ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ತಿಯ ಆತ್ಮಕ್ಕೆ ಶಾಂತಿ ಸಿಗುವುದು ಎಂದು?

ಅಕ್ಷರ ಗಾತ್ರ

ಮಾಸ್ತಿ ಶಾಂತ ಸ್ವಭಾವದ ಒಬ್ಬ ನಿಗರ್ವಿ ವ್ಯಕ್ತಿಯಾಗಿದ್ದ. ಯಾರಾದರೂ ಹೇಳದ ಹೊರತು ಆತ ಜೇನುಕುರುಬರು ವಾಸಿಸುವ ದೇವನಹಾಡಿಯ ಯಜಮಾನ ಎಂದು ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ.
 
ನಾನು ಆತನನ್ನು ಮೊದಲು ನೋಡಿದ್ದು, ಎಡೆಬಿಡದೆ ಕಾಡುತ್ತಿದ್ದ ಕೆಮ್ಮಿಗಾಗಿ ಚಿಕಿತ್ಸೆ ಪಡೆದುಕೊಳ್ಳಲು ಅವನು ಬ್ರಹ್ಮಗಿರಿ ಆಸ್ಪತ್ರೆಗೆ ಬಂದಿದ್ದಾಗ. ಪರೀಕ್ಷೆಗೆ ಒಳಪಡಿಸಿದಾಗ ಅವನಿಗೆ ಕ್ಷಯರೋಗ ಇರುವುದು ತಿಳಿದುಬಂದಿದ್ದರಿಂದ ನಾವು ಚಿಕಿತ್ಸೆ ಆರಂಭಿಸಿದೆವು.

ಇದೇ ಬಗೆಯಲ್ಲಿ ನಾವು ಚಿಕಿತ್ಸೆ ನೀಡುತ್ತಿದ್ದ ಬಹುತೇಕ ಬುಡಕಟ್ಟು ರೋಗಿಗಳು ನಿಯಮಿತವಾಗಿ ಆಸ್ಪತ್ರೆಗೆ ಬರುತ್ತಲೇ ಇರಲಿಲ್ಲ. ಇದನ್ನು ನಾನು ಮಾಸ್ತಿಗೆ ವಿವರಿಸಿ ಹೇಳಿದಾಗ ಸಂಯಮದಿಂದ ಎಲ್ಲವನ್ನೂ ಕೇಳಿಸಿಕೊಂಡ ಆತ, ತಾನು ಮಾತ್ರ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ಉಪೇಕ್ಷೆ ತೋರುವುದಿಲ್ಲ ಎಂದು ನನಗೆ ಭರವಸೆ ನೀಡಿದ.

ಅದೇ ಮಾತಿನಂತೆಯೇ ನಡೆದುಕೊಂಡ ಮಾಸ್ತಿ, ಚಿಕಿತ್ಸೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ. 9 ತಿಂಗಳ ಕಾಲ ನಿಯಮಿತವಾಗಿ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖನಾದ.
 
ಈ ಅವಧಿಯಲ್ಲಿ ನಾನು ಸಾಕಷ್ಟು ಬಾರಿ ಅವನ ಹಾಡಿಗೆ ಭೇಟಿ ನೀಡಿದ್ದೆ. ಬಹಳಷ್ಟು ವಿಷಯಗಳನ್ನು ಅವನೊಂದಿಗೆ ಚರ್ಚಿಸಿದ್ದೆ. ಅವನು ಹಲವಾರು ಬಾರಿ ಎರವಲು ತೆಪ್ಪದ ಮೂಲಕ ಕಬಿನಿ ನದಿಯ ಆಚೆ ಬದಿಗೆ ಕರೆದೊಯ್ದು ಅಲ್ಲಿ ಇರುತ್ತಿದ್ದ ಆನೆಗಳ ಹಿಂಡನ್ನು ನನಗೆ ತೋರಿಸಿದ್ದ.

ಸುಮಾರು 20 ಮನೆಗಳಿದ್ದ ದೇವನಹಾಡಿಗೆ ಮಾಸ್ತಿಯ ಅಪ್ಪನ ಹೆಸರನ್ನೇ ಇಡಲಾಗಿತ್ತು. ಅಲ್ಲಿನ ಬಹುತೇಕ ಜೇನುಕುರುಬ ಕುಟುಂಬಗಳು ಮೊದಲು ಅರಣ್ಯ ಪ್ರದೇಶದ ಗುಂಡ್ರೆ ಎಂಬಲ್ಲಿಗೆ ಸಮೀಪದಲ್ಲೇ ನೆಲೆಸಿದ್ದವು.
 
ಬಳಿಕ ಅರಣ್ಯ ಇಲಾಖೆ ಅವರನ್ನು ಬಲವಂತವಾಗಿ ಈ ಪ್ರದೇಶಕ್ಕೆ ಸ್ಥಳಾಂತರಿಸಿತ್ತು. ಜೇನುಕುರುಬರ ಜೀವನ ಅವರು  ಅತ್ಯಂತ ಆಪ್ತವಾಗಿ ಪ್ರೀತಿಸುತ್ತಿದ್ದ ಕಾಡಿನೊಟ್ಟಿಗೆ ಬಹು ಸಂಕೀರ್ಣವಾಗಿ ಬೆಸೆದುಕೊಂಡಿತ್ತು.
 
ತಮಗೆ ಬೇಕಾದುದೆಲ್ಲವನ್ನೂ ಕಾಡಿನಿಂದ ಪಡೆದುಕೊಂಡಿದ್ದ ಅವರು ತೃಪ್ತ ಜೀವನ ಸಾಗಿಸಿದ್ದರು. ಕಾಡಿನ ಹೊರಭಾಗಕ್ಕೆ ಬಲವಂತವಾಗಿ ಒಕ್ಕಲೆಬ್ಬಿಸಿದ್ದರಿಂದ ಅವರ ಬದುಕು ಪಲ್ಲಟವಾಗಿದ್ದು ಮಾತ್ರವಲ್ಲ, ಜೀವನೋಪಾಯಕ್ಕಾಗಿ ಅವರು ಹೊಸ ಕೌಶಲ್ಯ ಮತ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿತ್ತು.

ಮಾಸ್ತಿ ನದಿ ತೀರದಲ್ಲಿ ಮೂರು ಎಕರೆ ಜಮೀನು ಹೊಂದಿದ್ದ. ಅಲ್ಲಿ ನಡೆಸುತ್ತಿದ್ದ ಸ್ವಲ್ಪ ಮಟ್ಟಿನ ಕೃಷಿಯೇ ಅವನ ಜೀವನಾಧಾರವಾಗಿತ್ತು. ಅದು ಬಿಟ್ಟರೆ ದೇವನಹಾಡಿಯ ಇನ್ನು ಕೇವಲ ಐದು ಕುಟುಂಬಗಳು ಮಾತ್ರ ಸಣ್ಣ ಪ್ರಮಾಣದ ಭೂಮಿ ಹೊಂದಿದ್ದವು. ಅಲ್ಲಿನ ಬಹುತೇಕರು ಹೊಟ್ಟೆಪಾಡಿಗೆ ಕೃಷಿಯನ್ನು ಅವಲಂಬಿಸಿದ್ದರು ಇಲ್ಲವೇ ಕೃಷಿ ಕಾರ್ಮಿಕರಾಗಿದ್ದರು.

1996ರಲ್ಲಿ ಈ ಪ್ರದೇಶದಲ್ಲಿ ಮೊದಲ ಬಾರಿಗೆ ನೀರಾವರಿ ಯೋಜನೆಯನ್ನು ಪರಿಚಯಿಸುವ ಅವಕಾಶ ಒದಗಿಬಂತು. ಕೂಡಲೇ ಮಾಸ್ತಿಯನ್ನು ಕಂಡ ನಾನು ಆತನ ಜನರ ಭೂಮಿಯನ್ನೂ ಈ ಯೋಜನೆಯಲ್ಲಿ ಒಳಗೊಳ್ಳುವ ಉದ್ದೇಶ ಹೊಂದಿರುವುದಾಗಿ ತಿಳಿಸಿದೆ.
 
ಇದನ್ನು ಕೇಳಿ ಕೊಂಚ ಹಿಂಜರಿದ ಮಾಸ್ತಿ, ಸರ್ಕಾರದ ಈ ಕಾರ್ಯಕ್ರಮದಿಂದ ನಿಜಕ್ಕೂ ಪ್ರಯೋಜನ ಆದೀತೇ ಎಂದು ಶಂಕೆ ವ್ಯಕ್ತಪಡಿಸಿದ. ಸರ್ಕಾರ ಮತ್ತು ಅದರ ಯೋಜನೆಗಳ ಬಗ್ಗೆ ಆತ ಹೊಂದಿದ್ದ ಇಂತಹ ಸಂದೇಹ ಸಹಜವಾದುದೇ ಆಗಿತ್ತು.
 
ಹತ್ತಾರು ಭರವಸೆಗಳೊಂದಿಗೆ ಮಾಸ್ತಿ ಮತ್ತು ಅವನ ಜನರನ್ನು ಅರಣ್ಯದಿಂದ ಬಲವಂತವಾಗಿ ಒಕ್ಕಲೆಬ್ಬಿಸಲಾಗಿತ್ತಾದರೂ ಆ ಭರವಸೆಗಳು ಮಾತ್ರ ಈಡೇರಿರಲಿಲ್ಲ. ನಾವು ಈ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಕೊಳ್ಳುವುದರಿಂದ ಅಂತಹುದೇ ಸ್ಥಿತಿ ಮರುಕಳಿಸದು ಎಂದು ನಾನು ಅವನಿಗೆ ಮನದಟ್ಟು ಮಾಡಿಕೊಟ್ಟೆ.

ಈ ಯೋಜನೆಗೆ ಪೂರಕವಾಗಿ ಭೂಗರ್ಭಶಾಸ್ತ್ರಜ್ಞರು ಮತ್ತು ಸಂಬಂಧಪಟ್ಟ ಇಲಾಖೆಗಳ ಎಲ್ಲ ಅಗತ್ಯ ಸಿಬ್ಬಂದಿಯೂ ದೇವನಹಾಡಿಗೆ ಭೇಟಿ ನೀಡಿ ನೀರಾವರಿಗೆ ಸೂಕ್ತವಾದ ರೂಪುರೇಷೆ ಸಿದ್ಧಪಡಿಸಿದರು.
 
ಎಲ್ಲ ಉದ್ದೇಶಿತ ಭೂಮಿಗೂ ನೀರುಣಿಸುವ ಸಾಮರ್ಥ್ಯ ಹೊಂದಿದ ಏಕೈಕ ಕೊಳವೆ ಬಾವಿ ಕೊರೆಯಬಲ್ಲ ಸ್ಥಳ ಮಾಸ್ತಿಗೆ ಸೇರಿದ ಭೂಮಿಯಲ್ಲೇ ಇದ್ದುದು ಪತ್ತೆಯಾಯಿತು. ಇದರಿಂದ, ತನ್ನ ಜನರಿಗೆ ಒಟ್ಟಾರೆ ಸೌಲಭ್ಯ ಕಲ್ಪಿಸುವುದಕ್ಕಾಗಿ ಆತ ತನ್ನ ಜಮೀನಿನಲ್ಲಿ ಒಂದಷ್ಟು ಸ್ಥಳವನ್ನು ಬಿಟ್ಟುಕೊಡಬೇಕಾಗಿತ್ತು.
 
ಇತರ ಬುಡಕಟ್ಟು ಹಾಡಿಗಳಲ್ಲಿ ಈ ಬಗೆಯ ಹಂಚಿಕೆ ವ್ಯವಸ್ಥೆಗೆ ಅಷ್ಟೇನೂ ಪ್ರೋತ್ಸಾಹದಾಯಕ ವಾತಾವರಣ ಸಿಕ್ಕಿರಲಿಲ್ಲ. ಆದ್ದರಿಂದ ಮಾಸ್ತಿಯ ವಿಷಯದಲ್ಲೂ ಅದೇ ಪುನರಾವರ್ತನೆಯಾಗಬಹುದು ಎಂದುಕೊಂಡ ನಾನು, ಈಗ ಮಾಸ್ತಿಯೂ ಸ್ವಾರ್ಥಿಯಾಗಿ ಯೋಚಿಸಿ ತನ್ನ ನೀರನ್ನು ಇತರರೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಾನೆ ಎಂದೇ ಎಣಿಸಿದೆ.

ಆದರೆ ನನ್ನ ಈ ಊಹೆ ಸಂಪೂರ್ಣ ತಲೆಕೆಳಗಾಯಿತು. ತನ್ನ ನೆಲದಲ್ಲಿ ಕೊಳವೆಬಾವಿ ತೋಡಬಹುದು ಎಂಬ ವಿಷಯ ಕೇಳಿ ಮಾಸ್ತಿಗೆ ಸಂತೋಷವೇ ಆಯಿತು. ಒಂದು ವೇಳೆ ಇತರರ ಜಾಗದಲ್ಲಿ ಕೊಳವೆಬಾವಿ ತೋಡಬೇಕಾಗಿ ಬಂದರೆ, ಹಾಡಿಯ ಯಜಮಾನನಾಗಿ ತಾನು ಅವರನ್ನು ಹೇಗೆ ಒಪ್ಪಿಸುವುದು ಎಂಬ ಚಿಂತೆ ಅವನನ್ನು ಕಾಡುತ್ತಿತ್ತಂತೆ.

ಆದರೆ ಈಗಿನ ಸ್ಥಿತಿ ಭಿನ್ನವಾಗಿತ್ತು. ಈಗ ಅಂತಹ ಚಿಂತೆಗೆ ಅವಕಾಶವೇ ಇರಲಿಲ್ಲ. ತನ್ನ ನೆಲದಲ್ಲೇ ಅದಕ್ಕೆ ಅವಕಾಶ ಆಗಿದ್ದರಿಂದ, ಹಾಡಿಯ ಮುಖ್ಯಸ್ಥನಾಗಿ ತನ್ನ ಜನರ ಬಗ್ಗೆ ಕಾಳಜಿ ವಹಿಸುವುದು ತನ್ನ ಆದ್ಯ ಕರ್ತವ್ಯ ಎಂದೇ ಆತ ಭಾವಿಸಿದ್ದ.
 
ಹೀಗಾಗಿ ಸಮಸ್ಯೆಯೇ ತಲೆದೋರಲಿಲ್ಲ. ಇಡೀ ಪ್ರಕರಣವನ್ನು ಅತ್ಯಂತ ಸಹಜವಾಗಿ ಸ್ವೀಕರಿಸಿದ ಅವನ ರೀತಿ ನನ್ನ ಮೇಲೆ ಆಳವಾದ ಪರಿಣಾಮ ಬೀರಿತು. ಅವನ ಇಂತಹ ನಿಸ್ವಾರ್ಥವಾದ ಕಾರ್ಯ ನಿತ್ಯದ ಕಾಯಕವಾಗಿತ್ತು.

ನೀರು ಹಂಚಿಕೊಳ್ಳಲು ತನಗೆ ಸಂತಸವಾಗುತ್ತದೆ ಎಂದು ಹೇಳುವಾಗ ಮಾಸ್ತಿಯ ಕಣ್ಣುಗಳು ಮಿಂಚುತ್ತಿದ್ದವು. ಆದರೆ ಸರ್ಕಾರ ನಿಜವಾಗಲೂ ಆ ಯೋಜನೆಯನ್ನು ಪೂರ್ಣಗೊಳಿಸಿದ ಮೇಲೆ ತಾನೇ ಆ ಮಾತು. ಮಾಸ್ತಿ ಈಗ ಬದುಕಿಲ್ಲ.
 
ಕೆಲವು ವರ್ಷಗಳ ಹಿಂದೆಯೇ ಆತ ಕೊನೆಯುಸಿರೆಳೆದಿದ್ದಾನೆ. ಸರ್ಕಾರ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ಅವನು ಹೊಂದಿದ್ದ ಅನುಮಾನ ಮಾತ್ರ ಆತನ ಹಾಡಿಯಲ್ಲಿ ಇನ್ನೂ ಜೀವಂತವಾಗಿಯೇ ಉಳಿದಿದೆ.
 
ಈ ನೀರಾವರಿ ಯೋಜನೆಯ ಭಾಗವಾಗಿ ದೇವನಹಾಡಿಯಲ್ಲಿ ಆಗಿರುವ ಅರೆಬರೆ ಕಾಮಗಾರಿಯು, ಸಂವೇದನಾರಹಿತ ಸರ್ಕಾರದ ನಡವಳಿಕೆಗೆ ಮೌನ ಸಾಕ್ಷಿಯಂತೆ ನಿಂತಿದೆ.
 
ಆರಂಭವಾದ 16 ವರ್ಷಗಳ ಬಳಿಕವೂ ನಮ್ಮ ಶತ ಪ್ರಯತ್ನಗಳ ನಡುವೆ ಸಹ ಈ ಯೋಜನೆ ಪೂರ್ಣಗೊಳ್ಳುವಂತೆ ಮಾಡಲು ನಮಗೆ ಸಾಧ್ಯವಾಗಿಲ್ಲ. ಮುಂದೆ ಒಂದು ದಿನ ಇದು ಪೂರ್ಣಗೊಳ್ಳುತ್ತದೆ. ಬಹುಶಃ ಆಗಷ್ಟೇ ಮಾಸ್ತಿಯ ಆತ್ಮಕ್ಕೆ ಶಾಂತಿ ಸಿಗಬಹುದು. ಆ ದಿನದವರೆಗೂ ಇಂತಹ ಯೋಜನೆಗಳ ಬಗ್ಗೆ ಜೇನುಕುರುಬರಲ್ಲಿರುವ ಶಂಕೆಯಂತೂ ಜೀವಂತವಾಗಿಯೇ ಇರುತ್ತದೆ.

ಯಾರು ಹೊಣೆಗಾರರು?: ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಅದರ ಆಡಳಿತ ಯಂತ್ರದ ಕೃತ್ಯಗಳಿಗೆ ಅವುಗಳನ್ನೇ ಉತ್ತರದಾಯಿಯನ್ನಾಗಿ ಮಾಡುವ ಬಗೆ ಹೇಗೆ?

ಅಭಿವೃದ್ಧಿ ಕಾರ್ಯದಲ್ಲಿ ಬಡವರು ಕೇವಲ ಮೂಕ ಪ್ರೇಕ್ಷಕರೇ ಅಥವಾ ಅವರು ತಮ್ಮ ಕಾಳಜಿಗಳ ಬಗ್ಗೆ ದನಿಯೆತ್ತಿ ಇಂತಹ ಭಾರಿ ವೈಫಲ್ಯಗಳಿಗೆ ಆಡಳಿತಗಾರರನ್ನು ಹೊಣೆ ಮಾಡಲು ಸಾಧ್ಯವೇ?
 
ಒಬ್ಬ ಜನಸಾಮಾನ್ಯ ಸರ್ಕಾರ ಮತ್ತು ಅದರ ಕಾರ್ಯಗಳಲ್ಲಿ ವಿಶ್ವಾಸ ಕಳೆದುಕೊಂಡಿರುವುದೇಕೆ? ಅಭಿವೃದ್ಧಿಯ ನೇತೃತ್ವವನ್ನು ಸರ್ಕಾರವೇ ವಹಿಸಿಕೊಳ್ಳುವ ಭಾರತದಂತಹ ದೇಶದಲ್ಲಿ ಒಬ್ಬ ವ್ಯಕ್ತಿ ಎಲ್ಲವೂ ತನ್ನಿಂದತಾನೇ ಸರಿಹೋಗಲಿ ಎಂದು ಕೈಕಟ್ಟಿ ಸುಮ್ಮನೇ ನೋಡುತ್ತಾ ಕುಳಿತುಕೊಳ್ಳಲು ಸಾಧ್ಯವೇ?

ಅಭಿವೃದ್ಧಿ ಎನ್ನುವುದು ಒಂದು ಯೋಜನಾಬದ್ಧವಾದ ಹಾಗೂ ಸ್ಪಷ್ಟ ಆಲೋಚನೆಯ ಪ್ರಕ್ರಿಯೆಯೇ? ಅಥವಾ ಸರ್ಕಾರದ ಅನುಪಸ್ಥಿತಿಯಲ್ಲೂ ಆಗುವ ಒಂದು ಸಂಗತಿಯೇ?

ನಾಗರಿಕರು ಹೆಚ್ಚು ಹೆಚ್ಚು ಕ್ರಿಯಾಶೀಲರಾದಾಗ ಮತ್ತು ಸಬಲರಾದಾಗ ಮಾತ್ರ ಇಂತಹ ಮತ್ತು ಇದೇ ಬಗೆಯ ಇತರ ಪ್ರಶ್ನೆಗಳಿಗೆ ಪರಿಣಾಮಕಾರಿ ಉತ್ತರ ಕಂಡುಕೊಳ್ಳಲು ಸಾಧ್ಯ.

ಸರ್ಕಾರದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಬಳಕೆಯಾಗುವುದು ನಾವೇ ಕಟ್ಟಿದ ತೆರಿಗೆಯ ಹಣ ಎಂಬ ಸರಳ ಸತ್ಯವನ್ನು, ತನ್ನೆಲ್ಲಾ ಸೇವೆಗಳಿಗೆ ಅಂತಿಮವಾಗಿ ಒಬ್ಬ ಸಾರ್ವಜನಿಕ ಸೇವಕನೇ ಹೊಣೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪ್ರಜೆಗಳು ತಾವೇ ಪ್ರಭುಗಳು ಎಂದು ಪರಿಭಾವಿಸಿ ಕ್ರಿಯಾಶೀಲರಾದಾಗಷ್ಟೇ ಇದು ಕಾರ್ಯರೂಪಕ್ಕೆ ಬರಲು ಸಾಧ್ಯ.

ಅಧಿಕಾರಿಗಳು ಮತ್ತು ಅವರ ರಾಜಕೀಯ ದಣಿಗಳು ಸಾರ್ವಜನಿಕ ಸೇವಾ ವಿತರಣೆ ಪ್ರಕ್ರಿಯೆಯ ಭಾಗ ಎಂಬುದನ್ನು ನಾವು ಮರೆಯಬಾರದು. ನಮ್ಮ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಶಾಹಿ ಮಾಡುವ ಕಾರ್ಯಗಳಿಗೆ ನಾವು ಅವರನ್ನೇ ಹೊಣೆಯಾಗಿಸಬೇಕು.

ಅದು ಸ್ಥಳೀಯ ಕುಡಿಯುವ ನೀರು ವಿತರಣಾ ಯೋಜನೆ ಇರಲಿ ಅಥವಾ ನಮ್ಮ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆಯೇ ಆಗಿರಲಿ, ಸರ್ಕಾರಿ ಶಾಲೆಗಳ ಕಲಿಕಾ ಪ್ರಗತಿ ಅಥವಾ ನಮ್ಮ ಸಮುದಾಯದ ಶಿಶು ಮತ್ತು ತಾಯಿಯ ಸಾವಿನ ಪ್ರಮಾಣ...

ಯಾವುದೇ ಆಗಿರಲಿ. ಇಂತಹ ಸಂಗತಿಗಳನ್ನು ಆಧರಿಸಿ ಸರ್ಕಾರದ ಕಾರ್ಯದಕ್ಷತೆ ಅಳೆಯುವ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳಬೇಕು.

ಈ ಕಾರ್ಯ ಯಾರೂ ಇಷ್ಟಪಟ್ಟು ಮಾಡುವಂತಹದ್ದಲ್ಲ. ಇದು ಸಾರ್ವಜನಿಕ ಸೇವಾ ವಿತರಣೆಯಲ್ಲಿ ಪ್ರಜೆಗಳನ್ನು ಒಳಗೊಳ್ಳುವ ಪ್ರಕ್ರಿಯೆಯ ಭಾಗವಾಗಬೇಕು. ಹೀಗೆ ನಾವು ಪರಿಣಾಮಕಾರಿಯಾಗಿ ಪಾಲ್ಗೊಂಡಾಗಷ್ಟೇ ಕಳೆದ ಕೆಲವು ದಶಕಗಳಿಂದ ತನ್ನ ಅಸ್ತಿತ್ವದ ಉದ್ದೇಶವನ್ನೇ ಮರೆತಿರುವ ಸರ್ಕಾರಿ ವ್ಯವಸ್ಥೆಯ ಮೇಲೆ ಒತ್ತಡ ಹೇರಲು ಸಾಧ್ಯ.
 
ಸ್ಥಳೀಯ ಗ್ರಾಮ ಪಂಚಾಯಿತಿ, ರಾಜ್ಯ ಸರ್ಕಾರ ಯಾವುದೇ ಇರಲಿ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಅನುಷ್ಠಾನ, ಯೋಜನೆ ಹಾಗೂ ಮೌಲ್ಯಮಾಪನದಲ್ಲಿ ಭಾಗಿಯಾದಾಗ ಪ್ರಜಾಪ್ರಭುತ್ವ ಸಕ್ರಿಯವಾಗುತ್ತದೆ.
 
ಮಾಹಿತಿ ಪ್ರಸಾರ ಮತ್ತು ಅಧಿಕಾರ ತಲುಪುವಲ್ಲಿ ಇರುವ ಅಸಮಾನತೆಗಳನ್ನು ನಿವಾರಿಸುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಹಾಗೂ ಸರ್ಕಾರದ ಸೇವೆಗಳನ್ನು ಖಾತರಿಗೊಳಿಸುವ `ಸಕಾಲ~ದಂತಹ ಯೋಜನೆಗಳು ನೆರವಾಗುತ್ತವೆ. ಸುಸ್ಥಿರ ಪ್ರಜೆಗಳ ಭಾಗಿಯಾಗುವಿಕೆಯಿಂದ ಒತ್ತಡ ಸೃಷ್ಟಿಯಾದಾಗ ಸರ್ಕಾರಗಳು ಸಹ ಸ್ಪಂದನಶೀಲವಾಗಿ ಜವಾಬ್ದಾರಿಯಿಂದ ವರ್ತಿಸುತ್ತವೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback.prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT