ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹೂಪಯೋಗಿ ಎಪ್ಸನ್ ಎಂ200

Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಗಣಕ ಬಳಸಿ ಮುದ್ರಿಸಲು ಅನುವು ಮಾಡಿಕೊಡುವ ಮುದ್ರಕಗಳಲ್ಲಿ ಮೂರು ಪ್ರಮುಖ ನಮೂನೆಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿಸಲಾಗಿತ್ತು. ಸರಳವಾಗಿ ಹೇಳುವುದಾದರೆ ಅತಿ ಕಡಿಮೆ ಗುಣಮಟ್ಟ ಮತ್ತು ದೊಡ್ಡ ಮಟ್ಟದ ಮುದ್ರಣಕ್ಕೆ ಡಾಟ್‌ಮ್ಯೋಟ್ರಿಕ್ಸ್ ಮುದ್ರಕ, ಮನೆಗಳಲ್ಲಿ ಮತ್ತು ಆಫೀಸುಗಳಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಮತ್ತು ಮಧ್ಯಮ ಗುಣಮಟ್ಟದಲ್ಲಿ ಮುದ್ರಿಸಲು ಇಂಕ್‌ಜೆಟ್ ಮುದ್ರಕ ಹಾಗೂ ಅತ್ಯುತ್ತಮ ಗುಣಮಟ್ಟದ ಮುದ್ರಣಕ್ಕೆ ಲೇಸರ್ ಮುದ್ರಕ. ಈ ಮೂರು ನಮೂನೆಗಳಲ್ಲದೆ ಇನ್ನೊಂದು ನಮೂನೆ ಇದೆ. ಅದು ಬಹೂಪಯೋಗಿಗಳು. ಇವುಗಳಲ್ಲಿ ಸ್ಕ್ಯಾನರ್, ಕಾಪಿಯರ್ ಮತ್ತು ಮುದ್ರಕ ಎಲ್ಲ ಒಂದರಲ್ಲೇ ಇರುತ್ತವೆ. ಇಂತಹವುಗಳಲ್ಲಿ ಹೆಚ್ಚಿನವು ಇಂಕ್‌ಜೆಟ್ ಮುದ್ರಕಗಳಾಗಿರುತ್ತವೆ. ಅಂತಹ ಒಂದು ಬಹೂಪಯೋಗಿ ಸಾಧನ ಎಪ್ಸನ್ ಕಂಪೆನಿಯ ಎಂ200. ಇದು ನಮ್ಮ ಈ ವಾರದ ಗ್ಯಾಜೆಟ್.

ಮುದ್ರಕಗಳ ಕ್ಷೇತ್ರದಲ್ಲಿ ಎಪ್ಸನ್‌ನದು ತುಂಬ ದೊಡ್ಡ ಹೆಸರು. ನಾನು ಬಳಸಿದ ಮೊತ್ತಮೊದಲ ಡಾಟ್‌ಮ್ಯೋಟ್ರಿಕ್ಸ್ ಮುದ್ರಕ ಎಪ್ಸನ್ ಕಂಪೆನಿಯದೇ ಆಗಿತ್ತು. ನಾನು ಕೊಂಡುಕೊಂಡ ಎಪ್ಸನ್ ಡಾಟ್‌ಮ್ಯೋಟ್ರಿಕ್ಸ್ ಮುದ್ರಕವನ್ನು ಸುಮಾರು ಹದಿನೈದು ವರ್ಷ ಬಳಸಿದ್ದೆ. ಇಂಕ್‌ಜೆಟ್ ಮುದ್ರಕಗಳಲ್ಲಂತೂ ಎಪ್ಸನ್ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಕಂಪೆನಿ ಇತ್ತೀಚೆಗೆ ಒಂದು ಬಹೂಪಯೋಗಿ ಮುದ್ರಕ ತಯಾರಿಸಿದೆ. ಇದುವೇ ಎಂ200 (Epson Multifunction M200). ಇದು ಮುದ್ರಕ, ಕಾಪಿಯರ್ ಮತ್ತು ಸ್ಕ್ಯಾನರ್‌ಗಳ ಕೆಲಸಗಳನ್ನು ಮಾಡಬಲ್ಲುದು.

ಮೊದಲನೆಯದಾಗಿ ಮುದ್ರಕವಾಗಿ ಇದನ್ನು ಗಮನಿಸೋಣ. ಈಗಾಗಲೇ ಹೇಳಿದಂತೆ ಇದು ಇಂಕ್‌ಜೆಟ್ ಮುದ್ರಕ. ಅತಿ ಹೆಚ್ಚಿನ ಅಂದರೆ ಪ್ರತಿ ಇಂಚಿಗೆ 1440x720 ಚುಕ್ಕಿಗಳ (DPI = dots per inch)  ರೆಸೊಲೂಶನ್, ಪೀಝೋಎಲೆಕ್ಟ್ರಿಕ್ ನಾಝಲ್, ನಿಮಿಷಕ್ಕೆ ಅಂದಾಜು 15 ಪ್ರತಿ ಮುದ್ರಣ ವೇಗ, ಎರಡು ಸಾಲುಗಳ ಎಲ್‌ಸಿಡಿ ಡಿಸ್‌ಪ್ಲೇ ಪ್ಯಾನೆಲ್, ಇತ್ಯಾದಿ ಗುಣವೈಶಿಷ್ಟ್ಯಗಳಿವೆ. ಇದು ಕಪ್ಪು ಬಿಳುಪು ಮುದ್ರಕ. ಇದು ಇಂಕ್‌ಜೆಟ್ ಮುದ್ರಕ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಗಮನಿಸಿದಾಗ ಮುದ್ರಣದ ವೇಗ ಚೆನ್ನಾಗಿದೆ. ಸುಮಾರು ಮೂರು ನಿಮಿಷಗಳಲ್ಲಿ 30 ಪುಟದ ಒಂದು ಕಡತವನ್ನು ಮುದ್ರಿಸಿದೆ. ಮುದ್ರಣದ  ಗುಣಮಟ್ಟ ಚೆನ್ನಾಗಿದೆ. ಎಪ್ಸನ್ ಕಂಪೆನಿಯವರು ಹೇಳುವ ಪ್ರಕಾರ ಅವರ ಕಂಪೆನಿಯ ಶಾಯಿಯನ್ನೇ ಬಳಸಿದರೆ ಒಳ್ಳೆಯದು. ಯಾಕೆಂದರೆ ಅವರು ಬಳಸುವ ಶಾಯಿ ನೀರಿನಲ್ಲಿ ಕರಗುವಂತಹುದಲ್ಲ ಮತ್ತು ತೊಟ್ಟಿಯಲ್ಲಾಗಲಿ, ಪೈಪಿನಲ್ಲಾಗಲೀ, ನಾಝಲ್‌ನಲ್ಲಾಗಲಿ ಒಣಗಿ ಗಟ್ಟಿಯಾಗುವುದಿಲ್ಲ. ಮುದ್ರಿಸಿದ ಕಾಗದದ ಮೇಲೆ ಸ್ವಲ್ಪ ನೀರು ಚೆಲ್ಲಿ ನೋಡಿದೆ. ಶಾಯಿ ಹರಡಲಿಲ್ಲ ಮತ್ತು ತೊಳೆದು ಹೋಗಲಿಲ್ಲ. ಮುದ್ರಕದಿಂದ ಹೊರಬರುತ್ತಿದ್ದಂತೆ ಕಾಗದವನ್ನು ಮುಟ್ಟಿದರೆ ಶಾಯಿ ಹರಡಲಿಲ್ಲ. ಅಂದರೆ ಶಾಯಿ ಕಾಗದ ಹೊರಬರುತ್ತಿದ್ದಂತೆ ಒಣಗಿ ಹೋಗಿದೆ ಎಂದು ಅರ್ಥ. ಪಠ್ಯ, ಚಿತ್ರ, ಫೋಟೊ ಎಲ್ಲ ಮುದ್ರಿಸಿ ನೋಡಿದೆ. ಇಂಕ್‌ಜೆಟ್ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿಸಿದರೆ ಮುದ್ರಕಕ್ಕೆ ಪೂರ್ತಿ ಅಂಕ ನೀಡಬಹುದು.

ಕಂಪೆನಿಯವರು ಹೇಳಿಕೊಳ್ಳುವಂತೆ ಈ ಮುದ್ರಕ ಬಳಸಿ ಮುದ್ರಿಸಲು ಅತಿ ಕಡಿಮೆ ವೆಚ್ಚ ತಗಲುತ್ತದೆ. 699 ರೂ. ಬೆಲೆಬಾಳುವ ಒಂದು ಬಾಟಲಿ ಶಾಯಿಯನ್ನು ಬಳಸಿ ಸುಮಾರು 6,000 ಪ್ರತಿ ಮುದ್ರಿಸಬಹುದು. ಅಂದರೆ ಒಂದು ಪ್ರತಿಗೆ ಸುಮಾರು 12 ಪೈಸೆ (ಕಾಗದದ ಬೆಲೆ ಹೊರತುಪಡಿಸಿ). ಇಷ್ಟು ಕಡಿಮೆ ವೆಚ್ಚದಲ್ಲಿ ಬೇರೆ ಯಾವ ಮುದ್ರಕವೂ ಮುದ್ರಿಸಲಾರದು.

ಇದರ ಎರಡನೆಯ ಉಪಯೋಗ ಸ್ಕ್ಯಾನರ್ ಆಗಿ. ನಿಮ್ಮಲ್ಲಿ ಹಳೆಯ ಫೋಟೊಗಳಿದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಗಣಕಕ್ಕೆ ವರ್ಗಾಯಿಸಲು, ಇಮೈಲ್ ಮೂಲಕ ಕಳುಹಿಸಲು, ಫೇಸ್‌ಬುಕ್‌ಗೆ ಏರಿಸಲು ಇದನ್ನು ಬಳಸಬಹುದು. ಸ್ಕ್ಯಾನರ್ ಆಗಿ ಇದರ ರೆಸೊಲೂಶನ್ ಪ್ರತಿ ಇಂಚಿಗೆ 1200x2400 ಚುಕ್ಕಿ. ಅಂದರೆ ಒಂದು ಮೇಲ್ಮಟ್ಟದ ಸ್ಕ್ಯಾನರ್‌ನ ಗುಣಮಟ್ಟ ಇದೆ ಎಂದು ತೀರ್ಮಾನಿಸಬಹುದು. ಇದು ಎ4 ಗಾತ್ರದ ಹಾಳೆಯನ್ನು ಸ್ಕ್ಯಾನ್ ಮಾಡಬಲ್ಲುದು. ಇದು ಬಣ್ಣದಲ್ಲೂ ಸ್ಕ್ಯಾನ್ ಮಾಡಬಲ್ಲುದು. ಸ್ಕ್ಯಾನರ್ ಆಗಿ ಇದರ ಗುಣಮಟ್ಟ ತುಂಬ ಚೆನ್ನಾಗಿದೆ. ಎಲ್ಲ ಬಣ್ಣಗಳನ್ನು ಸರಿಯಾಗಿ ಗುರುತಿಸಿತು. ಮೂಲ ಫೋಟೊ ಮತ್ತು ಸ್ಕ್ಯಾನ್ ಮಾಡಿದ ಚಿತ್ರದಲ್ಲಿ ಯಾವ ಗಣನೀಯ ವ್ಯತ್ಯಾಸ ಕಂಡುಬರಲಿಲ್ಲ.

ಇದರ ಮೂರನೆಯ ಉಪಯೋಗ ಕಾಪಿಯರ್ ಆಗಿ. ಕಾಪಿಯರ್ ಆಗಿ ಇದರ ಗುಣಮಟ್ಟ ತೃಪ್ತಿಕರವಾಗಿದೆ. ಕಾಪಿಯರ್ ಕೆಲಸ ಮಾಡಲು ಮೂಲ ದಾಖಲೆಯ ಹಾಳೆಯನ್ನು ಫ್ಲಾಟ್‌ಬೆಡ್ ಸ್ಕ್ಯಾನರ್ ಮೇಲೆ ಇಡಬಹುದು ಅಥವಾ ಸ್ವಯಂಚಾಲಿತವಾಗಿ ಕಾಗದ ನೀಡುವ ಎಡಿಎಫ್ (ADF = Automatic Document Feeder) ಮೂಲಕವೂ ನೀಡಬಹುದು. ಎಡಿಎಫ್ ಮೂಲಕ ನೀಡಿದರೆ ಹಲವು ಹಾಳೆಗಳನ್ನು ಒಟ್ಟಿಗೆ ನೀಡಬಹುದು. ಸ್ಕ್ಯಾನರ್ ಅವುಗಳನ್ನು ಒಂದರ ನಂತರ ಇನ್ನೊಂದರಂತೆ ಒಳಗೆ ಎಳೆದುಕೊಂಡು ಪ್ರತಿ ಮಾಡಿಕೊಡುತ್ತದೆ. ಇದು ಕಪ್ಪು ಬಿಳುಪು ಬಣ್ಣದಲ್ಲಿ ಮಾತ್ರ ಪ್ರತಿ ಮಾಡುತ್ತದೆ. ಮೂಲದಾಖಲೆಯ 99 ಪ್ರತಿ ತನಕ ತೆಗೆಯಬಹುದು. ಮೂಲದಾಖಲೆಯನ್ನು ಅದರ ಕಾಲಂಶಕ್ಕೆ ಕುಗ್ಗಿಸಬಹುದು ಅಥವಾ ನಾಲ್ಕು ಪಾಲು ಹಿಗ್ಗಿಸಬಹುದು. ಕಾಪಿಯರ್ ಆಗಿಯೂ ಇದಕ್ಕೆ ಪಾಸ್ ಮಾರ್ಕು ನೀಡಬಹುದು.

ಈ ಬಹೂಪಯೋಗಿ ಮುದ್ರಕವನ್ನು ಯುಎಸ್‌ಬಿ ಮೂಲಕ ಗಣಕಕ್ಕೆ ಅಥವಾ ಇಥರ್‌ನೆಟ್ ಕೇಬಲ್ ಮೂಲಕ ಗಣಕಜಾಲಕ್ಕೆ ಜೋಡಿಸಬಹುದು. ಒಂದು ಬಹುಮುಖ್ಯ ಕೊರತೆ ಎಂದರೆ ವೈಫೈ ಸೌಲಭ್ಯ ನೀಡಿಲ್ಲ ಎನ್ನುವುದು. ಅದೂ ಇದ್ದಿದ್ದರೆ ಈಗಿನ ಸ್ಮಾರ್ಟ್‌ಫೋನ್‌ಗಳಿಂದಲೂ ನೇರವಾಗಿ ಮುದ್ರಿಸಬಹುದಿತ್ತು.
ಇದು ಅತಿ ಕಡಿಮೆ ವಿದ್ಯುತ್ ಬಳಸುತ್ತದೆ. ಇದಕ್ಕೆ ಬೇಕಾಗುವುದು ಕೇವಲ 12 ವ್ಯಾಟ್ ಶಕ್ತಿ. ಅತಿ ಕಡಿಮೆ ವಿದ್ಯುತ್ ಸರಬರಾಜು ಇರುವ ಭಾರತದ ಹಳ್ಳಿಗಳಲ್ಲೂ ಬಳಸಲು ಇದು ಉಪಯುಕ್ತ.

ಇದು ಇಂಕ್‌ಜೆಟ್ ಮುದ್ರಕವಾಗಿರುವುದರಿಂದ ಸ್ವಲ್ಪ ನಾಜೂಕು. ಇದನ್ನು ಸ್ವಲ್ಪ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಇದನ್ನು ಅಲುಗಾಡಿಸಬಾರದು. ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗುವಾಗ ಪ್ರಿಂಟ್‌ಹೆಡ್ ಅನ್ನು ಅದರ ಸ್ಥಾನದಲ್ಲಿ ಲಾಕ್ ಮಾಡಿ (ಅದಕ್ಕೆಂದೇ ಒಂದು ಲಿವರ್ ನೀಡಿದ್ದಾರೆ) ಆದಷ್ಟು ಅಲುಗಾಡದಂತೆ ತೆಗೆದುಕೊಂಡು ಹೋಗಬೇಕು. ನನಗೆ ವಿಮರ್ಶೆಗೆಂದು ಕಳುಹಿಸಿದ ಮುದ್ರಕವನ್ನು ಅದನ್ನು ತರುವಾತ ಬೆಂಗಳೂರಿನ ಹೊಂಡಭರಿತ ರಸ್ತೆಗಳಲ್ಲಿ ದ್ವಿಚಕ್ರವಾಹನದಲ್ಲಿ ತೆಗೆದುಕೊಂಡು ಬಂದಿದ್ದ. ಮನೆಯಲ್ಲಿ ಪರೀಕ್ಷಿಸಿದಾಗ ಅದರ ಪ್ರಿಂಟ್‌ಹೆಡ್ ಸ್ಥಾನಪಲ್ಲಟವಾಗಿತ್ತು. ಅವರದೇ ಜಾಲತಾಣದಿಂದ ಸೂಕ್ತ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಅದನ್ನು ಸರಿಪಡಿಸಿದರೂ ಅದು ಪೂರ್ತಿ ಸರಿಯಾಗಲಿಲ್ಲ. ಅದನ್ನು ಹಿಂದಕ್ಕೆ ಕಳುಹಿಸಿ ಇನ್ನೊಂದನ್ನು ತರಿಸಿ ಪರೀಕ್ಷಿಸಬೇಕಾಯಿತು.

ಪೆಟ್ಟಿಗೆಯಲ್ಲಿ ಡ್ರೈವರ್ ತಂತ್ರಾಂಶ, ಮಾನ್ಯುಯಲ್ ಆಗಲೀ ಇರಲಿಲ್ಲ. ಎಲ್ಲವನ್ನೂ ನಾನು ಎಪ್ಸನ್ ಅವರ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕಾಯಿತು. ಇದರ ತಂತ್ರಾಂಶದಲ್ಲಿ ಹೆಡ್ ಸ್ಥಾನಪಲ್ಲಟವಾಗಿದ್ದರೆ ಅದನ್ನು ಸರಿಪಡಿಸಲು ಮತ್ತು ನಾಝಲ್ ಸ್ವಚ್ಛ ಮಾಡಲು ಸೌಲಭ್ಯಗಳಿವೆ. ಇವು ತುಂಬ ಉಪಯುಕ್ತವಾಗಿವೆ. ಎಪ್ಸನ್ ಎಂ200ರ ಮುಖಬೆಲೆ 13,990 ರೂ.

ಗ್ಯಾಜೆಟ್ ಸಲಹೆ
ಶಿವಕುಮಾರರ ಪ್ರಶ್ನೆ: ನಾನು ಬಿಬಿಎಂ ವಿದ್ಯಾರ್ಥಿ. ನಾನು ಆಕಾಶ್ ಟ್ಯಾಬ್ಲೆಟ್ ಕೊಂಡುಕೊಳ್ಳಬೇಕು ಅಂದುಕೊಂಡಿದ್ದೇನೆ. ಸರಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ದೊರೆಯುತ್ತದೆ ಎಂದು ಕೇಳಿದ್ದೇನೆ. ಅದು ಎಲ್ಲಿ ದೊರೆಯುತ್ತದೆ ತಿಳಿಸುತ್ತೀರಾ?

: ಆಕಾಶ್ ಟ್ಯಾಬ್ಲೆಟ್ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ಎಲ್ಲಿ ಸಿಗುತ್ತದೆ ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಐಐಟಿ ಮತ್ತು ಕೆಲವು ಆಯ್ದ ಕಾಲೇಜುಗಳಿಗೆ ಕೊಡುತ್ತಿದ್ದಾರೆ ಎಂದು ಓದಿದ್ದೇನೆ. ಅದನ್ನು ತಯಾರಿಸಿದವರಿಂದ ಪೂರ್ತಿ ಬೆಲೆ ಕೊಟ್ಟು ಕೊಂಡುಕೊಳ್ಳಬಹುದು. ubislate.com ಜಾಲತಾಣದ ಮೂಲಕ ಕೊಂಡುಕೊಳ್ಳಬಹುದು. ಅದನ್ನು ಬಳಸಿದವರ ಅನುಭವ ಏನೆಂದರೆ ಅದು ಏನೇನೂ ಚೆನ್ನಾಗಿಲ್ಲ. ವಿಮರ್ಶೆಗೆ ಒಂದು ಪ್ರತಿ ಕಳುಹಿಸಿ ಎಂದು ಕೇಳಿದಾಗ ನಾವು ಕೊಡುವುದಿಲ್ಲ ಎಂದಿದ್ದಾರೆ. ಬಹುಶಃ ಅದು ಚೆನ್ನಾಗಿಲ್ಲ ಎಂದು ಪ್ರಾಮಾಣಿಕ ವಿಮರ್ಶೆ ಬರಬಹುದು ಎಂಬ ಭಯ ಅವರಿಗಿರಬೇಕು.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT