ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತ್ತವ ಬಡಿದರೆ ಹಾವು ಸಾಯುವುದಿಲ್ಲ 

Last Updated 16 ಜೂನ್ 2018, 9:15 IST
ಅಕ್ಷರ ಗಾತ್ರ

ಇಡೀ ದೇಶಕ್ಕೆ ದೇಶವೇ ಮಾತನಾಡುವ ಮೂರು ವಿಷಯಗಳ ಒಂದು ಪಟ್ಟಿಯನ್ನು ಯಾರು ತಯಾರಿಸಿದರೂ  ಅದರಲ್ಲಿ ‘ಮೀಸಲಾತಿ’ ಎಂಬುದಂತೂ ಇದ್ದೇ ಇರುತ್ತದೆ; ಇನ್ನೆರಡು ವಿಷಯಗಳು ಅವರವರ ಇಷ್ಟಕಷ್ಟಗಳಿಗೆ ತಕ್ಕಂತೆ ಬದಲಾಗಬಹುದು. ಹಾಗೆ ನಮ್ಮ ಜನಮಾನಸವನ್ನು ಆವರಿಸಿಬಿಟ್ಟಿರುವ ದಲಿತರಿಗೆ ಮೀಸಲಾತಿ ಕಲ್ಪಿಸುವ ವಿಷಯಕ್ಕೆ, ಇತ್ತೀಚೆಗೆ ಹೊಸತೇನೋ ಒಂದು ಅಂಶ ಸೇರಿರುವುದು ಹೆಚ್ಚು ಜನರಿಗೆ ಗೊತ್ತೇ ಆಗಿಲ್ಲ. ದಲಿತರಿಗೆಂದೇ ಮೀಸಲಾದ ಒಂದು ಹೊಸ ‘ಎಟಿಎಂ’ ದೇಶದಲ್ಲಿ ಆರಂಭವಾಗಿದೆ !

ಇದು ದಲಿತರಿಗೆ ಅವರು ಕೇಳಿದಾಗಲೆಲ್ಲಾ ದುಡ್ಡು ತೆಗೆದು ಮೊಗೆದು ಕೊಡುವಂಥ ಎಟಿಎಂ ಅಲ್ಲ. ಬದಲಿಗೆ ಅವರು ಸಮಾಜದಿಂದ ‘ಪಡೆದು’ಕೊಂಡದ್ದನ್ನು, ಆ ಕಾರಣದಿಂದ ಅವರು ಕಳೆದುಕೊಂಡದ್ದನ್ನು ‘ಲೆಕ್ಕ’ ಇಡುವ ಎಟಿಎಂ. ಅವರ ಮೈಮೇಲೆ ಬಿದ್ದ ಬಾಸುಂಡೆ, ಅವರ ಚೆಂಡಾಡಿದ ರುಂಡ, ಅವರ ಗುಡಿಸಲಿಗೆ ಬಿದ್ದ ಬೆಂಕಿ, ಅವರ ಹೆಣ್ಣುಗಳ ಮೇಲೆ ನಡೆದ ಅತ್ಯಾಚಾರ ಮತ್ತು ಇನ್ನೂ ಅನೇಕಾನೇಕ ದೌರ್ಜನ್ಯಗಳನ್ನು ದಾಖಲಿಸಿಕೊಳ್ಳುತ್ತದೆ ಈ ಹೊಸ ‘ಎಟಿಎಂ’. ಇದರ ಪೂರ್ತಿ ಹೆಸರು ‘ಅಟ್ರಾಸಿಟಿ ಟ್ರ್ಯಾಕಿಂಗ್ ಅಂಡ್ ಮಾನಿಟರಿಂಗ್’ ಸಿಸ್ಟಮ್ (Atrocity Tracking and Monitoring (ATM) System).

ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಉರುಳಿದರೂ ದಲಿತರು ಸಾಮಾಜಿಕ ಸಂಕೋಲೆಗಳಿಂದ ಸ್ವತಂತ್ರರಾಗಲಿಲ್ಲ ಎಂಬ ಕಾರಣಕ್ಕೆ ‘ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ’ ರಚಿತವಾಯಿತು. ಇದೇ ಆಯೋಗವೇ ಈಗ ಅವರಿಗೆ ಇಂಥ ‘ಎಟಿಎಂ’ ಕೊಟ್ಟಿದೆ. ಆಯೋಗದ ಅಧ್ಯಕ್ಷ ಪಿ.ಎಲ್. ಪೂನಿಯ ಅವರು ಹೇಳುವ ಪ್ರಕಾರ ‘ದಲಿತರು, ದಮನಿತರ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ವಿಫಲವಾಗಿದೆ. ಆದ್ದರಿಂದ ಈ ‘ಎಟಿಎಂ’ ಸ್ಥಾಪನೆ ಅಗತ್ಯವಾಗಿದೆ’.

NCSPOA ಎಂಬ ಕೀವರ್ಡ್ ಬಳಸಿ ಯಾರು ಬೇಕಾದರೂ 98989 15455 ಸಂಖ್ಯೆಯ ಮೊಬೈಲ್‌ಗೆ ಎಸ್‌ಎಂಎಸ್ ಕಳಿಸಿ ದೌರ್ಜನ್ಯ ನಡೆದಿರುವುದನ್ನು ಈ ‘ಎಟಿಎಂ’ ಗೆ ತಿಳಿಸಬಹುದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಇದು ನೆರವಾಗುತ್ತದೆ. ಇದರ ಬಗ್ಗೆ ದೇಶದಾದ್ಯಂತ ಪ್ರಚಾರ ಕಾರ್ಯವನ್ನು ಆಯೋಗ ರೂಪಿಸಿದೆ. ದುಡ್ಡುಕಾಸು ವಹಿವಾಟು ಇಲ್ಲದಿದ್ದರೂ ಈ ‘ಎಟಿಎಂ’ ಬಿಡುವಿಲ್ಲದೆ ದುಡಿಯುವುದು ಅನಿವಾರ್ಯ.

ಏಕೆಂದರೆ ನಮ್ಮ ದೇಶದಲ್ಲಿ ಪ್ರತೀ 18 ನಿಮಿಷಗಳಿಗೆ ಒಂದರಂತೆ ದಲಿತರ ಮೇಲೆ ಒಂದಲ್ಲಾ ಒಂದು ಕಡೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ರಾಜಸ್ತಾನ, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಅದು ದಿನನಿತ್ಯದ ಘಟನೆ ಆಗಿರುವುದರಿಂದ ಯಾವ ರಾಜ್ಯಕ್ಕೆ ಮೊದಲ ಸ್ಥಾನ ಎಂದು ನಿರ್ಧರಿಸುವುದೇ ಬಹಳ ಕಷ್ಟದ ಕೆಲಸ. ದಿನಾ ಸಾಯುವ ದಲಿತರಿಗೆ ಅಳುವವರೂ ಇರುವುದಿಲ್ಲ. ಅವರ ಮೇಲೆ ನಡೆಯುವ ದೌರ್ಜನ್ಯದಲ್ಲಿ ಹೊಸತೇನಾದರೂ ಇಲ್ಲದಿದ್ದರೆ, ‘ಕ್ರೌರ್ಯದ ಹೊಸ ಶೈಲಿ’ ಕಾಣದಿದ್ದರೆ, ಮಾಧ್ಯಮದಲ್ಲೂ ಅದಕ್ಕೆ ಪ್ರಾಶಸ್ತ್ಯ ಸಿಗುವುದಿಲ್ಲ.

ನಮ್ಮ ದೇಶದಲ್ಲಿ ಅನೇಕ ಪ್ರಸಿದ್ಧ ವಿಚಾರಗಳಿಗೆ ಇರುವಂತೆ ದಲಿತರ ಮೇಲಿನ ದೌರ್ಜನ್ಯದಂಥ ಕುಪ್ರಸಿದ್ಧ ವಿಚಾರಕ್ಕೂ ಮೂರು ಸಾವಿರ ವರ್ಷಗಳ ಪರಂಪರೆ ಇದೆ. ಏಕೆಂದರೆ ಜಾತಿವ್ಯವಸ್ಥೆ ಮತ್ತು ಅದರಲ್ಲಿ ಅಂತರ್ಗತವಾಗಿರುವ ಅಸ್ಪೃಶ್ಯತೆ ಇದ್ದ ಮೇಲೆ ಸಾಮಾಜಿಕ ಶ್ರೇಣಿಯಲ್ಲಿ ಅತ್ಯಂತ ಕೆಳಗಿರುವ ಜನರ ಮೇಲೆ ದೌರ್ಜನ್ಯವೂ ಇದ್ದೇ ಇರುತ್ತದೆ. ಕಾಲಘಟ್ಟಗಳು ಉರುಳಿದಂತೆ, ಈ ದೌರ್ಜನ್ಯದ ಸ್ವರೂಪ ಅತಿಹೆಚ್ಚು ಸಂಕೀರ್ಣಗೊಂಡಿರುವ ಸಂಗತಿಯನ್ನೂ ಗುರುತಿಸಲಾಗಿದೆ.

ಜಗತ್ತಿನ ಬಹುಪಾಲು ಧರ್ಮಗಳು ಮೊದಲು ತಳಸ್ತರದಲ್ಲಿರುವ ಗುಲಾಮರನ್ನು ಸೆಳೆದುಕೊಂಡೇ ಬೇರೂರಿ, ನಂತರ ಚಕ್ರವರ್ತಿಗಳ ಆಸ್ಥಾನಗಳನ್ನು ಪ್ರವೇಶಿಸಿವೆ. ಅದರಂತೆ ನಮ್ಮ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಧಾರ್ಮಿಕ ಚಳವಳಿಯೂ ಬೇರೂರಲು, ಹಿಂಬಾಲಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ‘ಅಸ್ಪೃಶ್ಯ’ ಸಮುದಾಯವನ್ನು ಅಪ್ಪಿಕೊಂಡಿದೆ. ಆದರೆ ಕಾಲಕ್ರಮೇಣ ಧಾರ್ಮಿಕ ಚಳವಳಿಗಳು ಸತ್ತರೂ ಅಸ್ಪೃಶ್ಯತೆಯ ಸಮಸ್ಯೆ ಮಾತ್ರ ಸಾಯಲಿಲ್ಲ.

ಭಾರತದ ನೆಲದಲ್ಲಿ ಬೆಳೆದ ಪ್ರತಿಯೊಂದು ಸಾಮಾಜಿಕ ಮತ್ತು ರಾಜಕೀಯ ಚಳವಳಿಯೂ ಅಸ್ಪೃಶ್ಯತೆಯ ಸಮಸ್ಯೆಯನ್ನು ತನ್ನದೇ ಆದ ಗ್ರಹಿಕೆಯ ರೀತಿಯಲ್ಲಿ ಕೈಗೆತ್ತಿಕೊಂಡಿರುವುದೇ ಆ ಸಮಸ್ಯೆಯ ವಿಕೃತ– ವಿಸ್ತೃತ ಸ್ವರೂಪವನ್ನು ಸ್ಪಷ್ಟಮಾಡುತ್ತದೆ. ದಲಿತರ, ದಮನಿತರ ಶೋಷಣೆಯ ವಿಶ್ಲೇಷಣೆ ಮಾಡುವ ಮೂಲಕ ಆ ಕಾಲದ ಜನರಲ್ಲಿ ಜಾಗೃತಿ ಮೂಡಿಸಿದೆ. ಹಾಗೆಯೇ ಪ್ರಾಚೀನ ಕಾಲದಿಂದ ನಡೆದಿರುವ ಪ್ರತಿಯೊಂದು ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರವೂ ದೌರ್ಜನ್ಯಕ್ಕೆ ಇನ್ನಷ್ಟು ಕಾರಣಗಳನ್ನು ಸೇರಿಸಿವೆ. ‘ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯೇ ಇರಲಿಲ್ಲ’ ಎಂದು ವಾದಿಸುವ ವಿದ್ವಾಂಸರನ್ನು ಇಂಥ ಸತ್ಯಗಳು ಅಪ್ಪಿಕೊಂಡರೂ ಅವರು ಅವುಗಳನ್ನು ಮುಟ್ಟುವುದಿಲ್ಲ! 

ಮುಂದೆ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಚಳವಳಿಯೂ ಮುಖ್ಯವಾಗಿ ಗಾಂಧೀಜಿಯವರ ಕಾರಣ ‘ಹರಿಜನ’ ಸಮಸ್ಯೆಯನ್ನು ಬಹಿರಂಗವಾಗಿ ಚರ್ಚಿಸಿತು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅದೇ ಕಾಲಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತಿವಿನಾಶ ಘೋಷಣೆಯ ಮೂಲಕ ದಲಿತರ ಹಕ್ಕುಗಳಿಗಾಗಿ ರೂಪಿಸಿದ ಹೋರಾಟ, ಮಾನವ ಜನಾಂಗದ ವಿಮೋಚನೆಯ ಹೋರಾಟಗಳ ಸಾಲಿಗೆ ಸೇರಿತೆನ್ನುವುದು ಸತ್ಯ. ಆದರೆ ‘ಜಾತಿವ್ಯವಸ್ಥೆಯ ವಿನಾಶ’ದ ಆಶಯ ಹಲವು ಕಾರಣಗಳಿಂದ ಈಡೇರದೆ ‘ಜಾತಿವ್ಯವಸ್ಥೆಯ ವಿಸ್ತಾರ’ ಆಗುತ್ತಿರುವ ಮತ್ತು ಅದರ ಫಲವಾಗಿ ಜಾತಿದೌರ್ಜನ್ಯ ಇನ್ನಷ್ಟು ವಿಕೃತ ವಿಸ್ತಾರ ಪಡೆಯುತ್ತಿರುವ ವಿಪರ್ಯಾಸವೂ ಅಷ್ಟೇ ಸತ್ಯ.

ಇದಕ್ಕೆ ಯಾವ ದಿನವಾದರೂ ಉದಾಹರಣೆ ಸಿಗುತ್ತದೆ. ನಮ್ಮ ರಾಜ್ಯದಲ್ಲೇ ಮಾರ್ಚ್ ತಿಂಗಳಿನಲ್ಲಿ ಚಾಮರಾಜನಗರದ ಸಂತೆಮರಹಳ್ಳಿಯ ಒಂದು ಹೊಲದಲ್ಲಿ ಇಬ್ಬರು ದಲಿತ ಕೃಷಿ ಕಾರ್ಮಿಕರನ್ನು ಕೊಂದು ರಕ್ತ ಹರಿಸಲಾಯಿತು. ಇಬ್ಬರದೂ ರುಂಡ ಕತ್ತರಿಸಿ ಅವುಗಳನ್ನು ಚೀಲದಲ್ಲಿ ಕಟ್ಟಿ ಬಿಸಾಕಲಾಗಿತ್ತು. ಈ ಕೊಲೆಗಳ ವಿಚಾರಣೆಯನ್ನು ಸಿಐಡಿ ನಡೆಸಲಿ ಎಂದು ಕೆಲವರು ಮೆರವಣಿಗೆ ನಡೆಸಿ ಕೇಳಿದ್ದು ಬಿಟ್ಟರೆ, ಸಿಬಿಐಗೆ ವಹಿಸಬೇಕು ಎಂದು ಯಾವ ಗುಂಪೂ ಯಾವ ರಾಜಕೀಯ ಪಕ್ಷವೂ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿಲ್ಲ.

ಕೊಲೆ ಮಾಡಿ ರಕ್ತ ಹರಿಸದಿದ್ದರೂ ದಲಿತರ ಮೇಲೆ ದೌರ್ಜನ್ಯ ನಡೆಸುವ ಇನ್ನಿತರ ಜಾತಿಗಳ ಕೆಲವು ಜನರ ಮನೋವಿಕೃತಿ  ಹೇಳತೀರದು. ಮಾರ್ಚ್ ತಿಂಗಳಿನಲ್ಲೇ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆ ಇದನ್ನು ವಿವರಿಸುತ್ತದೆ. ಕರುವಾನೂರಿನ ದೇವಸ್ಥಾನದ ಉತ್ಸವದ ಸಮಯದಲ್ಲಿ ಇಬ್ಬರು ದಲಿತ ಹುಡುಗರು ದೇವರ ದರ್ಶನಕ್ಕೆ ಬಂದಾಗ ದಲಿತೇತರ ಜಾತಿಗಳ ಜನರ ಕಣ್ಣು ಕೆಂಪಾಯಿತು. ಅವರಿಂದ ತುಂಬಾ ಕೆಟ್ಟ ಪದಗಳ ಬೈಗುಳದ ಸುರಿಮಳೆ ಆದಾಗ ಹುಡುಗರು ಪ್ರತಿಭಟಿಸಿದರು.

ಕೆರಳಿದ ಆ ಜನ, ದಲಿತ ಹುಡುಗರನ್ನು  ಹತ್ತಿರದ ಶೌಚಾಲಯಕ್ಕೆ ಎಳೆದೊಯ್ದು ಚೆನ್ನಾಗಿ ಥಳಿಸಿದರು. ಏಟು ತಿಂದು ಸುಸ್ತಾಗಿ ಕೆಳಗೆ ಬಿದ್ದ ಅರವಿಂದನ್ ಎಂಬ ಹುಡುಗ ಕುಡಿಯಲು ನೀರು ಕೇಳಿದ. ಆಗ ಆ ಹೀನ ಜನ ಬಲವಂತವಾಗಿ ಅವನ ಬಾಯಿ ತೆರೆದು ಒಬ್ಬೊಬ್ಬರಾಗಿ ಮೂತ್ರ ಮಾಡಿದರು. ದಲಿತ ಹುಡುಗಿಯರನ್ನು ಮತ್ತು ಇನ್ನಿತರ ಮಹಿಳೆಯರನ್ನು ಎಳೆದೊಯ್ದು ಅತ್ಯಾಚಾರ ಮಾಡಿ ನಂತರ ಅವರನ್ನು ಊರಮರಗಳಿಗೆ ನೇಣುಹಾಕಿ ಉಪಸಂಹಾರ ಮಾಡುವ ಉತ್ತರ ಪ್ರದೇಶದ ಮೇಲ್ಜಾತಿ, ನಡುಜಾತಿಗಳ ತುಡುಗು ಗಂಡಸರಿಗೆ ದೇಶದೆಲ್ಲೆಡೆ ಸೋದರರಿದ್ದಾರೆ. ಇಂಥ ಅಮಾನವೀಯ ಪ್ರಕರಣಗಳು ಪ್ರತೀ ರಾಜ್ಯದಲ್ಲೂ ಹತ್ತಾರಲ್ಲ, ಸಾವಿರಾರು.

ಗ್ರಾಮೀಣ ಪ್ರದೇಶದಲ್ಲಿ ಹೊಲಗದ್ದೆ ಕೆಲಸದ ನಿರ್ಧಾರ, ಅದಕ್ಕೆ ಸೂಕ್ತ ಕೂಲಿ ಬೇಡಿಕೆ, ಜಮೀನಿನ ಒಡೆತನ, ದೇವಾಲಯ ಪ್ರವೇಶ, ಹೋಟೆಲ್ ಪ್ರವೇಶ, ದೈಹಿಕ ಸಂಬಂಧ ಇಂಥ ವಿಷಯಗಳು ಆಗಲೂ ಈಗಲೂ ದಲಿತರ ಪಾಲಿಗೆ ಸ್ವಂತ ಆಯ್ಕೆ ಅಥವಾ ಅಧಿಕಾರ ಆಗಿಯೇ ಇಲ್ಲ. ಏಕೆಂದರೆ ಅವರ ಉಸಿರು, ಅವರ ಬೆವರು ಯಾವತ್ತೂ ಅವರದಲ್ಲ.   

ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳೆಂಬ ಆಧುನಿಕ ಆರ್ಥಿಕ ಕಾರಣಿಕಗಳು ಮೊದಲೇ ಬಲಿಷ್ಠವಾಗಿದ್ದ ‘ದಲಿತ ದಮನ’ ವ್ಯವಸ್ಥೆಗೆ ಹೊಸ ಉಪಕರಣಗಳನ್ನು ಕೊಡುವ ಮೂಲಕ ಅದನ್ನು ಇನ್ನಷ್ಟು ಬಲಪಡಿಸಿದ ವಿಚಾರವನ್ನಂತೂ ಹೇಳುವುದೇ ಬೇಡ. ಈಗ ಹೊಸ ಸರ್ಕಾರ ಮುಂದಿಟ್ಟಿರುವ, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಖಾಸಗಿ ಕಂಪೆನಿಗಳ ಕೈಗೆ ಉಳುವ ಭೂಮಿಯನ್ನು ಕೊಡುವ ಶಂಕಿತ ಉದ್ದೇಶದ ಭೂಸುಧಾರಣೆ ಮಸೂದೆ, ದಲಿತರೂ ಸೇರಿದಂತೆ ಒಟ್ಟಾರೆ ತಳಸಮುದಾಯದ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ.  

ಡಾ. ಅಂಬೇಡ್ಕರ್ ಅವರು ಬರೆದ ‘ಜಾತಿ ವಿನಾಶ’ (Annihilation of Caste-1936) ಎಂಬ ಐತಿಹಾಸಿಕ ಪ್ರಬಂಧಕ್ಕೆ ಮುಂದಿನ ವರ್ಷಕ್ಕೆ ಎಂಬತ್ತು ವರ್ಷಗಳಾಗಲಿವೆ. ಅದರಿಂದ ಪ್ರೇರಿತವಾಗಿ ಬೆಳೆದ ಹೋರಾಟಗಳಿಗೂ ಅರ್ಧ ಶತಮಾನದ ಆಯಷ್ಯ ಕಳೆದಿದೆ. ಆ ದಿಕ್ಕಿನ ಹೋರಾಟಗಳು ಬೆಳೆಸಿದ ದಲಿತ ಪ್ರಜ್ಞೆ, ದಲಿತ ಅಸ್ಮಿತೆ, ದಲಿತ ಶಕ್ತಿ, ದಲಿತ ಚಳವಳಿ, ದಲಿತ ರಾಜಕಾರಣ ಮುಂತಾದುವೆಲ್ಲ ‘ಎತ್ತಿಕೊಂಡವರ ಕೈಕೂಸು’ ಆದ ಬಗೆಯೂ  ನಿಚ್ಚಳವಾಗಿದೆ. ದಲಿತರ ಮನಗಳಲ್ಲಿ ಅವು ಹೋರಾಟದ ಕಿಚ್ಚು ಹಚ್ಚಿದ್ದು ನಿಜವಾದರೂ ಅವರ ಕೇರಿಯ ಗುಡಿಸಲುಗಳು ಈಗಲೂ ಪೊಲೀಸರ ಪೌರೋಹಿತ್ಯದಲ್ಲೇ ಬೆಂಕಿಗೆ ಆಹುತಿಯಾಗುತ್ತಿವೆ.

ಹೆಚ್ಚೇನು ಹೇಳುವುದು,  ಹಿಂದೂ ಮೂಲಭೂತ ವಾದ ಬೋಧಿಸುವ ಸಂಘವೂ ‘ಅಂಬೇಡ್ಕರ್ ವಿಶೇಷ ಸಂಚಿಕೆ’ ಪ್ರಕಟಿಸಿ ದಲಿತರನ್ನು ಅಪ್ಪಿಕೊಳ್ಳಲು ಮುಂದಾಗಿದೆ. ಹೀಗೆ ದೇಶದ ರಾಜಕಾರಣದಲ್ಲಿ ಪಗಡೆಯ ಹಾಸೂ ಆಗುತ್ತ, ಕಾಯಿಗಳೂ ಆಗುತ್ತ ದುಡಿದ ದಲಿತರನ್ನು ಎಲ್ಲ ಬಗೆಯ ದಾಳಗಳೂ ‘ಗರ’ ಬಡಿಸಿ ಕೂಡಿಸಿವೆ. ‘ದಲಿತರು ಬಂದರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಎಂಬ ಸದಾಶಯ ಮೊಳಗಿದರೂ ಹಲವು ಕಾರಣಗಳಿಂದ ಅವರು ಅಭಿವೃದ್ಧಿಯ ರಾಜಮಾರ್ಗದ ಅಂಚಿನಲ್ಲೇ ಉಳಿದದ್ದು, ರಾಜಕೀಯ ಅಧಿಕಾರದಲ್ಲಿ ಅವರೊಂದು ಶಕ್ತಿಯಾಗಿ ಸಂಘಟಿತರಾಗದೇ ಸೋತದ್ದು, ಸಣ್ಣ ಆಸೆಗಳಿಗೆ ದೊಡ್ಡ ದೊಡ್ಡವರೂ ಬಲಿಯಾದದ್ದು, ಸ್ವಾರ್ಥಸಾಧನೆ ಮತ್ತಿತರ ಹಲವು ಕಾರಣಗಳಿಂದ ದಲಿತ ಚಳವಳಿ ಛಿದ್ರಾತಿಛಿದ್ರವಾಗಿರುವುದು ವರ್ತಮಾನದ ಚರಿತ್ರೆ.

ಮೀಸಲಾತಿಯಿಂದ ಲಾಭ ಪಡೆದು ಕೆನೆಪದರ ರೂಪುಗೊಂಡದ್ದು, ಅವರಿಂದ ಅದನ್ನು ದೂರವಿಡಲಾರದೆ  ದಲಿತ ಬಡವರು ಬಡವರಾಗಿಯೇ ಉಳಿದದ್ದು ನಿರಾಕರಿಸಲಾಗದ ಸಮಕಾಲೀನ ಸತ್ಯ. ಅಂಬೇಡ್ಕರ್ ಅವರು ಹತ್ತು ವರ್ಷ ಮಾತ್ರ ಕೊಡಬಯಸಿದ್ದ ‘ಮೀಸಲಾತಿ’, ಅದರ ಸಾಮಾಜಿಕ ಆಶಯವನ್ನು ಮೀರಿ ಎಂದೋ ಒಂದು ರಾಜಕೀಯ ತಂತ್ರವಾಗಿದೆ. ಇಂದು ಇಡೀ ಸಾಮಾಜಿಕ ವ್ಯವಸ್ಥೆಯನ್ನು ಆಡಿಸುತ್ತಿರುವ ಆ ಮೀಸಲಾತಿ ಎಂಬ ರಾಜಕೀಯ ಮಂತ್ರದಂಡಕ್ಕೆ ತಲೆದೂಗದ ಜಾತಿ ಯಾವುದು! 

‘ವಂದಿಪೆ ಶ್ರೀ ಅಂಬೇಡ್ಕರ್ ಸಿರಿಚರಣಕೆ’ ಎಂದು ಹಾಡುತ್ತಿರುವ ದಲಿತಲೋಕ ಇಂದು ರೂಕ್ಷ ಅರ್ಥದಲ್ಲಿ ಒಂದು ಗೊಂದಲಪುರವಾಗಿದೆ ಎಂದರೆ ಯಾರೂ ತಪ್ಪು ತಿಳಿಯಬಾರದು. ಆದ್ದರಿಂದಲೇ ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯ ಮತ್ತು ರಾಷ್ಟ್ರೀಯ ಅಕೆಡೆಮಿಕ್ ವಲಯಗಳಲ್ಲಿ, ಸಾಮಾಜಿಕ ಚಿಂತಕರ ಚಾವಡಿಗಳಲ್ಲಿ ಸಮಕಾಲೀನ ದಲಿತ ವಾಸ್ತವ ಕುರಿತು, ಚಳವಳಿಗೆ ಬೇಕಾದ ಹೊಸದಿಕ್ಕು ಕುರಿತ ಪ್ರಾಮಾಣಿಕ ಚರ್ಚೆಗಳು, ಸೈದ್ಧಾಂತಿಕ ಸಂಕಥನಗಳು ನಡೆಯುತ್ತಿವೆ.

ನಮ್ಮ ಸಮಾಜದ ಅನಿಷ್ಟಗಳಿಗೆ, ರೋಗಗಳಿಗೆ ಡಾ. ಬಾಬಾಸಾಹೇಬ್‌ ಅಂಬೇಡ್ಕರ್ ಹೇಳಿದ ಮದ್ದು ಇದಲ್ಲವೇ ಎಂಬ ವಿಚಾರದಲ್ಲಿ ಪುನರ್ಮನನ ನಡೆಯುತ್ತಿದೆ. ಅವುಗಳಿಂದ ಹೊಮ್ಮುವ ಬೆಳಕಿನ ಕಿರಣಗಳು ದಲಿತರೂ ಸೇರಿ ಇಡೀ ಜನಸಂಕುಲಕ್ಕೇ ದಾರಿ ತೋರುವಂತಿವೆ– ಮೊದಲಿಗೆ, ‘ಅಸ್ಮಿತೆ’ ಯಾವುದಾದರೂ ಆಗಿರಲಿ ಬಡತನದ ನಾಶ ಎಲ್ಲರ ಹೋರಾಟದ ಗುರಿ. ಇನ್ನೊಂದು, ಜಾತಿ ವಿನಾಶ ಆಗುವುದು ಎಲ್ಲರೂ ಜಾತಿಯನ್ನು ಬಿಡುವುದರಿಂದ ಮಾತ್ರ ಸಾಧ್ಯ. ಅಷ್ಟು ಮಾಡದೆ ಬರೀ ಹುತ್ತವ ಬಡಿದರೆ ಹಾವು ಸಾಯುವುದಿಲ್ಲ.    
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT