ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೃಸಂಸ್ಕೃತಿಯ ಸ್ವಯಂದತ್ತ ಧಿಮಾಕು ಧಿಕ್ಕರಿಸುತ್ತ...

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

‘ಇನ್ನು ನಾರಿಯರು ಹುಟ್ಟದೆ ಇರಲಿ ಎನ್ನವೊಲು ಭಂಗಿತರು ಭುವನದೊಳಗೆ’ ಎನ್ನುವುದು ಕುಮಾರವ್ಯಾಸನ ದ್ರೌಪದಿಯ ಮಾತು. ಹೀಗೆನ್ನುವಾಗ ಕುಮಾರವ್ಯಾಸ ಹೆಣ್ಣನ್ನು ಕುರಿತಂತೆ ಪ್ರಗತಿಪರ ದೃಷ್ಟಿಯವನು ಎಂದು ಹೇಳಿಬಿಡಲಾಗುವುದಿಲ್ಲ. ಇದೇ ಕುಮಾರವ್ಯಾಸ

ಹಲವು ಸಂತತಿಗಳಿಗೆ ತಾಯಾಗಿ ಇರುತ
ದೇವ ಬ್ರಾಹ್ಮಣರನು ಸತ್ಕರಿಸುತ್ತಲಂತಃಪುರದಲೆಸೆವ
ಗೃಹಸ್ಥೆಯೆನಿಸುವಳರಸ ಕೇಳ್

ಎಂದೂ ತನ್ನ ಕಾವ್ಯದ ಆರಂಭದಲ್ಲಿ ಹೆಣ್ಣನ್ನು, ಅವಳಿಗೆ ವಿಧಿಸಲಾದ ಚೌಕಟ್ಟಿನಲ್ಲಿ ಅವಳು ‘ಪಂಜರದ ಪಕ್ಷಿ’ಯಾಗಿ ಬದುಕುವುದೇ ಅವಳ ‘ವಿಧಿ’ ಎಂದೂ ಎಗ್ಗಿಲ್ಲದೇ ಘೋಷಿಸುತ್ತಾನೆ. ಆದರೆ ಕಾವ್ಯದ ಆರಂಭದಲ್ಲಿ ತನ್ನ ವ್ಯಕ್ತಿಗತ ದೃಷ್ಟಿಕೋನಗಳಿಗೆ ಬದ್ಧನಾದ ಕುಮಾರವ್ಯಾಸ ಮುಂದೆ ಕವಿಯಾಗಿ ಕಲೆಯ ‘ಮನುಷ್ಯ ನಿಷ್ಠ, ಸತ್ಯ ನಿಷ್ಠ ’ ನಿಷ್ಟುರತೆಗೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳುತ್ತಾನೆ.

ತನ್ನ ಆಯ್ಕೆ ಮತ್ತು ಆದ್ಯತೆಗಳ ಕುಮಾರವ್ಯಾಸನ ಬದಲು ಬದುಕಿನ ಅಪ್ರಿಯ ಸತ್ಯಗಳನ್ನು ತನಗೆ ಬೇಕಾಗಿ ಬೇಡವಾಗಿ ಕಾಣಬಲ್ಲ ‘ಒಳಗಣ್ಣಿನ’ ಕವಿ ಮೇಲುಗೈ ಪಡೆಯುತ್ತಾನೆ. ಆದ್ದರಿಂದಲೇ ದ್ರೌಪದಿಯ ತಲ್ಲಣ, ನೋವು, ವಿಷಾದಗಳು ಕುಮಾರವ್ಯಾಸ ಭಾರತದ ಮುಖ್ಯ ಭಾಗಗಳಾಗುತ್ತವೆ.

ಕಾವ್ಯದ ಕೊನೆಯಲ್ಲಿ ನೂರಾರು ಹೆಣ್ಣುಮಕ್ಕಳು ತಮ್ಮನ್ನು ಅನಾಥರಾಗಿಸಿದ, ವಿಧವೆಯರಾಗಿಸಿದ, ಪರಾಧೀನರಾಗಿ ಇತರರ ಆಕ್ರಮಣಕ್ಕೆ ಒಳಗು ಮಾಡಿದ ಒಟ್ಟಿನಲ್ಲಿ ತಮ್ಮನ್ನು, ತಮ್ಮ ಬದುಕನ್ನು ಅತಂತ್ರರಾಗಿಸಿದ ಯುದ್ಧ ಮತ್ತು ವ್ಯವಸ್ಥೆಯನ್ನು ಕುರಿತ ತಮ್ಮ ಪ್ರತಿರೋಧವನ್ನು ಅರಮನೆಗೆ ಮಣ್ಣನ್ನು ತೂರಿ ತೂರಿ ಶಾಪ ಹಾಕುವುದರ ಮೂಲಕ ವ್ಯಕ್ತಪಡಿಸುತ್ತಾರೆ.

ವ್ಯಕ್ತಿಗತವಾಗಿ ಪುರುಷವಾದಿಯೂ ಪಿತೃಸಂಸ್ಕೃತಿಯ ವಕ್ತಾರನೂ ಪೋಷಕನೂ ಆದ ಕುಮಾರವ್ಯಾಸ ಕವಿಯಾಗಿ ಅದನ್ನು ಮೀರಿಕೊಳ್ಳಲು ಸಾಧ್ಯವಾಗುವುದೇ ಕಲೆಯ ಅಸಾಧಾರಣವಾದ ಶಕ್ತಿ. ಬದುಕು ಮತ್ತು ಮನುಷ್ಯರನ್ನು ಕುರಿತಂತೆ ಅಪ್ಪಟ ನಿಜ–ಸುಳ್ಳುಗಳನ್ನು ಎದುರಾಗುವ ಧೀಮಂತಿಕೆಯನ್ನು ಕಲೆ ಮಾತ್ರ ಕೊಡಬಲ್ಲದು. ಅರಿಸ್ಟಾಟಲ್‌ನ ಮಾತು ‘literature is a universal truth’ ಸಾಹಿತ್ಯವನ್ನು ಕುರಿತ ಆದಿಮ ಮತ್ತು ಸಾರ್ವತ್ರಿಕ ವ್ಯಾಖ್ಯಾನವಾಗುವುದು ಇದೇ ಕಾರಣಕ್ಕೆ. ಕೃತಿ ಮತ್ತು ಕೃತಿಕಾರರು ಕಾಲಾತೀತವಾಗಲು ಬೇಕಾದ ಮೂಲ ಅರ್ಹತೆಗಳನ್ನೂ ಈ ಹೇಳಿಕೆ ಸ್ಪಷ್ಟ ಪಡಿಸುತ್ತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹೆಣ್ಣಿಗೆ ನಿರ್ಬಂಧಿಸಿ, ‘ಸ್ತ್ರೀ ರೂಪಮೆ ರೂಪಂ’ ಎಂದು ಹೆಣ್ಣನ್ನು ತಮ್ಮ ಸಾಹಿತ್ಯದಲ್ಲಿ ‘ವಸ್ತು ವಿಶೇಷ’ ಮಾತ್ರವಾಗಿಸಿ ಅವಳ ನಡು ನಿತಂಬಗಳನ್ನು, ಘನ ಸ್ತನಗಳನ್ನು ಬಣ್ಣಿಸಿ ಬಣ್ಣಿಸಿ ತೃಪ್ತರಾಗದ ಲೇಖಕರಿಗೆ ಕೊನೆಮೊದಲಿಲ್ಲವಷ್ಟೆ. ಆದರೆ ಕಾಲದ ಅಗ್ನಿಪರೀಕ್ಷೆಯಲ್ಲಿ ಗೆದ್ದು ಉಳಿಯುವವರು ತಮ್ಮ ಕಾಲದ ತಮ್ಮ ವ್ಯಕ್ತಿಗತವಾದ ಮಿತಿ ಮತ್ತು ವಿಕಾರಗಳನ್ನು ಕಲೆಯ ಪರವಶ ಗಳಿಗೆಯಲ್ಲಿ ಮೀರಿಕೊಳ್ಳುವವರು ಮಾತ್ರ.

ಇದು ಹೆಣ್ಣನ್ನು ಕುರಿತಂತೆ ಇರಬಹುದು, ಜಾತಿ, ಧರ್ಮ ಮತ್ತು ವರ್ಗಗಳನ್ನು ಕುರಿತಂತೆ ಇರಬಹುದು. ಸಮುದಾಯದ ಯಾವುದೇ ದೌರ್ಬಲ್ಯಗಳನ್ನು, ವಿಕಾರಗಳನ್ನು ಕುರಿತಂತೆಯೂ ಇರಬಹುದು. ತನ್ನ ಕಾಲಕ್ಕೆ ತೀವ್ರವಾಗಿ ಸ್ಪಂದಿಸುತ್ತಲೇ ಅದನ್ನು ದಾಟಿದ ಪರಮ ಸತ್ಯಗಳನ್ನು ಕುರಿತ ಶೋಧವೆಂದರೆ ಕಲೆ.

ಗಂಡು ಮತ್ತು ಹೆಣ್ಣಿನ ಸ್ವಭಾವಗಳ ಅನನ್ಯತೆಯನ್ನೂ ಅವರ ದೌರ್ಬಲ್ಯ ಮತ್ತು ಅಸಂಗತತೆಗಳನ್ನೂ ಚಿತ್ತ ವಿಕಾರವಿಲ್ಲದೆ ಕಾಣಬಲ್ಲ, ಜೀವನದ ನಿಗೂಢತೆ ಮತ್ತು ಮೋಹಕತೆಗಳನ್ನು, ದುರಂತ ಮತ್ತು ಅಪರಿಹಾರ್ಯ ಸಂಗತಿಗಳನ್ನು ‘ಇದು ಬಾಳು ನೋಡು, ಇದ ತಿಳಿವೆನೆಂದರೂ ತಿಳಿದ ಧೀರನಿಲ್ಲ’ ಎನ್ನುವ ಅನಂತತೆಯ ವಿಸ್ತಾರದ ಹಿನ್ನೆಲೆಯಲ್ಲಿ ಕೃತಿ ಓದುಗರನ್ನು ಆವರಿಸಿಕೊಳ್ಳುತ್ತದೆ.

ಕಲೆಯನ್ನು ಮತ್ತು ಕಲಾ ಪಠ್ಯಗಳನ್ನು ಕುರಿತಂತೆ ಕೊನೆಯಿಲ್ಲದ ಮತ್ತು ಪರ್ಯಾಯವೇ ಇಲ್ಲ ಎನ್ನುವ ಮಟ್ಟಿನ ಗೌರವ, ನಂಬಿಕೆ ಮಾತ್ರವಲ್ಲ ಒಂದು ಮಟ್ಟದ ಭಯವೂ ಎಲ್ಲ ಕಾಲಕ್ಕೂ ಪಟ್ಟಭದ್ರರಿಗೆ ಇರುವುದರ ಮೂಲ ಇದೇ. ಈ ಎಲ್ಲವನ್ನೂ ಮಾಡುತ್ತಿರುವ ಯಾವ ಘಳಿಗೆಯಲ್ಲೂ ಕಲಾ ಪಠ್ಯ ಓದುಗರಿಗೆ ವ್ಯಕ್ತಿಗಳ ಬಗ್ಗೆ, ಬದುಕಿನ ಬಗ್ಗೆ ಜಿಗುಪ್ಸೆಯನ್ನಾಗಲೀ ಅಸಹ್ಯವನ್ನಾಗಲೀ ಸೃಷ್ಟಿಸುವುದಿಲ್ಲ.

ಮುಕ್ಕಾಗದ ಜೀವ–ಜೀವನ ಪ್ರೀತಿಯನ್ನು ಕಟ್ಟಿಕೊಡದ್ದು ಎಂದಿಗೂ ಕಲೆಯಾಗದು. ಕಲಾಕಾರರು ತಮ್ಮ ಅನುಭವಗಳ ಹಿನ್ನೆಲೆಯಲ್ಲಿ, ತಮ್ಮ ಗ್ರಹಿಕೆಯ ತಾತ್ವಿಕತೆಯ ಹಿನ್ನೆಲೆಯಲ್ಲಿ ಕೃತಿಗಳನ್ನು ರಚಿಸುತ್ತಾರೆ ಎನ್ನುವುದು ನಿಜ. ಆದರೆ ಅವರ ಅನುಭವ ಮತ್ತು ತಾತ್ವಿಕತೆಯ ವಿಕಾರಗಳು ಜೀವ ವಿರೋಧಿಯಾಗದ ಎಚ್ಚರವೂ ಅವರಿಗಿರಬೇಕು. ಎಂದರೆ ಶ್ರೇಷ್ಠ ಲೇಖಕ/ಲೇಖಕಿಯರನ್ನು ‘ತಯಾರು’ ಮಾಡಲಾಗುವುದಿಲ್ಲ, ‘ಹೇರಲೂ’ ಆಗುವುದಿಲ್ಲ. ಅವರು ‘ಆಗುತ್ತಾರೆ’ ಮತ್ತು ‘ಇರುತ್ತಾರೆ’.

ಈ ಮಾತುಗಳ ಹಿನ್ನೆಲೆಯನ್ನು ವಿವರಿಸುವ ಅವಶ್ಯಕತೆಯೇ ಇಲ್ಲವೇನೋ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ‘ಮೌಢ್ಯಗಳು ಮತ್ತು ಮಾಧ್ಯಮಗಳ ಹೊಣೆಗಾರಿಕೆ’ಯ ಬಗ್ಗೆ ಮಾತನಾಡಬೇಕಾದ ಹೊತ್ತಿನಲ್ಲಿ ಹೆಣ್ಣನ್ನು ಕುರಿತಂತೆ ಶ್ರೀ ಎಸ್.ಎಲ್. ಭೈರಪ್ಪನವರ ಬರವಣಿಗೆಯ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ನನ್ನ ಅಭಿಪ್ರಾಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ.

ಲೇಖಕರೊಬ್ಬರ ಸಾಹಿತ್ಯದ ಸ್ತ್ರೀ ನಿಲುವುಗಳನ್ನು ಪ್ರಶ್ನಿಸಿದ್ದೇ ಮಹಾಪರಾಧವಾಗಿ ಅನಾಗರಿಕರು ಮಾತ್ರವೇ ಬಳಸಬಹುದಾದ ಭಾಷೆಯಲ್ಲಿ ಆ ಹೆಣ್ಣುಮಕ್ಕಳ ಹೆಸರುಗಳನ್ನು ವಿಕಾರಗೊಳಿಸಿ ಬರೆಯುವುದನ್ನು ನಾಗರಿಕತನವೆಂದು ಯಾರೂ ಒಪ್ಪಲು ಸಾಧ್ಯವಿಲ್ಲ.

ಸಾಹಿತ್ಯಕ ಚರ್ಚೆಯೊಂದನ್ನು ಕೀಳು ವ್ಯಕ್ತಿಗತ ಪ್ರತಿಕ್ರಿಯೆಗೆ ಸೀಮಿತಗೊಳಿಸುವುದು ಹೆಣ್ಣಿಗೆ ಮಾಡುವ ಅವಮಾನ ಮಾತ್ರವಲ್ಲ– ಸಾಹಿತ್ಯಕ್ಕೆ, ಮಾನವೀಯತೆಗೆ ಮಾಡುವ ಅಪಚಾರ. (ಒಂದು ಸ್ಪಷ್ಟನೆಯನ್ನು ಇಲ್ಲೆ ಕೊಡಬಹುದು. ಶ್ರೀ ಭೈರಪ್ಪನವರು ಮನುಷ್ಯರೇ ಅಲ್ಲವೆಂದು ನಾನು ಹೇಳಿದ್ದಾಗಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದೆ. ಒಬ್ಬರನ್ನು ಮನುಷ್ಯರಲ್ಲವೆಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ನಾನು ಹೇಳಿದ್ದು ಅವರನ್ನು ‘ನಾಗರಿಕ ಮನುಷ್ಯ’ರೆಂದು ಒಪ್ಪಲು ಸಾಧ್ಯವಿಲ್ಲ ಎಂದು).

ಲೇಖಕರೊಬ್ಬರು ಕೌಟುಂಬಿಕ ವಿಘಟನೆಯನ್ನು ಚಿತ್ರಿಸುವ ಘೋಷಿತ ಆಶಯದ ತಮ್ಮ ಕೃತಿ ‘ಕವಲು’ವಿನಲ್ಲಿ ಪ್ರತಿಶತ 50ರಷ್ಟಿರುವ ಮಹಿಳೆಯರು ವಿದ್ಯಾವಂತರಾಗಿರುವುದು ಮತ್ತು ಉದ್ಯೋಗಸ್ಥರಾಗಿರುವುದು ಇದರ ಮೂಲ ಕಾರಣ ಎನ್ನುವ ಏಕಮುಖ ತೀರ್ಮಾನವನ್ನು ಕೃತಿಯುದ್ದಕ್ಕೂ ಪ್ರತಿಪಾದಿಸುತ್ತಾ ಹೋಗುತ್ತಾರೆ.

ಉದ್ಯೋಗಸ್ಥ ಮಹಿಳೆಯರು ತಮ್ಮ ಸಕಲ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ತಮ್ಮ ದೇಹವನ್ನು ಬಂಡವಾಳವಾಗಿ ಹೂಡುತ್ತಾ ಹೋಗುತ್ತಾರೆ ಎನ್ನುವ ಮೂಲಕ ಕೌಟುಂಬಿಕ ವಿಘಟನೆಗೆ ಹೆಣ್ಣೇ ಕಾರಣ ಎನ್ನುವುದನ್ನು ಹೇಗೆ ತಾತ್ವಿಕತೆ ಎಂದು, ಸಾಮಾಜಿಕ ಸತ್ಯವೆಂದು, ಶೋಧವೆಂದು ಒಪ್ಪುವುದು? ಕೃತಿಯ ನಾಯಕ ಜಯಕುಮಾರನ ತಾಯಿಯೊಬ್ಬಳನ್ನು ಹೊರತುಪಡಿಸಿ ಮಿಕ್ಕವರನ್ನೆಲ್ಲ ಕೃತಿಕಾರರು ದೇಹ ಮಾರಿಕೊಳ್ಳುವ ಗುಂಪಿಗೇ ಸೇರಿಸುತ್ತಾರೆ.

ಸ್ವಾರ್ಥ, ಲಜ್ಜೆಗೇಡಿತನ, ದುರಾಸೆ, ತಮ್ಮ ಅನುಕೂಲಕ್ಕಾಗಿ ಏನು ಬೇಕಾದರೂ ಮಾಡುವ ದುಷ್ಟತನ ಮಹಿಳೆಯರಿಗೆ ಮಾತ್ರ ಸೀಮಿತವೆ? ಈ ಎಲ್ಲವೂ ಗಂಡಿನಲ್ಲಿ ಹೆಣ್ಣಿನಷ್ಟೇ ಪ್ರಮಾಣದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಮಾತ್ರವಲ್ಲ ಅದನ್ನು ಚಲಾಯಿಸುವ ಎಲ್ಲ ಸವಲತ್ತಿನ ‘ಮೌಲ್ಯ ವ್ಯವಸ್ಥೆಯೇ’ ಅವರಿಗಾಗಿ ಸರ್ವದಾ ಸಜ್ಜಾಗಿ ನಿಂತಿಲ್ಲವೆ?

‘ವಂಶ ವೃಕ್ಷ’ದ ಕಾತ್ಯಾಯಿನಿ ವಿಧವಾ ವಿವಾಹ ಮಾಡಿಕೊಂಡ ಪಾಪಪ್ರಜ್ಞೆಗಾಗಿ ಜೀವವನ್ನೇ ಬಲಿಕೊಡುವ ‘ಶೋಧ’ದ ಮುಂದುವರಿಕೆಯೇ ‘ಕವಲು’ ಅಲ್ಲವೆ? ಹೆಣ್ಣು ಪಾಪ ಪ್ರಜ್ಞೆಯಿಂದ ನರಳಲು ಬೇಕಾಗುವ ಒಂದಿಲ್ಲೊಂದು ಕಾರಣವನ್ನು ಮುಂದಿಡುವ ದೃಷ್ಟಿಕೋನವನ್ನು ಜೀವಪರ ಎಂದು ಕರೆಯಲಾಗದು. ಇಂಥ ಜೀವವಿರೋಧಿ ನಿಲುವುಗಳು ಕಲೆಯ ಮೂಲ ಧಾತುವಾದ ಜೀವಪರತೆಯನ್ನು ಧಿಕ್ಕರಿಸುತ್ತವೆ.ಇಲ್ಲಿರುವ ಪ್ರಶ್ನೆ, ವ್ಯಕ್ತಿಗತವಾಗಿ ಹೆಣ್ಣು ಮಾಡಬಹುದಾದ, ತುಳಿಯಬಹುದಾದ ತಪ್ಪು ದಾರಿಯದಲ್ಲ.

ಗಂಡಾಗಲಿ ಹೆಣ್ಣಾಗಲಿ ತಮ್ಮ ದೌರ್ಬಲ್ಯದ ಅಸಹಾಯಕತೆಯ ಘಳಿಗೆಯಲ್ಲಿ ತುಳಿಯಬಾರದ ದಾರಿಯನ್ನು ತುಳಿದಿರುವುದನ್ನು ಚಿತ್ರಿಸುವುದು ಕಲೆಯ ಸಹಜ ದಾರಿ. ಆದರೆ ಇದಲ್ಲದೆ ಹೆಣ್ಣಿಗೆ ಇನ್ನೊಂದು ದಾರಿಯ ಪರಿಚಯವೇ ಇಲ್ಲವೆನ್ನುವ ಹಾಗೆ, ಕೊನೆಗೆ ಅವರ ‘ಯಾನ’ ಕಾದಂಬರಿಯಲ್ಲಿ ಹೆಣ್ಣು ‘ಅತ್ಯಾಚಾರವನ್ನು ಸುಖಿಸುತ್ತಾಳೆ’ ಎನ್ನುವುದು ವಿಕೃತವಲ್ಲದಿದ್ದರೆ, ಪಿತೃಸಂಸ್ಕೃತಿಯ ಅಧಿಕಾರಸ್ಥ ಭಂಡತನದ ನಿಲುವಲ್ಲದಿದ್ದರೆ ಮತ್ತೇನೆಂದು ಇದನ್ನು ಅರ್ಥೈಸಬೇಕು? ಇದನ್ನು ಕೇವಲ ಮಹಿಳಾ ವಿರೋಧಿಯೆಂದು ಕರೆಯುವುದೂ ತಪ್ಪು.

ಮೂಲತಃ ಇದು ಜೀವ ವಿರೋಧಿಯೆಂದೇ ಭಾಸವಾಗುತ್ತದೆ. ಹೆಣ್ಣನ್ನು ಕುರಿತ ಅವರ ಗ್ರಹಿಕೆ ಅವರ ಬರವಣಿಗೆಯ ಆರಂಭದಿಂದ ಇಂದಿನ ತನಕವೂ ನಿರಂತರವಾಗಿ ಒಂದೇ ಆಗಿದೆ ಮತ್ತು ಅದು ಅವಳನ್ನು ಅವಳ ನಿಜದಲ್ಲಿ, ಘನತೆಯಲ್ಲಿ ಗುರುತಿಸುವುದರಲ್ಲಿಯೂ ಅಷ್ಟೇ ನಿರಂತರವಾಗಿ ಸೋತಿದೆ ಎಂದೇ ಪ್ರಶ್ನೆಗಳು ಅನಿವಾರ್ಯವಾಗಿ ಏಳುತ್ತವೆ.

ಈ ಪ್ರಶ್ನೆಗಳನ್ನು ಸಾಹಿತ್ಯದ ನೆಲೆಯಲ್ಲಿ ಚರ್ಚಿಸುವುದು ಅಗತ್ಯ. ಇದನ್ನು ಬಿಟ್ಟು ಪ್ರಶ್ನೆ ಎತ್ತಿದವರ ಹೆಸರುಗಳನ್ನು ವಿಕಾರಗೊಳಿಸುವುದು ತತ್ವಜ್ಞಾನದ ಕ್ರಮವೂ ಅಲ್ಲ, ಸಮಾಜೋ ರಾಜಕೀಯ ಕ್ರಮವೂ ಅಲ್ಲ, ಸಾಹಿತ್ಯದ ಕ್ರಮವಂತೂ ಅಲ್ಲವೇ ಅಲ್ಲ. ‘ನಾರೀಕೇಳಾ’ದ ತಪ್ಪು ಒಪ್ಪುಗಳನ್ನು ಏಕಮುಖವಾಗಿ ವಿಕೃತ ದೃಷ್ಟಿಕೋನದಿಂದ ಚರ್ಚಿಸುವುದು ಸಾಧ್ಯವಿಲ್ಲ. ಅದಕ್ಕೆ ತೆರೆದ ಮನಸ್ಸು, ಮನುಷ್ಯರೆಲ್ಲರೂ ಒಂದೆ ಎನ್ನುವ ಮೂಲಭೂತ ನಾಗರಿಕ ದೃಷ್ಟಿಕೋನ ತೀರ ಅಗತ್ಯ.

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಪ್ರಕರಣಗಳು ಭಯ ಹುಟ್ಟಿಸುವ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಅತ್ಯಾಚಾರ ಮಾಡಿದವರನ್ನು ಬಹಿಷ್ಕರಿಸುವ ಬದಲು ಆಕ್ರಮಣಕ್ಕೆ ಒಳಗಾದವರನ್ನು ಬಹಿಷ್ಕರಿಸುವ ಅಥವಾ ಅವರನ್ನು ಮರುಕದಿಂದ, ತಿರಸ್ಕಾರದಿಂದ ನೋಡುವ ದೃಷ್ಟಿಕೋನವು ಸನಾತನ ಧರ್ಮದಷ್ಟೇ ಪ್ರಾಚೀನವಾದುದು. ಹೆಣ್ಣನ್ನು ನಿಯಂತ್ರಿಸುವ ಕ್ರೂರ ಹುನ್ನಾರವಾಗಿರುವ ಅತ್ಯಾಚಾರವು ನಿಜದಲ್ಲಿ ಗಂಡು ತನಗೆ ತಾನೇ ಮಾಡಿಕೊಳ್ಳುವ ಅವಮಾನ ಮತ್ತು ಮಾನವೀಯತೆಗೆ ಎಸಗುವ ಅಪಚಾರ.

ಸತ್ಯ ಹೀಗಿರಲಾಗಿ, ಮಠಾಧೀಶರೊಬ್ಬರು ಅತ್ಯಾಚಾರಕ್ಕೊಳಗಾಗುವ ಮುನ್ನ ಆ ಹೆಣ್ಣು ಆ ಪುರುಷೋತ್ತಮನಿಗೆ ‘ಅಣ್ಣಾ, ತಂದೇ ಎಂದು ಗೋಗರೆದಿದ್ದರೆ ಆತನಿಗೆ ಮನಸ್ಸು ಕರಗಿ ಆತ ಸುಮ್ಮನಾಗಿ ಬಿಡುತ್ತಿದ್ದ’ ಎಂದರೆ ಶ್ರೀ ಎಸ್.ಎಲ್. ಭೈರಪ್ಪನವರು ‘ಮಹಿಳೆಯರು ಅತ್ಯಾಚಾರವನ್ನು ಆನಂದಿಸುತ್ತಾರೆ’ ಎನ್ನುತ್ತಾರೆ. ಈ ವಿಷಯ ಚರ್ಚೆ ಮಾಡಬೇಕು ಅಂದರೆ, ಹೆಣ್ಣು ಮಕ್ಕಳು ಖ್ಯಾತಿಯ ಸಲುವಾಗಿ ಹೀಗೆ ಮಾಡುತ್ತಾರೆ ಎಂದು ಗೇಲಿ ಮಾಡಲಾಗುತ್ತದೆ.

ಇರಲಿ, ಈ ಬಾರಿ ಹಿಂದಿಯ ಖ್ಯಾತ ಲೇಖಕಿ ಚಿತ್ರಾ ಮುದ್ಗಲ್‌ರ ಒಂದು ಕಥೆ ‘ಪ್ರೇತ ಯೋನಿ’ಯನ್ನು ಚರ್ಚಿಸಬಹುದು. ಇಡೀ ಕಥೆ ಅತ್ಯಾಚಾರಕ್ಕೆ ಒಳಗಾದ ಅನಿತಾ ಗುಪ್ತಾ ಎನ್ನುವ ಹೆಣ್ಣುಮಗಳ ಹೋರಾಟವನ್ನೂ ಅತ್ಯಾಚಾರವನ್ನು ಸಮಾಜ, ಕುಟುಂಬ ಮತ್ತು ವ್ಯವಸ್ಥೆ ಹೇಗೆ ನಿರ್ವಹಿಸುತ್ತದೆ ಎನ್ನುವುದನ್ನೂ ಹೇಳುತ್ತದೆ. ಅತ್ಯಾಚಾರದ ಆಕ್ರಮಣಕ್ಕೆ ಒಳಗಾಗುವ ಹೆಣ್ಣೇ ಶಿಕ್ಷೆಗೆ ಒಳಗಾಗುವ ವಿಪರ್ಯಾಸವನ್ನು ಈ ಕಥೆ ಪರಿಣಾಮಕಾರಿಯಾಗಿ ಹೇಳುತ್ತದೆ.

ರೈಲು ಅಪಘಾತವೊಂದರ ನಂತರ ಅತ್ಯಾಚಾರಕ್ಕೆ ಒಳಗಾಗುವ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಹುಡುಗಿಯಾದ ಅನಿತಾ ಅಂಥ ಸನ್ನಿವೇಶದಲ್ಲೂ ಸ್ಥೈರ್ಯ ಕಳೆದುಕೊಳ್ಳದೇ ಪೊಲೀಸರಿಗೆ ದೂರು ನೀಡಿ ಮನೆ ತಲುಪುತ್ತಾಳೆ. ಪೊಲೀಸರು ಇವಳ ಧೈರ್ಯವನ್ನು ಮೆಚ್ಚಿ ಬೆನ್ನು ತಟ್ಟಿದರೆ, ಅಲ್ಲಿಗೆ ಬಂದ ತಂದೆ ಅವರೆದುರಿಗೆ ಅನಿವಾರ್ಯವಾಗಿ ತಾನೂ ಮಗಳನ್ನು ಮೆಚ್ಚಿಕೊಳ್ಳುತ್ತಾನೆ. ಮನೆಗೆ ಬಂದ ಕೂಡಲೇ ತಂದೆ ತಾಯಿಯ ವರ್ತನೆಗಳೇ ಊಹಾತೀತವಾಗಿ ಬದಲಾಗಿ ಆ ಹುಡುಗಿಯನ್ನು ‘ನಜರ್ ಬಂದ್’ನಲ್ಲಿ  ಇಡಲಾಗುತ್ತದೆ.

ಅತ್ಯಾಚಾರಕ್ಕೆ ಒಳಗಾದವಳು ಅವಳಲ್ಲ ಎಂದೇ ಎಲ್ಲ ಕಡೆ ಸುದ್ದಿ ಹಬ್ಬಿಸಲಾಗುತ್ತದೆ. ಅವಳು ಅವಳ ಅಕ್ಕನ ಮನೆಗೆ ಹೋಗಿದ್ದಾಳೆ ಎನ್ನುವ ಸುದ್ದಿಯನ್ನೂ, ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಎಷ್ಟೋ ಅನಿತಾ ಗುಪ್ತಾ ಇರಬಹುದು ಎನ್ನುವುದನ್ನೂ  ವ್ಯವಸ್ಥಿತವಾಗಿ ಹರಡಲಾಗುತ್ತದೆ. ಆ ಹುಡುಗಿ ತನ್ನ ರೂಮು ಬಿಟ್ಟು ಬರದಂತೆ ಫತ್ವಾ ಹೊರಡಿಸಲಾಗುತ್ತದೆ. ತಾಯಿಗೆ ಇವಳು ಗರ್ಭಿಣಿಯಾಗಿಬಿಟ್ಟರೆ ಎನ್ನುವ ಆತಂಕ. ಯಾವುದೋ ಕಷಾಯ ಕುಡಿಸುವ ಪ್ರಯತ್ನವನ್ನೂ ಮಾಡುತ್ತಾಳೆ.

ಆಗ ಅನಿತಾಗೆ ತಾನು ದೈಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಕ್ಕಿಂತ ಹೆಚ್ಚಿನ ಅವಮಾನ ಮತ್ತು ಹಿಂಸೆ ತನ್ನ ಪ್ರೀತಿಪಾತ್ರರಿಂದಲೇ ಆಗುತ್ತಿದೆ ಎನ್ನುವ ಸತ್ಯದ ಅರಿವಾಗುತ್ತದೆ. ತಾಯಿಯ ಬಳಿ ನೀವು ನಿರೀಕ್ಷಿಸುತ್ತಿರುವಂಥದ್ದು ಆಗಿಲ್ಲ ಎಂದು ಎಷ್ಟು ಹೇಳಿದರೂ ತಾಯಿ ಕೇಳದೇ ಕಷಾಯ ಕುಡಿಸಲು ಮುಂದಾದಾಗ ಅನಿತಾ ತೀವ್ರವಾಗಿ  ವಿರೋಧಿಸುತ್ತಾಳೆ. ತಾಯಿಯೂ ಕೋಪಾವೇಶದಿಂದ ಅನಿತಾಳ ಮೇಲೆ ದೈಹಿಕ ಹಲ್ಲೆ ನಡೆಸಿ ಹೊಡೆಯುತ್ತಾಳೆ.

ತಾಯಿಯೇ ತನ್ನ ಮೇಲೆ ನಡೆಸಿದ ಆಕ್ರಮಣದಿಂದ ಅಪ್ರತಿಭಳಾದ ಅನಿತಾ ದುಃಖ, ವಿಷಾದ, ಅಸಹಾಯಕತೆಯಲ್ಲಿ ನೇಣು ಹಾಕಿಕೊಳ್ಳಲು ತೀರ್ಮಾನಿಸುತ್ತಾಳೆ. ಅಂಥ ಕ್ಷಣದಲ್ಲಿ ಅವಳ ಕಣ್ಣಿಗೆ ಪೇಪರ್‌ನ ತುಂಡು ಬೀಳುತ್ತದೆ. ಅದರಲ್ಲಿ ವಿಶ್ವವಿದ್ಯಾಲಯದ ಅವಳ ಗೆಳತಿಯರು – ಗೆಳೆಯರು ಅತ್ಯಾಚಾರಿ ಆಟೊದವನನ್ನು ಬಂಧಿಸುವಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಸತ್ಯಾಗ್ರಹ ಮಾಡುವ ಚಿತ್ರ ಕಣ್ಣಿಗೆ ಬೀಳುತ್ತದೆ.

ತನ್ನ ಆತ್ಮಹತ್ಯೆ ಆ ಮಿತ್ರರಿಗೆ ಮಾಡುವ ಅವಮಾನ ಎನ್ನುವ ಸತ್ಯ ಹೊಳೆದದ್ದೇ ಸಾಯುವ ತೀರ್ಮಾನ ಕೈ ಬಿಡುತ್ತಾಳೆ. ಅವಳ ಕಣ್ಣೆದುರಿಗೆ ಮರುದಿನ ತಾನೂ ಅವರ ಜೊತೆ ಸತ್ಯಾಗ್ರಹ ಮಾಡುವ ಚಿತ್ರ ಕಾಣಿಸುತ್ತದೆ. ಮನೆಯಿಂದ ಪಾರಾಗಿ ತನ್ನ ಬದುಕನ್ನು ತಾನು ಕಟ್ಟಿಕೊಳ್ಳುವ ತೀರ್ಮಾನದ ಮೂಲಕ ಅನಿತಾ ಹೊಸ ಬದುಕಿನ ಕಡೆಗೆ ಹೆಜ್ಜೆಯಿಡುವ ತೀರ್ಮಾನ ಮಾಡುತ್ತಾಳೆ.

ಅತ್ಯಾಚಾರ ಎನ್ನುವುದು ಬಹುತೇಕ ಹೆಣ್ಣುಮಕ್ಕಳಿಗೆ ಬದುಕನ್ನು ಅರ್ಧಕ್ಕೆ ನಿಂತ ಚಿತ್ರದ ಹಾಗೆ, ಗಕ್ಕನೆ ನಿಂತ ಸಂಗೀತದ ಹಾಗೆ ಮಾಡುತ್ತದೆ. ಹಾಗೇ ಆಗಬೇಕು ಎನ್ನುವುದು ಮೌಲ್ಯವ್ಯವಸ್ಥೆಯ ನಿರೀಕ್ಷೆಯೂ ಹೌದು. ಅದಕ್ಕೆ ವ್ಯತಿರಿಕ್ತವಾಗಿ ಅನಿತಾ ಇಲ್ಲಿ ಮತ್ತೆ ಬದುಕಿಗೆ ಮರಳುವ ನಿಲುವಿಗೆ ಬರುವುದು ಓದುಗರ ಮನಸ್ಸಿಗೆ ಸಮಾಧಾನವನ್ನು ನೀಡುತ್ತದೆ.

​ ಅತ್ಯಾಚಾರದಲ್ಲಿನ ಅವಳ ಅನುಭವವನ್ನು, ಅದನ್ನು ಎದುರಿಸುವ ಬಗೆಯನ್ನು ಹೆಣ್ಣಿಗೆ ಯಾರೂ ಕಲಿಸಿಕೊಡಬೇಕಿಲ್ಲ. ಆದರೆ ಪಿತೃಸಂಸ್ಕೃತಿ ತನ್ನ ಸ್ವಯಂದತ್ತ ಧಿಮಾಕಿನಲ್ಲಿ ತನ್ನ ವಿಕೃತ ಅಪೇಕ್ಷೆಗೆ ತಕ್ಕಂತೆ ವ್ಯಾಖ್ಯಾನಿಸಿ ಸಂಭ್ರಮ ಪಡುತ್ತದೆ.

ಈಶಾನ್ಯ ಭಾರತದಲ್ಲಿ ಮಹಿಳೆಯರ ಮೇಲಿನ ಆಕ್ರಮಣ ವಿರೋಧಿಸಿ ಉಪವಾಸ ಕೂತರೆ, ಹಿರಿಯ ಮಿಲಿಟರಿ ಅಧಿಕಾರಿ ಅವರನ್ನು ಕರೆಸಿ, ‘what do you think you are? after all a pair of breasts and a vagina?’ ಎಂದನಂತೆ. ನಾಗರಿಕತೆ ಯನ್ನು, ಮಾನವ ಘನತೆಯನ್ನು ಹೆಣ್ಣಿನ ಮಟ್ಟಿಗೆ ನಿರೀಕ್ಷಿಸುವುದೇ ಅಪರಾಧವೆ?

ಕುಮಾರವ್ಯಾಸನ ಉದಾಹರಣೆಯನ್ನು ತೆಗೆದುಕೊಂಡದ್ದು ಮೂಲಭೂತವಾಗಿ ಒಂದು ‘ಕಲಾಪಠ್ಯ’ ಎನ್ನುವುದರ ವ್ಯಾಖ್ಯಾನವನ್ನು ಕಟ್ಟಿಕೊಳ್ಳಲು.

****
ಚಿತ್ರಾ ಮುದ್ಗಲ್ ಭಾರತದ ಪ್ರಮುಖ ಲೇಖಕಿ. ಮೂಲತಃ ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಎಡಪಂಥೀಯ

ತಾತ್ವಿಕತೆಯ ಈ ಲೇಖಕಿ ತಮ್ಮ ಎರಡನೆಯ ಘಟ್ಟದಲ್ಲಿ ಅಪ್ಪಟ ಮಾನವತಾವಾದಿಯ ಹಾಗೆ ಕಾಣಿಸುತಾರೆ.

ಕಾರ್ಮಿಕ ವಲಯದ, ಮಾನವ ಹಕ್ಕುಗಳ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಚಿತ್ರಾ ಮುದ್ಗಲ್. ಪಟ್ಟಭದ್ರ ಶಕ್ತಿಗಳ ಹುನ್ನಾರಗಳನ್ನು, ಲಿಂಗತಾರತಮ್ಯ ವನ್ನು, ಅವುಗಳ ನೂರಾರು ರೂಪಗಳನ್ನು ಮಾನವತೆಯ ನೇಪಥ್ಯದಲ್ಲಿ ಚಿತ್ರಾ ಗುರುತಿಸುತ್ತಾರೆ.

ಆಕ್ರೋಶದ ಬದಲು ಮಾನವೀಯತೆಯ ದುರಂತದ ಇವರ ದೄಷ್ಟಿಕೋನ ಇವರ ಸಾಹಿತ್ಯಕ್ಕೆ ವಿಶಿಷ್ಟತೆಯನ್ನು , ಮಹತ್ವವನ್ನು ತಂದು ಕೊಟ್ಟಿದೆ. ‘ಆವಾಂ’, ‘ಗಿಲಿಗಡು’, ‘ಏಕ್ ಜಮೀನ್ ಅಪನಿ’ ಅವರ ಪ್ರಸಿದ್ಧ ಕೃತಿಗಳು. ಚಿತ್ರಾ ಅವರ ಅನೇಕ ಸಣ್ಣಕಥೆಗಳು ವಿವಿಧ ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT