ಆ ದಿನಗಳೇ ಹಾಗೆ ಇದ್ದುವು. ಅದು ಎಪ್ಪತ್ತನೇ ದಶಕದ ಮಧ್ಯಕಾಲ. ದೇಶದಲ್ಲಿ ಜಯಪ್ರಕಾಶ ನಾರಾಯಣರು ಭ್ರಷ್ಟಾಚಾರದ ವಿರುದ್ಧ, ಸರ್ವಾಧಿಕಾರದ ವಿರುದ್ಧ ಆಂದೋಲನ ಹಮ್ಮಿಕೊಂಡಿದ್ದರು. ಮೈಸೂರಿನಲ್ಲಿ ಬರಹಗಾರರ ಒಕ್ಕೂಟದ ಸಭೆ ನಡೆದಾಗಿತ್ತು. ಅದಕ್ಕೂ ಮುಂಚೆಯೇ ಕುವೆಂಪು, ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಯುವಕರಿಗೆ ಕರೆ ನೀಡಿದ್ದರು. ರಾಜ್ಯದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದರು. ಬಸವಲಿಂಗಪ್ಪ ಕನ್ನಡ ಸಾಹಿತ್ಯವೆಲ್ಲ ‘ಬೂಸಾ’ ಎಂದಿದ್ದರು. ಎಲ್ಲವನ್ನೂ ಪ್ರಶ್ನಿಸುತ್ತಿದ್ದ ಎಚ್.ನರಸಿಂಹಯ್ಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದರು.

‘ದೈವಾಂಶ ಸಂಭೂತ’ ಎಂದೇ ಭಾವಿಸಲಾಗಿದ್ದ ಸಾಯಿಬಾಬಾಗೂ ಅವರು ಪ್ರಶ್ನೆ ಹಾಕಿದ್ದರು. ಅವರು ಕೇಳಿದ್ದು ಒಂದೇ ಪ್ರಶ್ನೆ : ‘ನನಗೆ ಉಂಗುರ ಬೇಡ ಕುಂಬಳಕಾಯಿ ಸೃಷ್ಟಿಸಿಕೊಡಿ’ ಎಂದು! ಸಾಯಿಬಾಬಾ ಆ ಸವಾಲು ಸ್ವೀಕರಿಸಲು ಒಪ್ಪಿರಲಿಲ್ಲ. ಶ್ರೀಲಂಕಾದ ಪ್ರಖರ ವಿಚಾರವಾದಿ ಅಬ್ರಹಾಂ ಕೋವೂರ್ ಬೆಂಗಳೂರಿಗೆ ಬಂದು ‘ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಧಾರವಾಡದ ಚಂದ್ರಶೇಖರ ಪಾಟೀಲರು ಮತ್ತು ಅವರ ಗೆಳೆಯ ಸಿದ್ಧಲಿಂಗ ಪಟ್ಟಣಶೆಟ್ಟರು ಇಡೀ ಉತ್ತರ ಕರ್ನಾಟಕದಲ್ಲಿ ವೈಚಾರಿಕ ಜಾಗೃತಿ ಹುಟ್ಟುಹಾಕುವ ಚಳವಳಿಯ ನೇತೃತ್ವ ವಹಿಸಿಕೊಂಡಿದ್ದರು. ದಕ್ಷಿಣ ಕರ್ನಾಟಕದಲ್ಲಿ ಲಂಕೇಶ್ ಮತ್ತು ಪೂರ್ಣಚಂದ್ರ ತೇಜಸ್ವಿ ಮುಂತಾದ ಗೆಳೆಯರು ಇದೇ ಕೆಲಸದಲ್ಲಿ ತೊಡಗಿದ್ದರು. ಸಿದ್ದಲಿಂಗಯ್ಯ ಅದೇ ಕಾಲಕ್ಕೆ ‘ಹೊಲೆಮಾದಿಗರ ಹಾಡು’ ಕಾವ್ಯ ಬರೆದರು. ಬರಗೂರು ರಾಮಚಂದ್ರಪ್ಪನವರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ‘ಸಾಧನೆ’ ತ್ರೈಮಾಸಿಕದಲ್ಲಿ ವಿಮರ್ಶೆಯ ಹೊಸ ಪರಿಭಾಷೆಗಳನ್ನು ಕಟ್ಟಿ ಕೊಡುತ್ತಿದ್ದರು. ಎಲ್ಲವೂ ಬೇರೆ ಬೇರೆ ಕಡೆ ನಡೆದಿದ್ದರೂ ಅದಕ್ಕೆ ಒಂದು ಸೂತ್ರ ಇದ್ದಂತೆ ಇತ್ತು.

ನನ್ನ ವಾರಿಗೆಯವರು ಆಗಿನ್ನೂ ಬಿಸಿರಕ್ತದ ಇಪ್ಪತ್ತರ ಹರಯದ ಹುಡುಗರಾಗಿದ್ದೆವು. ನಾವು ಸಾಯಿಬಾಬಾ ಭಕ್ತರೂ ಆಗಿಬಿಡಬಹುದಿತ್ತು! ಪಾಟೀಲರು ಮತ್ತು ಪಟ್ಟಣಶೆಟ್ಟರು ಒಂದು ದಿನ ಸಂಜೆ ರಾಮದುರ್ಗದ ಪುರಸಭೆಯ ಕಚೇರಿ ಮುಂದೆ ಸಭೆ ಮಾಡಿದರು. ಅವರು ಅಲ್ಲಿ ಮಾತನಾಡಿದ್ದು, ಜೆ.ಪಿ ಬಗೆಗೆ ಮತ್ತು ಸಾಯಿಬಾಬಾ ಬಗ್ಗೆ! ನಮಗೆ ಆಯ್ಕೆ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ನಾವು ಪಾಟೀಲರ ಬೆನ್ನು ಹತ್ತಿದೆವು. ಇದೆಲ್ಲ ಆಗಿ ನಾಲ್ಕು ದಶಕಗಳೇ ಕಳೆದು ಹೋಗಿವೆ. 1976ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ನಾನು ಬಂದಾಗ ನಮ್ಮ ವಿಭಾಗ ಇದ್ದ ‘ವಿಶ್ವ ಚೇತನ’ ಕಟ್ಟಡದಲ್ಲಿಯೇ ಇಂಗ್ಲಿಷ್ ವಿಭಾಗವೂ ಇತ್ತು. ಚಂದ್ರಶೇಖರ ಪಾಟೀಲರು ಅಲ್ಲಿ ಅಧ್ಯಾಪಕರು. ದಿನದಲ್ಲಿ ಒಂದು ಸಾರಿ ಅವರ ಕೊಠಡಿಗೆ ಹೋಗದಿದ್ದರೆ, ಮಾತನಾಡದಿದ್ದರೆ ಆ ದಿನ ನಮಗೆ ಪೂರ್ತಿಯಾಗುತ್ತಿರಲಿಲ್ಲ. ಪಾಟೀಲರು ಆ ವೇಳೆಗಾಗಲೇ ಜೈಲು ಕಂಡು ಬಂದಿದ್ದರು. ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಸ್ಥಿತಿ ವಿಧಿಸಿದ್ದರು. ಪಾಟೀಲರು ಮತ್ತು ಪಟ್ಟಣಶೆಟ್ಟರ ನಡುವೆ ಅರಸು ಸರ್ಕಾರ ಹೆಚ್ಚು ವಾಚಾಳಿಯಾದ ಅಥವಾ ಉಗ್ರರಾದ ಪಾಟೀಲರನ್ನು ಆರಿಸಿ ಧಾರವಾಡದ ಜೈಲಿಗೆ ತಳ್ಳಿತ್ತು. ಪಾಟೀಲರು 26 ದಿನ 25 ರಾತ್ರಿ ಜೈಲಿನಲ್ಲಿ ಕಳೆದು ಬಂದಿದ್ದರು. ಹೊರಗೆ ಬರುವ ವೇಳೆಗೆ ಅವರು ಇನ್ನಷ್ಟು ವ್ಯಗ್ರರಾಗಿದ್ದರು. ಹೊರಗೆ ಬಂದ ಮೇಲೆ ಅವರು ಬರೆದ ಕವಿತೆಗಳ ಸಂಕಲನವೇ ‘ಗಾಂಧೀ ಸ್ಮರಣೆ.’ ಕಾಳೇಗೌಡ ನಾಗವಾರರು ‘ಮುಂಗಾರು ಪ್ರಕಾಶನ’ದ ಮೂಲಕ ಈ ಸಂಕಲನ ಪ್ರಕಟಿಸಿದರು.

ನಮಗೆ ನೆನಪು ಇರಬೇಕು: ತುರ್ತುಸ್ಥಿತಿಯಲ್ಲಿ ಬಂಧಿತರಾದ ಏಕೈಕ ಲೇಖಕ ಚಂದ್ರಶೇಖರ ಪಾಟೀಲ. ಅವರ ಜೊತೆಗೆ ಭಿನ್ನಾಭಿಪ್ರಾಯ ಇರಲು ಸಾಧ್ಯ. ಜಗಳ ಇರಲು ಸಾಧ್ಯ. ಅನೇಕ ಸಾರಿ ಅವರು ಮಾಡುವ ಹಾಸ್ಯವನ್ನು ಸಹಿಸಲು ಆಗುವುದಿಲ್ಲ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ಹಾಗೆ ಕಾಣಿಸಿದರೆ ಮೊದಲು ಕೇಳುವ ಧ್ವನಿ ಪಾಟೀಲರದು. ನಮಗೆ ಇನ್ನೂ ಒಂದು ಸಂಗತಿ ನೆನಪು ಇರಬೇಕು: ‘ಗಾಂಧೀ ಸ್ಮರಣೆ’ ಪ್ರಕಟವಾದುದು ತುರ್ತುಸ್ಥಿತಿ ಇನ್ನೂ ಜಾರಿಯಲ್ಲಿ ಇರುವಾಗಲೇ (1976). ಅಲ್ಲಿನ ಕವಿತೆಗಳು ನಿಗಿ ನಿಗಿ ಕೆಂಡದಂತೆ ಇದ್ದುವು. ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದ ಎಲ್ಲರ ಕಾಲರು ಜಗ್ಗಿ ಹಿಡಿದು ನೀವು ಏಕೆ ಮಾತನಾಡುತ್ತಿಲ್ಲ ಎಂದು ಕೇಳುವಂತಿದ್ದುವು. ಸಂಕಲನದ ‘ಎಲ್ಲಿದ್ದೀರಿ ಎಲ್ಲಿದ್ದೀರಿ’ ಕವಿತೆಯಲ್ಲಿ ‘... ಕ್ರಾಂತಿಯ ಪಿಟೀಲು ನುಡಿಸುವ ಭಾರತೀಪುರದ ನೀರೋಗಳೇ...’ ‘ಹೇಷಾರವಗೈಯುವ ಕುದುರೆಮುಖದವರೇ...’ ಎಂದೆಲ್ಲ ತಮ್ಮ ಸಮಕಾಲೀನ ಲೇಖಕರನ್ನು ಚಂಪಾ ತಡವಿದ್ದರು.

ಅವರು ಯಾರನ್ನು ಉದ್ದೇಶಿಸಿ ಹೀಗೆ ಬರೆದಿದ್ದರು ಎಂಬುದು ಬಹಳ ನಿಗೂಢವೇನೂ ಅಲ್ಲ. ಹಾಗೆ ನೋಡಿದರೆ ಪಾಟೀಲರದು ಯಾವಾಗಲೂ ಒಂದು ಏಟು ಎರಡು ತುಂಡು. ಅದರಲ್ಲಿ ಮುಚ್ಚು ಮರೆಯೇನೂ ಇಲ್ಲ. ಅವರ ಆಗಿನ ಸಂಕಟ ಯಾರಿಗಾದರೂ ಅರ್ಥವಾಗುವಂಥದು. ಏಕೆಂದರೆ ಅದೇ ಸಂಕಲನದ ‘ಅತಿಥಿ’ ಕವಿತೆಯಲ್ಲಿ ಅವರು ‘ಬರೆಯಬೇಕೆನಿಸಿದರೆ ಉಗುರಿದೆ, ಖಾಲಿ ಗೋಡೆ ಇದೆ’ ಎಂದು ಬರೆದಿದ್ದರು. ಅದು ಜೈಲಿನಲ್ಲಿ ‘ಅತಿಥಿ’ಯಾಗಿದ್ದ ದಿನಗಳ ಮಾತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಂಬಲಿಸುವ ಒಬ್ಬ ವ್ಯಕ್ತಿ ಬರೆಯಬೇಕು, ಮಾತನಾಡಬೇಕು ಎಂದು ಎಷ್ಟು ಹಪಹಪಿಸುತ್ತಾನೆ ಎಂಬುದನ್ನು ಆ ಸಾಲು ಕಟ್ಟಿ ಕೊಟ್ಟಿತ್ತು. ‘ಅತಿಥಿ’ ನಮಗೆ ಹುಚ್ಚು ಹಿಡಿಸಿದ ಕವಿತೆಯಾಗಿತ್ತು. ಒಂದು ಕವಿತೆ ಬರೆದು ಅದರ ವಿಮರ್ಶೆ ಬರೆಯಬೇಕು ಎಂದು ನಮ್ಮ ಅಧ್ಯಾಪಕರು ಹೇಳಿದರೆ ನಾವು ಇದೇ ಕವಿತೆ ಇಟ್ಟುಕೊಂಡು ಬರೆಯುತ್ತಿದ್ದೆವು. ತುರ್ತು ಸ್ಥಿತಿಯನ್ನು ತೆಗೆದು ಹಾಕಿದ ಮೇಲೆ ನಡೆದ ಮೊದಲ ವಿಧಾನಸಭೆ ಅಧಿವೇಶನದಲ್ಲಿಯೇ ‘ಗಾಂಧೀ ಸ್ಮರಣೆ’ಯ ಕವಿತೆಗಳು ಮೊಳಗಿದ್ದುವು. ಇದೇ ಕಾಗೋಡು ತಿಮ್ಮಪ್ಪನವರು, ಇದೇ ಕೋಣಂದೂರು ಲಿಂಗಪ್ಪನವರು ಈ ಸಂಕಲನದ ಕವಿತೆಗಳನ್ನು ಓದಿ, ಓದಿ ಅರಸು ಅವರಿಗೆ ತಿವಿಯುತ್ತಿದ್ದರು.

‘ಗಾಂಧೀ ಸ್ಮರಣೆ’ ಸಂಕಲನಕ್ಕೆ ದೀರ್ಘ ಹಿನ್ನುಡಿ ಬರೆದಿದ್ದ ಲಂಕೇಶರು, ‘ಈ ಒಂದೂವರೆ ವರ್ಷದ ಅವಧಿಯಲ್ಲಿ ನಮಗೆ ಕೇಳಿ ಬರುತ್ತಿರುವ ಸಾಹಿತ್ಯದ ಧ್ವನಿ ಪಾಟೀಲರದು. ಅದು ಸಾಹಿತ್ಯ ಧ್ವನಿ ಎನಿಸಿಕೊಳ್ಳಲು ಯೋಗ್ಯವಾದದ್ದೂ ಕೂಡ ಅದರ ಸಾಹಿತ್ಯೇತರ ಗುಣಗಳಿಂದಾಗಿ’ ಎಂದಿದ್ದರು. ‘ಹೇಳಬೇಕಾದ್ದನ್ನು ಹೇಳುವ ಧೈರ್ಯ ಕಳೆದುಕೊಂಡ ಸಮಾಜ ಹೇಳಬಾರದ್ದನ್ನು ಹೇಳುವ ಪಾಪಕ್ಕೆ ಬೀಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದ ಲಂಕೇಶ್, ‘... ಯಾವುದೇ ರೀತಿಯ ಒಳ್ಳೆಯದನ್ನು ನಿರೀಕ್ಷಿಸುವ ಪ್ರತಿಯೊಂದು ವ್ಯವಸ್ಥೆಯೂ ತನ್ನ ಸದಸ್ಯರಲ್ಲಿ ವಿರೋಧವನ್ನು ಪ್ರೇರೇಪಿಸಬೇಕಾಗಿದೆ’ ಎಂದು ಬರೆದುದು ಈಗಲೂ ಅರ್ಥಪೂರ್ಣವಾಗಿ, ಸಾಂದರ್ಭಿಕವಾಗಿ ತೋರುತ್ತದೆ. ಪ್ರಜೆಗಳ ವಿರೋಧದ ಮಾತು ಈಗ ‘ರಾಷ್ಟ್ರದ್ರೋಹ’ ಎನಿಸುವ ವಿಪರ್ಯಾಸದ ಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ.

ಇದೆಲ್ಲ ಆಗಿ 40 ವರ್ಷಗಳು ಕಳೆದು 41ನೇ ವರ್ಷ ನಡೆಯುತ್ತಿದೆ. ‘ಗಾಂಧೀ ಸ್ಮರಣೆ‘ ಈಗಲೂ ಪ್ರಸ್ತುತ ಎಂದು ಅನಿಸುವುದಿಲ್ಲವೇ? ಕಲಬುರ್ಗಿಯವರು ಏಕೆ ಹತ್ಯೆಯಾದರು? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬರೀ ತುರ್ತುಸ್ಥಿತಿಯಲ್ಲಿ ಮಾತ್ರ ಕಡಿವಾಣ ಇರಲಿಲ್ಲ. ಆಗ ಅಧಿಕೃತವಾಗಿಯೇ ಇತ್ತು. ಈಗ ಅನಧಿಕೃತವಾಗಿ ಮೂಗುದಾರ ಹಾಕಿದಂತೆ ಎಲ್ಲರಿಗೂ ಭಾಸವಾಗುತ್ತಿದೆ. ಕಲಬುರ್ಗಿಯವರ ಹತ್ಯೆ ಒಂದು ರೀತಿಯಲ್ಲಿ ಇದನ್ನು ಹೇಳಿದರೆ ಕನ್ಹಯ್ಯ ಕುಮಾರ್ ವಿದ್ಯಮಾನ ಇನ್ನೊಂದು ರೀತಿಯಲ್ಲಿ ಇದನ್ನೇ ಹೇಳುತ್ತಿದೆ.

ಇದು ಕಾಕತಾಳೀಯ ಇರಲಾರದು: ಕಲಬುರ್ಗಿಯವರು ಹತ್ಯೆಯಾದ ಕೆಲವೇ ದಿನಗಳಲ್ಲಿ ಪಾಟೀಲರು ಮತ್ತೆ ಕ್ರಿಯೆಗೆ ಇಳಿದರು. ಅವರು ರಾಜ್ಯ ಸರ್ಕಾರ ಕೊಟ್ಟ ‘ಪಂಪ ಪ್ರಶಸ್ತಿ’ಯನ್ನು ಪ್ರಶಸ್ತಿ ಮೊತ್ತದ ಜೊತೆಗೆ ಸರ್ಕಾರಕ್ಕೇ ವಾಪಸು ಕೊಟ್ಟರು. ಕರ್ನಾಟಕದಲ್ಲಿ ಪ್ರಶಸ್ತಿ ವಾಪಸು ಕೊಟ್ಟ ಮೊದಲ ಲೇಖಕ ಅವರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ಹಾಗೆ ಕಾಣಿಸಿದರೆ ತಾವು ಸಹಿಸುವುದಿಲ್ಲ ಎಂಬುದನ್ನು ಹೆಚ್ಚು ಖಚಿತವಾಗಿ, ಸ್ಪಷ್ಟವಾಗಿ ಅವರು ತೋರಿಸಿಕೊಟ್ಟರು. ಇನ್ನೆಲ್ಲಿ ಅವರು, ‘ಎಲ್ಲಿದ್ದೀರಿ ಎಲ್ಲಿದ್ದೀರಿ’ ಎಂದು ಕೇಳಿಯಾರು ಎಂದೋ ಏನೋ ಅನೇಕ ಸಾಹಿತಿಗಳು, ಕವಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸು ಮಾಡಿದರು! ತಮ್ಮ ಕ್ರಿಯೆಯ ಮೂಲಕ ಪಾಟೀಲರು ಒಟ್ಟು ಕನ್ನಡದ ಆತ್ಮಸಾಕ್ಷಿಯನ್ನು ಮತ್ತೆ ಎಚ್ಚರಿಸಿದರು.

ಪಾಟೀಲರಿಗೆ ಸಾಹಿತ್ಯ ಕೃತಿ ಮೂಡಿಸುವ ಎಚ್ಚರಕ್ಕಿಂತ ಕ್ರಿಯೆಯ ಅಥವಾ ಚಳವಳಿಯ ಮೂಲಕ ಬರುವ ಎಚ್ಚರದ ಬಗೆಗೆ ಹೆಚ್ಚು ನಂಬಿಕೆ. ಹಾಗಾಗಿಯೇ ಅವರು ಅನಂತಮೂರ್ತಿಯವರ ‘ಭಾರತೀಪುರ’ ಕೃತಿ ಮೂಡಿಸುವ ಎಚ್ಚರವನ್ನು ಅನುಮಾನದಿಂದ ನೋಡುತ್ತಿದ್ದರು. ಸಾಯಿಬಾಬಾ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದ ತೇಜಸ್ವಿ, ಅವರಿಗೆ ಹೆಚ್ಚು ಇಷ್ಟವಾಗುತ್ತಿದ್ದರು.

ಕನ್ನಡದ ಅನೇಕ ಲೇಖಕರು ನಾವಿನ್ನು ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾಗಲೇ ಪಾಟೀಲರು ಗೋಕಾಕ್ ಚಳವಳಿಗೆ ಧುಮುಕಿದ್ದರಲ್ಲಿಯೂ ಇದೇ ಮನಸ್ಥಿತಿ ಇದೆ. ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ ನಿರ್ಧರಿಸಲು ಗುಂಡುರಾವ್ ಸರ್ಕಾರ ನೇಮಿಸಿದ್ದ ಸಮಿತಿಯ ಮುಖ್ಯಸ್ಥರಾಗಿ ವಿ.ಕೃ.ಗೋಕಾಕರು ಇದ್ದರು. ಅವರು ಬ್ರಾಹ್ಮಣರಾದ್ದರಿಂದ ಕನ್ನಡಕ್ಕೆ ಅನ್ಯಾಯ ಮಾಡಿಯಾರು ಎಂದು ಅನುಮಾನಿಸಿ ‘ಗೋ ಬ್ಯಾಕ್ ಗೋಕಾಕ್’ ಎಂಬ ಭಿತ್ತಿ ಪತ್ರ ಹಿಡಿದು ತನ್ನ ಪ್ರೀತಿಯ ಗುರುವಿನ ವಿರುದ್ಧವೇ ಪಾಟೀಲರು ಪ್ರತಿಭಟಿಸಿದ್ದರಲ್ಲಿಯೂ ಅದೇ ಮನಸ್ಥಿತಿ ಇದೆ. ಆದರೆ, ಗೋಕಾಕರು ಕನ್ನಡದ ಪರವಾಗಿಯೇ ವರದಿ ಕೊಟ್ಟರು. ಆ ವರದಿ ಜಾರಿ ಮಾಡಬೇಕು ಎಂಬ ಹೋರಾಟದ ಮುಂಚೂಣಿಯಲ್ಲಿ ಮತ್ತೆ ಪಾಟೀಲರು ಇದ್ದರು.

ಇಂಥೆಲ್ಲ ಹೋರಾಟದ ನಡುವೆ ಪಾಟೀಲರು ಮೊದಲ ಹತ್ತು ವರ್ಷಗಳ ಕಾಲ ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಗಿರಡ್ಡಿ ಗೋವಿಂದರಾಜರ ಜೊತೆಗೆ ತಂದ ‘ಸಂಕ್ರಮಣ’ವನ್ನು ಮತ್ತೆ ನಲವತ್ತು ವರ್ಷಗಳ ಕಾಲ ಏಕಾಂಗಿಯಾಗಿ, ನಿರಂತರವಾಗಿ ಮುಂದುವರಿಸಿದ್ದು ಒಂದು ಐತಿಹಾಸಿಕ ಕೆಲಸ. ಈ ನಡುವೆ ಅನೇಕ ‘ಪುಟ್ಟ ನಿಯತಕಾಲಿಕ’ಗಳು ಬಂದುವು, ಹೋದುವು, ಕೆಲವು ಅನಿಯತವಾಗಿ ಬಂದುವು. ಈಗಲೂ ಬರುತ್ತಿವೆ. ಪಾಟೀಲರು ಮಾತ್ರ ಕೈಕೊಡುವ, ಬೇಕೆಂದೇ ಮರೆಯುವ ಚಂದಾದಾರರ ಬಳಗವನ್ನು ಕಟ್ಟಿಕೊಂಡು ‘ಸಂಕ್ರಮಣ’ವನ್ನು ತಂದರು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ‘ಸಂಕ್ರಮಣ’ದ ಪಾತ್ರವೇನು ಎಂದು ಬೆಂಗಳೂರಿನಲ್ಲಿ ನಿನ್ನೆಯಿಂದ ಆರಂಭವಾಗಿರುವ ಸಂಕ್ರಮಣ–50ರ ಹಬ್ಬದ ನಿಮಿತ್ರ ಸಾಕಷ್ಟು ಚರ್ಚೆಯಾಗಿದೆ. ಈ ಉತ್ಸವದ ಸಂದರ್ಭದಲ್ಲಿ ಎಲ್ಲ ಲೇಖಕರಿಗೆ ಬರೆದ ಹಾಗೆ ನನಗೂ ಪಾಟೀಲರು ಪತ್ರ ಬರೆದಿದ್ದರು. ‘ಸಂಕ್ರಮಣ’ದಲ್ಲಿ ಪ್ರಕಟವಾದ ನನ್ನ ಮೊದಲ ಲೇಖನವನ್ನು ಅವರು ಅದರಲ್ಲಿ ಉಲ್ಲೇಖಿಸಿದ್ದರು. ನನಗೇ ಆ ಲೇಖನ ಮರೆತೇ ಹೋಗಿತ್ತು. ಹಾಗೆಯೇ ಸಂಕ್ರಮಣದ ಸಾವಿರಾರು ಲೇಖಕರಿಗೆ ಅವರು ಖುದ್ದಾಗಿ ಪತ್ರ ಬರೆದಿದ್ದರು. ಪಾಟೀಲರ ಆ ಪ್ರೀತಿ ಇಲ್ಲದೇ ಇದ್ದರೆ, ನಾವು ತಪ್ಪೋ ನೆಪ್ಪೋ ಬರೆದುದನ್ನು ಅವರು ಪ್ರಕಟಿಸದೇ ಇದ್ದರೆ ನಮ್ಮ ಬರವಣಿಗೆಯ ಕೃಷಿ ನಿಂತೇ ಹೋಗುತ್ತಿತ್ತು. ಈಗಲೂ ನನ್ನ ಜೊತೆಗೆ ಆಗೀಗ ಮಾತನಾಡುತ್ತಾರೆ. ‘ಉತ್ತರ ಕರ್ನಾಟಕದ ಖದರು ನಿಮ್ಮ ಭಾಷೆಯಲ್ಲಿ ಇದೆ’ ಎಂದು ಮೆಚ್ಚುತ್ತಾರೆ. ಅವರು ನಮಗೆ ನೇರವಾಗಿ ಪಾಠ ಮಾಡಲಿಲ್ಲ. ಆದರೆ, ಪರೋಕ್ಷವಾಗಿ ನನ್ನ ಪೀಳಿಗೆಯನ್ನು ರೂಪಿಸಿದವರಲ್ಲಿ ಅವರೇ ದೊಡ್ಡವರು ಎಂಬುದರಲ್ಲಿ ಎರಡು ಮಾತಿಲ್ಲ.

‘ಗಾಂಧೀ ಸ್ಮರಣೆ’ ಹಿನ್ನುಡಿಯಲ್ಲಿ ಲಂಕೇಶರು ಮತ್ತೆ ಬರೆದಿದ್ದರು: ‘ಪಾಟೀಲರು, ನಮ್ಮೆಲ್ಲರಂತೆ ಬಹಳ ತಪ್ಪು ಮಾಡುತ್ತಾರೆ. ತೀರಾ ಸಣ್ಣ ವಿಷಯಗಳಿಗೆಲ್ಲ ರೇಗಾಡುತ್ತಾರೆ. ತೀರ ಬೇಗ ಜನರನ್ನು ತಮ್ಮ ಮೂಗಿನ ನೇರಕ್ಕೆ ಹೆಸರಿಸತೊಡಗುತ್ತಾರೆ... ಅನೇಕ ಸಲ ತಮಾಷೆಗೆ, ಹಟಕ್ಕೆ ಕ್ಷುಲ್ಲಕ ಕಾರಣಗಳಿಗಾಗಿ ಪದ್ಯ ಬರೆಯುತ್ತಾರೆ... ಪಾಟೀಲರ ಧ್ವನಿಯನ್ನು ಕೇಳಿ ಏಕತಾನವೆನ್ನಿಸಿದರೆ ಕೊಂಚ ನಿಂತು ಮತ್ತೆ ಓದುವುದು ಮೇಲು; ಯಾಕೆಂದರೆ ಏಕತಾನವನ್ನು ಬೇಕಂತಲೇ ಅವಲಂಬಿಸುವ ಪಾಟೀಲರು ಇದ್ದಕ್ಕಿದ್ದಂತೆ ಹೊಸ ಬಾಗಿಲು ತೆರೆದು ನಮ್ಮನ್ನು ಒಳಕ್ಕೆ ಬಿಡುತ್ತಾರೆ.’

ಪಾಟೀಲರು ನಮ್ಮ ತಲೆಮಾರಿನವರಿಗೆ ಹೀಗೆ ಅನೇಕ ಸಾರಿ ಹೊಸಬಾಗಿಲು ತೆರೆದು ತೋರಿಸಿದ್ದಾರೆ. ಅವರು ನಮ್ಮ ಮುಂದೆ ನಡೆಯುವ ಆರದ ಉಜ್ವಲ ದೀವಟಿಗೆಯಾಗಿದ್ದಾರೆ. ಅವರಿಗೆ ನಮಸ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.