ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಯ್ಯಾಲೆಯ ರಾಧೆ : ಪ್ರತಿರೋಧದ ಶಕ್ತ ಮಾದರಿ

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಒಂದೇ ಒಂದು ಸಲ ನಾನು ಕನಸಲ್ಲಿ ಕಂಡೆ ಅಷ್ಟೆ.
ಆಮೇಲೆ ಈ ಆದಿ ಇರದ ಅಂತ್ಯ ಇರದ ರಸ್ತೆಯ ಮೇಲೆ
ನಾನು ಯಾತ್ರೆ ಹೊರಟು ಬಿಟ್ಟೆ
ಎಷ್ಟುಮಠಗಳನ್ನು
ಅದೆಷ್ಟು ಜನರನ್ನು
ಅದೆಷ್ಟು ಘಟನೆಗಳನ್ನು ದಾಟಿ ದಾಟಿಕೊಂಡು
ನನ್ನನ್ನು ನನ್ನೊಳಗೇ ಅಡಗಿಸಿಕೊಂಡು ನಾನು ಬಂದೆ!
ಏರುವಯಸ್ಸು ದುಃಖ ದುಮ್ಮಾನಗಳ ಭಾರ
ಆಸೆ ಭರವಸೆಗಳು ಇಲ್ಲವಾಗುವುದನ್ನು ನೋಡುತ್ತಲೇ
ಹಾದಿಯಿಂದ ಹಾದಿಗೆ ಹೊರಳುತ್ತಿದ್ದೆ                                                                                                     
ಶ್ರೀರಾಧೆ - ರಮಾಕಾಂತ ರಥ (ಅನು: ಸಂಧ್ಯಾ ಎಸ್.)    

ಆ ಚಿತ್ರವೊಂದು ಮನಸ್ಸಿನಲ್ಲಿ ಉಳಿದೇ ಬಿಟ್ಟಿದೆ. ಮೊದಮೊದಲು ಅದರ ಬಗ್ಗೆ ಯೋಚಿಸುವುದಕ್ಕೇ ಭಯ, ಒಳಗೇ ಅಪಾರ ಹಿಂಸೆ. ಇದನ್ನು ಕ್ರೌರ್ಯ ಎಂದು ಮಾತ್ರ ಹೇಳಿಬಿಟ್ಟರೆ ಏನನ್ನೂ ಹೇಳಿದಂತಾಗುವುದಿಲ್ಲ ಎನ್ನುವ ಅಸಹನೆ ಬುದ್ಧಿ ಭಾವಗಳನ್ನೆಲ್ಲ ತುಂಬುತ್ತಲೇ, ನಮಗೆ ನಮ್ಮ ಭಾಷೆಯೇ ಇಲ್ಲವಲ್ಲ ಎನ್ನುವ ಅರಿವು ದಿಗಿಲನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು. ನಾವು ‘ಅವರ’ ಭಾಷೆಯನ್ನು ಅನುವಾದಿಸಿಕೊಳ್ಳುತ್ತಿರುವ, ‘ಅವರು’ ನಮ್ಮನ್ನು ‘ಕುರಿತೋದುವುದಕ್ಕೆ’ ಬೇಕಾದ ಭಾಷೆಯನ್ನು ಹೆಣ್ಣಿನ ಒಳಗೂ ಹೊರಗೂ ಬಿತ್ತಿಬಿಟ್ಟಿರುವ ಈ ಪರಿಸ್ಥಿತಿಯಿಂದ ಪಾರಾಗುವುದು ಹೇಗೆ? ಇಂಥ ಆಲೋಚನೆಗಳೇ ನಮ್ಮನ್ನು ಒಂದಲ್ಲ ಒಂದು ದಿನ ದಡಕ್ಕೆ ಮುಟ್ಟಿಸಿಯಾವು. ಇಷ್ಟಕ್ಕೂ, ಹೆಣ್ಣಿನ ಭಾಷೆ ಎನ್ನುತ್ತಿರುವಾಗ, ಹೆಣ್ಣಿಗೇ ವಿಶಿಷ್ಟವೂ ಸೀಮಿತವೂ ಎನ್ನುವ ಅರ್ಥದಲ್ಲಿ ಅಲ್ಲವೇ ಅಲ್ಲ.

ಗಂಡು–ಹೆಣ್ಣು ಇಬ್ಬರೂ ಪರಸ್ಪರರಿಗೆ, ಅವರ ನಿಜದಲ್ಲಿ ಕಾಣುವ, ಕಾಣಿಸುವ ಭಾಷೆಯೆಂದೇ ಅರ್ಥ. ಎಂದರೆ ಹೆಣ್ಣಿನ ಭಾಷೆಯ ಸೃಷ್ಟಿ ಎನ್ನುವುದು ಮನುಷ್ಯ ಅಥವಾ ಇನ್ನೂ ಸರಿಯಾಗಿ ಹೇಳುವುದಾದರೆ ಮಾನವೀಯ ಭಾಷೆಯ ಸೃಷ್ಟಿ. ಆ ಚಿತ್ರ, ನನಗೆ ಕಾವ್ಯದ ಓದನ್ನು ಉತ್ಕಟ ಅನುಭವವಾಗಿಸಿದ ಅಧ್ಯಾಪಕರು ಕೊಟ್ಟದ್ದು. ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಅವರ ತಾಯಿ, ಅವರ ಇಳಿ ವಯಸ್ಸಿನಲ್ಲೂ, ಬಚ್ಚಲು ಮನೆಯಲ್ಲಿ ಸ್ನಾನ ಮಾಡುವಾಗ, ಮೈಮೇಲೆ ಬಟ್ಟೆಯೊಂದನ್ನು ಹಾಕಿಕೊಂಡೇ ಸ್ನಾನ ಮಾಡುತ್ತಿದ್ದದ್ದು. ಬಚ್ಚಲು ಮನೆಯ ಮೂಲೆಯೊಂದರಲ್ಲಿ, ನೀರೊಲೆಯಲ್ಲಿ ಉರಿಯುತ್ತಿರುವ ಅಗ್ನಿ ಪರಪುರುಷ ಎನ್ನುವ ಕಾರಣಕ್ಕಾಗಿ. ದೇವರೇ, ಹೆಣ್ಣನ್ನು ಕಟ್ಟುವ, ಕಟ್ಟಿಹಾಕುವ ಅದೆಷ್ಟು ದಾರಿಗಳು, ಮಾದರಿಗಳು... ತನ್ನ ದೇಹಕ್ಕೆ ಹೆಣ್ಣು ತಾನೇ ಮಿಡಿಯಲಾಗದ ದಿಗ್ಬಂಧನಗಳನ್ನು ಅದೆಲ್ಲೆಲ್ಲಿಂದ ಹುಡುಕಿ ತೆಗೆಯಲಾಗಿದೆ?

ಚದುರಂಗರ ‘ಉಯ್ಯಾಲೆ’ ಕಾದಂಬರಿಯ ರಾಧೆಯನ್ನು ಕಂಡಾಗ ಇದೇ ಎಂದು ಸ್ಪಷ್ಟವಾಗಿ ಹೇಳಲಾಗದ ಹಲವು ಭಾವಗಳು ಒಟ್ಟಿಗೇ ಎದುರಾಗುತ್ತವೆ. ವಿಷಾದ, ವ್ಯಗ್ರತೆಯ ಜೊತೆ ಜೊತೆಗೇ ತನ್ನ ಪರಿಸ್ಥಿತಿಯ ಅರಿವೇ ಹೆಣ್ಣು ತನ್ನನ್ನು ತಾನು ರಚಿಸಿಕೊಳ್ಳುವ ಮೊದಲ ಘಟ್ಟವೆನ್ನುವ ಭಾವವೂ ಅಷ್ಟೇ ದಟ್ಟವಾಗಿ ನಮ್ಮನ್ನು ಆವರಿಸುತ್ತದೆ. ‘ಉಯ್ಯಾಲೆ’ ಹಲವು ಕಾರಣಗಳಿಗಾಗಿ ಪ್ರಾತಿನಿಧಿಕ ಕೃತಿ. ಇದನ್ನು ಒಂದು ಕಲಾಪಠ್ಯವಾಗಿ ನೋಡಲು ಸಾಧ್ಯವೇ ಎನ್ನುವ ಮೂಲಭೂತ ಪ್ರಶ್ನೆಯನ್ನೂ ಈ ಕೃತಿಯನ್ನು ಕುರಿತಂತೆ ನಾವು ಎದುರಿಸಬೇಕಾಗುತ್ತದೆ. ಈ ಪ್ರಶ್ನೆಯನ್ನು ತುಸು ಪಕ್ಕಕ್ಕಿರಿಸಿ ಈ ಜನಪ್ರಿಯ ಕೃತಿಯನ್ನು ನೋಡುವ ಪ್ರಯತ್ನ ಮಾಡಬೇಕಾಗಿರುವುದು ಇವತ್ತಿನ ಅಗತ್ಯವೂ ಹೌದು.

ಚದುರಂಗರ ‘ಸರ್ವಮಂಗಳ’, ‘ವೈಶಾಖ’ ಮತ್ತು ‘ಉಯ್ಯಾಲೆ’ ಈ ಮೂರೂ ಕೃತಿಗಳೂ ಮೂಲತಃ ಸ್ತ್ರೀಕೇಂದ್ರಿತವೇ ಆಗಿರುವುದು ಆಕಸ್ಮಿಕವಲ್ಲ. ಹೆಣ್ಣಿನ ಒಳಹೊರಗುಗಳನ್ನು ಅರ್ಥಮಾಡಿಕೊಳ್ಳಬೇಕೆನ್ನುವ ಮಹತ್ವಾಕಾಂಕ್ಷೆಯೂ, ಮಾನವೀಯ ಕಾಳಜಿಯೂ, ಪ್ರಗತಿಶೀಲರ ಶೋಷಿತಪರ ದೃಷ್ಟಿಕೋನವೂ ಸೇರಿ ಈ ಕೃತಿಗಳು ಸೃಷ್ಟಿಯಾಗಿವೆ. ಹಾಗೆ ನೋಡಿದರೆ, ಪ್ರಗತಿಶೀಲರಲ್ಲಿ ಅ.ನ.ಕೃ ಅವರೂ ಸೇರಿದಂತೆ ಹೆಣ್ಣು ಸ್ವತಃ ಅವಳ ಮತ್ತು ಇತರರ ಕಣ್ಣೀರಿನಲ್ಲಿ ತೋಯ್ದು ತೊಪ್ಪೆಯಾಗಿರುವುದೇ ಹೆಚ್ಚು. ಸ್ವಮರುಕ ಮತ್ತು ಲೋಕಮರುಕಗಳೆರಡೂ ಸೇರಿ ‘ಬಾಲಿದ್ಯಾತರ ಜನ್ಮ’ ಎನಿಸಿಬಿಡುತ್ತದೆ ಅನೇಕ ಬಾರಿ. ಈ ಅಪಾಯದಿಂದ ಚದುರಂಗರು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ನಿರಂಜನರ ‘ರಂಗಮ್ಮನ ವಠಾರ’ದ ರಂಗಮ್ಮನೂ ಇದಕ್ಕೆ ಹೊರತಾದವಳು.

ಈ ಅಪಾಯದಿಂದ ಚದುರಂಗರು ಪಾರಾದ ಕೀರ್ತಿ ಲೇಖಕರಿಗೆ ಸಲ್ಲಬೇಕೋ? ಲೇಖಕರನ್ನು ಮೀರಿ ತನ್ನ ಆತ್ಮವಂತಿಕೆಯನ್ನು ಮೆರೆಯುವ ರಾಧೆಗೆ ಸಲ್ಲಬೇಕೋ ಎನ್ನುವುದೊಂದು ಸಂಕೀರ್ಣವಾದ ಆದರೆ ಮುಖ್ಯ ಪ್ರಶ್ನೆ. ಇದರ ಜೊತೆಗೆ ಇನ್ನೊಂದು ಮಹತ್ವದ ಪ್ರಶ್ನೆಯನ್ನು ಈ ಕೃತಿ ಎದುರು ಹಾಕಿಕೊಳ್ಳುತ್ತದೆ. ಗಂಡಿನ ಅಪೇಕ್ಷೆಯ ಚೌಕಟ್ಟಿನಲ್ಲಿಯೇ ಹೆಣ್ಣು ಉಳಿಯಬೇಕು ಎನ್ನುವುದನ್ನು ಮೀರಿಕೊಳ್ಳುವುದು ಗಂಡಿಗಾದರೂ, ತನ್ನ ಬದಲಾಗಿದೆ ಎಂದು ತಿಳಿದುಕೊಂಡಿರುವ ದೃಷ್ಟಿಕೋನದಾಚೆಗೂ ಎಷ್ಟು ಕಷ್ಟದ್ದು ಎನ್ನುವುದನ್ನು ಈ ಕಾದಂಬರಿ ಪರಿಶೀಲನೆಗೆ ಒಡ್ಡುತ್ತಿರುವಂತೆಯೂ ಕಾಣಿಸುತ್ತದೆ. ಕಾದಂಬರಿಯುದ್ದಕ್ಕೂ ಅಲ್ಲಲ್ಲಿ ಕಾಣಿಸಿಕೊಳ್ಳುವ ಹಿಂದೂ ಮಹಿಳೆಯ ಕರ್ತವ್ಯ, ಅದರ ಹೆಚ್ಚುಗಾರಿಕೆಯನ್ನು ಕುರಿತ ಮಾತುಗಳು ರಾಧೆಯವು ಎನ್ನುವುದಕ್ಕಿಂತ ಹೆಚ್ಚಾಗಿ ಆಧುನಿಕ ಅಥವಾ ವೈಚಾರಿಕ ಎಂದು ಭ್ರಮಿಸಿಕೊಂಡಿರುವ ಗಂಡಿನ ದ್ವಂದ್ವದ ಮಾತುಗಳ ಹಾಗೆ ಕಾಣಿಸುತ್ತವೆ.

ವಿದ್ಯೆಯು ತನ್ನ ಬದುಕನ್ನು ತಾನು ರೂಪಿಸಿಕೊಳ್ಳಲು ಸಿಕ್ಕ ರಹದಾರಿ ಎಂದು ತಿಳಿದ ಸರಳ, ಮುಗ್ಧ ಹೆಣ್ಣು ಎನ್ನುವ ಹಾಗೆ ರಾಧೆಯ ಪಾತ್ರ ನಮಗೆ ಪರಿಚಯವಾಗುತ್ತದೆ. ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಯುವಕನೊಬ್ಬನ ಪರಿಚಯ, ಅದು ಪ್ರೀತಿಗೆ ತಿರುಗುವ, ಅದರ ಉನ್ಮತ್ತತೆಯಲ್ಲಿ ಲೋಕವನ್ನೇ ಎದುರಿಸಬಲ್ಲೆನೆನ್ನುವ ರಾಧೆಯ ವಿಶ್ವಾಸ ಎಲ್ಲ ನಾವು ಎಣಿಸಿದಂತೆಯೇ ಆ ಯುವಕ ಮದುವೆಯಾದವನು ಎನ್ನುವ ಸತ್ಯದಲ್ಲಿ ಮುಕ್ತಾಯವಾಗುತ್ತದೆ. ಅಲ್ಲಿಂದಾಚೆಗೆ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ರಾಧೆ ನಡೆಸುವ ಪ್ರಯತ್ನಗಳೂ ಲೇಖಕರ ಪೂರ್ವನಿರ್ಧರಿತ ಎಣಿಕೆಯಂತೆಯೇ ಸೋಲುತ್ತವೆ. ಒಂದು ಮಿಲಿಟರಿ ಆಫೀಸಿನಲ್ಲಿ, ಒಂದು ಶಾಲೆಯಲ್ಲಿ ತನ್ನ ವೃತ್ತಿಯನ್ನು, ಆ ಮೂಲಕ ತನ್ನ ಬದುಕನ್ನು ತಾನೇ ನಿಭಾಯಿಸಲು ರಾಧೆ ಅಶಕ್ತಳಾಗುತ್ತಾಳೆ. ಗಂಡಿನ ಯಾವತ್ತಿನ ಮೋಸದಾಟಕ್ಕೆ ಬಲಿಯಾದವಳಾದರೂ, ಶಿಕ್ಷೆಯಂತೂ ಹೆಣ್ಣಿಗೆ ಎನ್ನುವ ‘ಕುರುಡು ಧರ್ಮಕ್ಕೆ ಸ್ಮಾರಕ’ವೆಂಬಂತೆ ಹೆಂಡತಿಯನ್ನು ಕಳೆದುಕೊಂಡ ಶೇಷಗಿರಿಯ ಎರಡನೆಯ ಹೆಂಡತಿಯಾಗುತ್ತಾಳೆ.

ಹದಿನಾಲ್ಕು ಲೋಕಕ್ಕು ಚಿಮ್ಮಲಿ ಈ ಸುಖಾ ಎನ್ನುವ ಅದಮ್ಯ ಜೀವನ ಪ್ರೀತಿಯ ರಾಧೆಗೆ, ‘ಪದ್ಮ ಪತ್ರದ ಜಲಬಿಂದು’ವಿನಂತಹ ಸ್ಥಿತಪ್ರಜ್ಞ ಶೇಷಗಿರಿ. ಹೇಗೂ ಹೆಂಡಿರಾಗಿ ಬದುಕಬೇಕಾದ್ದು ಎಲ್ಲ ಹೆಣ್ಣಿನ ಹಣೆಯಲ್ಲಿ ಬರೆದದ್ದು ಎಂದು ಉದ್ಗರಿಸುವ ಗೌರಮ್ಮಾಜಿಯಂತೆ ರಾಧೆ ಬದುಕು ನೂಕುತ್ತಿರುವಾಗ ಗಂಡನ ಗೆಳೆಯ ಕೃಷ್ಣೇಗೌಡನ ರೂಪದಲ್ಲಿ ಸವಾಲೊಂದು ರಾಧೆಗೆ ಎದುರಾಗುತ್ತದೆ. ಕಾವ್ಯ, ಸಂಗೀತ, ನಾಟಕಗಳ ಸಮಾನ ಆಸಕ್ತಿಯ ಈ ಯುವಕ ಇವರ ಮನೆಯಲ್ಲಿ ಇರಹತ್ತಿದಾಗಿಂದ ಇಬ್ಬರೂ ಪರಸ್ಪರ ಆಕರ್ಷಣೆಗೆ ಒಳಗಾಗಿ ಇಬ್ಬರೂ ತೀವ್ರವಾದ ಮನೋಘರ್ಷಣೆಯಲ್ಲಿ, ಬೇಕು ಬೇಡಗಳ, ಸರಿ ತಪ್ಪುಗಳ, ಸಾಮಾಜಿಕ ಮತ್ತು ವೈಯಕ್ತಿಕ ಆಯ್ಕೆಗಳ, ಸ್ನೇಹ ಮತ್ತು ವಿಶ್ವಾಸದ್ರೋಹದ ಆತಂಕಗಳ, ಸಹಜ ಮತ್ತು ಅಸಹಜತೆಯ ವ್ಯಾಖ್ಯಾನಗಳ ದಿವ್ಯವನ್ನೇ ಹಾಯುತ್ತಾರೆ.

ರಾಧೆ ಈ ಜೈವಿಕವೆನ್ನುವ, ಬೌದ್ಧಿಕವೆನ್ನುವ, ಸಹಜವೆನ್ನುವ ಮನೋವ್ಯಾಪಾರಗಳನ್ನು ಎದುರಿಸುವ ಬಗೆಯೇ ರಾಧೆಯ ಪಾತ್ರಕ್ಕೊಂದು ವಿನ್ಯಾಸವನ್ನೂ ವ್ಯಾಪ್ತಿಯನ್ನೂ ತಂದುಕೊಡುತ್ತದೆ. ಒಂದು ಘಟ್ಟದಲ್ಲಿ ಓದುಗರಿಗೆ ಇದು ಕಾದಂಬರಿಕಾರರ ಉದ್ದೇಶ ಮತ್ತು ಆಶಯಗಳನ್ನು ಮೀರಿ ಸ್ವತಂತ್ರವಾದ ಪಾತ್ರವೆಂದೂ ಅನಿಸಿಬಿಡುತ್ತದೆ. ತನ್ನೆದುರಿಗಿನ ಈ ಎಲ್ಲ ಪ್ರಶ್ನೆಗಳನ್ನೂ ರಾಧೆ ಸಾಮಾಜಿಕತೆಯ ಹಂಗಿಲ್ಲದ, ನೈತಿಕ ಅನೈತಿಕತೆಗಳ ಚೌಕಟ್ಟುಗಳ ಗೊಡವೆಗಳನ್ನು ಮೌಲ್ಯವ್ಯವಸ್ಥೆಯನ್ನು ಮೀರಿದ ಒಳಲೋಕದ ಅರಿವಿನಿಂದ ಮುಖಾಮುಖಿ ಯಾಗುತ್ತಾಳೆ.

ಕಾದಂಬರಿಯಲ್ಲಿ ಎಲ್ಲೂ ಗೋಚರವಾಗದ ಆದರೆ ರಾಧೆಯ ತಲ್ಲಣಗಳಲ್ಲಿಯೇ ಸ್ಪಷ್ಟವಾಗುವ ಅಂಶವೆಂದರೆ ಕೊನೆಗೂ ನಮ್ಮನ್ನು ಕೈ ಹಿಡಿದು ನಡೆಸಬೇಕಾಗಿರುವುದು ನಮ್ಮ ಅಂತಃಸಾಕ್ಷಿಯೇ ಹೊರತು ಮತ್ತಾವ, ಮತ್ತಾರ ಭಯವೂ ನಿರ್ಬಂಧಗಳೂ ಅಲ್ಲ. ಈ ಸ್ಪಷ್ಟತೆ ರಾಧೆಗೆ ಇದೆ. ಆದ್ದರಿಂದಲೇ ಈ ಕಾದಂಬರಿಯನ್ನು ಮತ್ತೆ ಮತ್ತೆ ಓದಿದಾಗಲೂ ನನಗೆ ರಾಧೆಯ ಪಾತ್ರ ಕಾದಂಬರಿಕಾರರ ಅಳತೆಯನ್ನೂ ಮೀರಿ ಬೆಳೆದ ಪಾತ್ರ ಅನಿಸುತ್ತದೆ. ಬದುಕಿನಲ್ಲಿ ಮೊಗೆದು ಕುಡಿಯಬಹುದಾದ ಯಾವುದೂ ತನಗೆ ಸಿಗದೇ ಹೋದಾಗ ಸಿಕ್ಕದ್ದೊಂದನ್ನು ಬಿಟ್ಟುಕೊಡುವುದು ಅದೆಂಥ ಕಡುಕಷ್ಟದ ವ್ಯಾಪಾರ ಅನ್ನುವುದನ್ನು ರಾಧೆ ಪ್ರತಿಗಳಿಗೆಯೂ ಅನುಭವಿಸುತ್ತಾಳೆ. ಕೃಷ್ಣೇಗೌಡನ ಒಂದು ನೋಟ, ಒಂದೇ ಒಂದು ಸ್ಪರ್ಶ ಎಲ್ಲವೂ ತವನಿಧಿಯಂತೆ ಕಾಣಿಸುತ್ತಿರುವಾಗಲೂ ಅದನ್ನು ಪಡೆಯಲೇ, ಬಿಟ್ಟುಕೊಡಲೆ ಎನ್ನುವ ದೇಹ–ಮನಸ್ಸುಗಳ ಹೊಯ್ದಾಟವನ್ನು ರಾಧೆ ಆತಂಕ ಮತ್ತು ಸಂಭ್ರಮಗಳೆರಡೂ ಬೆರೆತ ಮನಸ್ಥಿತಿಯಲ್ಲಿ ಎದುರಾಗುತ್ತಾಳೆ. ‘ಹಾದಾಡುವ ಹೊಸ್ತಿಲಲಿ ಹೊಯ್ದಾಡುವ ದೀಪವು’ ಎನ್ನುವ ನಿತ್ಯ ಹೊಯ್ದಾಟ ಇದು.

ರಾಧೆಯ ಪಾತ್ರವನ್ನು ಸುಮ್ಮನೆ ಕುತೂಹಲಕ್ಕೆಂದು ಭೈರಪ್ಪನವರ ‘ವಂಶವೃಕ್ಷ’ದ ಕಾತ್ಯಾಯಿನಿಯ ಜೊತೆಗಿಟ್ಟು ನೋಡೋಣ. ಸ್ಥಾಪಿತ ಸಂಪ್ರದಾಯದ ವಿರುದ್ಧ ಮರುಮದುವೆಯಾಗುವ ಕಾತ್ಯಾಯಿನಿ ತನ್ನ ಮುಂದಿನ ಬದುಕಿನಲ್ಲಿ ಎಂದೂ ಜೀರ್ಣಿಸಿಕೊಳ್ಳಲಾಗದ, ಹೊರಬರಲಾಗದ ಪಾಪಪ್ರಜ್ಞೆಯಲ್ಲಿ ನರಳುತ್ತಾಳೆ. ಆ ಪಾಪಪ್ರಜ್ಞೆ ಎಷ್ಟು ತೀವ್ರವಾದದ್ದು ಎಂದರೆ ತನ್ನ ಎರಡನೆಯ ಮದುವೆಯಿಂದ ಒಂದು ಮಗುವನ್ನೂ ಪಡೆಯಲಾರದೆ, ಪ್ರತಿಸಲವೂ ಗರ್ಭಸ್ರಾವದ ಆಘಾತಕ್ಕೊಳಗಾಗುತ್ತಾಳೆ. (ಶ್ರೋತ್ರಿಗಳು ಕಟ್ಟಿಕೊಂಡಿದ್ದ ತನ್ನ ವಂಶವೃಕ್ಷದ ಶುದ್ಧತೆಯ, ಶ್ರೇಷ್ಠತೆಯ ಮರಳುಮನೆ ಕುಸಿಯುವುದಕ್ಕೂ ಕಾತ್ಯಾಯಿನಿಯ ಪಾಪಪ್ರಜ್ಞೆಗೂ ಸಂಬಂಧವಿಲ್ಲವೆನ್ನುವಂತೆ ಕಾದಂಬರಿಯ ರಾಚನಿಕ ವಿನ್ಯಾಸವಿದೆ). ಕಾತ್ಯಾಯಿನಿಯ ಸಮಸ್ಯೆ ಇರುವುದು ಪಿತೃಸಂಸ್ಕೃತಿಯ ಮೌಲ್ಯವ್ಯವಸ್ಥೆಯ ಜೊತೆ ತನ್ನನ್ನು ಅಭಿನ್ನವಾಗಿ ಹೆಣೆದುಕೊಂಡಿರುವುದರಲ್ಲಿ. ಅದರಿಂದ ಹೊರಬಂದಿದ್ದೇನೆ ಎನ್ನುವ ಅವಳ ಆಲೋಚನೆ ಕೇವಲ ಭ್ರಮೆ ಎನ್ನುವುದನ್ನು ಕಾದಂಬರಿ ಒತ್ತುಕೊಟ್ಟು ಹೇಳುತ್ತದೆ.

ಉಯ್ಯಾಲೆಯಲ್ಲಿಯೂ ಮೌಲ್ಯವ್ಯವಸ್ಥೆಯ ಜೊತೆಗಿನ ತಿಕ್ಕಾಟವಿದೆ. ಆದರೆ ರಾಧೆಗೆ ಅದರೊಂದಿಗಿನ ಘರ್ಷಣೆ ಎರಡನೆಯದು, ತಾನು ತನ್ನೊಂದಿಗೆ ನಡೆಸುವ ಘರ್ಷಣೆಯೇ ಮೊದಲನೆಯದು. ಕೃಷ್ಣೇಗೌಡನ ಜೊತೆಗಿನ ಸಂಭವನೀಯ ಸಂಬಂಧವನ್ನೋ ಸ್ನೇಹವನ್ನೋ ಅವಳು ಬೇಡವೆಂದು ಕೊಳ್ಳುವುದು ತನಗೆ ಬೇಡವಾಗಿಯೇ ಹೊರತು, ಮೌಲ್ಯ ವ್ಯವಸ್ಥೆಯ ನಿಬಂಧನೆಗೊಳಪಟ್ಟಲ್ಲ. ಅವಳು ತನ್ನ ಮೊದಲ ಮದುವೆ ಮುರಿದುಬಿದ್ದ ನಂತರ ವಿದ್ಯಾಭ್ಯಾಸವನ್ನು ಮುಂದುವರಿಸುವಾಗಲೂ, ಆ ಸಂದರ್ಭದಲ್ಲಿನ ನಾರಾಯಣನೊಂದಿಗಿನ ಪ್ರೀತಿಯ ಸನ್ನಿವೇಶದಲ್ಲೂ ವ್ಯವಸ್ಥೆಯನ್ನು ಎದುರುಹಾಕಿಕೊಳ್ಳುವ ಧೈರ್ಯವಿದ್ದವಳು. ಈಗ ಇಲ್ಲೊಂದು ಮುಖ್ಯವಾದ ಪ್ರಶ್ನೆ ಎದುರಾಗುತ್ತದೆ. ತನ್ನ ಹಿಂದಿನ ಅನುಭವಗಳಿಂದಾಗಿಯೇ ರಾಧೆ ಕೃಷ್ಣೇಗೌಡನ ಸ್ನೇಹ ಬೇಡವೆಂದುಕೊಂಡಳೇ ಎನ್ನುವ ಪ್ರಶ್ನೆಗೆ ಸರಳ ಉತ್ತರ ಕೊಡುವುದು ಕಷ್ಟ. 

ಕುತೂಹಲಕರವಾದ ಸಂಗತಿಯೆಂದರೆ ಚದುರಂಗರು ಜುಲೇಖ ಮತ್ತು ಪ್ರವಾದಿ ಯೂಸುಫ್‌ನ ಪ್ರಸಂಗವನ್ನು ಬಳಸಿಕೊಳ್ಳುವುದು. ಗಂಡು ಹೆಣ್ಣಿನ ನಡುವಿನ ಅದಮ್ಯ ಸೆಳೆತದ ಅನಾದಿತನವನ್ನು ಸ್ಥಾಪಿಸುವಂತಿರುವ ಈ ಪ್ರಸಂಗವನ್ನು ರಾಧೆ ಸ್ವಗತವೋ ಎಂಬಂತೆ ನೆನಪಿಸಿಕೊಳ್ಳುವುದು ಚದುರಂಗರ ಹೆಣ್ಣನ್ನು ಕುರಿತ ಮೂಲದೃಷ್ಟಿಕೋನದ ಸಂಕೇತದಂತಿದೆ. ತಾನು ದತ್ತು ತೆಗೆದುಕೊಳ್ಳಬೇಕಾದ ಹುಡುಗನಾದ ಯೂಸುಫನಲ್ಲಿ ಜುಲೇಖ ಅನುರಕ್ತಳಾಗುತ್ತಾಳೆ. ಇದಕ್ಕೆ ಅವಳಿಗೆ ಶಿಕ್ಷೆಯನ್ನೂ ಕೊಡಲಾಗುತ್ತದೆ.

ಆದರೆ ಇದನ್ನು ಜುಲೇಖ ನಿಭಾಯಿಸುವ ಪರಿ ಹೆಣ್ಣಿನ ಹಕ್ಕನ್ನು ಮಾತ್ರವಲ್ಲ ಗಂಡು ಹೆಣ್ಣಿನ ಸಂಬಂಧದ ಮೂಲಸ್ವರೂಪವನ್ನು ನಿರಾಕರಿಸಲಾಗದ ಸ್ಪಷ್ಟತೆಯಲ್ಲಿ ಮಂಡಿಸುತ್ತದೆ. ಯೂಸುಫ್‌ನ ಬಗೆಗಿನ ತನ್ನ ಸೆಳೆತವನ್ನು ಎಲೆಯಡಿಕೆಯಂತೆ ಜಗಿಯುತ್ತಲೇ ಇದ್ದ ಎಲ್ಲ ಹೆಣ್ಣುಮಕ್ಕಳನ್ನು ಊಟಕ್ಕೆಂಬಂತೆ ಕರೆದು, ತಮಾಷೆಯ ಸಂದರ್ಭವೋ ಎಂಬಂತೆ ತರಕಾರಿ ಹೆಚ್ಚುತ್ತಿರುವವರು ತಾನು ಚಪ್ಪಾಳೆ ತಟ್ಟಿದ ಕೂಡಲೇ ಹೆಚ್ಚುವುದನ್ನು ನಿಲ್ಲಿಸಿ ಎದುರುಗಿರುವುದನ್ನು ನೋಡಬೇಕು ಎನ್ನುತ್ತಾಳೆ. ಅವರು ಹಾಗೆ ನೋಡಿದಾಗ ಎದುರಿಗಿದ್ದದ್ದು ಚೆಲುವ ನಾರಾಯಣನ ಹಾಗಿದ್ದ, ಅಲಂಕೃತ ಯೂಸುಫ್. ತಮ್ಮ ಚಂಚಲಗೊಂಡ ಮನಸ್ಥಿತಿಯಲ್ಲಿ ಆ ಎಲ್ಲಾ ಮಹಿಳೆಯರೂ ಒಂದೊಂದು ಬೆರಳು ಕತ್ತರಿಸಿಕೊಂಡರಂತೆ!

ತನ್ನನ್ನು ಪಾಪಿಷ್ಠೆಯೆಂಬಂತೆ ನೋಡುತ್ತಿರುವ ಸಮುದಾಯದ ಮಹಿಳೆಯರಿಗೆ ಉತ್ತರವೋ ಎಂಬಂತೆ ರಾಧೆ ಈ ಕಥೆಯನ್ನು ನೆನಪಿಸಿಕೊಳ್ಳುತ್ತಾಳೆ. ಈ ಕಥೆ ಒಂದು ರೂಪಕವಾಗಿ, ಉತ್ತರವಾಗಿ, ಸತ್ಯದ ಪ್ರತಿನಿಧಿಯಾಗಿ ಒಂದು ಕಡೆ ಇದ್ದರೆ, ತನ್ನ ಆತ್ಮವೇ, ಅದರ ನಿರ್ಧಾರವೇ ಅಂತಿಮ ಎನ್ನುವುದನ್ನು ಅಖಂಡ ಆತ್ಮವಿಶ್ವಾಸದಲ್ಲಿ ಪ್ರತಿನಿಧಿಸುವ ರಾಧೆ ಇನ್ನೊಂದು ಕಡೆ. ಈ ಎರಡರ ನಡುವೆ ಪಿತೃಸಂಸ್ಕೃತಿ ಅತ್ಯಂತ ದುರ್ಬಲವಾಗಿ, ಅಸಹಾಯಕವಾಗಿ ಕಾಣಿಸುತ್ತದೆ. ಮನಸ್ಸಿನ ಉಯ್ಯಾಲೆಯಲ್ಲಿ ಸರಿ ತಪ್ಪುಗಳನ್ನು ಮೀರಿದ, ನೀತಿ ಅನೀತಿಗಳನ್ನು ದಾಟಿದ ನಿರ್ಧಾರಕ ಶಕ್ತಿಯಾಗಿ ಅಂತಃಸಾಕ್ಷಿಯನ್ನು ರಾಧೆ ಸ್ಥಾಪಿಸುತ್ತಾಳೆ. ಪುರಾಣದ ಕಾಲದಿಂದಲೂ ರಾಧೆ ಪ್ರತಿರೋಧದ ಒಂದು ಶಕ್ತ ಮಾದರಿ. ಪ್ರೀತಿಯ ಅನನ್ಯ ಮಾದರಿಯನ್ನು ಭಕ್ತಿಯ ಜೊತೆಯಲ್ಲಿ ಬೆಸೆದು ತನ್ನ ಅಧಿಕಾರವನ್ನು ಭದ್ರ ಮಾಡಿಕೊಂಡ ಹೆಮ್ಮೆ ಪಿತೃಸಂಸ್ಕೃತಿಯ ಭ್ರಮೆ! ಇದನ್ನು ಉಯ್ಯಾಲೆಯ ರಾಧೆ ಅನುಮೋದಿಸುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT