ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ ನಿಯಂತ್ರಣ ಸವಾಲು: ಅಸಮಾನ ಹೊರೆ

ಕುಟುಂಬ ಯೋಜನೆ ಕಾರ್ಯಕ್ರಮಗಳಲ್ಲಿ ಪುರುಷರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಒತ್ತು ಸಿಗಲಿ
Last Updated 10 ಜುಲೈ 2018, 20:08 IST
ಅಕ್ಷರ ಗಾತ್ರ

ಇಂದು ವಿಶ್ವ ಜನಸಂಖ್ಯೆ ದಿನವನ್ನು ಆಚರಿಸುತ್ತಿದ್ದೇವೆ. ಮುಂದಿನ ಆರು ವರ್ಷಗಳಲ್ಲಿ ಚೀನಾ ಜನಸಂಖ್ಯೆಯನ್ನು ಭಾರತ ಮೀರಿಸಲಿದೆ ಎಂಬುದು ವಿಶ್ವಸಂಸ್ಥೆಯ ಇತ್ತೀಚಿನ ವರದಿಯಲ್ಲಿ ವ್ಯಕ್ತವಾಗಿರುವ ಎಚ್ಚರಿಕೆಯ ಸಂದೇಶ. ಜನಸಂಖ್ಯೆ ನಿಯಂತ್ರಣ ನೀತಿಗಳು ಕಳೆದ ಶತಮಾನದ 50ರ ದಶಕದಿಂದಲೂ ರಾಷ್ಟ್ರದಲ್ಲಿ ಚಾಲ್ತಿಯಲ್ಲಿವೆ. ಹೀಗಿದ್ದೂ 2011ರ ಜನಗಣತಿ ಅಂಕಿಅಂಶಗಳ ಪ್ರಕಾರ, 121 ಕೋಟಿಇದ್ದ ರಾಷ್ಟ್ರದ ಜನಸಂಖ್ಯೆಗೆ ಪ್ರತಿವರ್ಷ ಸುಮಾರು 2.6 ಕೋಟಿ ಮಕ್ಕಳು ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ಈಗ ಭಾರತದ ಜನಸಂಖ್ಯೆ ಸುಮಾರು 135 ಕೋಟಿ ಎಂದು ಅಂದಾಜು.

ಕುಟುಂಬ ಯೋಜನೆಯ ಅಧಿಕೃತ ಕಾರ್ಯಕ್ರಮ ವಿಶ್ವದಲ್ಲೇ ಮೊದಲ ಬಾರಿಗೆ ₹ 65 ಲಕ್ಷದ ಸಾಧಾರಣ ಬಜೆಟ್‌ನೊಂದಿಗೆ ಭಾರತದಲ್ಲಿ ಆರಂಭವಾದದ್ದು 1952ರಷ್ಟು ಹಿಂದೆ. 70ರ ದಶಕದಲ್ಲಿ ‘ಜನಸಂಖ್ಯಾ ಸ್ಫೋಟ’ ಹಾಗೂ ‘ಜನಸಂಖ್ಯಾ ಬಾಂಬ್’ ಎಂಬ ನುಡಿಗಟ್ಟುಗಳು ಪ್ರಚಲಿತವಿದ್ದವು. ಕುಟುಂಬ ಯೋಜನೆಯೇ ಅಭಿವೃದ್ಧಿಯ ಹೃದಯ ಎಂಬುದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಾದವಾಗಿತ್ತು. ಆದರೆ 1974ರಲ್ಲಿ ಬುಕಾರೆಸ್ಟ್‌ನಲ್ಲಿ ನಡೆದ ಜನಸಂಖ್ಯೆಯ ವಿಶ್ವ ಸಮ್ಮೇಳನದಲ್ಲಿ ‘ಅಭಿವೃದ್ಧಿಯೇ ಅತ್ಯುತ್ತಮ ಗರ್ಭನಿರೋಧಕ (ಕಾಂಟ್ರಾಸೆಪ್ಟಿವ್)’ ಎಂದು ಭಾರತದ ನಿಯೋಗದ ನೇತೃತ್ವ ವಹಿಸಿದ್ದ ಆಗಿನ ಕೇಂದ್ರದ ಆರೋಗ್ಯ ಸಚಿವ ಕರಣ್ ಸಿಂಗ್ ಘೋಷಿಸಿದ್ದರು. ಆದರೆ ಈ ಘೋಷಣೆಯನ್ನು 20 ವರ್ಷಗಳ ನಂತರ ಕರಣ್ ಸಿಂಗ್ ಅವರೇ ಸ್ವತಃ ಹಿಂತೆಗೆದುಕೊಂಡು ‘ಗರ್ಭನಿರೋಧಕಗಳೇ ಅತ್ಯುತ್ತಮ ಅಭಿವೃದ್ಧಿ’ ಎಂದು ಹೇಳಿದ್ದನ್ನು ನಾವಿಂದು ನೆನಪಿಸಿಕೊಳ್ಳಬೇಕು.

ಬುಕಾರೆಸ್ಟ್ ಸಮ್ಮೇಳನ ನಡೆದ ಮರು ವರ್ಷವೇ 1975ರಲ್ಲಿ ರಾಷ್ಟ್ರದಲ್ಲಿ ಜಾರಿಯಾದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜನಸಂಖ್ಯೆ ನಿಯಂತ್ರಣದ ಕುಖ್ಯಾತ ಅಧ್ಯಾಯಕ್ಕೂರಾಷ್ಟ್ರ ಸಾಕ್ಷಿಯಾಗಬೇಕಾಯಿತು. ಎರಡು ವರ್ಷಗಳಿಗೂ ಕಡಿಮೆ ಅವಧಿಯ ಈ ತುರ್ತು ಪರಿಸ್ಥಿತಿ ಅವಧಿಯಲ್ಲಿ ಸುಮಾರು 80 ಲಕ್ಷ ಮಂದಿ ಮುಖ್ಯವಾಗಿ ಬಡಪುರುಷರು ಬಲವಂತದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಿಗೆ ಗುರಿಯಾದದ್ದು ನಮ್ಮ ಕುಟುಂಬ ಯೋಜನೆ ಕಾರ್ಯಕ್ರಮದ ಇತಿಹಾಸದಲ್ಲಿ ದೊಡ್ಡ ಕಪ್ಪುಚುಕ್ಕೆ.

1990ರ ದಶಕದಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತ ಚರ್ಚೆಯ ಗತಿ ಪೂರ್ಣವಾಗಿ ಬದಲಾಯಿತು. 1994ರಲ್ಲಿ ಕೈರೋದಲ್ಲಿ ನಡೆದ ಜನಸಂಖ್ಯೆ ಹಾಗೂ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ (ಐಸಿಪಿಡಿ) ಇದಕ್ಕೆ ಕಾರಣ. ಜನಸಂಖ್ಯೆ ಕುರಿತ ಯಾವುದೇ ಕಾರ್ಯಕ್ರಮಕ್ಕೆ ಮಹಿಳಾ ಹಕ್ಕುಗಳು ಅಗತ್ಯವಾದ ಭಾಗ ಎಂಬುದನ್ನು ಈ ಸಮ್ಮೇಳನ ಎತ್ತಿ ಹೇಳಿತ್ತು. ಜನಸಂಖ್ಯೆ ನಿಯಂತ್ರಣ ನುಡಿಗಟ್ಟಿಗೆ ಬದಲಾಗಿ ಕುಟುಂಬ ಕಲ್ಯಾಣ, ಪ್ರಜನನ ಆರೋಗ್ಯ ಹಾಗೂ ಹಕ್ಕುಗಳು ಎಂಬಂತಹ ಮಾತುಗಳು ಆಗ ಚಾಲ್ತಿಗೆ ಬಂದವು. ಐಸಿಪಿಡಿ ನಿರ್ಣಯಗಳಿಗೆ ಭಾರತವೂ ಸಹಿ ಹಾಕಿದೆ. ಆ ನಂತರ ಗರ್ಭನಿರೋಧಕಗಳ ಸೌಲಭ್ಯ ಹಾಗೂ ಸ್ವಯಂ ಆಯ್ಕೆಗೆ ಒತ್ತು ನೀಡುವಂತಹ ನೀತಿಗಳಿಗೆ ಆದ್ಯತೆ ನೀಡುವುದು ಆರಂಭವಾಗಿದೆ. ಹೀಗಿದ್ದೂ ಕುಟುಂಬ ಯೋಜನೆ ಕುರಿತಾದ ಜಾಗೃತಿ ಸೀಮಿತವಾಗಿಯೇ ಇದೆ. ಪ್ರಜನನ ಆರೋಗ್ಯ, ತಾಯಿ, ನವಜಾತ ಶಿಶು, ಮಗು ಹಾಗೂ ಹದಿಹರೆಯದವರ ಆರೋಗ್ಯ ಕಾರ್ಯಕ್ರಮವನ್ನು (ಆರ್‌ಎಂಎನ್‌ಸಿಎಚ್‌+ಎ) ನಮ್ಮ ರಾಷ್ಟ್ರ ಅಳವಡಿಸಿಕೊಂಡಿದೆ.

‘ಕುಟುಂಬ ಯೋಜನೆ ಮಾನವ ಹಕ್ಕು’ ಎಂಬುದು ಈ ವರ್ಷದ ವಿಶ್ವ ಜನಸಂಖ್ಯಾ ದಿನಾಚರಣೆಯ ಘೋಷವಾಕ್ಯ. ಮಾನವ ಹಕ್ಕುಗಳನ್ನು ಕುರಿತಂತೆ 1968ರಲ್ಲಿ ನಡೆದ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ, ಕುಟುಂಬ ಯೋಜನೆಯನ್ನು ಮಾನವ ಹಕ್ಕು ಎಂದು ಜಾಗತಿಕವಾಗಿ ಮೊದಲ ಬಾರಿಗೆ ಪ್ರತಿಪಾದಿಸಲಾಗಿತ್ತು. ಈ ಪ್ರತಿಪಾದನೆಗೆ ಚಾಲನೆ ಸಿಕ್ಕಿಯೇ 50 ವರ್ಷಗಳು ಈಗ ಕಳೆದುಹೋಗಿವೆ. ಎಷ್ಟು ಮಕ್ಕಳುಇರಬೇಕು ಹಾಗೂ ಮಕ್ಕಳ ಜನನದ ಮಧ್ಯೆ ಎಷ್ಟು ಅಂತರ ಇರಬೇಕು ಎಂಬುದನ್ನು ಮುಕ್ತವಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ಧರಿಸುವ ಮೂಲಭೂತ ಮಾನವ ಹಕ್ಕು ಪ್ರತೀ ತಂದೆತಾಯಿಯರಿಗೆ ಸೇರಿದ್ದು. ಆದರೆ ಇದರ ಅರಿವು ನಮ್ಮ ಜನಸಾಮಾನ್ಯರಲ್ಲಿ ಎಷ್ಟರಮಟ್ಟಿಗೆ ಇದೆ?

ಈ ವಿಶ್ವ ಜನಸಂಖ್ಯಾ ದಿನದಂದು ಮಹಿಳೆಯ ಪ್ರಜನನ ಆರೋಗ್ಯ ಹಾಗೂ ಕುಟುಂಬ ಯೋಜನೆ ವಿಚಾರಗಳು ಹೆಚ್ಚಿನ ಗಮನ ಪಡೆದುಕೊಳ್ಳಬೇಕಾಗಿರುವುದು ಮುಖ್ಯ. ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ನಡೆಸಲಾದ ಕಾಮನ್ ರಿವ್ಯೂ ಮಿಷನ್‌ನ 11ನೇ ವರದಿ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದೆ. ಈ ವರದಿಯ ಪ್ರಕಾರ, ಶೇ 93ರಷ್ಟು ಸಂತಾನಶಕ್ತಿಹರಣ ಶಸ್ತ್ರಕ್ರಿಯೆಗಳಿಗೆ ಒಳಗಾಗುವವರು ಮಹಿಳೆಯರು. ಹೀಗಿದ್ದಾಗ, ಕುಟುಂಬ ಯೋಜನೆಯಲ್ಲಿ ಪುರುಷರ ಭಾಗವಹಿಸುವಿಕೆ ಎಲ್ಲಿದೆ? ಪುರುಷ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಹೆಚ್ಚು ಸುರಕ್ಷಿತ ಹಾಗೂ ಸುಲಭವಾಗಿದ್ದರೂ ಈ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಸ್ಪಂದನ ಇಲ್ಲ ಎಂಬುದು ವಿಷಾದನೀಯ ಸಂಗತಿ. ‘ಸಂತಾನಶಕ್ತಿಹರಣ ಕಾರ್ಯಕ್ರಮ ಕೇವಲ ಮಹಿಳಾ ಸಂತಾನಶಕ್ತಿಹರಣದ ಕಾರ್ಯಕ್ರಮವಾಗಿಬಿಟ್ಟಿದೆ’ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಸಹ ತೀವ್ರವಾಗಿ ಟೀಕಿಸಿತ್ತು. ಇದಕ್ಕೆ ಕಾರಣ, ಪುರುಷ ಸಂತಾನಶಕ್ತಿಹರಣ ಶಸ್ತ್ರಕ್ರಿಯೆ ಕುರಿತಂತೆ ಅನೇಕ ಮಿಥ್ಯೆಗಳು ಸಮಾಜದಲ್ಲಿ ಆಳವಾಗಿ ಬೇರೂರಿವೆ. ಇವನ್ನು ಬದಲಿಸುವುದೇ ಸದ್ಯದ ದೊಡ್ಡ ಸವಾಲು.

ಇಂತಹ ಸನ್ನಿವೇಶದಲ್ಲಿ ಈ ಸಮಸ್ಯೆಯನ್ನು ಸರ್ಕಾರಗಮನಕ್ಕೆ ತೆಗೆದುಕೊಂಡಿಲ್ಲ ಎಂದೇನೂ ಹೇಳಲಾಗದು. ಮಹಿಳೆ ಕುರಿತಾದ ರಾಷ್ಟ್ರೀಯ ನೀತಿಯ 2016ನೇ ಕರಡಿನಲ್ಲಿ ಆರೋಗ್ಯ ಕಾರ್ಯಯೋಜನೆಗಳಿಗೆ ಸಂಬಂಧಿಸಿದಂತೆ ಮಹಿಳಾ ಪ್ರಜನನ ಹಕ್ಕುಗಳನ್ನು ಗುರುತಿಸಿ ಲಿಂಗತ್ವಪಾತ್ರಗಳ ಪಡಿಯಚ್ಚುಗಳನ್ನು ಭೇದಿಸುವ ವಿಚಾರದ ಪ್ರಸ್ತಾವವೇನೋ ಇದೆ. ಹೀಗಿದ್ದೂ ಕುಟುಂಬ ಯೋಜನೆಯಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರೂ ಸಮಾನ ಹೊಣೆ ಹೊರಬೇಕು ಎಂಬುದು ಬರೀ ಆದರ್ಶದ ಮಾತುಗ
ಳಾಗಿಯೇ ಉಳಿದುಬಿಟ್ಟಿವೆ. ಸರ್ಕಾರದ ಪ್ರಚಾರಾಂದೋಲನಗಳೂ ಮಹಿಳೆಯನ್ನೇ ಹೆಚ್ಚು ಗುರಿಯಾಗಿಸಿಕೊಂಡಿವೆ ಎಂಬುದು ಎದ್ದು ಕಾಣುವ ಅಂಶ. ಆಶಾ ಕಾರ್ಯಕರ್ತೆಯರುಪುರುಷರ ಮನ ಒಲಿಸುವುದು ಸುಲಭವಲ್ಲ. ಇದಕ್ಕಾಗಿಯೇ ಪುರುಷ ಆರೋಗ್ಯ ಕಾರ್ಯಕರ್ತರ ಪಡೆಯನ್ನು ರೂಪಿಸಬೇಕಾದ ಅಗತ್ಯಕ್ಕೆ ನಮ್ಮಆರೋಗ್ಯ ಆಡಳಿತ ವ್ಯವಸ್ಥೆ ಸ್ಪಂದಿಸಿದಂತಿಲ್ಲ. 2017ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–4 (ಎನ್‌ಎಫ್ಎಚ್‌ಎಸ್: 2015–16) ಪ್ರಕಾರ, ಕುಟುಂಬ ಯೋಜನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಹೊರೆ ಶೇ 93ರಷ್ಟು ಮಹಿಳೆಯರದ್ದೇ ಆಗಿರುತ್ತದೆ. ಕೇವಲ ಶೇ 0.3ರಷ್ಟು ಪುರುಷರು ಗರ್ಭನಿರೋಧಕ ವಿಧಾನಗಳನ್ನು ಬಳಸುತ್ತಾರೆ ಅಷ್ಟೆ. ‘ಗರ್ಭನಿರೋಧಕ ವಿಚಾರ ಮಹಿಳೆಗೆ ಸಂಬಂಧಿಸಿದ್ದು. ಪುರುಷ ಆ ಬಗ್ಗೆ ಚಿಂತಿಸಬೇಕಿಲ್ಲ’ ಎಂಬ ಮನೋಭಾವವೇ ಸಮಾಜದಲ್ಲಿ ಪ್ರಧಾನವಾಗಿರುವುದು ಈ ಸಮೀಕ್ಷೆಯಲ್ಲಿ ಮತ್ತೊಮ್ಮೆ ವ್ಯಕ್ತವಾಗಿದೆ. ‘ಗಂಡಂದಿರು ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಬೇಡ. ದುಡಿಯುವ ಗಂಡಸಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು’ ಎಂಬೆಲ್ಲಾ ಮಿಥ್ಯೆಗಳು ಮಹಿಳೆಯರ ಮನಗಳಲ್ಲೂ ಬೇರೂರಿವೆ.

ರಾಷ್ಟ್ರದಾದ್ಯಂತ ಈಗಲೂ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಕ್ರಿಯೆಯೇ ಪ್ರಮುಖ ಕುಟುಂಬ ಯೋಜನಾ ವಿಧಾನವಾಗಿದೆ. ರಾಜ್ಯದಲ್ಲೂ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಕ್ರಿಯೆ ಪ್ರಮಾಣ ಶೇ 48.6. ಹೀಗಾಗಿ, ಒಟ್ಟಾರೆ ಲಭ್ಯವಿರುವ ಆಧುನಿಕ ಗರ್ಭ ನಿರೋಧಕಗಳ ಬಳಕೆಪ್ರಮಾಣದ ಶೇ 95ರಷ್ಟನ್ನು ಈ ಶಸ್ತ್ರಕ್ರಿಯೆಗಳೇ ಒಳಗೊಳ್ಳುತ್ತವೆ. ಪುರುಷ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಶೇ 0.1. ಎರಡು ಮಕ್ಕಳ ನಡುವೆ ಅಂತರ ಇರಿಸಲೂ ಒಟ್ಟು ಲಭ್ಯವಿರುವ ವಿಧಾನಗಳ ಪೈಕಿ, ಗರ್ಭ ನಿರೋಧಕ ಮಾತ್ರೆಗಳು, ಐಯುಡಿ ಹಾಗೂ ಕಾಂಡೊಂಗಳ ಬಳಕೆ ಶೇ 5ಕ್ಕಿಂತ ಕಡಿಮೆ ಇದೆ.

ಒಂದು ಇಡೀ ಪೀಳಿಗೆ ‘ನಾವಿಬ್ಬರು, ನಮಗಿಬ್ಬರು’ ಎಂಬಂಥ ಆದರ್ಶ ಕುಟುಂಬ ಯೋಜನೆಯ ಘೋಷವಾಕ್ಯ ಕೇಳಿಸಿಕೊಳ್ಳುತ್ತಲೇ ಬೆಳೆದಿದೆ. ಜನನ ನಿಯಂತ್ರಣ ಸಾಧನಗಳ ಆಯ್ಕೆಗಳೂ ಹೆಚ್ಚಾಗುತ್ತಿವೆ. 2020ರೊಳಗೆ ಇನ್ನೂ 4.8 ಕೋಟಿ ಬಳಕೆದಾರರಿಗೆ ಗರ್ಭನಿರೋಧಕ ಸೇವೆಗಳನ್ನು ಒದಗಿಸುವ ಬದ್ಧತೆಯನ್ನು 2012ರಲ್ಲಿ ಕುಟುಂಬ ಯೋಜನೆ ಕುರಿತಂತೆ ನಡೆದ ಲಂಡನ್ ಶೃಂಗಸಭೆಯಲ್ಲಿ ಭಾರತ ಪ್ರದರ್ಶಿಸಿದೆ. 2020ರೊಳಗೆ ಇನ್ನೂ 18 ಲಕ್ಷ ಹೆಚ್ಚಿನ ಮಹಿಳೆಯರಿಗೆ ಕುಟುಂಬ ಯೋಜನೆ ಸೇವೆಗಳನ್ನು ಒದಗಿಸಲು ಕರ್ನಾಟಕವೂ ಬದ್ಧವಾಗಿದೆ. ಹಾಗೆಯೇ ಗರ್ಭ ನಿರೋಧಕಗಳನ್ನು ಈಗಾಗಲೇ ಬಳಸುತ್ತಿರುವ 65 ಲಕ್ಷ ಬಳಕೆದಾರರು ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡುವ ಹೊಣೆಗಾರಿಕೆಯನ್ನು ರಾಜ್ಯ ಹೊಂದಿದೆ.

ರಾಷ್ಟ್ರದಲ್ಲಿ ಇರುವ 640 ಜಿಲ್ಲೆಗಳ ಪೈಕಿ 145 ಜಿಲ್ಲೆಗಳಲ್ಲಿ ಒಟ್ಟು ಫಲವತ್ತತೆ ಪ್ರಮಾಣ (ಟಿಎಫ್ಆರ್ – 15ರಿಂದ 49 ವರ್ಷಗಳ ಸಂತಾನೋತ್ಪತ್ತಿ ಸಾಮರ್ಥ್ಯದ ವಯಸ್ಸಿನ ಅವಧಿಯಲ್ಲಿ ಮಹಿಳೆಗೆ ಹುಟ್ಟಬಹುದಾದ ಮಕ್ಕಳ ಸರಾಸರಿಸಂಖ್ಯೆ) 3. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 ರ ಪ್ರಕಾರ, ಟಿಎಫ್ಆರ್ ರಾಷ್ಟ್ರೀಯ ಸರಾಸರಿ 2.2 (2015-16ರ ವರ್ಷವನ್ನು ಒಳಗೊಂಡು). ಹೀಗಾಗಿ, 2016ರಲ್ಲಿ ‘ಮಿಷನ್ ಪರಿವಾರ್ ವಿಕಾಸ್’ ಕಾರ್ಯಕ್ರಮವನ್ನು ಏಳುರಾಜ್ಯಗಳಲ್ಲಿ ಹರಡಿಕೊಂಡಿರುವ ಈ 145 ಜಿಲ್ಲೆಗಳಲ್ಲಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕ್ಷೇಮಾಭಿವೃದ್ಧಿ ಸಚಿವಾಲಯ ಆರಂಭಿಸಿತು. ಕುಟುಂಬ ಯೋಜನೆಯನ್ನು ಕೇವಲ ಆರೋಗ್ಯ ವಿಚಾರವಾಗಿ ಅಲ್ಲ, ಸಾಮಾಜಿಕ ವಿಚಾರವಾಗಿ ನಿರ್ವಹಿಸುವಲ್ಲಿನ ಸರ್ಕಾರದ ಮೊದಲ ಪ್ರಯತ್ನ ಇದು. ಕುಟುಂಬ ಯೋಜನೆ ಎಂಬುದು ಬರೀ ಆರೋಗ್ಯ ಕೇಂದ್ರಗಳಲ್ಲಷ್ಟೇ ನಿರ್ವಹಿಸಬೇಕಾದ ವಿಚಾರ ಅಲ್ಲ ಎಂಬಂಥ ತರ್ಕವನ್ನು ಜನರ ಮನದಾಳಗಳಿಗೆ ಇಳಿಸಲು ಈ ಕಾರ್ಯಕ್ರಮಯತ್ನಿಸಿದೆ. ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಜಾರ್ಖಂಡ್ ಹಾಗೂ ಅಸ್ಸಾಂ ರಾಜ್ಯಗಳಲ್ಲಿರುವ ಈ ಜಿಲ್ಲೆಗಳಲ್ಲಿ ಅತ್ತೆ –ಸೊಸೆ ಮಧ್ಯೆ ಸಂವಹನ ಸುಧಾರಿಸುವುದಕ್ಕಾಗಿ ಸಾಸ್‌– ಬಹೂ ಸಮ್ಮೇಳನಗಳನ್ನೂ ಈ ಯೋಜನೆಯಡಿ ಅಳವಡಿಸಲಾಗಿದೆ. ರಾಷ್ಟ್ರದ ಜನಸಂಖ್ಯೆಯ ಒಟ್ಟು ಶೇ 44ರಷ್ಟು ಜನಸಂಖ್ಯೆ ಈ 145 ಜಿಲ್ಲೆಗಳಲ್ಲಿಯೇ ಇದೆ. ಎಂದರೆ ಇಲ್ಲಿ ಆಗಬೇಕಾದ ಜಾಗೃತಿ ಎಷ್ಟು ಮುಖ್ಯ ಎಂಬುದನ್ನು ತಿಳಿಯಬಹುದು.

ಸುರಕ್ಷಿತ ಹಾಗೂ ಪರಿಣಾಮಕಾರಿ ಗರ್ಭ ನಿರೋಧಕಗಳ ಬಳಕೆಯಿಂದ ಸಿಗುವ ಲಾಭಗಳು ಅನೇಕ. ಜನಸಂಖ್ಯೆ ಇಳಿಮುಖ ಪ್ರಮಾಣ ಸ್ಥಿರವಾಗುವುದಷ್ಟೇ ಅಲ್ಲ, ಸಾಮಾಜಿಕ ಪ್ರಗತಿಯೂ ಸಾಧ್ಯವಾಗುತ್ತದೆ. ಅರವತ್ತರ ದಶಕದಲ್ಲಿ ಗರ್ಭ ನಿರೋಧಕ ಮಾತ್ರೆಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರ ಲೈಂಗಿಕ ಹಾಗೂ ಆರ್ಥಿಕ ವಿಮೋಚನೆಗೆ ಕಾರಣವಾದದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆದರೆ ಭಾರತದಲ್ಲಿ ಈಗಲೂ ಅನೇಕ ಮಹಿಳೆಯರಿಗೆ ಗರ್ಭ ನಿರೋಧಕಗಳ ಸೌಲಭ್ಯ ಪಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ರಾಷ್ಟ್ರದಲ್ಲಿ 15ರಿಂದ 49ರ ವಯೋಮಾನದಲ್ಲಿರುವ ಶೇ 13ರಷ್ಟು ಮಹಿಳೆಯರಿಗೆ ಕುಟುಂಬ ಯೋಜನೆ ಸೇವೆಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಎಂದರೆ 8ರಲ್ಲಿ ಒಬ್ಬ ಮಹಿಳೆ ಮಕ್ಕಳ ಜನನದ ನಡುವೆ ಅಂತರ ಇಡಲು ಅಥವಾ ಸಂತಾನಶಕ್ತಿಹರಣದಂತಹಕಾಯಂ ವಿಧಾನ ಬಳಸಲು ಬಯಸುತ್ತಾಳೆ. ಆದರೆ ಆಕೆಗೆ ಈಸೇವೆಗಳು ಲಬ್ಯವಾಗುತ್ತಿಲ್ಲ ಎಂಬುದನ್ನು ಅಂಕಿಅಂಶಗಳು ಹೇಳಿವೆ. ಕರ್ನಾಟಕದಲ್ಲಿ ಹೀಗೆ ಕುಟುಂಬ ಯೋಜನೆ ಸೇವೆಗಳನ್ನು ಪಡೆದುಕೊಳ್ಳಲಾಗದವರ ಪ್ರಮಾಣ ಶೇ 10.

ರಾಷ್ಟ್ರೀಯ ಕುಟಂಬ ಆರೋಗ್ಯ ಸಮೀಕ್ಷೆ–4ರ ಅಂಕಿ ಅಂಶಗಳ ಪ್ರಕಾರ, 12 ವರ್ಷ ಅಥವಾ ಅದಕ್ಕೂ ಹೆಚ್ಚು ವರ್ಷಗಳು ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಮಹಿಳೆಯರ ಒಟ್ಟು ಫಲವತ್ತತೆ ಅಥವಾ ಸಂತಾನೋತ್ಪತ್ತಿ ಪ್ರಮಾಣ 2.1. ಯಾವುದೇ ವಿದ್ಯಾಭ್ಯಾಸ ಮಾಡದ ಮಹಿಳೆಯ ಟಿಎಫ್ಆರ್ 3.06. ಕುಟುಂಬ ಯೋಜನೆಯ ಪರಿಣಾಮಕಾರಿ ಬಳಕೆ, ಉದ್ಯೋಗ ವಲಯದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಪ್ರಮಾಣ ಹೆಚ್ಚಳಕ್ಕೂ ನಾಂದಿಯಾಗುತ್ತದೆ ಎಂಬುದನ್ನು ಸಮೀಕ್ಷೆಗಳು ದೃಢಪಡಿ
ಸುತ್ತಲೇ ಇವೆ. ಆದರೆ, ಮಹಿಳೆಗೆ ತನ್ನ ದೇಹದ ಮೇಲೆ ಅಧಿಕಾರ ಸ್ಥಾಪಿಸುವುದು ಈಗಲೂ ಮಹಿಳಾ ಆರೋಗ್ಯ ಆಂದೋಲನದ ದೊಡ್ಡ ಸವಾಲಾಗಿಯೇ ಇದೆ. ಸುರಕ್ಷಿತ ಗರ್ಭ ನಿರೋಧಕ ಸಾಧನ ಬಳಕೆ ಎಂದರೆ ಕುಟುಂಬದೊಳಗಿನ ಪುರುಷ ಪ್ರಧಾನಸಾಂಪ್ರದಾಯಿಕ ಮೌಲ್ಯಗಳನ್ನು ಎದುರು ಹಾಕಿಕೊಂಡಂತೆ ಎಂಬಂಥ ಸ್ಥಿತಿ ಇದೆ. ಅಥವಾ ಸ್ವತಃ ಮಹಿಳೆಗೂ ಅದರ ಅರಿವು ಇರುವುದಿಲ್ಲ. ಹೀಗಾಗಿ, ಮಹಿಳೆಯ ಪ್ರಜನನಅಥವಾ ಸಂತಾನೋತ್ಪತ್ತಿ ಹಕ್ಕು ಎಂದರೆ ಅದು ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಸಂಯೋಜನೆ ಎಂಬುದನ್ನು ನಾವು ಮೊದಲು ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT