ಮಂಗಳವಾರ, ಮೇ 18, 2021
30 °C

ನೆನಪು| ಬಿ. ಬಸವಲಿಂಗಪ್ಪ: ಜನಾಂಗಗಳ ಕಣ್ಣು ತೆರೆಸಿದ ನಾಯಕ

ಅಗ್ರಹಾರ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ನೆನಪಾಗುತ್ತಿಲ್ಲ, ಬಹುಶಃ 1987-1990ರ ನಡುವೆ ಇರಬೇಕು, ಒಡಿಶಾದ ಭುವನೇಶ್ವರದ ಒಂದು ಸರ್ಕಾರಿ ಅತಿಥಿಗೃಹದಲ್ಲಿ ತಂಗಿದ್ದೆ. ಬೆಳಗಿನ ಉಪಾಹಾರಕ್ಕೆ ಹೋಗುವಾಗ ಕೈತೋಟದಲ್ಲಿ ನಾಲ್ಕಾರು ಕರಪತ್ರಗಳು ಬಿದ್ದಿದ್ದವು. ಒರಿಯಾ ಭಾಷೆಯಲ್ಲಿದ್ದುದರಿಂದ ಕುತೂಹಲ ಕಡಿಮೆಯಾದರೂ ಅದರಲ್ಲಿದ್ದ ಬಣ್ಣದ ಚಿತ್ರ ಒಂದು ಕ್ಷಣ ಸೆಳೆಯಿತು. ತುಪ್ಪಳದ ಟೊಪ್ಪಿಗೆ ಧರಿಸಿದ್ದ ಭೂಪೇನ್ ಹಜಾರಿಕಾ, ಫಾರೂಕ್ ಅಬ್ದುಲ್ಲಾ ರೀತಿಯಲ್ಲಿ ಕಂಡರೂ ಕರಪತ್ರವನ್ನು ಕೈಗೆತ್ತಿಕೊಂಡು ನೋಡಿದಾಗ ಆಶ್ಚರ್ಯವಾಯಿತು. ಅದು ನಮ್ಮವರೇ ಆಗಿದ್ದ ಬಸವಲಿಂಗಪ್ಪನವರ ಚಿತ್ರ ಅನಿಸಿತು! ಅವರನ್ನೇ ಹೋಲುವ ಬೇರೆ ಯಾರದ್ದೋ ಇರಬೇಕೆನಿಸಿತು ಒಂದು ಕ್ಷಣ.  ಚಿತ್ರದ ಕೆಳಗೆ ಏನು ಬರೆಯಲಾಗಿತ್ತು ಎಂಬುದು ತಿಳಿಯುವಂತಿರಲಿಲ್ಲ.


ಅಗ್ರಹಾರ ಕೃಷ್ಣಮೂರ್ತಿ

ಉಪಹಾರ ನೀಡಿದವರನ್ನು ಕೇಳಿದೆ. ಅವರು ಅದನ್ನು ಗ್ರಹಿಸಿ ಸಾರಾಂಶ ಹೇಳಲಾಗದೆ ನನ್ನ ಮುಂದೆ ಒಂದೇಸಮ ಓದಿದರು. ಬಸವಲಿಂಗಪ್ಪನವರ ಹೆಸರು ತಿಳಿಯಿತು. ಅವರು ಓದಿದ್ದನ್ನು ನಾನು ಅರ್ಥಮಾಡಿಕೊಂಡಂತೆ ಅದು ಬಸವಲಿಂಗಪ್ಪನವರ ಪರಿಚಯ ಮತ್ತು ತಲೆಯ ಮೇಲೆ ಮಲ ಹೊರುವ ಪದ್ಧತಿಯ ರದ್ದತಿಯ ವಿಷಯವಾಗಿತ್ತು. ಆ ಕರಪತ್ರಗಳು ಯಾಕೆ ಯಾವ ಕಾರ್ಯಕ್ರಮಕ್ಕೆ ಅಲ್ಲಿ ಚೆಲ್ಲಿಕೊಂಡಿದ್ದವೋ ತಿಳಿಯಲಿಲ್ಲ. ಆದರೆ ಬಸವಲಿಂಗಪ್ಪನವರ ವ್ಯಕ್ತಿತ್ವ ಮತ್ತು ಅವರು ಕರ್ನಾಟಕದಲ್ಲಿ ಮಾಡಿದ್ದ ಅಸಾಮಾನ್ಯ ಕೆಲಸದ ಮಹತ್ವವನ್ನು ಸೂಚಿಸಿದಂತಿತ್ತು. ಅವರ ವಕೀಲಿ ವೃತ್ತಿ ಮತ್ತು ರಾಜಕೀಯ ಜೀವನದ ವಿವರಗಳ ಬಗ್ಗೆ ಇಲ್ಲಿ ಬರೆಯುವ ಇರಾದೆಯಿಲ್ಲ. ಅವರೊಬ್ಬ ಕರ್ನಾಟಕದ ವರ್ಣರಂಜಿತ ರಾಜಕಾರಣಿ ಎಂಬ ಕ್ಲೀಷೆಯಲ್ಲಿ ಹೇಳದೆ ಅವರು ಯಾಕೆ ನಮಗೆ ಮುಖ್ಯರಾಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆನಿಸುತ್ತದೆ.

1973ರ ಕೊನೆಯ ವಾರಗಳಲ್ಲಿ ಕರ್ನಾಟಕದಲ್ಲಿ ನಡೆದ ರಾಜಕೀಯ ವಿಪ್ಲವ ಐತಿಹಾಸಿಕವಾದುದು. ಬಸವಲಿಂಗಪ್ಪನವರು ಮೈಸೂರಿನ ತಮ್ಮ ಭಾಷಣವೊಂದರಲ್ಲಿ ಒಂದು ವಿಚಾರ ದೀವಿಗೆಯನ್ನು ಬೆಳಗಿದರು. ಅದನ್ನು ಒಂದು ಕಿಚ್ಚು ಎಂದು ಭೂತಕನ್ನಡಿಯಲ್ಲಿಟ್ಟು ರಾಜ್ಯದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿಸಲಾಯಿತು. ಹಾಗೆ ಮಾಡುವುದರಲ್ಲಿ ಸಮಕಾಲೀನ ರಾಜಕಾರಣ, ಸಾಂಪ್ರದಾಯಿಕ ಪಟ್ಟಭದ್ರ ಹಿತಾಸಕ್ತಿ ಮತ್ತು ಹುಸಿ ಸಾಂಸ್ಕೃತಿಕ ಅಟ್ಟಹಾಸವಿತ್ತು. ಆ ಕಾಳ್ಗಿಚ್ಚು ಆಧುನಿಕ ವೈಚಾರಿಕತೆ, ಪ್ರಗತಿಶೀಲ ಪ್ರಜ್ಞೆಯೊಂದರ ಮೇಲೆ ನೆಡೆದ ದಾಳಿಯಾಗಿತ್ತು. ಅದು ಬೂಸಾ ಪ್ರಕರಣವೆಂದು ಕರ್ನಾಟಕದ ರಾಜಕೀಯ ಸಾಂಸ್ಕೃತಿಕ ಇತಿಹಾಸದಲ್ಲಿ ದಾಖಲಾಗಿದೆ.

ಅವರು ಅಂಬೇಡ್ಕರ್ ವಿಚಾರವಂತಿಕೆಯನ್ನು ಒಪ್ಪಿದ್ದವರು. ತಮ್ಮ ಸಮಾಜದ ಯುವಕರ ಬೌದ್ಧಿಕ ಕ್ಷೇಮಚಿಂತನೆಯ ಅರಿವಿನಲ್ಲಿ ಕನ್ನಡದಲ್ಲಿ ಏನೂ ಇಲ್ಲ, ಬರೀ ಬೂಸಾ, ಇಂಗ್ಲಿಷಿನ ಪುಸ್ತಕಗಳನ್ನು ಓದಿರಿ ಎಂದ ಅವರ ಮಾತು ನಾನಾ ಅವತಾರಗಳನ್ನು ತಳೆಯಿತು. ಆಗಿನ ಎರಡು ಆಶ್ಚರ್ಯಗಳೆಂದರೆ, ಬಸವಲಿಂಗಪ್ಪನವರ ಮಾತುಗಳಿಗೆ ಕುವೆಂಪು ಬೆಂಬಲ ಸೂಚಿಸುವವರೆಗೂ ಅಂದಿನ ಸಾಹಿತ್ಯಲೋಕ ಮೌನವಾಗಿದ್ದಿದ್ದು ಮತ್ತು ಪ್ರಾಣಗಳನ್ನು ಒತ್ತೆಯಿಟ್ಟು ಅವರ ಪರವಾಗಿ ಸಭೆ, ಮೆರವಣಿಗೆಗಳನ್ನು ನಡೆಸಿದವರು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಕೆಲವೇ ದಲಿತೇತರ ವಿದ್ಯಾರ್ಥಿಗಳಾಗಿದ್ದುದು. ಅದು ದಿನಗಳುರುಳಿದಂತೆ ಬೆಂಗಳೂರಿನ ಬಹುತೇಕ ಎಲ್ಲ ದಲಿತ ವಿದ್ಯಾರ್ಥಿಗಳು ಮೊದಲ ಬಾರಿಗೆ ತಮ್ಮ ಸಮುದಾಯದ ಘನತೆಯನ್ನು ಕಾಪಾಡಿಕೊಳ್ಳಲು ಮೈಚಳಿ ಬಿಟ್ಟು ಎದ್ದುನಿಂತರು. ಆನಂತರ ಆ ಹೋರಾಟ ಕರ್ನಾಟಕದಾದ್ಯಂತ ಹುಟ್ಟಿಕೊಂಡ ದಲಿತ ಸಂಘಟನೆ ಮತ್ತು ಹೋರಾಟಗಳಿಗೆ ಕಾರಣವಾಯಿತು. ಬಸವಲಿಂಗಪ್ಪನವರ ಉದ್ದೇಶ ಇದೇ ಆಗಿತ್ತು ಎನ್ನುವಂತಿಲ್ಲ. ಆದರೆ ಅವರು ಹಚ್ಚಿದ ಸಣ್ಣ ದೀಪದ ಕುಡಿ ಕಾರಣವಾಗಿತ್ತು.

ಬೂಸಾಗಿಂತ ಮುಂಚಿನಿಂದಲೂ ಬಸವಲಿಂಗಪ್ಪನವರ ಅನೇಕ ಮಾತುಗಳು ಸಾಂಪ್ರದಾಯಿಕ ಮನಸ್ಸುಗಳಿಗೆ ವಿಚಿತ್ರ ಅನಿಸಿದ್ದುಂಟು. ದೇವರ ಪಟಗಳನ್ನು ಚರಂಡಿಗೆ ಹಾಕಿರಿ ಅಂದದ್ದುಂಟು. ಇವತ್ತಿನ ದಿನಮಾನಗಳಲ್ಲಾಗಿದ್ದರೆ ಅವರ ನಾಲಿಗೆಯ ಮೇಲೋ, ತಲೆಯ ಮೇಲೋ ಲಕ್ಷಾಂತರ ರೂಪಾಯಿಗಳ ಬೆಲೆ ನಿಗದಿಯಾಗಿಬಿಡುತ್ತಿತ್ತು. ಆಗಿನ ದಿನಗಳಲ್ಲಿ ಅಮ್ಮಮ್ಮಾ ಅಂದರೆ ಬಸವಲಿಂಗಪ್ಪ ಒಬ್ಬ ತಲೆಕೆಟ್ಟ ಮನುಷ್ಯ ಅನ್ನುತ್ತಿದ್ದರು. ಆ ಬಗೆಯ ಅಭಿವ್ಯಕ್ತಿ ಮತ್ತು ವೈಚಾರಿಕ ಸ್ವಾತಂತ್ರ್ಯದ ಕಾರಣ ಕೋಟ್ಯಂತರ ದಲಿತ ಚೇತನಗಳು ನಾನಾ ಕ್ಷೇತ್ರಗಳಲ್ಲಿ ಘನತೆಯಲ್ಲಿ ತಲೆಯೆತ್ತಿ ನಿಂತಿವೆ. ಅವರು ಯಾವ ರೀತಿಯ ಸಾಹಿತ್ಯವನ್ನು ನಿರೀಕ್ಷಿಸಿದ್ದರೋ ಆ ರೀತಿಯ ಅನುಭವ ಜಗತ್ತು ಮತ್ತು ಕನ್ನಡ ಬಾಷೆ ಇಂದು ನಮಗೆ ದಕ್ಕುತ್ತಿರುವುದರಿಂದಲೇ ನಮಗೆ ಬಸವಲಿಂಗಪ್ಪ ಮುಖ್ಯರು.

ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ಅವರು ಕಾಯ್ದೆಯ ಮೂಲಕ ನಿಷೇಧಿಸಿದ್ದು ಇಡೀ ದೇಶದಲ್ಲೇ ಮೊಟ್ಟಮೊದಲ ಮಾದರಿಯಾಗಿತ್ತು. ಆದರೂ ಇದನ್ನು ಯುಗಗಳಿಂದಲೂ ಅನಾಗರಿಕ ಪದ್ಧತಿಯನ್ನಾಗಿ ಕಾಪಾಡಿಕೊಂಡು ಬಂದಿದ್ದ ಪ್ರಜ್ಞೆಗೆ ಇದೊಂದು ಕ್ರಾಂತಿಕಾರಕ ಹೆಜ್ಜೆ ಅನಿಸದೆ ಕೋರ್ಟು ಕಚೇರಿಗಳಲ್ಲಿ ಅಲೆದಾಡಿ ತಡೆಯೊಡ್ಡಿದ್ದುಂಟು. ಆದರೆ ಬಸವಲಿಂಗಪ್ಪನವರು ಜಗ್ಗದೆ ಈ ಕಾಯ್ದೆಯನ್ನು ಯಶಸ್ವಿಗೊಳಿಸಿದರು. ಅನಾಗರಿಕ ಸಮುದಾಯದ ಕಣ್ಣು ತೆರೆಯಿಸಿದರು. ಜನಾಂಗಗಳ ಕಣ್ಣುಗಳನ್ನು ತೆರೆಯಿಸುವ ಕೆಲಸ ಕವಿ ದಾರ್ಶನಿಕರದ್ದು ಮಾತ್ರವಲ್ಲ ಎಂಬುದನ್ನು ಮಾಡಿ ತೋರಿಸಿದರು.

ತಮಾಷೆಯೆಂದರೆ ಪಟಗಳನ್ನು ಚರಂಡಿಗೆ ಹಾಕಿ ಅಂದಾಗ ಕೆರಳದ, ಮಲ ಹೊರುವ ಪದ್ಧತಿ ತಂದಾಗ ಕೆರಳದೆ ಕೇವಲ ಕಾನೂನು ಮೆಟ್ಟಿಲಲ್ಲಿ ತಿರುಗಾಡಿದ ಸಾಂಪ್ರದಾಯಕ ಸವರ್ಣೀಯ ಸಮಾಜ ಕನ್ನಡ ಸಾಹಿತ್ಯದಲ್ಲಿ ಬೂಸಾ ಇದೆ ಅನ್ನುವ ಮಾತಿನ ಮೇಲೆ ಒಮ್ಮೆಲೆ ಹೌಹಾರಿಬಿದ್ದು ಬಸವಲಿಂಗಪ್ಪನವರ ಬಲಿಯನ್ನೇ ತೆಗೆದುಕೊಂಡುಬಿಟ್ಟಿತು! ಪಕ್ಷ ರಾಜಕಾರಣದಲ್ಲೂ ಅದರಿಂದಾಚೆಗೂ ಇದ್ದ ಜಾತೀಯತೆ ಅವರನ್ನು ಬಲಿ ತೆಗೆದುಕೊಳ್ಳಲು ಭಾಷೆ, ಸಾಹಿತ್ಯವೆಂಬ ಒಂದು ಸೆಕ್ಯುಲರ್ ವಿಷಯದ ವಿವಾದಕ್ಕಾಗಿಯೇ ಕಾಯುತ್ತ ಕುಳಿತಿದ್ದು ಭಾವನಾತ್ಮಕ ಅಂಶವನ್ನೇ ಬಳಸಿಕೊಂಡದ್ದು ದೊಡ್ಡ ಕ್ರೌರ್ಯ.

ಬೂಸಾ ಪ್ರಕರಣ ಪ್ರಾರಂಭವಾದಾಗ 18-20ರ ತರುಣರಾಗಿದ್ದ ನಾವೆಲ್ಲ ಅವರನ್ನು ಬೆಂಬಲಿಸಿರುವುದನ್ನು ತಿಳಿದು ನಮ್ಮನ್ನು ನೋಡುವ ಇಚ್ಛೆಯಿಂದ ಯಾರ ಮೂಲಕವೋ ಕರೆಸಿಕೊಂಡಿದ್ದರು. ನಾವು ಹೋದಾಗ ಸಂತೋಷಪಟ್ಟು ಎಲ್ಲಕಡೆ ನಿಮ್ಮನ್ನು ಹುಡುಕಾಡಿ ಥಳಿಸುತ್ತಿದ್ದಾರಂತೆ. ‘ನಿಮ್ಮ ರಕ್ಷಣೆಗೆ ಏನು ಮಾಡಿಕೊಂಡಿದ್ದೀರಿ’ ಎಂದು ಕಾಳಜಿ ತೋರಿಸಿದರು. ‘ನಾವು ಬರಿಗೈ ಹೋರಾಟಗಾರರು’ ಎಂದಾಗ ಅವರ ವಾಚ್‌ಮನ್‌ನನ್ನು ಕರೆದು ಮನೆ ಮುಂದಿದ್ದ ಬಿದಿರುಮೆಳೆಯಿಂದ ಕಡಿಸಿ ನಮಗೆಲ್ಲ ಒಂದೊಂದು ಮೊಳದುದ್ದ ಹಸಿ ಬಿದಿರುಬೆತ್ತ ಕೊಡಿಸಿದ್ದರು! ನಾವು ಕೈಲಿ ಅದನ್ನು ಹಿಡಿದು ಹೊರಟಾಗ ‘ಅಯ್ಯೊ ನೀವು ಹಿಂಗೆ ಹಿಡಕೊಂಡು ಬೀದೀಲಿ ಹೋಗ್ತಿದ್ದರೆ ಪೊಲೀಸಿನವರು ನಿಮ್ಮನ್ನ ಹಿಡಕೊಂಡು ಹೋಗ್ತಾರೆ’ ಎಂದು ಬೆತ್ತವನ್ನು ಬೆನ್ನಿನ ಹಿಂದೆ ಷರಟಿನ ಒಳಗೆ ತೂರಿಸಿ ಹೇಗೆ ಬಚ್ಚಿಟ್ಟಕೊಳ್ಳಬೇಕೆಂಬುದನ್ನು ತೋರಿಸಿಕೊಟ್ಟು ಬೀಳ್ಕೊಟ್ಟಿದ್ದರು. ನಾವು ನಮ್ಮನಮ್ಮ ರೂಮುಗಳಿಗೆ ಹೋಗುವುದರೊಳಗೇ ಅವುಗಳನ್ನು ವಿಸರ್ಜಿಸಿದ್ದೆವು. ಬಹುಶಃ ಆಗಿನ ಕರ್ನಾಟಕ ಮಂತ್ರಿ ಮಂಡಲದ ಸಾಮೂಹಿಕ ರಾಜೀನಾಮೆಯ ಸಂದರ್ಭದಲ್ಲಿ ಬಸವಲಿಂಗಪ್ಪನವರು ಸಹ ತಮ್ಮ ರಕ್ಷಣೆಗೆ ತಮ್ಮ ಬೆನ್ನನ್ನು ಬರಿದಾಗಿಯೇ ಇರಿಸಿಕೊಂಡಿದ್ದರೆನಿಸುತ್ತದೆ. ಯಾಕೆಂದರೆ ಆ ಕಾಲದಲ್ಲೇ ಮೊದಲ ಬಾರಿಗೆ ಕರ್ನಾಟಕದ ರಾಜಕಾರಣಿಗಳು ತಮ್ಮ ರಕ್ಷಣೆಗೆ ಬೆನ್ನಲ್ಲಿ ‘ಜನ’ ಇಟ್ಟುಕೊಳ್ಳುವುದನ್ನು ಶುರು ಮಾಡಿದ್ದರು.

ಬಸವಲಿಂಗಪ್ಪನವರು ದಲಿತ ಮತ್ತು ದಲಿತೇತರ ಸಮುದಾಯದ ಒಳಿತಿಗಾಗಿ, ಸಮಾನತೆಗಾಗಿ, ಮನುಷ್ಯ ಘನತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಸರ್ವ ನಿರಾಕರಣಾ ವಾದಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಪೆರಿಯಾರ್ ಅವರ ತಾತ್ವಿಕತೆಯನ್ನು ಒಪ್ಪಿ ಪಾಲಿಸುತ್ತಿದ್ದವರು. ಅವರ ಜನ್ಮ ಶತಾಬ್ದಿಯ ಹೊತ್ತಿನಲ್ಲಿ ಅವರ ಮಾರ್ಗದ ರಚನಾತ್ಮಕ ಮತ್ತು ಬೌದ್ಧಿಕ ಚಿಂತನೆಗಳನ್ನು ರೂಢಿಸಿಕೊಳ್ಳುವುದು ಅವರಿಗೆ ನಾವು ಸಲ್ಲಿಸುವ ಗೌರವವಾದೀತು.

(ಲೇಖಕ: ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ, ಸಾಹಿತಿ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು