ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥಯಾತ್ರೆ, ಪಾದಯಾತ್ರೆ: ಸ್ತ್ರೀಯಾತ್ರೆಗೆ ಅಡ್ಡಿ

ಸಾಂವಿಧಾನಿಕ ನ್ಯಾಯಕ್ಕೆ ಸಡ್ಡು ಹೊಡೆದಿರುವ ಶಕ್ತಿಗಳು ಯಾವುವು?
Last Updated 13 ನವೆಂಬರ್ 2018, 20:15 IST
ಅಕ್ಷರ ಗಾತ್ರ

ವಾರ್ಷಿಕ ಉತ್ಸವಕ್ಕಾಗಿ ಶಬರಿಮಲೆ ದೇವಾಲಯದ ದರ್ಶನ ಈ ಶುಕ್ರವಾರದಿಂದ ಮತ್ತೆ ಆರಂಭವಾಗಲಿದೆ. ಪ್ರವಾಹ ದುರಂತಗಳಿಂದಾಗಿ ಸುದ್ದಿಯಲ್ಲಿದ್ದ ಕೇರಳ, ಕಳೆದ ಸುಮಾರು ಒಂದೂವರೆ ತಿಂಗಳಿಂದ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆ ಪ್ರವೇಶ ವಿಚಾರಕ್ಕೆ ಭಾರಿ ಸದ್ದು ಮಾಡುತ್ತಿದೆ. ಶಬರಿಮಲೆ ದೇವಾಲಯಕ್ಕೆ 10ರಿಂದ 50 ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತೀರ್ಪು (ಸೆ.28) ರದ್ದುಮಾಡಿದ ನಂತರ ನಡೆದ ಬೆಳವಣಿಗೆಗಳು ಅಸಾಧಾರಣ. ಗಂಡು, ಹೆಣ್ಣಿನ ಮಧ್ಯೆ ತಾರತಮ್ಯ ನಿವಾರಿಸುವ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಧಿಕ್ಕರಿಸಿ, ಹೆಣ್ಣನ್ನು ಬದಿಗೊತ್ತರಿಸುವ ಸಾಂಪ್ರದಾಯಿಕ ಆಚರಣೆಗಳನ್ನು ಕಾಯ್ದುಕೊಳ್ಳಲು ಕಂಡುಬಂದಂತಹ ಆಕ್ರಮಣಕಾರಿ ಅತಿರೇಕಗಳು ಪಿಚ್ಚೆನಿಸುವಂತಹವು. ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಕೆಯಾಗಿರುವ 49 ಅರ್ಜಿಗಳನ್ನು ಜನವರಿ 22ರಂದು ತೆರೆದ ನ್ಯಾಯಾಲಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಈಗ ಸುಪ್ರೀಂ ಕೋರ್ಟ್ ಕೂಡ ಸಮ್ಮತಿಸಿದೆ. ಆದರೆ, ಮಹಿಳೆ ಪ್ರವೇಶಕ್ಕೆ ಈಗಾಗಲೇ ನೀಡಿರುವ ತೀರ್ಪಿನಲ್ಲೇನೂ ವ್ಯತ್ಯಾಸವಾಗುವುದಿಲ್ಲ ಎಂಬುದನ್ನೂ ಕೋರ್ಟ್ ಸ್ಪಷ್ಟಪಡಿಸಿದೆ.

2900 ಕೋಟಿ ರೂಪಾಯಿಗಳ 182 ಮೀಟರ್ ಎತ್ತರದ ಸರ್ದಾರ್‌ ವಲ್ಲಭ ಭಾಯಿ ಪಟೇಲ್ ‘ಏಕತಾ’ ಪ್ರತಿಮೆಯನ್ನು ಗುಜರಾತ್‌ನಲ್ಲಿ ಅನಾವರಣ ಮಾಡಿದ ಸಂದರ್ಭದಲ್ಲಿಯೇ ಕೇರಳದಲ್ಲಿ ಕಹಿ ’ವಿಭಜನೆ’ಗಳ ಪರ್ವ ಆರಂಭವಾಗಿದೆ. ‘ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನ ಮಾಡಲು ಅಸಾಧ್ಯ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ. ಈ ತೀರ್ಪನ್ನು ಹಿಂದೂಗಳು ಒಪ್ಪಿಕೊಳ್ಳಲಾರರು ಎಂದವರು ಪರೋಕ್ಷವಾಗಿ ಘೋಷಿಸಿದ್ದಾರೆ. ಕಮ್ಯುನಿಸ್ಟ್ ವರ್ಸಸ್ ಹಿಂದೂ ಎಂಬಂತಹ ಹಣೆಪಟ್ಟಿಯ ವಿವಾದವಾಗಿ ಇದನ್ನು ಪರಿವರ್ತಿಸಲಾಗಿದೆ. ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ನೀಡಿರುವ ತೀರ್ಪನ್ನು ಕೇರಳ ಸರ್ಕಾರ ಜಾರಿಗೊಳಿಸಲು ಯತ್ನಿಸುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜ ಯನ್ ಮಾತುಗಳಿವು: ‘ಶಬರಿಮಲೆ ವಿವಾದವನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಹಾಗೂ ಆರ್‌ಎಸ್ಎಸ್ ಯತ್ನಿಸುತ್ತಿರುವುದು ಸ್ಪಷ್ಟ. ಭಕ್ತ ರನ್ನು ಪ್ರಚೋದಿಸಲಾಗುತ್ತಿದೆ. ಕೆಲವೇ ಮತಗಳಿಗಾಗಿ ಕೋಮು ಆಧಾರದಲ್ಲಿ ಸಮಾಜವನ್ನು ವಿಭಜಿಸುವುದೇ ಇದರ ಹಿಂದಿರುವ ಏಕೈಕ ಉದ್ದೇಶ. ಇಂತಹ ಕೇಡಿನ ರಾಜಕೀಯ ತಂತ್ರಗಾರಿಕೆ ಅಳವಡಿಸಿಕೊಳ್ಳುವ ದೀರ್ಘ ಇತಿಹಾಸವೇ ಈ ಶಕ್ತಿಗಳ ಹಿಂದೆ ಇದೆ. ಇದಕ್ಕಾಗಿ ಹಿಂಸೆ, ಗೊಂದಲ ಸೃಷ್ಟಿಸುವ ಮಟ್ಟಕ್ಕೆ ಹೋಗಿದ್ದಾರೆ... ಇನ್ನು ಮುಂದೆ ಇಂತಹದನ್ನು ಕೇರಳ ಸರ್ಕಾರ ಸಹಿಸುವುದಿಲ್ಲ. ಕೋರ್ಟ್ ತೀರ್ಪು ಅಕ್ಷರಶಃ ಜಾರಿಗೆ ಸರ್ಕಾರ ಬದ್ಧ’ .

ಎಲ್‌ಡಿಎಫ್ ನೇತೃತ್ವದ ಕೇರಳ ಸರ್ಕಾರ, ಸುಪ್ರೀಂ ಕೋರ್ಟ್ ತೀರ್ಪಿನ ಪರವಾಗಿದೆ. ಆದರೆ ತೀರ್ಪಿನ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪ್ರತಿಭಟನಾ ಪ್ರದರ್ಶನಗಳಲ್ಲಿ ತೊಡಗಿಕೊಂಡಿವೆ. ವಿ‍ಪರ್ಯಾಸವೆಂದರೆ ಆರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ, ಈ ತೀರ್ಪನ್ನು ಸ್ವಾಗತಿಸಿದ್ದವು. ಕಾಂಗ್ರೆಸ್ ಕೂಡ ಸ್ವಾಗತಿಸಿತ್ತು. ಆದರೆ ಈ ಪಕ್ಷಗಳ ಸ್ಥಳೀಯ ಘಟಕಗಳು, ತೀರ್ಪಿನ ವಿರುದ್ಧ ಈ ಪರಿ ಸಂಘಟಿತರಾಗಿ ಪ್ರತಿಭಟಿಸುತ್ತಿರುವುದು ಯಾಕಾಗಿ ಎಂಬುದು ಬಹಿರಂಗ ಗುಟ್ಟು. 2019ರ ಸಾರ್ವತ್ರಿಕ ಚುನಾವಣೆ ಸನಿಹದಲ್ಲಿದೆ. ರಾಜ್ಯದಲ್ಲಿ ಉಪಚುನಾವಣೆ ಫಲಿತಾಂಶಗಳ ಹೊಡೆತದ ನಂತರ, ಬಿಜೆಪಿ ನಾಯಕ ಯಡಿಯೂರಪ್ಪ ಅವರು ಕೇರಳದ ಮುತ್ತೂರಿನಲ್ಲಿ ‘ಶಬರಿಮಲೆ ಉಳಿಸಿ’ ರಥಯಾತ್ರೆಗೆ ಕಳೆದ ವಾರ ಚಾಲನೆ ನೀಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ವಿಶ್ವಾಸ ಸಂರಕ್ಷಣಾ ಯಾತ್ರೆ ಹೆಸರಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಪಾದಯಾತ್ರೆ ಕಾರ್ಯಕ್ರಮಗಳನ್ನು ಕಾಂಗ್ರೆಸ್ ನಡೆಸುತ್ತಿದೆ.

ಪ್ರಜಾಪ್ರಭುತ್ವದ ಆಶಯಗಳು ಹಾಗೂ ಶತಮಾನಗಳ ಕಾಲದ ಸಂಪ್ರದಾಯ ಆಚರಣೆಗಳ ನಡುವಣ ಸಂಘರ್ಷ ಇದು. ಕಾನೂನು ಅಂಗೀಕಾರ ಇರುವ ಆಧುನಿಕತೆಯನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುದು ನಮ್ಮ ಪ್ರಜಾಪ್ರಭುತ್ವದ ಪರಿಪಕ್ವತೆಗೂ ಪ್ರತೀಕ ಎಂಬುದನ್ನು ನಾವು ಮರೆಯಬಾರದು.ಇಂತಹ ಸಂದರ್ಭದಲ್ಲಿ, ದೇವಾಲಯಕ್ಕೆಮಹಿಳೆಯ ಪ್ರವೇಶವನ್ನು ನಿಷೇಧಿಸುವುದು ‘ಹೊರಗಿಡುವಂತಹ ಆಚರಣೆ’ ಎಂದಿದ್ದ ಸುಪ್ರೀಂ ಕೋರ್ಟ್ ‘ಇದು ಅಗತ್ಯವೂ ಅಲ್ಲ, ಧರ್ಮದ ಅಂತರ್ಗತ ಭಾಗವೂ ಅಲ್ಲ’ ಎಂದು ಸರಿಯಾಗಿಯೇ ಹೇಳಿತ್ತು. ಆದರೆ, ’ಧಾರ್ಮಿಕ ನಂಬಿಕೆಗಳ ವಿಚಾರಗಳಿಗೆ ಸಾಂವಿಧಾನಿಕ ವೈಚಾರಿಕತೆಯ ಮಾನದಂಡಗಳನ್ನು ಕುರುಡಾಗಿ ಅನ್ವಯಿಸಲಾಗದು’ ಎಂದು ಭಿನ್ನತೀರ್ಪು ಬರೆದಿದ್ದ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹೇಳಿದ್ದರು. ಸಾಂವಿಧಾನಿಕ ಯುಗದಲ್ಲೂ ಹಳೆಯ ಸಂಪ್ರದಾಯ, ರೂಢಿಗಳಿಗೆ ಕಾನೂನು ಮಾನ್ಯತೆ ಇದೆ ಎಂಬುದೇನೋ ನಿಜ. ಆದರೆ, ಸಮಾಜ ವಿಕಾಸವಾಗುತ್ತಾ ಸಾಗಿದಂತೆ ಹಲವಾರು ಸಾಂಪ್ರದಾಯಿಕ ಆಚರಣೆಗಳು, ಮೂಲ ಸ್ವರೂಪದಲ್ಲಿ ಇಲ್ಲದಿರುವುದು ನಾವು ಕಾಣುತ್ತಿರುವ ವಾಸ್ತವ. ಹೀಗಿದ್ದೂ ಅನುಕೂಲಸಿಂಧು ರಾಜಕಾರಣಕ್ಕಾಗಿ ಧಾರ್ಮಿಕ ನಂಬಿಕೆಗಳ ವಿಚಾರದಲ್ಲಿ ಜಡತ್ವ ಪ್ರದರ್ಶನವನ್ನು ವೈಭವೀಕರಿಸುವ ಪ್ರಯತ್ನಗಳನ್ನು ನಡೆಸುತ್ತಿರುವುದು ವಿಷಾದನೀಯ ಬೆಳವಣಿಗೆ.

ಶಬರಿಮಲೆಗೆ ಮಹಿಳೆ ಪ್ರವೇಶಕ್ಕೆ ಅವಕಾಶ ನೀಡಲಾದ ತೀರ್ಪಿನ ವಿಚಾರವನ್ನೇ ಪರಿಗಣಿಸಿ. ಈ ತೀರ್ಪಿಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಬೇಕಾದದ್ದು ಮಹಿಳೆ. ಈ ಬಗ್ಗೆ ಯಾವುದೇ ಒತ್ತಡ, ಸಾಮೂಹಿಕ ಬೆದರಿಕೆ ಇಲ್ಲದೆ ಕೈಗೊಳ್ಳಬೇಕಾದ ವೈಯಕ್ತಿಕ ನಿರ್ಣಯ. ಸಾಮಾಜಿಕವಾಗಿ ಕಟ್ಟುಪಾಡುಗಳಲ್ಲಿ ಬೆಳೆದು ಬಂದ ಮೌಲ್ಯವ್ಯವಸ್ಥೆಗೆ ನಿಷ್ಠರಾಗಿರುವ ಮಹಿಳೆಯರು ಬಹುಶಃ ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ದೇವಾಲಯಕ್ಕೆ ಹೋಗುವುದಿಲ್ಲ. ಬಹು ಸಂಖ್ಯಾತ ಮಹಿಳೆಯರೂ ಬಹುಶಃ ಈ ಹಕ್ಕು ಬಳಸುವುದಿಲ್ಲವೇನೋ. ಆದರೆ ಕಾಲಕ್ರಮೇಣ ಇದು ಮಾಮೂಲಿ ವಿಚಾರವಾಗಿ ಪರಿಣಮಿಸುತ್ತದೆ. ಇಂತಹದೊಂದು ಸಾಮಾಜಿಕ ಬದಲಾವಣೆಗೆ ಕಾನೂನು ಒಂದು ದೊಡ್ಡ ಅಸ್ತ್ರ. ಆದರೆ ಅಂತಹ ಕಾನೂನಿನ ಬಳಕೆಗೆ ರಾಜಕೀಯ ಪಕ್ಷಗಳು ತೋರುತ್ತಿರುವ ಪ್ರತಿರೋಧ ಹಿನ್ನಡೆಯದು. ಶಬರಿಮಲೆ ಕ್ಷೇತ್ರ ಸದ್ಯದಲ್ಲೇ 41ದಿನ ತೆರೆದಿರುತ್ತದೆ. ಈ ಅವಧಿಯಲ್ಲಿ ದೇಗುಲ ಪ್ರವೇಶಕ್ಕಾಗಿ 3.5 ಲಕ್ಷಕ್ಕೂ ಹೆಚ್ಚು ಭಕ್ತರುಆನ್‌ಲೈನ್‌ನಲ್ಲಿ ನೊಂದಾಯಿಸಿದ್ದಾರೆ. ಈ ಪೈಕಿ ಮಹಿಳೆಯರ ಸಂಖ್ಯೆ ಸುಮಾರು 560 ಅಷ್ಟೆ.

ನಿರ್ದಿಷ್ಟ ವಯೋಮಾನದ ಪತ್ರಕರ್ತೆಯರನ್ನು ವರದಿಗಾರಿಕೆಗೆ ಕಳುಹಿಸಬಾರದೆಂದು ಮಾಧ್ಯಮ ಸಂಸ್ಥೆಗಳಿಗೆ ಶಬರಿಮಲೆ ಕರ್ಮ ಸಮಿತಿ ಕಳುಹಿಸಿದ ಪತ್ರದಲ್ಲಿ ಆಗ್ರಹಪಡಿಸಿದ್ದಂತೂ ಉದ್ಧಟತನದ ಪರಮಾವಧಿ.ಕಳೆದ ತಿಂಗಳು ಐದು ದಿನ ದೇಗುಲ ತೆರೆದಿದ್ದ ಸಂದರ್ಭದಲ್ಲಿ ಅನೇಕ ಪತ್ರಕರ್ತೆಯರು ವರದಿಗಾರಿಕೆಗೆ ತೆರಳಿದ್ದರು. ಆದರೆ ಅವರನ್ನು ಬಲವಂತವಾಗಿ ತಡೆಯಲಾಯಿತು, ಅವರ ವಾಹನಗಳಿಗೆ ಹಾನಿ ಮಾಡಲಾಯಿತು.ಅಷ್ಟೇ ಅಲ್ಲ, ಶಬರಿಮಲೆಗೆ ನಿಯೋಜಿತರಾದ 15 ಮಹಿಳಾ ಪೊಲೀಸ್ ಅಧಿಕಾರಿಗಳ ವಯಸ್ಸಿನ ಪ್ರಮಾಣಪತ್ರದ ದಾಖಲೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ತಮಗೆ ಸಾಧ್ಯವಾಗಿರುವುದಾಗಿ ‘ಶಬರಿಮಲೆ ರಕ್ಷಿಸಿ’ ಅಭಿಯಾನದ ಬಹಿರಂಗ ಸಭೆಯಲ್ಲಿ ಆರ್‌ಎಸ್‌ಎಸ್ ನಾಯಕ ವಲ್ಸನ್ ತಿಲ್ಲಂಗೇರಿ ಜಂಬ ಬೇರೆ ಕೊಚ್ಚಿಕೊಂಡಿದ್ದಾರೆ.ಮಾಧ್ಯಮ ಸಂಸ್ಥೆಗಳು, ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಂಗದ ಮೇಲೆ ಸವಾರಿ ಮಾಡಲು ಪ್ರಯತ್ನಿಸುವಂತಹ ಇಂತಹ ನಡೆಗಳಿಗೆ ಏನು ಹೇಳಬೇಕು?ರಾಷ್ಟ್ರದ ಸ್ವಾತಂತ್ರ್ಯದ ಜೊತೆಗೆ ಸಮಾಜ ಸುಧಾರಣೆಗೂಸ್ವಾತಂತ್ರ್ಯ ಚಳವಳಿಗಾರರು ಹೋರಾಡಿದ್ದರು ಎಂಬುದನ್ನು ನಮ್ಮ ಇಂದಿನ ನೇತಾರರಿಗೆ ನೆನಪಿಸಬೇಕಿದೆ. ಶಬರಿಮಲೆ, ದಕ್ಷಿಣದ ‘ಅಯೋಧ್ಯೆ’ಯಾಗಿ ಪರಿಣಮಿಸದಿರಲಿ ಎಂಬುದು ಎಲ್ಲರ ಆಶಯವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT