ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ| ಸಹಕಾರ ಸಚಿವಾಲಯ ರಚನೆ: ಸುಲಲಿತ ವಹಿವಾಟಿನತ್ತ ನೋಟ

Last Updated 21 ಜುಲೈ 2021, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾನಂತರ ಇದೇ ಮೊದಲಿಗೆ, ಸಹಕಾರ ಕ್ಷೇತ್ರದ ಕುರಿತು ಅತ್ಯಂತ ದೃಢ ಹಾಗೂ ದೂರಗಾಮಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. 112 ವರ್ಷದ ಇತಿಹಾಸವುಳ್ಳ ಸಹಕಾರ ಕ್ಷೇತ್ರವು ದೇಶದ ಜಿಡಿಪಿಗೆ ಶೇ 8ರಷ್ಟು ಕೊಡುಗೆಯನ್ನು ನೀಡುತ್ತಿದೆ. ಆದರೂ ಕೃಷಿ ಸಚಿವಾಲಯದಲ್ಲಿ ಸಣ್ಣ ಇಲಾಖೆಯಾಗಿದ್ದ ಸಹಕಾರ ಕ್ಷೇತ್ರವನ್ನು ಇದೀಗ ಪ್ರತ್ಯೇಕ ಸಚಿವಾಲಯವನ್ನಾಗಿ ರೂಪಿಸಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರ, ಸಾಮಾನ್ಯ ಗ್ರಾಮೀಣರ ಹಣದ ಅವಶ್ಯಕತೆಯನ್ನು ಪೂರೈಸುತ್ತಿರುವ ಸಹಕಾರ ಕ್ಷೇತ್ರದಲ್ಲಿನ ತೊಂದರೆಗಳ ನಿವಾರಣೆಗೆ ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದೆಯಾದರೂ, ಇದೀಗ ಸಹಕಾರ ಸಚಿವಾಲಯ ಸ್ಥಾಪನೆ ಮಾಡುವ ಮೂಲಕ ಕ್ಷೇತ್ರದ ಶುದ್ಧೀಕರಣಕ್ಕೆ ಮುಂದಾಗಿದೆ.

ಸಹಕಾರ ಕ್ಷೇತ್ರವನ್ನು ಅನೇಕ ರಾಜ್ಯಗಳಲ್ಲಿ ಜನರ ಸಬಲೀಕರಣದ ಮಾರ್ಗವಾಗಿಸುವ ಬದಲಿಗೆ ವೋಟ್‍ಬ್ಯಾಂಕ್ ರಾಜಕೀಯದ ದಾಳವಾಗಿಸಿಕೊಳ್ಳಲಾಗಿದೆ. ಕರ್ನಾಟಕದ ಮಟ್ಟಿಗಂತೂ ಅತ್ಯುತ್ತಮ ಸಹಕಾರ ಚಳವಳಿ ರೂಪುಗೊಂಡಿದೆ. ಇಲ್ಲಿನ ಸಹಕಾರಿ ಧುರೀಣರು ರೈತರ ಹಾಗೂ ಜನಸಾಮಾನ್ಯರ ಸಂಕಷ್ಟಕ್ಕೆ ಸಹಕಾರ ಕ್ಷೇತ್ರ ಒದಗಿಬರುವಂತೆ ನೋಡಿಕೊಂಡಿದ್ದಾರೆ. ಆದರೆ ಇಲ್ಲಿವರೆಗೆ ಯಾವುದೇ ಸರ್ಕಾರವು ಸಹಕಾರ ಕ್ಷೇತ್ರಕ್ಕೆ ಇಷ್ಟು ಮಹತ್ವ ನೀಡಿರಲಿಲ್ಲ. ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರೂಪಿಸುವ ಮುನ್ಸೂಚನೆಯನ್ನು ಕಳೆದ ಬಜೆಟ್‍ನಲ್ಲೆ ಕೇಂದ್ರ ಸರ್ಕಾರ ನೀಡಿತ್ತು. ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ ಪ್ರಕ್ರಿಯೆಗಳು ಜಾರಿಯಲ್ಲಿವೆ. ಸಾಲ ನೀಡಿಕೆಯಿಂದ ಹೂಡಿಕೆವರೆಗೆ ಎಲ್ಲ ಪ್ರಕ್ರಿಯೆಗಳನ್ನೂ ಪಾರದರ್ಶಕ ಹಾಗೂ ಸರಳವಾಗಿಸುವ ಪ್ರಕ್ರಿಯೆ ಸಹಕಾರ ಕ್ಷೇತ್ರದಲ್ಲಿ ತುಸು ನಿಧಾನವಾಗಿದೆ. ಸಹಕಾರ ಕ್ಷೇತ್ರದಲ್ಲೂ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ ಅಂಶಗಳನ್ನು ಜಾರಿ ಮಾಡಲು ಹೊಸ ಸಚಿವಾಲಯ ಸಹಕಾರಿಯಾಗಲಿದೆ.

ಸಹಕಾರ ಕ್ಷೇತ್ರಕ್ಕೆ ಕೇಂದ್ರದಲ್ಲಿ ಸಚಿವಾಲಯ ರೂಪಿಸಿರುವುದು ರಾಜ್ಯಗಳ ಪರಮಾಧಿಕಾರವನ್ನು ಕಸಿದುಕೊಂಡಂತೆ ಎಂದು ವಿರೋಧ ಪಕ್ಷಗಳ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಹೌದು. ಸಹಕಾರ ಕ್ಷೇತ್ರ ಎಂಬುದು ಸಂವಿಧಾನದ ಪ್ರಕಾರ ರಾಜ್ಯಗಳ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಮುಂದಾದಾಗ ಇಂತಹ ಆಪಾದನೆ ಮಾಡಲಾಗುತ್ತಿದೆ. ಶಿಕ್ಷಣ, ಭೂಮಿ ವಿಚಾರಗಳು ರಾಜ್ಯ ಪಟ್ಟಿಗೆ ಒಳಪಡುತ್ತವೆ. ಆದರೂ ಸರ್ವ ಶಿಕ್ಷಣ ಅಭಿಯಾನದ ಮೂಲಕ ರಾಜ್ಯಗಳಿಗೆ ಕೇಂದ್ರ ಹಣಕಾಸು ನೆರವು ನೀಡುತ್ತಿಲ್ಲವೇ? ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ರೇರಾ ಕಾಯ್ದೆ ರೂಪಿಸಿಲ್ಲವೇ? ಅದೇ ರೀತಿ ರಾಜ್ಯಗಳ ಹಕ್ಕುಗಳಿಗೆ ಬಾಧೆಯಾಗದಂತೆ, ಪೂರಕವಾಗಿ ಕೇಂದ್ರದಲ್ಲಿ ಮಾದರಿ ಕಾಯ್ದೆಯನ್ನು ರೂಪಿಸಲು ಹೊಸ ಸಚಿವಾಲಯ ಸಹಕಾರಿಯಾಗಲಿದೆ. ಆಡಳಿತಾತ್ಮಕ ನಿರ್ದೇಶನ ನೀಡುವುದರ ಜತೆಗೆ ಸ್ಪಷ್ಟ ಕಾನೂನುಗಳನ್ನು ರೂಪಿಸಲು ಮತ್ತು ನೀತಿಗಳನ್ನು ರೂಪಿಸಲು ಪೂರಕವಾಗುತ್ತದೆ.

ಸಹಕಾರ ಕ್ಷೇತ್ರ ಎಂದರೆ ಕೇವಲ ಹಣವನ್ನು ಬಡ್ಡಿಗೆ ನೀಡುವ ಹಣಕಾಸು ಸಂಸ್ಥೆಯಷ್ಟೆ ಅಲ್ಲ. ಗ್ರಾಮೀಣ ಜನರಲ್ಲಿ ಕೌಶಲ ಹೆಚ್ಚಿಸಲು ತರಬೇತಿ ನೀಡುವ, ಸಾವಯವ ಕೃಷಿಗೆ ಉತ್ತೇಜಿಸುವ, ಸೌರ ಶಕ್ತಿ ಬಳಕೆಗೆ ಪ್ರೋತ್ಸಾಹಿಸುವ ಕಾರ್ಯವನ್ನೂ ಮಾಡಬಲ್ಲವು. ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿ ಚಟುವಟಿಕೆ, ಬೆಳೆ ವಿಮೆ, ಪಶು ಸಂಗೋಪನೆ ಮುಂತಾದ ಕ್ಷೇತ್ರದಲ್ಲಿ ಈ ಸಚಿವಾಲಯದಿಂದ ಉತ್ತೇಜನ ಸಿಗಲಿದೆ. ಸಹಕಾರದಿಂದ ಸಮೃದ್ಧಿ ಎಂಬ ಘೋಷವಾಕ್ಯವನ್ನು ಕೇಂದ್ರ ಸರ್ಕಾರ ನೀಡಿದೆ. ಸಹಕಾರ ಕ್ಷೇತ್ರದಿಂದ ದೇಶಕ್ಕೆ ಸಮೃದ್ಧಿ ಲಭಿಸುತ್ತದೆ ಎಂಬುದು ಒಂದು ಅರ್ಥವಾದರೆ, ಕೇಂದ್ರ ಹಾಗೂ ರಾಜ್ಯಗಳು ಪರಸ್ಪರ ಸಹಕಾರಿ ಭಾವದಿಂದ ಕೆಲಸ ಮಾಡಿದರೆ ರಾಷ್ಟ್ರದ ಅಭಿವೃದ್ಧಿ ಎಂಬ ಸಂದೇಶವನ್ನೂ ನೀಡುತ್ತಿದೆ.

ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‍ಗಳು ಹಾಗೂ ಸಹಕಾರ ಸಂಸ್ಥೆಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಭಿನ್ನವಾಗಿ ನೋಡುತ್ತದೆ ಎಂಬ ಅಳಲು ಇಂದು ನಿನ್ನೆಯದಲ್ಲ. ರಾಷ್ಟ್ರೀಕೃತ ಅಥವಾ ವಾಣಿಜ್ಯ ಬ್ಯಾಂಕೊಂದು ಸಂಕಷ್ಟಕ್ಕೆ ಸಿಲುಕಿದರೆ ಬೆರಳೆಣಿಕೆಯ ದಿನದಲ್ಲಿ ಧಾವಿಸುವ ವ್ಯವಸ್ಥೆ, ಅಲ್ಲಿನ ಗ್ರಾಹಕರ ಹಣವನ್ನು ಸುರಕ್ಷಿತವಾಗಿಸುತ್ತದೆ. ಆದರೆ, ಸಹಕಾರಿ ಬ್ಯಾಂಕ್‍ಗಳಿಗೆ ಈ ಪರಿಸ್ಥಿತಿ ಇಲ್ಲ. ಇದಲ್ಲದೆ, ಸಹಕಾರ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ಕುರಿತು ಆರ್‌ಬಿಐ ತೆಗೆದುಕೊಳ್ಳುತ್ತಿರುವ ಕೆಲವೊಂದು ನಿಲುವುಗಳು ಆತಂಕಕಾರಿಯಾಗಿವೆ. ಆಡಳಿತ ಮಂಡಳಿಗಳ ನೇಮಕದಲ್ಲಿ ಕೆಲವು ಗೊಂದಲಗಳನ್ನು ನಿರ್ಮಿಸಲಾಗಿದೆ. ಆಡಳಿತ ಮಂಡಳಿ ನಿರ್ದೇಶಕರುಗಳ ಅರ್ಹತೆ, ವಯಸ್ಸು ಹಾಗೂ ಅವಧಿಗಳ ಕುರಿತು ವಿಚಿತ್ರ ನಿಯಮಾವಳಿಗಳನ್ನು ರೂಪಿಸಲಾಗಿದೆ. ಪರಂಪರೆ, ಭಾವನಾತ್ಮಕತೆ, ಅಸ್ಮಿತೆ, ಜಾತಿ, ಭೌಗೋಳಿಕತೆ ಆಧಾರದಲ್ಲಿ ಅನೇಕ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಬ್ಯಾಂಕುಗಳ ವಿಲೀನ ಸರಿಯಲ್ಲ. ಆರ್‌ಬಿಐನ ಇಂತಹ ಅನೇಕ ನಿರ್ಧಾರಗಳನ್ನು ಪ್ರಶ್ನಿಸಲು ಇಲ್ಲಿವರೆಗೆ ಯಾವುದೇ ವೇದಿಕೆ ಇರಲಿಲ್ಲ. ಇದೀಗ ಪ್ರತ್ಯೇಕ ಸಚಿವರು ಇರುವ ಕಾರಣಕ್ಕೆ ಅಹವಾಲು ಆಲಿಸಲು ಒಂದು ಅವಕಾಶ ಲಭಿಸಿರುವುದು ಹೊಸ ಸಹಕಾರ ಸಚಿವಾಲಯದ ಅನುಕೂಲಗಳಲ್ಲೊಂದು.

ಸಹಕಾರ ಸಚಿವಾಲಯಕ್ಕೆ ಗೃಹ ಸಚಿವ ಅಮಿತ್ ಶಾ ಅವರೇ ಮೊದಲ ಸಚಿವರಾಗಿದ್ದಾರೆ. ಸಹಕಾರಿ ಕ್ಷೇತ್ರದಿಂದಲೇ ತಮ್ಮ ರಾಜಕೀಯ ಜೀವನವನ್ನು ಶಾ ಆರಂಭಿಸಿದವರು. ಕ್ಷೇತ್ರದ ಸಮಸ್ಯೆಗಳ ಜತೆಗೆ ಸಾಮರ್ಥ್ಯವನ್ನೂ ಸ್ಪಷ್ಟವಾಗಿ ಅರಿತಿರುವ ಶಾ ಅವರು ಸಹಕಾರಿ ವಲಯವನ್ನು ಬಲಗೊಳಿಸುವುದಕ್ಕಾಗಿ ಯಾವುದೇ ಪ್ರಯತ್ನಕ್ಕೂ ಹಿಂಜರಿಯುವುದಿಲ್ಲ ಎಂಬ ನಂಬಿಕೆ ಇದೆ.

ಲೇಖಕ: ಶ್ರೀ ತ್ಯಾಗರಾಜ ಕೊ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ, ಸಹಕಾರ ಭಾರತಿಯ ಬೆಂಗಳೂರು ಜಿಲ್ಲಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT