ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 11–3–1994

Last Updated 10 ಮಾರ್ಚ್ 2019, 19:41 IST
ಅಕ್ಷರ ಗಾತ್ರ

ದೇವಿಕಾ ಅಂತ್ಯಕ್ರಿಯೆ– ಸರ್ಕಾರಿ ಗೌರವ
ಬೆಂಗಳೂರು, ಮಾ. 10– ಬುಧವಾರ ಇಲ್ಲಿ ನಿಧನರಾದ ಖ್ಯಾತ ಚಲನಚಿತ್ರ ನಟಿ ಮೊಟ್ಟ ಮೊದಲ ನಾಯಕ ನಟಿ ದೇವಿಕಾ ರಾಣಿ ರೋರಿಚ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವದೊಂದಿಗೆ ನಗರದ ಹೊರವಲಯದಲ್ಲಿರುವ ತಾತಗುಣಿ ಎಸ್ಟೇಟ್‌ನಲ್ಲಿ ನಡೆಯಿತು.

ಸುಗಂಧ ದ್ರವ್ಯ ತಯಾರಿಸಲು ಬಳಸುವ ‘ಲಿನಾಲೊಯಿ’ ಮರಗಳನ್ನು ಬೆಳೆಯುವ ಈ ವಿಶಾಲ ಎಸ್ಟೇಟ್‌ನಲ್ಲಿ ಎಲೆಗಳು ಉದುರಿ ಬೋಳು ಬೋಳಾಗಿರುವ ಮರಗಳ ನಡುವೆ ವಿಶೇಷವಾಗಿ ನಿರ್ಮಿಸಲಾಗಿದ್ದ ಚಿತೆಗೆ, ಬಹಳ ವರ್ಷದಿಂದ ದೇವಿಕಾರಾಣಿ ಅವರ ಸೇವೆ ಮಾಡಿದಮೇರಿ ಜೋಯ್ಸ್‌ ಪೂಣಚ್ಚ ಮಧ್ಯಾಹ್ನ 2.25ಕ್ಕೆ ಅಗ್ನಿಸ್ಪರ್ಶ ಮಾಡಿದರು.

ಭಾರತೀಯ ಸಂಪ್ರದಾಯದಂತೆ ವೇದ ಘೋಷಗಳ ಮಧ್ಯೆ, ಕೊಬ್ಬರಿಯಲ್ಲಿಟ್ಟಿದ್ದ ಕರ್ಪೂರಕ್ಕೆ ಬೆಂಕಿ ಹಚ್ಚಿ ಅದನ್ನು ಮೇರಿ ಚಿತೆಗಿಟ್ಟರು. ದೇವಿಕಾರಾಣಿ ಅವರ ದೇಹ ಅಗ್ನಿಯಲ್ಲಿ ಲೀನವಾಯಿತು. ನಂತರವೂ ಹಲವು ಮಂದಿ ಮಂತ್ರ ಪಠಿಸಿದರು.

ಕಾಶ್ಮೀರ: ಇರಾನ್ ಮಧ್ಯಸ್ಥಿಕೆ ಒಪ್ಪಿಲ್ಲ– ಭಾರತದ ಸ್ಪಷ್ಟನೆ
ನವದೆಹಲಿ, ಮಾ. 10 (ಪಿಟಿಐ)– ಕಾಶ್ಮೀರ ಪ್ರಶ್ನೆ ಇತ್ಯರ್ಥಪಡಿಸುವುದಕ್ಕಾಗಿ ಇರಾನ್ ಮಧ್ಯಸ್ಥಿಕೆ ನಡೆಸುವುದನ್ನು ಭಾರತ ಒಪ್ಪಿಕೊಂಡಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಅವರು ಇಂದು ಇಲ್ಲಿ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಪಾಕಿಸ್ತಾನವೇ ಜಿನೀವಾದಲ್ಲಿನ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ಸ್ವಯಂಪ್ರೇರಣೆಯಿಂದ ಕಾಶ್ಮೀರದ ಮೇಲಿನ ನಿರ್ಣಯವನ್ನು ಹಿಂತೆಗೆದುಕೊಂಡಿತು ಎಂದರು. ರಾಜಿ ಸೂತ್ರವಾಗಿ ಅದು ತನ್ನ ನಿರ್ಣಯವನ್ನು ವಾಪಸು ಪಡೆಯಿತು ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು.

ಆಧುನಿಕ ಅಭಿಮನ್ಯು ‘ಶೇಷನ್’
ಕಲ್ಕತ್ತ, ಮಾ. 10 (ಪಿಟಿಐ)– ‘ನಾನು ಚಕ್ರವ್ಯೂಹದಲ್ಲಿರುವ ಅಭಿಮನ್ಯುವಿನಂತೆ’.

ಹೀಗೆಂದವರು ಸದಾ ಸುದ್ದಿಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್. ಭಗವದ್ಗೀತೆಯ ಶ್ಲೋಕಗಳನ್ನು ಸದಾ ಉದಾಹರಿಸುವ ಅವರನ್ನು ‘ಆಧುನಿಕ ಕೃಷ್ಣನಾಗಲು ಬಯಸುವಿರಾ?’ ಎಂದು ಕೇಳಿದಾಗ ‘ಇಲ್ಲ, ನಾನು ಖಯ್ಯಾಂ ಹಾಗೂ ಖುರಾನಿನಿಂದಲೂ ಉದಾಹರಿಸುತ್ತೇನೆ. ಆದರೆ ಅಭಿಮನ್ಯುವಿನಂತೆ ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಳ್ಳದ ಚತುರ ನಾನು’ ಎಂದರು.

ತಾತಗುಣಿ ಎಸ್ಟೇಟ್ ಸ್ವಾಧೀನಕ್ಕೆ
ಬೆಂಗಳೂರು, ಮಾ. 10– ತಾತಗುಣಿ ಎಸ್ಟೇಟ್ ಮತ್ತು ವಿಶ್ವವಿಖ್ಯಾತ ಕಲಾವಿದ ರೋರಿಚ್ ಅವರ ಎಲ್ಲ ಕೃತಿಗಳನ್ನು ಸರ್ಕಾರವೇ ವಹಿಸಿಕೊಳ್ಳುವುದು ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಂದು ಇಲ್ಲಿ ಹೇಳಿದರು.

ಜಿ.ವಿ. ಅಯ್ಯರ್ ಅವರು ನಿರ್ದೇಶಿಸುತ್ತಿರುವ ಸ್ವಾಮಿ ವಿವೇಕಾನಂದ ಚಲನಚಿತ್ರದ ಮುಹೂರ್ತದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರೋರಿಚ್ ಅವರ ಅಮೂಲ್ಯ ಕಲಾಕೃತಿಗಳನ್ನು ಸಂರಕ್ಷಿಸಲು ಅಗತ್ಯವಾದ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ರೋರಿಚ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿರುವ ರೀತಿಯ ಬಗ್ಗೆ ರಷ್ಯಾದ ರಾಯಭಾರಿ ಡ್ಲುಕೊವ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT