ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕನ್ನಡಿಗರಿಗೆ ಒಲಿಯುವುದೇ ಅವಕಾಶ?

ಹಾಕಿ: ಏಷ್ಯನ್‌ ಗೇಮ್ಸ್‌, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡುವ ಕನಸಿಗೆ ರೆಕ್ಕೆ
Last Updated 1 ಫೆಬ್ರುವರಿ 2023, 19:15 IST
ಅಕ್ಷರ ಗಾತ್ರ

ಎರಡು ವರ್ಷಗಳ ಹಿಂದೆ ಟೋಕಿಯೊದಲ್ಲಿ ಕಂಚು ಹಾಗೂ ಹೋದ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದು, ಎಫ್‌ಐಎಚ್‌ ಪ್ರೊ ಲೀಗ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಭಾರತ ಹಾಕಿ ತಂಡ ವಿಶ್ವಕಪ್‌ ಟೂರ್ನಿಯಲ್ಲಿ ಮುಗ್ಗರಿಸಿತು.

ರೂರ್ಕೆಲಾದಲ್ಲಿ ಈಚೆಗೆ ಉದ್ಘಾಟನೆಗೊಂಡ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ಭಾರತ ತಂಡವು ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸುವ ಕನಸು ಕೈಗೂಡಲಿಲ್ಲ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡ ಎಂಟರ ಘಟ್ಟವನ್ನೂ ಪ್ರವೇಶಿಸಲಿಲ್ಲ. ಒಟ್ಟಾರೆ ಒಂಬತ್ತನೇ ಸ್ಥಾನ ಪಡೆಯಲಷ್ಟೇ ತಂಡಕ್ಕೆ ಸಾಧ್ಯವಾಯಿತು. 48 ವರ್ಷಗಳ ಹಿಂದೆ ವಿಶ್ವಕಪ್ ಟೂರ್ನಿಯಲ್ಲಿ ಚಿನ್ನ ಗೆದ್ದ ನಂತರ ಭಾರತಕ್ಕೆ ಇದುವರೆಗೆ ಪದಕ ಜಯಿಸಲು ಸಾಧ್ಯವಾಗಿಲ್ಲ. ಈ ಬಾರಿಯೂ ಅದು ಕೈಗೂಡಲಿಲ್ಲ. ಆದರೆ ಈ ನಿರಾಸೆಯ ನಡುವೆಯೇ ಕರ್ನಾಟಕದ ಪಾಲಿಗೆ ಒಂದು ಆಶಾದಾಯಕ ಸಂಗತಿ ಇದೆ. ಅದು ಮುಂಬರುವ ಏಷ್ಯನ್ ಗೇಮ್ಸ್ ಮತ್ತು ಪ್ಯಾರಿಸ್ ಒಲಿಂಪಿಕ್ ಕೂಟಗಳಿಗೆ ತಂಡವನ್ನು ಕಟ್ಟುವತ್ತ ಹಾಕಿ ಇಂಡಿಯಾ ಚಿತ್ತ ಹರಿಸುತ್ತಿದೆ. ಇದರಿಂದಾಗಿ ಕನ್ನಡಿಗರಿಗೆ ಮತ್ತೆ ಅವಕಾಶ ಸಿಗುವ ನಿರೀಕ್ಷೆ ಮೂಡಿದೆ.

ಟೋಕಿಯೊ ಒಲಿಂಪಿಕ್ಸ್‌ ಸಂದರ್ಭದಲ್ಲಿ ಕರ್ನಾಟಕದ ಎಸ್‌.ವಿ. ಸುನೀಲ್ ಫಿಟ್ ಇದ್ದರೂ ಭಾರತ ತಂಡದಲ್ಲಿ ಸ್ಥಾನ ನೀಡಿರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಕರ್ನಾಟಕದ ಯಾರಿಗೂ ಸ್ಥಾನ ಲಭಿಸಿಲ್ಲ. ಪಂಜಾಬ್ ಮತ್ತು ಹರಿಯಾಣ ಆಟಗಾರರ ಪ್ರಾಬಲ್ಯ ಈಗಲೂ ಇದೆ. ಆದರೆ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಯುಗ ಸೃಷ್ಟಿಸಿದವರಲ್ಲಿ ಕನ್ನಡಿಗರೂ ಇದ್ದರಲ್ಲವೇ?

1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದಲ್ಲಿ ಬೆಳಗಾವಿಯ ಬಂಡು ಪಾಟೀಲ, 1972ರಲ್ಲಿ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಭಾರತ ತಂಡದಲ್ಲಿ ಕೊಡಗಿನ ಎಂ.ಪಿ. ಗಣೇಶ್, ಬಿ.ಪಿ. ಗೋವಿಂದ ಹಾಗೂ 1980ರಲ್ಲಿ ಚಿನ್ನ ಗೆದ್ದ ಬಳಗದಲ್ಲಿ ಎಂ.ಎಂ. ಸೋಮಯ್ಯ ಇದ್ದರು. 1975ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿಯೂ ಗೋವಿಂದ ಮತ್ತು ಪಿ.ಇ. ಕಾಳಯ್ಯ ಆಡಿದ್ದರು.

ಅದರ ನಂತರವೂ ಭಾರತದ ಹಾಕಿ ಕ್ರೀಡೆಗೆ ಕರ್ನಾಟಕ ಕೊಡುಗೆ ಕೊಟ್ಟಿದೆ. ಎ.ಬಿ. ಸುಬ್ಬಯ್ಯ, ಸಿ. ಪೂಣಚ್ಚ, ರವಿ ನಾಯ್ಕರ್, ಆಶಿಶ್ ಬಲ್ಲಾಳ, ಜ್ಯೂಡ್ ಫೆಲಿಕ್ಸ್, ಅರ್ಜುನ್ ಹಾಲಪ್ಪ ಕೊಡುಗೆಯನ್ನೂ ಮರೆಯುವಂತಿಲ್ಲ.

2008ರಲ್ಲಿ ಒಲಿಂಪಿಕ್ ಅರ್ಹತೆಯನ್ನು ಗಿಟ್ಟಿಸಿರಲಿಲ್ಲ.ಆದರೆ, 2012ರ ಲಂಡನ್ ಒಲಿಂಪಿಕ್ ಕೂಟದಲ್ಲಿ ಮರಳಿ ಸ್ಥಾನ ಪಡೆಯುವಲ್ಲಿ ಎಸ್‌.ವಿ.ಸುನೀಲ್, ವಿ.ಆರ್. ರಘುನಾಥ್, ಭರತ್ ಚೆಟ್ರಿ ಅವರ ಆಟವೇ ಪ್ರಮುಖವಾಗಿತ್ತು. ಅಂದು ಆರಂಭವಾದ ಪುನರುತ್ಥಾನದ ಫಲ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಲಭಿಸಿತು. ರಾಜ್ಯದಲ್ಲಿ ಹಾಕಿ ಆಟಕ್ಕೆ ಇಂತಹ ಗಟ್ಟಿಮುಟ್ಟಾದ ನೆಲೆ ಇದೆ.

ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ವಸತಿ ನಿಲಯಗಳಲ್ಲಿಯೇ ರಾಷ್ಟ್ರೀಯ ತಂಡದ ಶಿಬಿರಗಳು ನಡೆಯುತ್ತವೆ. ಇಲ್ಲಿಂದಲೇ ತಂಡಗಳು ಅಂತರರಾಷ್ಟ್ರೀಯ ಟೂರ್ನಿಗಳಿಗೆ ಹೋಗುತ್ತಿವೆ. ಆದರೂ ಏಕೆ ರಾಜ್ಯದ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಮಟ್ಟಿಗೆ ಬೆಳೆಯುತ್ತಿಲ್ಲ? ಸೌಲಭ್ಯಗಳ ಕೊರತೆಯೇ, ಉದ್ಯೋಗ ಅವಕಾಶಗಳು ಮತ್ತು ಆರ್ಥಿಕ ನೆರವುಗಳಿಲ್ಲವೇ ಅಥವಾ ಮಕ್ಕಳನ್ನು ಹಾಕಿ ಆಟದತ್ತ ಆಕರ್ಷಿಸಬಲ್ಲ ತಾರೆಗಳ ಕೊರತೆ ಇದೆಯೇ ಅಥವಾ ಒಡಿಶಾ ಮಾದರಿ ಕರ್ನಾಟಕಕ್ಕೂ ಬೇಕಿತ್ತೇ ಎಂಬ ಪ್ರಶ್ನೆಗಳು ಏಳುವುದು ಸಹಜ.

ಎರಡು ವರ್ಷಗಳ ಹಿಂದೆ ಹಾಕಿ ಇಂಡಿಯಾದ ಆಗಿನ ಅಧ್ಯಕ್ಷ ನರೀಂದರ್ ಬಾತ್ರಾ ಕೂಡ ಕರ್ನಾಟಕದ ಹಾಕಿ ಕಣಜ ಕೊಡಗಿನಿಂದ ಹೊಸ ಆಟಗಾರರೇ ಬರುತ್ತಿಲ್ಲ, ಕರ್ನಾಟಕದ ಕಾಣಿಕೆ ಕುಂಠಿತವಾಗಿದೆ ಎಂದಿದ್ದರು.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎನ್ನುತ್ತಾರೆ ಹಾಕಿ ಕರ್ನಾಟಕದ ಪದಾಧಿಕಾರಿ ಹಾಗೂ ಒಲಿಂಪಿಯನ್ ವಿ.ಆರ್. ರಘುನಾಥ್. ರಾಷ್ಟ್ರೀಯ ತಂಡದಲ್ಲಿ ಆಡುವ ಪ್ರತಿಭಾವಂತರು ರಾಜ್ಯದಲ್ಲಿ ಇದ್ದಾರೆ. ಕಳೆದ ರಾಷ್ಟ್ರೀಯ ಸೀನಿಯರ್ ಶಿಬಿರದಲ್ಲಿಯೂ ಇಲ್ಲಿಯ ಆಟಗಾರರು ಅರ್ಹತೆ ಪಡೆದಿದ್ದರು. ಆದರೆ, ಭಾರತ ತಂಡದಲ್ಲಿ ಒಲಿಂಪಿಯನ್ ಪದಕ ವಿಜೇತರ ದಂಡು ಇದ್ದ ಕಾರಣ ಹೊಸಬರಿಗೆ ಸ್ಥಾನ ಸಿಗಲಿಲ್ಲ. ಆದ್ದರಿಂದ ಕಾಯಬೇಕಾಯಿತು. ಇದೀಗ ಜೂನಿಯರ್ ರಾಷ್ಟ್ರೀಯ ಶಿಬಿರದಲ್ಲಿಯೂ ಪೂವಣ್ಣ, ವಿಶ್ವಾಸ್, ಬಿಪಿನ್ ಮತ್ತು ಮೋಹಿತ್ ಗೌಡ ಇದ್ದಾರೆ. ಅಲ್ಲದೆ ಸೌಲಭ್ಯಗಳಿಗೂ ಕೊರತೆಯಿಲ್ಲ. ಎಲ್ಲ ಕಡೆಯೂ ತರಬೇತಿ ಹಾಗೂ ವಸತಿ ನಿಲಯಗಳು ಇವೆ. ಪ್ರತಿವರ್ಷ ಎಲ್ಲ ವಯೋಮಿತಿಗಳಲ್ಲಿಯೂ ಬಹಳಷ್ಟು ಟೂರ್ನಿಗಳು ನಡೆಯುತ್ತಿವೆ. ಪ್ರತಿಭೆ ತೋರಲು ಅವಕಾಶ ಸಿಗುತ್ತಿದೆ. ಪೊಲೀಸ್‌, ಬ್ಯಾಂಕ್, ರೈಲ್ವೆ ಮತ್ತು ಅಂಚೆ ಇಲಾಖೆಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ಹಾಕಿ ಸಂಸ್ಥೆಯು ಎಲ್ಲ ನೆರವನ್ನೂ ನೀಡುತ್ತಿದೆ. ಆದರೆ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗುವ ವರೆಗೂ ರಾಜ್ಯ ಸಂಸ್ಥೆ ಇರುತ್ತದೆ. ಅಲ್ಲಿ ಉತ್ತಮವಾಗಿ ಆಡಿ ಆಯ್ಕೆಗಾರರ ಗಮನ ಸೆಳೆಯುವುದು ಆಟಗಾರರ ಮೇಲೆ ಬಿಟ್ಟಿದ್ದು ಎಂದು ರಘುನಾಥ್ ಹೇಳುತ್ತಾರೆ.

ಒಡಿಶಾ ಮಾದರಿಯ ಹಾಕಿ ಅಭಿವೃದ್ಧಿ ಕರ್ನಾಟಕಕ್ಕೆ ಹೊಂದುವುದು ಕಷ್ಟ ಎನ್ನುತ್ತಾರೆ ಅವರು. ಏಕೆಂದರೆ, ರಾಜ್ಯದ ಪ್ರತೀ ಜಿಲ್ಲೆಯಲ್ಲಿಯೂ ಐದಾರು ಬಗೆಯ ಕ್ರೀಡೆಗಳಿಗೆ ಆದ್ಯತೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಹತ್ತನೇ ತರಗತಿಯವರೆಗೆ ಮಾತ್ರ ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ ನಂತರ ಓದಿಗೆ ಆದ್ಯತೆ ಕೊಡುತ್ತಾರೆ, ಇದರಿಂದಾಗಿಯೂ ಪ್ರಮುಖ ಘಟ್ಟದಲ್ಲಿ ಹಿನ್ನಡೆಯಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಆದರೆ ದಶಕಗಳಿಂದಲೂ ಹುಬ್ಬಳ್ಳಿ, ಬಾಗಲಕೋಟೆ ಹಾಗೂ ಗದುಗಿನ ಸೆಟ್ಲಮೆಂಟ್‌ಗಳು ಹಾಕಿ ಕ್ರೀಡೆಗೆ ಹಲವಾರು ಆಟಗಾರರನ್ನು ಕಾಣಿಕೆಯಾಗಿ ನೀಡಿವೆ. ಗದುಗಿನ ಬೇನು ಭಾಟ್, ಎಚ್‌.ವೈ. ಸಿದ್ಲಿಂಗ್, ರಾಚಯ್ಯ, ಮಾಣಿಕ್ ಭಾಟ್, ಸಿದ್ಧಪ್ಪ ಬಾಲೆಹೊಸೂರು,
ಎಚ್‌.ಬಿ. ವೀರಾಪುರ, ಜಾಕ್ಸನ್ ಭಾಟ್, ಕೆ.ಆರ್. ಹಬೀಬ್, ಕಾರ್ಲಟನ್ ಗೋಮ್ಸ್‌ ರಾಷ್ಟ್ರಮಟ್ಟದಲ್ಲಿ ಆಡಿ ಗಮನ ಸೆಳೆದಿದ್ದರು. ರಾಜು ಬಗಾಡೆ 90ರ ದಶಕದಲ್ಲಿ ಬೆಂಗಳೂರಿನ ಕ್ರೀಡಾ ಹಾಸ್ಟೆಲ್‌ನಲ್ಲಿ ಕೆಲವು ವರ್ಷ ಆಡಿದ್ದರು. ಕೆಲವು ವರ್ಷಗಳ ಹಿಂದಷ್ಟೇ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿದ್ದ ಹರೀಶ ಮುತಗಾರ ಗದುಗಿನವರು.

ಆದರೆ ವಿಪರ್ಯಾಸವೆಂದರೆ, ಇಡೀ ಉತ್ತರ ಕರ್ನಾಟಕದಲ್ಲಿ ಒಂದೂ ಹಾಕಿ ಕ್ರೀಡಾ ಹಾಸ್ಟೆಲ್ ಇಲ್ಲವೆಂಬ ದೂರು ಇದೆ. ಗದುಗಿನಲ್ಲಿ ಮಾತ್ರ ಆಸ್ಟ್ರೋ ಟರ್ಫ್‌ ಮೈದಾನ ನಿರ್ಮಾಣವಾಗಿದೆ. ಬಳ್ಳಾರಿಯಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಆದರೆ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿಯಲ್ಲಿ ಇಲ್ಲವೆಂಬ ಕೊರಗು ಇದೆ. ಅಲ್ಲದೆ ಜೂನಿಯರ್ ಹಂತದಲ್ಲಿ ಪಂದ್ಯಗಳ ಸಂಖ್ಯೆ ಹೆಚ್ಚಬೇಕು. ಕರ್ನಾಟಕ ಕ್ರಿಕೆಟ್ ಸಂಸ್ಥೆಯು ಕಳೆದ ಒಂದೂವರೆ ತಿಂಗಳಲ್ಲಿ 250ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಿದೆ. ಇಂತಹ ಮಾದರಿ ಹಾಕಿ ಕ್ರೀಡೆಯಲ್ಲಿ ಇದೆಯೇ?

ಈ ದೇಶದಲ್ಲಿ ಕ್ರಿಕೆಟ್‌ ಪ್ರವರ್ಧಮಾನಕ್ಕೆ ಬರುವ ಮುನ್ನವೇ ಹಾಕಿ ಕ್ರೀಡೆಯು ಒಲಿಂಪಿಕ್‌ ಕೂಟಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದಾಗಿತ್ತು. ಆದರೆ, ಕ್ರಿಕೆಟ್‌ ತನ್ನ ತಾರಾವರ್ಚಸ್ಸಿನ ಆಟಗಾರರನ್ನೇ ರಾಯಭಾರಿಗಳನ್ನಾಗಿ ಮಾಡಿಕೊಂಡಿತು. ಆ ಮೂಲಕ ಬೇರುಮಟ್ಟದಿಂದ ನೆಲೆಗಟ್ಟನ್ನು ಸದೃಢಗೊಳಿಸಿಕೊಂಡಿತು. ಕ್ರಿಕೆಟ್‌ನಷ್ಟೇ ಶ್ರೀಮಂತವಾಗಿ ಹಾಗೂ ದೊಡ್ಡದಾಗಿ ಬೆಳೆಯುವ ಶಕ್ತಿ ಹಾಕಿಗೂ ಇದೆ. ದಶಕ ಗಳು ಉರುಳಿದರೂ ಈ ಕ್ರೀಡೆಯೊಂದಿಗೆ ದೇಶವು ಭಾವನಾತ್ಮಕ ನಂಟು ಹೊಂದಿದೆ. ಅದಕ್ಕಾಗಿಯೇ ಸೋತಾಗ ಟೀಕೆಗಳು ಮತ್ತು ಗೆದ್ದಾಗ ಪ್ರೀತಿಯ ಮಳೆಸುರಿಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT