ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ರೋಗ ಶಮನ: ಭವಿಷ್ಯದ ಮಾರ್ಗ

ವೈದ್ಯಕೀಯ ಶಾಸ್ತ್ರಗಳು ದ್ವೀಪಗಳಾಗದೆ ಸಂಯೋಜಿತ ಚಿಕಿತ್ಸೆಗೆ ಸಹಕರಿಸಲಿ
Last Updated 6 ಜನವರಿ 2021, 19:31 IST
ಅಕ್ಷರ ಗಾತ್ರ

ಚಿಕಿತ್ಸಾ ವಿಧಾನಗಳ ಸಂಶೋಧನೆಗಳನ್ನು ಆಧರಿಸಿ ವೈದ್ಯಕೀಯ ಶಾಸ್ತ್ರಗಳು ಕೊಡು- ಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಆದರೆ, ಅವು ಸ್ವಾರ್ಥಕ್ಕಾಗಿನ ಅಂಧ ನಕಲಾಗಬಾರದು.

ರೋಗನಿರೋಧಕ ಶಕ್ತಿಯ ಏರುಪೇರಿನಿಂದಾಗಿ ದೇಹದ ಕೀಲು-ಸಂಧಿಗಳೆಲ್ಲ ಊದಿಕೊಂಡು ನೋವು ತರುವ ಸಂಧಿವಾತ ಅಥವಾ ಚರ್ಮವು ಗಿಡದ ತೊಗಟೆಯಂತೆ ಒಣಗಿ ಉದುರುವ ಸೋರಿಯಾಸಿಸ್, ಚಯಾಪಚಯ ಕ್ರಿಯೆಗಳ ಏರುಪೇರಿನಿಂದಾಗುವ ಸಕ್ಕರೆ ಕಾಯಿಲೆ, ಬೆನ್ನುಮೂಳೆಯ ಕುಣಿಕೆಗಳು ಹೊರಳಿಕೊಂಡು ತರುವ ಬೆನ್ನುನೋವು- ಇತ್ಯಾದಿ ಹಲವಾರು ಬಗೆಯ ದೀರ್ಘಾವಧಿ ರೋಗಗಳಿಂದ ನರಳುತ್ತಿರುವವರನ್ನು ದೈನಂದಿನ ಜೀವನದಲ್ಲಿ ನೋಡುತ್ತಿರುತ್ತೇವೆ. ಹತ್ತಾರು ವರ್ಷಗಳಿಂದ ಅದೆಷ್ಟೋ ಬಗೆಯ ಔಷಧಿ-ಚಿಕಿತ್ಸೆ ಪಡೆಯುತ್ತ ಹೇಗೋ ಜೀವನ ನಿಭಾಯಿಸುತ್ತಿರುವ ರೋಗಿಗಳು ನಮ್ಮ ಬಂಧು-ಬಳಗ, ನೆರೆಹೊರೆ-ಮಿತ್ರರಲ್ಲೂ ಇರಬಹುದು.

ಅಜ್ಜಿ ಹೇಳಿದ ಕಷಾಯ, ಹಳ್ಳಿವೈದ್ಯರು ನೀಡಿದ ಲೇಹ್ಯ, ಆಯುರ್ವೇದ ವೈದ್ಯರ ಲೇಹ್ಯ, ಅಲೋಪಥಿ ವೈದ್ಯರು ನೀಡಿದ ಬಗೆಬಗೆಯ ಮಾತ್ರೆಗಳು, ಜೊತೆಗೆ ಆಹಾರದಲ್ಲಿ ಒಂದಷ್ಟು ಪಥ್ಯ- ಇವೆಲ್ಲ ಅವರ ದೈನಂದಿನ ಚಿಕಿತ್ಸೆಯಲ್ಲಿ ಇರಬಹುದು! ಸಂಪೂರ್ಣವಾಗಿ ಗುಣವಾಗದಿದ್ದರೂ ರೋಗದೊಂದಿಗೇ ಬದುಕುವ ಚೈತನ್ಯ ಪಡೆಯುವಷ್ಟು, ರೋಗಿಗಳು ತಾವೇ ಕಂಡುಕೊಳ್ಳುವ ಚಿಕಿತ್ಸಾ ವಿಧಾನಗಳ ವಿಶಿಷ್ಟ ಮಿಶ್ರಣವದು. ‘ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು’ ಎಂಬ ಜನಪದ ವಿವೇಕ ಇದೇ ಅಲ್ಲವೇ?

ಜನ್ಮದತ್ತ ವಂಶವಾಹಿಗಳು ಹಾಗೂ ನಾವು ಬದುಕು ಸಾಗಿಸುವ ವಿಧಾನ- ಇವೆರಡೂ ಜೊತೆಯಾಗಿಯೇ ನಮ್ಮ ಆರೋಗ್ಯದ ಸ್ಥಿತಿಗತಿಯನ್ನು ನಿರ್ಧರಿಸುತ್ತವೆ. ಪ್ರಕೃತಿ ನೀಡುವ ವಂಶವಾಹಿಗಳ ಆಯ್ಕೆಯು ಸಾಧ್ಯವಾಗದ ಮಾತಾದರೂ ಸೂಕ್ತ ಆರೋಗ್ಯ ಸೂತ್ರಗಳನ್ನು ಹೆಣೆದ ಜೀವನಕ್ರಮ ಅನುಸರಿಸಿ ಆರೋಗ್ಯಶಾಲಿಗಳಾಗಲು ಸಾಧ್ಯ ಎಂಬುದು ವೈದ್ಯಕೀಯರಂಗದ ಒಮ್ಮತದ ಅಭಿಪ್ರಾಯ. ಆದರೆ, ಇಂದಿನ ವೈದ್ಯಕೀಯ ಶಾಸ್ತ್ರಗಳೆಲ್ಲ ತಮ್ಮದೇ ನಂಬಿಕೆ-ತತ್ವಗಳ ಬಂದಿಯಾಗಿ, ಪರಸ್ಪರ ಕೊಡುಕೊಳ್ಳುವಿಕೆಯ ಸಾಧ್ಯತೆಗಳನ್ನೇ ಮರೆತು, ‘ಶ್ರೇಷ್ಠತೆಯ ದ್ವೀಪ’ಗಳಾಗಿ ಪರಸ್ಪರ ದೂರವಾಗುತ್ತಿರುವುದು, ಈ ಆಧುನಿಕ ‘ಜ್ಞಾನಯುಗ’ದ ವೈರುಧ್ಯಗಳಲ್ಲೊಂದು ಎನ್ನಬೇಕು. ಈ ಮಿತಿಯನ್ನು ಮೀರಬೇಕೆಂದರೆ, ವಿವಿಧ ಶಾಸ್ತ್ರಗಳ ಪ್ರಯೋಗಸಿದ್ಧ ಸಕಾರಾತ್ಮಕ ಅಂಶಗಳು ಸಂಸ್ಕರಣಗೊಂಡು, ಸಂಯೋಜಿತ ಚಿಕಿತ್ಸಾ ಪದ್ಧತಿಯೊಂದು ವಿಕಾಸವಾಗಬೇಕಾದ ಅಗತ್ಯವಿದೆ ಎಂಬುದನ್ನು, ವೈದ್ಯಕೀಯರಂಗದ ಹಲವರು ದಶಕಗಳಿಂದ ಹೇಳುತ್ತಲೇ ಬಂದಿದ್ದಾರೆ.

ಈ ದಿಸೆಯಲ್ಲಿ ನಿಖರವಾದ ಸೈದ್ಧಾಂತಿಕ ದಾರಿ ಹುಡುಕುವ ಪ್ರಯತ್ನವಾಗಿದ್ದು ಕಳೆದ ದಶಕದಲ್ಲಿ. ದೇಶದ ಪ್ರತಿಭಾನ್ವಿತ ವಿಜ್ಞಾನಿಗಳ ಸಮೂಹಗಳಲ್ಲಿ ಒಂದಾದ ಭಾರತೀಯ ವಿಜ್ಞಾನ ಅಕಾಡೆಮಿಯು ಅಲೋಪಥಿಯ ಪ್ರಸಿದ್ಧ ಹೃದಯಶಾಸ್ತ್ರಜ್ಞ ಹಾಗೂ ಆಯುರ್ವೇದದಲ್ಲೂ ಅಪಾರ ತಜ್ಞತೆಯಿರುವ ವೈದ್ಯ ಡಾ. ಎಂ.ಎಸ್.ವಲಿಯಥಾನ್ ಮಾರ್ಗದರ್ಶನದಲ್ಲಿ, ‘ಆಯುರ್ವೇದ ಜೀವಶಾಸ್ತ್ರದೆಡೆಗೆ’ ಎಂಬ ಒಂದು ವಿಸ್ತೃತ ವರದಿಯನ್ನು 2006ರಲ್ಲಿ ಸರ್ಕಾರಕ್ಕೆ ನೀಡಿತು. ಮಾನವ ದೇಹದ ರಚನೆ, ವಿಕಾಸ ಹಾಗೂ ಪ್ರಕೃತಿಯೊಡನೆ ಸಂಬಂಧ- ಇವೆಲ್ಲವನ್ನೂ ಆಧರಿಸಿ, ಆಯುರ್ವೇದಶಾಸ್ತ್ರದ ಒಳನೋಟದ ಆಧಾರದಲ್ಲಿ ಹೊಸ ಬಗೆಯ ಸಂಯೋಜಿತ ಚಿಕಿತ್ಸಾಕ್ರಮಗಳನ್ನು ಶೋಧಿಸುವ ಅಗತ್ಯವನ್ನು ಅದು ಹೇಳಿತು. ಕ್ರಾಂತಿಕಾರಕ ಎನ್ನಬಹುದಾದ ಈ ಚಿಂತನೆಗಳಿಂದಾಗಿ, ದೇಶದ ಹಾಗೂ ಜಗತ್ತಿನ ಗಮನ ಸೆಳೆದ ಮಹತ್ವದ ವರದಿಯದು. ಇದನ್ನಾಧರಿಸಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ದೇಶದ ಅತ್ಯುನ್ನತ ಸಂಶೋಧನಾ ಕೇಂದ್ರಗಳಲ್ಲಿ ‘ಆಯುರ್ವೇದ ಜೀವಶಾಸ್ತ್ರ’ವನ್ನು ಆದ್ಯತಾ ಕ್ಷೇತ್ರವನ್ನಾಗಿ ಸ್ವೀಕರಿಸಿ, ಹಲವು ಆಯಾಮಗಳಲ್ಲಿ ಮೂಲಭೂತ ಸಂಶೋಧನೆಗೆ ಚಾಲನೆ ನೀಡಿದೆ. ಈ ಕ್ಷೇತ್ರದಲ್ಲಿ ನವೋದ್ಯಮ ಸ್ಥಾಪಿಸುವ ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇವನ್ನು ಸೂಕ್ತ ಸರ್ಕಾರಿ ನೀತಿಯನ್ನಾಗಿ ಅಳವಡಿಸಿಕೊಳ್ಳುವತ್ತ ಮಾರ್ಗಸೂಚಿಗಳನ್ನು ರೂಪಿಸಲು, ಪ್ರಧಾನಿ ಇತ್ತೀಚೆಗೆ ಒಂದು ಉನ್ನತ ಮಟ್ಟದ ಕಾರ್ಯಪಡೆಯನ್ನೂ ರಚಿಸಿದ್ದಾರೆ. ದೇಶದ ವೈದ್ಯಕೀಯರಂಗದಲ್ಲಿ ಆಮೂಲಾಗ್ರ ಬದಲಾವಣೆ ತರಬಲ್ಲ ಇತ್ತೀಚಿನ ಬೆಳವಣಿಗೆಗಳಿವು.

ಈ ಬಗೆಯ ಹೊಸ ಆಲೋಚನೆಗಳು ಪ್ರಯೋಗಗೊಂಡು, ಸಂಯೋಜಿತ ಚಿಕಿತ್ಸಾಕ್ರಮವೊಂದು ರೂಪುತಾಳಿ ರೋಗಿಗಳ ಶುಶ್ರೂಷೆಯಲ್ಲಿ ಬದಲಾವಣೆ ತರಲು ಇನ್ನೂ ಸಮಯ ಬೇಕು. ಜೊತೆಗೆ, ವಿವಿಧ ವೈದ್ಯಕೀಯ ಶಾಸ್ತ್ರಗಳು ಉಳಿದ ಶಾಸ್ತ್ರಗಳ ಚಿಂತನೆಗೆ ಮನವ ತೆರೆದಿಟ್ಟು, ಜ್ಞಾನ ಹಾಗೂ ಕೌಶಲಗಳ ಕೊಡುಕೊಳ್ಳುವಿಕೆಗೆ ತಯಾರಾಗಲೂ ಬೇಕು. ಇದೀಗ ಚಲಾವಣೆಯಲ್ಲಿರುವ ಪ್ರತಿಯೊಂದು ಶಾಸ್ತ್ರಕ್ಕೂ ಅದರದ್ದೇ ಹಿರಿಮೆಯಿದೆ. ಜೀವ ಉಳಿಸುವ ಔಷಧಿಗಳು, ಲಸಿಕೆಗಳು, ಸೂಕ್ಷ್ಮಾಣುಜೀವಿ ನಿಷ್ಕ್ರಿಯಕಗಳು, ಶಸ್ತ್ರಚಿಕಿತ್ಸೆ... ಇಂಥ ಹಲವು ಅಮೂಲ್ಯ ಕೊಡುಗೆಗಳನ್ನು ನೀಡಿರುವ ಆಧುನಿಕ ಅಲೋಪಥಿಯಲ್ಲೂ ಮಿತಿಗಳಿವೆ. ಜೀವಕೋಶ ಮಟ್ಟದಲ್ಲಿ ಕಾರ್ಯನಿರ್ವಹಿಸುವ ರಾಸಾಯನಿಕ ಮಿಶ್ರಣದ ಔಷಧಿಗಳ ಗಂಭೀರ ಅಡ್ಡ ಪರಿಣಾಮ, ಚಿಕಿತ್ಸಾಕ್ರಮದಲ್ಲಿ ರೋಗಿಯ ದೈಹಿಕ-ಮಾನಸಿಕ ವಿಶೇಷಗಳನ್ನು ಗಮನಿಸದಿರುವಂತಹ ಲೋಪಗಳಿವೆಯಲ್ಲವೇ? ಅಂತೆಯೇ, ದೀರ್ಘ ಇತಿಹಾಸವಿರುವ ಆಯುರ್ವೇದ ಸಹ.

ಪ್ರಕೃತಿಯಿಂದಲೇ ಮೂಡಿದ ಪಂಚಭೂತ ಆಧಾರಿತ ದೇಹವನ್ನು, ಕಾಲ-ದೇಶಕ್ಕೆ ಅನುಗುಣವಾಗಿ ರೂಪುಗೊಂಡ ವಿಶಿಷ್ಟ ಜೀವವೊಂದನ್ನಾಗಿ ಗುರುತಿಸುವ ಆಯುರ್ವೇದದ ಕಲ್ಪನೆಯೇ ಅದ್ಭುತವಾದದ್ದು. ಪಂಚಕರ್ಮದಂಥ ಜೀವಪೋಷಕ ಚಿಕಿತ್ಸೆ ಹಾಗೂ ಭಸ್ಮದಂಥ ಪರಿಣಾಮಕಾರಿ ಮದ್ದುಗಳಿವೆ ಅದರಲ್ಲಿ. ಆದರೆ, ಹಲವು ಕೊರತೆಗಳೂ ಇವೆ. ದೇಹಕ್ಕೆ ವಿಷಕಾರಿಯಾಗಬಲ್ಲ ಸೀಸ, ಪಾದರಸ, ಆರ್ಸೆನಿಕ್‌ನಂತಹವು ಆಯುರ್ವೇದದ ಕೆಲವು ಔಷಧಿಗಳಲ್ಲಿ ಅಪಾಯಕಾರಿ ಮಟ್ಟದಲ್ಲಿರುವ ಆರೋಪಗಳಿವೆ. ಸ್ವಾಮ್ಯತ್ಯ ಔಷಧಿಗಳಿಗೆ ಕಾನೂನಿನಲ್ಲಿರುವ ಅವಕಾಶವನ್ನು ದುರುಪಯೋಗಪಡಿಸಿಕೊಂಡು, ನಿಖರ ಆಧಾರವಿಲ್ಲದೆಯೂ ಹೊಸ ಬಗೆಯ ಔಷಧಿಗಳನ್ನು ಮಾರುವ ಲಾಭಕೋರತನವು ಆಧುನಿಕ ಅಯುರ್ವೇದವನ್ನು ಆಕ್ರಮಿಸಿರುವುದೂ ಸುಳ್ಳಲ್ಲ. ಔಷಧಗಳಲ್ಲಿ ಬಳಸುವ ಶೇ 90ಕ್ಕೂ ಮಿಕ್ಕಿ ಮೂಲಿಕೆಗಳು ಈಗಲೂ ಅನಧಿಕೃತವಾಗಿ ಕಾಡಿನಿಂದಲೇ ಬರುತ್ತಿದ್ದು, ಅವುಗಳ ಗುಣಮಟ್ಟದಲ್ಲೂ ಗಂಭೀರ ನ್ಯೂನತೆಗಳಿರುವುದು ವರದಿಯಾಗುತ್ತಲೇ ಇರುತ್ತದೆ. ಪ್ರತೀ ವೈದ್ಯಕೀಯ ಶಾಸ್ತ್ರವೂ ಈ ಬಗೆಯ ತನ್ನ ಮಿತಿ-ಲೋಪಗಳನ್ನು ಒಪ್ಪಿಕೊಂಡು, ಪ್ರಯೋಗಸಿದ್ಧ ಒಳಿತನ್ನು ಧಾರೆ ಎರೆಯಲು ಸಿದ್ಧವಾದರೆ, ಜಾಗತಿಕ ಶ್ರೇಷ್ಠತೆಯ ಪರಿಣಾಮಕಾರಿ ಸಂಯೋಜಿತ ವೈದ್ಯಕೀಯ ಶಾಸ್ತ್ರವೊಂದು ವಿಕಾಸವಾಗಬಲ್ಲದು. ಜಗತ್ತಿನ ಆರೋಗ್ಯ ಸುರಕ್ಷತೆಗೆ ಅಂಥ ಮಹತ್ವದ ಕಾಣಿಕೆ ನೀಡಬಲ್ಲ ಸಾಮರ್ಥ್ಯವು ಆಯುರ್ವೇದ ಶಾಸ್ತ್ರಕ್ಕಿರುವುದನ್ನು ಎಲ್ಲರೂ ಒಪ್ಪುತ್ತಾರೆ.

ಕೇಶವ ಎಚ್. ಕೊರ್ಸೆ
ಕೇಶವ ಎಚ್. ಕೊರ್ಸೆ

ಆದರೆ, ಇದೊಂದು ರಾಜಕೀಯ ನಿರ್ಧಾರವಾಗಬಾರದು. ದೀರ್ಘ ಸಮಾಲೋಚನೆ ಹಾಗೂ ಆಳ ಸಂಶೋಧನೆಗಳ ಆಧಾರದಲ್ಲಿ ವಿವಿಧ ಕ್ಷೇತ್ರಗಳ ಪರಿಣತರೆಲ್ಲ ಜೊತೆಯಾಗಿ ಹೆಣೆಯಬೇಕಾದ ಸಂಕೀರ್ಣ ಜ್ಞಾನಶಾಖೆಯಿದು. ‘ಆಯುರ್ವೇದ ಜೀವಶಾಸ್ತ್ರ’ದ ತತ್ವವನ್ನು ಒಪ್ಪಿಕೊಳ್ಳುವ ಮೂಲಕ ಸರ್ಕಾರವು ಇದೀಗ ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಸಂಗತಿ. ಆದರೆ, ಕೇಂದ್ರ ಸರ್ಕಾರವು ಇತ್ತೀಚೆಗೆ ಒಮ್ಮೆಲೇ ಕೈಗೊಂಡ ಕ್ರಮವೊಂದು, ಜೊತೆಯಾಗಿ ಹೆಜ್ಜೆಯಿಡತೊಡಗಿದ್ದ ಅಲೋಪಥಿ ಹಾಗೂ ಆಯುರ್ವೇದದ ನಡುವಿನ ವಿಶ್ವಾಸದಲ್ಲಿ ಬಿರುಕು ಮೂಡಿಸಿರುವುದು ಮಾತ್ರ ವಿಷಾದಕರ. ಆಯುಷ್‌ ಇಲಾಖೆ ಅಧೀನದ ‘ಭಾರತೀಯ ವೈದ್ಯಕೀಯ ಶಾಸ್ತ್ರಗಳ ಕೇಂದ್ರೀಯ ಮಂಡಳಿ’ಯ (CCIM) ನಿರ್ವಹಣೆಗೆ ಸಂಬಂಧಿಸಿದ ನಿಯಮಗಳಲ್ಲಿ ಕಳೆದ ನವೆಂಬರ್‌ನಲ್ಲಿ ತಿದ್ದುಪಡಿ ಮಾಡಲಾಗಿದ್ದು, ಸ್ನಾತಕೋತ್ತರ ಪದವಿ ಪಡೆದ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಲಾಗಿದೆ. ಅಲೋಪಥಿ ಕ್ಷೇತ್ರದಿಂದ ಇದು ತೀವ್ರ ಟೀಕೆಗೆ ಗುರಿಯಾಗಿದೆ. ದೇಶದ ಇಂದಿನ ಆಯುರ್ವೇದ ಶಿಕ್ಷಣದ ಮಿತಿಯನ್ನು ಬಲ್ಲವರಿಗೆಲ್ಲ ಇದು ಆತಂಕ ತಂದಿರುವುದೂ ಸಹಜ.

ಚಿಕಿತ್ಸಾ ವಿಧಾನಗಳ ಸಂಶೋಧನೆಗಳನ್ನು ಆಧರಿಸಿ ವೈದ್ಯಕೀಯ ಶಾಸ್ತ್ರಗಳು ಕೊಡು- ಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಆದರೆ, ಅವು ಸ್ವಾರ್ಥಕ್ಕಾಗಿನ ಅಂಧ ನಕಲಾಗಬಾರದು. ವಿವಿಧ ವೈದ್ಯಕೀಯ ಶಾಸ್ತ್ರಗಳ ಅಂಥದ್ದೊಂದು ವೈಜ್ಞಾನಿಕ ಸಂಯೋಗಕ್ಕೆ ಸಮಾಜ ಕಾಯುತ್ತಿದೆ. ಆ ಸಂಕರಣದಿಂದ ಹೊರಹೊಮ್ಮುವ ಪರಿಣಾಮಕಾರಿ ಸಂಯೋಜಿತ ಚಿಕಿತ್ಸಾಕ್ರಮಗಳಿಗಾಗಿ ಪ್ರತೀ ರೋಗಿಯೂ ಕಾಯುತ್ತಿದ್ದಾನೆ!

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT