ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಗೋಬೆಲ್ಸ್‌ ಮಾದರಿಗೆ ಮೀಡಿಯಾ ಶರಣು

Last Updated 13 ಫೆಬ್ರವರಿ 2021, 19:30 IST
ಅಕ್ಷರ ಗಾತ್ರ

ಭಾರತದ ಬಹುತೇಕ ಮಾಧ್ಯಮಗಳು ಇತ್ತೀಚೆಗೆ ಗೋಬೆಲ್ಸ್ ಮಾದರಿಗೆ ಶರಣಾದಂತಿವೆ. ಇಲ್ಲಿಯವರೆಗೂ ಭಾರತೀಯರ ಅನುಭವ ಗಮ್ಯಕ್ಕೆ ಬಂದಿರುವುದು ಅಮೆರಿಕದ ಪತ್ರಕರ್ತರಾದ ಜೋಸೆಫ್‌ ಪುಲಿಟ್ಜರ್‌ ಮತ್ತು ವಿಲಿಯಂ ರಾಂಡಾಲ್ಫ್‌ ಹರ್ಸ್ಟ್ ಮುನ್ನೆಲೆಗೆ ತಂದ ಪೀತ ಪತ್ರಿಕೋದ್ಯಮ ಮಾತ್ರ. ಹಾಗಾಗಿ ಗೋಬೆಲ್ಸ್ ಮಾದರಿಯ ಪತ್ರಿಕೋದ್ಯಮ ಎಂದಾಗ ಎಲ್ಲರಲ್ಲೂ ಕುತೂಹಲ ಮೂಡುವುದು ಸಹಜ.

ಇತಿಹಾಸದಲ್ಲಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಬಗ್ಗೆ ಓದಿದವರಿಗೆ ಈ ಜೋಸೆಫ್ ಗೋಬೆಲ್ಸ್ ಯಾರು ಎಂದು ಖಂಡಿತವಾಗಿಯೂ ತಿಳಿದಿರುತ್ತದೆ. ಈತ ಹಿಟ್ಲರ್‌ನ ನಂಬಿಕಸ್ಥ ಬಂಟ. ಜೊತೆಗೆ ಹಿಟ್ಲರ್‌ನ ಪ್ರೊಪಗೆಂಡಾ ಮಿನಿಸ್ಟರ್ ಕೂಡ ಹೌದು. ಹಿಟ್ಲರ್ ತನ್ನ ಆಡಳಿತಾವಧಿಯಲ್ಲಿ ಮಾಡಿದ್ದ ಅಷ್ಟೂ ಪಾಪದ ಕೃತ್ಯಗಳನ್ನು ಪುಣ್ಯದ ಕೆಲಸವೆಂಬಂತೆ ಜಗತ್ತಿನ ಮುಂದೆ ಪ್ರಚಾರ ಮಾಡಿದವನೇ ಈತ. ಆ್ಯಂಟಿ ಸೆಮಿಟಿಸಂ ಹೆಸರಿನಲ್ಲಿ ಹಿಟ್ಲರ್ ಮಾಡಿದ್ದ ಲಕ್ಷಾಂತರ ಯಹೂದಿಯರ ಮಾರಣಹೋಮವನ್ನು ದೇಶ ಶುದ್ಧೀಕರಣದ ಕೆಲಸವೆಂಬಂತೆ ಗೋಬೆಲ್ಸ್ ಜನರ ಮುಂದೆ ಬಿಂಬಿಸಿಬಿಟ್ಟಿದ್ದ. ಹಿಟ್ಲರ್‌ನ ಆಡಳಿತದ ಬಗ್ಗೆ ಗೋಬೆಲ್ಸ್ ಪ್ರಕಟಿತ ಮುದ್ರಣಗಳ ಮೂಲಕ ಸುಳ್ಳಿನ ಮತ್ತು ಕಪೋಲಕಲ್ಪಿತ ಪ್ರಚಾರವನ್ನೂ ಮಾಡುತ್ತಿದ್ದ. ಗೋಬೆಲ್ಸ್ ಮಾದರಿಯ ಪತ್ರಿಕೋದ್ಯಮವನ್ನು ಇನ್ನೂ ಸರಳವಾಗಿ ಅರ್ಥೈಸಬೇಕೆಂದರೆ, ಆಳುವ ಸರ್ಕಾರದ ಭಟ್ಟಂಗಿತನದ ಮಾದರಿ. ಬಹುಶಃ ಇತಿಹಾಸ ಮರುಕಳಿಸುತ್ತದೆ ಎಂಬಂತೆ ಭಾರತದ ಇಂದಿನ ಬಹುತೇಕ ಮಾಧ್ಯಮಗಳು ಗೋಬೆಲ್ಸ್ ಮಾದರಿಯ ಪತ್ರಿಕೋದ್ಯಮವನ್ನು ಮತ್ತೆ ನೆನಪಿಗೆ ತರುತ್ತಿವೆ.

ಹಾಗಾದರೆ ಭಾರತದಲ್ಲಿ ಗೋಬೆಲ್ಸ್ ಮಾದರಿಯ ಪತ್ರಿಕೋದ್ಯಮ ಮಾಧ್ಯಮದ ದಿಕ್ಕನ್ನೇ ಬದಲಿಸಿಬಿಟ್ಟಿದೆಯೇ? ಖಂಡಿತಾ ಹೌದು! ಹಾಗಂತ ಭಾರತದ ಎಲ್ಲಾ ಮಾಧ್ಯಮಗಳ ಮೇಲೆ ಗೋಬೆಲ್ಸ್ ಮಾದರಿಯನ್ನು ಆರೋಪಿಸುವಂತಿಲ್ಲ. ಇದ್ದುದರಲ್ಲಿ ಮುದ್ರಣ ಮಾಧ್ಯಮಗಳು ಪತ್ರಿಕೋದ್ಯಮದ ಚಾರಿತ್ರ್ಯ ಉಳಿಸಿಕೊಂಡಿವೆ. ಆದರೆ ದೃಶ್ಯ ಮಾಧ್ಯಮಗಳ ವಿಚಾರದಲ್ಲಿ ಈ ಮಾತು ಹೇಳುವಂತಿಲ್ಲ. ಭಟ್ಟಂಗಿತನದ ಪರಾಕಾಷ್ಠೆ ತಲುಪಿರುವ ದೃಶ್ಯ ಮಾಧ್ಯಮಗಳು ಈಗಾಗಲೇ ತಮ್ಮ ಶೀಲಹರಣ ಮಾಡಿಕೊಂಡಿರುವುದನ್ನು ಅಲ್ಲಗಳೆಯುವಂತಿಲ್ಲ.

ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಮೂಲಕ ಜನರನ್ನು ಎಚ್ಚರಿಸುವ ಗುರುತರ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ. ವಿಪರ್ಯಾಸವೆಂದರೆ ಇಂದಿನ ಬಹುತೇಕ ಸುದ್ದಿ ಮಾಧ್ಯಮಗಳು ಆಳುವ ಸರ್ಕಾರದ ವೈಫಲ್ಯ ಎತ್ತಿ ಹಿಡಿಯುವ ಬದಲು, ಸರ್ಕಾರದ ವೈಫಲ್ಯಗಳನ್ನೇ ಸಾಧನೆ ಎಂದು ಬಿಂಬಿಸುತ್ತಿವೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಹಾಥರಸ್ ಅತ್ಯಾಚಾರ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವೈಫಲ್ಯ ಕಣ್ಣಿಗೆ ಎದ್ದು ಕಾಣುತ್ತಿದ್ದರೂ ವಿಶೇಷವಾಗಿ ಸುದ್ದಿ ವಾಹಿನಿಗಳಿಗೆ ಅದನ್ನು ಪ್ರಶ್ನಿಸಬೇಕೆಂಬ ಆತ್ಮಪ್ರಜ್ಞೆಯೇ ಕಾಡಲಿಲ್ಲ. ಸಂತ್ರಸ್ತೆಯ ಗೌರವಯುತ ಶವಸಂಸ್ಕಾರಕ್ಕೂ ಅವಕಾಶ ಮಾಡಿಕೊಡದೆ, ಮನೆಯವರಿಗೂ ಅಂತಿಮ ದರ್ಶನ ಮಾಡಲು ಬಿಡದೆ ಶವ ಸುಟ್ಟು ಹಾಕಿದ್ದು ಸುದ್ದಿ ವಾಹಿನಿಗಳ ಕಣ್ಣಿಗೆ ಕ್ರೌರ್ಯದ ಪರಮಾವಧಿ ಎನ್ನಿಸಲೇ ಇಲ್ಲ.

ಆಳುವ ಸರ್ಕಾರದ ಅನೇಕ ಎಡವಟ್ಟು ನೀತಿ ನಿರೂಪಣೆಯ ಬಗ್ಗೆ ಬಹುತೇಕ ಮಾಧ್ಯಮಗಳು ಜಾಣಗಿವುಡು ಪ್ರದರ್ಶಿಸುತ್ತಲೇ ಇವೆ. ನೋಟ್ ಬ್ಯಾನ್ ಮೋದಿ ಸರ್ಕಾರದ ಐತಿಹಾಸಿಕ ಪ್ರಮಾದಗಳಲ್ಲೊಂದು. ಆರ್ಥಿಕ ತಜ್ಞರ ಎಚ್ಚರಿಕೆಯನ್ನು ಕಡೆಗಣಿಸಿ ಕೇವಲ ಪ್ರಚಾರಕ್ಕಾಗಿ ಮಾಡಿದ ನೋಟ್ ಬ್ಯಾನ್‌ನಿಂದ ಸಾವಿರಾರು ಬಡ ಕುಟುಂಬಗಳು ಬೀದಿಗೆ ಬಂದವು. ಸಮೀಕ್ಷೆಯೊಂದರ ಪ್ರಕಾರ ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಯಾಯಿತು. ಇಷ್ಟಾದರೂ ಸುದ್ದಿ ವಾಹಿನಿಗಳು ವಾಸ್ತವ ಚಿತ್ರಣವನ್ನು ಜನರ ಮುಂದೆ ತೆರೆದಿಡಲೇ ಇಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿದ್ದರೂ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿ ಆಗುತ್ತಿರುವುದು ಯಾಕೆ ಎಂಬುದನ್ನು ಪ್ರಶ್ನಿಸುವುದೇ ಇಲ್ಲ. ಅವೈಜ್ಞಾನಿಕ ಜಿಎಸ್‌ಟಿ ಬಗ್ಗೆ ಚಕಾರವೆತ್ತುವುದಿಲ್ಲ.

ಗಣರಾಜ್ಯೋತ್ಸವದ ದಿನ ರೈತರ ಟ್ರ್ಯಾಕ್ಟರ್ ಪೆರೇಡ್‌ಗೂ ಮುನ್ನ ರೈತರು ಪ್ರದರ್ಶಿಸಿದ್ದ ಭಿತ್ತಿಪತ್ರಗಳು ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯ ಸೃಷ್ಟಿಸಿವೆ. ಅಂದು ರೈತರು ಸೋಲ್ಡ್ ಮೀಡಿಯಾಗಳಿಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದ್ದರು. ಇದು ಮಾಧ್ಯಮಗಳ ಮೇಲೆ ರೈತರ ಅಸಹನೆ, ತಿರಸ್ಕಾರ, ಆಕ್ರೋಶ, ಸಿಟ್ಟು ಸೆಡವುಗಳನ್ನೆಲ್ಲಾ ಅಭಿವ್ಯಕ್ತಗೊಳಿಸಿತ್ತು.

ಅಸಲಿಗೆ ರೈತರ ಪ್ರತಿಭಟನೆ ವಿಚಾರದಲ್ಲಿ ಕೆಲ ದೃಶ್ಯ ಮಾಧ್ಯಮಗಳ ಧೋರಣೆ ಖಂಡಿತಾ ಪ್ರಶ್ನಾರ್ಹ. ಪ್ರತಿಭಟನೆಯ ಬಿಸಿ ಏರುತ್ತಿದ್ದಂತೆ ಚಳವಳಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮಾನಸಿಕ ದಾಳಿ ಮಾಡಲು ಶುರುಮಾಡಿತು. ಮೊದಲಿಗೆ ರೈತ ಪ್ರತಿಭಟನೆಯನ್ನು ದಲ್ಲಾಳಿಗಳ ಪ್ರತಿಭಟನೆ ಎಂದು ಬಿಂಬಿಸುವ ಯತ್ನ ನಡೆಯಿತು, ಪ್ರತಿಭಟನಾನಿರತ ರೈತರಿಗೆ ‘ಖಲಿಸ್ತಾನಿಗಳು’ ಎಂಬ ಪಟ್ಟ ಕಟ್ಟಲಾಯಿತು. ವಿಪರ್ಯಾಸವೆಂದರೆ ಕೆಲ ಮಾಧ್ಯಮಗಳು ಕೂಡ ರೈತರನ್ನು ಸಮಾಜದ ದೃಷ್ಟಿಯಲ್ಲಿ ಪ್ರತ್ಯೇಕತಾವಾದಿಗಳಂತೆ ಬಿಂಬಿಸಿಬಿಟ್ಟಿದ್ದವು.

ರೈತರ ಪ್ರತಿಭಟನಾ ವಿಚಾರದಲ್ಲಿ ಮಾಧ್ಯಮಗಳು ಇಲ್ಲಿಯವರೆಗೂ ಕೇಳದ ಪ್ರಶ್ನೆಯೆಂದರೆ, ರೈತರಿಗೆ ಬೇಡವಾದ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲೇಬೇಕೆಂಬ ಹಟ ಕೇಂದ್ರ ಸರ್ಕಾರಕ್ಕೆ ಯಾಕೆ ಎಂಬುದನ್ನು. ಪ್ರತಿಭಟನಾನಿರತ ರೈತರ ಅಸಲಿಯತ್ತನ್ನು ಪ್ರಶ್ನಿಸಿ, ರೈತರಿಗೆ ನಕಲಿ ರೈತರ ಪಟ್ಟ ಕಟ್ಟಿದ ಮಾಧ್ಯಮಗಳಿಗೆ 140ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದು ದೊಡ್ಡದು ಎನಿಸಲೇ ಇಲ್ಲ. ವಿಚಿತ್ರವೆಂದರೆ ರೈತರೊಂದಿಗೆ ಮಾತುಕತೆಯೇ ಆಡದ ಪ್ರಧಾನಿಯವರನ್ನು ಪ್ರಶ್ನಿಸುವುದನ್ನು ಬಿಟ್ಟು ರಾಹುಲ್ ಗಾಂಧಿಯವರ ಅನುಪಸ್ಥಿತಿಯ ಬಗ್ಗೆ ಪ್ರಶ್ನೆ ಮಾಡುವ ಹಂತಕ್ಕೆ ತಲುಪಿಬಿಟ್ಟಿದ್ದವು ಕೆಲ ಮಾಧ್ಯಮಗಳು.

ಈ ಮಧ್ಯೆ ಅರ್ನಬ್ ಗೇಟ್ ಪ್ರಕರಣದಲ್ಲಿ ಮಾಧ್ಯಮಗಳು ನಡೆದುಕೊಂಡ ರೀತಿಯನ್ನು ಪ್ರಶ್ನಿಸದೇ ಹೋದರೆ ಅದು ಆತ್ಮವಂಚನೆಯಾಗಲಿದೆ. ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಸದ್ಯ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. 2019 ರಂದು ಅರ್ನಬ್ ಟಿಆರ್‌ಪಿ ಡೇಟಾ ನೀಡುವ ಬಾರ್ಕ್‌ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ ಗುಪ್ತಾರೊಂದಿಗೆ ವ್ಯವಹಾರ ಕುದುರಿಸುವಾಗ ವಿನಿಮಯವಾಗಿರುವ ಸಂದೇಶಗಳು ನಿಜಕ್ಕೂ ಗಾಬರಿ ಹುಟ್ಟಿಸುತ್ತವೆ. ಪುಲ್ವಾಮ ಹಾಗೂ ಬಾಲಾಕೋಟ್ ದಾಳಿಯ ನಡುವಿನ ದಿನಗಳಲ್ಲಿ ಅವರ ಮಧ್ಯೆ ಅನೇಕ ಸಂದೇಶಗಳು ವಿನಿಮಯವಾಗಿವೆ. ಹಾಗೇ ವಿನಿಮಯವಾಗಿರುವ ಸಂದೇಶಗಳಲ್ಲಿ ಪುಲ್ವಾಮ ದಾಳಿಯಿಂದ ಟಿಆರ್‌ಪಿ ಹೆಚ್ಚಾದ ಬಗ್ಗೆ ಅರ್ನಬ್ ಸಂಭ್ರಮಿಸಿದ್ದಾರೆ. ಮತ್ತೊಂದು ಸಂದೇಶದಲ್ಲಿ ಬಾಲಾಕೋಟ್ ದಾಳಿ ನಡೆಯುವ ಬಗ್ಗೆ ಮೂರು ದಿನಗಳ ಮುಂಚೆಯೇ ಮಾಹಿತಿ ಹಂಚಿಕೊಂಡಿದ್ದಾರೆ.

ಇಲ್ಲಿ ಪ್ರಶ್ನೆ ಇರುವುದು ಬಾಲಾಕೋಟ್ ದಾಳಿಯಂತಹ ಅತ್ಯಂತ ರಹಸ್ಯ ಸೇನಾ ಕಾರ್ಯಾಚರಣೆಯ ವಿವರ ಅರ್ನಾಬ್‌ಗೆ ತಿಳಿಯುವುದಾದರೂ ಹೇಗೆ ಎನ್ನುವುದು. ಕೆಲವು ಸಂದರ್ಭದಲ್ಲಿ ದಾಳಿ ನಡೆಸುವ ಯೋಧನಿಗೂ ದಾಳಿ ನಡೆಸುವ ಕೊನೆಯ ಕ್ಷಣದವರೆಗೂ ತಿಳಿಯದಂತೆ ಸೇನಾ ಕಾರ್ಯಾಚರಣೆ ನಡೆಸಲಾಗುತ್ತದೆ. ಹೀಗಿರುವಾಗ ಇಂತಹ ಪರಮ ರಹಸ್ಯದ ವಿಚಾರ ಅರ್ನಬ್ ಗೋಸ್ವಾಮಿಗೆ ಮೂರು ದಿನ ಮೊದಲೇ ತಿಳಿದಿದ್ದು ಹೇಗೆ? ದುರಂತವೆಂದರೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ಈ ವಿಚಾರ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಇಲ್ಲಿಯವರೆಗೂ ಯಾವ ಮಾಧ್ಯಮವೂ ತನಿಖೆ ಮಾಡಲಿಲ್ಲ. ಕೊನೆ ಪಕ್ಷ ಅರ್ನಬ್‌ಗೆ ಈ ಮಾಹಿತಿ ಸಿಕ್ಕಿದ್ದು ಹೇಗೆ ಎಂದು ಸರ್ಕಾರವನ್ನು ಪ್ರಶ್ನಿಸಲಿಲ್ಲ.

ಗೋಬೆಲ್ಸ್ ಮಾದರಿಯ ಪತ್ರಿಕೋದ್ಯಮ ಭಾರತದ ಸಾಮಾಜಿಕ ಸ್ವಾಸ್ಥ್ಯಕ್ಕೆ ಯಾವತ್ತೂ ಅಪಾಯಕಾರಿ. ಸದ್ಯ ಭಾರತವೂ ಈ ಅಪಾಯಕಾರಿ ಕಾಲಘಟ್ಟದಲ್ಲಿದೆ. ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅತಿ ಮುಖ್ಯ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಪತ್ರಕರ್ತರು ಕೂಡ ಸೋಷಿಯಲ್ ಎಂಜಿನಿಯರ್‌ಗಳೆ. ಆದರೆ ಇವತ್ತಿನ ಮಾಧ್ಯಮ ಲೋಕ ಸಾಗುತ್ತಿರುವ ಹಾದಿ ನೋಡಿದರೆ ಭಯ ಹುಟ್ಟಿಸುವಂತಿದೆ. ಪ್ರಶ್ನಿಸುವುದು ಪತ್ರಕರ್ತನ ವೃತ್ತಿಧರ್ಮ. ವ್ಯವಸ್ಥೆಯ ಹುಳುಕುಗಳನ್ನು ಪತ್ರಕರ್ತ ಪ್ರಶ್ನಿಸದೇ ಹೋದರೆ ಅದು ಕೇವಲ ಪತ್ರಕರ್ತನ ಸೋಲಲ್ಲ, ಮಾಧ್ಯಮದ ಸೋಲು! ವಿಶ್ವಾಸಾರ್ಹತೆ ಎನ್ನುವುದೇ ಮಾಧ್ಯಮಗಳ ನಿಜವಾದ ಇಂಧನ. ಮಾಧ್ಯಮಗಳು ಒಮ್ಮೆ ಜನರ ವಿಶ್ವಾಸಾರ್ಹತೆ ಕಳೆದುಕೊಂಡರೆ ಎಲ್ಲವೂ ಮುಗಿಯಿತು. ಮತ್ತೆ ಮೇಲೇಳಲು ಆಗದು.

<em><strong>ದಿನೇಶ್ ಗುಂಡೂರಾವ್</strong></em>
ದಿನೇಶ್ ಗುಂಡೂರಾವ್

(ಲೇಖಕ: ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT