ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ‘ಪ್ಲೇಗ್ ಸಾಹಿತ್ಯ’ ಎಂಬ ಕೈಗನ್ನಡಿ

ಹಿಂದಿನ ಪ್ಲೇಗ್‌ ಕಾಲಕ್ಕೂ ಈಗಿನ ಕೊರೊನಾ ಕಾಲಕ್ಕೂ ನಮ್ಮ ಮನಃಸ್ಥಿತಿ ಬದಲಾಗಿದೆಯೇ?
Last Updated 28 ಏಪ್ರಿಲ್ 2021, 18:59 IST
ಅಕ್ಷರ ಗಾತ್ರ

ಕಳೆದ ಆರು ತಿಂಗಳಿನಿಂದ ತಾವು ಕೊರೊನೋತ್ತರ ಕಾಲಘಟ್ಟದಲ್ಲಿ ಇದ್ದೇವೆ ಎಂದು ನಮ್ಮಲ್ಲಿ ಅನೇಕರು ಭಾವಿಸಿದ್ದರು. ಕೊರೊನಾ ವೈರಸ್‌ ಮುಗಿದ ಕತೆ ಎಂಬುದು ಬಹುತೇಕರ ಮಾತುಗಳಲ್ಲಿ ಧ್ವನಿಸುತ್ತಿತ್ತು. ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿದ್ದಾಗ ತಾವು ಕಳೆದ ಆತಂಕದ ದಿನಗಳನ್ನು ಮೆಲುಕು ಹಾಕುವುದರಲ್ಲಿ ಎಲ್ಲರೂ ಮಗ್ನರಾಗಿದ್ದರು. ಸದ್ಯ ಮುಗಿಯಿತಲ್ಲಾ ಎಂಬ ನಿಟ್ಟುಸಿರಿನೊಂದಿಗೆ ಹೆಚ್ಚು ಸುಖಿಸುವ ತವಕದಲ್ಲಿದ್ದರು. ಆದರೆ ಕೊರೊನಾ ಮುಗಿದ ಕತೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟ ಸಂಗತಿಯಲ್ಲ ಎಂಬುದು ಯಾರ ಮನಸ್ಸಿನಲ್ಲಿಯೂ ಇದ್ದಂತೆ ತೋರಲಿಲ್ಲ.

ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದ್ದ ಸೂಚನೆಗಳು ದೊರೆತೊಡನೆಯೇ ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಗಳನ್ನು ಮಾಡತೊಡಗಿದರು. ನ್ಯೂ ನಾರ್ಮಲ್‌ ಪರಿಸ್ಥಿತಿ ಮುಗಿದಿದ್ದು ಹಳೆ ದಿನಗಳು ಮರುಕಳಿಸಿದವು ಎಂಬ ಭಾವ ಎಲ್ಲರನ್ನೂ ಆವರಿಸಿಕೊಂಡಿತು. ಕೋವಿಡ್ ನಿಬಂಧನೆಗಳನ್ನು ಗಾಳಿಗೆ ತೂರಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮದುವೆ ಮುಂತಾದ ಸಂಭ್ರಮಗಳಲ್ಲಿ ನಿರ್ಭೀತಿಯಿಂದ ಪಾಲ್ಗೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತು. ಇವೆಲ್ಲದರ ಫಲಿತಾಂಶವೇ ಇಂದು ತೀವ್ರವಾಗಿರುವ ಕೋವಿಡ್ ಎರಡನೇ ಅಲೆ.

ಕೋವಿಡ್ ಮಹಾಮಾರಿಯು ಜಗತ್ತನ್ನು 2019ರ ನವೆಂಬರ್‌ನಿಂದ ಆಕ್ರಮಿಸಿಕೊಂಡು ಜನರನ್ನು ಸಂಕಷ್ಟಕ್ಕೆ ತಳ್ಳತೊಡಗಿತು. ಸಾಂಕ್ರಾಮಿಕಗಳು ಜಗತ್ತನ್ನು ಆವರಿಸಿಕೊಂಡಾಗ ಜನರ ವರ್ತನೆ ಹೇಗಿರುತ್ತದೆ, ಸಾಂಕ್ರಾಮಿಕಗಳನ್ನು ತಡೆಗಟ್ಟಲು ಸರ್ಕಾರಗಳು ತೆಗೆದುಕೊಳ್ಳುವ ಕ್ರಮಗಳು ಹೇಗಿರುತ್ತವೆ ಮತ್ತು ಆ ಕ್ರಮಗಳಿಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೆ ಪ್ಲೇಗ್ ಕುರಿತ ಸಾಹಿತ್ಯಗಳು ಇಂದಿಗೂ ಬಹಳ ಪ್ರಸ್ತುತ ಎನಿಸುತ್ತವೆ. ಈ ಸಾಹಿತ್ಯಗಳು ಸೃಷ್ಟಿಯಾಗಿ ಸರಿಸುಮಾರು ಶತಮಾನವೇ ಕಳೆದಿದ್ದರೂ ಸಾಂಕ್ರಾಮಿಕಗಳ ಸಂದರ್ಭಗಳಲ್ಲಿ ನಮ್ಮ ವರ್ತನೆ ಅಂದು ಹೇಗಿತ್ತೋ ಇಂದಿಗೂ ಹಾಗೆಯೇ ಇದೆ ಎಂಬುದನ್ನು ಅವು ಅದ್ಭುತವಾಗಿ ಸಾಬೀತುಪಡಿಸುತ್ತವೆ.

ಪ್ರತೀ ಬಾರಿ ಮನುಕುಲವು ಸಾಂಕ್ರಾಮಿಕದ ದಾಳಿಗೆ ತುತ್ತಾದ ಸಂದರ್ಭಗಳಲ್ಲಿ ಎಲ್ಲರ ವರ್ತನೆಗಳಲ್ಲಿ ಅತ್ಯಂತ ಗಮನಾರ್ಹವಾದ ಏಕರೂಪತೆ ಇರುತ್ತದೆ ಎಂದು ಪ್ಲೇಗ್ ಕುರಿತ ಈ ಸಾಹಿತ್ಯಗಳು ಪ್ರತಿಪಾದಿಸುತ್ತವೆ. ಬಹಳ ಪ್ರಮುಖವಾಗಿ, ಸಾಂಕ್ರಾಮಿಕಗಳ ಸುಳಿವು ದೊರೆತ ಮೊದಲ ಕೆಲ ದಿನಗಳಲ್ಲಿ ಆತಂಕ ಮನೆ ಮಾಡುತ್ತದೆ. ತಮ್ಮ ಮುಂದಿನ ನಡೆಯ ಕುರಿತಾಗಿ ಆಹಾರ ಸಾಮಗ್ರಿಗಳ ಸಂಗ್ರಹಕ್ಕೆ ಆದ್ಯತೆ ನೀಡುತ್ತಾರೆ. ಇದನ್ನು ಇಂಗ್ಲಿಷಿನಲ್ಲಿ ‘ಪ್ಯಾನಿಕ್‌ ಬೈಯಿಂಗ್‌’ ಎಂದು ಕರೆಯುತ್ತಾರೆ. ಇದು ಈಗ ಹೆಚ್ಚು ಕಂಡುಬಂದದ್ದು ಸ್ಯಾನಿಟೈಸರ್ ಮತ್ತು ಹ್ಯಾಂಡ್‌ವಾಷ್‌ಗಳ ವಿಷಯದಲ್ಲಿ. ತಮಗೆಷ್ಟು ಬೇಕು ಎಂದು ಯೋಚಿಸುವ ಬದಲಾಗಿ, ಆತಂಕದ ಕಾರಣದಿಂದ ತಮ್ಮ ಕ್ಷೇಮಕ್ಕಾಗಿ ಏನಾದರೂ ಮಾಡಲು ಸಿದ್ಧ ಎಂಬ ಮನಃಸ್ಥಿತಿಯಲ್ಲಿ ಕೊಳ್ಳುವುದನ್ನೇ ಪ್ಯಾನಿಕ್‌ ಬೈಯಿಂಗ್‌ ಎನ್ನುವುದು.

ಸಾಂಕ್ರಾಮಿಕಗಳ ವಿಷಯದಲ್ಲಿ ಮನುಷ್ಯನ ವರ್ತನೆ ಬದಲಾಗದೇ ಉಳಿದಿರುವುದಕ್ಕೆ ಮತ್ತೊಂದು ಉದಾಹರಣೆಯೆಂದರೆ, ತಮ್ಮ ಜವಾಬ್ದಾರಿಯನ್ನು ಅರಿಯದೆ ಸರ್ಕಾರಗಳನ್ನು ದೂರುವ ಪ್ರಕ್ರಿಯೆ. ಸಾಂಕ್ರಾಮಿಕಗಳು ಎರಗಿದಾಗ ಮನುಷ್ಯರು ಒಬ್ಬರಿಂದ ಒಬ್ಬರು ದೂರ ಇರಬೇಕಾಗಿದ್ದು, ಸಹಾಯಹಸ್ತ ಚಾಚಲು ಸೂಕ್ತ ತರಬೇತಿ ಇರಬೇಕಾಗುತ್ತದೆ. ತರಬೇತಿಯಿರುವ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಕಡಿಮೆಯಿದ್ದಾಗ, ನಮ್ಮ ಕ್ಷೇಮವನ್ನು ನಾವು ನೋಡಿಕೊಳ್ಳಲು ಆದಷ್ಟು ಅಂತರ ಕಾಪಾಡಿಕೊಳ್ಳಬೇಕಿರುತ್ತದೆ. ಸರ್ಕಾರವನ್ನು ದೂಷಿಸುವ ಬದಲು, ಪ್ರಭುಗಳಷ್ಟೇ ಅಲ್ಲ ಪ್ರಜೆಗಳು ಸಹ ಈ ಸಾಂಕ್ರಾಮಿಕ ನಿಯಂತ್ರಣ ಪ್ರಕ್ರಿಯೆಯಲ್ಲಿ ಪಾಲುದಾರರು ಎಂದು ಅರ್ಥಮಾಡಿಕೊಳ್ಳಬೇಕಿದೆ.

ಸಾಂಕ್ರಾಮಿಕಗಳ ಸಮಯದಲ್ಲಿ ಮನುಷ್ಯರ ವರ್ತನೆಯನ್ನು 1912ರಲ್ಲಿ ಪ್ರಕಟವಾದ ಅಮೆರಿಕದ ಜ್ಯಾಕ್ ಲಂಡನ್ ಅವರ ಕಾದಂಬರಿ ‘ದಿ ಸ್ಕಾರ್ಲೆಟ್‌ ಪ್ಲೇಗ್‌’ ಬಹಳ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುತ್ತದೆ. ಕಾದಂಬರಿಯ ಕಥಾನಾಯಕ ಜೇಮ್ಸ್ ಸ್ಮಿತ್‌ ಈ ಕತೆಯ ನಿರೂಪಕನೂ ಆಗಿ, ಜನರು ಅನುಭವಿಸುವ ಮಾನಸಿಕ ಮತ್ತು ದೈಹಿಕ ಆಘಾತಗಳ ಬಗ್ಗೆ ವಿವರಿಸುತ್ತಾನೆ. ಅವನ ತರಗತಿಯ ವಿದ್ಯಾರ್ಥಿನಿಯೊಬ್ಬಳ ಸಾವು, ಭಯಾನಕವಾದ ಸ್ಕಾರ್ಲೆಟ್ ಪ್ಲೇಗ್ ಸೋಂಕಿನಿಂದ ಆಗಿರುತ್ತದೆ. ಜನರು ತಮ್ಮ ಜೀವ ಉಳಿಸಿಕೊಳ್ಳಲು ಮಾಡುವ ಪ್ರಯತ್ನಗಳನ್ನು ವಿವರಿಸುವ ಜೇಮ್ಸ್, ಇಂದು ನಾವು ಹೇಗೆ ನಮ್ಮ ಹಿಂದಿನ ಕಾಲದ ವೈಭವವನ್ನು ನೆನಪಿಸಿಕೊಂಡು ಕೊರಗುತ್ತೇವೆಯೋ ಹಾಗೆಯೇ ಸಾಮಾಜಿಕ ಜೀವನದ ಸುಖವನ್ನು ಸ್ಮರಿಸಿಕೊಂಡು ಕೊರಗುತ್ತಾನೆ.

ಯುರೋಪಿನ ಆಲ್ಬರ್ಟ್ ಕಮು ಎಂಬ ಅಸ್ತಿತ್ವವಾದಿಯು 1947ರಲ್ಲಿ ‘ದಿ ಪ್ಲೇಗ್‌’ ಎಂಬ ಕಾದಂಬರಿಯನ್ನು ಪ್ರಕಟಿಸಿದರು. ಈ ಕಾದಂಬರಿಯು ಜ್ಯಾಕ್ ಲಂಡನ್ ಅವರ ಕಾದಂಬರಿಗಿಂತ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಮ್ಮ ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಡಾ. ರಿಯು ಈ ಕಾದಂಬರಿಯ ಕಥಾನಾಯಕ. ಓರಾನ್ ಎಂಬ ನಗರದಲ್ಲಿ ಇಲಿಗಳು ಸಾಯುತ್ತಿರುವುದನ್ನು ಕಂಡ ವೈದ್ಯನು ಕೂಡಲೇ ಎಚ್ಚೆತ್ತುಕೊಂಡು ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಅವನ ಮಾತನ್ನು ನಂಬದ ಸರ್ಕಾರ ಇದಕ್ಕೆ ಪ್ರತಿಕ್ರಿಯಿಸಲು ಯಾವುದೇ ಆಸಕ್ತಿಯನ್ನು ತೋರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಾವು ನಮ್ಮ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಬೇಕಿದೆ.

ಚೀನಾದ ವುಹಾನ್ ನಗರದಲ್ಲಿ ಕೊರೊನಾ ವೈರಸ್ ಎಂಬುದೊಂದು ಹುಟ್ಟಿಕೊಂಡು ಬೀದಿ ಬೀದಿಗಳಲ್ಲಿ ಹೆಣಗಳು ಉರುಳುತ್ತಿವೆ ಎಂಬುದು ಇಡೀ ಜಗತ್ತಿಗೇ ತಿಳಿದಿತ್ತು. ಆದರೆ ಅಚ್ಚರಿಯ ಸಂಗತಿಯೆಂದರೆ, ಜಗತ್ತಿನ ಯಾವ ದೇಶವೂ ಇದನ್ನು ನಿಯಂತ್ರಿಸಲು ಅಗತ್ಯವಾದಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

ಈ ಕಾದಂಬರಿಗಳು ತೋರಿಸಿರುವಂತೆ, ಸಾಂಕ್ರಾಮಿಕಗಳ ಸಮಯದಲ್ಲಿ ನಮ್ಮ ವರ್ತನೆಗಳು ಶತಮಾನಗಳು ಕಳೆದರೂ ಬದಲಾಗದೇ ಉಳಿದಿವೆ. ಇಬ್ಬರೂ ಕಾದಂಬರಿಕಾರರು ವರ್ಣಿಸುವಂತೆ, ಕೋವಿಡ್ ಬಿಕ್ಕಟ್ಟು ನಮ್ಮ ಮೇಲೆ ಎರಗಿದಾಗ ನಾವು
ಪ್ರಕಟಪಡಿಸಿದ್ದು ನಮ್ಮ ಉಡಾಫೆತನ ಮತ್ತು ಬುದ್ಧಿ ಹೇಳುವವರ ಮಾತಿನಲ್ಲಿ ಅಪನಂಬಿಕೆ. ಪರಿಸ್ಥಿತಿ ಕೈಮೀರಿ ಸರ್ಕಾರವು ಲಾಕ್‌ಡೌನ್ ಹೇರಿದಾಗ ಸತತ ಕ್ವಾರಂಟೈನ್ ಅನುಭವಿಸಬೇಕಾಗಿ ಬಂತು.

ಜಗತ್ತು ಎದುರಿಸುತ್ತಿರುವ ಕೋವಿಡ್ ಬಿಕ್ಕಟ್ಟಿಗೆ ಇಸ್ರೇಲಿನ ಇತಿಹಾಸಕಾರ ಯುವಲ್ ನೋವಾ ಹರಾರಿ ಅವರು ‘ರೀಡರ್ಸ್‌ ಡೈಜೆಸ್ಟ್‌’ನ 2000ದ ಮೇ-ಜೂನ್‌ ಸಂಚಿಕೆಯಲ್ಲಿ ತಮ್ಮ ಲೇಖನದ ಮೂಲಕ ಪರಿಹಾರವನ್ನು ಸೂಚಿಸಿದ್ದಾರೆ.

ಹಿಂದೆಲ್ಲ ಸಾಂಕ್ರಾಮಿಕಗಳು ತಲೆದೋರಿದಾಗ ಜನರ ವರ್ತನೆಗೆ ವಿಜ್ಞಾನದ ಕೊರತೆ ಅಥವಾ ಆಸ್ಪತ್ರೆಗಳ ಮೂಲ ಸೌಕರ್ಯಗಳಲ್ಲಿನ ನ್ಯೂನತೆ ಕಾರಣವಾಗಿರಬಹುದು ಮತ್ತು ಸೋಂಕು ಹರಡುವುದರ ಬಗ್ಗೆ ನೀಡಬೇಕಿರುವ ಸೂಚನೆಗಳನ್ನು ಜನರಿಗೆ ತಲುಪಿಸುವುದು ಸುಲಭವಾಗದೇ ಇದ್ದಿರಬಹುದು. ಆದರೆ ಒಂದು ವೈರಸ್ಸನ್ನು ನಾವು ಎದುರಿಸಲು ಸಾಧ್ಯವಾಗುವುದು ನಮ್ಮ ನಮ್ಮಲ್ಲಿ ಅಪನಂಬಿಕೆಯ ಕಾರಣದಿಂದ ಅಂತರವನ್ನು ಹೆಚ್ಚಿಸಿಕೊಳ್ಳುವುದರಿಂದ ಅಲ್ಲ, ಬದಲಾಗಿ ನಮ್ಮ ಮತ್ತು ವೈರಸ್‌ ಪ್ರಪಂಚದ ನಡುವೆ ಅಂತರ ಕಾಯ್ದುಕೊಳ್ಳುವ ಮೂಲಕ ಎಂದು ಹರಾರಿ ಅಭಿಪ್ರಾಯಪಡುತ್ತಾರೆ.

ಮನುಕುಲದಲ್ಲಿ ನಮ್ಮ ನಮ್ಮ ನಡುವೆ ಅಪನಂಬಿಕೆ ಇದ್ದರೆ ಅದು ವೈರಸ್ಸಿನ ವಿಜಯವಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ನಾವೆಲ್ಲ ಪ್ರತ್ಯೇಕೀಕರಣ, ಹೊರ ದೇಶಗಳ ಜನರ ಬಗ್ಗೆ ಹಗೆತನ ಮತ್ತು ಅಪನಂಬಿಕೆಗಳಿಂದ ಬಳಲುತ್ತಿದ್ದೇವೆ. ಇದರ ಬದಲಾಗಿ ವೈದ್ಯರು, ಸರ್ಕಾರಗಳು ಮತ್ತು ವಿಜ್ಞಾನಿಗಳು ಹೇಳಿದಂತೆ ಕೇಳಿ, ಪರಸ್ಪರ ದೈಹಿಕ ಅಂತರವನ್ನು ಕಾಯ್ದುಕೊಂಡರೂ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಒಬ್ಬರಿಂದ ಒಬ್ಬರು ದೂರವಾಗದೇ ಇರೋಣ ಎನ್ನುವ ಹರಾರಿ ಅವರ ಆಶಯವನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT