ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಚಿನ ಕುಡುಗೋಲು ಮತ್ತು ಮುಖ್ಯಮಂತ್ರಿ!

Last Updated 8 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಮಂಡ್ಯ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭತ್ತಕೊಯ್ಲು ಮಾಡುತ್ತಾರೆ ಎಂಬ ಆಸೆಯಿಂದ ಪಾಂಡವಪುರ ತಾಲ್ಲೂಕು ಸೀತಾಪುರ ಗ್ರಾಮದ ರೈತರು ಎರಡು ಹೊಸ ಕುಡುಗೋಲು ತಯಾರಿಸಿಟ್ಟುಕೊಂಡಿದ್ದರು. ಕಬ್ಬಿಣದ ಕುಡುಗೋಲಿಗೆ ಕಂಚಿನ ಲೇಪನ ಹಾಕಿಸಿ ಮಣ್ಣಿನ ಮಗನ ಕೈಗೆಕೊಟ್ಟು ಕೊಯ್ಲು ಮಾಡಿಸುವ ಕನಸು ಕಂಡಿದ್ದರು. 50 ಗಂಡಾಳು, 25 ಹೆಣ್ಣಾಳು ಮುಖ್ಯಮಂತ್ರಿಯ ಬರುವಿಕೆಗಾಗಿ ಮಧ್ಯಾಹ್ನ 3 ಗಂಟೆಯಿಂದಲೇ ಕಾದು ಕುಳಿತಿದ್ದರು.

ಸಂಜೆ 5 ಗಂಟೆಯಾಗುತ್ತಲೇ ರೈತರ ಉತ್ಸಾಹ ಕುಗ್ಗಿತು. ‘ಸ್ವಾಮಿ ಮುಳುಗಿದ ನಂತರ ಭತ್ತ ಕುಯ್ಯುವುದು ಎಂದರೇನು’ ಎಂದು ಪ್ರಶ್ನಿಸಿದರು. ಆದರೆ ಹತ್ತಿರದಲ್ಲೇ ಇದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಬಾಯಿ ಮುಚ್ಚಿಸಿದರು. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಆತುರಾತುರದಿಂದ ಬಂದು ಗದ್ದೆಗಿಳಿದರು. ರೈತರು ಉತ್ಸಾಹ ತಂದುಕೊಂಡು ಮುಖ್ಯಮಂತ್ರಿಗಳ ಜೊತೆ ಕೊಯ್ಲು ಮಾಡಲು ತಯಾರಾದರು. ಮುಖ್ಯಮಂತ್ರಿ ಬೆಳೆಗೆ ಪೂಜೆ ಸಲ್ಲಿಸಿದ ನಂತರ ರೈತರು ಅವರ ಕೈಗೆ ಕಂಚಿನ ಕುಡುಗೋಲು ಕೊಡಲು ಮುಂದಾದರು. ಮುಖ್ಯಮಂತ್ರಿ ಕುಡುಗೋಲು ಸ್ವೀಕರಿಸದೆ, ಭತ್ತ ಕುಯ್ಲು ಮಾಡದೆ ಭಾಷಣಕ್ಕೆ ನಿಂತರು. ಕಂಚಿನ ಕುಡುಗೋಲು ತಂದ ರೈತರ ಮೊಗದಲ್ಲಿ ನಿರಾಸೆಯ ಗೆರೆ ಮೂಡಿದವು.

ಮುಖ್ಯಮಂತ್ರಿ ಕುಡುಗೋಲು ಹಿಡಿಯಲು ನಿರಾಕರಿಸಿದರು. ಆದರೆ ಸಚಿವರು, ವಿಧಾನಪರಿಷತ್‌ ಸದಸ್ಯರು, ಶಾಸಕರು ಭತ್ತ ಕೊಯ್ಲಿಗೆ ನಿಂತರು. ರೈತರು ಸಾಲಾಗಿ ಭತ್ತ ಕೊಯ್ಲು ಮಾಡಿ ಕಂತೆ ಕಟ್ಟಲು ಒಂದು ಕಡೆ ಸಾಲಾಗಿ ಇಟ್ಟರು. ಆದರೆ ಈ ಜನಪ್ರತಿನಿಧಿಗಳು ಕೊಯ್ಲು ಮಾಡಿದ ಭತ್ತವನ್ನು ಕಾಲ ಕೆಳಗೆ ಹಾಕಿ ತುಳಿದಾಡಿದರು. ಅವರಿಗೆ ಕೊಯ್ಲು ಅಂದರೆ ಕುಯ್ಯುವಷ್ಟೇ ಗೊತ್ತು, ಕೊಯ್ದ ಭತ್ತವನ್ನು ಸಂರಕ್ಷಿಸುವ ಕೃಷಿ ಗೊತ್ತಿಲ್ಲ. ಇದನ್ನು ಕಂಡ ರೈತ ಮಹಿಳೆಯೊಬ್ಬರು ‘ಮಣ್ಣಿನ ಮಕ್ಕಳು ಭತ್ತದ ಕಾಳನ್ನು ಮಣ್ಣು ಪಾಲು ಮಾಡಿದರು’ ಎಂದು ಮೂದಲಿಸಿದರು. ಇನ್ನೊಂದೆಡೆ ಗದ್ದೆಯ ಮಾಲೀಕ ‘ಅಯ್ಯೋ, ನನ್ನ ಗದ್ದೆ ಹಾಳಾಯ್ತು’ ಎಂದು ಗೋಳಿಟ್ಟದ್ದು ಯಾರಿಗೂ ಕೇಳಿಸಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT