ಶುಕ್ರವಾರ, ಆಗಸ್ಟ್ 12, 2022
27 °C

25 ವರ್ಷಗಳ ಹಿಂದೆ | ಮಂಗಳವಾರ, 5–9–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ: ಮುಂದುವರಿದ ಬಿಕ್ಕಟ್ಟು ಧರಣಿ– ಸದನ ಕಲಾಪ ಸ್ಥಗಿತ

ಬೆಂಗಳೂರು, ಸೆ. 4– ಕಳೆದ ವಾರದಿಂದಲೂ ಕಾಡುತ್ತಿರುವ ಕಾವೇರಿ ವಿವಾದದ ಬಿಕ್ಕಟ್ಟು ಉಭಯ ಸದನಗಳಲ್ಲಿ ಇಂದೂ ಮುಂದುವರಿದು ಯಾವುದೇ ಕಲಾಪವೂ ನಡೆಯದೆ ಎರಡೂ ಸದನಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷಗಳು ಧರಣಿಯನ್ನು ಮುಂದುವರಿಸಿದ್ದರಿಂದ ಪ್ರಶ್ನೋತ್ತರವೂ ಸೇರಿದಂತೆ ಯಾವುದೇ ಅಧಿಕೃತ ಕಲಾಪ ನಡೆಯಲಿಲ್ಲ. ಈ ಧರಣಿಯ ನಡುವೆಯೇ ಸದನ ಎರಡು ಬಾರಿ ಸಮಾವೇಶಗೊಂಡು ಎರಡೂ ಬಾರಿ ಮುಂದಕ್ಕೆ ಹೋಯಿತು.

ವಿಧಾನ ಪರಿಷತ್ತಿನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಮಧ್ಯಾಹ್ನ 12–15ಕ್ಕೆ ಸೇರಬೇಕಾಗಿದ್ದ ಸದನ ಒಂದು ತಾಸು ತಡವಾಗಿ ಸೇರಿದಾಗ ವಾತಾವರಣ ತಿಳಿಯಾಗಿರಲಿಲ್ಲ. ಕಾವೇರಿಯಿಂದ ತಮಿಳುನಾಡಿಗೆ ಇನ್ನೂ 35 ಟಿಎಂಸಿ ಅಡಿ ನೀರನ್ನು ಕೊಡಬೇಕಾಗಿದೆ ಎಂದು ಮುಖ್ಯಮಂತ್ರಿ ದೇವೇಗೌಡರು ಹೇಳಿದ್ದಾರೆ ಎಂಬ ಪತ್ರಿಕಾ ವರದಿ ಇದುವರೆಗಿನ ವಿವಾದಕ್ಕೆ ಹೊಸ ತಿರುವನ್ನು ಕೊಟ್ಟಿತು.

 

ತುಂಬಿದ ಕೆಆರ್‌ಎಸ್‌– ಜನರಿಗೆ ಎಚ್ಚರಿಕೆ

ಮೈಸೂರು, ಸೆ. 4– ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ಜಲಾಶಯದಿಂದ ಹೊರಗೆ ಬಿಡುತ್ತಿರುವ ನೀರಿನ ಪ್ರಮಾಣವೂ ಏರಿದ್ದು ನದಿ ದಂಡೆಗಳ ಮೇಲೆ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಹೋಗಲು ಎಚ್ಚರಿಕೆ ನೀಡಲಾಗಿದೆ.

ಕೃಷ್ಣರಾಜಸಾಗರ ಜಲಾಶಯ ಬಹುಪಾಲು ಭರ್ತಿಯಾಗಿದೆ. ಸೋಮವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ ಗರಿಷ್ಠ ಪ್ರಮಾಣಕ್ಕೆ ಕೇವಲ ಒಂದು ಅಡಿ ಕಡಿಮೆಯಿತ್ತು  (ಜಲಾಶಯದ ಗರಿಷ್ಠ ಪ್ರಮಾಣ 124.80 ಅಡಿ).

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಸೋಮವಾರ ಸಂಜೆ ವೇಳೆಗೆ ಜಲಾಶಯಕ್ಕೆ 60,000 ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿದು ಬರುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.