ತೆತ್ತ ಗೊಲ್ಲ ಗೋವಿಂದ (ಭಕ್ತಿ-ವಿಭಕ್ತಿ) ಮುರಾರಿ ಇಲ್ಲಿ ಶ್ರೇಣೀಕೃತ ಸಮಾಜದ ದೇವರಾದರೆ ಗೊಲ್ಲ ದೀನರ ದನಿಯಾಗಿದ್ದಾನೆ. ಇದೇ  `ಮತ್ಸ್ಯಾವತಾರಿ'ಯಲ್ಲೂ ಮುಂದುವರೆದು `ರಾಮನೋ ಕೃಷ್ಣನೋ' ಕವಿತೆಯಲ್ಲಿ ಕವಿಯ ಚಿಂತನೆಯ ತುರೀಯಕ್ಕೆ ಓದುಗನನ್ನೊಯ್ಯುತ್ತದೆ. ನಂಬುಗೆಗಳಿಗೆ  ಸಂಘರ್ಷದ ಕಾವು ಮುಟ್ಟಿಸುವ ಈ ಪದ್ಯದ ಹದ ಸಂಕಲನದ ಬಹುಪಾಲು ಕವಿತೆಗಳಿಗೆ ತಾಗಿಸುತ್ತ, ಸಮಕಾಲೀನ ಬದುಕಿನ ಮುಖಗಳನ್ನು ಪರಂಪರೆಯ ಪಾಕದಲ್ಲದ್ದಿ ಸಾಂಸ್ಕೃತಿಕ ಅನುಸಂಧಾನಕ್ಕೆಳಸುವ ಪರಿ, ಕಾವ್ಯದ ಸಿದ್ಧ ಮಾದರಿಯ ಭಾಷೆಯನ್ನು ಮೀರಿದ ಹೊಸತನಕ್ಕೆ `ನೋನು'ತ್ತಿರುವುದರ ಸಾಕ್ಷಿಯಾಗಿಯೂ ಕಾಣಬಹುದು.

ಇನ್ನು ಅವರ ಮೂರನೆಯ ಸಂಕಲನ `ಮಿಥುನ'ದ ಪದ್ಯಗಳನ್ನು ಗಮನಿಸಿದರೆ ಅದು ಬದುಕಿನ ಹಲವು ಮುಖಗಳ ಕೊಲಾಜ್‌ನಂತೆ ರಾರಾಜಿಸಿರುವುದನ್ನು ಕಾಣಬಹುದು. ಬೆನ್ನ ಹಿಂದಿನ ಭೂತ, ವರ್ತಮಾನದ ತಹತಹಿಕೆ, ಅಧ್ಯಾತ್ಮದ ಸೆಳೆತ, ಬಿಡದೇ ಕಾಡುವ ಕಾಮ ಇಂಥ ನೆಲೆಗಳಲ್ಲೇ ಭಿನ್ನ ಭಾವಗಳಲ್ಲಿ `ಮಥಿಸಿ'  ಹಾಗೂ ಅವನ್ನೇ  `ಮೈಥುನ'ಕ್ಕೆಳಸಿ ಏಕಾಗ್ರತೆಯಲ್ಲಿ ಚಿಂತನೆಯ ಬೀಜವನ್ನು ಬಿತ್ತುವುದು ಈ ಕವಿತೆಗಳ ಘನ ಉದ್ದೇಶ. ಶಕ್ತ ರಾಜಕಾರಣದ ನೆಲೆಗಳನ್ನು ವಿಶ್ಲೇಷಿಸುತ್ತಲೇ ವಸಾಹತುಶಾಹಿ ಅನುಭವಗಳ ಪ್ರತಿಕ್ರಿಯೆ ನೀಡುವುದು, ಮನುಷ್ಯ ದ್ವಂದ್ವಗಳ ತಾಕಲಾಟದಲ್ಲೇ ನಿಜಕ್ಕೆ ತುಯ್ಯುವುದು ಸಂಕಲನದ ತುಂಬ ಹರಿದಾಡಿರುವ ಪಾತ್ರಗಳನ್ನು ಗಮನಿಸದರೆ ಕಣ್ಣಿಗೆ ರಾಚುತ್ತದೆ.

ಲೆನಿನ್, ಟಾಲ್‌ಸ್ಟಾಯ್, ಪುರಂದರ, ಅದ್ವಾನಿ, ಗಾಂಧಿ, ವ್ಯಾನ್‌ಗೋ, ನೆಹರು, ಪರಮಹಂಸ, ಮುಂತಾದವರು ಇಲ್ಲಿನ 42 ಕವಿತೆಗಳಲ್ಲಿ ಕಾದು, `ಕಾದು' , ಹೊಂಚು ಹಾಕಿ ನಮ್ಮನ್ನು ಕಾಡುತ್ತಾರೆ. ಅನಂತಮೂರ್ತಿಗಳ ಕಾವ್ಯವು ಸಾಂಸ್ಕೃತಿಕ ಚರಿತ್ರೆಯಲ್ಲಿ ಖಾಸಗಿ ವ್ಯಕ್ತಿಯ ಸಾರ್ವತ್ರಿಕ ದರ್ಶನವನ್ನು ಕೊಡಮಾಡುವುದಲ್ಲದೇ, ಆ ಮೂಲಕ ಕವಿಯು ಹುಟ್ಟಿಸುವ ತರ್ಕ ಮತ್ತು ದ್ವಂದ್ವಗಳಲ್ಲಿ ಮಾಸಲಾಗು(ತ್ತಿರು)ವ ತತ್ವಾದರ್ಶಗಳ ಕಡೆಗೆ ಗಮನ ಸೆಳೆಯುತ್ತವೆ. ಆದರೆ ನಿಮ್ಮಂತೆ ಸರಳವಾಗಿ ಸಹಜವಾಗಿ ಸತ್ಯವಾಗಿ/ ನಾವು ಬರೆಯಬೇಕೆಂದರೆ ಗುರು/ ನಿಮ್ಮಂತೆ ಬರೆಯಬಾರದು /ಇರಬೇಕು ( ರಾಮಾನುಜನ್ ಕವಿತೆ ಓದಿ) ಅಂತ ಒಪ್ಪಿಕೊಳ್ಳುವುದಿದೆಯಲ್ಲ ಅದು ಪ್ರಾಯಶಃ ವಿನಯ ಮತ್ತು ಆವಾಹನೆಯ ತುರೀಯದಿಂದ ಮಾತ್ರ ಹುಟ್ಟುವಂಥದ್ದು.

ಇತ್ತೀಚೆಗೆ ಅವರು ಪ್ರಕಟಿಸಿರುವ ಕಡೆಯ ಸಂಕಲನ  `ಪಚ್ಚೆ ರೆಸಾರ್ಟ್' ನ ಏಳು ಪದ್ಯಗಳನ್ನು ಗಮನವಿಟ್ಟು ಯಾವ ಪೂರ್ವಗ್ರಹಗಳಿಲ್ಲದೇ ಓದಿದರೆ ಸಮಾಜವಾದಿ ಸಿದ್ಧಾಂತದ ಮತ್ತು ಶುದ್ಧ ನಿರ್ಭಿಡೆಯ ಮನಸ್ಸೊಂದು ಕಾಲಾಂತರದಲ್ಲಿ ಬದಲಾದ ಪುರಾವೆಯಾಗಿ ಕಾಣುತ್ತದೆ. ಸೂಕ್ಷ್ಮವಾಗಿ ಕೆಲವೊಮ್ಮೆ ನೇರವಾಗಿ ಕೆಲವೊಮ್ಮೆ ಸಾವನ್ನು ಕುರಿತೇ ಕವಿತೆಗಳ ಧ್ಯಾನವಿರುವುದು ಕವಿಯ ವಯಸ್ಸಿನ ಕಾರಣದಿಂದಲೇ ಅಥವಾ ಮುಂಗಾಣುತ್ತಿರುವ ಸಾವಿನ ಸತತ ಅಭ್ಯಾಸವೇ? ವ್ಯಥೆಯಾಗುತ್ತದೆ. ಕಣ್ಣುಗಳಲ್ಲಿ ಕಂಬನಿಯಾಗಿ / ಅವನೇ ಆಗಿ ಉಳಿಯದ ಅವನು/ ಜ್ವಾಲೆಗಳ ಹೂವಾಗುವನು /ಸರ್ವಸ್ವದ ವಿಳಾಸಿಯಾಗುವನು (ಸಾವಿನ ಮುಹೂರ್ತ) ಎನ್ನುತ್ತಿರುವುದು, ಸಾವನ್ನೂ ಸಂಭ್ರಮಿಸುತ್ತೇನೆಂಬ ಕವಿ ಮನದ ಆಸೆಗೆ ಶರಣು. ಅಮ್ಮ ನೆನೆಯುತ್ತೇನೆ ಅನುಭವವೊಂದರ ಸಹಜ ನಿರೂಪಣೆ.

ತಾಯಿಯ ನೆನಪನ್ನು ಅವಳ ಸಾನ್ನಿಧ್ಯದಲ್ಲಿ ತಾನು ವಿಕಸಿಸಿದ್ದನ್ನು, ಹಾಗೇ ಅವಳ ಸೌಂದರ್ಯವನ್ನೂ ಶಬ್ದಗಳಲ್ಲಿ ಹಿಡಿದಿಡುವ ಅವರ ಪ್ರಯತ್ನ ಹೊಸ ಕವಿಯೊಬ್ಬನ ಆತ್ಮೀಯ ರಚನೆಯಂತಿದೆ. ಯಾಕೋ `ತಾಯಿ' ಅಂದಕೂಡಲೇ ಲಂಕೇಶರ `ಅವ್ವ' ಕಣ್ಣ ಮುಂದೆ ಬಂದು ನಿಲ್ಲುವುದರಿಂದ ಅಮ್ಮಂದಿರು, ತಾಯಿಯರು, ಮಮ್ಮಿಗಳು ಸೋಲೊಪ್ಪಿಕೊಳ್ಳುತ್ತಾರೆ. ಇದು ಮೈಸೂರು ಮಲ್ಲಿಗೆಯೇ? ಎಂದು ಕಣ್ಣು ಕಿವಿಮುಚ್ಚಿ ಆಲಿಸಿದೆ (ಬರ್ಮಿಂಗಂನಲ್ಲಿ ಮೈಸೂರು ಮಲ್ಲಿಗೆ) ಎನ್ನುವಾಗ ಹೊರಗಣ ಕಣ್ಣು ಕಿವಿಗಳನ್ನು ಮುಚ್ಚಿಕೊಂಡು ಆಂತರ್ಯದ ಕಣ್ಣುಕಿವಿಗಳನ್ನು ತೆರೆಯಬೇಕಾದ ಅಗತ್ಯತೆಯನ್ನು ಕವಿ ಸೂಚಿಸುತ್ತಾರೆ.
ಅವರ ಅನುವಾದಗಳ ಬಗ್ಗೆ ಚರ್ಚಿಸುವುದಕ್ಕೆ ಬೇರೆಯದೇ ಆದ ಸಿದ್ಧತೆಗಳು ಬೇಕಾಗುವುದರಿಂದ ಅದರ ಬಗ್ಗೆ ಮತ್ತೊಮ್ಮೆ ಚರ್ಚಿಸುವುದು ಒಳ್ಳೆಯದು. ಅದು ಅನಂತಮೂರ್ತಿಯವರ ಸ್ವಂತ ರಚನೆಗಳನ್ನೂ ಪ್ರಭಾವಿಸಿದೆ ಮತ್ತು ಅವರ ಅನುವಾದ ಕೆಲಸಗಳಿಗೆ ಅವರ ನಿರಂತರ ಓದು ಮತ್ತು ಕಾವ್ಯಪ್ರೀತಿ ಒತ್ತಾಸೆ ತಂದಿದೆ.

ಜೀವಿತದ ಗುರಿ ಹಾಗು ಅಸ್ತಿತ್ವದ ಪ್ರಶ್ನೆಗಳಿಗಾಗಿ ಸದಾ ಅನ್ವೇಷಿಸುತ್ತಿರುವ ಅನಂತಮೂರ್ತಿಯವರ `ಸಮಸ್ತ ಕಾವ್ಯ'ದ ಓದು ಸದ್ಯದ ಕವಿಗಳಿಗೆ ಹಲವು ಸಾಧ್ಯತೆಗಳನ್ನು ವಿಪುಲ ಅನಂತ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆಯೆನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಕಿ.ರಂ ರಂಥ ಕಾವ್ಯಪ್ರೇಮಿಗಳೂ ಡಿ.ಆರ್. ನಾಗರಾಜರಂಥ ವಿಮರ್ಶಕರೂ ಇಲ್ಲದ ಕಾಲದಲ್ಲಿ ಸುತ್ತ ಸ್ವಸ್ತಿ ವಾಚಕರೇ ತುಂಬಿರುವ ಕಾಲದಲ್ಲೂ ಕಾವ್ಯ ರಚನೆಯಲ್ಲಿ ಆಸಕ್ತರಾಗಿರುವ ಜ್ಞಾನಪೀಠ ಪುರಸ್ಕೃತರ ಕಾವ್ಯೋದ್ಯೋಗಕ್ಕೆ ತಕ್ಕ ಪರಿಶ್ರಮ ದೊರಕಿಸಿಕೊಡಬೇಕಿದೆ. ದ್ವಂದ್ವಗಳಲ್ಲೇ ತಡಕಾಡುತ್ತಿರುವ ಅವರ ಕವಿತೆಗಳಾಚೆಗೆ ನಿಲ್ಲುವ, ಸುಮ್ಮನೆ ವಾದಕ್ಕೆ ವಾದ ಹೂಡುವ ಅವರ ಶಕ್ತ ಚಿಂತನಗಳಾಚೆಯ ಪರಿಧಿಯಿಂದ ಮತ್ತೊಂದು `ಕ್ಲಿಪ್ ಜಾಯಿಂಟ್' ಅಥವಾ `ಸೂರ್ಯನ ಕುದುರೆ'ಯಂಥ ಕತೆ ಹುಟ್ಟಿಬರಬಾರದೇ ಎನ್ನುವ ದುರಾಶೆಯಲ್ಲೇ ಅವರ ಕಾವ್ಯ ಶಕ್ತಿಗೆ ನಮಿಸುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT