ಸುಗಮ ಸಂಚಾರಕ್ಕಾಗಿ ಪೊಲೀಸ್‌ ಇಲಾಖೆ ಕ್ರಮ

7
ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಸಮಯ ನಿಗದಿ

ಸುಗಮ ಸಂಚಾರಕ್ಕಾಗಿ ಪೊಲೀಸ್‌ ಇಲಾಖೆ ಕ್ರಮ

Published:
Updated:
Prajavani

ವಿಜಯಪುರ: ನಗರದಲ್ಲಿ ವಾಹನ ದಟ್ಟಣೆಯ ಕಿರಿಕಿರಿ ತಪ್ಪಿಸಲು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪೊಲೀಸ್‌ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದು ಸುಗಮ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರ ಜತೆ ಅಪಘಾತಗಳು ಹೆಚ್ಚಿವೆ. ಇದಕ್ಕೆ ಕಡಿವಾಣ ಹಾಕಲು ಫೆ.6ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪೊಲೀಸ್‌ ಇಲಾಖೆ ಮುಂದಾಗಿದೆ.

‘ವಾಹನ ದಟ್ಟಣೆಯ ರಸ್ತೆಯಲ್ಲಿ ಏಖಮುಖ ಸಂಚಾರ ಆರಂಭಿಸಿದರೆ ತೊಂದರೆ ಉಂಟಾಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಮಹತ್ತರ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಹೆಸರಿಗೆ ಮಾತ್ರ ಸಂಚಾರ ನಿಯಮ ಮಾಡಿದರೆ ಸಾಲದು. ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸುವವರ ವಿರುದ್ಧವೂ ಯಾರ ಪ್ರಭಾವಕ್ಕೂ ಮಣಿಯದೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಸುಮಗ ಸಂಚಾರದ ಕನಸು ನನಸಾಗುತ್ತದೆ’ ಎನ್ನುತ್ತಾರೆ ಟಕ್ಕೆಯ ಸಂತೋಷ ಬೀಳಗಿ.

‘ಈ ಹಿಂದೆಯೇ ಮಹಾತ್ಮ ಗಾಂಧಿ ಚೌಕ್‌ನಿಂದ ಸಿದ್ಧೇಶ್ವರ ದೇವಸ್ಥಾನ ಮಾರ್ಗದಲ್ಲಿ ಏಕಮುಖ ಸಂಚಾರವಿತ್ತು. ಆದರೆ, ಬೈಕ್‌ ಸವಾರರು ಪೊಲೀಸರ ಎದುರಲ್ಲೇ ವಿರುದ್ಧವಾಗಿ ಬೈಕ್‌ ಓಡಿಸುತ್ತಿದ್ದರು. ಅದು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು, ಸಂಚಾರ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆಗ ಮಾತ್ರ ಸಂಚಾರ ಸಮಸ್ಯೆ ನಿವಾರಣೆ ಆಗಲು ಸಾಧ್ಯ’ ಎಂದು ಸಾಯಿ ಪಾರ್ಕ್‌ನ ಸುರೇಶ ಪಾಟೀಲ ಹೇಳಿದರು.

‘ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಮಹಾತ್ಮ ಗಾಂಧಿ ಚೌಕ್‌ನಿಂದ ಚಲಿಸುವ ವಾಹಗಳನ್ನು ಮಿಲನ್ ಬಾರ್, ಸರಾಫ್‌ ಬಜಾರ, ರಾಮ ಮಂದಿರ ಮಾರ್ಗವಾಗಿ ಕೋಟೆ ಗೋಡೆಯವರೆಗೆ, ನಾಗೂರ ಆಸ್ಪತ್ರೆಯ ಕೋಟೆ ಗೋಡೆಯಿಂದ ಚಲಿಸುವ ವಾಹನಗಳು, ಸಿದ್ಧೇಶ್ವರ ದೇವಸ್ಥಾನ ಮಾರ್ಗವಾಗಿ ಗಾಂಧಿಚೌಕ್‌ವರೆಗೆ ಏಕಮುಖವಾಗಿ ಸಂಚರಿಸಲಿವೆ. ಸಿದ್ಧೇಶ್ವರ ದೇವಸ್ಥಾನ ಕಡೆಯಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಗಾಂಧಿ ಚೌಕ್‌ನಲ್ಲಿ ಸುಗಮ ಎಡ ತಿರುವು ಸಂಚಾರ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ಅಮೃತ್‌ ನಿಕ್ಕಂ ತಿಳಿಸಿದ್ದಾರೆ.

‘ಮಹಾತ್ಮ ಗಾಂಧಿಚೌಕ್‌ನಿಂದ ಬಸವೇಶ್ವರ ವೃತ್ತದ ಕಡೆಗೆ ಹೊರಡುವ ಆಟೊಗಳಿಗೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು, ರೋಶನ್ ಬೇಕರಿ ಹತ್ತಿರ ತಾತ್ಕಾಲಿಕ ಆಟೊ ಬೇ ನಿರ್ಮಿಸಲಾಗಿದೆ. ಕಿರಾಣಿ ಮಾರುಕಟ್ಟೆಯಲ್ಲಿ ಸರಕು ಸಾಗಣೆ ವಾಹನಗಳ ಲೋಡ್ ಮತ್ತು ಅನ್‌ಲೋಡ್‌ ರಾತ್ರಿ 10ರಿಂದ ಬೆಳಿಗ್ಗೆ 6 ರವರೆಗೆ ನಿಗದಿಪಡಿಸಲಾಗಿದೆ. ಈ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಸುಗಮ ಸಂಚಾರದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !