ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬಲ ಗಳಿಕೆಯ ಹಾದಿ

ಮಹಿಳಾ ಪ್ರಾತಿನಿಧ್ಯ ಖಾತ್ರಿ ಬೇಕು, ಬದಲಾಗಲಿ ಮನಸ್ಥಿತಿ
Last Updated 27 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಮೊನ್ನೆ ಸಂವಿಧಾನ ದಿನ ಆಚರಿಸಿದ್ದೇವೆ. 1949ರನವೆಂಬರ್ 26ರಂದು ನಮ್ಮ ಸಂವಿಧಾನವನ್ನು ಸಂವಿಧಾನ ರಚನಾ ಸಭೆ ಅಂಗೀಕರಿಸಿದಂತಹ ದಿನ ಇದು. ಸಂವಿಧಾನ ರಚನಾ ಸಭೆಯಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆ 389. ಈ ಪೈಕಿ 15 ಮಹಿಳಾ ಸದಸ್ಯರೂ ಸಂವಿಧಾನ ರಚನೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಹಾಗೆ ನೆನಪಿಸಿಕೊಳ್ಳುತ್ತಲೇ ಸಮಾನತೆಯನ್ನು ಬೋಧಿಸುವ ಸಂವಿಧಾನದ ತತ್ವವನ್ನು ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಈ 70 ವರ್ಷಗಳಲ್ಲಿ ಇನ್ನೂ ಏಕೆ ಅಳವಡಿಸಲಾಗಿಲ್ಲ ಎಂಬುದನ್ನು ಕಠಿಣವಾಗಿ ವಿಮರ್ಶಿಸಿಕೊಳ್ಳಬೇಕಾದ ಸಂದರ್ಭವೂ ಇದಾಗಿದೆ.

ಈ ಮಧ್ಯೆ, ಸಂಸತ್ತು ಹಾಗೂ ಶಾಸನಸಭೆಗಳಲ್ಲಿಶೇ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ಆಗ್ರಹಿಸುವ ನಿರ್ಣಯವನ್ನು ಒಡಿಶಾ ವಿಧಾನಸಭೆ, ಕಳೆದ ವಾರವಷ್ಟೇ ಅಂಗೀಕರಿಸಿದೆ. ಆದರೆ, ‘ಆಷಾಢಭೂತಿತನದ ಅವಕಾಶವಾದಿ ರಾಜಕಾರಣ ಇದು’ ಎಂದು ರಾಜ್ಯದ ಪ್ರತಿಪಕ್ಷಗಳು, ಆಡಳಿತ ಪಕ್ಷವಾದ ಬಿಜು ಜನತಾ ದಳ ವಿರುದ್ಧ ಕೆಂಡಕಾರಿವೆ. ಮುಂದಿನ ಡಿಸೆಂಬರ್ 11ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿರುವಂತಹ ಸಂದರ್ಭದಲ್ಲಿ, ಮಹಿಳಾ ಮೀಸಲು ಮಸೂದೆ ಸುತ್ತ ಮತ್ತೊಮ್ಮೆ ಕಪಟ ನಾಟಕ ದೃಶ್ಯಗಳ ಪುನರಾವರ್ತನೆ ಸನ್ನಿಹಿತವಾದಂತಿದೆ. ಕಳೆದ 22 ವರ್ಷಗಳಿಂದ ಈಅಸಂಗತತೆಗೆ ಸಾಕ್ಷಿಯಾಗುತ್ತಲೇ ಇದ್ದೇವೆ. ಈಗ, ಈ ಮಸೂದೆಯ ಹೆಸರನ್ನೇ ಬದಲಾಯಿಸಬೇಕು ಎಂಬಂತಹ ಆಗ್ರಹ ವ್ಯಕ್ತವಾಗುತ್ತಿದೆ.

ಇದು ‘ಮಹಿಳಾ ಪ್ರಾತಿನಿಧ್ಯ ಖಾತ್ರಿಮಸೂದೆ’ ಎಂದಾಗಬೇಕು ಎಂದು ಇಂಡಿಯಾ ವಿಮೆನ್ಸ್ ಕಾಕಸ್‌ನ (ಐಡಬ್ಲ್ಯುಸಿ) ತಾರಾ ಕೃಷ್ಣಸ್ವಾಮಿ ಅಭಿಪ್ರಾಯಪಡುತ್ತಾರೆ.

‘ಇಂಡಿಯಾ ವಿಮೆನ್ಸ್ ಕಾಕಸ್‌’ ಎಂಬುದು ಯಾವುದೇ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳದ ಮಹಿಳೆಯರ ಗುಂಪು. ಶಾಸಕರು ಹಾಗೂ ಸಂಸತ್ ಸದಸ್ಯರಾಗಿ ಯಾವುದೇ ಪಕ್ಷಭೇದವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆ ಆಗುವಂತೆ ಮಾಡಲು ಕಾರ್ಯ ನಿರ್ವಹಿಸುವ ದೀರ್ಘಾವಧಿ ಗುರಿಯನ್ನು ಐಡಬ್ಲ್ಯುಸಿ ಹೊಂದಿದೆ.

ಇದಕ್ಕಾಗಿ, ವಿವಿಧ ರಾಜಕೀಯ ಪಕ್ಷಗಳ ನಾಯಕಿಯರು, ಸಂಶೋಧಕರು, ಶೈಕ್ಷಣಿಕ ವಲಯಗಳ ತಜ್ಞರು, ತಳಮೂಲದಲ್ಲಿ ಕೆಲಸ ಮಾಡುತ್ತಿರುವ ಹೋರಾಟಗಾರರು, ಪತ್ರಕರ್ತರು– ಹೀಗೆ ಹಲವು ಹಿನ್ನೆಲೆಗಳ ಸಮುದಾಯದೊಂದಿಗೆ ಸಮಾಲೋಚನೆಗಳನ್ನು ನಡೆಸುವ ಕ್ರಿಯೆಗೆ ಐಡಬ್ಲ್ಯುಸಿ ಚಾಲನೆ ನೀಡಿದೆ. ಈಗಾಗಲೇ ಕಳೆದ ಅಕ್ಟೋಬರ್ ತಿಂಗಳಲ್ಲಿ ಗೋವಾದಲ್ಲಿ ಮೊದಲ ಸಮಾಲೋಚನಾ ಸಭೆ ನಡೆದಿದೆ. ಈಗ ಬೆಂಗಳೂರಿನಲ್ಲೂ ಡಿಸೆಂಬರ್ 8ರಂದು ಇಂತಹದೊಂದು ಸಮಾಲೋಚನಾ ಸಭೆ ನಡೆಸಲಾಗುತ್ತಿದೆ. ರಾಜಕೀಯ ನಾಯಕತ್ವದಲ್ಲಿ ಸಮಾನತೆ ಸಾಧನೆಯ ತುರ್ತು ಅಗತ್ಯದ ಬಗ್ಗೆ ಕಾಳಜಿ ಇರುವ ಎಲ್ಲರನ್ನೂ ಒಂದೆಡೆ ತರುವ ಪ್ರಯತ್ನ ಇದು. ಮಹಿಳಾ ಪ್ರಾತಿನಿಧ್ಯದ ಅಗತ್ಯದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವುದೂ ಈ ಪ್ರಕ್ರಿಯೆಯಲ್ಲಿ ಸೇರಿದೆ.

2018ನೇ ಇಸವಿಯನ್ನು ‘ಮಹಿಳೆಯ ವರ್ಷ’ ಎಂದುಅಮೆರಿಕ ಕರೆದಿದೆ. ಏಕೆಂದರೆ, ಹೌಸ್ ಆಫ್ ರೆಪ್ರಸೆಂಟಟಿವ್ಸ್‌ಗೆ ಸುಮಾರು 100 ಮಹಿಳೆಯರು ಇತ್ತೀಚೆಗೆ ನಡೆದ ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತವರ್ಣೀಯರ ಪರಮಾಧಿಕಾರ ಹಾಗೂ ಪಿತೃಪ್ರಧಾನ ಮೌಲ್ಯಗಳ ಪ್ರತೀಕ ಎಂದು ಪರಿಭಾವಿಸಲಾಗುತ್ತದೆ.

ಟ್ರಂಪ್‌ ನೀತಿಗಳ ವಿರುದ್ಧದ ಪ್ರತಿರೋಧದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂಬುದು ಗಮನಾರ್ಹ. ಅಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ್ದಾರೆ ಮಹಿಳೆಯರು. ಪ್ರಚಾರಾಂದೋಲನಗಳಲ್ಲಿ ಪಾಲ್ಗೊಂಡಿದ್ದಾರೆ. ಈಗ ಚುನಾವಣೆಗಳಲ್ಲಿ ದೊಡ್ಡ ಮಟ್ಟದಲ್ಲಿ ಗೆದ್ದುಬಂದಿದ್ದಾರೆ. ಮಹಿಳೆಯರ ಪಾಲ್ಗೊಳ್ಳುವಿಕೆ ತಂದ ಬದಲಾವಣೆ ಇದು. ಮಹಿಳೆಯರ ಆಕ್ರೋಶ, ಕಾರ್ಯತಂತ್ರ ಇಲ್ಲಿ ಫಲ ನೀಡಿದೆ. ಗೆದ್ದ ಮಹಿಳೆಯರಲ್ಲಿ ಮುಸ್ಲಿಮರು, ಕಪ್ಪುವರ್ಣೀಯರು, ಯುವತಿಯರು ಸೇರಿದಂತೆ ವಿವಿಧ ನೆಲೆಗಳ ಮಹಿಳೆಯರಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳೆ ಹೀಗೇ ಇರಬೇಕೆಂಬ ಚೌಕಟ್ಟುಗಳನ್ನು ಈ ಮಹಿಳೆಯರು ಮುರಿದಿದ್ದಾರೆ. ಮಹಿಳಾ ನಾಯಕತ್ವ ಎಲ್ಲೆಡೆ ಇರಬಹುದು ಎಂಬುದನ್ನು ಈ ಬೆಳವಣಿಗೆ ಸೂಚಿಸುತ್ತದೆ. ಹೆಚ್ಚಿನ ಮಹಿಳೆಯರ ಉಪಸ್ಥಿತಿ ರಾಜಕಾರಣದ ದಿಕ್ಕನ್ನೂ ಬದಲಿಸಬಹುದು.

ಇಂತಹ ಸ್ಪಂದನ ಭಾರತದಲ್ಲೂ ಸಾಧ್ಯವಾಗಬಹುದೇ? ಎಂಬ ನಿರೀಕ್ಷೆ ಐಡಬ್ಲ್ಯುಸಿಯದ್ದು. 2019ರ ಚುನಾವಣೆ ವೇಳೆಗೆ ಈ ನಿಟ್ಟಿನಲ್ಲಿ ಸಂವೇದನಾಶೀಲತೆ ಮೂಡಬಹುದೇ? ಮಹಿಳಾ ಮೀಸಲು ಕಾನೂನಿಗೆ ಕಾಯದೆಯೇ ಸ್ವಯಂಪ್ರೇರಿತವಾಗಿ ಸಂವಿಧಾನಬದ್ಧ ಆಶಯ ಈಡೇರಿಸಬೇಕಾದ ಹೊಣೆಗಾರಿಕೆ, ರಾಜಕೀಯ ಪಕ್ಷಗಳದ್ದು. ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಕೇವಲ ಶೇ 11.8ರಷ್ಟು ಕೆಳಮಟ್ಟದಲ್ಲಿ ಇರುವುದನ್ನು ಚುನಾವಣಾ ಆಯೋಗವೂ ಇತ್ತೀಚೆಗೆ ಪ್ರಸ್ತಾಪಿಸಿದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಏಳು ರಾಷ್ಟ್ರೀಯರಾಜಕೀಯ ಪಕ್ಷಗಳು ಹಾಗೂ 51 ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಜೊತೆ ಈ ವಿಚಾರವನ್ನು ಆಯೋಗ ಚರ್ಚಿಸಿದೆ.

ಮಹಿಳಾ ಅಭ್ಯರ್ಥಿಗಳು ಗೆಲ್ಲುವುದು ಕಷ್ಟ ಎಂಬಂಥ ನೆಪವು ಎಷ್ಟೊಂದು ಸುಳ್ಳು ಎಂಬುದಕ್ಕೆ 2014ರಲ್ಲಿ ಲೋಕಸಭೆಗೆ ನಡೆದಿದ್ದ ಚುನಾವಣೆ ಫಲಿತಾಂಶಗಳೇ ಸಾಕ್ಷಿ ನುಡಿಯುತ್ತಿವೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಹಿಳೆಯರಲ್ಲಿ ಶೇ 9.6ರಷ್ಟು ಮಂದಿ ಗೆಲುವು ಸಾಧಿಸಿದ್ದಾರೆ. ಆದರೆ ಪುರುಷರ ಗೆಲುವಿನ ಪ್ರಮಾಣ ಶೇ 6.4 ಮಾತ್ರ. 1957ರಿಂದ 2015ರವರೆಗೆ ಚುನಾವಣೆಗೆ ಸ್ಪರ್ಧಿಸುವ ಮಹಿಳೆಯರ ಪ್ರಮಾಣದಲ್ಲಿ 15 ಪಟ್ಟು ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಪುರುಷ ಸ್ಪರ್ಧಿಗಳ ಪ್ರಮಾಣದಲ್ಲಿ ಕೇವಲ 5 ಪಟ್ಟು ಏರಿಕೆ ಇದೆ.

ಆದರೆ ಮಹಿಳೆಯರ ಈ ರಾಜಕೀಯ ಆಕಾಂಕ್ಷೆಗಳನ್ನು ಉದ್ದೇಶಪೂರ್ವಕವಾಗಿ ಬೆಳೆಯಲು ಬಿಡದವರು ಯಾರು ಎಂಬುದಕ್ಕೆ ಉತ್ತರ ಎಲ್ಲರಿಗೂ ಗೊತ್ತು. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲಿ, ರಾಜಕೀಯ ಪಕ್ಷಗಳು ಬೆರಳೆಣಿಕೆಯ ಮಹಿಳೆಯರನ್ನು ಕಣಕ್ಕಿಳಿಸಿದ್ದವು. ಆದರೆ, ಚುನಾವಣಾ ಕಣದಲ್ಲಿ ಸುಮಾರು 100ರಷ್ಟು ಪಕ್ಷೇತರ ಮಹಿಳಾ ಅಭ್ಯರ್ಥಿಗಳಿದ್ದರು. ಮಿಜೋರಾಂನಲ್ಲಿ ಇಂದು ಚುನಾವಣೆ ನಡೆಯುತ್ತಿದೆ.ಮಹಿಳಾ ಮತದಾರರ ಪ್ರಮಾಣ ಶೇ 51.25. ಆದರೆ 1972ರಲ್ಲಿ ಇಲ್ಲಿ ಮೊದಲ ಚುನಾವಣೆ ನಡೆದಾಗಲಿಂದ ಕೇವಲ 4 ಮಹಿಳೆಯರು ಶಾಸಕಿಯರಾಗಿದ್ದಾರೆ ಅಷ್ಟೆ.

ಕಳೆದ ದಶಕಗಳಲ್ಲಿ ಲಕ್ಷಾಂತರ ಮಹಿಳೆಯರು ಸ್ಥಳೀಯ ಸಂಸ್ಥೆಗಳಲ್ಲಿ ಹುದ್ದೆ ನಿರ್ವಹಿಸಿದ್ದಾರೆ. ಈ ಪೈಕಿ ಶೇ 10ರಷ್ಟಾದರೂ ಮಂದಿ ಸಂಸತ್ತಿಗೆ ಆಯ್ಕೆಯಾಗಿದ್ದಲ್ಲಿ, ನಮ್ಮ ಸಂಸತ್ತಿನಲ್ಲಿ ಇಷ್ಟರಲ್ಲಾಗಲೇ ಶೇ 33ಕ್ಕಿಂತ ಹೆಚ್ಚಿನ ಮಹಿಳೆಯರು ಇರುತ್ತಿದ್ದರು. ಈ ಬಗ್ಗೆ ಮಹಿಳೆಯರು ಈಗ ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ‘ಚುನಾವಣೆ ಒಳ ಹೊರಗೆ’ ಎಂಬಂತಹ ಕಾರ್ಯಕ್ರಮವನ್ನು ಅನೇಕ ತಿಂಗಳುಗಳಿಂದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವೂ ನಡೆಸಿಕೊಂಡು ಬರುತ್ತಿದೆ.

ದಿನದಿಂದ ದಿನಕ್ಕೆ ಚುನಾವಣಾ ರಾಜಕೀಯವೇಕೆ ಪ್ರಜಾಪ್ರಭುತ್ವ ಆಶಯಗಳಿಂದ ದೂರ ಸಾಗುತ್ತಿದೆ? ಮಹಿಳಾ ಪ್ರಾತಿನಿಧ್ಯವು ಸದನದಲ್ಲಿ ಹಾಗೂ ಮಂತ್ರಿಮಂಡಲದಲ್ಲಿ ಕ್ಷೀಣವಾಗಿರಲು ಕಾರಣಗಳೇನು? ಮಹಿಳೆಯರೇಕೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ? ಎಂಬಂತಹ ಪ್ರಶ್ನೆಗಳನ್ನು ಈ ಕಾರ್ಯಕ್ರಮಗಳಲ್ಲಿ ಕೇಳಲಾಗುತ್ತಿದೆ. ಈ ಕುರಿತಾಗಿ ತಜ್ಞರ ರಾಜಕೀಯ ವಿಶ್ಲೇಷಣೆ ಜೊತೆಜೊತೆಗೇ ಮಹಿಳಾ ಜನಪ್ರತಿನಿಧಿಗಳ ಅನುಭವ ಕಥನಗಳು ಈ ಕಾರ್ಯಕ್ರಮಗಳಲ್ಲಿ ನಿರೂಪಿತವಾಗುತ್ತಿವೆ. ಈ ಮಾತುಗಳು, ಕಥನಗಳು 2019ರ ಚುನಾವಣೆ ವೇಳೆಗೆ ಪರಿಣಾಮ ಬೀರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT