ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೋನಿ ಎಸ್ 11 ಲೈಟ್: ಉತ್ತಮವಾಗಬಹುದಾಗಿದ್ದ ಫೋನ್

Last Updated 20 ಜೂನ್ 2018, 20:12 IST
ಅಕ್ಷರ ಗಾತ್ರ

ಗ್ಯಾಜೆಟ್‌ಲೋಕ ಅಂಕಣದಲ್ಲಿ ವಿಮರ್ಶೆ ಮಾಡುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು ಚೈನಾ ದೇಶದವು. ಅದಕ್ಕೆ ಕಾರಣವೆಂದರೆ ಭಾರತದಲ್ಲಿ ಮಾರಾಟವಾಗುತ್ತಿರುವ ಬಹುತೇಕ ಫೋನ್‌ಗಳು ಚೀನಾ ದೇಶದವು. ಚೀನಾ ದೇಶದ ಸ್ಮಾರ್ಟ್‌ಫೋನ್‌ಗಳಲ್ಲಿ ಜಿಯೋನಿ ಕೂಡ ಒಂದು. ಈ ಕಂಪನಿಯ ಕೆಲವು ಫೋನ್‌ಗಳನ್ನು ಈ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಜಿಯೋನಿ ಎಸ್11 ಲೈಟ್ (Gionee S11 Lite) ಎಂಬ ಫೋನನ್ನು.

ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡಭಾಗದಲ್ಲಿ ಸಿಮ್ ಕಾರ್ಡ್‌ಗಳನ್ನು ಹಾಕಲು, ಪಿನ್‌ ಮೂಲಕ ಚುಚ್ಚಿದಾಗ ಹೊರಬರುವ ಚಿಕ್ಕ ಟ್ರೇ ಇದೆ. ಈ ಟ್ರೇಯಲ್ಲಿ ಒಂದು ನ್ಯಾನೊ ಸಿಮ್ ಮತ್ತು ಮೆಮೊರಿ ಕಾರ್ಡ್‌ಹಾಕಬಹುದು ಅಥವಾ ಎರಡು ನ್ಯಾನೊ ಸಿಮ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್‌ ಕಿಂಡಿ ಇವೆ. ಹಿಂಭಾಗದಲ್ಲಿ ಬಲಮೂಲೆಯಲ್ಲಿ ಎರಡು ಕ್ಯಾಮರಗಳಿವೆ. ಅವುಗಳ ಪಕ್ಕದಲ್ಲಿ ಫ್ಲಾಶ್ ಇದೆ. ಹಿಂಭಾಗದ ಸ್ವಲ್ಪ ಮೇಲ್ಭಾಗದಲ್ಲಿ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚ ತುಂಬ ನುಣುಪಾಗಿದೆ. ಅದು ಥಳ ಥಳ ಹೊಳೆಯುತ್ತದೆ. ಬದಿಗಳಲ್ಲಿ ಸ್ವಲ್ಪ ಬಾಗಿದೆ. ಹೆಚ್ಚಿಗೆ ಕವಚ ಹಾಕಿಕೊಳ್ಳದಿದ್ದರೆ ಕೈಯಿಂದ ಜಾರಿ ಬೀಳಬಹುದು. ಕೈಯಲ್ಲಿ ಹಿಡಿದುಕೊಂಡಾಗ ಒಂದು ಮೇಲ್ದರ್ಜೆಯ ಫೋನನ್ನು ಹಿಡಿದುಕೊಂಡ ಅನುಭವವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಫೋನಿನ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಈ ವಿಭಾಗದಲ್ಲಿ ಇದಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಇದು ಅತಿ ವೇಗದ ಫೋನ್ ಅಲ್ಲ. ಅಂಟುಟು ಬೆಂಚ್‌ಮಾರ್ಕ್ 54,393 ಇದೆ. ಅದರೂ ದಿನನಿತ್ಯದ ಕೆಲಸಗಳಲ್ಲಿ ಇದು ಕಡಿಮೆ ವೇಗದ ಫೋನ್ ಎಂದು ಅನ್ನಿಸುವುದಿಲ್ಲ. ಸಾಮಾನ್ಯ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಆದರೆ ಅಧಿಕ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವ ಅನುಭವ ಅಷ್ಟು ತೃಪ್ತಿದಾಯಕಾಗಿಲ್ಲ. ಹಲವು ಕಿರುತಂತ್ರಾಂಶಗಳನ್ನು (ಆಪ್) ಏಕಕಾಲದಲ್ಲಿ ತೆರೆದರೆ ಕೆಲವೊಮ್ಮ ತಡೆತಡೆದು ಕೆಲಸ ಮಾಡುತ್ತದೆ. ತುಂಬ ಹೊತ್ತು ಬಳಸಿದರೆ ಬಿಸಿಯಾಗುವುದಿಲ್ಲ.

ಇದರ ಪ್ರಾಥಮಿಕ ಕ್ಯಾಮೆರಾ 13 ಮತ್ತು 2 ಮೆಗಾಪಿಕ್ಸೆಲ್‌ ರೆಸೊಲೂಶನ್‌ನವು. ಅದರ ಕಿರುತಂತ್ರಾಂಶದಲ್ಲಿ (ಆ್ಯಪ್) ಹಲವು ವಿಶೇಷ ಸವಲತ್ತುಗಳನ್ನು ನೀಡಿದ್ದಾರೆ. ಮ್ಯಾನ್ಯುವಲ್ ವಿಧಾನವೂ ಇದೆ. ಕ್ಯಾಮೆರಾದ ಫಲಿತಾಂಶಗಳು ಕೆಲವು ಸಂದರ್ಭಗಳಲ್ಲಿ ಚೆನ್ನಾಗಿ ಬರುತ್ತವೆ. ಕೆಲವೊಮ್ಮೆ ಫೋಕಸ್ ಮಾಡಲು ಸ್ವಲ್ಪ ಕಷ್ಟಪಡುತ್ತದೆ. ಕಡಿಮೆ ಬೆಳಕಿನಲ್ಲೂ ಕೆಲವೊಮ್ಮೆ ಫೋಟೊ ತೃಪ್ತಿದಾಯಕವಾಗಿ ಮೂಡಿ ಬರುತ್ತದೆ. ಸ್ವಂತೀ ಫೋಟೋಗಳು ಚೆನ್ನಾಗಿ ಬರುತ್ತವೆ. ಯಾಕೆಂದರೆ ಸ್ವಂತೀ ಕ್ಯಾಮೆರಾ 16 ಮೆಗಾಪಿಕ್ಸೆಲ್‌ನದು. ಸ್ವಂತೀ ತೆಗೆಯುವಾಗ ಹಲವು ವಿಶೇಷ ಆಯ್ಕೆಗಳೂ ಇವೆ. ಸ್ವಂತೀಗೆ ಅತಿಯಾಗಿ ಸುಂದರಗೊಳಿಸುವ ಸವಲತ್ತು ಇದೆ. ಇದನ್ನು ಬಳಸಿ ನಿಮ್ಮ ಫೋಟೋ ತೆಗೆದರೆ ನಿಮಗೇ ನಿಮ್ಮ ಗುರುತು ಸಿಗುವುದು ಅನುಮಾನ!

ಇದರ ಪರದೆ 5.7 ಇಂಚು ಗಾತ್ರದ್ದು. ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೊ ಪ್ಲೇ ಆಗುತ್ತದೆ. ಆದರೆ 4k ವಿಡಿಯೋ ಸರಿಯಾಗಿ ಪ್ಲೇ ಆಗುವುದಿಲ್ಲ. ಅಲ್ಲಲ್ಲಿ ಅಡೆತಡೆದು ಪ್ಲೇ ಆಗುತ್ತದೆ. ಇದರ ಆಡಿಯೋ ಎಂಜಿನ್ ಸುಮಾರಾಗಿದೆ. ಇಯರ್‌ಫೋನ್ ಅಥವಾ ಇಯರ್‌ಬಡ್ ನೀಡಿಲ್ಲ. ನಿಮ್ಮಲ್ಲಿರುವ ಉತ್ತಮ ಇಯರ್‌ಫೋನ್ ಜೋಡಿಸಿದರೆ ಸ್ವಲ್ಪ ಮಟ್ಟಿಗೆ ತೃಪ್ತಿದಾಯಕವಾಗಿದೆ ಎನ್ನುವಂತಹ ಸಂಗೀತ ಆಲಿಸಬಹುದು.

ಕೆಲವು ಕಿರುತಂತ್ರಾಂಶಗಳನ್ನು ಅಡಗಿಸಿಡುವ ಸವಲತ್ತು ಇದೆ. ಅದಕ್ಕೆ ಸೂಕ್ತ ಪ್ರವೇಶಪದ (ಪಾಸ್‌ವರ್ಡ್‌) ಹಾಕಿ ನೀವು ಮಾತ್ರ ಬಳಸುವಂತೆ ಮಾಡಬಹುದು.

3030 mAh ಶಕ್ತಿಯ ಬ್ಯಾಟರಿ ಇದೆ. ಬ್ಯಾಟರಿ ಸುಮಾರು ಒಂದು ದಿನಕ್ಕೆ ಬಾಳಿಕೆ ಬರುತ್ತದೆ. ಕನ್ನಡ ಭಾಷೆಯ ಯೂಸರ್ ಇಂಟರ್‌ಫೇಸ್ ಇದೆ. ಆದರೆ ಹಾಗೆ ಮಾಡಿಕೊಂಡಾಗ ಫೋನ್ ನಿಧಾನವಾಗಿ ಕೆಲಸ ಮಾಡುತ್ತದೆ. ಅಷ್ಟು ಮಾತ್ರವಲ್ಲ, ಕೆಲವು ಕಡೆ ಕನ್ನಡದ ಅನುವಾದ ಮತ್ತು ತೋರುವಿಕೆ (rendering) ಸರಿಯಿಲ್ಲ. ಇದರಲ್ಲಿರುವುದು ಹಳೆಯ ಆ್ಯಂಡ್ರಾಯ್ಡ್‌. ಹೊಸ ಆವೃತ್ತಿಗೆ ನವೀಕರಣ ಯಾವಾಗ ನೀಡುತ್ತಾರೋ ಗೊತ್ತಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುವ ಫೋನ್‌ಗಳಿಗೆ ಹೋಲಿಸಿದರೆ ಇದರ ಗುಣಮಟ್ಟಕ್ಕೂ ಬೆಲೆಗೂ ಹೊಂದಿಕೆಯಾಗುವುದಿಲ್ಲ. ಬೆಲೆ ಸ್ವಲ್ಪ ಜಾಸ್ತಿಯಾಯಿತು ಎಂದೇ ಹೇಳಬಹುದು.

ಗುಣವೈಶಿಷ್ಟ್ಯಗಳು

* ಪ್ರೋಸೆಸರ್ 8 x 1.4 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm MSM8937 Snapdragon 430)
* ಗ್ರಾಫಿಕ್ಸ್ ಪ್ರೋಸೆಸರ್ Adreno 505
* ಮೆಮೊರಿ 4 + 32 ಗಿಗಾಬೈಟ್
* ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಹೈಬ್ರಿಡ್)
* ಪರದೆ 5.7 ಇಂಚು ಗಾತ್ರ, 1440 x 720 ಪಿಕ್ಸೆಲ್ ರೆಸೊಲೂಶನ್
* ಕ್ಯಾಮರ 13 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
* 16 ಮೆಗಾಪಿಕ್ಸೆಲ್ ಸ್ವಂತೀ
* ಸಿಮ್ 2 ನ್ಯಾನೊ
* ಬ್ಯಾಟರಿ 3030 mAh
* ಗಾತ್ರ 153.8 x 72.6 x 7.9 ಮಿ.ಮೀ.
* ತೂಕ 141 ಗ್ರಾಂ
* ಬೆರಳಚ್ಚು ಸ್ಕ್ಯಾನರ್ ಇದೆ
* ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
* ಎಫ್.ಎಂ. ರೇಡಿಯೋ ಇದೆ
* ಎನ್‌ಎಫ್‌ಸಿ ಇಲ್ಲ
* ಇಯರ್‌ಫೋನ್ ‌ಇಲ್ಲ
* ಯುಎಸ್‌ಬಿ ಓಟಿಜಿ ಬೆಂಬಲ ಇದೆ
* ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 7.1.1
* ಬೆಲೆ ₹13,999

***

ವಾರದ ಆಪ್ (app)

ಕೂದಲು ವಿನ್ಯಾಸ ಮಾಡಿ (Magic Mirror Demo, Hair styler)
ಕೊಂಡಿ – http://bit.ly/gadgetloka334
ನಿಮ್ಮ ತಲೆಕೂದಲಿನ ಶೈಲಿ, ವಿನ್ಯಾಸ, ಬಣ್ಣ ನಿಮಗೆ ಇಷ್ಟವಾಗಿಲ್ಲವೇ? ಅದನ್ನು ಬದಲಿಸಲು ಯೋಚಿಸುತ್ತಿದ್ದೀರಾ? ಅದಕ್ಕೆಂದೇ ಹಲವಾರು ಬ್ಯೂಟಿ ಪಾರ್ಲರುಗಳಿವೆ. ಅಲ್ಲಿಗೆ ಹೋದಾಗ ಬೇರೆ ಬೇರೆ ಬಣ್ಣಗಳಲ್ಲಿ ಕೂದಲಿನ ಸ್ಯಾಂಪಲ್ ಇಟ್ಟಿರುತ್ತಾರೆ. ಆದರೆ ಯಾವ ವಿನ್ಯಾಸ, ಯಾವ ಬಣ್ಣ ನಿಮ್ಮ ತಲೆಗೆ ಸರಿಹೊಂದುತ್ತದೆ, ಯಾವುದು ಚಂದ ಕಾಣಿಸಬಹುದು ಎಂದು ಮೊದಲೇ ತಿಳಿದರೆ ಒಳ್ಳೆಯದಲ್ಲವೇ? ಅದಕ್ಕಾಗಿ ಹಲವು ಕಿರುತಂತ್ರಾಂಶಗಳಿವೆ (ಆಪ್). ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದರೆ ನೀವು ಗೂಗ್ಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Magic Mirror Demo, Hair styler ಎಂದು ಹುಡುಕಬೇಕು ಅಥವಾ http://bit.ly/gadgetloka334 ಜಾಲತಾಣಕ್ಕೆ ಭೇಟಿ ನೀಡಬೇಕು. ಸೌಂದರ್ಯವರ್ಧನೆ ಕಡೆ ತುಂಬ ಗಮನ ಕೊಡುವ ಮತ್ತು ಆಸಕ್ತಿ ಇರುವವರಿಗೆ ಇದು ಉಪಯುಕ್ತ. ಇದನ್ನು ಮಹಿಳೆಯರು ಮಾತ್ರವಲ್ಲ, ಪುರುಷರೂ ಬಳಸಬಹುದು.

ಗ್ಯಾಜೆಟ್ ಪದ
Decryption = ಗೂಢಲಿಪಿ ಗ್ರಹಿಕೆ
ಮಾಹಿತಿಯನ್ನು ಇನ್ನೊಬ್ಬರು ಓದದಂತೆ ಗೂಢವಾಗಿ ಅದರ ಸಂಕೇತಗಳನ್ನು ಬದಲಿಸಿ ಸಂಗ್ರಹಿಸಿಡುವುದು ಹಾಗೂ ವರ್ಗಾವಣೆ ಮಾಡುವುದನ್ನು ಗೂಢಲಿಪೀಕರಣ (encryption) ಎನ್ನುತ್ತಾರೆ. ಹಾಗೆ ಸಂಗ್ರಹಿಸಿದ ಮಾಹಿತಿಯನ್ನು ಪುನಃ ಮನುಷ್ಯರಿಗೆ ಉಪಯಕ್ತವಾಗುವಂತೆ ಬದಲಾಯಿಸುವುದನ್ನು ಗೂಢಲಿಪಿ ಗ್ರಹಿಕೆ ಎನ್ನುತ್ತಾರೆ.

ಗ್ಯಾಜೆಟ್ ತರ್ಲೆ
ಅಕ್ಷರಾಭ್ಯಾಸವಿಲ್ಲದವನನ್ನು ಹೆಬ್ಬೆಟ್ಟು ಎಂದು ಹೀಗೆಳೆಯುತ್ತಿದ್ದ ಕಾಲವೊಂದಿತ್ತು. ಈಗನ ಕಾಲದಲ್ಲಿ ಹಾಗೆ ಹೇಳುವಂತಿಲ್ಲ. ಯಾಕೆಂದರೆ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಬ್ಬೆಟ್ಟನ್ನೇ ಪಾಸ್‌ವರ್ಡ್‌ಆಗಿ ಬಳಸಲಾಗುತ್ತಿದೆ. ಯಾವುದೇ ಕೆಲಸ ಮಾಡಬೇಕಿದ್ದರೂ ಹೆಬ್ಬಟ್ಟು ಒತ್ತಬೇಕು.

ಗ್ಯಾಜೆಟ್ ಸಲಹೆ
ಎ. ರಾಮಪ್ರಸಾದರ ಪ್ರಶ್ನೆ: 13 ರಿಂದ 16 ಸಾವಿರ ರೂ. ವ್ಯಾಪ್ತಿಯಲ್ಲಿ ಉತ್ತಮ ಫೋನ್ ಯಾವುದು?
ಉ:
ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಅಥವಾ ರಿಯಲ್‌ಮಿ1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT