ಗುರುವಾರ , ಜುಲೈ 7, 2022
23 °C
ಅಧ್ಯಯನಕ್ಕಾಗಿ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಇಳಿಯುವುದೇ?

ವಿಶ್ಲೇಷಣೆ: ವಿದೇಶಿ ವಿಶ್ವವಿದ್ಯಾಲಯಗಳಿಗೆ ಕೆಂಪುಹಾಸು

ಎಚ್‍.ಆರ್.ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ಜಾಗತಿಕ ಮಟ್ಟದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ನಮ್ಮ ದೇಶದ ಉನ್ನತ ಶಿಕ್ಷಣ ವಲಯಕ್ಕೆ ಪ್ರವೇಶಾವಕಾಶವನ್ನು ಕಲ್ಪಿಸಿ, ಭಾರತದಲ್ಲಿ ಅವುಗಳ ಕ್ಯಾಂಪಸ್‍ಗಳನ್ನು ಸ್ಥಾಪಿಸಲು ಅನುಮತಿ ನೀಡುವ ಪ್ರಸ್ತಾವವೊಂದನ್ನು ಕೇಂದ್ರ ಹಣಕಾಸು ಸಚಿವರು 2022-23ರ ಮುಂಗಡಪತ್ರದಲ್ಲಿ ಮಂಡಿಸಿದ್ದಾರೆ. ಗುಜರಾತ್‍ನ ‘ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಷಿಯಲ್ ಟೆಕ್ ಸಿಟಿ’ ಅಥವಾ ‘ಗಿಫ್ಟ್ ಸಿಟಿ’ಯಲ್ಲಿ ವಿತ್ತೀಯ ನಿರ್ವಹಣೆ, ಅದಕ್ಕೆ ಅಗತ್ಯವಾದ ತಂತ್ರಜ್ಞಾನ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಕ್ಷೇತ್ರದಲ್ಲಿ ಉತ್ಕೃಷ್ಟ ಮಟ್ಟದ ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ಪ್ರಾರಂಭಿಸಲು ಈ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವ ಯೋಜನೆ ಈ ಪ್ರಸ್ತಾವದಲ್ಲಿದೆ.

ವಿದೇಶಿ ವಿಶ್ವವಿದ್ಯಾಲಯಗಳನ್ನು ಆಹ್ವಾನಿಸುವ ಈ ಯೋಜನೆ ಹೊಸದೇನಲ್ಲ. ‘ವಿಶೇಷ ಆರ್ಥಿಕ ವಲಯ’ಗಳಂತಯೇ ‘ಉತ್ಕೃಷ್ಟ ಶೈಕ್ಷಣಿಕ ವಲಯ’ಗಳನ್ನು (ಎಜುಕೇಶನ್ ಎಕ್ಸಲೆನ್ಸ್ ಝೋನ್) ಜಾರಿಗೆ ತರುವ ಆಲೋಚನೆಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) 2005ರಲ್ಲೇ ಮಾಡಿತ್ತು. 2010ರಲ್ಲಿ, ಎರಡನೇ ಅವಧಿಯ ಯುಪಿಎ ಸರ್ಕಾರ, ‘ಫಾರಿನ್ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ (ರೆಗ್ಯುಲೇಶನ್ ಆಫ್ ಎಂಟ್ರಿ ಆ್ಯಂಡ್ ಆಪರೇಶನ್ಸ್) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಆದರೆ 15ನೇ ಲೋಕಸಭೆಯ ವಿಸರ್ಜನೆಯಿಂದಾಗಿ ಅದರ ಕಾಲಾವಧಿ ಮುಗಿಯಿತು. 2020ರ ಹೊಸ ಶಿಕ್ಷಣ ನೀತಿ, ಭಾರತವನ್ನು ಅತ್ಯುತ್ತಮ ಉನ್ನತ ಶಿಕ್ಷಣದ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ‘ಇಂಟರ್‌ನ್ಯಾಷನಲ್ ಬ್ರ್ಯಾಂಚ್ ಕ್ಯಾಂಪಸ್’ಗಳನ್ನು ತೆರೆಯುವ ಅವಕಾಶವನ್ನು ಪ್ರಕಟಿಸಿತ್ತು. ಇದೀಗ ಮುಂಗಡಪತ್ರದಲ್ಲಿನ ಪ್ರಸ್ತಾವ ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಒಂದು ನಿಶ್ಚಿತ ರೂಪವನ್ನು ಕೊಡುವ ಕೆಲಸವನ್ನು ಪ್ರಾರಂಭಿಸಿದೆ.

ಗುಜರಾತ್‍ನ ಗಾಂಧಿನಗರದ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿ, 359 ಹೆಕ್ಟೇರ್‌ಗಳ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಗಿಫ್ಟ್ ಸಿಟಿಯಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗುತ್ತದೆ. ನಮ್ಮ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಕೆಲಸಕಾರ್ಯಗಳನ್ನೂ ನಿಯಂತ್ರಿಸುವ ಯುಜಿಸಿ, ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್, ಹೈಯರ್ ಎಜುಕೇಶನ್ ಕಮಿಷನ್ ಆಫ್ ಇಂಡಿಯಾ, ನ್ಯಾಷನಲ್ ಅಸೆಸ್‍ಮೆಂಟ್ ಆ್ಯಂಡ್ ಅಕ್ರೆಡಿಟೇಶನ್ ಕೌನ್ಸಿಲ್ (ನ್ಯಾಕ್), ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ ಮುಂತಾದ ಸಂಸ್ಥೆಗಳು ರೂಪಿಸಿರುವ ನಿಯಂತ್ರಣ ನೀತಿ, ನಿಯಮಗಳು ಗಿಫ್ಟ್ ಸಿಟಿಯಲ್ಲಿ ಬರಲಿರುವ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವುದಿಲ್ಲ. ಹೀಗೆಂದ ಮಾತ್ರಕ್ಕೆ ಈ ವಿದೇಶಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಕೇಂದ್ರಗಳು ಸಂಪೂರ್ಣವಾಗಿ ಸ್ವತಂತ್ರ ಘಟಕಗಳೆಂದಲ್ಲ. ಅದರ ಬದಲಿಗೆ, 2020ರ ಏಪ್ರಿಲ್‍ನಲ್ಲಿ ಅಸ್ತಿತ್ವಕ್ಕೆ ಬಂದ ‘ಇಂಟರ್‌
ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಅಥಾರಿಟಿ’ ರೂಪಿಸಲಿರುವ ನೀತಿ, ನಿಯಮ, ಕಾನೂನುಗಳಿಗೆ ಒಳಪಟ್ಟು ಇವು ಕೆಲಸ ಮಾಡಬೇಕಾಗುತ್ತದೆ. ಈ ಎಲ್ಲ ನಿಯಮಗಳೂ ಸರಾಗ ವ್ಯವಹಾರದ ತತ್ವಗಳಿಗೆ (ಈಸ್ ಆಫ್ ಡೂಯಿಂಗ್ ಬಿಸಿನೆಸ್) ಅನುಸಾರವಾಗಿ ಇರಲಿವೆ.

ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಲಿರುವ ಈ ವಿಶ್ವವಿದ್ಯಾಲಯಗಳಿಗೆ ವಿಶೇಷ ಕರ ವಿನಾಯಿತಿ, ಪ್ರೋತ್ಸಾಹಕಗಳು ದೊರೆಯಲಿದ್ದು, ಭಾರತದಲ್ಲಿ ಗಳಿಸಿದ ಲಾಭವನ್ನು ತಮ್ಮ ದೇಶಗಳಿಗೆ ಕಳುಹಿಸಲು ಅವಕಾಶ ಇರಲಿದೆ. ವಿದ್ಯಾರ್ಥಿಗಳ ಪ್ರವೇಶಾತಿ, ಪ್ರವೇಶಕ್ಕೆ ಅಗತ್ಯವಾದ ವಿದ್ಯಾರ್ಹತೆ, ಪಠ್ಯ, ಪಾಠಕ್ರಮ, ಬೋಧನಾ ವಿಧಾನ, ಪರೀಕ್ಷೆಯ ಸ್ವರೂಪ, ಶುಲ್ಕ, ನೀಡುವ ಪದವಿ, ಶಿಕ್ಷಕರ ಆಯ್ಕೆ ಮುಂತಾದ ವಿಷಯಗಳಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಲಾಗುತ್ತದೆ. ಈ ಎಲ್ಲ ಕ್ರಮಗಳನ್ನು ಜಾರಿಗೆ ತರಲು, ಸದ್ಯದಲ್ಲಿ ಅಸ್ತಿತ್ವದಲ್ಲಿರುವ ನಿಯಮಗಳಿಗೆ ಕಾನೂನಾತ್ಮಕ ತಿದ್ದುಪಡಿಗಳನ್ನು ತರುವ ಕೆಲಸವನ್ನು ಇಂಟರ್‌ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಪ್ರಾಧಿಕಾರ ಪ್ರಾರಂಭಿಸಲಿದೆ. ಆದರೆ ಈ ಕೆಲಸಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ.

ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ರತ್ನಗಂಬಳಿ ಹಾಸುವ ಈ ಪ್ರಸ್ತಾವಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಬಂದರೆ ಉತ್ಕೃಷ್ಟ ಗುಣಮಟ್ಟದ ಉನ್ನತ ಶಿಕ್ಷಣ ನಮ್ಮಲ್ಲಿಯೇ ಲಭಿಸುತ್ತದೆ. ಪಠ್ಯ, ಪಾಠಕ್ರಮ, ಅಧ್ಯಯನ, ಸಂಶೋಧನೆಗಳಲ್ಲಿನ ಹೊಸ ವಿಧಾನ, ಹೊಸ ಆಲೋಚನೆಗಳಿಂದ ಜ್ಞಾನಾರ್ಜನೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ವಿದೇಶಿ ಬಂಡವಾಳ ಹರಿದು ಬರುತ್ತದೆ. ದುಬೈನಲ್ಲಿರುವ ‘ಅಕಡೆಮಿಕ್ ಇಂಟರ್‌ ನ್ಯಾಷನಲ್ ಸಿಟಿ’ಯಂತೆಯೇ, ಗಿಫ್ಟ್‌ ಸಿಟಿ ಕೂಡ ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಕೇಂದ್ರವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ಒಂದು ವಾದ. ಇದಕ್ಕೆ ವಿರುದ್ಧವಾದ ಅಭಿಪ್ರಾಯವೂ ಇದೆ.

ಭಾರತಕ್ಕೆ ಬರಲಿರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿನ ಉನ್ನತ ಶಿಕ್ಷಣ ನಮ್ಮ ವಿದ್ಯಾರ್ಥಿಗಳ ಕೈಗೆಟುಕದಷ್ಟು ದುಬಾರಿಯಾಗಲಿದೆ ಎಂಬುದು ಮೊದಲನೆಯ ಆಕ್ಷೇಪ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ, ಪ್ರಪಂಚದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿನ ಮೊದಲ 100 ಸಂಸ್ಥೆಗಳಿಗೆ ಈ ಅವಕಾಶ ನೀಡಬಹುದಿತ್ತು. ಈಗ, ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ, ‘ಟೈಮ್ಸ್ ಹೈಯರ್ ಎಜುಕೇಶನ್ ರ‍್ಯಾಂಕಿಂಗ್‌’ನಲ್ಲಿ, ಮೊದಲ 500 ಸ್ಥಾನಗಳಲ್ಲಿರುವ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‍ಗಳನ್ನು ಸ್ಥಾಪಿಸಬಹುದು. ಈ ಕ್ರಮದಿಂದ ಉನ್ನತ ಶಿಕ್ಷಣದ ಪ್ರಸ್ತಾವವನ್ನು ಪ್ರಾರಂಭಕ್ಕೆ ಮುಂಚೆಯೇ ದುರ್ಬಲಗೊಳಿಸಲಾಗಿದೆ ಎಂಬ ಟೀಕೆಯಿದೆ.

ಸಿಂಗಪುರ, ಮಲೇಷ್ಯಾ, ವಿಯೆಟ್ನಾಂ ಮುಂತಾದ ದೇಶಗಳು, ಕಳೆದ ಸುಮಾರು ಎರಡು ದಶಕಗಳಿಂದ, ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳನ್ನು ಕರೆದುತರಲು ಪ್ರಯತ್ನಿಸುತ್ತಿದ್ದರೂ ದೊರೆತಿರುವ ಯಶಸ್ಸು ಮಾತ್ರ ನಗಣ್ಯ. ಹೀಗಾಗಿ ಭಾರತದ ಪ್ರಸ್ತಾವಕ್ಕೆ ಸ್ಪಂದಿಸಿ, ಇಲ್ಲಿಗೆ ಬರಬಹುದಾದ ಹೆಸರಾಂತ ವಿದೇಶಿ ವಿಶ್ವವಿದ್ಯಾಲಯಗಳ ಸಂಖ್ಯೆ ಬಹಳ ಕಡಿಮೆ ಎಂಬ ಅಭಿಪ್ರಾಯವಿದೆ. ಅವುಗಳ ಬದಲಿಗೆ, ಭಾರತ ಸರ್ಕಾರ ನೀಡುವ ಆಕರ್ಷಕ ಪ್ರೋತ್ಸಾಹಕಗಳಿಂದ, ಬಂಡವಾಳ ಹೂಡಿ ಲಾಭ ಗಳಿಸುವ ಉದ್ದೇಶದಿಂದ 500ರ ಪಟ್ಟಿಯಲ್ಲಿರುವ ಎರಡನೆಯ ದರ್ಜೆಯ ವಿದ್ಯಾಸಂಸ್ಥೆಗಳ ಸಂಖ್ಯೆಯೇ ಹೆಚ್ಚಾಗಬಹುದು. ಇಂತಹ ವಿಶ್ವವಿದ್ಯಾಲಯಗಳಿಗೆ ಮಣೆ ಹಾಕುವುದಕ್ಕಿಂತ ನಮ್ಮ ದೇಶದಲ್ಲಿಯೇ ಇರುವ ಆಯ್ದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಬಾರದೇಕೆ ಎಂಬುದು ಸಹಜವಾದ ಪ್ರಶ್ನೆ.

ಐಐಟಿ ನಮ್ಮ ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ. 2008- 09ರ ನಡುವೆ ಅಸ್ತಿತ್ವಕ್ಕೆ ಬಂದ ಎಂಟು ಹೊಸ ಐಐಟಿಗಳ ಪರಿಸ್ಥಿತಿ, ಕೆಲಸಕಾರ್ಯಗಳನ್ನು 2019ರಲ್ಲಿ ಪರಿಶೀಲಿಸಿದ ಭಾರತ ಸರ್ಕಾರದ ಮಹಾಲೇಖಪಾಲರು, ಅವುಗಳ ಶೋಚನೀಯ ಪರಿಸ್ಥಿತಿಯನ್ನು ತಮ್ಮ ವರದಿಯಲ್ಲಿ ಎತ್ತಿ ತೋರಿದ್ದಾರೆ. ಅವುಗಳಲ್ಲಿ ಅನೇಕ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಅಗತ್ಯವಾದ ಪ್ರಯೋಗಶಾಲೆಗಳಿಲ್ಲ. ಯಾವ ಕೈಗಾರಿಕಾ ಸಂಸ್ಥೆಗಳೂ ಸಂಶೋಧನೆಯನ್ನು ಪ್ರಾಯೋಜಿಸಿಲ್ಲ. ಕಳೆದ 5 ವರ್ಷಗಳಲ್ಲಿ ಇವುಗಳಲ್ಲಿ ಯಾವ ಒಂದು ಕೇಂದ್ರಕ್ಕೂ ಒಂದೇ ಒಂದು ಪೇಟೆಂಟ್ ದೊರೆತಿಲ್ಲ. ಇದರೊಂದಿಗೆ ಉತ್ತಮ ಬ್ರ್ಯಾಂಡ್ ಮೌಲ್ಯವಿರುವ ಐಐಟಿ, ಐಐಎಂ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇಂದ್ರೀಯ ವಿಶ್ವವಿದ್ಯಾಲಯಗಳು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ ಮುಂತಾದ ಕೇಂದ್ರ ಧನಸಹಾಯದ ಸಂಸ್ಥೆಗಳಲ್ಲಿ ಬೋಧನೆ, ಸಂಶೋಧನೆಯ ಶೇ 36ರಷ್ಟು ಹುದ್ದೆಗಳು ಖಾಲಿಯಿವೆ.

ವಿದೇಶಿ ವಿಶ್ವವಿದ್ಯಾಲಯಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುವುದರ ಜೊತೆಗೆ ನಮ್ಮ ದೇಶದಲ್ಲಿ ಉನ್ನತ ಮಟ್ಟಕ್ಕೇರುವ ಸಾಮರ್ಥ್ಯವಿರುವ ಸಂಸ್ಥೆಗಳಿಗೆ ಎಲ್ಲ ಪ್ರೋತ್ಸಾಹವನ್ನೂ ನೀಡಿ, ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸ್ಪರ್ಧಿಸಲು ಅಗತ್ಯವಾದ ಸಮಾನ ಅನುಕೂಲ, ಅವಕಾಶಗಳನ್ನು ಕಲ್ಪಿಸಬೇಕೆಂಬುದು ಶಿಕ್ಷಣ ತಜ್ಞರ ಬೇಡಿಕೆ.

ವಿದೇಶಿ ವಿಶ್ವವಿದ್ಯಾಲಯಗಳ ಶಿಕ್ಷಣ ಇಲ್ಲಿಯೇ ದೊರೆತಾಗ ಅಲ್ಲಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಇಳಿಯುತ್ತದೆಯೇ? ವಿವಿಧ ದೇಶಗಳ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದ ಯುವಜನರ ಒಡನಾಟದಲ್ಲಿ, ಅಂತರರಾಷ್ಟ್ರೀಯ ಜೀವನಾನುಭವಗಳಿಗೆ ತೆರೆದುಕೊಳ್ಳುತ್ತಲೇ, ಆಸಕ್ತಿಯ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣತಿ ಪಡೆಯುವ ವಿಶಿಷ್ಟ ಅವಕಾಶವನ್ನು ಬಯಸುವ ವಿದ್ಯಾರ್ಥಿಗಳು, ವಿದೇಶಗಳಿಗೆ ತೆರಳುವುದರಲ್ಲಿ ಯಾವ ಅನುಮಾನವೂ ಇಲ್ಲ ಎನ್ನುವುದು
ವ್ಯಾಪಕವಾಗಿರುವ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು