ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ಬೆಲೆಯಉತ್ತಮ ಫೋನ್

ವಿವೊ ವಿ 11ಪ್ರೊ
Last Updated 19 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ವಿ ವೊ ಕಂಪನಿಯ ಹಲವು ಫೋನ್‌ಗಳ ಬಗ್ಗೆ ಈ ಅಂಕಣದಲ್ಲಿ ವಿಮರ್ಶೆ ಮಾಡಲಾಗಿದೆ. ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಷ್ಟು ತುಂಬಿದೆಯೆಂದರೆ ಒಬ್ಬೊಬ್ಬರೂ ಒಂದೊಂದು ಕ್ಷೇತ್ರದಲ್ಲಿ ತಳವೂರಲು ಪ್ರಯತ್ನಿಸುತ್ತಿದ್ದಾರೆ. ವಿವೊ ಕಂಪನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ವಿವೊ ವಿ 11ಪ್ರೊ (Vivo V11 Pro) ಎಂಬ ಸ್ಮಾರ್ಟ್‌ಫೋನ್‌ ಅನ್ನು.

ಎಲ್ಲ ವಿವೊ ಫೋನ್‌ಗಳಂತೆ ಈ ಫೋನಿನ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ನನಗೆ ವಿಮರ್ಶೆಗೆ ಬಂದುದು ಚಿನ್ನದ ಹೊಳಪಿನ (dazzling gold) ಕವಚವಿರುವ ಫೋನ್. ಹಿಂದಿನ ಕವಚ ಮತ್ತು ಲೋಹದ ಫ್ರೇಂ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸ್ವಲ್ಪ ಉಬ್ಬಿದ್ದು, ಬದಿಗಳು ವಕ್ರವಾಗಿದ್ದು, ಒಂದು ಮಟ್ಟಿಗೆ ತಲೆದಿಂಬಿನಾಕಾರದಲ್ಲಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಮೈಕ್ರೊ ಯುಎಸ್‌ಬಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿಗಳಿವೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಮತ್ತು ಮೆಮೊರಿ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಮತ್ತು ಒಂದು ಮೈಕ್ರೊಸಿಮ್ ಕಾರ್ಡ್ ಹಾಕಬಹುದು. ಇದು ಅಂಚುರಹಿತ (bezelless) ಫೋನ್. ಪರದೆಯ ಕಚ್ಚು (notch) ಇದೆ. ಅಂದರೆ ಪರದೆಯ ಮೇಲ್ಭಾಗದಲ್ಲಿ ಮಧ್ಯ ಭಾಗದಲ್ಲಿ ಸ್ವಂತೀ ಕ್ಯಾಮೆರಾಕ್ಕೆ ಮಾತ್ರ ಸ್ವಲ್ಪ ಜಾಗ ಬಿಟ್ಟು ಇದರ ಪರದೆ ಬಹುತೇಕ ದೇಹವನ್ನು ಬಳಸಿಕೊಂಡಿದೆ. ಹಿಂಭಾಗದ ಮೂಲೆಯಲ್ಲಿ ಎರಡು ಕ್ಯಾಮೆರಾ ಮತ್ತು ಫ್ಲಾಶ್ ಇವೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ ಹಿಡಿದಾಗ ಮೇಲ್ದರ್ಜೆಯ ಫೋನ್ ಹಿಡಿದುಕೊಂಡ ಅನುಭವವಾಗುತ್ತದೆ.

ವಿವೊದವರ ಸಂಶೋಧನೆ, ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್, ಈ ಫೋನಿನಲ್ಲೂ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ವಿವೊ ನೆಕ್ಸ್ ಫೋನಿನಲ್ಲಿ ಇದರ ಸಂವೇದನೆ ಸ್ವಲ್ಪ ನಿಧಾನವಿತ್ತು. ಈ ಫೋನಿನಲ್ಲಿ ಅದು ಸುಧಾರಿಸಿದೆ. ಆದರೂ ಇತರೆ ಫೋನ್‌ಗಳಲ್ಲಿರುವ ಬೆರಳಚ್ಚು ಸ್ಕ್ಯಾನರ್‌ಗಳಿಗೆ ಹೋಲಿಸಿದರೆ ಇದು ಸ್ವಲ್ಪ ನಿಧಾನವಾಗಿ ಸ್ಪಂದಿಸುತ್ತದೆ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ ಹಾಗೂ ಅದು ಉತ್ತಮವಾಗಿ ಕೆಲಸ ಮಾಡುತ್ತದೆ.

ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು ಬೆಂಚ್‌ಮಾರ್ಕ್ 1,29,632 ಇದೆ. ಅಂದರೆ ಇದು ಮಧ್ಯಮ ಶ್ರೇಣಿಯಲ್ಲಿ ಮೇಲ್ಮಟ್ಟದ ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಮತ್ತು ಮೂರು ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೊಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೊ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಕೂಡ ಚೆನ್ನಾಗಿದೆ. ಇಯರ್‌ಫೋನ್ ನೀಡಿದ್ದಾರೆ. ಈ ಹಿಂದೆ ವಿವೊ ಫೋನಿನ್ ಇಯರ್‌ಫೋನ್ ಬಗ್ಗೆ ಬರೆದುದು ಇದಕ್ಕೂ ಸರಿಹೊಂದುತ್ತದೆ. ಈ ಇಯರ್‌ಫೋನಿನ ವಿನ್ಯಾಸ ಸ್ವಲ್ಪ ವಿಭಿನ್ನವಾಗಿದೆ. ಅದು ಇಯರ್‌ಫೋನ್ ಮತ್ತು ಇಯರ್‌ಬಡ್‌ಗಳ ಸಂಮಿಶ್ರಣದಂತಿದೆ. ಇದಕ್ಕೆ ಕುಶನ್ ಜೋಡಿಸುವಂತಿಲ್ಲ. ಇಯರ್‌ಪೋನಿನ ಮೂತಿಯೇ ಕಿವಿ ಕಾಲುವೆಯೊಳಗೆ ಹೋಗುತ್ತದೆ. ಚೆನ್ನಾಗಿ ಕೇಳಲೆಂದು ಒತ್ತಿದರೆ ಇದು ಸ್ವಲ್ಪ ನೋವು ಮಾಡುತ್ತದೆ. ಆದರೆ ಇದರ ಧ್ವನಿಯ ಗುಣಮಟ್ಟ ಉತ್ತಮವಾಗಿದೆ.

ಈ ಫೋನಿನಲ್ಲಿ 12 ಮತ್ತು 5 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾಗಳಿವೆ. ಪ್ರಾಥಮಿಕ ಕ್ಯಾಮೆರಾದಲ್ಲಿ ಎರಡು ಪಿಕ್ಸೆಲ್‌ಗಳ ಸಂವೇದಕವಿದೆ. ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ 25 ಮೆಗಾಪಿಕ್ಸೆಲ್‌ನ ಕ್ಯಾಮೆರಾವಿದೆ. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಜೊತೆಗೆ ಮ್ಯಾನ್ಯುವಲ್ ಮೋಡ್ ಕೂಡ ಇದೆ. ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ಮೂಡಿಬರುತ್ತದೆ. ಒಟ್ಟಿನಲ್ಲಿ ಕ್ಯಾಮೆರಾ ಮತ್ತು ಫೋಟೊಗ್ರಫಿ ತೃಪ್ತಿದಾಯಕವಾಗಿವೆ.

ಇದರಲ್ಲಿರುವುದು 3400mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ಈ ಫೋನ್ ಅಂಗಡಿಗಳಲ್ಲೂ ದೊರೆಯುತ್ತದೆ. ಬಹುಶಃ ಅಂರ್ತಜಾಲದ ಮೂಲಕ ಮಾತ್ರ ನೀಡುತ್ತಿದ್ದರೆ ಹಾಗೂ ಅಮೀರ್‌ಖಾನ್ ಅನ್ನು ಜಾಹೀರಾತಿಗೆ ಬಳಸಿಕೊಳ್ಳದಿರುತ್ತಿದ್ದರೆ ಇದನ್ನು ₹20 ಸಾವಿರಕ್ಕೇ ನೀಡಬಹುದಿತ್ತೇನೋ?

ವಾರದ ಆಪ್ (app)

ವಿಜ್ಞಾನ ಸುದ್ದಿ (Science News Daily - Fastest Science News App)

ವಿಜ್ಞಾನ ಪ್ರಪಂಚ ಅತಿ ವೇಗವಾಗಿ ಬೆಳೆಯುತ್ತಿದೆ. ಪ್ರತಿ ದಿನ ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ದಶಕದ ಹಿಂದೆ ಇಂತಹ ಸುದ್ದಿಗಳನ್ನು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳುಗಳಿಗೊಮ್ಮೆ ಬರುವ ವಿಜ್ಞಾನ ಸಂಶೋಧನಾ ನಿಯತಕಾಲಿಕೆಗಳಲ್ಲಿ ಓದಬೇಕಿತ್ತು. ಅವು ಈಗಲೂ ಇವೆ. ಆದರೆ ಈ ಸುದ್ದಿಗಳು ಅಂರ್ತಜಾಲದ ಮೂಲಕ ಪ್ರತಿದಿನ ಆಸಕ್ತ ಓದುಗರಿಗೆ, ಸಂಶೋಧಕರಿಗೆ ಲಭ್ಯ. ಅಂತಹ ಹಲವು ಜಾಲತಾಣಗಳಿವೆ. ಈ ಜಾಲತಾಣಗಳಿಂದ ಸುದ್ದಿಗಳನ್ನು ಕ್ರೋಡೀಕರಿಸಿ ನೀಡುವ ಕಿರುತಂತ್ರಾಂಶಗಳೂ (ಆ್ಯಪ್‌) ಇವೆ. ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಹೋಗಿ Science News Daily - Fastest Science News App ಎಂದು ಹುಡುಕಬೇಕು ಅಥವಾ http://bit.ly/gadgetloka347 ಜಾಲತಾಣಕ್ಕೆ ಭೇಟಿ ನೀಡಬೇಕು. ವಿಜ್ಞಾನಿಗಳಿಗೆ, ಸಂಶೋಧಕರಿಗೆ, ಪ್ರಾಧ್ಯಾಪಕರುಗಳಿಗೆ, ವಿಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಎಲ್ಲ ವಿಜ್ಞಾನಾಸಕ್ತರುಗಳಿಗೆ ಉಪಯುಕ್ತ ಕಿರುತಂತ್ರಾಂಶವಿದು.

ಗ್ಯಾಜೆಟ್ ಪದ
Bit = ದ್ವಿಮಾನಾಂಕ (ಬಿಟ್)

ಮಾಹಿತಿ ತಂತ್ರಜ್ಞಾನದಲ್ಲಿ ಎಲ್ಲ ಮಾಹಿತಿಗಳನ್ನು ಅಂತಿಮವಾಗಿ ದ್ವಿಮಾನಾಂಕಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಒಂದು ದ್ವಿಮಾನ ಅಂಕವು 0 ಅಥವಾ 1 ಆಗಿರುತ್ತದೆ. ಗಣಕಗಳಲ್ಲಿ ಪ್ರವಹಿಸುವ (ಡಿಜಿಟಲ್) ವಿದ್ಯುತ್‌ಗೆ ಎರಡು ಸಾಧ್ಯತೆಗಳಿವೆ – ಇದೆ ಅಥವಾ ಇಲ್ಲ. ಇವುಗಳನ್ನು 0 ಮತ್ತು 1 ನ್ನು ಸೂಚಿಸಲು ಬಳಸಲಾಗುತ್ತದೆ. ಹೀಗೆ ಬಳಕೆಯಾಗುವ ಒಂದು ದ್ವಿಮಾನ ಅಂಕೆಯನ್ನು ಬಿಟ್ ಎನ್ನುತ್ತಾರೆ. ಇದು binary digit ಎನ್ನುವುದರ ಸಂಕ್ಷಿಪ್ತ ರೂಪ.

ಗ್ಯಾಜೆಟ್ ಸುದ್ದಿ

ತುಟಿ ತಗುಲಿದರೆ ಮಾತ್ರ ತೆರೆಯುವ ಬಾಟಲಿ

ಸ್ಮಾರ್ಟ್‌ ಬಾಟಲಿ ಬಗ್ಗೆ ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ನೀರು ಮುಗಿದಾಗ ಅದು ಸ್ಮಾರ್ಟ್‌ಫೋನಿಗೆ ತಿಳಿಸುತ್ತದೆ. ಈ ಸಲ ಬರೆಯುತ್ತಿರುವುದು ಅದಕ್ಕಿಂತ ತುಂಬ ಸರಳ ಬಾಟಲಿ ಬಗ್ಗೆ. ಬಾಟಲಿಯಿಂದ ನೀರು ಕುಡಿಯಲೆಂದು ಬಾಯಿ ಇಡುವ ಮುನ್ನವೇ ಅದನ್ನು ಅಗತ್ಯಕ್ಕಿಂತ ಹೆಚ್ಚು ಬಗ್ಗಿಸಿ ಮೈಮೇಲೆ ನೀರು ಚೆಲ್ಲಿಕೊಂಡಿದ್ದೀರಾ? ಈ ಬಾಟಲಿಯಲ್ಲಿ ಅಂತಹ ಸಮಸ್ಯೆಯಿಲ್ಲ. ಅದರ ಮುಚ್ಚಳಕ್ಕೆ ನಿಮ್ಮ ತುಟಿ ತಗುಲಿಸಿದರೆ ಮಾತ್ರ ಅದರ ಬಾಯಿ ತೆರೆದು ನಿಮಗೆ ನೀರು ಕುಡಿಯಲು ಸಾಧ್ಯವಾಗುತ್ತದೆ!

ಗ್ಯಾಜೆಟ್ ಸಲಹೆ

ಮುದಸ್ಸರ್ ಅವರ ಪ್ರಶ್ನೆ: ನನ್ನ ಆ್ಯಂಡ್ರಾಯಿಡ್‌ ಫೋನಿನಿಂದ ಫೋಟೊಗಳನ್ನು ತಪ್ಪಿ ಅಳಿಸಲಾಗಿತ್ತು. ಅವುಗಳನ್ನು ಪುನಃ ಪಡೆಯಲು DiskDigger ಎನ್ನುವ ಕಿರುತಂತ್ರಾಂಶ (ಆಪ್) ಬಳಸಿದೆ. ಆದರೆ ನನಗೆ ದೊರೆತುದು ಚಿಕ್ಕ ಫೋಟೋಗಳು (thumbnail) ಮಾತ್ರ. ಅಳಿಸಿಹೋದ ಮೂಲ ಗಾತ್ರದ ಫೋಟೊಗಳನ್ನು ಪುನಃ ಪಡೆಯವುದು ಹೇಗೆ?
ಉ: ನೀವು ಹೇಳಿದ ಕಿರುತಂತ್ರಾಂಶದ ಮೂಲಕ ಅಳಿಸಿಹೋದ ಫೋಟೊಗಳನ್ನು ಮೂಲಗಾತ್ರದಲ್ಲಿ ಪುನಃ ಪಡೆಯಬೇಕಾದರೆ ನೀವು ನಿಮ್ಮ ಫೋನನ್ನು root ಮಾಡಿರಬೇಕು. ಅಲ್ಲವಾದಲ್ಲಿ ಅದು ಕಾಶ್ (cache) ಮೆಮೊರಿಯಿಂದ ಚಿಕ್ಕ ಚಿತ್ರಗಳನ್ನು (thumbnail) ಮಾತ್ರ ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT