ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಗ್ರವಾದವನ್ನು ಧ್ಯೆರ್ಯದಿಂದ ಎದುರಿಸೋಣ!

ವಿದೇಶಿ ದುಡ್ಡು ಬಳಸಿಕೊಂಡು ದೇಸಿ ವೈಚಾರಿಕತೆಯ ಮೇಲೆ ದಾಳಿ ಮಾಡುತ್ತದೆ ಉಗ್ರವಾದ
Last Updated 1 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಹಿಂದೂ ಉಗ್ರವಾದವು ಹಿಂದೂ ಧರ್ಮವನ್ನು ಗೊಡ್ಡು ವೈದಿಕತೆಯನ್ನಾಗಿಸುತ್ತಿದೆ. ಪೂಜಾರಿಗಳು, ಜ್ಯೋತಿಷಿಗಳು, ಮೊಖ್ತೇಸರರು ಹಾಗೂ ರಾಜಕಾರಣಿಗಳು ತಮ್ಮ ಸ್ವಹಿತಾಸಕ್ತಿಗಳನ್ನೇ ಅಂತಿಮ ಸತ್ಯವೆಂಬಂತೆ ಸಾರತೊಡಗಿದ್ದಾರೆ. ತಮ್ಮ ಮಾತುಗಳನ್ನು ಒಪ್ಪಲಾರದವರನ್ನೆಲ್ಲ ಹಿಂದೂ ವಿರೋಧಿಗಳು ಎಂದು ಜರೆದು ಕೈಕಾಲು ಮುರಿಯತೊಡಗಿದ್ದಾರೆ. ತೀವ್ರತರವಾದ ಈ ಅಸಹಿಷ್ಣು ವಾತಾವರಣದಲ್ಲಿ ಗಾಸಿಗೊಳಗಾಗುತ್ತಿರುವುದು ಹಿಂದೂ ಧರ್ಮವೇ ಆಗಿದೆ. ನೂರಾರು ಸಂತರು ಹಾಗೂ ಸುಧಾರಕರು, ಸಾವಿರಾರು ವರ್ಷಗಳ ತ್ಯಾಗ ಮತ್ತು ಬಲಿದಾನದ ಮೂಲಕ, ಸಂಚಯಿಸಿ ಇಟ್ಟಿದ್ದ ಧಾರ್ಮಿಕ ಸುಧಾರಣೆಯನ್ನೆಲ್ಲ ಬಾಮಿಯಾನ್ ಬುದ್ಧನ ಮೂರ್ತಿಯನ್ನು ಒಡೆದು ಚೆಲ್ಲಿದ ತಾಲಿಬಾನಿಗರ ತರಹ ಒಡೆದು ಚೆಲ್ಲತೊಡಗಿದ್ದಾರೆ ಹಿಂದೂ ಉಗ್ರವಾದಿಗಳು.

ಹಿಂದೂ ಧರ್ಮ ಎಂದೂ ಏಕರೂಪವಾಗಿರಲಿಲ್ಲ. ಹಿಂದೂ ಧರ್ಮದ ಅನೇಕರೂಪತೆ ಎಂದೂ ಅದರ ಮಿತಿಯಾಗಿರಲಿಲ್ಲ. ನಾವು ಹಿಂದೂಗಳು ಕ್ರೈಸ್ತರಂತಲ್ಲ ಅಥವಾ ಮುಸ್ಲಿಮರಂತಲ್ಲ. ನಮಗೆ ಒಂದೇ ದೈವ, ಒಂದೇ ಗ್ರಂಥ ಎಂಬ ಮಿತಿಗಳಿಲ್ಲ. ಇದುವೇ ನಮ್ಮಯ ಶಕ್ತಿ. ಏಕರೂಪದ ಹಿಂದೂ ಧರ್ಮವನ್ನು ಹುಡುಕಲು ಹೊರಟಾಗ ಸಿಕ್ಕುವುದು ಗೊಡ್ಡು ವೈದಿಕತೆ ಮಾತ್ರ ಅಥವಾ ಜಾತಿ ಪದ್ಧತಿ ಮಾತ್ರ. ಗೊಡ್ಡು ವೈದಿಕತೆಯನ್ನು ವಿರೋಧಿಸಿ ಈವರೆಗೆ ನಡೆದಿರುವ ಎಲ್ಲ ಸಮಾಜ ಸುಧಾರಣಾ ಚಳವಳಿಗಳ ಒಟ್ಟು ಮೊತ್ತವೇ ಹಿಂದೂ ಧರ್ಮ. ಈ ಎಲ್ಲ ಚಳವಳಿಗಳೂ ದೇವರ ಹೆಸರಿನಲ್ಲಿಯೇ ನಡೆದವು ಎಂಬುದನ್ನು ಮರೆಯಬಾರದು ನಾವು. ರಾಮಕೃಷ್ಣ ಪರಮಹಂಸರು ವೈವಿಧ್ಯತೆಯನ್ನು ಸಂಭ್ರಮಿಸಿದರು. ಇಪ್ಪತ್ತನೆಯ ಶತಮಾನದ ಅದ್ವ್ಯೆತ ಚಳವಳಿಗಾರರ ಮೂಲ ಆಶಯವೇ ಅನೇಕತೆಯಲ್ಲಿ ಏಕತೆಯನ್ನು ಕಾಣುವುದಾಗಿತ್ತು. ರಾಮಕೃಷ್ಣರು ಕಾಳಿಮಾತೆಯಲ್ಲಿ ತನ್ನನ್ನು ತಾನು ಕಂಡುಕೊಂಡರು. ಅಲ್ಲಾಹುವಿನಲ್ಲಿ, ಏಸುವಿನಲ್ಲಿ, ರಾಮನಲ್ಲಿ, ಕೃಷ್ಣನಲ್ಲಿ ತನ್ನನ್ನು ತಾನು ಕಂಡುಕೊಂಡರು.

ಏಕರೂಪದ ಹಿಂದೂ ಧರ್ಮವನ್ನು ದೇಶದ ಮೇಲೆ ಹೇರುವುದೆಂದರೆ ಗೊಡ್ಡು ವೈದಿಕತೆಯನ್ನು ಶೂದ್ರ ಯುವಕರ ಮೇಲೆ ಹೇರುವುದೇ ಆಗಿದೆ. ಹೌದು. ಬಹುಸಂಖ್ಯಾತರಾದ ಶೂದ್ರ ಯುವಕರನ್ನು ದಾರಿ ತಪ್ಪಿಸುವ ಷಡ್ಯಂತ್ರವಿದು ಉಗ್ರವಾದ. ಕೋಟ್ಯಂತರ ಯುವಕರು ಇಂದು ಅಕ್ಷರಸ್ಥರಾಗಿದ್ದಾರೆ. ಅವರು ಎಚ್ಚೆತ್ತುಕೊಂಡಿದ್ದಾರೆ. ಯಂತ್ರನಾಗರಿಕತೆಯ ಅನ್ಯೆತಿಕತೆಯ ಬಗ್ಗೆ ಸಿಟ್ಟಿದೆ ಅವರಿಗೆ. ತಾವು ಈವರೆಗೆ ವಂಚಿತರಾಗಿದ್ದ ಧಾರ್ಮಿಕ ಪ್ರಜ್ಞೆಯನ್ನು- ನಾನದನ್ನು ನೈತಿಕಪ್ರಜ್ಞೆ ಎಂದು ಕರೆಯಬಯಸುತ್ತೇನೆ, ಪಡೆಯಲು ಬಯಸಿದ್ದಾರೆ ಇವರು. ಇವರಿಗೆ, ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳ ಅಗತ್ಯವಿದೆ, ನಾರಾಯಣ ಗುರುಗಳು, ನಾನಕರು, ಬಸವಣ್ಣನವರು ಮುಂತಾದ ಮಹಾತ್ಮರ ಕ್ರಾಂತಿಕಾರಿ ವಿಚಾರಗಳ ಅಗತ್ಯವಿದೆ. ಸಮಕಾಲೀನ ಸರಳ ಭಾಷೆಯಲ್ಲಿ, ಸರಳ ಜೀವನಶೈಲಿಯ ಮೂಲಕ ಇವುಗಳನ್ನು ಅವರಿಗೆ ಕಲಿಸುವ ಅಗತ್ಯವಿದೆ. ಹಾಗೆ ಮಾಡದೆ ಇವರನ್ನೆಲ್ಲ ಧಾರ್ಮಿಕ ಉಗ್ರವಾದಗಳನ್ನಾಗಿ ಸಂಘಟಿಸಲಾಗುತ್ತಿದೆ.

ಕೊಂಚ ವಿಚಾರ ಮಾಡಿ! ವಿಚಾರವಾದಿ ವಿವೇಕಾನಂದರನ್ನು ವಿಚಾರವಾದದಿಂದ ರಕ್ಷಿಸಬೇಕೆ? ಸಮಾಜ ಸುಧಾರಕ ಸಂತರನ್ನು ಸುಧಾರಣೆಯಿಂದ ರಕ್ಷಿಸಬೇಕೆ? ಧರ್ಮದ ವಿಮರ್ಶಕರಾಗಿದ್ದ ಮಹಾತ್ಮರುಗಳನ್ನು ವಿಮರ್ಶೆಯಿಂದ ರಕ್ಷಿಸಬೇಕೆ? ಇತ್ತೀಚೆಗೆ ನಡೆದ ಒಂದು ಘಟನೆಯ ಮೂಲಕ ಈ ವಿಪರೀತವನ್ನು ವಿವರಿಸಲು ಯತ್ನಿಸುತ್ತೇನೆ.

ಅದೊಂದು ಆಪ್ತರ ಸಭೆಯಾಗಿತ್ತು. ಧಾರ್ಮಿಕ ಉಗ್ರವಾದವನ್ನು ಕುರಿತು ಚರ್ಚೆ ನಡೆದಿತ್ತು ಅಲ್ಲಿ. ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ಹಿಂದೂ ಉಗ್ರವಾದವು ಅದೆಂತಹ ಅವಾಂತರವನ್ನು ಸೃಷ್ಟಿಸಿತ್ತು ಎಂದು ನಾನು ಸಭೆಗೆ ವಿವರಿಸುತ್ತಿದ್ದೆ. ಆ ಮಹಾನುಭಾವ ದೂರದ ಅಮೆರಿಕೆಯಲ್ಲಿ ನಿಂತು ಹಿಂದೂ ಧರ್ಮದ ಪ್ರಚಾರ ಮಾಡುತ್ತಿದ್ದರೆ, ಇಲ್ಲಿ ಭಾರತದಲ್ಲಿ ಉಗ್ರವಾದಿಗಳು ಅವರ ಹೆಸರಿಗೆ ಮಸಿ ಬಳಿಯುತ್ತಿದ್ದರು, ‘ವಿವೇಕಾನಂದ ಕಪಟ ಸಂನ್ಯಾಸಿ! ಗೋಮಾಂಸ ತಿನ್ನುತ್ತಾನೆ! ಸ್ತ್ರೀಸಂಗ ಮಾಡುತ್ತಾನೆ! ಆತನ ಮಾತುಗಳನ್ನು ನಂಬಬೇಡಿ’ ಎಂದೆಲ್ಲ ಪ್ರಚಾರ ಮಾಡುತ್ತಿದ್ದರು, ಎಂದು ವಿವರಿಸುತ್ತಿದ್ದೆ. ಸಭಿಕರೊಬ್ಬರು, ‘ವಿವೇಕಾನಂದರು ಗೋಮಾಂಸ ತಿಂದದ್ದು ನಿಜವೇ’ ಎಂದು ನನ್ನನ್ನು ಕೇಳಿದರು. ‘ಹೌದು! ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ಸಂಗತಿಯದು! ಆದರೆ ಹಾಗಂತ ವಿವೇಕಾನಂದರನ್ನು ಗೊ-ವಿರೋಧಿ ಎಂದು ತಿಳಿಯಬಾರದು, ಹೇಗೆ ಅಹಿಂಸಾವಾದಿ ಗೌತಮ ಬುದ್ಧನು ಭಿಕ್ಷೆಯಲ್ಲಿ ಬಂದ ಮಾಂಸಾಹಾರವನ್ನು ಸ್ವೀಕರಿಸುತ್ತಿದ್ದನೋ ಹಾಗೆಯೇ ವಿವೇಕಾನಂದರು ಅತಿಥಿಗಳು ಬಡಿಸಿದ ಗೋಮಾಂಸವನ್ನು ಸ್ವೀಕರಿಸಿದರು’ ಎಂದೆ.

ನೂರು ವರ್ಷಗಳ ಹಿಂದೆ ವಿವೇಕಾನಂದರಿಗಾದದ್ದೇ ನನಗೂ ಆಯಿತು. ಟಿ.ವಿ. ಚಾನೆಲ್ಲುಗಳು, ‘ವಿವೇಕಾನಂದರು ಗೋಮಾಂಸ ತಿನ್ನುತ್ತಿದ್ದರು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಪ್ರಸನ್ನ ಎಂದು ಬ್ರೇಕಿಂಗ್‍ ನ್ಯೂಸ್ ಮಾಡಿದವು. ಅದರ ಬೆನ್ನಿಗೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲಿಂಗ್ ಶುರುವಾಯಿತು. ಕೇವಲ ಎರಡು ಗಂಟೆಗಳ ಅವಧಿಯಲ್ಲಿ ನನ್ನನ್ನು ಒಬ್ಬ ಹಿಂದೂ ವಿರೋಧಿ ನೀಚನನ್ನಾಗಿ ಬಿಂಬಿಸಲಾಯಿತು. ಪಾಕಿಸ್ತಾನದ ಏಜೆಂಟನನ್ನಾಗಿ ಬಿಂಬಿಸಲಾಯಿತು. ಬೆದರಿಕೆಗಳು ಬಂದವು. ಕುತ್ಸಿತ ಮಾತಿನ ಅಪಪ್ರಚಾರದ ಮಹಾಪೂರವೇ ಹೊರಬಿತ್ತು.

ಮರುದಿನ ಮತ್ತೆರಡು ಸಭೆಗಳಲ್ಲಿ ಮಾತನಾಡಬೇಕಿತ್ತು ನಾನು. ಚಿಂತಿತರಾದ ನನ್ನ ಹಿತೈಷಿಗಳು ದೂರದ ಊರುಗಳಿಂದ ಕರೆ ಮಾಡಿ, ಸಭೆಗಳನ್ನು ರದ್ದು ಮಾಡುವಂತೆ ಅಥವಾ ಪೊಲೀಸರ ರಕ್ಷಣೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಸಂಘಟಕರು ದಿಗಿಲು ಬಿದ್ದಿದ್ದರು. ನಾನು ಯೋಚಿಸಿದೆ. ಅಪಪ್ರಚಾರ ನಡೆದಿರುವುದು ವಿವೇಕಾನಂದರ ಬಗ್ಗೆ. ವಿವೇಕಾನಂದರನ್ನು ದುರ್ಬಳಕೆ ಮಾಡಿಕೊಂಡು ನನ್ನನ್ನು ಗಾಸಿಗೊಳಿಸಲು ಯತ್ನಿಸುತ್ತಿದೆ ಹಿಂದೂ ಉಗ್ರವಾದ. ವಿವೇಕಾನಂದರು ತೋರಿಸಿದ ಧೈರ್ಯದ ಕಿಂಚಿತ್ ಪ್ರಮಾಣವನ್ನಾದರೂ ನಾನು ತೋರಿಸದಿದ್ದರೆ ಹೇಗೆ ಎಂದುಕೊಂಡು ಧೈರ್ಯದಿಂದ ಸಭೆಗೆ ಹೋದೆ. ಇದೆಲ್ಲ ನಡೆದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಅದೃಷ್ಟವಶಾತ್, ಈ ಜಿಲ್ಲೆಯಲ್ಲಿ ಧಾರ್ಮಿಕ ಉಗ್ರವಾದ ಚುರುಕಾಗಿರುವಷ್ಟೇ ಸಭ್ಯನಾಗರಿಕತೆಯೂ ಚುರುಕಾಗಿದೆ. ಅಂದಿನ ಎರಡೂ ಸಭೆಗಳು ಯಶಸ್ವಿಯಾಗಿ ನಡೆದವು. ಸಭೆಯ ನಂತರ ಸಂಚಾಲಕರು ಬಂದು, ‘ನಿಮ್ಮ ಮಾತಿನಲ್ಲಿ ಯಾವ ಅತಿರೇಕವೂ ಇರಲಿಲ್ಲ’ ಎಂದು ಸಂತಸ ವ್ಯಕ್ತಪಡಿಸಿದರು.

ಆದರೆ, ನನ್ನ ಅನೇಕ ಸ್ನೇಹಿತರು, ‘ನೀವೇಕೆ ಉಗ್ರವಾದವೆಂಬ ಕಟ್ಟಿರುವೆ ಗೂಡನ್ನು ಕೆದಕಲಿಕ್ಕೆ ಹೋಗುತ್ತಿದ್ದೀರಿ? ಗ್ರಾಮೀಣ ಸಂಕಷ್ಟದ ನಿವಾರಣೆಗಾಗಿ ನೀವು ನಡೆಸುತ್ತಿರುವ ಹೋರಾಟಗಳನ್ನು ಮುಂದುವರೆಸಿಕೊಂಡು ಹೋದರೆ ಸಾಲದೇ’ ಎಂದು ನನ್ನನ್ನು ಪ್ರಶ್ನಿಸಿದ್ದಾರೆ. ನಾನನ್ನುತ್ತೇನೆ ‘ಸಾಲದು’. ಏಕೆಂದರೆ ಗ್ರಾಮೀಣ ಸಂಕಷ್ಟಕ್ಕೆ ಪರಿಹಾರವೆಂಬಂತೆ ಬಿಂಬಿಸಲಾಗುತ್ತಿದೆ ಧಾರ್ಮಿಕ ಉಗ್ರವಾದವನ್ನು. ಉದಾಹರಣೆಗೆ, ಗೋರಕ್ಷಣೆಯನ್ನೇ ತೆಗೆದುಕೊಳ್ಳಿ. ಒಂದರ್ಥದಲ್ಲಿ ನಾವೂ ಗೋರಕ್ಷಕರು, ಅವರೂ ಗೋರಕ್ಷಕರು. ವ್ಯತ್ಯಾಸವಿಷ್ಟೆ. ರೈತನ ಕೊಟ್ಟಿಗೆಯಲ್ಲಿ ಗೋವಿನ ಪುನರ್‍ಸ್ಥಾಪನೆಯಾಗಬೇಕು ಎಂದು ನಾವು ಹೇಳುತ್ತೇವೆ. ಸತ್ತ ಗೋವಿನಮೂರ್ತಿಯನ್ನು ತ್ರಿಶೂಲದಂತೆ ಮುಂದೊತ್ತುತ್ತಾರೆ ಅವರು.

ನಾವು ಹೇಳುತ್ತೇವೆ, ಗ್ರಾಮೀಣ ಆರ್ಥಿಕತೆಯ ಕೇಂದ್ರಬಿಂದು ಗೋವು ಎಂದು. ಕೃಷಿ ಕ್ಷೇತ್ರದಲ್ಲಿ ಟಿಲ್ಲರುಗಳು ಹಾಗೂ ಟ್ರ್ಯಾಕ್ಟರುಗಳನ್ನು ಬಳಸಬೇಡಿ ಎಂದು ಹೇಳುತ್ತೇವೆ. ಟಿಲ್ಲರು ಸಗಣಿ ಹಾಕುವುದಿಲ್ಲ, ಗಂಜಲವನ್ನು ಭೂಮಿಗೆ ಚೆಲ್ಲುವುದಿಲ್ಲ, ಮತ್ತೊಂದು ಟಿಲ್ಲರಿಗೆ ಜನುಮ ನೀಡುವುದಿಲ್ಲ ಅಥವಾ ಹಾಲು ಕರೆಯುವುದಿಲ್ಲ ಎಂದು ಹೇಳುತ್ತೇವೆ ನಾವು. ಟಿಲ್ಲರ್ ಎಂಬ ಯಂತ್ರವು ಇಂಧನವನ್ನು ತಿನ್ನುತ್ತದೆ, ದುಡ್ಡನ್ನು ತಿನ್ನುತ್ತದೆ, ಕೆಲಸ ಕದಿಯುತ್ತದೆ, ಪ್ರಧೂಷಣ ಉಂಟುಮಾಡುತ್ತದೆ ಎಂದು ಹೇಳುತ್ತೇವೆ ನಾವು. ಅವರು ಟಿಲ್ಲರುಗಳನ್ನು ಪ್ರತಿಪಾದಿಸುತ್ತಾರೆ. ಮುಸಲ್ಮಾನರು ಹಾಗೂ ದಲಿತರು ಗೋಮಾಂಸ ತಿಂದದ್ದರಿಂದಲೇ ಗ್ರಾಮೀಣ ಆರ್ಥಿಕತೆ ಹಾಳಾಯಿತು ಎಂದು ಹೇಳುತ್ತಾರೆ. ಹೆಚ್ಚೆಂದರೆ ಕೆಲವು ಪಿಂಜರಾಪೋಲುಗಳನ್ನು ನಿರ್ಮಿಸುತ್ತಾರೆ ಅವರು.

ಧಾರ್ಮಿಕ ಉಗ್ರವಾದ ನಿಜಕ್ಕೂ ಒಂದು ರಾಜಕಾರಣ. ಅಂಬಾನಿ, ಅದಾನಿ, ಅಂತರರಾಷ್ಟ್ರೀಯ ಬಂಡವಾಳ ಹಾಗೂ ಟಿಲ್ಲರು–ಟ್ರ್ಯಾಕ್ಟರುಗಳನ್ನು ಬೆಂಬಲಿಸುವ ರಾಜಕಾರಣವದು. ಬೃಹತ್ ನಗರಗಳನ್ನು ಕಟ್ಟುವ ರಾಜಕಾರಣವದು. ಈ ರಾಜಕಾರಣದ ಅಡಿಯಲ್ಲಿ ಶ್ರೀಮಂತನ ವರಮಾನ ಸಾವಿರ ಪಟ್ಟು ಏರಿಕೆಯಾಗಿದೆ. ಗ್ರಾಮ ಬಡವಾಗಿದೆ. ಗೊಡ್ಡು ವೈದಿಕತೆಯ ಸತ್ತ ಪ್ರತಿಮೆಯಾಗಿದೆ ಗೋವು. ಗೋವುಗಳು ಗೋಮಾಳಗಳನ್ನು ಕಳೆದುಕೊಂಡಿವೆ. ಗೋವಿಗಳು ಕೆಲಸ ಕಳೆದುಕೊಂಡಿವೆ. ಹುಲ್ಲಿಗೆ ಬದಲಾಗಿ ಅವು ಪ್ಲಾಸ್ಟಿಕ್ಕಿನ ಕಸ ಮೆಲ್ಲುತ್ತಿವೆ. ಬಡ ಗ್ರಾಮಸ್ಥನಂತೆಯೇ, ಅವು ಕೂಡ ನಗರಗಳ ಬೀದಿ ಅಲೆಯುತ್ತಿವೆ. ಇದು ಗೋರಕ್ಷಣೆ ಹೇಗಾದೀತು? ಗೋವಿಗೆ ಮಾಡುತ್ತಿರುವುದನ್ನೇ ಸ್ವಾಮಿ ವಿವೇಕಾನಂದರಿಗೂ ಮಾಡುತ್ತಿದೆ ಧಾರ್ಮಿಕ ಉಗ್ರವಾದ. ಗೊಡ್ಡು ವೈದಿಕತೆಯೆಂಬ ಪಿಂಜರಾಪೋಲಿನಲ್ಲಿ ಬಿಗಿದು ಕಟ್ಟಿಹಾಕಿದೆ ಕ್ರಾಂತಿಕಾರಿ ಸಂನ್ಯಾಸಿಯನ್ನು!

ಅಥವಾ ಕಲ್ಯಾಣದ ಕ್ರಾಂತಿಯ ಬಗ್ಗೆ ಯೋಚಿಸಿ! ಉಗ್ರವಾದ ಸಹಿಸುತ್ತಿತ್ತೇ ಕಲ್ಯಾಣದ ಕ್ರಾಂತಿಯನ್ನು? ಬಸವಣ್ಣ, ಮಂದಿರ ತಿರಸ್ಕರಿಸಿದ, ಜಾತಿ ತಿರಸ್ಕರಿಸಿದ, ಗೊಡ್ಡು ವೈದಿಕತೆ ತಿರಸ್ಕರಿಸಿದ. ಮೇಲ್ಜಾತಿಯ ಹೆಣ್ಣಿಗೆ ಕೆಳಜಾತಿಯ ಗಂಡನ್ನು ತಂದು ವಿವಾಹವೇರ್ಪಡಿಸಿದ. ಅಂದಿನ ಉಗ್ರವಾದಿಗಳು ಇಂದಿನ ಉಗ್ರವಾದಿಗಳಂತೆಯೇ ಆಡಿದ್ದರು, ಶರಣರನ್ನು ಕೊಂದು ಚೆಲ್ಲಿದ್ದರು. ಬಿಜ್ಜಳನನ್ನು ಕಾರಾಗೃಹಕ್ಕೆ ತಳ್ಳಿ, ಬಿಜ್ಜಳನ ಮಗನನ್ನು ತಂದೆಯ ವಿರುದ್ಧ ಎತ್ತಿ ಕಟ್ಟಿದ್ದರು. ಮೇಲ್ಜಾತಿಗಳನ್ನು ಸಂಘಟಿಸಿದ್ದರು. ಜಗದೇವನನ್ನು ಅಸ್ತ್ರವನ್ನಾಗಿಸಿಕೊಂಡು ಬಸವಶರಣರನ್ನು ಅಟ್ಟಾಡಿಸಿ ಕೊಂದಿದ್ದರು ಉಗ್ರವಾದಿಗಳು.

ಅಥವಾ ರಾಮನ ಉದಾಹರಣೆ ತೆಗೆದುಕೊಳ್ಳಿ. ರಾಮ ಒಬ್ಬ ಮರ್ಯಾದಾ ಪುರುಷ. ಅಗಸ ಕೆಟ್ಟ ಮಾತನ್ನಾಡಿದಾಗ ಅಗಸನನ್ನು ಶಿಕ್ಷಿಸಲಿಲ್ಲ ಅವನು. ತನ್ನನ್ನೇ ಶಿಕ್ಷಿಸಿಕೊಂಡ. ತನ್ನ ಪತ್ನಿ ಸೀತೆಯನ್ನು ಶಿಕ್ಷಿಸಿದ. ಅಂತಹ ರಾಮನಿಗೆ ಉಗ್ರವಾದದ ರಕ್ಷಣೆ ಬೇಕೆ? ರಾಮನಿಗೆ ಬೇಕಿರುವುದು ಉಗ್ರವಾದದಿಂದ ರಕ್ಷಣೆ. ಗೊಡ್ಡು ವೈದಿಕತೆಯಿಂದ ರಕ್ಷಣೆ.

ಗ್ರಾಮಸ್ವರಾಜ್ಯ ಎಂಬುದು ಒಂದು ವೈಚಾರಿಕ ಕ್ರಾಂತಿ. ಆರ್ಥಿಕ ಕ್ರಾಂತಿಯೂ ಹೌದು ಅದು ಧಾರ್ಮಿಕ ಕ್ರಾಂತಿಯೂ ಹೌದು. ರಾಮರಾಜ್ಯವೂ ಹೌದು ಅದು ಗ್ರಾಮರಾಜ್ಯವೂ ಹೌದು. ಗೋರಕ್ಷಣೆಯೂ ಹೌದು ಹಿಂದೂ ಧರ್ಮದ ಸಾಮಾಜಿಕ ಸುಧಾರಣೆಯೂ ಹೌದು. ಹಿಂದೂ ಉಗ್ರವಾದವು ಗ್ರಾಮಸ್ವರಾಜ್ಯವನ್ನು ಹಿಂದೆಯೂ ಸಹಿಸಲಿಲ್ಲ, ಮುಂದೆಯೂ ಸಹಿಸುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಂತ ಹಿಂದೂ ಸಂಘಟನೆಗಳಲ್ಲಿ ಗ್ರಾಮಪರ ಕಾಳಜಿಯಿರುವವರು ಹಾಗೂ ಸೌಮ್ಯವಾದಿಗಳು ಇಲ್ಲವೆಂದಲ್ಲ. ಇದ್ದಾರೆ. ಉಗ್ರವಾದ ಅವರ ದನಿಯನ್ನೂ ಅಡಗಿಸಿಟ್ಟಿದೆ. ಸೌಮ್ಯವಾದಿ ಹಿಂದೂ ಸಂಘಟನೆಗಳನ್ನು ಸಹಿಸುತ್ತಿಲ್ಲ ಉಗ್ರವಾದ.

ಟ್ರಾಲಿಂಗ್ ಒಂದು ಯಂತ್ರ ಎಂದು ಕರೆದೆ. ಅದು ನಿಜಕ್ಕೂ ಯಂತ್ರವಲ್ಲ. ಯಂತ್ರದೊಳಗೆ ಸಿಕ್ಕಿಹಾಕಿಕೊಂಡಿರುವ ದುರ್ಭಾಗ್ಯ ಮಾನವರು ಅವರು. ದುಡ್ಡು ಕೊಟ್ಟು ಸಾಕುತ್ತದೆ ಧಾರ್ಮಿಕ ಉಗ್ರವಾದ ದೂಷಣೆ ಮಾಡುವವರನ್ನು. ದುಡ್ಡು ವಿದೇಶದಿಂದ ಬರುತ್ತದೆ. ತಂತ್ರಜ್ಞಾನ ವಿದೇಶದಿಂದ ಬರುತ್ತದೆ. ವಿದೇಶಿ ದುಡ್ಡು ಬಳಸಿಕೊಂಡು ದೇಸಿ ವೈಚಾರಿಕತೆಯ ಮೇಲೆ ದಾಳಿ ಮಾಡುತ್ತದೆ ಉಗ್ರವಾದ. ಸಮಾನತೆ ಹಾಗೂ ಸಹಕಾರ ಗುಣಗಳನ್ನು ನಾಶ ಮಾಡುತ್ತದೆ ಉಗ್ರವಾದ. ಉಗ್ರವಾದಕ್ಕೆ ಬಲಿಯಾಗುತ್ತಿರುವ ಅಮಾಯಕ ಹಿಂದೂ ಯುವಕರ ಚಿಂತೆಯಿದೆ ನನಗೆ. ಅಪ್ಪಟ ಚಿನ್ನ ಅವರು. ಸೀಸದ ಗುಂಡಿನಂತೆ ಬಳಸಲಾಗುತ್ತಿದೆ ಅವರನ್ನು. ಈ ದೇಶದ ಪ್ರಧಾನಿಯನ್ನೂ ಬಿಟ್ಟಿಲ್ಲ ಉಗ್ರವಾದ. ಉಗ್ರವಾದ ನಿಲ್ಲಿಸಿ ಎಂದು ಅವರು ಮತ್ತೆ ಮತ್ತೆ ಕರೆ ಕೊಡುತ್ತಿದ್ದಾರೆ. ಕರೆಗೆ ಕಿವಿಗೊಡುತ್ತಿಲ್ಲ ಉಗ್ರವಾದ. ಮಂತ್ರಿಗಳು ಕಿವಿಗೊಡುತ್ತಿಲ್ಲ. ಶಾಸಕರು ಕಿವಿಗೊಡುತ್ತಿಲ್ಲ.

ಹೆದರಿಕೆಯ ಮೇಲೆ ನಿಂತಿದೆ ಉಗ್ರವಾದ. ಅದನ್ನು ಧೈರ್ಯದಿಂದ ಎದುರಿಸದೆ ಬೇರೆ ದಾರಿಯಿಲ್ಲ. ಹಿಂಸೆಯನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ, ಗಾಂಧೀಜಿ, ‘ಧೈರ್ಯದಿಂದ ಎದುರಿಸು’ ಎಂದಿದ್ದರು. ಒಬ್ಬ ಸತ್ಯಾಗ್ರಹಿಯ ಪ್ರಾಣ ಹೋದರೇನಂತೆ ಮತ್ತೊಬ್ಬ ಸತ್ಯಾಗ್ರಹಿ ಎದ್ದು ನಿಲ್ಲುತ್ತಾನೆ ಅವನ ಜಾಗೆಯಲ್ಲಿ ಎಂದಿದ್ದರು. ಉಗ್ರವಾದವನ್ನು ಧೈರ್ಯದಿಂದ ಎದುರಿಸೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT