ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾವಣಿ ನೀರಿನಿಂದ ಹಸಿರಾದ ಕೈತೋಟ

ಅಂಗಳದಲ್ಲಿ ನಿರ್ಮಿಸಿದ 16 ಸಾವಿರ ಲೀಟರ್ ಸಾಮರ್ಥ್ಯದ ಟಾಕಿ (ಸಂಪ್‌) ಯಲ್ಲಿ ನೀರು ಸಂಗ್ರಹ
Last Updated 22 ಏಪ್ರಿಲ್ 2017, 7:20 IST
ಅಕ್ಷರ ಗಾತ್ರ
ಶಿರಸಿ: ಮನೆಯ ಚಾವಣಿ ಮೇಲೆ ಬಿದ್ದ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಂಡಿರುವ ಎಂಜಿನಿಯರೊಬ್ಬರು ಈ ಬಿರು ಬೇಸಿಗೆಯಲ್ಲೂ ಕೈತೋಟದ ಗಿಡಗಳಿಗೆ ಭರಪೂರ ಜೀವಜಲ ಉಣಿಸುತ್ತಾರೆ.
 
ಇಲ್ಲಿನ ಗುರು ನಗರದ ನಿವಾಸಿ ಶ್ರೀಕಾಂತ ಹೆಗಡೆ ತಮ್ಮ ಮನೆಯಲ್ಲಿ ಸರಳ ತಂತ್ರಜ್ಞಾನದ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ.
 
‘ಟೆರೇಸ್‌ ಮೇಲೆ ಬಣ್ಣದ ಶೀಟ್ ಹಾಕಿ ಅದರ ಕೊನೆಯಲ್ಲಿ ಹರಣಿಯನ್ನು ವ್ಯವಸ್ಥಿತವಾಗಿ ಜೋಡಿಸಬೇಕು. ಹರಣಿಯಲ್ಲಿ ಹರಿದು ಬರುವ ನೀರು ನೇರವಾಗಿ ಅಂಗಳದಲ್ಲಿರುವ ಮೊದಲ ಚೇಂಬರ್‌ನಲ್ಲಿ ಸಂಗ್ರಹವಾಗುತ್ತದೆ. ತ್ಯಾಜ್ಯ ಗಳಿದ್ದರೆ ಇಲ್ಲಿಯೇ ಉಳಿಸಿಕೊಳ್ಳುವ ಈ ಚೇಂಬರ್ ಮೇಲಿನ ಔಟ್‌ಲೆಟ್ ಮೂಲಕ ಸಮೀಪದ ಇನ್ನೊಂದು ಟಾಕಿಗೆ ನೀರನ್ನು ಕಳುಹಿಸುತ್ತದೆ.
 
ಎರಡನೇ ಟಾಕಿಗೆ 300 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಬಳಸಿದ್ದೇವೆ. ಇದರೊಳಗೆ ಹಾಕಿರುವ ದೊಡ್ಡ ಕಲ್ಲು, ಸಣ್ಣಕಲ್ಲು, ಇದ್ದಿಲು ನೀರನ್ನು ಶುದ್ಧಗೊಳಿಸಿ 16,500 ಲೀಟರ್ ಸಾಮರ್ಥ್ಯದ ಜಲ ಸಂಗ್ರಹಣಾ ತೊಟ್ಟಿಗೆ ನೀರನ್ನು ದಾಟಿಸುತ್ತದೆ. ಈ ಜಲವನ್ನು ವರ್ಷವಿಡೀ ಬಳಸಿಕೊಳ್ಳಬಹುದು’ ಎನ್ನುತ್ತಾರೆ ಶ್ರೀಕಾಂತ ಹೆಗಡೆ. 
 
ಮನೆಯ ಎದುರು ಅಂಗಳ ನಿರ್ಮಿಸುವ ಮೊದಲು ಅವರು ಒಳ ಆವರಣದಲ್ಲಿ ಕಾಂಕ್ರೀಟ್ ಜಲ ಸಂಗ್ರಹಣಾ ತೊಟ್ಟಿ ನಿರ್ಮಿಸಿ ದ್ದಾರೆ. ‘ಜಲ ಸಂಗ್ರಹಣಾ ತೊಟ್ಟಿಗೆ ಸೋಲಾರ್ ಪಂಪ್ ಅಳವಡಿಸಲಾಗಿದೆ.
 
ಇದು 500 ಲೀಟರ್ ಟಾಕಿಗೆ ನೀರನ್ನು ಪಂಪ್ ಮಾಡುತ್ತದೆ. ಕೈತೋಟ, ವಾಹನ ತೊಳೆಯಲು ಇದೇ ನೀರನ್ನು ಉಪಯೋಗಿಸುತ್ತೇವೆ. ಶುದ್ಧವಾಗಿರುವ ಈ ನೀರನ್ನು ಮನೆಗೂ ಬಳಕೆ ಮಾಡಿಕೊಳ್ಳ ಬಹುದು’ ಎಂದು ಅವರು ಸಲಹೆ ಮಾಡುತ್ತಾರೆ. 
 
‘ಮುಂಗಾರಿನ ಎರಡು ಮಳೆಗೆ ಜಲಸಂಗ್ರಹಣಾ ತೊಟ್ಟಿ ತುಂಬಿ ಭರ್ತಿಯಾಗುತ್ತದೆ. ಇಲ್ಲಿಂದ ತುಂಬಿ ಹರಿಯುವ ನೀರು ನಷ್ಟವಾಗದಂತೆ ತೆರೆದ ಬಾವಿಯ ಪಕ್ಕದಲ್ಲಿ ಆರು ಅಡಿಯ ಇನ್ನೊಂದು ಸಣ್ಣ ಬಾವಿ ಮಾಡಿದ್ದೇವೆ. ಈ ಬಾವಿಯಲ್ಲಿ ಮೂರು ಅಡಿಯವರೆಗೆ ಸಣ್ಣ ಕಲ್ಲು ಹಾಕಲಾಗಿದೆ.
 
ದೊಡ್ಡ ತೊಟ್ಟಿಯಿಂದ ಉಕ್ಕಿ ಹರಿಯುವ ನೀರು ಸಣ್ಣ ಬಾವಿಗೆ ಬಂದು ಅಲ್ಲಿಂದ ನಿಧಾನವಾಗಿ ಮುಖ್ಯ ಬಾವಿಗೆ ಸೇರುತ್ತದೆ. ಈ ವ್ಯವಸ್ಥೆ ಅಳವಡಿಸಿಕೊಂಡರೆ ಸತತ ಒಂದು ವಾರ ಮಳೆ ಸುರಿದರೂ ನೀರು ಹರಿದು ನಷ್ಟವಾಗದೇ ಬಾವಿ ಸೇರುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವ ಸಂದರ್ಭವೇ ಇಲ್ಲ’ ಎಂದು ಅವರು ವಿಶ್ವಾಸದಿಂದ ಹೇಳಿದರು. 
 
‘ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೂ ಬಿದ್ದ ಮಳೆಯಲ್ಲಿ ಶೇಖರಣೆಯಾಗಿರುವ ನೀರಿನಲ್ಲಿ ಸುಮಾರು 8 ಸಾವಿರ ಲೀಟರ್ ಸಂಗ್ರಹವಿದೆ. ಹೊಸದಾಗಿ ಮನೆ ಕಟ್ಟುವವರು ಈ ವ್ಯವಸ್ಥೆ ಅಳವಡಿಸಲು ₹ 20 ಸಾವಿರ ವೆಚ್ಚವಾಗಬಹುದು. ಜಲ ಸಂಗ್ರಹಣಾ ತೊಟ್ಟಿ ನಿರ್ಮಿಸಿದರೆ ಈ ವೆಚ್ಚ ದುಪ್ಪಟು ಆಗುತ್ತದೆ’ ಎಂದು ಅವರು ಲೆಕ್ಕ ಹೇಳಿದರು. 
 
ಗುರು ನಗರದ ಅನೇಕ ಬಾವಿಗಳು ಒಣಗಿವೆ. 90 ಅಡಿ ಆಳದ ಬಾವಿಯಲ್ಲೂ ನೀರು ಕಾಣಸಿಗುತ್ತಿಲ್ಲ. ಆದರೆ ಶ್ರೀಕಾಂತ ಹೆಗಡೆ ಅವರು ಚಾವಣಿ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿ ಕೊಂಡು ನೀರ ನೆಮ್ಮದಿ ಉಳಿಸಿಕೊಂಡಿದ್ದಾರೆ. 
****
ಚರಂಡಿ ನೀರಿಗೂ ಬಾವಿ !
ರಸ್ತೆ ಬದಿಯಲ್ಲಿದ್ದ ಚರಂಡಿಯಲ್ಲಿ ಹರಿದು ಬರುವ ಕೊಳಚೆ ನೀರು ಶ್ರೀಕಾಂತ ಹೆಗಡೆ ಅವರ ಮನೆ ಎದುರು  ಜಮಾಗೊಳ್ಳುತ್ತಿತ್ತು. ಇದರಿಂದ ಸೊಳ್ಳೆಕಾಟ ಜೋರಾಯಿತು. ಆಗ ಉಪಾಯ ಕಂಡುಕೊಂಡ ಅವರು ಚರಂಡಿಯ ಕೊನೆಯಲ್ಲಿಎಂಟು ಅಡಿಯ ಬಾವಿ ನಿರ್ಮಿಸಿ ಕೊಳಚೆ ನೀರು ಫಿಲ್ಟರ್ ಆಗಿ ಅಲ್ಲಿಯೇ ಇಂಗುವಂತೆ ಮಾಡಿದ್ದಾರೆ. ಈಗ ಅಲ್ಲಿ ಕೊಳಚೆ ನೀರಿನ ಸಮಸ್ಯೆ ನಿವಾರಣೆಯಾಗಿದೆ, ನೀರು ಇಂಗಿಸುವ ಕೆಲಸವೂ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT