ಶನಿವಾರ, ಮಾರ್ಚ್ 25, 2023
29 °C
ಭವಿಷ್ಯದ ಇಂಧನ ಸುರಕ್ಷತೆಗೆ ಸುಸ್ಥಿರ ಮತ್ತು ಜನಸಹಭಾಗಿತ್ವದ ವಿಧಾನಗಳು ಬೇಕು

ವಿಶ್ಲೇಷಣೆ: ಅಮೃತ ಸಿಂಚನವಾದೀತೇ ‘ಪಂಚಾಮೃತ’ ನೀತಿ?

ಡಾ. ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

Prajavani

ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಜಾಗತಿಕ ಶೃಂಗಸಮ್ಮೇಳನವು ಸ್ಕಾಟ್ಲೆಂಡಿನ ಗ್ಲಾಸ್ಗೋದಲ್ಲಿ ಅಕ್ಟೋಬರ್ 31ರಂದು ಆರಂಭವಾಗಿದೆ. ವಾತಾವರಣದ ತಾಪ ತಗ್ಗಿಸಲು ಭಾರತ ಪಾಲಿಸಲಿರುವ ಐದು ಅಂಶಗಳ ‘ಪಂಚಾಮೃತ’ ಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಮಂಡಿಸಿದ್ದಾರೆ.

ಇಂಗಾಲದ ಸಂಯುಕ್ತಗಳನ್ನು ಕಕ್ಕುತ್ತ ನೆಲ-ಜಲ ವಾಯು ಮಾಲಿನ್ಯ ಉಂಟುಮಾಡಿ ತಾಪಮಾನ ಹೆಚ್ಚಿ ಸುವ ಪೆಟ್ರೋಲಿಯಂ ಹಾಗೂ ಕಲ್ಲಿದ್ದಲು ಇಂಧನ ಮೂಲ ಗಳ ಬಳಕೆ ಕಡಿಮೆ ಮಾಡುತ್ತ ಸಾಗಿ, ಪರಿಸರಸ್ನೇಹಿ ಇಂಧನಗಳನ್ನು ಹೆಚ್ಚೆಚ್ಚು ಬಳಸುತ್ತೇವೆಂದು ಪ್ರಪಂಚಕ್ಕೆ ದೇಶವು ನೀಡಿದ ವಾಗ್ದಾನವದು. ಮೇಘಸ್ಫೋಟ, ಚಂಡ ಮಾರುತ, ನೆರೆ-ಬರ, ಭೂಕುಸಿತ, ಬಿಸಿಗಾಳಿ ಇತ್ಯಾದಿ ಭೀಕರ ಹವಾಮಾನ ವೈಪರೀತ್ಯಗಳು ಭುವಿಯನ್ನೇ ಕಂಗೆಡಿಸುತ್ತಿರುವ ಈ ಸಂಕಟದ ಸಮಯದಲ್ಲಿ, ದೂರದೃಷ್ಟಿಯ ಈ ಹೆಜ್ಜೆ ಸ್ವಾಗತಾರ್ಹವೇ.

ವಾತಾವರಣದ ತಾಪ ಹಾಗೂ ಪರಿಸರ ಮಾಲಿನ್ಯ ತಗ್ಗಿಸುತ್ತಲೇ ಸುಸ್ಥಿರ ಅಭಿವೃದ್ಧಿ ಸಾಧಿಸಲು, ಬದಲೀ ಶಕ್ತಿಮೂಲಗಳನ್ನು ಬಳಸಿಕೊಳ್ಳುವ ಚಿಂತನೆಗಳು ಆರಂಭ ವಾಗಿ ದಶಕಗಳೇ ಸಂದಿವೆ. ನೀತಿ ಆಯೋಗ ಸಿದ್ಧ ಪಡಿಸಿರುವ ‘ವಿಷನ್-2035’ ದಾಖಲೆಯು 2035ರ ವೇಳೆಗೆ ಈ ದಾರಿಯಲ್ಲಿ ಸಾಗಬೇಕಾದ ಕನಿಷ್ಠ ಮೈಲುಗಲ್ಲುಗಳನ್ನೂ ಗುರುತಿಸಿದೆ. ಇಂಧನ ಕ್ಷೇತ್ರದಲ್ಲಿ ಕ್ಷಮತೆ ಮತ್ತು ಸ್ವಾಯತ್ತತೆ ಸಾಧಿಸುವ ತಂತ್ರೋಪಾಯಗಳನ್ನೆಲ್ಲ 2020ರ ‘ರಾಷ್ಟ್ರೀಯ ಇಂಧನ ನೀತಿ’ ಸ್ಪಷ್ಟಪಡಿಸಿದೆ. ಅಂದರೆ, ಮಾಲಿನ್ಯ ತಗ್ಗಿಸುವ ಇಂಧನ ಮೂಲಗಳನ್ನು ಬಳಸಲೇಬೇಕಾದ ಅನಿವಾರ್ಯವನ್ನು ಸರ್ಕಾರ ತಾತ್ವಿಕವಾಗಿಯೇನೋ ಒಪ್ಪಿದೆ. ಆದರೆ, ಈ ಕನಸನ್ನು ನನಸಾಗಿಸಲು ಇರುವ ಅಡೆತಡೆಗಳಾದರೂ ಎಷ್ಟು!

ಒಂದೆಡೆ, ದೇಶದ ಆರ್ಥಿಕತೆಯನ್ನೇ ನಿರ್ಧರಿಸುತ್ತಿರುವ ಪೆಟ್ರೋಲಿಯಂ ಹಾಗೂ ಕಲ್ಲಿದ್ದಲು ಉದ್ಯಮ ಶ್ರೇಣಿಗಳನ್ನೆಲ್ಲ ಪರಿಸರ ಸುರಕ್ಷತೆಯ ಕನಿಷ್ಠ ಮಿತಿ ಯೊಳಗಾದರೂ ಕರೆದೊಯ್ಯಬೇಕು. ಇನ್ನೊಂದೆಡೆ, ಆಧುನಿಕ ಸೌಕರ್ಯಗಳನ್ನೆಲ್ಲ ಒಮ್ಮೆಲೆ ಬಯಸುವ ನವ ನಾಗರಿಕ ಸಮಾಜಕ್ಕೆ, ನೈಸರ್ಗಿಕ ತತ್ವಗಳ ಅಡಿಪಾಯವನ್ನೇ ಅಲ್ಲಾಡಿಸುತ್ತಿರುವ ‘ಅಭಿವೃದ್ಧಿಯುಗ’ದ ಮಿತಿಯನ್ನು ಮನಗಾಣಿಸಬೇಕು. ಅಂತಿಮವಾಗಿ, ಈ ಸವಾಲುಗಳನ್ನೆಲ್ಲ ನಿಭಾಯಿಸಬಲ್ಲ ಆಶಯಗಳನ್ನು ಸೂಕ್ತ ಸರ್ಕಾರಿ ಯೋಜನೆಗಳನ್ನಾಗಿಸಿ ಜನಸಾಮಾನ್ಯರಿಗೆ ತಲುಪಿಸಲು, ಜಡಗಟ್ಟಿರುವ ಅಧಿಕಾರಶಾಹಿಯನ್ನು ಚಲನಶೀಲಗೊಳಿಸಬೇಕು! ಇವೆಲ್ಲವನ್ನೂ ಸರ್ಕಾರ ಸಾಧಿಸೀತೇ?

ಈ ಕುರಿತು ಪ್ರಯತ್ನಿಸದೆ ಬೇರೆ ದಾರಿಯೇ ಇಲ್ಲ. ಏಕೆಂದರೆ, ಇಂಗಾಲದ ಸಂಯುಕ್ತಗಳು ವಾತಾ ವರಣ ಸೇರಿ ಎಷ್ಟೊಂದು ಉಷ್ಣತೆ ಹೆಚ್ಚಿಸುತ್ತಿವೆಯೆಂದರೆ, ಇದೀಗ ‘ಹವಾಮಾನ ತುರ್ತುಪರಿಸ್ಥಿತಿ’ಯೇ ಎದುರಾಗಿದೆ. ಇದರಿಂದಾಗಿ, ನೈಸರ್ಗಿಕ ಪ್ರಕೋಪಗಳು, ಸಾರ್ವಜನಿಕ ಆರೋಗ್ಯಸ್ಥಿತಿಯಲ್ಲಿ ಕುಸಿತ, ಕೃಷಿ ಉತ್ಪಾದನೆ ಕೊರತೆ- ಇವೆಲ್ಲ ಹೆಚ್ಚಾಗಿ, ಸಾಮೂಹಿಕ ಭವಿಷ್ಯವೇ ಅಪಾಯದಂಚಿಗೆ ತಲುಪುತ್ತಿದೆ. ಈಗಿನ ಪ್ರಕೃತಿ ವಿಕೋಪದಿಂದಾಗುತ್ತಿರುವ ನಷ್ಟವನ್ನು ಪರಿಗಣಿಸಿದರೆ, ಜಿಡಿಪಿಯ ವಾರ್ಷಿಕ ಬೆಳವಣಿಗೆ ದರ ವ್ಯರ್ಥವಾಗುತ್ತಿದೆಯೆಂದು ಅರ್ಥಶಾಸ್ತ್ರಜ್ಞರೇ ಒಪ್ಪುತ್ತಿದ್ದಾರೆ. ಹೀಗಾಗಿ, ಹವಾಮಾನ ಬದಲಾವಣೆ ವಿಷಯದಲ್ಲಿ ಮಾಡು ಇಲ್ಲವೆ ಮಡಿ ಸ್ಥಿತಿಗೆ ಜಗವು ತಲುಪಿದೆ. ಪರಿಸರ ಸಂರಚನೆಗೆ ಧಕ್ಕೆತಾರದ ಬದಲಿ ಇಂಧನಗಳನ್ನು ಬಳಸುವುದು ಈ ಕಾಲಘಟ್ಟದ ಅನಿವಾರ್ಯವಾಗಿದ್ದು ಇದಕ್ಕಾಗಿ.

ಪರಿಸರಸ್ನೇಹಿ ಇಂಧನ ಮೂಲಗಳಾದ ಸೌರಶಕ್ತಿ, ಪವನಶಕ್ತಿ, ಜೈವಿಕ ಇಂಧನ- ಇವೆಲ್ಲ ಅಭಿವೃದ್ಧಿಯಾಗ ತೊಡಗಿ ದಶಕಗಳೇ ಸಂದಿವೆ. ಆದರೆ, ಅವುಗಳ ಬಳಕೆಯನ್ನು ಮುಖ್ಯವಾಹಿನಿಗೆ ತರುವಲ್ಲಿನ ಈವರೆಗಿನ ನಮ್ಮ ಸಾಧನೆ ಮಾತ್ರ ಅಲ್ಪವೇ. ಸಾರಿಗೆ ಕ್ಷೇತ್ರವಂತೂ ಸಂಪೂರ್ಣ ಪೆಟ್ರೋಲಿಯಂ ಉತ್ಪನ್ನಗಳನ್ನೇ ಆಧರಿಸಿದೆ ತಾನೆ? ವಿದ್ಯುತ್ತಿನಲ್ಲೂ ಬದಲಿಮೂಲಗಳ ಪಾತ್ರ ಇಂದಿಗೂ ಶೇ 4 ಕೂಡ ತಲುಪಿಲ್ಲ. ಏನಿದ್ದರೂ ಮಾಲಿನ್ಯಕಾರಿಯಾದ ಕಲ್ಲಿದ್ದಲು (ಶೇ 86), ನೈಸರ್ಗಿಕ ಅನಿಲ (ಶೇ 9) ಹಾಗೂ ಪೆಟ್ರೋಲಿಯಂನದ್ದೇ (ಶೇ 2) ಪಾರಮ್ಯ! ಅಸಂಖ್ಯಾತ ಹಳ್ಳಿಗರು ಹಾಗೂ ವನವಾಸಿಗರ ಅಡುಗೆಮನೆಯಂತೂ ಇಂದಿಗೂ ಸೌದೆಯನ್ನೇ ಆಶ್ರಯಿಸಿದೆ. ಸುರಕ್ಷಿತ ಇಂಧನ ಮೂಲಗಳ ತಂತ್ರಜ್ಞಾನ ಲಭ್ಯವಿದ್ದೂ ಅವನ್ನು ಬಹುಜನರ ಬಳಿಗೊಯ್ಯಲು ಸೋತಿರುವುದಕ್ಕೆ ಕಾರಣ ಕಂಡುಕೊಳ್ಳುವುದೇ ಈಗ ಮುಂದಿರುವ ಪ್ರಥಮ ಸವಾಲೆನ್ನಬೇಕು.

ಸೌರಶಕ್ತಿಯಿಂದಂತೂ ಮನೆಬಳಕೆಯ ವಿದ್ಯುತ್ ಹಾಗೂ ವಾಹನಗಳ ನಿರ್ವಹಣಾ ಕ್ಷೇತ್ರದಲ್ಲಿ ಕ್ರಾಂತಿ ಯನ್ನೇ ಮಾಡಲು ಸಾಧ್ಯವಿದೆ. ಅಡುಗೆಗೆ ಸಗಣಿ ಹಾಗೂ ಸಾವಯವ ತ್ಯಾಜ್ಯಗಳಿಂದ ತಯಾರಿಸುವ ‘ಗೋಬರ್-ಅನಿಲ’ ಒಳ್ಳೆಯ ಇಂಧನವಾಗಬಲ್ಲದು. ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ಎಂಬತ್ತರ ದಶಕ ದಲ್ಲಿಯೇ ಅಭಿವೃದ್ಧಿಪಡಿಸಿದ ‘ಅಸ್ತ್ರಒಲೆ’ ತಂತ್ರಜ್ಞಾನವಂತೂ ಕಡಿಮೆ ಕಟ್ಟಿಗೆಯಲ್ಲೇ ಗ್ರಾಮೀಣರ ಮನೆಗಳನ್ನು ಹೊಗೆರಹಿತವಾಗಿಸಬಹುದು. ಹೊಂಗೆ, ಔಡಲ, ಜ್ಯಾಟ್ರೋಫಾ ಗಿಡಗಳ ಬೀಜದ ಎಣ್ಣೆಯನ್ನು ‘ಬಯೋ-ಡೀಸೆಲ್’ ಆಗಿ ಬಳಸುವ ತಂತ್ರಜ್ಞಾನವೂ ಈಗ ಲಭ್ಯವಿದೆ. ಇವೆಲ್ಲವೂ ಮಾಲಿನ್ಯರಹಿತ ಇಂಧನ ಒದಗಿಸುವುದರ ಜೊತೆಗೆ, ನಾಡಿನೆಲ್ಲೆಡೆ ಅಸಂಖ್ಯ ಉದ್ಯೋಗಾವಕಾಶ ನಿರ್ಮಿಸುವುದರ ಮೂಲಕ ಹೊಸ ‘ಹಸಿರು-ಆರ್ಥಿಕತೆ’ಗೆ ನಾಂದಿಯಾಗಬಲ್ಲ ಸಾಮರ್ಥ್ಯದವು. ಇವನ್ನೆಲ್ಲ ಈಗಾಗಲೇ ಸರ್ಕಾರ ಹಾಗೂ ಸಂಶೋಧನಾ ಸಂಸ್ಥೆಗಳ ವಿವಿಧ ಮಾದರಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನ ಮಾಡಿತೋರಿಸಿವೆ ಕೂಡ! ಅವನ್ನು ಆರ್ಥಿಕತೆಯ ಎಲ್ಲ ಕ್ಷೇತ್ರ ಹಾಗೂ ಸಮಾಜದ ಎಲ್ಲ ಸ್ತರಗಳಿಗೆ ಕೊಂಡೊಯ್ಯುವುದು ಮಾತ್ರ ಆಗಬೇಕಿದೆ.

ಅಂದರೆ, ಬದಲಿ ಇಂಧನ ಬಳಕೆಯನ್ನು ಸಾರ್ವತ್ರೀಕರಣಗೊಳಿಸುವುದು (‘ಸ್ಕೇಲ್-ಅಪ್’), ಮುಂದಿರುವ ಇನ್ನೊಂದು ಸವಾಲು. ದೂರದೃಷ್ಟಿಯುಳ್ಳ ಸೂಕ್ತ ನೀತಿ, ಸ್ಪಷ್ಟ ಯೋಜನೆಗಳು ಹಾಗೂ ಅವುಗಳ ಕಾಲಬದ್ಧ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ಅದು ಖಂಡಿತ ಸಾಧ್ಯ. ಈ ಕುರಿತ ಖಚಿತ ಮಾಹಿತಿಗಳನ್ನು ವ್ಯಾಪಕವಾಗಿ ಪಸರಿಸುವುದು ಮತ್ತು ಜನರು ಅವನ್ನೊಪ್ಪಿ ಅಳವಡಿಸಿಕೊಳ್ಳಲು ಉತ್ತೇಜಿಸಬೇಕಿದೆ. ಈ ಜನಶಿಕ್ಷಣ ಕಾರ್ಯದಲ್ಲಿ ಶಿಕ್ಷಣಸಂಸ್ಥೆಗಳು, ಸಹಕಾರಿ ಕ್ಷೇತ್ರ, ಪಂಚಾಯತ್‌ ರಾಜ್ ವ್ಯವಸ್ಥೆ, ನಾಗರಿಕ ಸಂಘಟನೆಗಳು ಕೈಜೋಡಿಸಿದರೆ ಅದು ಕಷ್ಟಸಾಧ್ಯವೇನಲ್ಲ. ನಾಡಿನ ಹಲವೆಡೆ ಹಲವಾರು ಉದ್ಯಮಗಳು ಹಾಗೂ ಪ್ರಯೋಗಶೀಲರು ಈಗಾಗಲೇ ಈ ಕುರಿತಂತೆಲ್ಲ ಎಷ್ಟೆಲ್ಲ ಪ್ರಯೋಗ ನಡೆಸಿದ್ದಾರೆ. ಮಲೆನಾಡು-ಕರಾವಳಿ ಪ್ರದೇಶದಲ್ಲಂತೂ ಸೌರಶಕ್ತಿ ಹಾಗೂ ಬಯೋಗ್ಯಾಸನ್ನು ಬಳಸಿ ಅದ್ಭುತ ಉಪಯೋಗ ಪಡೆಯುತ್ತಿರುವ ಪ್ರಯೋಗಶೀಲ ವ್ಯಕ್ತಿಗಳು ಹಾಗೂ ಸಂಸ್ಥೆಗಳಿವೆ. ಇವರ ಯಶೋಗಾಥೆಗಳನ್ನು ಜನರ ಮುಂದಿಟ್ಟರೆ, ಬದಲಿ ಇಂಧನದ ಜನಾಂದೋಲನವೇ ರೂಪುಗೊಳ್ಳಬಹುದು.

ಜೀವನ ವಿಧಾನದಲ್ಲಿ ಕೊಂಚ ಬದಲಾವಣೆ ತಂದುಕೊಂಡು ಕುಟುಂಬ ಮಟ್ಟದಲ್ಲಿ ವಿದ್ಯುತ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡುವುದೊಂದು ಸಾಮಾಜಿಕ ಮೌಲ್ಯವಾಗಿ ಆಗ ತೋರಬಲ್ಲದು. ಕಾಲುನಡಿಗೆ, ಸೈಕ್ಲಿಂಗ್ ತೆರನ ಆರೋಗ್ಯಪೂರಕ ಚಟುವಟಿಕೆಗಳಿಗೆ ಜಾಗತಿಕ ಆಯಾಮಗಳಿರುವುದನ್ನು ನಾವಾಗ ಗುರುತಿಸಬಹುದು.

ಮೇಲ್ಚಾವಣಿ ಸೌರವಿದ್ಯುತ್ ಸ್ಥಾವರ, ಸೌರಒಲೆ, ಸೌರ ನೀರುಕಾಯಿಸುವ ಯಂತ್ರ, ಮನೆಬಳಕೆಯ ಬಯೋಗ್ಯಾಸ್ ಸ್ಥಾವರ, ಸಮುದಾಯದ ಅಸ್ತ್ರ ಒಲೆ, ಜೈವಿಕ ಇಂಧನ ಮೂಲಿಕಾವನ, ಇತ್ಯಾದಿಗಳನ್ನೆಲ್ಲ ಮನ-ಮನೆಗಳಿಗೆ ತಲುಪಿಸಲು ಆರಂಭದಲ್ಲಿ ಆರ್ಥಿಕ ಉತ್ತೇಜನ ನೀಡಬೇಕು. ಆದರೆ, ಸರ್ಕಾರ ಈಗ ಕೊಡುತ್ತಿರುವ ಸಹಾಯಧನವೆಲ್ಲ ಗ್ರಾಹಕರ ಕೈಸೇರುವ ಬದಲು, ಕೆಲವೇ ಕೆಲವು ಉದ್ಯಮಗಳು ಅಥವಾ ಮಧ್ಯವರ್ತಿಗಳ ಪಾಲಾಗುತ್ತಿರುವುದು ಮತ್ತು ಇದರಲ್ಲಿರುವ ಭ್ರಷ್ಟಾಚಾರ ಇಂದು ಗುಟ್ಟಾಗಿ ಉಳಿದಿಲ್ಲ! ಪಾರದರ್ಶಕ ಆಡಳಿತ ವ್ಯವಸ್ಥೆ ಬರದೆ ಬಹುಜನರ ಹಿತ ಕಾಪಾಡಲು ಹೇಗೆ ಸಾಧ್ಯ? ಪ್ರಧಾನಿ ಮಂಡಿಸಿದ ‘ಪಂಚಾಮೃತ’ವು ಜನ
ಜೀವನವನ್ನು ನಿಜಕ್ಕೂ ಪ್ರಭಾವಿಸಬೇಕೆಂದರೆ, ಆಡಳಿತಕ್ಕೆ ‘ಸುಧಾರಣೆಯ ಸಂಜೀವಿನಿ’ ಒದಗಿಸಲೇಬೇಕಿದೆ!

ನಾಡಿನ ಅರಣ್ಯ ಹಾಗೂ ಪರಿಸರದ ಹಿತ ಕಾಯುತ್ತಲೇ ಸುಸ್ಥಿರ ಅಭಿವೃದ್ಧಿ ಸಾಧಿಸುವ ದಿಸೆಯಲ್ಲಿ ‘ಪರಿಸರ ಬಜೆಟ್’ ಅನ್ನು ಮುಂದಿನ ಮುಂಗಡಪತ್ರದಲ್ಲಿ ಅಳವಡಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಇತ್ತೀಚೆಗೆ ಪ್ರಕಟಿಸಿದ್ದಾರೆ. ನಿಜಕ್ಕೂ ಸ್ವಾಗತಾರ್ಹ ಸಂಗತಿಯಿದು. ಇದು ಕಾರ್ಯಗತವಾಗಬೇಕಾದರೆ, ಸುರಕ್ಷಿತ ಇಂಧನಕ್ಕೂ ಅದರಲ್ಲಿ ಆದ್ಯತೆ ದೊರಕಬೇಕಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು